ಸಂಸ್ಕೃತಿ ಸಚಿವಾಲಯ
ಸ್ವಚ್ಛತಾ ಪಖ್ವಾಡಾ ಆಚರಣೆ - ರಾಷ್ಟ್ರವ್ಯಾಪಿ ಸ್ವಚ್ಛತಾ ಮತ್ತು ಜಾಗೃತಿ ಚಟುವಟಿಕೆ ಕೈಗೊಳ್ಳಲಿರುವ ಸಂಸ್ಕೃತಿ ಸಚಿವಾಲಯ
ಪ್ರಕಟಣಾ ದಿನಾಂಕ:
29 APR 2026 12:16PM by PIB Bengaluru
ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು 2026ರ ಏಪ್ರಿಲ್ 16 ರಿಂದ ಏಪ್ರಿಲ್ 30 ರವರೆಗೆ ಸ್ವಚ್ಛತಾ ಪಖ್ವಾಡಾವನ್ನು ಆಚರಿಸುತ್ತಿದ್ದು, ಇದು ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಸ್ವಚ್ಛ ಮತ್ತು ಹಸಿರು ಭಾರತದ ದೂರದೃಷ್ಟಿಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ.
ಆ ಆಚರಣೆಯ ಭಾಗವಾಗಿ ಸಚಿವಾಲಯದಡಿ ಬರುವ ಸಂಸ್ಥೆಗಳು ಈಗಾಗಲೇ ಹಲವು ಚಟುವಟಿಕೆಗಳನ್ನು ಆರಂಭಿಸಿವೆ. ಸ್ವಚ್ಛತೆಯನ್ನು ಕಾಯ್ದುಕೊಳ್ಳುವ ಕಡೆಗೆ ವೈಯಕ್ತಿಕ ಮತ್ತು ಸಾಮೂಹಿಕ ಜವಾಬ್ದಾರಿಯನ್ನು ಒತ್ತಿಹೇಳುವ ಸ್ವಚ್ಛತಾ ಪ್ರತಿಜ್ಞೆಯನ್ನು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬೋಧಿಸಲಾಯಿತು. ಪ್ರತಿಜ್ಞೆಯ ಸಮಯದಲ್ಲಿ ಭಾಗವಹಿಸುವವರು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡಲು ಇತರರನ್ನು ಪ್ರೇರೇಪಿಸುವ ಮಾರ್ಗಗಳನ್ನು ಚರ್ಚಿಸಿದರು ಮತ್ತು ಸ್ವಚ್ಛ ರಾಷ್ಟ್ರವನ್ನು ನಿರ್ಮಿಸುವಲ್ಲಿ ಸಮುದಾಯ ಪಾಲ್ಗೊಳ್ಳುವಿಕೆಯ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಸಂಸ್ಕೃತಿ ಸಚಿವಾಲಯದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಜಾಗೃತಿಯ ಕುರಿತು ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಭಾರತದ ರಾಷ್ಟ್ರೀಯ ಗ್ರಂಥಾಲಯವು ಸ್ವಚ್ಛತಾ ಪ್ರತಿಜ್ಞೆಯ ಸ್ವೀಕಾರ, ಪ್ರಬಂಧ ಬರೆಯುವಂತಹ ಜಾಗೃತಿ-ಆಧಾರಿತ ಸ್ಪರ್ಧೆಗಳು ಮತ್ತು ಅದರ ಆವರಣದಲ್ಲಿ ಸ್ವಚ್ಛತಾ ಅಭಿಯಾನಗಳು ಸೇರಿ ಹಲವು ಚಟುವಟಿಕೆಗಳನ್ನು ಆರಂಭಿಸಿದೆ. ದೇಶಾದ್ಯಂತ ರಾಷ್ಟ್ರೀಯ ವಿಜ್ಞಾನ ವಸ್ತುಸಂಗ್ರಹಾಲಯಗಳ ಮಂಡಳಿ ಮತ್ತು ಅದರ ಘಟಕಗಳು ನಡವಳಿಕೆಯ ಬದಲಾವಣೆ ಮತ್ತು ಸುಸ್ಥಿರ ಅಭ್ಯಾಸಗಳ ಮೇಲೆ ಕೇಂದ್ರೀಕರಿಸುವ ಸ್ವಚ್ಛತಾ ಪ್ರತಿಜ್ಞೆ ಸಮಾರಂಭಗಳು, ಸ್ವಚ್ಛತಾ ಅಭಿಯಾನಗಳು, ಜಾಗೃತಿ ಜಾಥಾಗಳು, ರಸಪ್ರಶ್ನೆಗಳು, ಚಿತ್ರಕಲಾ ಸ್ಪರ್ಧೆಗಳು ಮತ್ತು ಸಮುದಾಯ ತೊಡಗಿಸಿಕೊಳ್ಳುವಿಕೆ ಕಾರ್ಯಕ್ರಮಗಳಂತಹ ಸರಣಿ ಚಟುವಟಿಕೆಗಳನ್ನು ಆರಂಭಿಸಿವೆ.
ಸಚಿವಾಲಯದ ಅಡಿಯಲ್ಲಿರುವ ಸಂಸ್ಥೆಗಳು ಪಖ್ವಾಡಾದಾದ್ಯಂತ ಕೈಗೊಳ್ಳಲು ವ್ಯಾಪಕವಾದ ಚಟುವಟಿಕೆಗಳನ್ನು ಆಯೋಜಿಸಿವೆ, ಅವುಗಳೆಂದರೆ:
- ಪಾರಂಪರಿಕ ತಾಣಗಳು, ವಸ್ತು ಸಂಗ್ರಹಾಲಯಗಳು, ಕ್ಯಾಂಪಸ್‌ಗಳು, ಸಾರ್ವಜನಿಕ ಸ್ಥಳಗಳು ಮತ್ತು ನದಿ ದಂಡೆ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ಶ್ರಮದಾನ ಮತ್ತು ಸ್ವಚ್ಛತಾ ಅಭಿಯಾನಗಳು.
- ಸಾಮೂಹಿಕ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಸ್ವಚ್ಛತಾ ಜಾಥಾಗಳು, ಪಾದಯಾತ್ರೆಗಳು, ನಡಿಗೆಗಳು ಮತ್ತು ಪ್ಲಾಗ್ಗಿಂಗ್ ಚಟುವಟಿಕೆಗಳು.
- ಸಾರ್ವಜನಿಕರಲ್ಲಿ ಸ್ವಚ್ಛತಾ ಸಂದೇಶಗಳನ್ನು ಉತ್ತೇಜಿಸಲು ಬೀದಿ ನಾಟಕಗಳು (ನುಕ್ಕಡ್ ನಾಟಕ), ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಜಾಗೃತಿ ಅಭಿಯಾನಗಳು.
- ಮರುಸಂಸ್ಕರಣೆ, ಮರುಬಳಕೆ ಮತ್ತು ಸುಸ್ಥಿರ ಅಭ್ಯಾಸಗಳನ್ನು ಉತ್ತೇಜಿಸುವ “ತ್ಯಾಜ್ಯದಿಂದ ಸಂಪತ್ತು’’ ಮತ್ತು “ತ್ಯಾಜ್ಯದಿಂದ ಕಲೆ’ ಕಾರ್ಯಾಗಾರಗಳು
- ಕಡಲತೀರ ಸ್ವಚ್ಛತೆ, ಜಲಮೂಲಗಳ ಶುಚಿಗೊಳಿಸುವಿಕೆ ಮತ್ತು ಸಾರ್ವಜನಿಕ ಶೌಚಾಲಯಗಳು ಸೇರಿದಂತೆ ಸಾರ್ವಜನಿಕ ಸೌಲಭ್ಯಗಳ ನಿರ್ವಹಣೆಯಂತಹ ವಿಶೇಷ ಉಪಕ್ರಮಗಳು.
- “ತಾಯಿ ಹೆಸರಿನಲ್ಲಿ ಒಂದು ಗಿಡ ನೆಡಿ’ ಅಂತಹ ವಿಷಯಗಳ ಅಡಿಯಲ್ಲಿ ತೋಟಗಾರಿಕೆ ಅಭಿಯಾನಗಳು ಮತ್ತು ಹಸಿರು ಉಪಕ್ರಮಗಳು
- ವಿದ್ಯಾರ್ಥಿಗಳು, ಸಿಬ್ಬಂದಿ ಮತ್ತು ಸಂದರ್ಶಕರನ್ನು ತೊಡಗಿಸಿಕೊಳ್ಳಲು ಪ್ರಬಂಧ ಬರವಣಿಗೆ, ರಸಪ್ರಶ್ನೆಗಳು, ಚಿತ್ರಕಲೆ ಮತ್ತು ಘೋಷಣೆ ಬರವಣಿಗೆ ಸೇರಿದಂತೆ ಹಲವು ಸ್ಪರ್ಧೆಗಳು.
- ಏಕ-ಬಳಕೆಯ ಪ್ಲಾಸ್ಟಿಕ್‌ಗಳ ಕಡಿತ ಮತ್ತು ಪರಿಸರ ಸ್ನೇಹಿ ಪದ್ಧತಿಗಳ ಅಳವಡಿಕೆ ಉತ್ತೇಜಿಸುವ ಅಭಿಯಾನಗಳು.
- ಶಾಲೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಸ್ಥಳೀಯಸಂಸ್ಥೆಗಳ ಅಧಿಕಾರಿಗಳ ಸಹಯೋಗದೊಂದಿಗೆ ಸಮುದಾಯ ಸಂಪರ್ಕ ಕಾರ್ಯಕ್ರಮಗಳು
- ಸಾಂಸ್ಕೃತಿಕ ಸಂರಕ್ಷಣೆ ಮತ್ತು ಪರಿಸರ ಸುಸ್ಥಿರತೆಯೊಂದಿಗೆ ಸ್ವಚ್ಛತೆಯನ್ನು ಸಂಯೋಜಿಸುವ ಪಾರಂಪರಿಕ ನಡಿಗೆಗಳು, ಉಪನ್ಯಾಸಗಳು ಮತ್ತು ಕಾರ್ಯಾಗಾರಗಳು
ವಿಕ್ಟೋರಿಯಾ ಮೆಮೋರಿಯಲ್ ಹಾಲ್, ಇಂಡಿಯನ್ ಮ್ಯೂಸಿಯಂ, ಸಲಾರ್ ಜಂಗ್ ಮ್ಯೂಸಿಯಂ, ರಾಷ್ಟ್ರೀಯ ನಾಟಕ ಶಾಲೆ, ವಲಯ ಸಾಂಸ್ಕೃತಿಕ ಕೇಂದ್ರಗಳು ಮತ್ತು ಇತರ ಸಂಸ್ಥೆಗಳು ಪಖ್ವಾಡಾದ ಭಾಗವಾಗಿ ಈ ಉಪಕ್ರಮಗಳನ್ನು ಕೈಗೊಳ್ಳುತ್ತಿವೆ. ಸಚಿವಾಲಯದಡಿಯಲ್ಲಿರುವ ಇತರ ಸಂಸ್ಥೆಗಳು ಹಳೆಯ ದಾಖಲೆಗಳನ್ನು ತೆಗೆದುಹಾಕುವುದು, ತ್ಯಾಜ್ಯ ನಿರ್ವಹಣಾ ಪದ್ಧತಿಗಳನ್ನು ಸುಧಾರಿಸುವುದು ಮತ್ತು ಕಚೇರಿ ಆವರಣದ ಉತ್ತಮ ನಿರ್ವಹಣೆಯನ್ನು ಖಾತ್ರಿಪಡಿಸಿಕೊಳ್ಳುವುದು ಸೇರಿದಂತೆ ಆಂತರಿಕ ಸ್ವಚ್ಛತಾ ಕ್ರಮಗಳನ್ನು ಸಹ ಕೈಗೊಳ್ಳುತ್ತವೆ.
ಈ ಉಪಕ್ರಮವು ಭೌತಿಕ ಸ್ವಚ್ಛತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸ್ವಚ್ಛ ಮತ್ತು ಸುಸ್ಥಿರ ರೀತಿಯಲ್ಲಿ ಸಂರಕ್ಷಿಸುವಲ್ಲಿ ನಾಗರಿಕರಲ್ಲಿ ಕಾಯಂ ಜವಾಬ್ದಾರಿ ಮತ್ತು ಸಾಮೂಹಿಕ ಕ್ರಿಯೆಯನ್ನು ಹುಟ್ಟುಹಾಕುವ ಗುರಿಯನ್ನು ಹೊಂದಿದೆ.
ನಾಗರಿಕರು, ಸಾಂಸ್ಕೃತಿಕ ಸಂಸ್ಥೆಗಳು ಮತ್ತು ಯುವ ಸಂಘಟನೆಗಳು ಸೇರಿದಂತೆ ಎಲ್ಲಾ ಪಾಲುದಾರರು ಸ್ವಚ್ಛತಾ ಪಖ್ವಾಡದಲ್ಲಿ ಸಕ್ರಿಯವಾಗಿ ಭಾಗವಹಿಸಲು ಮತ್ತು ಸ್ವಚ್ಛ ಮತ್ತು ಆರೋಗ್ಯಕರ ಭಾರತವನ್ನು ನಿರ್ಮಿಸಲು ಕೊಡುಗೆ ನೀಡುವಂತೆ ಸಂಸ್ಕೃತಿ ಸಚಿವಾಲಯವು ಕರೆ ನೀಡುತ್ತದೆ.
*****
(ಪ್ರಕಟಣೆ ಐ.ಡಿ.: 2256575)
ವಿಸಿಟರ್ ಕೌಂಟರ್ : 9