ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಕಳೆದ ದಶಕದಲ್ಲಿ ಭಾರತದ ಟೆಲಿಕಾಂ ವಲಯದ ಬೆಳವಣಿಗೆಗೆ ಸರ್ಕಾರ-ಉದ್ಯಮ ನಡುವಣ ಸಹಯೋಗವನ್ನು ಶ್ಲಾಘಿಸಿದ ಸಂವಹನ ಖಾತೆ ಸಹಾಯಕ ಸಚಿವರಾದ ಡಾ. ಪೆಮ್ಮಸಾನಿ ಚಂದ್ರ ಶೇಖರ್
2025ನೇ ಹಣಕಾಸು ವರ್ಷದಲ್ಲಿ ದೂರಸಂಪರ್ಕ ವಲಯದ ಆದಾಯ ₹3.72 ಲಕ್ಷ ಕೋಟಿ ತಲುಪಿದೆ; ದೇಶೀಯ ಉತ್ಪಾದನೆಯನ್ನು ಬಲಪಡಿಸುವಲ್ಲಿ ಎಫ್‌ಡಿಐ ಬೆಳವಣಿಗೆ ಮತ್ತು ಪಿಎಲ್‌ಐ ಯಶಸ್ಸು ಕಾರಣವೆಂದು ಸಹಾಯಕ ಸಚಿವರ ಹೇಳಿಕೆ
ವಿಶ್ವದ ಅತಿದೊಡ್ಡ ಗ್ರಾಮೀಣ ಬ್ರಾಡ್‌ಬ್ಯಾಂಡ್ ಉಪಕ್ರಮದಲ್ಲಿ 2.6 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ಗಳನ್ನು ಜೋಡಿಸಲಾಗುವುದು: ಡಾ. ಪೆಮ್ಮಸಾನಿ
‘ಚಕ್ಷು’ ದಿಂದ ಸಾಂಸ್ಥಿಕ ಬುದ್ಧಿಮತ್ತೆಯವರೆಗೆ: ಸ್ಪ್ಯಾಮ್ ಮತ್ತು ಆರ್ಥಿಕ ವಂಚನೆಯಿಂದ ನಾಗರಿಕರನ್ನು ರಕ್ಷಿಸಲು ಬಹು-ಹಂತದ ಕಾರ್ಯತಂತ್ರವನ್ನು ವಿವರಿಸಿದ ಸಹಾಯಕ ಸಚಿವರು
ಭಾರತದ ಡಿಜಿಟಲ್ ರೂಪಾಂತರ: 6ಜಿ, ಎ.ಐ. ಮತ್ತು ಕ್ವಾಂಟಮ್ ತಂತ್ರಜ್ಞಾನಗಳಿಂದ ನಡೆಸಲ್ಪಡುವ ಭವಿಷ್ಯವನ್ನು ವಿವರಿಸಿದ ಸಹಾಯಕ ಸಚಿವರು
ಭಾರತದ 6ಜಿ ದೃಷ್ಟಿಕೋನವನ್ನು ಮುನ್ನಡೆಸಲು ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ಮಾನದಂಡಗಳನ್ನು ಅಳವಡಿಸಿಕೊಳ್ಳಲು ಟೆಲಿಕಾಂ ಆಪರೇಟರ್ ಗಳಿಗೆ ಸಹಾಯಕ ಸಚಿವ ಡಾ. ಪೆಮ್ಮಸಾನಿ ಆಗ್ರಹ
ಪ್ರಕಟಣಾ ದಿನಾಂಕ:
24 APR 2026 1:33PM by PIB Bengaluru
ಸಂವಹನ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಸಚಿವರಾದ ಡಾ. ಪೆಮ್ಮಸಾನಿ ಚಂದ್ರ ಶೇಖರ್ ಅವರು ಇಂದು ದಿಲ್ಲಿಯಲ್ಲಿ COAI DIGICOM SUMMIT 2026 ರ ಎರಡನೇ ಆವೃತ್ತಿಯನ್ನು ಉದ್ಘಾಟಿಸಿದರು. ಈ ಶೃಂಗಸಭೆಯು "ಭಾರತದ ತಂತ್ರಜ್ಞಾನ ದಶಕ: ಡಿಜಿಟಲ್ ಭವಿಷ್ಯವನ್ನು ವೇಗಗೊಳಿಸುವುದು ಮತ್ತು ರೂಪಿಸುವುದು" ಎಂಬ ವಿಷಯ ಶೀರ್ಷಿಕೆಯನ್ನು ಹೊಂದಿದೆ. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತ ಬಹಳ ದೂರ ಸಾಗಿದೆ ಮತ್ತು ಟೆಲಿಕಾಂ ವಲಯದಲ್ಲಿನ ಬದಲಾವಣೆಗಳು ಪರಿವರ್ತನಾತ್ಮಕವಾಗಿವೆ ಎಂದು ಹೇಳಿದರು. ತಂತ್ರಜ್ಞಾನವು ಸ್ಥಗಿತಗೊಂಡಿಲ್ಲ ಮತ್ತು 6ಜಿ, ಕೃತಕ ಬುದ್ಧಿಮತ್ತೆ ಹಾಗು ಕ್ವಾಂಟಮ್ ಮುಂದಿನ ಅಲೆಯನ್ನು ಪ್ರತಿನಿಧಿಸುತ್ತವೆ ಎಂಬುದರತ್ತ ಅವರು ಗಮನ ಸೆಳೆದರು ಇದು ರೋಮಾಂಚಕಾರಿ ಮತ್ತು ಸವಾಲಿನದ್ದಾಗಿದೆ ಎಂದ ಅವರು ಈ ನಿಟ್ಟಿನಲ್ಲಿ ಸಹಯೋಗದ ಅಗತ್ಯವನ್ನು ಒತ್ತಿ ಹೇಳಿದ ಅವರು, ಸರ್ಕಾರ ಮತ್ತು ಉದ್ಯಮ ಎರಡೂ ಬಲವಾದ ಟೆಲಿಕಾಂ ವಲಯವನ್ನು ನಿರ್ಮಿಸುತ್ತಿವೆ ಎಂದು ಹೇಳಿದರು.

ಸಂವಹನ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಸಚಿವರಾದ ಡಾ. ಪೆಮ್ಮಸಾನಿ ಚಂದ್ರಶೇಖರ್ ಅವರು COAI DIGICOM ಶೃಂಗಸಭೆ 2026 ಅನ್ನು ಉದ್ಘಾಟಿಸಿ ಭಾಷಣ ಮಾಡಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಸರ್ಕಾರವು ದೂರಸಂಪರ್ಕ ನೀತಿಯ ಬಹುತೇಕ ಪ್ರತಿಯೊಂದು ಪ್ರಮುಖ ಅಂಶಗಳನ್ನು ಮರುವಿನ್ಯಾಸಗೊಳಿಸಿದೆ ಎಂದು ಡಾ. ಪೆಮ್ಮಸಾನಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದರು. 2023ರ ದೂರಸಂಪರ್ಕ ಕಾಯ್ದೆಯು 140 ವರ್ಷಗಳಲ್ಲಿ ಭಾರತದ ದೂರಸಂಪರ್ಕ ಕಾನೂನಿನ ಮೊದಲ ಸಮಗ್ರ ಪುನಃ ರಚನೆಯಾಗಿದೆ, ಇದು ಸ್ಪಷ್ಟ ಅಧಿಕಾರ ಚೌಕಟ್ಟುಗಳು, ಬಲವಾದ ಗ್ರಾಹಕ ರಕ್ಷಣೆ ಮತ್ತು ಉದಯೋನ್ಮುಖ/ಹೊಸ ತಂತ್ರಜ್ಞಾನಗಳಿಗೆ ಪ್ರಸ್ತಾವನೆ/ನಿಬಂಧನೆಗಳನ್ನು ಒದಗಿಸುತ್ತದೆ. 2021ರ ಸುಧಾರಣಾ ಪ್ಯಾಕೇಜ್ ನ್ನು ತರ್ಕಬದ್ಧ ಎ.ಜಿ.ಆರ್., ಹಿಂದಿನ ಬಾಕಿಗಳ ವಸೂಲಿಗೆ ಮೇಲೆ ನಾಲ್ಕು ವರ್ಷಗಳ ನಿಷೇಧ, ಬ್ಯಾಂಕ್ ಗ್ಯಾರಂಟಿಗಳನ್ನು ತೆಗೆದುಹಾಕುವುದು ಮತ್ತು ಇಕ್ವಿಟಿ ಪರಿವರ್ತನೆಗೆ ಮಾರ್ಗವನ್ನು ನೀಡುವ ಮೂಲಕ ಹಣಕಾಸಿಗೆ ಸಂಬಂಧಿಸಿ ಭವಿಷ್ಯವನ್ನು ಪುನಃಸ್ಥಾಪಿಸಿತು. ಗತಿ ಶಕ್ತಿ ಸಂಚಾರ್ ಪೋರ್ಟಲ್ ಮೂಲಕ ಮೂಲಸೌಕರ್ಯ ಸುಧಾರಣೆಗಳು ಶುಲ್ಕಗಳನ್ನು ತರ್ಕಬದ್ಧಗೊಳಿಸಿವೆ ಮತ್ತು ಸುವ್ಯವಸ್ಥಿತಗೊಳಿಸಿವೆ, ಸಮಯಾವಧಿಯನ್ನು ಗಮನಾರ್ಹವಾಗಿ ಕಡಿಮೆ ಮಾಡಿವೆ. ರಾಷ್ಟ್ರೀಯ ಫ್ರೀಕ್ವೆನ್ಸಿ (ತರಂಗಾಂತರ) ಹಂಚಿಕೆ ಯೋಜನೆ 2025 ಮತ್ತು ಊಹಿಸಬಹುದಾದ ಹರಾಜು ಸಮಯ ಮಿತಿಯ ಮೂಲಕ ತರಂಗಾಂತರ ತರ್ಕಬದ್ಧಗೊಳಿಸುವಿಕೆಯನ್ನು ಕೈಗೊಳ್ಳಲಾಗಿದೆ.
ಭಾರತದ ಭಾರತ್‌ನೆಟ್ ಜಗತ್ತಿನಲ್ಲೇ ಅತಿ ದೊಡ್ಡ ಗ್ರಾಮೀಣ ಬ್ರಾಡ್‌ಬ್ಯಾಂಡ್ ಕಾರ್ಯಕ್ರಮವಾಗಿದ್ದು, 2.6 ಲಕ್ಷಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ಗಳನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದೆ, ದೀರ್ಘಾವಧಿಯ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಇದಕ್ಕಾಗಿ ರೂಪಿಸಲಾಗಿದೆ ಎಂಬುದನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಸಂಚಾರ್ ಸಾಥಿ, ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್, ಚಕ್ಷು ಮತ್ತು ಎ.ಎಸ್.ಟಿ.ಆರ್. ಗಳನ್ನು ಒಳಗೊಂಡಿರುವ ನಾಗರಿಕ ರಕ್ಷಣಾ ವಾಸ್ತುಶಿಲ್ಪವನ್ನು ಸಹ ಬೃಹತ್ ಪ್ರಮಾಣದಲ್ಲಿ ಸ್ಥಾಪಿಸಲಾಗಿದೆ, ಇದು ದೂರಸಂಪರ್ಕ ವಲಯವು ತನ್ನ ಇತಿಹಾಸದಲ್ಲಿ ಪಡೆದ ಅತ್ಯಂತ ಸಮಗ್ರ ನೀತಿ ಬೆಂಬಲ ವ್ಯವಸ್ಥೆ/ವಾಸ್ತುಶಿಲ್ಪವಾಗಿದೆ ಎಂದು ತಿಳಿಸಿದರು.
ಉದ್ಯಮದ ಕೊಡುಗೆಗಳನ್ನು ಗುರುತಿಸಿದ ಸಹಾಯಕ ಸಚಿವರು, 5ಜಿ ಜಾಲದ ಬಿಡುಗಡೆಯನ್ನು ಸುಮಾರು 22 ತಿಂಗಳುಗಳಲ್ಲಿ ಪೂರ್ಣಗೊಳಿಸಲಾಗಿದ್ದು, 5.1 ಲಕ್ಷಕ್ಕೂ ಹೆಚ್ಚು ಬೇಸ್ ಸ್ಟೇಷನ್‌ಗಳು ಮತ್ತು 400 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರನ್ನು ಹೊಂದಿದೆ ಎಂದು ಹೇಳಿದರು. ಭಾರತವು 1.22 ಶತಕೋಟಿಗೂ ಹೆಚ್ಚು ಚಂದಾದಾರರ ನೆಲೆಯನ್ನು ಹೊಂದಿದ್ದು, ಇದು ಜಾಗತಿಕವಾಗಿ ಅತ್ಯಂತ ಕಡಿಮೆ ದರಗಳಲ್ಲಿ ಸಂಪರ್ಕವನ್ನು ಒದಗಿಸುತ್ತಿದೆ ಮತ್ತು ಪ್ರತಿ-ಬಳಕೆದಾರರು ಇಲ್ಲಿ ಅತಿ ಹೆಚ್ಚು ಡೇಟಾ ಬಳಸುತ್ತಿದ್ದಾರೆ. ವಲಯದ ಒಟ್ಟು ಆದಾಯವು ಹಣಕಾಸು ವರ್ಷ 25 ರಲ್ಲಿ 10.7% ರಷ್ಟು ಏರಿಕೆಯಾಗಿ ₹3.72 ಲಕ್ಷ ಕೋಟಿಗೆ ತಲುಪಿದೆ, ಜೊತೆಗೆ ಜೂನ್ 2025 ರವರೆಗೆ ₹2.4 ಲಕ್ಷ ಕೋಟಿಗಿಂತ ಹೆಚ್ಚಿನ ವಿದೇಶಿ ನೇರ ಹೂಡಿಕೆ (FDI) ಹರಿದು ಬಂದಿದೆ ಎಂದು ವಿವರಿಸಿದರು.

ಡಾ. ಪೆಮ್ಮಸಾನಿ ಚಂದ್ರಶೇಖರ್ ಅವರು COAI DIGICOM ಶೃಂಗಸಭೆ 2026 ರಲ್ಲಿ TRAI, COAI ನ ಗಣ್ಯರು, ಉದ್ಯಮ ಪ್ರತಿನಿಧಿಗಳು ಮತ್ತು ಭಾಗವಹಿಸಿದ ಇತರರೊಂದಿಗೆ ಸಂವಾದ ನಡೆಸಿದರು
ಉತ್ಪಾದನೆಯ ಕುರಿತು ಮಾತನಾಡಿದ ಸಚಿವರು, ಟೆಲಿಕಾಂ ಮತ್ತು ನೆಟ್‌ವರ್ಕಿಂಗ್ ಉತ್ಪನ್ನಗಳಿಗೆ ಪಿಎಲ್ಐ ಯೋಜನೆಯಡಿ ₹12,195 ಕೋಟಿ ಯೋಜನಾ ಗಾತ್ರ, 42 ಕಂಪನಿಗಳಿಗೆ ಅನುಮೋದನೆ, ₹65,000 ಕೋಟಿಗೂ ಹೆಚ್ಚಿನ ಸಂಚಿತ ಮಾರಾಟ ಮತ್ತು ₹12,000 ಕೋಟಿಗೂ ಹೆಚ್ಚಿನ ರಫ್ತುಗಳ ಪ್ರಗತಿಯನ್ನು ಉಲ್ಲೇಖಿಸಿದರು. ಟೆಲಿಕಾಂ ತಂತ್ರಜ್ಞಾನ ಅಭಿವೃದ್ಧಿ ನಿಧಿ ₹542 ಕೋಟಿ ಮೌಲ್ಯದ ಯೋಜನೆಗಳೊಂದಿಗೆ ದೇಶೀಯ ಸಂಶೋಧನೆ ಮತ್ತು ಅಭಿವೃದ್ಧಿಗೆ ಬೆಂಬಲ ನೀಡಿದೆ ಎಂದರು.
ಸ್ಪ್ಯಾಮ್ ಮತ್ತು ಡಿಜಿಟಲ್ ವಂಚನೆಯನ್ನು ಪರಿಹರಿಸುವ ನಿಟ್ಟಿನಲ್ಲಿ, ಸಂಚಾರ್ ಸಾಥಿ ಸಹಿತ, 88 ಲಕ್ಷಕ್ಕೂ ಹೆಚ್ಚು ವಂಚನೆಯ ಸಂಪರ್ಕಗಳನ್ನು ಕಡಿತಗೊಳಿಸಿದ ಎ.ಎಸ್.ಟಿ.ಆರ್ ಚಾಕ್ಷು ವರದಿ ಬೆಳವಣಿಗೆ ಹಾಗು 1,200 ಕ್ಕೂ ಹೆಚ್ಚು ಸಂಸ್ಥೆಗಳನ್ನು ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್ ಆನ್‌ಬೋರ್ಡಿಂಗ್ ಸೇರಿದಂತೆ ಕೈಗೊಂಡ ಕ್ರಮಗಳನ್ನು ಸಚಿವರು ವಿವರಿಸಿದರು. ಹಣಕಾಸು ವಂಚನೆ ಅಪಾಯ ಸೂಚಕವು ಸುಮಾರು ₹2,300 ಕೋಟಿ ನಷ್ಟವನ್ನು ತಡೆಗಟ್ಟಿದೆ ಮತ್ತು ಇತ್ತೀಚೆಗೆ ಡಿ.ಒ.ಟಿ-ಸೆಬಿ (DoT-SEBI) ತಿಳುವಳಿಕಾ ಒಡಂಬಡಿಕೆಗೆ ಸಹಿ ಹಾಕಲಾಗಿದೆ ಎಂದರು. ಅಪಾಯಗಳು/ಬೆದರಿಕೆಗಳಲ್ಲಿ ಅತ್ಯಾಧುನಿಕತೆ ಹೆಚ್ಚುತ್ತಿರುವುದನ್ನು ಅವರು ಗಮನಿಸಿದರು ಮತ್ತು ಕೆ.ವೈ.ಸಿ. ಯನ್ನು ಬಲಪಡಿಸಲು, ಕರೆ ಮಾಡುವವರ ಹೆಸರು ತೋರಿಸುವ ವ್ಯವಸ್ಥೆಯ ನಿಯೋಜನೆ, ವಂಚನೆಯ ಉದ್ದೇಶದ ಅಂತಾರಾಷ್ಟ್ರೀಯ ಕರೆಗಳ ಸುಧಾರಿತ ಫಿಲ್ಟರಿಂಗ್ ಮತ್ತು ಗುಪ್ತಚರ ಮಾಹಿತಿ ಹಂಚಿಕೆಯ ಹೆಚ್ಚಳಕ್ಕೆ ಅವರು ಕರೆ ನೀಡಿದರು.
ಸಂಶೋಧನೆ ಮತ್ತು ಅಭಿವೃದ್ಧಿ (ಆರ್ & ಡಿ) ಕುರಿತು ಮಾತನಾಡಿದ ಸಚಿವರು, ದೂರಸಂಪರ್ಕ ವಲಯವು 2025ನೇ ಹಣಕಾಸು ವರ್ಷದಲ್ಲಿ ₹3.72 ಲಕ್ಷ ಕೋಟಿ ಗಳಿಸಿದ್ದರೂ, ಭಾರತೀಯ ನಿರ್ವಾಹಕರು ತಮ್ಮ ಆದಾಯದ 1% ಕ್ಕಿಂತ ಕಡಿಮೆ ಹಣವನ್ನು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಖರ್ಚು ಮಾಡುತ್ತಾರೆ, ಜಾಗತಿಕ ಪ್ರಮುಖ ಕಂಪನಿಗಳಲ್ಲಿ ಈ ಪ್ರಮಾಣವು 15–25% ರಷ್ಟಿರುತ್ತದೆ. ಭಾರತ್ 6ಜಿ ವ್ಯವಸ್ಥೆಗೆ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚಿನ ಕೈಗಾರಿಕಾ ಭಾಗವಹಿಸುವಿಕೆ ಅಗತ್ಯವಿದೆ ಎಂದು ಒತ್ತಿ ಹೇಳಿದರು.
ನೀತಿ ಬೆಂಬಲ, ಮೂಲಸೌಕರ್ಯ, ಪ್ರತಿಭೆ ಮತ್ತು ವ್ಯಾಪಕ ಪ್ರಮಾಣದೊಂದಿಗೆ ಭಾರತವು ಒಂದು ಬದಲಾವಣೆಯ ಹಂತದಲ್ಲಿದೆ ಎಂದು ಸಚಿವರು ಹೇಳಿದರು ಮತ್ತು ಅವಕಾಶಕ್ಕೆ ಅನುಗುಣವಾಗಿ ಮಹತ್ವಾಕಾಂಕ್ಷೆಯನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
*****
(ಪ್ರಕಟಣೆ ಐ.ಡಿ.: 2255332)
ವಿಸಿಟರ್ ಕೌಂಟರ್ : 8