ಜಲ ಶಕ್ತಿ ಸಚಿವಾಲಯ
azadi ka amrit mahotsav

ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ನೇತೃತ್ವದಲ್ಲಿ 6ನೇ ಆವೃತ್ತಿಯ 'ಸುಜಲ್ ಗ್ರಾಮ್ ಸಂವಾದ'; ಸಮುದಾಯದ ನೇತೃತ್ವದ ಜಲ ಭದ್ರತೆ ಮತ್ತು ಕಟ್ಟಕಡೆಯ ವ್ಯಕ್ತಿಗೂ ಸೇವೆ ತಲುಪಿಸುವ ಕುರಿತು ಒತ್ತು


ಸಮುದಾಯದ ನೇತೃತ್ವದ ಜಲ ಭದ್ರತೆಗೆ ಒತ್ತು ನೀಡಲು 8 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 10 ಗ್ರಾಮ ಪಂಚಾಯತ್‌ಗಳೊಂದಿಗೆ ಬಹುಭಾಷಾ ಸಂವಾದ

ಪ್ರಕಟಣಾ ದಿನಾಂಕ: 22 APR 2026 6:09PM by PIB Bengaluru

ಜಲಶಕ್ತಿ ಸಚಿವಾಲಯದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯು (DDWS) ಇಂದು ಬಹುಭಾಷಾ ‘ಸುಜಲ್ ಗ್ರಾಮ್ ಸಂವಾದ’ದ ಆರನೇ ಆವೃತ್ತಿಯನ್ನು ಯಶಸ್ವಿಯಾಗಿ ಆಯೋಜಿಸಿತು. ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ಅವರು ವರ್ಚುವಲ್ ಮೋಡ್ ಮೂಲಕ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದು ಜಲ ಜೀವನ್ ಮಿಷನ್ (JJM) ಅಡಿಯಲ್ಲಿ ಸಮುದಾಯದ ನೇತೃತ್ವದ ಜಲ ಆಡಳಿತಕ್ಕೆ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿತು.

ಈ ಸಂವಾದದಲ್ಲಿ ಗ್ರಾಮ ಪಂಚಾಯತ್ (GP) ಪ್ರತಿನಿಧಿಗಳು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ (VWSC) ಸದಸ್ಯರು, ಸಮುದಾಯದ ವತಿಯಿಂದ ಪಾಲ್ಗೊಳ್ಳುವವರು, ಜಲ ಸಹಿಯಾದಿಗಳು, ಜಲ ಬಾಹಿನಿಯರು, ಜಲ ಸಖಿಯರು, ಅಂಗನವಾಡಿ ಕಾರ್ಯಕರ್ತೆಯರು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಂಚಾಯತ್ ಮಟ್ಟದ ಮುಂಚೂಣಿ ಕಾರ್ಯಕರ್ತರು ಭಾಗವಹಿಸಿದ್ದರು. ಇವರೊಂದಿಗೆ ಜೆಜೆಎಂ ರಾಜ್ಯ ಮಿಷನ್ ನಿರ್ದೇಶಕರು, ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಗಳು ಮತ್ತು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಂವಾದದಲ್ಲಿ ಪಾಲ್ಗೊಂಡವರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವರಾದ ಶ್ರೀ. ಸಿ.ಆರ್. ಪಾಟೀಲ್ ಅವರು, ಸಂವಾದದಲ್ಲಿ ಭಾಗವಹಿಸಿದ 10 ಗ್ರಾಮ ಪಂಚಾಯತ್‌ಗಳನ್ನು ಸ್ವಾಗತಿಸಿದರು. ಜಲ ಜೀವನ್ ಮಿಷನ್‌ನ ಪರಿವರ್ತನಾತ್ಮಕ ಪ್ರಭಾವವನ್ನು ಎತ್ತಿ ತೋರಿಸಿದ ಅವರು, ನೀರನ್ನು ಕೇವಲ ಒಂದು ಸಂಪನ್ಮೂಲವಾಗಿ ನೋಡದೆ, ಅದನ್ನು ಜೀವಜಲ ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು. ನೀರು ಮಾನವ ಅಸ್ತಿತ್ವ, ಜಾನುವಾರು ಮತ್ತು ಕೃಷಿ ಸಮೃದ್ಧಿಯ ಅಡಿಪಾಯವಾಗಿದೆ. ಒಂದು ವೇಳೆ ಈ ಚಕ್ರಕ್ಕೆ ಅಡ್ಡಿಯುಂಟಾದರೆ, ಬದುಕಿನ ಸ್ವರೂಪವೇ ಅಪಾಯಕ್ಕೆ ಸಿಲುಕುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ನೀರಿನ ಕೊರತೆ ಹೆಚ್ಚುತ್ತಿರುವ ಮತ್ತು ಮಳೆಯ ಅನಿಶ್ಚಿತತೆಯ ನಡುವೆ, ಜಲ ಸಂರಕ್ಷಣೆ ಮತ್ತು ನೀರಿನ ಪೋಲು ತಡೆಯುವಲ್ಲಿ ಸಾಮೂಹಿಕ ಜಾಗೃತಿ ಎಂದಿಗಿಂತಲೂ ಹೆಚ್ಚು ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು.

ನೀರಿನ ಪ್ರಾಮುಖ್ಯತೆಯ ಬಗ್ಗೆ ಮಾತನಾಡುತ್ತಾ, ಶ್ರೀ ಪಾಟೀಲ್ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೂರದೃಷ್ಟಿಯನ್ನು ಶ್ಲಾಘಿಸಿದರು ಮತ್ತು ಜಲ ಕ್ಷೇತ್ರದಲ್ಲಿ ಜನರ ಜೀವನವನ್ನೇ ಬದಲಿಸಿದ ಜೆಜೆಎಂ ಅನ್ನು ಪರಿಚಯಿಸಿದ್ದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸಿದರು. ದೂರದ ಪ್ರದೇಶಗಳಿಂದ ನೀರು ತರುವ ದೈನಂದಿನ ಹೊರೆಯಿಂದ ಸುಮಾರು 9 ಕೋಟಿ ಮಹಿಳೆಯರು ಮತ್ತು ಸಹೋದರಿಯರು ಮುಕ್ತರಾಗಿದ್ದಾರೆ ಹಾಗೂ ಪ್ರತಿ ದಿನ ಅಂದಾಜು 5.5 ಕೋಟಿ ಗಂಟೆಗಳ ಸಮಯ ಉಳಿತಾಯವಾಗುತ್ತಿದೆ, ಇದನ್ನು ಕುಟುಂಬ, ಶಿಕ್ಷಣ ಮತ್ತು ಆರ್ಥಿಕ ಅವಕಾಶಗಳಿಗಾಗಿ ಬಳಸಿಕೊಳ್ಳಬಹುದು ಎಂದು ಅವರು ತಿಳಿಸಿದರು.

ಜೊತೆಗೆ, ತಳಮಟ್ಟದ ಜನರ ಬೇಡಿಕೆಗಳನ್ನು ಅರಿತುಕೊಳ್ಳಲು ಬಹುಭಾಷಾ ಸಂವಾದಗಳ ಮಹತ್ವದ ಬಗ್ಗೆ ಶ್ರೀ ಸಿ.ಆರ್. ಪಾಟೀಲ್ ಒತ್ತಿ ಹೇಳಿದರು. 'ಸುಜಲ್ ಗ್ರಾಮ್ ಸಂವಾದ' ಸರಣಿಯು 'ಹರ್ ಘರ್ ಜಲ್' ದೃಷ್ಟಿಕೋನದತ್ತ, ಕೇಂದ್ರದ ಉಪಕ್ರಮಗಳು ಮತ್ತು ಸ್ಥಳೀಯ ಆಡಳಿತದ ನಡುವಿನ ಸಹಯೋಗವನ್ನು ಉತ್ತೇಜಿಸುವುದನ್ನು ಮುಂದುವರಿಸಿದೆ ಎಂದರು.

ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯದರ್ಶಿ ಶ್ರೀ ಅಶೋಕ್ ಕೆ. ಕೆ. ಮೀನಾ ಅವರು ತಮ್ಮ ಆರಂಭಿಕ ಭಾಷಣ ಮಾಡುತ್ತಾ ಭಾಗವಹಿಸುವವರನ್ನು ಸ್ವಾಗತಿಸಿದರು ಮತ್ತು  ಪ್ರಸ್ತುತ ಅನೇಕ ಗ್ರಾಮ ಪಂಚಾಯತ್‌ಗಳು ನಿಯಮಿತ ನೀರು ಪೂರೈಕೆ, ನೀರಿನ ಗುಣಮಟ್ಟ ಖಚಿತಪಡಿಸುವುದು, ಸಮುದಾಯದ ಜಾಗೃತಿ, ನೀರಿನ ಮೂಲಗಳ ರಕ್ಷಣೆಯೊಂದಿಗೆ ಬೂದು ನೀರಿನ ಸರಿಯಾದ ಬಳಕೆಯನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಕುಂದುಕೊರತೆ ಪರಿಹಾರದ ಬಗ್ಗೆ ನಿರಂತರವಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು. ಜೆಜೆಎಂ ಅಡಿಯಲ್ಲಿನ ಈ ಪ್ರಗತಿಯನ್ನು ಗುರುತಿಸಿದ ಅವರು, ಜೆಜೆಎಂ 2.0 ಕೇವಲ ಪೈಪ್‌ಗಳು ಮತ್ತು ಟ್ಯಾಂಕ್‌ಗಳಂತಹ ಮೂಲಸೌಕರ್ಯಗಳ ಮೇಲೆ ಮಾತ್ರವಲ್ಲದೆ, ಪ್ರತಿ ಮನೆಗೂ ನಿಯಮಿತವಾಗಿ ಸುರಕ್ಷಿತ ಮತ್ತು ಶುದ್ಧ ನೀರನ್ನು ತಲುಪಿಸುವ ಸುಸ್ಥಿರ ಸೇವೆಯ ಮೇಲೆ ಒತ್ತು ನೀಡಿದೆ ಎಂದು ಹೇಳಿದರು.

ಏಪ್ರಿಲ್ 24 ರಂದು ಆಚರಿಸಲಾಗುವ ಪಂಚಾಯತ್ ರಾಜ್ ದಿನದ ಮುನ್ನಾದಿನದಂದು ಸ್ಥಳೀಯ ಮಾಲೀಕತ್ವ ಮತ್ತು ಸಮುದಾಯದ ಪಾಲ್ಗೊಳ್ಳುವಿಕೆಗೆ ಅವರು ಕರೆ ನೀಡಿದರು. ಗ್ರಾಮ ಪಂಚಾಯತ್ ಪ್ರತಿನಿಧಿಗಳು ನೀರು ಪೂರೈಕೆ ವ್ಯವಸ್ಥೆಗಳನ್ನು ಸಂಪೂರ್ಣವಾಗಿ ನಿರ್ವಹಿಸಬೇಕೆಂದು ಅವರು ಕರೆ ನೀಡಿದರು. ಸರ್ಕಾರದ ಅಡಿಪಾಯ ಹಾಕಿದ್ದರೂ ಸಹ, 'ಜನ ಭಾಗಿದಾರಿ'ಯಿಂದ (ಜನರ ಪಾಲ್ಗೊಳ್ಳುವಿಕೆ) ಮಾತ್ರ ಯಶಸ್ಸು ಲಭಿಸುತ್ತದೆ ಎಂದು ಅವರು ಹೇಳಿದರು. ನೀರು ಪೂರೈಕೆ ಯೋಜನೆಗಳ ನಿರಂತರ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಅಧಿಕಾರಿಗಳಿಗಿಂತ ಹೆಚ್ಚಾಗಿ ಗ್ರಾಮಸ್ಥರೇ ಹಂಚಿಕೊಳ್ಳುತ್ತಿದ್ದಾರೆ. ಗ್ರಾಮ ಪಂಚಾಯತ್‌ಗಳು ನಿಯಮಿತ ಪೂರೈಕೆ, ಗುಣಮಟ್ಟ ತಪಾಸಣೆ ಮತ್ತು ಬೂದು ನೀರು (greywater) ನಿರ್ವಹಣೆಯ ಜವಾಬ್ದಾರಿ ಹೊಂದಿದ್ದು, ದೀರ್ಘಕಾಲೀನ ಸುಸ್ಥಿರತೆಗಾಗಿ ಜಿಲ್ಲಾಡಳಿತಗಳು ತಾಂತ್ರಿಕ ಮತ್ತು ವ್ಯವಸ್ಥಾಪಕ ಬೆಂಬಲ ನೀಡಬೇಕೆಂದು ಅವರು ಹೇಳಿದರು.

A screenshot of a video conferenceAI-generated content may be incorrect.

‘ಸುಜಲ್ ಗ್ರಾಮ್ ಸಂವಾದ’ದ ಆರನೇ ಆವೃತ್ತಿಯು ಪ್ರಾದೇಶಿಕ ಭಾಷೆಗಳಲ್ಲಿ ಸಂವಾದ ನಡೆಸುವ ತನ್ನ ಪ್ರವರ್ತಕ ಮಾದರಿಯನ್ನು ಮುಂದುವರಿಸಿತು. ಇದು ಗ್ರಾಮಸ್ಥರು ಜೆಜೆಎಂ (JJM) ಮತ್ತು ಅದರ ಸಂಬಂಧಿತ ಉಪಕ್ರಮಗಳಿಗೆ ಸಂಬಂಧಿಸಿದ ಯಶಸ್ಸು ಮತ್ತು ಸವಾಲುಗಳನ್ನು ತಮ್ಮ ಮಾತೃಭಾಷೆಯಲ್ಲಿ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟಿತು. ಈ ಸಂವಾದದಲ್ಲಿ ಲಡಾಖಿ, ರಾಜಸ್ಥಾನಿ, ಮಿಜೋ, ಮರಾಠಿ, ತೆಲುಗು, ಕನ್ನಡ ಮತ್ತು ಹಿಂದಿಯಂತಹ ಭಾಷೆಗಳನ್ನು ಬಳಸಿಕೊಂಡು 8 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳ 10 ಗ್ರಾಮ ಪಂಚಾಯತ್‌ಗಳು ಭಾಗವಹಿಸಿದ್ದವು.

ಗ್ರಾಮ ಪಂಚಾಯತ್‌ಗಳ ಸರಪಂಚರು, ಪ್ರಮುಖ ಪ್ರತಿನಿಧಿಗಳು ಮತ್ತು ಪ್ರತಿ ಗ್ರಾಮದ ಸಮುದಾಯದ ಪಾಲ್ಗೊಳ್ಳುವವರೊಂದಿಗೆ ಸಂವಾದ ನಡೆಸುವಾಗ ಗಮನಾರ್ಹವಾದ ಪ್ರಮುಖ ಅಂಶಗಳನ್ನು ಸಂಗ್ರಹಿಸಲಾಯಿತು. ಇದು ಜೆಜೆಎಂ 2.0 ಅಡಿಯಲ್ಲಿ ಉಳಿದ ರಾಜ್ಯಗಳ ಸುಧಾರಣೆ-ಆಧಾರಿತ ಒಪ್ಪಂದಕ್ಕೆ (MoU) ಸಹಿ ಹಾಕುವ ಕುರಿತಾದ ಚರ್ಚೆಯೊಂದಿಗೆ ಮುಂದುವರಿಯಿತು.

ಪ್ರಾದೇಶಿಕ ಭಾಷೆಗಳಲ್ಲಿ ಹಂಚಿಕೊಳ್ಳಲಾದ ರಾಜ್ಯವಾರು ಅನುಭವಗಳು 


ಜಮ್ಮು ಮತ್ತು ಕಾಶ್ಮೀರದ ಜಮ್ಮು ಜಿಲ್ಲೆಯ ಲೋವರ್ ಭಲ್ವಾಲ್ ಗ್ರಾಮ ಪಂಚಾಯತ್‌ನ ಅಸ್ಸೇರ್ವಾನ್ ಗ್ರಾಮದ ಪ್ರತಿನಿಧಿಗಳೊಂದಿಗೆ ಸಂವಾದ ಪ್ರಾರಂಭವಾಯಿತು. ಜಲ ಜೀವನ್ ಮಿಷನ್ ನಂತರ ತಮ್ಮ ನಲ್ಲಿಗಳಿಂದ ಶುದ್ಧ ಕುಡಿಯುವ ನೀರನ್ನು ಪಡೆಯಲು ಸಾಧ್ಯವಾಗುತ್ತಿರುವುದು ತಮಗೆ ಈ ಮೊದಲು ಒಂದು ಕನಸಿನಂತೆ ಇತ್ತು ಎಂದು ಗ್ರಾಮಸ್ಥರು ತಿಳಿಸಿದರು. ಈ ಹಿಂದೆ ತಾವು ಹ್ಯಾಂಡ್‌ಪಂಪ್‌ಗಳು ಮತ್ತು ಖಾಸಗಿ ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸಿದ್ದೆವು, ಜೆಜೆಎಂ ತಮ್ಮ ಜೀವನವನ್ನೇ ಬದಲಿಸಿದೆ ಎಂದು ಅವರು ಹೇಳಿದರು.

ಗುರುತ್ವಾಕರ್ಷಣೆ ಆಧಾರಿತ ಪುನರ್ನಿರ್ಮಾಣ ಯೋಜನೆಯ ಮೂಲಕ ಗ್ರಾಮ ಪಂಚಾಯಿತಿಯಲ್ಲಿ ನಲ್ಲಿ ನೀರನ್ನು ಪೂರೈಸಲಾಗುತ್ತದೆ ಎಂದು ಮಿಷನ್ ನಿರ್ದೇಶಕರು ತಿಳಿಸಿದರು. ಗ್ರಾಮ ಮಟ್ಟದಲ್ಲಿ ನಿರ್ವಹಣೆ (O&M) ಅನುಷ್ಠಾನಕ್ಕಾಗಿ ಪಿಎಚ್‌ಇಡಿ (PHED) ಪ್ರತಿ ಮನೆಯಿಂದ ವರ್ಷಕ್ಕೆ ಒಟ್ಟು 1000 ರೂಪಾಯಿಗಳನ್ನು ಸಂಗ್ರಹಿಸುತ್ತದೆ ಮತ್ತು ನಿರ್ವಹಣಾ ನೀತಿಯು ಸೂಚನೆಗೊಂಡ ನಂತರ ಇದನ್ನು ಪಂಚಾಯತ್‌ಗೆ ವರ್ಗಾಯಿಸಲಾಗುತ್ತದೆ ಎಂದು ಅವರು  ಉಲ್ಲೇಖಿಸಿದರು.

A collage of several images of people sitting at a deskAI-generated content may be incorrect.

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಧನಗರವಾಡಿ ಗ್ರಾಮ ಪಂಚಾಯತ್‌ನಲ್ಲಿ; ಕೇಂದ್ರ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ಅವರೇ ಸ್ವತಃ ಗ್ರಾಮ ಪಂಚಾಯತ್ ಸದಸ್ಯರೊಂದಿಗೆ ಮರಾಠಿಯಲ್ಲಿ ಸಂವಾದ ನಡೆಸಿದರು. ಬಳಕೆದಾರರ ಶುಲ್ಕ ಸಂಗ್ರಹಣೆ, ನೀರಿನ ಗುಣಮಟ್ಟ ತಪಾಸಣೆ, ಮಳೆನೀರು ಕೊಯ್ಲು ಮತ್ತು ಎಫ್‌ಟಿಕೆಗಳ (FTKs) ಬಗ್ಗೆ ಸಚಿವರು, ಸಮುದಾಯದ ಸದಸ್ಯರು ಮತ್ತು ಸರಪಂಚರ ನಡುವೆ ಉತ್ಸಾಹಭರಿತ ಸಂವಾದ ನಡೆಯಿತು. ಪೈಪ್‌ಲೈನ್ ದುರಸ್ತಿಯಂತಹ ನಿರ್ವಹಣೆಯನ್ನು ನೋಡಿಕೊಳ್ಳಲು ಪ್ರತಿ ಸಂಪರ್ಕಕ್ಕೆ ವರ್ಷಕ್ಕೆ ₹750 ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ ಮತ್ತು ನಿಯಮಿತವಾಗಿ ಗ್ರಾಮ ಮಟ್ಟದ ಸಭೆಗಳನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.

ನಾಂದೇಡ್ ಜಿಲ್ಲಾಧಿಕಾರಿಗಳು ಮಾತನಾಡಿ, ಡಿಡಬ್ಲ್ಯೂಎಸ್‌ಎಂ (DWSM) ಸಭೆಗಳನ್ನು ಪ್ರತಿ ತಿಂಗಳು ನಡೆಸಲಾಗುತ್ತಿದೆ ಎಂದು ತಿಳಿಸಿದರು. ಮನೆಗಳಲ್ಲಿ ನಲ್ಲಿ ನೀರು ಲಭ್ಯವಾಗಿರುವುದರಿಂದ ಉಳಿತಾಯವಾದ ಸಮಯದಿಂದ ಅನೇಕ ಮಹಿಳೆಯರು ರೇಷ್ಮೆ ಕೃಷಿಯನ್ನು ಕೈಗೊಳ್ಳಲು ಸಾಧ್ಯವಾಗಿದೆ ಎಂದು ಅವರು ಗಮನಿಸಿದರು. ನೈಜ-ಸಮಯದ ಮೇಲ್ವಿಚಾರಣೆ, ಮುನ್ಸೂಚಕ ನಿರ್ವಹಣೆ ಮತ್ತು ಸೋರಿಕೆ ಪತ್ತೆಗಾಗಿ 16 ಗ್ರಾಮಗಳಲ್ಲಿ 'ರಿಮೋಟ್ ಮಾನಿಟರಿಂಗ್ ಸಿಸ್ಟಮ್' ಅನ್ನು ಜಾರಿಗೆ ತರಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಹೆಚ್ಚಿನ ವಿದ್ಯುತ್ ವೆಚ್ಚವು ಒಂದು ಸವಾಲಾಗಿದೆ ಎಂದು ಬೆಟ್ಟು ಮಾಡಿದ ಅವರು, ಸುಸ್ಥಿರತೆಯನ್ನು ಸುಧಾರಿಸಲು ಸೌರ ವ್ಯವಸ್ಥೆಗಳನ್ನು ಪರಿಚಯಿಸಲಾಗುತ್ತಿದೆ ಎಂದು ಹಂಚಿಕೊಂಡರು.

ಲಡಾಖ್‌ನ ಲೆಹ್ ಜಿಲ್ಲೆಯ, ಮಥೋ ಗ್ರಾಮ ಪಂಚಾಯತ್- ಗ್ರಾಮದ ಸದಸ್ಯರು ಮತ್ತು ಸಮುದಾಯದ ಪ್ರತಿನಿಧಿಗಳು, ಸವಾಲಿನ ಭೂಪ್ರದೇಶದಲ್ಲಿ ದೀರ್ಘಕಾಲೀನ ಜಲ ಭದ್ರತೆಯನ್ನು ಖಚಿತಪಡಿಸುವ ಸಮುದಾಯದ ನೇತೃತ್ವದ ಸುಸ್ಥಿರ ಪ್ರಯತ್ನಗಳನ್ನು ಎತ್ತಿ ತೋರಿಸಿದರು. ಮಥೋ ಪಂಚಾಯತ್ ತನ್ನ ಬುಗ್ಗೆ ಆಧಾರಿತ (spring-based) ನೀರು ಪೂರೈಕೆ ಮತ್ತು ಹನಿ ನೀರು ನಿರ್ವಹಣಾ ವಿಧಾನದಿಂದಾಗಿ ಒಂದು ವಿಶಿಷ್ಟ ಗ್ರಾಮ ಪಂಚಾಯತ್ ಆಗಿದೆ ಎಂದು ಅವರು ಹೇಳಿದರು. ಗ್ರಾಮವು ಶೇ. 100 ರಷ್ಟು ಮನೆಗಳಿಗೆ ನಲ್ಲಿ ನೀರು ಸಂಪರ್ಕವನ್ನು ಸಾಧಿಸಿದೆ ಮತ್ತು ಪೂರೈಸುವ ನೀರು ಶುದ್ಧ ಹಾಗೂ ಸುರಕ್ಷಿತವಾಗಿದೆ. ಫೀಲ್ಡ್ ಟೆಸ್ಟ್ ಕಿಟ್‌ಗಳನ್ನು ಬಳಸಿ ವರ್ಷಕ್ಕೆ ಮೂರರಿಂದ ನಾಲ್ಕು ಬಾರಿ ಗುಣಮಟ್ಟವನ್ನು ಪರೀಕ್ಷಿಸಲಾಗುತ್ತದೆ ಎಂದು ಪ್ರತಿನಿಧಿ ಮಾಹಿತಿ ನೀಡಿದರು. ಗ್ರಾಮದ ಈ ಬುಗ್ಗೆ ಆಧಾರಿತ ಪೂರೈಕೆ ಮತ್ತು ವಿಶಿಷ್ಟ ಹನಿ ನೀರು ಮಾದರಿಯು ಈಗಾಗಲೇ ರಾಷ್ಟ್ರ ಮಟ್ಟದ ಮಾನ್ಯತೆಯನ್ನು ಪಡೆದಿದೆ. ಪಂಚಾಯತ್ ನಿರ್ವಹಣೆಗಾಗಿ ಬಳಕೆದಾರ ಶುಲ್ಕ ವ್ಯವಸ್ಥೆಯನ್ನು ಪರಿಚಯಿಸಲು ಪಂಚಾಯತ್ ಸಿದ್ಧತೆ ನಡೆಸುತ್ತಿದೆ ಮತ್ತು ಪ್ರಸ್ತುತ ಪ್ರಕ್ರಿಯೆಯನ್ನು ಅಂತಿಮಗೊಳಿಸುವ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು..

ಮಥೋ ಗ್ರಾಮ ಪಂಚಾಯತ್‌ನ ಸಮುದಾಯದ ಸದಸ್ಯರು ಮತ್ತು ನೀರು ನೈರ್ಮಲ್ಯ ಸಮಿತಿಯ ಅಧ್ಯಕ್ಷರೊಂದಿಗೆ ಸಂವಾದ ನಡೆಸುವಾಗ, ರಾಷ್ಟ್ರೀಯ ಜಲ ಜೀವನ್ ಮಿಷನ್‌ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಶ್ರೀ ಕಮಲ್ ಕಿಶೋರ್ ಸೋನ್ ಅವರು ಪಂಚಾಯತ್‌ನ ವಿಶಿಷ್ಟ ತಂತ್ರಜ್ಞಾನಕ್ಕಾಗಿ ಶ್ಲಾಘಿಸಿದರು. ಸಮಾನ ಪಾಲ್ಗೊಳ್ಳುವಿಕೆ ಮತ್ತು ಸಮುದಾಯದ ಪಾತ್ರದಿಂದಾಗಿ ಮನೆಗಳಲ್ಲಿ ತಲಾ ದಿನಕ್ಕೆ 70 ಲೀಟರ್ (LPCD) ನೀರು ಲಭ್ಯವಾಗುತ್ತಿರುವುದನ್ನು ಅವರು ಪ್ರಶಂಸಿಸಿದರು.

ರಾಜಸ್ಥಾನದ ಭಿಲ್ವಾರ ಜಿಲ್ಲೆಯ ಹೋಡಾ ಗ್ರಾಮ ಪಂಚಾಯತ್‌ನ ಸರಪಂಚರು ರಾಜಸ್ಥಾನಿ ಭಾಷೆಯಲ್ಲಿ ಸಂವಾದ ನಡೆಸುತ್ತಾ, ನೀರು ಕಡಿಮೆ ಇರುವ ರಾಜ್ಯದಲ್ಲಿ ಜೆಜೆಎಂ ಸಕಾರಾತ್ಮಕ ಪ್ರಭಾವ ಬೀರಿದೆ ಎಂದು ಡಿಡಿಡಬ್ಲ್ಯೂಎಸ್ (DDWS) ಅಧಿಕಾರಿಗಳಿಗೆ ತಿಳಿಸಿದರು. ರಾಜಸ್ಥಾನವು ನೀರಿನ ಸಮಸ್ಯೆಗಳನ್ನು ಹೊಂದಿರುವ ಶುಷ್ಕ ಪ್ರದೇಶವಾಗಿದ್ದರೂ, ಪ್ರಧಾನಿ ಶ್ರೀ ಮೋದಿಯವರ 'ಹರ್ ಘರ್ ಜಲ್' ದೃಷ್ಟಿಕೋನದ ಅಡಿಯಲ್ಲಿ ತಮ್ಮ ಗ್ರಾಮ ಪಂಚಾಯತ್‌ನ ಪ್ರತಿ ಮನೆಯೂ ಈಗ ನಲ್ಲಿ ನೀರು ಮತ್ತು ಸರಿಯಾದ ಪೈಪ್‌ಲೈನ್ ಸಂಪರ್ಕವನ್ನು ಹೊಂದಿದೆ ಎಂದು ಅವರು ಗಮನಿಸಿದರು. ಇದೊಂದು ಪರಿವರ್ತನಾತ್ಮಕ ಬದಲಾವಣೆ ಎಂದು ಅವರು ಬಣ್ಣಿಸಿದರು: ಮಹಿಳೆಯರು ಈಗ ನೀರು ತರಲು ದೂರದ ಸ್ಥಳಗಳಿಗೆ ಅಲೆಯುವ ಕಷ್ಟವಿಲ್ಲ, ಪಾನಿ ಸಮಿತಿ ನಿರಂತರವಾಗಿ ಮತ್ತು ಪ್ರಗತಿಪರವಾಗಿ ಕಾರ್ಯನಿರ್ವಹಿಸುತ್ತಿದೆ, ನಿಯಮಿತವಾಗಿ ಎಫ್‌ಟಿಕೆ ತಪಾಸಣೆ ಮಾಡಲಾಗುತ್ತದೆ ಮತ್ತು ಗ್ರಾಮ ಸಭೆಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಮಾದರಿ ನಿರ್ವಹಣಾ (O&M) ನೀತಿಯು ಅಧಿಸೂಚನೆಯ ಅಂತಿಮ ಹಂತದಲ್ಲಿದೆ, ಇದರ ಅಡಿಯಲ್ಲಿ ನೀರು ಪೂರೈಕೆ ವ್ಯವಸ್ಥೆಗಳ ಸುಸ್ಥಿರತೆಯನ್ನು ಬೆಂಬಲಿಸಲು ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ ಎಂದು ರಾಜಸ್ಥಾನದ ಮಿಷನ್ ನಿರ್ದೇಶಕರು ತಿಳಿಸಿದರು. ಆದಾಗ್ಯೂ, ನಿರ್ವಹಣಾ ಚಟುವಟಿಕೆಗಳನ್ನು ಬೆಂಬಲಿಸಲು ಹಣಕಾಸು ಆಯೋಗದ ಅನುದಾನದ ಅಡಿಯಲ್ಲಿ ₹18,000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮಿಜೋರಾಂನ ಸೆರ್ಚಿಪ್ ಜಿಲ್ಲೆಯ ಹ್ಮಾಂಗ್ಕಾನ್ ಗ್ರಾಮ ಪಂಚಾಯತ್ ಪ್ರತಿನಿಧಿಗಳು, ಮಿಜೋ ಭಾಷೆಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ನೀರು ಪೂರೈಕೆ ವ್ಯವಸ್ಥೆಯ ನಿರ್ವಹಣೆಯಲ್ಲಿ ಸ್ಥಳೀಯರ ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ವಿಶೇಷವಾಗಿ ಶ್ಲಾಘಿಸಲಾಯಿತು. ಈ ಹಿಂದೆ ಬೆಟ್ಟದ ಭೂಪ್ರದೇಶ ಮತ್ತು ಕಾಲೋಚಿತ ಕೊರತೆಯ ಸವಾಲುಗಳನ್ನು ಎದುರಿಸುತ್ತಿದ್ದ ಈ ಗ್ರಾಮವು, ಸಮರ್ಪಿತ ವಿಡಬ್ಲ್ಯೂಎಸ್‌ಸಿಗಳ (VWSCs) ಮೂಲಕ ಎಲ್ಲಾ ಮನೆಗಳಿಗೆ ವಿಶ್ವಾಸಾರ್ಹ ನಲ್ಲಿ ನೀರು ಪೂರೈಕೆಯನ್ನು ಸಾಧಿಸಿದೆ. ಗ್ರಾಮಸ್ಥರು ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ ಬಳಕೆದಾರರ ಶುಲ್ಕವನ್ನು ನೀಡುತ್ತಾರೆ, ನಿಯಮಿತ ಗುಣಮಟ್ಟದ ಪರೀಕ್ಷೆಯನ್ನು ನಡೆಸುತ್ತಾರೆ ಮತ್ತು ಸ್ಥಳೀಯ ಬುಗ್ಗೆಗಳು ಹಾಗೂ ಹೊಳೆಗಳಂತಹ ಸ್ಥಳೀಯ ಮೂಲಗಳನ್ನು ಸಂರಕ್ಷಿಸುತ್ತಾರೆ.

ತೆಲಂಗಾಣದ ಜೋಗುಲಾಂಬ ಗದ್ವಾಲ್ ಜಿಲ್ಲೆಯ ಬೋರಾವೆಲ್ಲಿ ಗ್ರಾಮ ಪಂಚಾಯತ್ ಪ್ರತಿನಿಧಿಗಳು, ತೆಲುಗಿನಲ್ಲಿ ಸಂವಾದ ನಡೆಸಿದರು ಮತ್ತು ಜೆಜೆಎಂ ಅಡಿಯಲ್ಲಿ ವ್ಯವಸ್ಥೆಯ ಮೇಲ್ವಿಚಾರಣೆ ಮತ್ತು ನಿರ್ವಹಣೆಯಲ್ಲಿ ವಿಡಬ್ಲ್ಯೂಎಸ್‌ಸಿಗಳು (VWSC) ಹೇಗೆ ಮುಂಚೂಣಿಯಲ್ಲಿವೆ ಎಂದು ತಿಳಿಸಿದರು. ಗ್ರಾಮ ಪಂಚಾಯತ್‌ನಾದ್ಯಂತ ಪೂರ್ಣ ಪ್ರಮಾಣದ ನಲ್ಲಿ ನೀರು ಸಂಪರ್ಕವನ್ನು ಸಾಧಿಸಲಾಗಿದ್ದು, ಈ ಹಿಂದೆ ಇದ್ದ ಅತಿಯಾದ ಫ್ಲೋರೈಡ್ ಮಾಲಿನ್ಯದ ಸಮಸ್ಯೆಗೆ ಅಂತ್ಯ ಹಾಡಲಾಗಿದೆ ಎಂದು ಅವರು ಹೈಲೈಟ್ ಮಾಡಿದರು. ಜಲ ಜೀವನ್ ಮಿಷನ್ ಮತ್ತು ಮಿಷನ್ ಭಗೀರಥ ಮೂಲಕ, ನಿಯಮಿತ ಕ್ಲೋರಿನೀಕರಣವು ಸಮುದಾಯಕ್ಕೆ ಸುರಕ್ಷಿತ ಮತ್ತು ಸುಧಾರಿತ ಗುಣಮಟ್ಟದ ಕುಡಿಯುವ ನೀರನ್ನು ಖಚಿತಪಡಿಸುತ್ತದೆ. ಆರು ಮಹಿಳಾ ಸದಸ್ಯರನ್ನು ಒಳಗೊಂಡಿರುವ ಸಕ್ರಿಯ ವಿಡಬ್ಲ್ಯೂಎಸ್‌ಸಿ ಬಲವಾದ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸುತ್ತದೆ. ಪೂರೈಕೆ, ನಿರ್ವಹಣೆ ಮತ್ತು ಗುಣಮಟ್ಟದ ಸಮಸ್ಯೆಗಳನ್ನು ಪರಿಶೀಲಿಸಲು ಅವರು ನಿಯಮಿತವಾಗಿ ಸಭೆಗಳನ್ನು ನಡೆಸುತ್ತಾರೆ ಮತ್ತು ಗ್ರಾಮ ಮಟ್ಟದಲ್ಲಿ ನೀರು ಪೂರೈಕೆ ವ್ಯವಸ್ಥೆಗಳನ್ನು ಅಧಿಕೃತವಾಗಿ ಹಸ್ತಾಂತರಿಸುವ ಮೂಲಕ ಸಮುದಾಯದ ಮಾಲೀಕತ್ವವನ್ನು ಉತ್ತೇಜಿಸಲು 'ಜಲ್ ಅರ್ಪಣ್ ದಿವಸ್' ಅನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ.

ಮಿಷನ್ ಭಗೀರಥ ಅಡಿಯಲ್ಲಿ, ರಾಜ್ಯ ಕಾರ್ಯಕ್ರಮವು ಮನೆಗಳಿಗೆ ದಿನಕ್ಕೆ 100 ಎಲ್‌ಪಿಸಿಡಿ (lpcd) ನೀರು ಪೂರೈಕೆಯನ್ನು ಖಚಿತಪಡಿಸುತ್ತದೆ ಎಂದು ಜಿಲ್ಲಾ ಆಡಳಿತಾಧಿಕಾರಿ ಉಲ್ಲೇಖಿಸಿದ್ದಾರೆ. ಜಿಲ್ಲೆಯಲ್ಲಿ ಪಂಚಾಯತ್‌ಗಳು 'ಜಲ ಸೇವಾ ಅಂಕಲನ್' ಅಡಿಯಲ್ಲಿ ಶೇ. 100 ರಷ್ಟು ವ್ಯಾಪ್ತಿಯನ್ನು ಹೊಂದಿವೆ ಮತ್ತು ಡಿಟಿಯುಗಳನ್ನು (DTUs) ಯಶಸ್ವಿಯಾಗಿ ಸ್ಥಾಪಿಸಲಾಗಿದೆ.

ತ್ರಿಪುರಾದ ಸಿಪಾಹಿಜಾಲ ಜಿಲ್ಲೆಯ ಕಲ್ಶಿಮುರಾ ಗ್ರಾಮ ಪಂಚಾಯತ್ ಪ್ರತಿನಿಧಿಗಳು ತಮ್ಮ ಸ್ಥಳೀಯ ಭಾಷೆ ಬಂಗಾಳಿಯಲ್ಲಿ ಜಲ ಜೀವನ್ ಮಿಷನ್ ಅಡಿಯಲ್ಲಿನ ಪ್ರಗತಿಯನ್ನು ವಿವರಿಸಿದರು. ಜಲ ಜೀವನ್ ಮಿಷನ್ ಅಡಿಯಲ್ಲಿ ನಲ್ಲಿ ನೀರು ಈಗ ಗ್ರಾಮದ ಪ್ರತಿ ಮನೆಗೂ ತಲುಪಿದೆ ಎಂದು ಗ್ರಾಮಸ್ಥರು ಹಂಚಿಕೊಂಡರು. ಈ ಮೊದಲು ಜನರು ನೀರು ಸಂಗ್ರಹಿಸಲು ಅನೇಕ ಕಷ್ಟಗಳನ್ನು ಎದುರಿಸಬೇಕಾಗಿತ್ತು. ಮಹಿಳೆಯರು ದೂರದ ಮೂಲಗಳಿಂದ ನೀರನ್ನು ತಲೆಯ ಮೇಲೆ ಹೊತ್ತು ತರಬೇಕಾಗಿತ್ತು. ಈಗ ಮನೆಗಳಿಗೆ ನೀರು ಪೂರೈಕೆಯಾಗುತ್ತಿರುವುದರಿಂದ, ಗ್ರಾಮಕ್ಕೆ ಪರ್ಯಾಪ್ತ ಪ್ರಮಾಣದ ನೀರು ಸಿಗುತ್ತಿದೆ ಮತ್ತು ಹಿಂದಿನ ತೊಂದರೆಗಳು ಗಮನಾರ್ಹವಾಗಿ ಕಡಿಮೆಯಾಗಿವೆ. ಜಲ ಸಖಿಯರು ಎಫ್‌ಟಿಕೆಗಳನ್ನು ಬಳಸಿ ನಿಯಮಿತವಾಗಿ ನೀರಿನ ಗುಣಮಟ್ಟವನ್ನು ಪರೀಕ್ಷಿಸುತ್ತಾರೆ.

ಸಂವಾದದ ಸಂದರ್ಭದಲ್ಲಿ, 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರೋಹನ್ ಅಬಾಟ ಎಂಬ ವಿದ್ಯಾರ್ಥಿಯು ತನ್ನ ಮನೆ ಮತ್ತು ಶಾಲೆ ಎರಡಕ್ಕೂ ಈಗ ನಲ್ಲಿ ನೀರಿನ ಸಂಪರ್ಕ ಲಭ್ಯವಿದೆ ಎಂದು ಹೇಳಿದರು. ಮೊದಲು ದೂರದಿಂದ ನೀರು ತರಬೇಕಾಗಿತ್ತು, ಆದರೆ ಈಗ ಮನೆಯಲ್ಲೇ ನೀರು ಲಭ್ಯವಿರುವುದರಿಂದ ಜೀವನ ಸುಲಭವಾಗಿದೆ ಎಂದರು.

ಜಾರ್ಖಂಡ್‌ನ ಸೆರೈಕೆಲಾ ಜಿಲ್ಲೆಯ ಅರುವ ಗ್ರಾಮ ಪಂಚಾಯತ್ ಪ್ರತಿನಿಧಿಗಳು 'ಹೋ' ಮತ್ತು ಹಿಂದಿ ಭಾಷೆಯಲ್ಲಿ ಸಂವಾದ ನಡೆಸಿದರು. ಜೆಜೆಎಂ ಅಡಿಯಲ್ಲಿ ಗ್ರಾಮದಲ್ಲಿ ಬೋರ್‌ವೆಲ್ ಅನ್ನು ಪ್ರಾಥಮಿಕ ಮೂಲವಾಗಿಟ್ಟುಕೊಂಡು ನೀರು ಪೂರೈಕೆ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದೆ ಎಂದು ಪ್ರತಿನಿಧಿ ಹಂಚಿಕೊಂಡರು. ಈ ಹಿಂದೆ ಸಮುದಾಯವು ಬಾವಿಗಳು, ಕೊಳಗಳು ಮತ್ತು ಝಿರಿಯಾಗಳಂತಹ ಸಾಂಪ್ರದಾಯಿಕ ಮೂಲಗಳನ್ನು ಅವಲಂಬಿಸಿತ್ತು, ಅವುಗಳು ನಂಬಿಕೆಗೆ ಅರ್ಹವಾಗಿರಲಿಲ್ಲ ಮತ್ತು ನೀರು ತರಲು ಸಾಕಷ್ಟು ಶ್ರಮ ಬೇಕಾಗಿತ್ತು. ಪ್ರತಿ ಮನೆಯೂ ದಿನಕ್ಕೆ ₹1 ರಂತೆ ಬಳಕೆದಾರರ ಶುಲ್ಕವನ್ನು ನೀಡುತ್ತದೆ, ಪಂಚಾಯತ್ ಮಟ್ಟದಲ್ಲಿ ಇದುವರೆಗೆ ಸುಮಾರು ₹5,000 ಸಂಗ್ರಹವಾಗಿದೆ. ಇದರಲ್ಲಿ ಪಂಪ್ ಆಪರೇಟರ್‌ಗೆ ತಿಂಗಳಿಗೆ ₹1,000 ನೀಡಲಾಗುತ್ತದೆ, ಅವರು ನೀರು ಪೂರೈಕೆ ವ್ಯವಸ್ಥೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಹೊಂದಿರುತ್ತಾರೆ.
ಸಮುದಾಯದ ಸಮನ್ವಯ ಮತ್ತು ಜಾಗೃತಿಯಲ್ಲಿ ಜಲ ಸಹಿಯಾ ಅವರ ಪಾತ್ರವನ್ನು ಪ್ರತಿನಿಧಿ ತಿಳಿಸಿದರು. ಹೆಚ್ಚುವರಿಯಾಗಿ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ವಸಹಾಯ ಗುಂಪಿನ ಸದಸ್ಯರಿಗೆ ಫೀಲ್ಡ್ ಟೆಸ್ಟ್ ಕಿಟ್‌ಗಳ (FTK) ಬಳಕೆಯಲ್ಲಿ ತರಬೇತಿ ನೀಡಲಾಗಿದ್ದು, ಸುರಕ್ಷಿತ ಕುಡಿಯುವ ನೀರನ್ನು ಖಚಿತಪಡಿಸಿಕೊಳ್ಳಲು ಅವರು ನಿಯಮಿತವಾಗಿ ನೀರಿನ ಗುಣಮಟ್ಟ ತಪಾಸಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಕರ್ನಾಟಕದ ಬೆಳಗಾವಿ ಜಿಲ್ಲೆಯ ಮೋಹಿಸೆಟಿ ಗ್ರಾಮ ಪಂಚಾಯತ್ ಪ್ರತಿನಿಧಿಗಳು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಕನ್ನಡದಲ್ಲಿ ಸಂವಾದ ನಡೆಸಿದರು. ಸ್ವಯಂಪ್ರೇರಿತ ಬಿಲ್ಲಿಂಗ್ ವ್ಯವಸ್ಥೆಯ ಯಶಸ್ವಿ ಅನುಷ್ಠಾನದ ಬಗ್ಗೆ ಗ್ರಾಮ ಸಮುದಾಯದ ಸದಸ್ಯರು ವಿವರಿಸಿದರು. ಪ್ರತಿ ಮನೆಯಿಂದ ₹80 ರಂತೆ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ ಮತ್ತು ಇದನ್ನು ಕಾರ್ಯಾಚರಣೆ ಹಾಗೂ ನಿರ್ವಹಣೆಗಾಗಿ ಬಳಸಲಾಗುತ್ತಿದೆ ಎಂದು ಅವರು ತಿಳಿಸಿದರು. ಅವರು 'ನಲ್ ಜಲ್ ಮಿತ್ರ' ಕಾರ್ಯಕ್ರಮದ ಅಡಿಯಲ್ಲಿ ಕೌಶಲ್ಯ ಹೊಂದಿರುವ ಪಂಪ್ ಆಪರೇಟರ್‌ಗೆ ಮಾಸಿಕ ₹15,000 ಗೌರವಧನವನ್ನೂ ನೀಡುತ್ತಿದ್ದಾರೆ.

ಸಂವಾದದ ಕೊನೆಯಲ್ಲಿ ಛತ್ತೀಸ್‌ಗಢದ ರಾಜನಂದಗಾಂವ್ ಜಿಲ್ಲೆಯ ಭಟ್‌ಗುಣ ಗ್ರಾಮ ಪಂಚಾಯತ್‌ನೊಂದಿಗೆ ಮಾತುಕತೆ ಮುಕ್ತಾಯವಾಯಿತು. ಸರಪಂಚರು ಗ್ರಾಮ ಸಮಿತಿ ಸದಸ್ಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರೊಂದಿಗೆ ಅಧಿಕಾರಿಗಳ ಜೊತೆ ಸಂವಾದ ನಡೆಸಿದರು. ಜೆಜೆಎಂ ನಂತರ ಗ್ರಾಮಕ್ಕೆ ದಿನದ 24 ಗಂಟೆಯೂ ಉತ್ತಮ ಗುಣಮಟ್ಟದ ನೀರು ದೊರೆಯುತ್ತಿದೆ ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ನಿಯಮಿತವಾಗಿ ನೀರಿನ ಪರೀಕ್ಷೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು. ಜಲ ಬಾಹಿನಿಯರು ವರ್ಷಕ್ಕೆ ನಾಲ್ಕು ಬಾರಿ ಎಫ್‌ಟಿಕೆಗಳನ್ನು ಬಳಸಿ ನೀರಿನ ಗುಣಮಟ್ಟ ಪರೀಕ್ಷಿಸುತ್ತಾರೆ. ಪಂಚಾಯತ್ ಪ್ರತಿ ಮನೆಯಿಂದ ₹80 ಬಳಕೆದಾರರ ಶುಲ್ಕ ಸಂಗ್ರಹಿಸುತ್ತದೆ.

ರಾಜನಂದಗಾಂವ್ ಜಿಲ್ಲಾಧಿಕಾರಿಗಳು ಮಾತನಾಡಿ, ಜಿಲ್ಲೆಯಾದ್ಯಂತ ಜೆಜೆಎಂ ಸರಿಯಾದ ಅನುಷ್ಠಾನ ಮತ್ತು ಕಾರ್ಯನಿರ್ವಹಣೆಗಾಗಿ ಜಲ ಸಹಿಯಾದಿಗಳ ಜೊತೆಗೆ ಜಿಲ್ಲೆಯಲ್ಲಿ 'ಜಲ ಯೋಧ'ರಿದ್ದಾರೆ ಎಂದು ತಿಳಿಸಿದರು. ಗ್ರಾಮಗಳ ಜನಸಂಖ್ಯೆಯ ಆಧಾರದ ಮೇಲೆ ಕ್ಯೂಆರ್ ಕೋಡ್ ಪಾವತಿ ಮತ್ತು ಟ್ರ್ಯಾಕಿಂಗ್‌ನೊಂದಿಗೆ ಡಿಜಿಟಲ್ ರೂಪದಲ್ಲಿ ಬಳಕೆದಾರರ ಶುಲ್ಕ ಸಂಗ್ರಹಿಸಲಾಗುತ್ತಿದೆ, ಇದರಿಂದ ಜೆಜೆಎಂ ಅಡಿಯಲ್ಲಿ ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ ಎಂದು ಅವರು ತಿಳಿಸಿದರು. ಅವರು ನೀರಿನ ಸುಸ್ಥಿರತೆ, ಮೂಲದ ಸುಸ್ಥಿರತೆ ಮತ್ತು ಬೂದು ನೀರು (greywater) ನಿರ್ವಹಣೆಯ ಬಗ್ಗೆಯೂ ಹೇಳಿದರು.

ಸಮಾರೋಪ ನುಡಿಗಳನ್ನು ಆಡಿದ ರಾಷ್ಟ್ರೀಯ ಜಲ ಜೀವನ್ ಮಿಷನ್‌ನ ಹೆಚ್ಚುವರಿ ಕಾರ್ಯದರ್ಶಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ  ಶ್ರೀ ಕಮಲ್ ಕಿಶೋರ್ ಸೋನ್ ಅವರು, ಗ್ರಾಮ ಪಂಚಾಯತ್‌ಗಳು ಮತ್ತು ಜಿಲ್ಲಾಡಳಿತಗಳ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಉತ್ಸಾಹಭರಿತ ಸಂವಾದವನ್ನು ಶ್ಲಾಘಿಸಿದರು. ಅವರು ಸಹಭಾಗಿತ್ವದ ವಿಧಾನವನ್ನು ಪ್ರಶಂಸಿಸಿದರು ಮತ್ತು ನಿರ್ವಹಣಾ ನೀತಿಯನ್ನು ಸರಿಯಾಗಿ ಅನುಷ್ಠಾನಗೊಳಿಸುವುದರ ಜೊತೆಗೆ ನಿಯಮಿತವಾಗಿ ಡಿಡಬ್ಲ್ಯೂಎಸ್ (DWS) ಸಭೆಗಳನ್ನು ನಡೆಸುವಂತೆ ಪಂಚಾಯತ್‌ಗಳಿಗೆ ಸೂಚಿಸಿದರು.
ಇಂತಹ ಅತ್ಯುತ್ತಮ ಪದ್ಧತಿಗಳನ್ನು ಮುಂದುವರೆಸಲು ಮತ್ತು ಹೆಚ್ಚಿನ ಪಂಚಾಯತ್‌ಗಳನ್ನು ಮಂಡಳಿಯಲ್ಲಿ ಸೇರಿಸಿಕೊಳ್ಳಲು ಅವರು ಪ್ರೋತ್ಸಾಹಿಸಿದರು. ಇದರಿಂದ ಕೌಶಲ್ಯ ಅಭಿವೃದ್ಧಿ, ಗ್ರಾಮ ಪಂಚಾಯತ್ ಮಟ್ಟದಲ್ಲಿ ಜಲ ಸಹಿಯಾದಿಗಳು ಮತ್ತು ಕಾರ್ಯಕರ್ತರಿಗೆ ತರಬೇತಿ ನೀಡುವ ಮೂಲಕ ಪಾರದರ್ಶಕತೆ ಮತ್ತು ಸಮುದಾಯದ ತೊಡಗಿಸಿಕೊಳ್ಳುವಿಕೆ ಮತ್ತು  ಜವಾಬ್ದಾರಿಯನ್ನು ವಹಿಸಿಕೊಳ್ಳುವಂತಹ ಮಾದರಿಗಳನ್ನು ಇತರ ವಲಯಗಳಲ್ಲೂ ಅಳವಡಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ಎನ್‌ಜೆಜೆಎಂ - ಉಪ ಕಾರ್ಯದರ್ಶಿಯಾದ ಶ್ರೀಮತಿ ಅಂಕಿತಾ ಚಕ್ರವರ್ತಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು ಹಾಗೂ ಭಾಗವಹಿಸುವವರನ್ನು ಅವರು ಸ್ವಾಗತಿಸಿದರು. ವಂದನಾರ್ಪಣೆಯೊಂದಿಗೆ ಅಧಿವೇಶನ ಮುಕ್ತಾಯವಾಯಿತು, ಇದು ಸಮುದಾಯದ ಮಾಲೀಕತ್ವದೊಂದಿಗೆ 'ಹರ್ ಘರ್ ಜಲ್' ದೃಷ್ಟಿಕೋನವನ್ನು ಸಾಧಿಸುವತ್ತ ಮತ್ತೊಂದು ಯಶಸ್ವಿ ಹೆಜ್ಜೆಯಾಗಿದೆ.


******


(ಪ್ರಕಟಣೆ ಐ.ಡಿ.: 2254698) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati