ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
azadi ka amrit mahotsav

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಮತ್ತು ನ್ಯೂಜಿಲೆಂಡ್ ನ ವ್ಯಾಪಾರ ಮತ್ತು ಹೂಡಿಕೆ ಸಚಿವರಾದ ಗೌರವಾನ್ವಿತ ಟಾಡ್ ಮೆಕ್ಲೇ ಅವರು ಐತಿಹಾಸಿಕ ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದರು


ಭಾರತ-ನ್ಯೂಜಿಲೆಂಡ್ ಎಫ್‌ ಟಿ ಎ "ತಲೆಮಾರಿಗೊಮ್ಮೆ ದೊರೆಯುವ" ಅವಕಾಶಗಳನ್ನು ತೆರೆಯುತ್ತದೆ, ದ್ವಿಪಕ್ಷೀಯ ಸಂಬಂಧಗಳಲ್ಲಿ ಹೊಸ ಅಧ್ಯಾಯವನ್ನು ಗುರುತಿಸುತ್ತದೆ: ನ್ಯೂಜಿಲೆಂಡ್‌ನ ವ್ಯಾಪಾರ ಮತ್ತು ಹೂಡಿಕೆ ಸಚಿವ ಗೌರವಾನ್ವಿತ ಟಾಡ್ ಮೆಕ್ಲೇ

ಭಾರತ-ನ್ಯೂಜಿಲೆಂಡ್ ಎಫ್‌ ಟಿ ಎ ಒಂದು ನಿರ್ಣಾಯಕ ಮೈಲಿಗಲ್ಲು, ಇದು ರಫ್ತುಗಳು, ಎಂ ಎಸ್‌ ಎಂ ಇ ಗಳು ಮತ್ತು 20 ಬಿಲಿಯನ್ ಡಾಲರ್ ಹೂಡಿಕೆಯ ಬದ್ಧತೆಗೆ ಉತ್ತೇಜನ ನೀಡುತ್ತದೆ: ಶ್ರೀ ಪಿಯೂಷ್ ಗೋಯಲ್

ಭಾರತ-ನ್ಯೂಜಿಲೆಂಡ್ ಎಫ್‌ ಟಿ ಎ 118 ಕ್ಷೇತ್ರಗಳಲ್ಲಿ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುತ್ತದೆ, ಎಂ ಎಸ್‌ ಎಂ ಇ ಗಳು, ರಫ್ತುಗಳು ಮತ್ತು ನಾವೀನ್ಯತೆಯ ಕಾರ್ಯಸೂಚಿಯನ್ನು ಬಲಪಡಿಸುತ್ತದೆ: ಶ್ರೀ ಪಿಯೂಷ್ ಗೋಯಲ್

ಸುಂಕಗಳು, ಪ್ರತಿಭೆ, ಹೂಡಿಕೆ ಮತ್ತು ಕೃಷಿ ಉತ್ಪಾದಕತೆಯನ್ನು ಒಳಗೊಂಡಿರುವ 'ವಿಕಸಿತ ಭಾರತ @2047' ಕ್ಕಾಗಿ ಹೊಸ ಪೀಳಿಗೆಯ ವ್ಯಾಪಾರ ಒಪ್ಪಂದ; ಯುವಜನರು, ರೈತರು, ಮಹಿಳೆಯರು, ಕುಶಲಕರ್ಮಿಗಳು ಮತ್ತು ಎಂ ಎಸ್‌ ಎಂ ಇ ಗಳ ಸಬಲೀಕರಣ

ಹಲವು ಪ್ರಥಮಗಳನ್ನೊಳಗೊಂಡ ಒಪ್ಪಂದ: ಶೇ. 100 ಸುಂಕ ರಹಿತ ಪ್ರವೇಶ, ಫಾರ್ಮಾ ಕ್ಷೇತ್ರದಲ್ಲಿ ಫಾಸ್ಟ್ ಟ್ರ್ಯಾಕ್, ಕೃಷಿ ಉತ್ಪಾದಕತೆ ಪಾಲುದಾರಿಕೆ, ಪ್ರತಿಭೆಗಳ ಚಲನೆ, ಜಾಗತಿಕ ಮಟ್ಟಕ್ಕೆ ಆಯುಷ್ ಮತ್ತು ಬಲವಾದ ಬೌದ್ಧಿಕ ಆಸ್ತಿ ಹಕ್ಕುಗಳು

ಜವಳಿ, ಚರ್ಮದ ಉದ್ಯಮ, ಪಾದರಕ್ಷೆ, ಎಂಜಿನಿಯರಿಂಗ್ ಸರಕುಗಳು ಮತ್ತು ಸಂಸ್ಕರಿಸಿದ ಆಹಾರ ಕ್ಷೇತ್ರಗಳಂತಹ ಶ್ರಮದಾಯಕ ಕ್ಷೇತ್ರಗಳಿಗೆ ಶಕ್ತಿ ನೀಡಲು ವಿಸ್ತೃತ ಮಾರುಕಟ್ಟೆ ಪ್ರವೇಶ

ಕೃಷಿ, ಮೀನುಗಾರಿಕೆ ಮತ್ತು ಕಾರ್ಖಾನೆಗಳಿಗೆ ಉತ್ತೇಜನ: ಭಾರತದ ರಫ್ತುಗಳ ಮೇಲೆ ಶೇ. 100 ಶೂನ್ಯ-ಸುಂಕದ ಮಾರುಕಟ್ಟೆ ಪ್ರವೇಶ. ನ್ಯೂಜಿಲೆಂಡ್‌ ನ ದ್ವಿಪಕ್ಷೀಯ ವ್ಯಾಪಾರದ ಶೇ. 95 ರಷ್ಟನ್ನು ಒಳಗೊಂಡಿರುವ ಶೇ. 70 ಮಾರ್ಗಗಳಲ್ಲಿ ಭಾರತವು ಮಾರುಕಟ್ಟೆ ಪ್ರವೇಶವನ್ನು ನೀಡಿದೆ

ಕೃಷಿ, ಉತ್ಪಾದನೆ, ಮೂಲಸೌಕರ್ಯ, ನವೋದ್ಯಮಗಳು, ನಾವೀನ್ಯಕಾರರು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಉತ್ತೇಜನ ನೀಡಲು ಭಾರತಕ್ಕೆ 20 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯ ಬದ್ಧತೆ

ರೈತರು, ಗ್ರಾಮೀಣ ಆರ್ಥಿಕತೆ ಮತ್ತು ದೇಶೀಯ ಉದ್ಯಮಕ್ಕೆ ರಕ್ಷಣೆ ಖಚಿತಪಡಿಸಿಕೊಳ್ಳಲು, ಡೈರಿ ಮತ್ತು ಪ್ರಮುಖ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ಪ್ರವೇಶದಿಂದ ಹೊರಗಿಡಲಾಗಿದೆ. ಕಾಫಿ, ಹಾಲು, ಕ್ರೀಮ್, ಚೀಸ್, ಮೊಸರು, ವ್ಹೇ (whey), ಕ್ಯಾಸೀನ್, ಈರುಳ್ಳಿ, ಸಕ್ಕರೆ, ಸಾಂಬಾರ ಪದಾರ್ಥಗಳು, ಖಾದ್ಯ ತೈಲಗಳು ಮತ್ತು ರಬ್ಬರ್ ಇವುಗಳಲ್ಲಿ ಸೇರಿವೆ

ನುರಿತ ವೃತ್ತಿಪರರು, ನವೋದ್ಯಮಗಳು ಮತ್ತು ಸೇವಾ-ಆಧಾರಿತ ಉದ್ಯಮಗಳಿಗಾಗಿ ಹೈ-ವ್ಯಾಲ್ಯೂ ಅವಕಾಶಗಳನ್ನು ಮುಕ್ತಗೊಳಿಸುವ ಮೂಲಕ ನ್ಯೂಜಿಲೆಂಡ್‌ ನಿಂದ ಇದುವರೆಗಿನ ಅತ್ಯುತ್ತಮ ಮಾರುಕಟ್ಟೆ ಪ್ರವೇಶ ಮತ್ತು ಸೇವೆಗಳ ಕೊಡುಗೆ, ಇದು 118 ಸೇವಾ ಕ್ಷೇತ್ರಗಳನ್ನು ಒಳಗೊಂಡಿದೆ

ಸುಮಾರು 139 ಉಪ-ಕ್ಷೇತ್ರಗಳಲ್ಲಿ 'ಮೋಸ್ಟ್

ಪ್ರಕಟಣಾ ದಿನಾಂಕ: 27 APR 2026 4:05PM by PIB Bengaluru

ಭಾರತೀಯ ವೃತ್ತಿಪರರಿಗಾಗಿ 5,000 ವೀಸಾಗಳ ಮೀಸಲು ಕೋಟಾದೊಂದಿಗೆ ತಾತ್ಕಾಲಿಕ ಉದ್ಯೋಗ ಪ್ರವೇಶ ವೀಸಾ ಮಾರ್ಗ

ಉತ್ಪಾದನಾ ಸ್ಪರ್ಧಾತ್ಮಕತೆಯನ್ನು ಬಲಪಡಿಸಲು ಮತ್ತು ಸ್ಥಿತಿಸ್ಥಾಪಕ ಪೂರೈಕೆ ಸರಪಳಿಗಳನ್ನು ನಿರ್ಮಿಸಲು ಸುಂಕ ಮುಕ್ತ ಕಚ್ಚಾ ವಸ್ತುಗಳು: ಮರದ ದಿಮ್ಮಿಗಳು, ಕೋಕಿಂಗ್ ಕೋಲ್ ಮತ್ತು ಲೋಹದ ತ್ಯಾಜ್ಯ ಹಾಗೂ ಸ್ಕ್ರ್ಯಾಪ್‌ ಗಳು

ಉತ್ಪಾದಕತೆ, ರೈತರ ಆದಾಯ ಮತ್ತು ಜ್ಞಾನ ವಿನಿಮಯವನ್ನು ಹೆಚ್ಚಿಸಲು ಸೇಬು, ಕಿವಿ ಹಣ್ಣು ಮತ್ತು ಮಾನುಕಾ ಜೇನುತುಪ್ಪಕ್ಕಾಗಿ ಕೃಷಿ ಉತ್ಪಾದಕತೆ ಪಾಲುದಾರಿಕೆ ಮತ್ತು ಉತ್ಕೃಷ್ಟತಾ ಕೇಂದ್ರಗಳು

ಆಯುರ್ವೇದ, ಯೋಗ ಮತ್ತು ಇತರ ಸಾಂಪ್ರದಾಯಿಕ ಪದ್ಧತಿಗಳನ್ನು ಉತ್ತೇಜಿಸುವ ಮೂಲಕ ಮತ್ತು ಆಯುಷ್, ಸ್ವಾಸ್ಥ್ಯ ಸೇವೆಗಳು ಮತ್ತು ಮಹಿಳಾ ನೇತೃತ್ವದ ಉದ್ಯಮಗಳಲ್ಲಿ ಭಾರತದ ಜಾಗತಿಕ ನಾಯಕತ್ವವನ್ನು ಬಲಪಡಿಸುವ ನ್ಯೂಜಿಲೆಂಡ್‌ ನ ಮೊದಲ ಐತಿಹಾಸಿಕ ಆರೋಗ್ಯ ಮತ್ತು ಸಾಂಪ್ರದಾಯಿಕ ಜ್ಞಾನ ಸಹಯೋಗ

 

 

 

ಭಾರತದ ಜಾಗತಿಕ ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸಲು ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ನಾಯಕತ್ವದಲ್ಲಿ, ಭಾರತ ಮತ್ತು ನ್ಯೂಜಿಲೆಂಡ್ ಇಂದು ನವದೆಹಲಿಯ ಭಾರತ ಮಂಟಪದಲ್ಲಿ ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ (ಎಫ ಟಿ ಎ) ಸಹಿ ಹಾಕಿದವು. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಮತ್ತು ನ್ಯೂಜಿಲೆಂಡ್‌ ನ ವ್ಯಾಪಾರ ಮತ್ತು ಹೂಡಿಕೆ ಸಚಿವರಾದ ಗೌರವಾನ್ವಿತ ಟಾಡ್ ಮೆಕ್ಲೇ ಅವರು ಈ ಒಪ್ಪಂದಕ್ಕೆ ಸಹಿ ಹಾಕಿದರು.

ಸಹಿ ಹಾಕುವ ಸಮಾರಂಭವು ಉಭಯ ದೇಶಗಳ ವ್ಯಾಪಾರ ಮತ್ತು ಉದ್ಯಮದ ಮುಖಂಡರನ್ನು ಒಟ್ಟುಗೂಡಿಸಿತು. ವ್ಯಾಪಾರ ಮತ್ತು ಹೂಡಿಕೆ ಸಚಿವರಾದ ಶ್ರೀ ಟಾಡ್ ಮೆಕ್ಲೇ ಅವರು ಸಂಸತ್ ಸದಸ್ಯರ ಮತ್ತು 30 ಕ್ಕೂ ಹೆಚ್ಚು ನ್ಯೂಜಿಲೆಂಡ್ ಉದ್ಯಮಗಳ ನಿಯೋಗದ ನೇತೃತ್ವ ವಹಿಸಿದ್ದರು.

ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿರುವುದು ದ್ವಿಪಕ್ಷೀಯ ಸಂಬಂಧದಲ್ಲಿ ಹೊಸ ಮತ್ತು ಮಹತ್ವದ ಅಧ್ಯಾಯವಾಗಿದ್ದು, ಇದು ಹಂಚಿಕೆಯ ಮಹತ್ವಾಕಾಂಕ್ಷೆ, ಆಳವಾದ ತೊಡಗಿಸಿಕೊಳ್ಳುವಿಕೆ ಮತ್ತು ಪರಸ್ಪರ ಪ್ರಯೋಜನಕಾರಿ ಬೆಳವಣಿಗೆಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಶ್ರೀ ಮೆಕ್ಲೇ ಹೇಳಿದರು.

ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ನೀಡಿದ ಸಂದೇಶದಲ್ಲಿ, ನ್ಯೂಜಿಲೆಂಡ್ ಪ್ರಧಾನಮಂತ್ರಿ ಶ್ರೀ ಕ್ರಿಸ್ಟೋಫರ್ ಲಕ್ಸನ್ ಇದನ್ನು ಐತಿಹಾಸಿಕ ಮೈಲಿಗಲ್ಲು ಎಂದು ಕರೆದರು. ಈ ಒಪ್ಪಂದವು ಉಭಯ ದೇಶಗಳಿಗೆ ವ್ಯಾಪಾರ, ಹೂಡಿಕೆ ಮತ್ತು ನಾವೀನ್ಯತೆಗಾಗಿ ಪ್ರಮುಖ ಅವಕಾಶಗಳನ್ನು ತೆರೆಯುತ್ತದೆ ಎಂದು ಅವರು ಹೇಳಿದರು. ಇದು ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸುತ್ತದೆ, ರಫ್ತು ಬೆಳವಣಿಗೆಯನ್ನು ಬೆಂಬಲಿಸುತ್ತದೆ ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ ಸಹಯೋಗವನ್ನು ಸಕ್ರಿಯಗೊಳಿಸುತ್ತದೆ, ಜೊತೆಗೆ ಸ್ಥಿರವಾದ, ನಿಯಮ ಆಧಾರಿತ ವ್ಯಾಪಾರ ಮತ್ತು ಆಳವಾದ ಜನರ ನಡುವಿನ ಸಂಬಂಧಗಳಿಗೆ ಹಂಚಿಕೆಯ ಬದ್ಧತೆಯನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮೆಕ್ಲೇ, ಈ ಒಪ್ಪಂದವು "ತಲೆಮಾರಿಗೊಮ್ಮೆ ದೊರೆಯುವ" ಅವಕಾಶವಾಗಿದ್ದು, ಇದು ರಫ್ತುದಾರರಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ, ಉದ್ಯೋಗವನ್ನು ಸೃಷ್ಟಿಸುತ್ತದೆ ಮತ್ತು ಗಮನಾರ್ಹ ಆರ್ಥಿಕ ಸಾಮರ್ಥ್ಯವನ್ನು ಮುಕ್ತಗೊಳಿಸುತ್ತದೆ ಎಂದು ತಿಳಿಸಿದರು. ಇದು ಅಸ್ತಿತ್ವದಲ್ಲಿರುವ ವ್ಯಾಪಾರ ಸಂಬಂಧಗಳನ್ನು ಬಲಪಡಿಸುವುದು ಮಾತ್ರವಲ್ಲದೆ ಹೊಸ ಪಾಲುದಾರಿಕೆಗಳ ಅಭಿವೃದ್ಧಿಯನ್ನು ವೇಗಗೊಳಿಸುತ್ತದೆ ಮತ್ತು ಉಭಯ ದೇಶಗಳ ನಡುವಿನ ಒಟ್ಟಾರೆ ಆರ್ಥಿಕ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.

ನ್ಯೂಜಿಲೆಂಡ್‌ ನ ಬಲವಾದ ಭಾಗವಹಿಸುವಿಕೆಯನ್ನು ಉಲ್ಲೇಖಿಸಿದ ಶ್ರೀ ಮೆಕ್ಲೇ, ರಫ್ತುದಾರರು, ವಲಯದ ನಾಯಕರು ಮತ್ತು ವ್ಯಾಪಾರ ಪಾಲುದಾರರು ಸೇರಿದಂತೆ 40ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಸಂದರ್ಭಕ್ಕೆ ಸಾಕ್ಷಿಯಾಗಲು ಭಾರತಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇದು ಒಪ್ಪಂದಕ್ಕೆ ನೀಡಲಾದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ ಎಂದು ಹೇಳಿದರು,

ಮಾರುಕಟ್ಟೆ ಪ್ರವೇಶವನ್ನು ಸುಧಾರಿಸುವ ಮೂಲಕ, ಅಡೆತಡೆಗಳನ್ನು ಕಡಿಮೆ ಮಾಡುವ ಮೂಲಕ ಮತ್ತು ಸ್ಪಷ್ಟ ಹಾಗೂ ನಿರೀಕ್ಷಿಸಬಹುದಾದ ನಿಯಮಗಳನ್ನು ಸ್ಥಾಪಿಸುವ ಮೂಲಕ ವ್ಯಾಪಾರ ಮತ್ತು ಹೂಡಿಕೆ ಹರಿವನ್ನು ಸುಲಭಗೊಳಿಸಲು ಈ ಒಪ್ಪಂದವು ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಇದು ಸಣ್ಣ ಮತ್ತು ಮಧ್ಯಮ ಉದ್ಯಮಗಳು ಸೇರಿದಂತೆ ಎಲ್ಲಾ ಗಾತ್ರದ ವ್ಯವಹಾರಗಳನ್ನು ಬೆಂಬಲಿಸುತ್ತದೆ, ವ್ಯಾಪಾರದ ಪ್ರಯೋಜನಗಳು ವ್ಯಾಪಕವಾಗಿ ಹಂಚಿಕೆಯಾಗುವುದನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.

ಜನರು-ಜನರ ನಡುವಿನ ಸಂಪರ್ಕವು ದ್ವಿಪಕ್ಷೀಯ ಸಂಬಂಧದ ಪ್ರಮುಖ ಆಧಾರಸ್ತಂಭವಾಗಿದೆ ಎಂದು ಸಚಿವರು ಒತ್ತಿಹೇಳಿದರು. ನ್ಯೂಜಿಲೆಂಡ್‌ ನ ಜನಸಂಖ್ಯೆಯ ಸುಮಾರು ಶೇ. 6 ರಷ್ಟು ಜನರು ಭಾರತೀಯ ಮೂಲದವರಾಗಿದ್ದು, ಭಾರತೀಯ ವಲಸಿಗರು ವ್ಯವಹಾರ, ಶಿಕ್ಷಣ, ವಿಜ್ಞಾನ, ಸಂಸ್ಕೃತಿ, ಕ್ರೀಡೆ ಮತ್ತು ಸಾರ್ವಜನಿಕ ಜೀವನದಂತಹ ಕ್ಷೇತ್ರಗಳಲ್ಲಿ ಗಮನಾರ್ಹವಾಗಿ ಕೊಡುಗೆ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಮೊದಲ ಮಹಾಯುದ್ಧದ ಸಮಯದಲ್ಲಿ ಹಂಚಿಕೊಂಡ ಮಿಲಿಟರಿ ಇತಿಹಾಸ ಮತ್ತು ದ್ವಿಪಕ್ಷೀಯ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುವುದನ್ನು ಮುಂದುವರೆಸಿರುವ ವಿಶೇಷವಾಗಿ ಕ್ರಿಕೆಟ್‌ ನಲ್ಲಿನ ಕ್ರೀಡಾ ಸಂಬಂಧಗಳು ಸೇರಿದಂತೆ ಉಭಯ ರಾಷ್ಟ್ರಗಳ ನಡುವಿನ ದೀರ್ಘಕಾಲದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಅವರು ಒತ್ತಿ ಹೇಳಿದರು.

ಜಾಗತಿಕ ಮತ್ತು ಪ್ರಾದೇಶಿಕ ಚಲನಶೀಲತೆ ಬದಲಾಗುತ್ತಿರುವ ಸಮಯದಲ್ಲಿ ಈ ಒಪ್ಪಂದವು ಬಂದಿದೆ, ಇಲ್ಲಿ ವಿಶ್ವಾಸಾರ್ಹ ಪಾಲುದಾರಿಕೆಗಳು ಹೆಚ್ಚು ಮಹತ್ವದ್ದಾಗಿವೆ. ಪ್ರಾದೇಶಿಕ ಸ್ಥಿರತೆ, ಆರ್ಥಿಕ ಸ್ಥಿತಿಸ್ಥಾಪಕತ್ವ ಮತ್ತು ಹಂಚಿಕೆಯ ಸಮೃದ್ಧಿಯನ್ನು ಉತ್ತೇಜಿಸುವಲ್ಲಿ ನ್ಯೂಜಿಲೆಂಡ್ ಭಾರತವನ್ನು ಪ್ರಮುಖ ಪಾಲುದಾರ ಎಂದು ಪರಿಗಣಿಸುತ್ತದೆ ಎಂದು ಅವರು ಹೇಳಿದರು.

ಭಾರತದ ಕ್ಷಿಪ್ರ ಆರ್ಥಿಕ ಪರಿವರ್ತನೆಯನ್ನು ಶ್ಲಾಘಿಸಿದ ಸಚಿವರು, ಜಾಗತಿಕ ಆರ್ಥಿಕ ಚಟುವಟಿಕೆಯಲ್ಲಿ ಅದರ ಬೆಳೆಯುತ್ತಿರುವ ಪಾತ್ರವನ್ನು ಗಮನಿಸಿದರು ಮತ್ತು ಭಾರತದ ಅಭಿವೃದ್ಧಿ ಪಯಣದಲ್ಲಿ ಪಾಲುದಾರನಾಗುವ ನ್ಯೂಜಿಲೆಂಡ್‌ ನ ಬದ್ಧತೆಯನ್ನು ಪುನರುಚ್ಚರಿಸಿದರು.

ಮಾತುಕತೆಯಲ್ಲಿ ತೊಡಗಿರುವ ಅಧಿಕಾರಿಗಳ ವೃತ್ತಿಪರತೆ ಮತ್ತು ಸಮರ್ಪಣೆಯನ್ನು ಸಚಿವರು ಶ್ಲಾಘಿಸಿದರು, ಈ ಒಪ್ಪಂದವು ಸಮತೋಲಿತ, ಮುಂದಾಲೋಚನೆಯ ಮತ್ತು ಪ್ರಾಯೋಗಿಕ ಫಲಿತಾಂಶವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಎರಡೂ ಕಡೆಯವರು ಈಗ ಒಪ್ಪಂದದ ಪರಿಣಾಮಕಾರಿ ಅನುಷ್ಠಾನ ಮತ್ತು ವಿತರಣೆಯತ್ತ ನಿಕಟವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅವರು ಹೇಳಿದರು.

ಉಭಯ ದೇಶಗಳ ನಾಯಕತ್ವದ ದೃಷ್ಟಿಕೋನ ಮತ್ತು ಬದ್ಧತೆಗಾಗಿ ಧನ್ಯವಾದ ಅವರು ಅರ್ಪಿಸಿದರು, ಈ ಒಪ್ಪಂದವು ಪರಸ್ಪರ ಗೌರವ, ಸಮಾನ ಆಸಕ್ತಿಗಳು ಮತ್ತು ಮುಂಬರುವ ವರ್ಷಗಳಲ್ಲಿ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಸ್ಪಷ್ಟ ಮಹತ್ವಾಕಾಂಕ್ಷೆಯನ್ನು ಆಧರಿಸಿದೆ ಎಂದು ಹೇಳಿದ ಶ್ರೀ ಮೆಕ್ಲೇ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

ಭಾರತದ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಮಂತ್ರಿ ಗೌರವಾನ್ವಿತ ಕ್ರಿಸ್ಟೋಫರ್ ಲಕ್ಸನ್ ಅವರ ದ್ವಿಪಕ್ಷೀಯ ಸಭೆಯ ಮುನ್ನಾದಿನದಂದು ಮಾರ್ಚ್ 16, 2025 ರಂದು ಅಧಿಕೃತವಾಗಿ ಮಾತುಕತೆಗಳನ್ನು ಪ್ರಾರಂಭಿಸಲಾಯಿತು. ಈ ಒಪ್ಪಂದವು ಜನರು-ಜನರ ನಡುವಿನ ಗಾಢವಾದ ಸಂಬಂಧಗಳು ಮತ್ತು ಇಂಡೋ-ಪೆಸಿಫಿಕ್‌ ನಾದ್ಯಂತ ವ್ಯಾಪಾರ, ಆರ್ಥಿಕ ಸಹಕಾರ ಮತ್ತು ಕಾರ್ಯತಂತ್ರದ ತೊಡಗಿಸಿಕೊಳ್ಳುವಿಕೆಯನ್ನು ಮುನ್ನಡೆಸಲು ರೋಮಾಂಚಕ ಪ್ರಜಾಪ್ರಭುತ್ವಗಳ ನಡುವಿನ ಪಾಲುದಾರಿಕೆಯನ್ನು ಆಧರಿಸಿದೆ. ಓಷಿಯಾನಿಯಾ ಮತ್ತು ಭಾರತದ ನಡುವಿನ ಸರಕುಗಳ ದ್ವಿಪಕ್ಷೀಯ ವ್ಯಾಪಾರವು 2024-25ರಲ್ಲಿ ಸರಿಸುಮಾರು 26 ಬಿಲಿಯನ್ ಅಮೆರಿಕನ್ ಡಾಲರ್ ಆಗಿತ್ತು. ಓಷಿಯಾನಿಯಾ ಪ್ರದೇಶದಲ್ಲಿ ನ್ಯೂಜಿಲೆಂಡ್ ಭಾರತದ ಎರಡನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದು, ದ್ವಿಪಕ್ಷೀಯ ವ್ಯಾಪಾರವು ಸುಮಾರು 1.3 ಬಿಲಿಯನ್ ಅಮೆರಿಕನ್‌ ಡಾಲರ್ ಮೌಲ್ಯದ್ದಾಗಿದೆ. ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವು ಜಾರಿಗೆ ಬರುವುದರೊಂದಿಗೆ, ವರ್ಧಿತ ಮಾರುಕಟ್ಟೆ ಪ್ರವೇಶ, ಹೆಚ್ಚಿನ ವ್ಯಾಪಾರ ಸುಗಮಗೊಳಿಸುವಿಕೆ ಮತ್ತು ಉಭಯ ದೇಶಗಳ ನಡುವಿನ ಆಳವಾದ ಆರ್ಥಿಕ ತೊಡಗಿಸಿಕೊಳ್ಳುವಿಕೆಯ ಬೆಂಬಲದೊಂದಿಗೆ ದ್ವಿಪಕ್ಷೀಯ ವ್ಯಾಪಾರವು ಮತ್ತಷ್ಟು ಬೆಳವಣಿಗೆಗೆ ಸಾಕ್ಷಿಯಾಗುವ ನಿರೀಕ್ಷೆಯಿದೆ.

ಐದು ಸುತ್ತಿನ ಅಧಿಕೃತ ಮಾತುಕತೆಗಳು ಮತ್ತು ಹಲವಾರು ಅಂತರ್-ಅಧಿವೇಶನಗಳ ಮೂಲಕ, ಎರಡೂ ಕಡೆಯವರು 22 ಡಿಸೆಂಬರ್ 2025 ರಂದು ಒಪ್ಪಂದವನ್ನು ಪೂರ್ಣಗೊಳಿಸಿದರು. ಪ್ರಾರಂಭವಾದ ಕೇವಲ ಒಂಬತ್ತು ತಿಂಗಳುಗಳಲ್ಲಿ ಇದು ಪೂರ್ಣಗೊಂಡಿದ್ದು, ಭಾರತವು ಅಭಿವೃದ್ಧಿ ಹೊಂದಿದ ದೇಶದೊಂದಿಗೆ ಅತ್ಯಂತ ವೇಗವಾಗಿ ಮುಕ್ತಾಯಗೊಳಿಸಿದ ಎಫ್‌ ಟಿ ಎ ಗಳಲ್ಲಿ ಒಂದಾಗಿದೆ.

ಒಪ್ಪಂದಕ್ಕೆ ಸಹಿ ಹಾಕಿದ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಶ್ರೀ ಪಿಯೂಷ್ ಗೋಯಲ್ ಅವರು, “ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವು ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಭಾರತದ ಒಡನಾಟದಲ್ಲಿ ಒಂದು ನಿರ್ಣಾಯಕ ಮೈಲಿಗಲ್ಲನ್ನು ಗುರುತಿಸುತ್ತದೆ. ಇದು ನಮ್ಮ ರೈತರು, ಮಹಿಳೆಯರು, ಯುವಜನರು, ಕುಶಲಕರ್ಮಿಗಳು ಮತ್ತು ಉದ್ಯಮಿಗಳಿಗಾಗಿ ಜಾಗತಿಕ ಆರ್ಥಿಕ ಪಾಲುದಾರಿಕೆಯನ್ನು ಹೊಂದಿರಬೇಕೆಂಬ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯನ್ನು ಪ್ರತಿಫಲಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ 38 ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಭಾರತ ಮಾಡಿಕೊಂಡಿರುವ 9ನೇ ಒಪ್ಪಂದ ಇದಾಗಿದೆ. ರಫ್ತು, ಕೃಷಿ ಉತ್ಪಾದಕತೆ, ವಿದ್ಯಾರ್ಥಿಗಳ ಚಲನೆ, ಕೌಶಲ್ಯಗಳು, ಹೂಡಿಕೆ ಮತ್ತು ಸೇವೆಗಳ ಸಬಲೀಕರಣವೇ ಈ ಒಪ್ಪಂದದ ಕೇಂದ್ರಬಿಂದುವಾಗಿದೆ. ನ್ಯೂಜಿಲೆಂಡ್‌ ನಿಂದ 20 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯ ಬದ್ಧತೆಯು ಭಾರತದ ಬೆಳವಣಿಗೆಯ ಕಥೆಯ ಮೇಲಿರುವ ಬಲವಾದ ವಿಶ್ವಾಸವನ್ನು ಸೂಚಿಸುತ್ತದೆ. ಇದು ಎಂ‌ ಎಸ್‌ ಎಂ ಇ ಗಳನ್ನು ಬಲಪಡಿಸುವುದು, ನಾವೀನ್ಯತೆಯನ್ನು ಉತ್ತೇಜಿಸುವುದು ಮತ್ತು ಮಹಿಳಾ ನೇತೃತ್ವದ ಉದ್ಯಮಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಅಭಿವೃದ್ಧಿ ಹೊಂದಲು ವಿಶೇಷ ಒತ್ತು ನೀಡುತ್ತದೆ” ಎಂದು ಹೇಳಿದರು.

ವಾಣಿಜ್ಯ ಕಾರ್ಯದರ್ಶಿ ಶ್ರೀ ರಾಜೇಶ್ ಅಗ್ರವಾಲ್ ಅವರು ತಮ್ಮ ಸಂದೇಶದಲ್ಲಿ, “ಭಾರತ-ನ್ಯೂಜಿಲೆಂಡ್ ಎಫ್‌ ಟಿ ಎ ನಮ್ಮ ಆರ್ಥಿಕ ಪಾಲುದಾರಿಕೆಯಲ್ಲಿ ಹೊಸ ಯುಗವನ್ನು ಗುರುತಿಸುತ್ತದೆ, ಇದು ನಂಬಿಕೆ ಮತ್ತು ಪೂರಕ ಸಾಮರ್ಥ್ಯಗಳಿಂದ ಕೂಡಿದೆ. ನ್ಯೂಜಿಲೆಂಡ್‌ ಗೆ ರಫ್ತು ಮಾಡಲು ಭಾರತಕ್ಕೆ ಈಗ ಸಮಾನ ಅವಕಾಶಗಳು ದೊರೆತಿವೆ. ಈ ಎಫ್‌ ಟಿ ಎ ಕೃಷಿ ಉತ್ಪಾದಕತೆ, ಸಾವಯವ ಉತ್ಪನ್ನಗಳು, ಸೇವೆಗಳು, ಚಲನಶೀಲತೆ, ಆಯುಷ್ ಮತ್ತು ಔಷಧಗಳ (ಫಾರ್ಮಾ) ಪ್ರವೇಶದವರೆಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದ್ದು, ಅವಕಾಶಗಳನ್ನು ಸರ್ವವ್ಯಾಪಿ ಮತ್ತು ಭವಿಷ್ಯದ ಆಧಾರಿತವಾಗಿಸಿದೆ. ಈ ಒಪ್ಪಂದವು ಭಾರತದ ಕಾರ್ಮಿಕ ತೀತ್ರ ಕ್ಷೇತ್ರಗಳಿಗೆ ಬಲವಾದ ಸ್ಪರ್ಧಾತ್ಮಕ ಉತ್ತೇಜನವನ್ನು ನೀಡುತ್ತದೆ. ಭಾರತದ ರಫ್ತುದಾರರು ಈಗ ನ್ಯೂಜಿಲೆಂಡ್ ಮತ್ತು ವಿಶಾಲವಾದ ಪ್ರಾದೇಶಿಕ ವ್ಯಾಪಾರ ಪರಿಸರ ವ್ಯವಸ್ಥೆಗೆ ಶೂನ್ಯ-ಸುಂಕದ ಪ್ರವೇಶವನ್ನು ಹೊಂದಿದ್ದಾರೆ. ಭಾರತೀಯ ರಫ್ತುದಾರರು ಇಂಡೋ-ಪೆಸಿಫಿಕ್ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತ್ತು ವೈವಿಧ್ಯತೆಯಲ್ಲಿ ಕಾರ್ಯನಿರ್ವಹಿಸಬಹುದು. ಇಂದಿನ ಅನಿಶ್ಚಿತ ಜಗತ್ತಿನಲ್ಲಿ ಈ ಒಪ್ಪಂದವು ನಿರೀಕ್ಷೆಯನ್ನು ಹುಟ್ಟಿಸುತ್ತದೆ” ಎಂದು ತಿಳಿಸಿದರು.

ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದರ್ಶಿ ನಾಯಕತ್ವದಲ್ಲಿ ಸಹಿ ಹಾಕಲಾಯಿತು. ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದವು ಸಮಗ್ರ, ಒಳಗೊಳ್ಳುವಿಕೆ ಹೊಂದಿರುವ, ಆತ್ಮವಿಶ್ವಾಸದ, ವ್ಯವಸ್ಥಿತ ಮತ್ತು ರಾಷ್ಟ್ರೀಯ ಹಿತಾಸಕ್ತಿಯಲ್ಲಿ ಬೇರೂರಿರುವ ಹೊಸ ಪೀಳಿಗೆಯ ಕಾರ್ಯತಂತ್ರದ ವ್ಯಾಪಾರ ಪಾಲುದಾರಿಕೆಯನ್ನು ಪ್ರತಿನಿಧಿಸುತ್ತದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಭಾರತವು ಅಭಿವೃದ್ಧಿ ಹೊಂದಿದ ಆರ್ಥಿಕತೆಗಳೊಂದಿಗೆ ಪಾಲುದಾರಿಕೆಯನ್ನು ರೂಪಿಸುತ್ತಿದೆ, ಇದು ನಮ್ಮ ಕಾರ್ಮಿಕ ತೀವ್ರ ಕ್ಷೇತ್ರಗಳಿಗೆ ನೈಜ ಮಾರುಕಟ್ಟೆ ಪ್ರವೇಶವನ್ನು ಮತ್ತು ಸಮಗ್ರ ಆರ್ಥಿಕ ಪಾಲುದಾರಿಕೆಯನ್ನು ಒದಗಿಸುತ್ತದೆ. ಈ ಎಫ್‌ ಟಿ ಎ ಒಂದು ಹೊಸ ವಿಧಾನಕ್ಕೆ ಸಾಕ್ಷಿಯಾಗಿದೆ, ಇಲ್ಲಿ ವ್ಯಾಪಾರವು ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಯುವಜನರು, ಮಹಿಳೆಯರು ಮತ್ತು ಎಂ ಎಸ್‌ ಎಂ ಇ ಗಳನ್ನು ಸಬಲೀಕರಿಸುತ್ತದೆ ಮತ್ತು 'ವಿಕಸಿತ ಭಾರತ 2047' ಹಾದಿಯಲ್ಲಿ ಸರ್ವರನ್ನೂ ಒಳಗೊಂಡ ಬೆಳವಣಿಗೆ ಮತ್ತು ಆರ್ಥಿಕ ಸ್ಥಿತಿಸ್ಥಾಪಕತ್ವದ ದೃಷ್ಟಿಕೋನದೊಂದಿಗೆ ಹೊಂದಿಕೆಯಾಗುತ್ತದೆ. ಉಭಯ ದೇಶಗಳಲ್ಲಿನ ಎಲ್ಲಾ ಆಂತರಿಕ ಪ್ರಕ್ರಿಯೆಗಳು ಮತ್ತು ಅನುಮೋದನೆಗಳು ಪೂರ್ಣಗೊಂಡ ನಂತರ ಈ ಎಫ್‌ ಟಿ ಎ ಜಾರಿಗೆ ಬರಲಿದೆ.

ಜನರಿಗಾಗಿ ಉತ್ಪಾದಕತೆಯಿಂದ ಸಮೃದ್ಧಿಯತ್ತ: ವಿಕಸಿತ ಭಾರತ 2047 ಕ್ಕಾಗಿ ಸುಂಕಗಳು, ಪ್ರತಿಭೆ ಮತ್ತು ಪರಿವರ್ತನೆ

ಸರಕುಗಳ ವ್ಯಾಪಾರ: ಜಾರಿಗೆ ಬಂದ ಕೂಡಲೇ ನ್ಯೂಜಿಲೆಂಡ್ ಮಾರುಕಟ್ಟೆಗೆ ಅಭೂತಪೂರ್ವ ಶೇ. 100 ಸುಂಕ ರಹಿತ ಪ್ರವೇಶ

· ಈ ಮುಕ್ತ ವ್ಯಾಪಾರ ಒಪ್ಪಂದವು (ಎಫ್‌ ಟಿ ಎ) ನ್ಯೂಜಿಲೆಂಡ್‌ ಗೆ ಭಾರತದ ಶೇ. 100 ರಫ್ತುಗಳಿಗೆ ಸುಂಕ ರಹಿತ ಪ್ರವೇಶವನ್ನು ಒದಗಿಸುತ್ತದೆ, ಇದು ಎಲ್ಲಾ ಸುಂಕದ ಶ್ರೇಣಿಗಳನ್ನು ಒಳಗೊಂಡಿದೆ. ಜವಳಿ, ಸಿದ್ಧ ಉಡುಪುಗಳು, ಚರ್ಮದ ಉದ್ಯಮ, ಪಾದರಕ್ಷೆಗಳು, ರತ್ನ ಮತ್ತು ಆಭರಣಗಳು, ಎಂಜಿನಿಯರಿಂಗ್ ಸರಕುಗಳು ಮತ್ತು ಸಂಸ್ಕರಿಸಿದ ಆಹಾರಗಳಂತಹ ಕಾರ್ಮಿಕ ತೀವ್ರ ಕ್ಷೇತ್ರಗಳಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಇದು ಎಂ ಎಸ್‌ ಎಂ ಇ ಮತ್ತು ಉದ್ಯೋಗಾವಕಾಶಗಳಿಗೆ ಗಮನಾರ್ಹ ಉತ್ತೇಜನ ನೀಡುವ ನಿರೀಕ್ಷೆಯಿದೆ.

· ಇದಕ್ಕೂ ಮೊದಲು, ನ್ಯೂಜಿಲೆಂಡ್ ಸೆರಾಮಿಕ್ಸ್, ಕಾರ್ಪೆಟ್‌ ಗಳು, ಆಟೋಮೊಬೈಲ್ ಮತ್ತು ಆಟೋ ಬಿಡಿಭಾಗಗಳು ಸೇರಿದಂತೆ ಪ್ರಮುಖ ಭಾರತೀಯ ರಫ್ತುಗಳ ಮೇಲೆ ಶೇ.10 ರವರೆಗೆ ಗರಿಷ್ಠ ಸುಂಕವನ್ನು ವಿಧಿಸುತ್ತಿತ್ತು.

· ನ್ಯೂಜಿಲೆಂಡ್‌ ನ ಇತರ ವ್ಯಾಪಾರ ಪಾಲುದಾರರಂತೆಯೇ ಒಪ್ಪಂದ ಜಾರಿಗೆ ಬಂದ ದಿನದಿಂದಲೇ ಶೂನ್ಯ-ಸುಂಕದ ಮಾರುಕಟ್ಟೆ ಪ್ರವೇಶದೊಂದಿಗೆ, ಭಾರತೀಯ ಉತ್ಪನ್ನಗಳು ನ್ಯೂಜಿಲೆಂಡ್‌ ನಲ್ಲಿ ಸಮಾನ ಅವಕಾಶಗಳನ್ನು ಪಡೆಯಲಿದ್ದು, ಸಂಪೂರ್ಣ ಸ್ಪರ್ಧಾತ್ಮಕವಾಗಿರಲಿವೆ. ಇದು ಭಾರತದಾದ್ಯಂತ ಇರುವ ಕಾರ್ಮಿಕರು, ಕುಶಲಕರ್ಮಿಗಳು, ಮಹಿಳಾ ಉದ್ಯಮಿಗಳು, ಯುವಜನರು ಮತ್ತು ಎಂ ಎಸ್‌ ಎಂ ಇ ಗಳಿಗೆ ನೇರವಾಗಿ ಬೆಂಬಲ ನೀಡುತ್ತದೆ.

· ಗಮನಾರ್ಹವಾಗಿ, ಭಾರತವು ತನ್ನ ಉತ್ಪಾದನಾ ಕ್ಷೇತ್ರಕ್ಕಾಗಿ ಮರದ ದಿಮ್ಮಿಗಳು, ಕೋಕಿಂಗ್ ಕೋಲ್ ಮತ್ತು ಲೋಹದ ತ್ಯಾಜ್ಯ ಹಾಗೂ ಸ್ಕ್ರ್ಯಾಪ್‌ ಗಳು ಸೇರಿದಂತೆ ಸುಂಕ ಮುಕ್ತ ಕಚ್ಚಾ ವಸ್ತುಗಳ ಆಮದನ್ನು ಖಚಿತಪಡಿಸಿಕೊಂಡಿದೆ, ಇದು ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಭಾರತೀಯ ಉದ್ಯಮದ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ.

ವ್ಯವಸ್ಥಿತ ಮಾರುಕಟ್ಟೆ ಪ್ರವೇಶ ಮತ್ತು ಸೂಕ್ಷ್ಮ ಕ್ಷೇತ್ರಗಳ ರಕ್ಷಣೆ

· ಭಾರತವು ದ್ವಿಪಕ್ಷೀಯ ವ್ಯಾಪಾರ ಮೌಲ್ಯದ ಶೇ. 95 ರಷ್ಟನ್ನು ಒಳಗೊಂಡಿರುವ ಶೇ. 70.03 ಸುಂಕದ ಶ್ರೇಣಿಗಳ ಮೇಲೆ ಸುಂಕ ಸರಳೀಕರಣವನ್ನು ನೀಡಿದೆ, ಹಾಗೆಯೇ ಭಾರತದ ಸೂಕ್ಷ್ಮ ಕ್ಷೇತ್ರಗಳನ್ನು ರಕ್ಷಿಸಲು ಶೇ. 29.97 ಸುಂಕದ ಶ್ರೇಣಿಗಳನ್ನು ವಿನಾಯಿತಿ ಪಟ್ಟಿಯಲ್ಲಿ ಇರಿಸಿದೆ.

· ವಿನಾಯಿತಿ ಪಟ್ಟಿಯಲ್ಲಿ ಇರಿಸಲಾದ ಉತ್ಪನ್ನಗಳು ಮುಖ್ಯವಾಗಿ- ಡೈರಿ (ಹಾಲು, ಕ್ರೀಮ್, ವೇ, ಮೊಸರು, ಚೀಸ್ ಇತ್ಯಾದಿ), ಪ್ರಾಣಿ ಉತ್ಪನ್ನಗಳು (ಕುರಿ ಮಾಂಸವನ್ನು ಹೊರತುಪಡಿಸಿ), ಕೃಷಿ ಉತ್ಪನ್ನಗಳು (ಈರುಳ್ಳಿ, ಚನಾ, ಬಟಾಣಿ, ಜೋಳ, ಬಾದಾಮಿ ಇತ್ಯಾದಿ), ಸಕ್ಕರೆ, ಕೃತಕ ಜೇನುತುಪ್ಪ, ಪ್ರಾಣಿ, ಸಸ್ಯ ಅಥವಾ ಸೂಕ್ಷ್ಮಜೀವಿಯ ಕೊಬ್ಬುಗಳು ಮತ್ತು ಎಣ್ಣೆಗಳು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳು, ರತ್ನ ಮತ್ತು ಆಭರಣಗಳು, ತಾಮ್ರ ಮತ್ತು ಅದರ ವಸ್ತುಗಳು (ಕ್ಯಾಥೋಡ್‌ ಗಳು, ಕಾರ್ಟ್ರಿಜ್‌ ಗಳು, ರಾಡ್‌ ಗಳು, ಬಾರ್‌ ಗಳು, ಕಾಯಿಲ್‌ ಗಳು ಇತ್ಯಾದಿ), ಅಲ್ಯೂಮಿನಿಯಂ ಮತ್ತು ಅದರ ವಸ್ತುಗಳು (ಇಂಗಾಟ್‌ ಗಳು, ಬಿಲ್ಲೆಟ್‌ ಗಳು, ವೈರ್ ಬಾರ್‌ ಗಳು) ಸೇರಿದಂತೆ ಇತರವುಗಳನ್ನು ಒಳಗೊಂಡಿವೆ.

· ಮರ, ಉಣ್ಣೆ, ಕುರಿ ಮಾಂಸ, ಕಚ್ಚಾ ಚರ್ಮ ಮುಂತಾದವುಗಳನ್ನು ಒಳಗೊಂಡಿರುವ ಶೇ. 30.00 ಸುಂಕದ ಶ್ರೇಣಿಗಳ ಮೇಲಿನ ಸುಂಕವನ್ನು ತಕ್ಷಣವೇ ರದ್ದುಗೊಳಿಸಲಾಗುತ್ತದೆ.

· ಪೆಟ್ರೋಲಿಯಂ ತೈಲ, ಮಾಲ್ಟ್ ಸಾರ, ಸಸ್ಯಜನ್ಯ ಎಣ್ಣೆಗಳು ಮತ್ತು ಆಯ್ದ ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಯಂತ್ರೋಪಕರಣಗಳು, ಪೆಪ್ಟೋನ್ ಇತ್ಯಾದಿಗಳನ್ನು ಒಳಗೊಂಡಂತೆ ಶೇ. 35.60 ಸುಂಕಗಳನ್ನು 3, 5, 7 ಮತ್ತು 10 ವರ್ಷಗಳ ಅವಧಿಯಲ್ಲಿ ಹಂತ ಹಂತವಾಗಿ ರದ್ದುಗೊಳಿಸಲು ನಿರ್ಧರಿಸಲಾಗಿದೆ.

· ವೈನ್, ಫಾರ್ಮಾಸ್ಯುಟಿಕಲ್ ಔಷಧಗಳು, ಪಾಲಿಮರ್‌ ಗಳು, ಅಲ್ಯೂಮಿನಿಯಂ, ಕಬ್ಬಿಣ ಮತ್ತು ಉಕ್ಕಿನ ವಸ್ತುಗಳು ಮುಂತಾದ ಶೇ. 4.37 ಉತ್ಪನ್ನಗಳ ಮೇಲೆ ಸುಂಕ ಕಡಿತವನ್ನು ಅನ್ವಯಿಸಲಾಗುತ್ತದೆ.

· ಮಾನುಕಾ ಜೇನುತುಪ್ಪ, ಸೇಬು, ಕಿವಿ ಹಣ್ಣು ಮತ್ತು ಹಾಲಿನ ಅಲ್ಬುಮಿನ್ ಸೇರಿದಂತೆ ಅಲ್ಬುಮಿನ್‌ ಗಳು ಶೇ. 0.06 ಸುಂಕ ದರ ಕೋಟಾಗಳ ಅಡಿಯಲ್ಲಿ ಬರುತ್ತವೆ.

ಕೃಷಿ ಉತ್ಪಾದಕತೆ ಪಾಲುದಾರಿಕೆ, ರೈತರ ಆದಾಯ ಮತ್ತು ಗ್ರಾಮೀಣ ಆರ್ಥಿಕತೆಯ ಸುಧಾರಣೆ

· ಈ ಪಾಲುದಾರಿಕೆಯು ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ, ಸುಧಾರಿತ ನಾಟಿ ಸಾಮಗ್ರಿ, ಬೆಳೆಗಾರರಿಗೆ ಸಾಮರ್ಥ್ಯ ವೃದ್ಧಿ, ಸಹಯೋಗದ ಸಂಶೋಧನೆ ಮತ್ತು ತೋಟದ ನಿರ್ವಹಣೆ, ಕೊಯ್ಲಿನ ನಂತರದ ಪದ್ಧತಿಗಳು, ಪೂರೈಕೆ ಸರಪಳಿ ಕಾರ್ಯಕ್ಷಮತೆ ಮತ್ತು ಆಹಾರ ಸುರಕ್ಷತೆಗಾಗಿ ತಾಂತ್ರಿಕ ಬೆಂಬಲವನ್ನು ಒಳಗೊಂಡಿದೆ. ಸೇಬು ಬೆಳೆಗಾರರಿಗಾಗಿ ಯೋಜನೆಗಳು ಮತ್ತು ಸುಸ್ಥಿರ ಜೇನು ಸಾಕಣೆ ಪದ್ಧತಿಗಳು ಉತ್ಪಾದನೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಹೆಚ್ಚಿಸಲಿವೆ.

· ಆಯ್ದ ಕೃಷಿ ಉತ್ಪನ್ನಗಳಿಗೆ (ಸೇಬು, ಕಿವಿ ಹಣ್ಣು ಮತ್ತು ಮಾನುಕಾ ಜೇನುತುಪ್ಪ) ಮತ್ತು ನ್ಯೂಜಿಲೆಂಡ್‌ ನ ಅಲ್ಬುಮಿನ್‌ಗಳಿಗೆ ಮಾರುಕಟ್ಟೆ ಪ್ರವೇಶವನ್ನು ಕನಿಷ್ಠ ಆಮದು ಬೆಲೆ ಮತ್ತು ಇತರ ಸುರಕ್ಷತಾ ಕ್ರಮಗಳೊಂದಿಗೆ 'ಸುಂಕ ದರ ಕೋಟಾ' ವ್ಯವಸ್ಥೆಯ ಮೂಲಕ ನಿರ್ವಹಿಸಲಾಗುತ್ತದೆ. ಇದು ದೇಶೀಯ ರೈತರನ್ನು ರಕ್ಷಿಸುವ ಜೊತೆಗೆ ಗುಣಮಟ್ಟದ ಆಮದು ಮತ್ತು ಗ್ರಾಹಕರಿಗೆ ಹೆಚ್ಚಿನ ಆಯ್ಕೆಯನ್ನು ಖಚಿತಪಡಿಸುತ್ತದೆ.

· ಸೇಬು, ಕಿವಿ ಹಣ್ಣು ಮತ್ತು ಮಾನುಕಾಗೆ ಸಂಬಂಧಿಸಿದ ಎಲ್ಲಾ ಸುಂಕ ದರ ಕೋಟಾ (ಟಿ ಆರ್‌ ಕ್ಯೂ) ಗಳನ್ನು 'ಕೃಷಿ ಉತ್ಪಾದಕತೆ ಕ್ರಿಯಾ ಯೋಜನೆ'ಗಳ ವಿತರಣೆಯೊಂದಿಗೆ ಜೋಡಿಸಲಾಗಿದೆ ಮತ್ತು ಇದನ್ನು ಜಂಟಿ ಕೃಷಿ ಉತ್ಪಾದಕತೆ ಮಂಡಳಿ (ಜೆಎಪಿಸಿ) ಮೇಲ್ವಿಚಾರಣೆ ಮಾಡುತ್ತದೆ, ಇದು ಮಾರುಕಟ್ಟೆ ಪ್ರವೇಶ ಮತ್ತು ಸೂಕ್ಷ್ಮ ದೇಶೀಯ ಕೃಷಿ ಕ್ಷೇತ್ರಗಳ ರಕ್ಷಣೆಯ ನಡುವೆ ಸಮತೋಲನವನ್ನು ಕಾಪಾಡುತ್ತದೆ.

· ಮಾನುಕಾ ಜೇನುತುಪ್ಪ: ಪ್ರಸ್ತುತ ಅನ್ವಯವಾಗುವ ಸುಂಕ: ಶೇ. 66; ನ್ಯೂಜಿಲೆಂಡ್‌ ನಿಂದ ಪ್ರಸ್ತುತ ಆಮದು: 14.2 ಮೆಟ್ರಿಕ್ ಟನ್ (US$ 0.3 ಮಿಲಿಯನ್); ಕೋಟಾದೊಳಗಿನ ಟಿ ಆರ್‌ ಕ್ಯೂ: ವರ್ಷಕ್ಕೆ 200 ಮೆಟ್ರಿಕ್ ಟನ್, ಪ್ರತಿ ಕೆಜಿಗೆ US$ 20 ರ ಕನಿಷ್ಠ ಆಮದು ಬೆಲೆ (ಎಂಐಪಿ) ಮತ್ತು 5 ವರ್ಷಗಳಲ್ಲಿ ಶೇ. 75 ಸುಂಕ ಕಡಿತ; ಕೋಟಾದ ಹೊರಗೆ: US$ 30 ರ ಎಂಐಪಿಯೊಂದಿಗೆ 5 ವರ್ಷಗಳಲ್ಲಿ ಶೇ. 75 ಸುಂಕ ಕಡಿತ. ಸುಂಕವು ಶೇ.56.1 (ವರ್ಷ 1); ಶೇ.46.2 (ವರ್ಷ 2), ಶೇ.36.3 (ವರ್ಷ 3), ಶೇ.26.4 (ವರ್ಷ 4), ಶೇ.16.5 (5ನೇ ವರ್ಷದಿಂದ) ಇರಲಿದೆ.

· ಸೇಬು: ಪ್ರಸ್ತುತ ಅನ್ವಯವಾಗುವ ಸುಂಕ: ಶೇ.50; ನ್ಯೂಜಿಲೆಂಡ್‌ ನಿಂದ ಪ್ರಸ್ತುತ ಆಮದು: 31,392.6 ಮೆಟ್ರಿಕ್ ಟನ್ (US$ 32.4 ಮಿಲಿಯನ್); ಕೋಟಾದೊಳಗಿನ ಟಿ ಆರ್‌ ಕ್ಯೂ: 32,500 ಮೆಟ್ರಿಕ್ ಟನ್ (ವರ್ಷ 1) ಇಂದ 45,000 ಮೆಟ್ರಿಕ್ ಟನ್ (ವರ್ಷ 6) ಗೆ ಏರಿಕೆ, ಶೇ.25 ಸುಂಕ ಮತ್ತು ಪ್ರತಿ ಕೆಜಿಗೆ US$ 1.25 ರ ಎಂಐಪಿಯೊಂದಿಗೆ (ಋತುಮಾನದ ಅವಧಿ: ಏಪ್ರಿಲ್ 1 - ಆಗಸ್ಟ್ 31); ಕೋಟಾದ ಹೊರಗೆ: ಅನ್ವಯವಾಗುವ ಚಾಲ್ತಿ ಸುಂಕ.

· ಕಿವಿ ಹಣ್ಣು: ಪ್ರಸ್ತುತ ಅನ್ವಯವಾಗುವ ಸುಂಕ: ಶೇ.33; ನ್ಯೂಜಿಲೆಂಡ್‌ ನಿಂದ ಪ್ರಸ್ತುತ ಆಮದು: 5,840 ಮೆಟ್ರಿಕ್ ಟನ್ (US$ 16.9 ಮಿಲಿಯನ್); ಕೋಟಾದೊಳಗಿನ ಟಿ ಆರ್‌ ಕ್ಯೂ: 6,250 ಮೆಟ್ರಿಕ್ ಟನ್ (ವರ್ಷ 1) ಇಂದ 15,000 ಮೆಟ್ರಿಕ್ ಟನ್ (ವರ್ಷ 6) ಗೆ ಏರಿಕೆ, ಶೇ.0 ಸುಂಕ ಮತ್ತು ಪ್ರತಿ ಕೆಜಿಗೆ US$ 1.80 ರ ಎಂಐಪಿಯೊಂದಿಗೆ (ಋತುಮಾನದ ಅವಧಿ: ಏಪ್ರಿಲ್ 1 - ಅಕ್ಟೋಬರ್ 15); ಕೋಟಾದ ಹೊರಗೆ: US$ 2.50 ರ ಎಂಐಪಿಯೊಂದಿಗೆ ಶೇ. 50 MoP.

· ಹಾಲಿನ ಅಲ್ಬುಮಿನ್ ಸೇರಿದಂತೆ ಅಲ್ಬುಮಿನ್ಗಳು: ಪ್ರಸ್ತುತ ಅನ್ವಯವಾಗುವ ಸುಂಕ: ಶೇ.22; ನ್ಯೂಜಿಲೆಂಡ್‌ ನಿಂದ ಪ್ರಸ್ತುತ ಆಮದು: 3,429.7 ಮೆಟ್ರಿಕ್ ಟನ್ (US$ 28.9 ಮಿಲಿಯನ್); ಕೋಟಾದೊಳಗಿನ ಟಿ ಆರ್‌ ಕ್ಯೂ: 1,000 ಮೆಟ್ರಿಕ್ ಟನ್ (ವರ್ಷ 1) ಇಂದ 3,000 ಮೆಟ್ರಿಕ್ ಟನ್ (ವರ್ಷ 5) ಗೆ ಏರಿಕೆ, ಶೇ. 11 ಸುಂಕದೊಂದಿಗೆ; ಕೋಟಾದ ಹೊರಗೆ: ಅನ್ವಯವಾಗುವ ಚಾಲ್ತಿ ಸುಂಕ.

ಸೇವೆಗಳು: ನ್ಯೂಜಿಲೆಂಡ್ ನ ಅತ್ಯುತ್ತಮ ಕೊಡುಗೆಯು ನಮ್ಮ ಯುವಜನರು, ಮಹಿಳೆಯರು ಮತ್ತು ವೃತ್ತಿಪರರನ್ನು ಸಬಲೀಕರಿಸುತ್ತದೆ

· ಭಾರತಕ್ಕೆ ಆಸಕ್ತಿಯಿರುವ ಪ್ರಮುಖ ಕ್ಷೇತ್ರಗಳಾದ ಕಂಪ್ಯೂಟರ್ ಸಂಬಂಧಿತ ಸೇವೆಗಳು, ವೃತ್ತಿಪರ ಸೇವೆಗಳು, ಆಡಿಯೋ ವಿಶುವಲ್ ಸೇವೆಗಳು, ಇತರ ವ್ಯಾಪಾರ ಸೇವೆಗಳು, ದೂರಸಂಪರ್ಕ ಸೇವೆಗಳು, ನಿರ್ಮಾಣ ಸೇವೆಗಳು, ವಿತರಣಾ ಸೇವೆಗಳು, ಶಿಕ್ಷಣ ಸೇವೆಗಳು, ಪರಿಸರ ಸೇವೆಗಳು, ಹಣಕಾಸು ಸೇವೆಗಳು, ಪ್ರವಾಸೋದ್ಯಮ ಮತ್ತು ಪ್ರಯಾಣ ಸಂಬಂಧಿತ ಸೇವೆಗಳು ಸೇರಿದಂತೆ ಸುಮಾರು 118 ಸೇವಾ ಕ್ಷೇತ್ರಗಳಲ್ಲಿ ನ್ಯೂಜಿಲೆಂಡ್ ಭಾರತಕ್ಕೆ ಮಾರುಕಟ್ಟೆ ಪ್ರವೇಶದ ಬದ್ಧತೆಗಳನ್ನು ನೀಡಿದೆ.

· ಭಾರತದ ಪ್ರಮುಖ ಹಿತಾಸಕ್ತಿಯ ಕ್ಷೇತ್ರಗಳನ್ನು ಒಳಗೊಂಡಿರುವ ಸುಮಾರು 139 ಉಪ-ಕ್ಷೇತ್ರಗಳಲ್ಲಿ 'ಮೋಸ್ಟ್ ಫೇವರ್ಡ್ ನೇಷನ್' (ಎಂ ಎಫ್‌ ಎನ್) ಬದ್ಧತೆಯನ್ನು ನೀಡಲಾಗಿದೆ.

ಕೌಶಲ್ಯಯುತ ಉದ್ಯೋಗ ಮಾರ್ಗಗಳು ಮತ್ತು ಜಾಗತಿಕ ಅನುಭವಗಳ ಮುಕ್ತತೆ:

· ಕೌಶಲ್ಯಯುತ ಉದ್ಯೋಗಗಳಲ್ಲಿರುವ ಭಾರತೀಯ ವೃತ್ತಿಪರರಿಗಾಗಿ ಈ ಒಪ್ಪಂದವು ಹೊಸ ತಾತ್ಕಾಲಿಕ ಉದ್ಯೋಗ ಪ್ರವೇಶ (ಟಿಇಇ) ವೀಸಾ ಮಾರ್ಗವನ್ನು ಸ್ಥಾಪಿಸುತ್ತದೆ. ಇದು ಯಾವುದೇ ಸಮಯದಲ್ಲಿ 5,000 ವೀಸಾಗಳ ಕೋಟಾವನ್ನು ಹೊಂದಿದ್ದು, ಮೂರು ವರ್ಷಗಳವರೆಗೆ ವಾಸ್ತವ್ಯಕ್ಕೆ ಅವಕಾಶ ನೀಡುತ್ತದೆ.

· ಈ ಮಾರ್ಗವು ಆಯುಷ್ ವೈದ್ಯರು, ಯೋಗ ತರಬೇತುದಾರರು, ಭಾರತೀಯ ಪಾಕಪ್ರವೀಣರು ಮತ್ತು ಸಂಗೀತ ಶಿಕ್ಷಕರಂತಹ ಭಾರತೀಯ ವೃತ್ತಿಗಳನ್ನು ಒಳಗೊಂಡಿದೆ. ಅಲ್ಲದೆ ಐಟಿ, ಎಂಜಿನಿಯರಿಂಗ್, ಆರೋಗ್ಯ ಸೇವೆ, ಶಿಕ್ಷಣ ಮತ್ತು ನಿರ್ಮಾಣದಂತಹ ಹೆಚ್ಚಿನ ಬೇಡಿಕೆಯಿರುವ ಕ್ಷೇತ್ರಗಳನ್ನು ಒಳಗೊಂಡಿದ್ದು, ನುರಿತ ಕಾರ್ಯಪಡೆಯ ಚಲನೆ ಮತ್ತು ಸೇವೆಗಳ ವ್ಯಾಪಾರವನ್ನು ಬಲಪಡಿಸುತ್ತದೆ.

ಭಾರತೀಯ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಯುವಜನರಿಗಾಗಿ ವರ್ಧಿತ ಚಲನಶೀಲತೆ ಮಾರ್ಗಗಳು

· ನ್ಯೂಜಿಲೆಂಡ್ ಯಾವುದೇ ದೇಶದೊಂದಿಗೆ ಇದೇ ಮೊದಲ ಬಾರಿಗೆ, ಭಾರತದೊಂದಿಗೆ ವಿದ್ಯಾರ್ಥಿಗಳ ಚಲನಶೀಲತೆ ಮತ್ತು ಅಧ್ಯಯನ ನಂತರದ ಕೆಲಸದ ವೀಸಾಗಳ ಕುರಿತು ಪ್ರತ್ಯೇಕ ಮಾರ್ಗವನ್ನು ರಚಿಸಿದೆ. ಈ ಒಪ್ಪಂದವು ಭಾರತೀಯ ವಿದ್ಯಾರ್ಥಿಗಳ ಮೇಲಿನ ಸಂಖ್ಯಾತ್ಮಕ ಮಿತಿಗಳನ್ನು ತೆಗೆದುಹಾಕುತ್ತದೆ, ಅಧ್ಯಯನದ ಸಮಯದಲ್ಲಿ ವಾರಕ್ಕೆ ಕನಿಷ್ಠ 20 ಗಂಟೆಗಳ ಕೆಲಸದ ಗ್ಯಾರಂಟಿ ನೀಡುತ್ತದೆ ಮತ್ತು ವಿಸ್ತೃತ ಅಧ್ಯಯನ ನಂತರದ ಕೆಲಸದ ಅವಕಾಶಗಳನ್ನು ಒದಗಿಸುತ್ತದೆ—STEM ಪದವಿ ಮತ್ತು ಸ್ನಾತಕೋತ್ತರ ಪದವೀಧರರಿಗೆ ಮೂರು ವರ್ಷಗಳವರೆಗೆ ಮತ್ತು ಡಾಕ್ಟರೇಟ್ ಪದವೀಧರರಿಗೆ ನಾಲ್ಕು ವರ್ಷಗಳವರೆಗೆ—ಇದು ಕೌಶಲ್ಯ ಅಭಿವೃದ್ಧಿ ಮತ್ತು ಜಾಗತಿಕ ವೃತ್ತಿಜೀವನಕ್ಕೆ ಸ್ಪಷ್ಟ ಮಾರ್ಗಗಳನ್ನು ಸೃಷ್ಟಿಸುತ್ತದೆ.

· ಈ ಒಪ್ಪಂದವು ವಾರ್ಷಿಕವಾಗಿ 1,000 ಯುವ ಭಾರತೀಯರಿಗಾಗಿ 12 ತಿಂಗಳವರೆಗೆ ಮಾನ್ಯವಿರುವ ಮಲ್ಟಿಪಲ್-ಎಂಟ್ರಿ ವರ್ಕಿಂಗ್ ಹಾಲಿಡೇ ವೀಸಾಗಳ ಮೂಲಕ ಯುವಕರ ಚಲನಶೀಲತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ, ಇದು ಜಾಗತಿಕ ಮಾನ್ಯತೆ, ಕೌಶಲ್ಯ ಸಂಪಾದನೆ ಮತ್ತು ಜನರ ನಡುವಿನ ಸಂಪರ್ಕವನ್ನು ಉತ್ತೇಜಿಸುತ್ತದೆ.

ಹೂಡಿಕೆ: ನಮ್ಮ ನಾವೀನ್ಯಕಾರರು, ಉದ್ಯಮ ಮತ್ತು ನವೋದ್ಯಮ ಪೂರಕ ವ್ಯವಸ್ಥೆಗಾಗಿ 20 ಬಿಲಿಯನ್ ಅಮೆರಿಕನ್ ಡಾಲರ್ ಬದ್ಧತೆ

· ಈ ಮುಕ್ತ ವ್ಯಾಪಾರ ಒಪ್ಪಂದವು ಭಾರತಕ್ಕೆ 20 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯನ್ನು ಸುಗಮಗೊಳಿಸುವ ಬದ್ಧತೆಯನ್ನು ಒಳಗೊಂಡಿದೆ. ಇದು ದೀರ್ಘಕಾಲೀನ ಆರ್ಥಿಕ ಸಹಕಾರವನ್ನು ಬಲಪಡಿಸುತ್ತದೆ ಮತ್ತು 'ಮೇಕ್ ಇನ್ ಇಂಡಿಯಾ' ದೃಷ್ಟಿಕೋನದ ಅಡಿಯಲ್ಲಿ ಭಾರತದ ಬೆಳವಣಿಗೆ ಮತ್ತು ಅಭಿವೃದ್ಧಿಯ ಉದ್ದೇಶಗಳನ್ನು ಬೆಂಬಲಿಸುತ್ತದೆ.

· ಹೂಡಿಕೆ, ಸಂಶೋಧನೆ ಮತ್ತು ನಾವೀನ್ಯತೆ, ತಂತ್ರಜ್ಞಾನದ ಹರಿವು ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುವ ಜಂಟಿ ಕಾರ್ಯತಂತ್ರಗಳನ್ನು ಇದು ಒಳಗೊಂಡಿದೆ. ವಿಶೇಷವಾಗಿ ನವೀಕರಿಸಬಹುದಾದ ಇಂಧನ, ಡಿಜಿಟಲ್ ಸೇವೆಗಳು ಮತ್ತು ಆಧುನಿಕ ಮೂಲಸೌಕರ್ಯ ಕ್ಷೇತ್ರಗಳು ಇದರಲ್ಲಿ ಸಂಪೂರ್ಣವಾಗಿ ಒಳಗೊಂಡಿವೆ.

· ಹೂಡಿಕೆ ವಿತರಣೆಯಲ್ಲಿ ಯಾವುದೇ ಕೊರತೆಯನ್ನು ನಿಭಾಯಿಸಲು ಒಂದು ಚೌಕಟ್ಟನ್ನು ಒದಗಿಸಲು ಒಪ್ಪಂದದಲ್ಲಿ ಮರು ಸಮತೋಲನ ನಿಬಂಧನೆ (ರಿಬ್ಯಾಲೆನ್ಸಿಂಗ್ ಕ್ಲಾಸ್) ಯನ್ನು ಸೇರಿಸಲಾಗಿದೆ, ಆ ಮೂಲಕ ದೃಢವಾದ ಮತ್ತು ಸ್ಪಷ್ಟವಾದ ಆರ್ಥಿಕ ಫಲಿತಾಂಶಗಳನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.

ಔಷಧಗಳು (ಫಾರ್ಮಾಸ್ಯುಟಿಕಲ್ಸ್) ಮತ್ತು ವೈದ್ಯಕೀಯ ಉಪಕರಣಗಳಿಗಾಗಿ ಅಭಿವೃದ್ಧಿ ಹೊಂದಿದ ಮಾರುಕಟ್ಟೆಯಲ್ಲಿ ಮಾರುಕಟ್ಟೆ ಪ್ರವೇಶಕ್ಕೆ ವೇಗ: ಪ್ರಮುಖ ಯಶಸ್ಸು

· ಅಮೆರಿಕನ್ ಎಫ್‌ ಡಿ ಎ, ಇಎಂಎ, ಯುಕೆ ಎಂ ಎಚ್‌ ಆರ್‌ ಎ, ಹೆಲ್ತ್ ಕೆನಡಾ ಮತ್ತು ಇತರ ಸಮಾನ ನಿಯಂತ್ರಕಗಳ ಅನುಮೋದನೆಗಳು ಸೇರಿದಂತೆ, ಸಮಾನ ನಿಯಂತ್ರಕರಿಂದ ಜಿಎಂಪಿ ಮತ್ತು ಜಿಸಿಪಿ ತಪಾಸಣೆ ವರದಿಗಳ ಸ್ವೀಕಾರವನ್ನು ಸಕ್ರಿಯಗೊಳಿಸುವ ಮೂಲಕ ಈ ಎಫ್‌ ಟಿ ಎ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ಪ್ರವೇಶವನ್ನು ಸುಗಮಗೊಳಿಸುತ್ತದೆ.

· ಇವು ನಕಲಿ ತಪಾಸಣೆಗಳನ್ನು ಕಡಿಮೆ ಮಾಡುತ್ತದೆ, ಅನುಸರಣೆ ವೆಚ್ಚಗಳನ್ನು ತಗ್ಗಿಸುತ್ತದೆ ಮತ್ತು ಉತ್ಪನ್ನದ ಅನುಮೋದನೆಗಳನ್ನು ತ್ವರಿತಗೊಳಿಸುತ್ತದೆ. ಆ ಮೂಲಕ ಮಾರುಕಟ್ಟೆ ಪ್ರವೇಶವನ್ನು ಸುಲಭಗೊಳಿಸುತ್ತದೆ ಮತ್ತು ನ್ಯೂಜಿಲೆಂಡ್‌ ಗೆ ಭಾರತದ ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳ ರಫ್ತಿನ ಬೆಳವಣಿಗೆಯನ್ನು ಬೆಂಬಲಿಸುತ್ತದೆ.

ಬೌದ್ಧಿಕ ಆಸ್ತಿ ಹಕ್ಕುಗಳು

· ನ್ಯೂಜಿಲೆಂಡ್‌ ನ ಪ್ರಸ್ತುತ ಭೌಗೋಳಿಕ ಸೂಚಕ (ಜಿಐ) ಕಾನೂನು ಭಾರತದ ವೈನ್ ಮತ್ತು ಸ್ಪಿರಿಟ್‌ ಗಳನ್ನು ಮಾತ್ರ ನೋಂದಾಯಿಸಲು ಅವಕಾಶ ನೀಡುತ್ತದೆ.

· ಬೌದ್ಧಿಕ ಆಸ್ತಿಯ ವಿಷಯದಲ್ಲಿ, ಒಪ್ಪಂದವು ಜಾರಿಗೆ ಬಂದ 18 ತಿಂಗಳೊಳಗೆ ತನ್ನ ದೇಶೀಯ ಭೌಗೋಳಿಕ ಸೂಚಕ ಕಾನೂನನ್ನು ತಿದ್ದುಪಡಿ ಮಾಡಲು ನ್ಯೂಜಿಲೆಂಡ್ ಬದ್ಧವಾಗಿದೆ. ಇದು ಭಾರತದ ವೈನ್, ಸ್ಪಿರಿಟ್ ಮತ್ತು 'ಇತರ ಸರಕುಗಳ' ನೋಂದಣಿಯನ್ನು ಸಕ್ರಿಯಗೊಳಿಸುತ್ತದೆ, ಈ ಹಿಂದೆ ಯುರೋಪಿಯನ್ ಯೂನಿಯನ್‌ ಗೆ ನೀಡಲಾಗಿದ್ದ ಅದೇ ಮಾನ್ಯತೆಯನ್ನು ಭಾರತಕ್ಕೂ ವಿಸ್ತರಿಸುತ್ತದೆ.

· ಇದು ನ್ಯೂಜಿಲೆಂಡ್ ಮಾರುಕಟ್ಟೆಯಲ್ಲಿ ಭಾರತದ ಹೆಸರಾಂತ ಜಿಐ ಉತ್ಪನ್ನಗಳ ಅಧಿಕೃತ ರಕ್ಷಣೆಗೆ ಬಾಗಿಲು ತೆರೆಯುತ್ತದೆ.

ಎಂ ಎಸ್‌ ಎಂ ಇ ಗಳು, ಮಹಿಳಾ ಉದ್ಯಮಿಗಳು, ಇನ್ಕ್ಯುಬೇಟರ್‌ ಗಳು ಮತ್ತು ಜಾಗತಿಕ ಮೌಲ್ಯ ಸರಪಳಿ ಏಕೀಕರಣಕ್ಕೆ ಉತ್ತೇಜನ

· ಈ ಒಪ್ಪಂದವನ್ನು ಒಳಗೊಳ್ಳುವಿಕೆ ಮತ್ತು ಮುಂದಾಲೋಚನೆಯೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಶ್ರಮದಾಯಕ ಕ್ಷೇತ್ರಗಳಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ಎಂ ಎಸ್‌ ಎಂ ಇ ಮತ್ತು ಉದ್ಯೋಗಾವಕಾಶಗಳನ್ನು ಗಣನೀಯವಾಗಿ ಹೆಚ್ಚಿಸುವ ನಿರೀಕ್ಷೆಯಿದೆ.

· ಕಡಿಮೆಯಾದ ವ್ಯಾಪಾರ ಅಡೆತಡೆಗಳು ಮತ್ತು ನಿಯಂತ್ರಕ ನಿಶ್ಚಿತತೆಯು ಜವಳಿ, ಸಿದ್ಧ ಉಡುಪು, ಎಂಜಿನಿಯರಿಂಗ್ ಸರಕುಗಳು, ರಾಸಾಯನಿಕಗಳು, ಆಹಾರ ಸಂಸ್ಕರಣೆ ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಲ್ಲಿನ ಎಂ ಎಸ್‌ ಎಂ ಇ ಗಳಿಗೆ ಭಾರತೀಯ ಉತ್ಪಾದನೆ ಮತ್ತು ಜಾಗತಿಕ ಮೌಲ್ಯ ಸರಪಳಿ ಏಕೀಕರಣವನ್ನು ಬಲಪಡಿಸುತ್ತದೆ.

· ಎಂ ಎಸ್‌ ಎಂ ಇ ಗಳಿಗಾಗಿ ರೂಪಿಸಲಾದ ಸಹಕಾರವು ವ್ಯಾಪಾರ ಸಂಬಂಧಿತ ಮಾಹಿತಿಗೆ ಹೆಚ್ಚಿನ ಪ್ರವೇಶ, ರಫ್ತು ಸಿದ್ಧತೆ ಕಾರ್ಯಕ್ರಮಗಳು ಮತ್ತು ನ್ಯೂಜಿಲೆಂಡ್‌ ನ ಎಸ್‌ ಎಂ ಇ ಪರಿಸರ ವ್ಯವಸ್ಥೆಯೊಂದಿಗೆ ಸಂಪರ್ಕವನ್ನು ಒಳಗೊಂಡಿದೆ. ವಿಶೇಷವಾಗಿ ನವೋದ್ಯಮಗಳು ಮತ್ತು ಮಹಿಳೆಯರು ಹಾಗೂ ಯುವಜನರ ಮಾಲೀಕತ್ವದ ಉದ್ಯಮಗಳ ಮೇಲೆ ವಿಶೇಷ ಗಮನ ಹರಿಸಲಾಗಿದೆ.

· ರೈತರು, ಎಂ ಎಸ್‌ ಎಂ ಇ ಗಳು, ನವೋದ್ಯಮಗಳು, ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಜಾಗತಿಕ ಮೌಲ್ಯ ಸರಪಳಿಗಳಿಗೆ ಸುಧಾರಿತ ಪ್ರವೇಶ, ಕಡಿಮೆ ವ್ಯಾಪಾರ ಅಡೆತಡೆಗಳು ಮತ್ತು ಬೆಳವಣಿಗೆ ಹಾಗೂ ನಾವೀನ್ಯತೆಗಾಗಿ ವರ್ಧಿತ ಅವಕಾಶಗಳಿಂದ ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.

ಮೂಲದ ನಿಯಮಗಳು: ಸಮತೋಲಿತ ಮತ್ತು ದೃಢವಾದ ಚೌಕಟ್ಟು

· ಈ ಒಪ್ಪಂದವು ಉತ್ಪನ್ನ ನಿರ್ದಿಷ್ಟ ಮೂಲದ ನಿಯಮಗಳ (ಪಿ ಎಸ್‌ ಆರ್) ಸಮತೋಲಿತ ಮತ್ತು ದೃಢವಾದ ಚೌಕಟ್ಟನ್ನು ಒದಗಿಸುತ್ತದೆ. ಇದು ಎರಡೂ ಕಡೆಯ ಪ್ರದೇಶಗಳಲ್ಲಿ ಗಣನೀಯ ಪರಿವರ್ತನೆಯನ್ನು ಖಚಿತಪಡಿಸುತ್ತದೆ, ಜೊತೆಗೆ ಪ್ರಮುಖ ಕ್ಷೇತ್ರಗಳ ಅಸ್ತಿತ್ವದಲ್ಲಿರುವ ಪೂರೈಕೆ ಸರಪಳಿಗಳೊಂದಿಗೆ ಹೊಂದಿಕೆಯಾಗುತ್ತದೆ.

· ಈ ನಿಯಮಗಳು ಅರ್ಹವಲ್ಲದ ಮತ್ತು ಕನಿಷ್ಠ ಕಾರ್ಯಾಚರಣೆಗಳ ಮೇಲಿನ ನಿಬಂಧನೆಗಳ ಜೊತೆಗೆ, ಸಮಯಬದ್ಧವಾದ ದೃಢವಾದ ಪರಿಶೀಲನಾ ಕಾರ್ಯವಿಧಾನವನ್ನು ಒಳಗೊಂಡಿವೆ. ಇದರಲ್ಲಿ ಆದ್ಯತೆಯ ಸುಂಕದ ಚಿಕಿತ್ಸೆಯ ನಿರಾಕರಣೆ ಮತ್ತು ತಾತ್ಕಾಲಿಕ ಅಮಾನತುಗೊಳಿಸುವಿಕೆಯ ನಿಬಂಧನೆಗಳೂ ಸೇರಿವೆ.

· ಒಟ್ಟಾಗಿ, ಈ ಕ್ರಮಗಳು ಮೂಲದ ನಿಯಮಗಳ ಮಾನದಂಡಗಳ ಉಲ್ಲಂಘನೆ, ದುರುಪಯೋಗ ಅಥವಾ ಸುಳ್ಳು ದಾಖಲೆಗಳನ್ನು ಪರಿಣಾಮಕಾರಿಯಾಗಿ ತಡೆಯುತ್ತವೆ, ಒಪ್ಪಂದದ ಪ್ರಯೋಜನಗಳು ಕೇವಲ ನಿಜವಾದ ಭಾರತೀಯ ರಫ್ತುದಾರರಿಗೆ ಮಾತ್ರ ಲಭಿಸುವುದನ್ನು ಖಚಿತಪಡಿಸುತ್ತವೆ.

ವ್ಯಾಪಾರ ಪರಿಹಾರಗಳು: ಭಾರತದ ದೇಶೀಯ ಉದ್ಯಮದ ರಕ್ಷಣೆ

· ಈ ಒಪ್ಪಂದವು ಆಂಟಿ-ಡಂಪಿಂಗ್, ಸಬ್ಸಿಡಿಗಳು ಮತ್ತು ಪ್ರತಿವಿರೋಧಿ ಕ್ರಮಗಳು ಮತ್ತು ಜಾಗತಿಕ ಸುರಕ್ಷತಾ ಕ್ರಮಗಳ ಮೇಲಿನ ಡಬ್ಲ್ಯೂಟಿಒ ಒಪ್ಪಂದಗಳ ಅಡಿಯಲ್ಲಿನ ಎರಡೂ ಕಡೆಯ ಬದ್ಧತೆಗಳನ್ನು ದೃಢಪಡಿಸುತ್ತದೆ.

· ಈ ಎಫ್‌‌ ಟಿ ಎ ದ್ವಿಪಕ್ಷೀಯ ಸುರಕ್ಷತಾ ಕಾರ್ಯವಿಧಾನವನ್ನು ಒದಗಿಸುತ್ತದೆ. ಈ ಒಪ್ಪಂದದ ಅಡಿಯಲ್ಲಿ ಸುಂಕ ಕಡಿತದ ಪರಿಣಾಮವಾಗಿ ಆಮದುಗಳಲ್ಲಿ ಹಠಾತ್ ಏರಿಕೆ ಉಂಟಾಗಿ ಅದು ದೇಶೀಯ ಉದ್ಯಮಕ್ಕೆ ಗಂಭೀರ ಹಾನಿಯನ್ನುಂಟುಮಾಡಿದರೆ ಅಥವಾ ಹಾನಿ ಮಾಡುವ ಭೀತಿಯಿದ್ದರೆ ಈ ಕಾರ್ಯವಿಧಾನವನ್ನು ಬಳಸಬಹುದು.

· ಲಭ್ಯವಿರುವ ಕ್ರಮಗಳು ಸುಂಕದ ಹೆಚ್ಚಿನ ಕಡಿತವನ್ನು ಅಮಾನತುಗೊಳಿಸುವುದು ಅಥವಾ ಸುಂಕದ ದರಗಳನ್ನು ಹೆಚ್ಚಿಸುವುದನ್ನು ಒಳಗೊಂಡಿರುತ್ತವೆ.

ರಫ್ತು ಉತ್ಪಾದನೆ, ಕಸ್ಟಮ್ಸ್ ಕಾರ್ಯವಿಧಾನ ಮತ್ತು ವ್ಯಾಪಾರ ಸೌಲಭ್ಯಕ್ಕಾಗಿ ಬಳಸುವ ಆಮದುಗಳಿಗೆ ತ್ವರಿತ ಕಾರ್ಯವಿಧಾನ:

· ವಹಿವಾಟು ವೆಚ್ಚವನ್ನು ಕಡಿಮೆ ಮಾಡಲು, ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಗಡಿ ಕಾರ್ಯವಿಧಾನಗಳನ್ನು ಆಧುನೀಕರಿಸಲು ಈ ಎಫ್‌ ಟಿ ಎ ಸಮಗ್ರ ವ್ಯಾಪಾರ ಸುಗಮಗೊಳಿಸುವ ಕ್ರಮಗಳನ್ನು ಒಳಗೊಂಡಿದೆ.

· ಸಾಮಾನ್ಯ ಸರಕುಗಳ ಅನುಮತಿ 48 ಗಂಟೆಗಳ ಒಳಗೆ, ಮತ್ತು ಎಕ್ಸ್‌ ಪ್ರೆಸ್ ಸಾಗಣೆಗಳು ಹಾಗೂ ಬೇಗನೆ ಹಾಳಾಗುವ ಸರಕುಗಳಿಗೆ 24 ಗಂಟೆಗಳ ಒಳಗೆ ಅನುಮತಿಯ ಬದ್ಧತೆಯನ್ನು ನೀಡಲಾಗಿದೆ.

· ಒಪ್ಪಂದವು ಅಧಿಕೃತ ಆರ್ಥಿಕ ನಿರ್ವಾಹಕರು, ಯಾಂತ್ರೀಕರಣ ಮತ್ತು ಕಾಗದರಹಿತ ಏಕ-ಗವಾಕ್ಷಿ ಅನುಮತಿ ವ್ಯವಸ್ಥೆಗಳನ್ನು ಒದಗಿಸುತ್ತದೆ.

· ರಫ್ತು ಉತ್ಪಾದನೆಗೆ ಕಚ್ಚಾ ವಸ್ತುವಾಗಿ ಬಳಸುವ ಆಮದುಗಳಿಗಾಗಿ ಫಾಸ್ಟ್ ಟ್ರ್ಯಾಕ್ ಕಾರ್ಯವಿಧಾನಗಳು, ಸುಂಕದ ರಿಯಾಯಿತಿಗಳು ಪರಿಣಾಮಕಾರಿ ಮಾರುಕಟ್ಟೆ ಪ್ರವೇಶವಾಗಿ ಪರಿವರ್ತನೆಯಾಗುವುದನ್ನು ಖಚಿತಪಡಿಸುತ್ತವೆ, ವಿಶೇಷವಾಗಿ ಎಂ ಎಸ್‌ ಎಂ ಇ ಮತ್ತು ಕೃಷಿ ರಫ್ತುದಾರರಿಗೆ ಇದು ಸಹಕಾರಿ.

· ಇದು ವ್ಯಾಪಾರ ಪಾಲುದಾರರ ನಡುವಿನ ವ್ಯಾಪಾರದಲ್ಲಿ ಪಾರದರ್ಶಕತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಲು ಕಸ್ಟಮ್ಸ್ ಕಾರ್ಯವಿಧಾನಗಳನ್ನು ಆಧುನೀಕರಿಸುತ್ತದೆ.

ಸುರಕ್ಷಿತ ಮತ್ತು ತಡೆರಹಿತ ವ್ಯಾಪಾರಕ್ಕಾಗಿ ಸ್ಮಾರ್ಟ್ ನಿಯಂತ್ರಣ: ನೈರ್ಮಲ್ಯ ಮತ್ತು ಫೈಟೋಸಾನಿಟರಿ ಕ್ರಮಗಳು

· ಈ ಒಪ್ಪಂದವು ಮೀಸಲಾದ ನೈರ್ಮಲ್ಯ ಮತ್ತು ಫೈಟೋಸಾನಿಟರಿ (ಎಸ್‌ ಪಿ ಎಸ್) ಮತ್ತು ವ್ಯಾಪಾರಕ್ಕೆ ತಾಂತ್ರಿಕ ಅಡೆತಡೆಗಳ (ಟಿಬಿಟಿ) ಚಾಪ್ಟರ್‌ ಗಳನ್ನು ಒಳಗೊಂಡಿದೆ. ಇವು ಪರಸ್ಪರ ಆಧಾರದ ಮೇಲೆ ಮಾರುಕಟ್ಟೆ ಪ್ರವೇಶದ ಅರ್ಜಿಗಳನ್ನು ತ್ವರಿತಗೊಳಿಸುತ್ತವೆ, ಪ್ರಮಾಣೀಕರಣ ಮತ್ತು ಆಮದು ಪರವಾನಗಿ ಪ್ರಕ್ರಿಯೆಗಳನ್ನು ಸರಳಗೊಳಿಸುತ್ತವೆ ಮತ್ತು ಎಲೆಕ್ಟ್ರಾನಿಕ್ ಎಸ್‌ ಪಿ ಎಸ್ ಪ್ರಮಾಣೀಕರಣವನ್ನು ಒದಗಿಸುತ್ತವೆ.

· ಟಿಬಿಟಿ (ಟಿಬಿಟಿ) ಚಾಪ್ಟರ್ ಅಡಿಯಲ್ಲಿ ವರ್ಧಿತ ನಿಯಂತ್ರಕ ಸಹಕಾರ ಮತ್ತು ಪಾರದರ್ಶಕತೆಯು ಸುಂಕಗಳಾಚೆಗಿನ ಕಾರ್ಯವಿಧಾನದ ಅಡೆತಡೆಗಳನ್ನು ಕಡಿಮೆ ಮಾಡುತ್ತದೆ. ಇದು ಭಾರತೀಯ ರಫ್ತುದಾರರಿಗೆ, ವಿಶೇಷವಾಗಿ ಆಹಾರ, ಕೃಷಿ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ, ನ್ಯೂಜಿಲೆಂಡ್ ಮಾರುಕಟ್ಟೆಗೆ ಅಂದಾಜಿಸಬಹುದಾದ ಮತ್ತು ವೆಚ್ಚ-ಪರಿಣಾಮಕಾರಿ ಪ್ರವೇಶವನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.

· ಈ ನಿಯಮಗಳು ಮಾನವ, ಪ್ರಾಣಿ ಮತ್ತು ಸಸ್ಯ ಜೀವನ ಅಥವಾ ಆರೋಗ್ಯದ ರಕ್ಷಣೆ ಮತ್ತು ಸರಕುಗಳ ವ್ಯಾಪಾರದ ಸುಗಮಗೊಳಿಸುವಿಕೆಯ ನಡುವೆ ಉತ್ತಮ ಸಮತೋಲನವನ್ನು ಖಚಿತಪಡಿಸುತ್ತವೆ.

· ನ್ಯೂಜಿಲೆಂಡ್‌ ನ ಉನ್ನತ ನಿಯಂತ್ರಕ ಮಾನದಂಡಗಳನ್ನು ಗಮನಿಸಿದರೆ, ಈ ಮಾನ್ಯತೆಯು ಜಾಗತಿಕ ಮಾರುಕಟ್ಟೆ ಪ್ರವೇಶವನ್ನು ಗಣನೀಯವಾಗಿ ಹೆಚ್ಚಿಸುತ್ತದೆ, ವಹಿವಾಟು ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಅಗತ್ಯ ಆರೋಗ್ಯ ಮತ್ತು ಸುರಕ್ಷತಾ ರಕ್ಷಣೆಗಳನ್ನು ಖಾತ್ರಿಪಡಿಸುವ ಜೊತೆಗೆ ಸುಗಮ ಮಾರುಕಟ್ಟೆ ಪ್ರವೇಶವನ್ನು ಸುಲಭಗೊಳಿಸುತ್ತದೆ.

ಆರ್ಥಿಕ ಸಹಕಾರ ಮತ್ತು ತಾಂತ್ರಿಕ ಪಾಲುದಾರಿಕೆಯಲ್ಲಿ ಮುಂಚೂಣಿ

· ಈ ಮುಕ್ತ ವ್ಯಾಪಾರ ಒಪ್ಪಂದವು ಉಭಯ ದೇಶಗಳಿಗೆ ಪರಸ್ಪರ ಆಸಕ್ತಿಯ ವಿವಿಧ ಕೃಷಿ ಮತ್ತು ಕೃಷಿಯೇತರ ವಿಷಯಾಧಾರಿತ ಕ್ಷೇತ್ರಗಳಲ್ಲಿ ಸಹಯೋಗದ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶಗಳನ್ನು ನೀಡುತ್ತದೆ.

· ಸಹಕಾರ ಚಟುವಟಿಕೆಗಳು ಉತ್ಪಾದಕತೆಯನ್ನು ಹೆಚ್ಚಿಸಲು ಸಾಮರ್ಥ್ಯ ವೃದ್ಧಿ, ತಾಂತ್ರಿಕ ನೆರವು ಮತ್ತು ಇತರ ಉಪಕ್ರಮಗಳನ್ನು ಒಳಗೊಂಡಿವೆ. ಇದು ರೈತರ ಆದಾಯ ಹೆಚ್ಚಳ, ಕೌಶಲ್ಯ ಅಭಿವೃದ್ಧಿ ಮತ್ತು ವ್ಯಾಪಾರವನ್ನು ಮೀರಿ ಸಂಶೋಧನೆ ಮತ್ತು ಅಭಿವೃದ್ಧಿ, ತರಬೇತಿ ಮತ್ತು ನಾವೀನ್ಯತೆಗಳಲ್ಲಿ ಸಹಕಾರದ ವೈವಿಧ್ಯತೆಯನ್ನು ಬೆಂಬಲಿಸುತ್ತದೆ.

· ಕೃಷಿಯ ಅಡಿಯಲ್ಲಿ ಸಹಕಾರದ ಕ್ಷೇತ್ರಗಳು ತೋಟಗಾರಿಕೆ, ಜೇನುತುಪ್ಪ, ಅರಣ್ಯ, ಜಾನುವಾರು, ಮೀನುಗಾರಿಕೆ, ಜೇನು ಸಾಕಣೆ ಮತ್ತು ವೈನ್ ಕ್ಷೇತ್ರವನ್ನು ಒಳಗೊಂಡಿವೆ.

· ಕೃಷಿಯೇತರ ವಲಯಗಳಲ್ಲಿ, ಸಾಂಸ್ಕೃತಿಕ ವಿನಿಮಯ ಮತ್ತು ವಲಯವಾರು ನಾವೀನ್ಯತೆಯನ್ನು ಬಲಪಡಿಸುವ ಉದ್ದೇಶದಿಂದ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳು (ಆಯುಷ್), ಸಾಂಪ್ರದಾಯಿಕ ಜ್ಞಾನದ ಸಂರಕ್ಷಣೆ, ಆಡಿಯೋ-ವಿಶುವಲ್ ಮತ್ತು ಸೃಜನಶೀಲ ಉದ್ಯಮಗಳು, ಕ್ರೀಡೆ ಮತ್ತು ಪ್ರವಾಸೋದ್ಯಮಕ್ಕೆ ಸಹಕಾರವು ವಿಸ್ತರಿಸುತ್ತದೆ.

ಸಾಂಸ್ಕೃತಿಕ ವಿನಿಮಯ, ಸಾಂಪ್ರದಾಯಿಕ ಜ್ಞಾನ ಮತ್ತು ಜನರ ನಡುವಿನ ಸಹಕಾರ: ಎಫ್‌ ಟಿ ಎ ಗಳಲ್ಲಿ ಇದೇ ಮೊದಲು

· ಸಂಸ್ಕೃತಿ, ವ್ಯಾಪಾರ, ಸಾಂಪ್ರದಾಯಿಕ ಜ್ಞಾನ ಮತ್ತು ಆರ್ಥಿಕ ಸಹಕಾರದ ಕುರಿತಾದ ಮೀಸಲಾದ ಅಧ್ಯಾಯವು ಉಭಯ ದೇಶಗಳ ಜನರ ಆರ್ಥಿಕ ಮತ್ತು ಸಾಂಸ್ಕೃತಿಕ ಆಕಾಂಕ್ಷೆಗಳನ್ನು ಸಕ್ರಿಯಗೊಳಿಸಲು ಮತ್ತು ಮುನ್ನಡೆಸಲು ಪರಸ್ಪರ ಸಹಕಾರವನ್ನು ಉತ್ತೇಜಿಸುತ್ತದೆ.

· ತನ್ನ ವ್ಯಾಪಾರ ಒಪ್ಪಂದಗಳ ಇತಿಹಾಸದಲ್ಲಿ ಮೊದಲ ಬಾರಿಗೆ, ನ್ಯೂಜಿಲೆಂಡ್ ಆರೋಗ್ಯ ಮತ್ತು ಸಾಂಪ್ರದಾಯಿಕ ಔಷಧ ಸೇವೆಗಳ ಪ್ರವೇಶಕ್ಕೆ ಮೀಸಲಾದ ಅವಕಾಶವನ್ನು ನೀಡಿದೆ. ಈ ಐತಿಹಾಸಿಕ ನಿಬಂಧನೆಯು ಭಾರತದ ಆಯುಷ್ ಪದ್ಧತಿಗಳಿಗೆ ಜಾಗತಿಕ ಮನ್ನಣೆಯನ್ನು ಉತ್ತೇಜಿಸುತ್ತದೆ, ವೈದ್ಯಕೀಯ ಪ್ರವಾಸೋದ್ಯಮವನ್ನು ಬೆಂಬಲಿಸುತ್ತದೆ, ಸ್ವಾಸ್ಥ್ಯ ಸೇವೆಗಳಲ್ಲಿ ಸಹಯೋಗವನ್ನು ಪ್ರೋತ್ಸಾಹಿಸುತ್ತದೆ ಮತ್ತು ಆರೋಗ್ಯ, ಸ್ವಾಸ್ಥ್ಯ ಹಾಗೂ ಸಾಂಪ್ರದಾಯಿಕ ವೈದ್ಯಕೀಯ ಸೇವೆಗಳ ಜಾಗತಿಕ ಕೇಂದ್ರವಾಗಿ ಭಾರತದ ಸ್ಥಾನವನ್ನು ಬಲಪಡಿಸುತ್ತದೆ.

· ಇದು ಮಾವೊರಿ (Maori) ಆರೋಗ್ಯ ಪದ್ಧತಿಗಳ ಜೊತೆಗೆ ಭಾರತದ ಆಯುಷ್ ವಿಭಾಗಗಳಿಗೆ (ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸೋವಾ-ರಿಗ್ಪಾ, ಸಿದ್ಧ ಮತ್ತು ಹೋಮಿಯೋಪತಿ) ಪ್ರಮುಖ ಸ್ಥಾನವನ್ನು ನೀಡುತ್ತದೆ.

· ಇದು ಆಡಿಯೋ-ವಿಶುವಲ್ ಮತ್ತು ಸೃಜನಶೀಲ ಉದ್ಯಮಗಳು, ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳ ಸಂರಕ್ಷಣೆ, ಕ್ರೀಡೆ ಮತ್ತು ಪ್ರವಾಸೋದ್ಯಮದಲ್ಲಿ ಸಹಯೋಗವನ್ನು ಉತ್ತೇಜಿಸುತ್ತದೆ, ಭಾರತ-ನ್ಯೂಜಿಲೆಂಡ್ ಸಂಬಂಧದ ಸಾಂಸ್ಕೃತಿಕ ಮತ್ತು ಮಾನವ ಆಯಾಮಗಳನ್ನು ಬಲಪಡಿಸುತ್ತದೆ.

· ಇದು ಸೃಜನಶೀಲ ಉದ್ಯಮಗಳು, ಸಾಂಸ್ಕೃತಿಕ ವಿನಿಮಯ ಮತ್ತು ಜನಕೇಂದ್ರಿತ ಬೆಳವಣಿಗೆಗೆ ಹೊಸ ಮಾರ್ಗಗಳನ್ನು ಸೃಷ್ಟಿಸುತ್ತದೆ.

ಪರಸ್ಪರ ಮಾನ್ಯತೆ ವ್ಯವಸ್ಥೆಯ ಮೂಲಕ ಸಾವಯವ ಉತ್ಪನ್ನಗಳ ವ್ಯಾಪಾರ: ಇಂಡೋ ಪೆಸಿಫಿಕ್‌ಗೆ ಒಂದು ಪ್ರವೇಶದ್ವಾರ

· ಈ ಒಪ್ಪಂದದಲ್ಲಿ ಒಂದು ಆರಂಭಿಕ ಹೆಜ್ಜೆಯಾಗಿ, ಮೂರನೇ ದೇಶದ (ಆಸ್ಟ್ರೇಲಿಯಾ) ಮಾನದಂಡದ ಅಂಗೀಕಾರದ ಆಧಾರದ ಮೇಲೆ ಪರಸ್ಪರ ಗುರುತಿಸುವಿಕೆ ವ್ಯವಸ್ಥೆ (ಎಂ ಆರ್‌ ಎ) ಯನ್ನು ಒದಗಿಸಲಾಗುತ್ತದೆ.

· ಭಾರತವು 2024-25ರ ಹಣಕಾಸು ವರ್ಷದಲ್ಲಿ 80 ಕ್ಕೂ ಹೆಚ್ಚು ಸಾವಯವ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ. ಇದೇ ಅವಧಿಯಲ್ಲಿ, ಭಾರತದಿಂದ ನ್ಯೂಜಿಲೆಂಡ್‌ ಗೆ ಒಟ್ಟು ಸಾವಯವ ರಫ್ತು 2,401.53 ಮೆಟ್ರಿಕ್ ಟನ್ ಆಗಿದ್ದು, ಇದರ ಮೌಲ್ಯ 3.18 ಮಿಲಿಯನ್ ಅಮೆರಿಕನ್ ಡಾಲರ್ ಆಗಿದೆ. ಪರಸ್ಪರ ಮಾನ್ಯತೆ ಒಪ್ಪಂದದ (ಎಂ ಆರ್‌ ಎ) ನಂತರ ಹೆಚ್ಚಿನ ಉತ್ತೇಜನ ಪಡೆಯುವ ನಿರೀಕ್ಷೆಯಿರುವ ಸಾವಯವ ಉತ್ಪನ್ನಗಳಲ್ಲಿ ಬಾಸುಮತಿ ಅಕ್ಕಿ, ಅಗಸೆ ಬೀಜಗಳು, ಅರೇಬಿಕಾ ಚೆರ್ರಿ ಎಬಿ, ಇಸಬ್ಗೋಲ್, ಸೋಯಾಬೀನ್ ಆಯಿಲ್ ಕೇಕ್, ಸಾವಯವ ಕಪ್ಪು ಚಹಾ ಇತ್ಯಾದಿ ಸೇರಿವೆ.

ದ್ವಿಪಕ್ಷೀಯ ವ್ಯಾಪಾರ: ಬಲವಾದ ವೇಗ, ಅಪಾರ ಸಾಮರ್ಥ್ಯ

· ಸರಕು ಮತ್ತು ಸೇವೆಗಳ ಒಟ್ಟು ವ್ಯಾಪಾರವು 2024 ರಲ್ಲಿ 2.4 ಬಿಲಿಯನ್ ಅಮೆರಿಕನ್‌ ಡಾಲರ್ ತಲುಪಿದೆ. ಭಾರತ-ನ್ಯೂಜಿಲೆಂಡ್ ದ್ವಿಪಕ್ಷೀಯ ವ್ಯಾಪಾರವು ಇತ್ತೀಚಿನ ವರ್ಷಗಳಲ್ಲಿ ಬಲವಾದ ಬೆಳವಣಿಗೆಯನ್ನು ತೋರಿಸಿದೆ, 2024-25ರ ಹಣಕಾಸು ವರ್ಷದಲ್ಲಿ ದ್ವಿಪಕ್ಷೀಯ ಸರಕು ವ್ಯಾಪಾರವು 1.3 ಬಿಲಿಯನ್ ಅಮೆರಿಕನ್ ಡಾಲರ್ ಆಗಿದ್ದು, ಹಿಂದಿನ ವರ್ಷದ ವ್ಯಾಪಾರಕ್ಕಿಂತ ಶೇ. 49 ಬೆಳವಣಿಗೆಯನ್ನು ದಾಖಲಿಸಿದೆ.

· ಈಗ ಎಫ್‌ ಟಿ ಎ ಗೆ ಸಹಿ ಹಾಕಿರುವುದರಿಂದ, ಸುಂಕಗಳ ರದ್ದತಿ, ಸೇವೆಗಳ ಪ್ರವೇಶದ ಸುಧಾರಣೆ, 20 ಬಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆಯ ಖಾತರಿ ಮತ್ತು ದೃಢವಾದ ಸಾಂಸ್ಥಿಕ ಚೌಕಟ್ಟುಗಳ ಸ್ಥಾಪನೆಯೊಂದಿಗೆ, ಭಾರತ-ನ್ಯೂಜಿಲೆಂಡ್ ಎಫ್‌‌ ಟಿ ಎ ಮುಂಬರುವ ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರವನ್ನು ಗಮನಾರ್ಹವಾಗಿ ಹೆಚ್ಚಿಸುವ, ಉದ್ಯೋಗಾವಕಾಶಗಳನ್ನು ಸೃಷ್ಟಿಸುವ, ರಫ್ತುಗಳನ್ನು ವಿಸ್ತರಿಸುವ ಮತ್ತು ಉಭಯ ದೇಶಗಳ ನಡುವೆ ಆಳವಾದ ಹಾಗೂ ಹೆಚ್ಚು ಸ್ಥಿತಿಸ್ಥಾಪಕ ಆರ್ಥಿಕ ಪಾಲುದಾರಿಕೆಯನ್ನು ಬಲಪಡಿಸುವ ನಿರೀಕ್ಷೆಯಿದೆ.

ಕೃಷಿ, ಮೀನುಗಾರಿಕೆಯಿಂದ ಕಾರ್ಖಾನೆಗಳವರೆಗೆ: ಪ್ರಮುಖ ವಲಯಗಳು ಮತ್ತು ರಾಜ್ಯಗಳಿಗೆ ಶಕ್ತಿ ನೀಡುವ ಒಪ್ಪಂದ

ಶೂನ್ಯ-ಸುಂಕದ ಮಾರುಕಟ್ಟೆ ಪ್ರವೇಶವು ಭಾರತದ ಪ್ರಮುಖ ರಫ್ತು ವಲಯಗಳಿಗೆ ಗಮನಾರ್ಹ ಉತ್ತೇಜನ ನೀಡಲಿದೆ. ರಫ್ತಿನ ಮೂಲಾಧಾರವಾಗಿರುವ ಜವಳಿ ಮತ್ತು ಉಡುಪು ವಲಯವು ಸಿದ್ಧ ಉಡುಪುಗಳು, ಗೃಹಾಲಂಕಾರಗಳು, ನಾರುಗಳು ಮತ್ತು ಕೈಮಗ್ಗ ಉತ್ಪನ್ನಗಳಲ್ಲಿ ಹೆಚ್ಚಿನ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯನ್ನು ಕಾಣಲಿದೆ. ಹಣ್ಣುಗಳು, ಸಾಂಬಾರ ಪದಾರ್ಥಗಳು, ಧಾನ್ಯಗಳು, ಕಾಫಿ ಮತ್ತು ಕೊಕೊದಂತಹ ಉತ್ಪನ್ನಗಳ ಮೇಲಿನ ಸುಂಕ ರದ್ದತಿಯಿಂದ ಕೃಷಿ ಮತ್ತು ಸಂಸ್ಕರಿಸಿದ ಆಹಾರಗಳು ಹೆಚ್ಚು ಸ್ಪರ್ಧಾತ್ಮಕವಾಗುತ್ತವೆ. ಗರಿಷ್ಠ ಸುಂಕಗಳ ತೆಗೆದುಹಾಕುವಿಕೆಯಿಂದ ಚರ್ಮ ಮತ್ತು ಪಾದರಕ್ಷೆ ವಲಯವು ಲಾಭ ಪಡೆಯಲಿದ್ದು, ಭಾರತದ ಜಾಗತಿಕ ಸ್ಥಾನವನ್ನು ಬಲಪಡಿಸುತ್ತದೆ. ಅದೇ ಸಮಯದಲ್ಲಿ, ಯಂತ್ರೋಪಕರಣಗಳು, ಆಟೋಮೋಟಿವ್, ಎಲೆಕ್ಟ್ರಾನಿಕ್ಸ್, ರಾಸಾಯನಿಕಗಳು, ಪ್ಲಾಸ್ಟಿಕ್ ಮತ್ತು ರಬ್ಬರ್ ಸೇರಿದಂತೆ ಎಂಜಿನಿಯರಿಂಗ್, ಉತ್ಪಾದನೆ ಮತ್ತು ಕೈಗಾರಿಕಾ ಕ್ಷೇತ್ರಗಳು ಸುಂಕ ಕಡಿತದಿಂದ ಪ್ರಯೋಜನ ಪಡೆಯಲಿವೆ, ಇದು ಭಾರತದ ವೈವಿಧ್ಯಮಯ ರಫ್ತು ನೆಲೆಯನ್ನು ಮತ್ತು ಜಾಗತಿಕ ಮೌಲ್ಯ ಸರಪಳಿಗಳಲ್ಲಿ ಆಳವಾದ ಏಕೀಕರಣವನ್ನು ಬಲಪಡಿಸುತ್ತದೆ.

ರಾಜ್ಯ ಮಟ್ಟದಲ್ಲಿ, ಭಾರತ-ನ್ಯೂಜಿಲೆಂಡ್ ಎಫ್‌ ಟಿ ಎ ವಿಶಾಲ-ಆಧಾರಿತ ಲಾಭಗಳನ್ನು ನೀಡಲು ಸಜ್ಜಾಗಿದೆ, ಇದು ಭಾರತದ ರಫ್ತು ಚಿತ್ರಣದ ವೈವಿಧ್ಯಮಯ ಮತ್ತು ವಿಶೇಷ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ. ಪ್ರಮುಖ ರಫ್ತು ಮಾಡುವ ರಾಜ್ಯಗಳಾದ—ಗುಜರಾತಿನ ರಾಸಾಯನಿಕಗಳು ಮತ್ತು ರತ್ನಗಳು, ಮಹಾರಾಷ್ಟ್ರದ ಔಷಧಗಳು ಮತ್ತು ಆಟೋ ಬಿಡಿಭಾಗಗಳು, ತಮಿಳುನಾಡಿನ ಜವಳಿ, ಚರ್ಮ ಮತ್ತು ಆಟೋ ಬಿಡಿಭಾಗಗಳು, ಉತ್ತರ ಪ್ರದೇಶದ ಚರ್ಮ, ಕಾರ್ಪೆಟ್ ಮತ್ತು ಕರಕುಶಲ ವಸ್ತುಗಳು, ಪಂಜಾಬಿನ ಕೃಷಿ ಉತ್ಪನ್ನಗಳು, ಕರ್ನಾಟಕದ ಫಾರ್ಮಾ ಮತ್ತು ಎಲೆಕ್ಟ್ರಾನಿಕ್ಸ್, ಮತ್ತು ಪಶ್ಚಿಮ ಬಂಗಾಳದ ಚಹಾ ಮತ್ತು ಎಂಜಿನಿಯರಿಂಗ್ ಸರಕುಗಳು—ಸುಧಾರಿತ ಬೆಲೆ ಸ್ಪರ್ಧಾತ್ಮಕತೆಯಿಂದ ಲಾಭ ಪಡೆಯಲಿವೆ. ಆಂಧ್ರಪ್ರದೇಶ ಮತ್ತು ಕೇರಳದಂತಹ ಕರಾವಳಿ ರಾಜ್ಯಗಳು ಸಮುದ್ರ ಉತ್ಪನ್ನಗಳ ರಫ್ತಿನಿಂದ ಹೆಚ್ಚಿನ ಮೌಲ್ಯವನ್ನು ಪಡೆಯುವ ಸಾಧ್ಯತೆಯಿದೆ, ಆದರೆ ಈಶಾನ್ಯ ರಾಜ್ಯಗಳು ಚಹಾ, ಸಾಂಬಾರ ಪದಾರ್ಥಗಳು, ಬಿದಿರು ಮತ್ತು ಸಾವಯವ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಪ್ರವೇಶವನ್ನು ಪಡೆಯಬಹುದು. ಒಟ್ಟಾರೆಯಾಗಿ, ಈ ಒಪ್ಪಂದವು ಭಾರತದ ರಫ್ತುಗಳನ್ನು ಮತ್ತಷ್ಟು ವೈವಿಧ್ಯಗೊಳಿಸುತ್ತದೆ ಮತ್ತು ವಿಸ್ತರಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

Link for Sector and State-Wise Gains

 

*****


(ಪ್ರಕಟಣೆ ಐ.ಡಿ.: 2256028) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Gujarati