ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ನಿಷೇಧಿತ ವಸ್ತುಗಳ ಕಳ್ಳ ಸಾಗಣೆ ಮತ್ತು ಸೇವನೆಯಲ್ಲಿ ತೊಡಗಿರುವ ಜನರ ವಿರುದ್ಧ ಸರ್ಕಾರದಿಂದ ಕ್ರಿಮಿನಲ್ ನಿಬಂಧನೆಗಳ ಪರಿಚಯ: ಕೇಂದ್ರ ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ
ವಾಡಾ ಗೈನ್ ಅಂತಿಮ ಸಮ್ಮೇಳನದಲ್ಲಿ ಜಾಗತಿಕ ಉದ್ದೀಪನ ಮದ್ದು ಸೇವನೆ ತಡೆ (ಡೋಪಿಂಗ್ ನಿಗ್ರಹ) ಸಹಕಾರ ಬಲವರ್ಧನೆಗೊಳಿಸಿದ ಭಾರತ
“ಡೋಪಿಂಗ್ ಇನ್ನು ಮುಂದೆ ವೈಯಕ್ತಿಕ ಕೃತ್ಯವಲ್ಲ, ಆದರೆ ಸಂಘಟಿತ ಬಹುರಾಷ್ಟ್ರೀಯ ಉದ್ಯಮವಾಗಿದೆ’’: ಡಾ. ಮಾಂಡವಿಯಾ
”ಭಾರತವು ಕ್ರೀಡಾ ಶ್ರೇಷ್ಠತೆಗೆ ಮಾತ್ರವಲ್ಲದೆ ಸಮಗ್ರತೆಯ ಅತ್ಯುನ್ನತ ಮಾನದಂಡಗಳನ್ನು ಎತ್ತಿಹಿಡಿಯಲು ಬದ್ಧ’’: ಕೇಂದ್ರ ಕ್ರೀಡಾ ಸಚಿವರು
ಭಾರತದ ಸ್ವಚ್ಛ ಕ್ರೀಡಾ ಬದ್ಧತೆಗೆ ಒತ್ತು ನೀಡುವ ಕಠಿಣ ಕಾನೂನು ಸುಧಾರಣೆಗಳು, ಶಿಕ್ಷಣ ಮತ್ತು ತಂತ್ರಜ್ಞಾನ
ಪ್ರಕಟಣಾ ದಿನಾಂಕ:
16 APR 2026 2:06PM by PIB Bengaluru
ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯಾ ಅವರು ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆಯ (ವಾಡಾ-WADA) ಜಾಗತಿಕ ಉದ್ದೀಪನ ಮದ್ದು ಸೇವನೆ ತಡೆ (ಡೋಪಿಂಗ್ ನಿಗ್ರಹ) ಗುಪ್ತಚರ ಮತ್ತು ತನಿಖಾ ಜಾಲ (ಜಿಎಐಐಎನ್) ನ ಅಂತಿಮ ಸಮ್ಮೇಳನದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಾತನಾಡಿ, ಡೋಪಿಂಗ್ ವಿರುದ್ಧ ಹೋರಾಡುವಲ್ಲಿ ಕ್ರೀಡೆಯನ್ನು ಸ್ವಚ್ಛಗೊಳಿಸಲು ಮತ್ತು ಜಾಗತಿಕ ಸಹಕಾರಕ್ಕೆ ಭಾರತದ ಸದೃಢ ಬದ್ಧತೆಯನ್ನು ವಿವರಿಸಿದರು.

ಅಂತಾರಾಷ್ಟ್ರೀಯ ಸಹಯೋಗದ ಮಹತ್ವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಸಚಿವರು, “ಜಾಗತಿಕ ಡೋಪಿಂಗ್ ವಿರೋಧಿ ಗುಪ್ತಚರ ಮತ್ತು ತನಿಖಾ ಜಾಲವು ಈ ನಿರ್ಣಾಯಕ ಕ್ಷೇತ್ರಗಳಲ್ಲಿ ಸಹಕಾರವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ’’ ಎಂದ ಅವರು, ಈ ಸಮ್ಮೇಳನವು ಡೋಪಿಂಗ್ ವಿರುದ್ಧದ ಜಾಗತಿಕ ಹೋರಾಟದಲ್ಲಿ ಪ್ರಮುಖ ಪಾಲುದಾರರನ್ನು ಒಗ್ಗೂಡಿಸುತ್ತದೆ ಎಂದು ಹೇಳಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ. ಮಾಂಡವಿಯಾ, ಭಾರತವು ಕೇವಲ ಪಾಲನೆಗಾಗಿ ಮಾತ್ರವಲ್ಲದೆ, ಕ್ರೀಡೆಯ ಸಮಗ್ರತೆಗೆ ನಿಜವಾದ ಬದ್ಧತೆಯೊಂದಿಗೆ ಸಕ್ರಿಯ ಸುಧಾರಣೆಗಳನ್ನು ಕೈಗೊಂಡಿದೆ ಎಂದು ಪ್ರಮುಖವಾಗಿ ಉಲ್ಲೇಖಿಸಿದರು.

ರಾಷ್ಟ್ರೀಯ ಡೋಪಿಂಗ್ ವಿರೋಧಿ ಕಾಯ್ದೆ 2022 ದೃಢವಾದ ಶಾಸನಬದ್ಧ ಚೌಕಟ್ಟಾಗಿದೆ ಎಂದು ಪ್ರಸ್ತಾಪಿಸಿದ ಅವರು, ರಾಷ್ಟ್ರೀಯ ಡೋಪಿಂಗ್ ವಿರೋಧಿ ತಿದ್ದುಪಡಿ ಕಾಯ್ದೆ 2025 ಭಾರತದ ನಿಯಮಗಳನ್ನು ಜಾಗತಿಕ ಮಾನದಂಡಗಳೊಂದಿಗೆ ಹೊಂದಿಸುತ್ತದೆ ಎಂದು ಉಲ್ಲೇಖಿಸಿದರು.
ನಿಷೇಧಿತ ವಸ್ತುಗಳ ಸೇವನೆ ಅಥವಾ ಸಾಗಣೆಯಲ್ಲಿ ತೊಡಗಿರುವವರ ವಿರುದ್ಧ ಕ್ರಿಮಿನಲ್ ನಿಬಂಧನೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಡಾ. ಮಾಂಡವಿಯಾ ಹೇಳಿದರು.
ಹಿಂದಿನ ಪ್ರಯತ್ನಗಳು ಹೆಚ್ಚಾಗಿ ಪ್ರಯೋಗಾಲಯ, ಪರೀಕ್ಷಾ ಶಿಷ್ಟಾಚಾರಗಳು ಮತ್ತು ಕ್ರೀಡಾಪಟುಗಳ ಪಾಲನೆಗೆ ಸೀಮಿತವಾಗಿದ್ದರೂ, ಇಂದು ಡೋಪಿಂಗ್ ವೈಯಕ್ತಿಕ ದುಷ್ಕೃತ್ಯವಲ್ಲ, ಬದಲಾಗಿ ಸಂಘಟಿತ ಬಹುರಾಷ್ಟ್ರೀಯ ಉದ್ಯಮವಾಗಿದೆ ಎಂದು ಡಾ. ಮಾಂಡವಿಯಾ ಉಲ್ಲೇಖಿಸಿದರು, ಅಂತಹ ಜಾಲಗಳನ್ನು ಪರಿಣಾಮಕಾರಿಯಾಗಿ ಹತ್ತಿಕ್ಕಲು ಸಂಘಟಿತ ಜಾಗತಿಕ ಪ್ರತಿಕ್ರಿಯೆಯ ಅಗತ್ಯವನ್ನು ಒತ್ತಿಹೇಳುತ್ತದೆ ಎಂದರು.
ಸದೃಢವಾದ ಜಾಗತಿಕ ಪಾಲುದಾರಿಕೆಗಳ ಅಗತ್ಯತೆಯನ್ನು ಗುರುತಿಸಿದ ವಾಡಾ ಅಧ್ಯಕ್ಷ ಶ್ರೀ ವಿಟೋಲ್ಡ್ ಬಂಕಾ, “ವಾಡಾದ ಗುಪ್ತಚರ ಮತ್ತು ತನಿಖಾ ಮಾದರಿಯು ರಾಷ್ಟ್ರೀಯ ಡೋಪಿಂಗ್ ನಿಗ್ರಹ ಸಂಸ್ಥೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳ ನಡುವಿನ ಸಹಕಾರವನ್ನು ಬಲಪಡಿಸಲು ವಿಕಸನಗೊಳಿಸಿದೆ ಎಂದರು.
“ಈ ಮಾದರಿಯನ್ನು ಪಾಲುದಾರಿಕೆಗಳ ಮೇಲೆ ನಿರ್ಮಿಸಲಾಗಿದೆ. ಇದು ಯುರೋಪೋಲ್ ಮತ್ತು ಇಂಟರ್‌ಪೋಲ್‌ನಂತಹ ಅಂತಾರಾಷ್ಟ್ರೀಯ ಪಾಲುದಾರರಿಂದ ಬೆಂಬಲಿತವಾದ ಕಾನೂನು ಜಾರಿ ಸಾಮರ್ಥ್ಯಗಳೊಂದಿಗೆ ಡೋಪಿಂಗ್ ನಿಗ್ರಹ ವೃತ್ತಿಪರರ ಪರಿಣತಿಯನ್ನು ಒಗ್ಗೂಡಿಸುತ್ತದೆ’’ ಎಂದು ಅವರು ಹೇಳಿದರು.
ಭಾರತದ ಬೆಳೆಯುತ್ತಿರುವ ಜಾಗತಿಕ ಪಾತ್ರದ ಕುರಿತು ಮಾತನಾಡಿದ ಸಚಿವರು, ವಾಡಾ ಕಾರ್ಯಾಗಾರಗಳು ಮತ್ತು ಸದ್ಯ ನಡೆಯುತ್ತಿರುವ ಸಮ್ಮೇಳನದಂತಹ ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ನಮ್ಮ ತನಿಖಾ ಸಾಮರ್ಥ್ಯಗಳು ಗಮನಾರ್ಹವಾಗಿ ಹೆಚ್ಚಿವೆ ಮತ್ತು ನಮ್ಮ ಡೋಪಿಂಗ್ ನಿಗ್ರಹ ಪೂರಕ ವ್ಯವಸ್ಥೆಯನ್ನು ಬಲಪಡಿಸಿದೆ ಎಂದು ಹೇಳಿದರು. “ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶವು ನಿರ್ದೇಶನ ಮತ್ತು ಆವೇಗ ಎರಡನ್ನೂ ಹೊಂದಿರುವ ಜಾಗತಿಕ ಕ್ರೀಡಾ ಶಕ್ತಿ ಕೇಂದ್ರವಾಗಿ ಹೊರಹೊಮ್ಮುತ್ತಿದೆ’’ ಎಂದು ಹೇಳುವ ಮೂಲಕ ಅವರು ಭಾರತದ ಮಹತ್ವಾಕಾಂಕ್ಷೆಯನ್ನು ಪುನರುಚ್ಚರಿಸಿದರು.
ಮೂಲಸೌಕರ್ಯ, ಪ್ರತಿಭೆ ಗುರುತಿಸುವಿಕೆ ಮತ್ತು ವೈಜ್ಞಾನಿಕ ತರಬೇತಿ ಸೇರಿದಂತೆ ಕ್ರೀಡಾ ಅಭಿವೃದ್ಧಿಯಲ್ಲಿ ಭಾರತದ ಹೂಡಿಕೆಗಳನ್ನು ಅವರು ಮತ್ತಷ್ಟು ಬಲವಾಗಿ ಪ್ರತಿಪಾದಿಸಿದರು. ಖೇಲೋ ಇಂಡಿಯಾ ಮತ್ತು ಫಿಟ್ ಇಂಡಿಯಾ ಆಂದೋಲನದಂತಹ ಉಪಕ್ರಮಗಳು ಕ್ರೀಡಾ ಪೂರಕ ವ್ಯವಸ್ಥೆಯನ್ನು ಪರಿವರ್ತಿಸುತ್ತಿವೆ ಮತ್ತು ಕ್ರೀಡೆಗಳನ್ನು ನಮ್ಮ ರಾಷ್ಟ್ರೀಯ ಗುರುತಿನ ಅವಿಭಾಜ್ಯ ಅಂಗವನ್ನಾಗಿ ಮಾಡುತ್ತಿವೆ ಎಂದು ಅವರು ಹೇಳಿದರು.
ನೈತಿಕ ಆಯಾಮವನ್ನು ಒತ್ತಿ ಹೇಳಿದ ಸಚಿವರು, “ಕ್ರೀಡಾಪಟು ಮೌಲ್ಯಗಳು ಕ್ರೀಡಾ ಶ್ರೇಷ್ಠತೆಯ ಮೂಲದಲ್ಲಿ ಉಳಿಯಬೇಕು’’ ಎಂದು ಹೇಳಿದರು. ”ಕ್ರೀಡೆಗಳು ಶಿಸ್ತು, ಸಮಗ್ರತೆ ಮತ್ತು ಪಾತ್ರವನ್ನು ಬೆಳೆಸುವ ಶಕ್ತಿಯನ್ನು ಹೊಂದಿವೆ, ಆದರೆ ಹೆಚ್ಚುತ್ತಿರುವ ಸ್ಪರ್ಧಾತ್ಮಕ ಒತ್ತಡಗಳು ಕೆಲವೊಮ್ಮೆ ಅನೈತಿಕ ಆಯ್ಕೆಗಳಿಗೆ ಕಾರಣವಾಗಬಹುದು’’ ಎಂದು ಅವರು ಹೇಳಿದರು. ಜಾಗೃತಿಯ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದ ಅವರು, ಕ್ರೀಡೆಯ ಪ್ರತಿಯೊಂದು ಹಂತದಲ್ಲೂ ನ್ಯಾಯ, ಪ್ರಾಮಾಣಿಕತೆ ಮತ್ತು ಗೌರವವನ್ನು ಉತ್ತೇಜಿಸುವುದು ಅತ್ಯಗತ್ಯ ಎಂದು ಹೇಳಿದರು.
ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾತನಾಡಿದ ಡಾ. ಮಾಂಡವಿಯ ಅವರು “ಮುನ್ನೆಚ್ಚರಿಕೆ ಅತ್ಯಂತ ಪರಿಣಾಮಕಾರಿ ತಂತ್ರವಾಗಿ ಉಳಿದಿದೆ’’ ಎಂದು ಒತ್ತಿ ಹೇಳಿದರು. “ಸರಿಯಾದ ಸಮಯದಲ್ಲಿ ಸರಿಯಾದ ಮಾಹಿತಿಯನ್ನು ಒದಗಿಸುವುದು ಕ್ರೀಡಾಪಟುಗಳಿಗೆ ತಿಳಿವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಉದ್ದೇಶಪೂರ್ವಕ ಮತ್ತು ಆಕಸ್ಮಿಕ ಉಲ್ಲಂಘನೆಗಳನ್ನು ತಪ್ಪಿಸಲು ಅಧಿಕಾರ ನೀಡುತ್ತದೆ’’ ಎಂದು ಹೇಳಿದರು. ಕ್ರೀಡಾಪಟುವಿನ ಪ್ರಯಾಣದುದ್ದಕ್ಕೂ ಶಿಕ್ಷಣವು ನಿರಂತರವಾಗಿರಬೇಕು ಎಂದು ಹೇಳುವ ಮೂಲಕ ಅವರು ಶಿಕ್ಷಣದ ಪಾತ್ರವನ್ನು ಪ್ರಧಾನವಾಗಿ ಉಲ್ಲೇಖಿಸಿದರು.
ಭಾರತದ ರಾಷ್ಟ್ರೀಯ ಡೋಪಿಂಗ್ ನಿಗ್ರಹ ಸಂಸ್ಥೆ (ನಾಡಾ) ಕಾರ್ಯಾಗಾರಗಳು, ಸೆಮಿನಾರ್‌ಗಳು, ಡಿಜಿಟಲ್ ಅಭಿಯಾನಗಳು ಮತ್ತು ಕಾರ್ಯಕ್ರಮ ಆಧಾರಿತ ಕಲಿಕೆಯ ಮೂಲಕ ಜಾಗೃತಿಗೆ ಸಮಗ್ರ, ಬಹು-ಹಂತದ ವಿಧಾನವನ್ನು ಅಳವಡಿಸಿಕೊಂಡಿದೆ ಎಂದು ಅವರು ಮಾಹಿತಿ ನೀಡಿದರು. ಸಾರ್ವತ್ರಿಕ ವಿನ್ಯಾಸ ಚೌಕಟ್ಟಿನ ಅಡಿಯಲ್ಲಿ ವಿಶೇಷಚೇತನ ಕ್ರೀಡಾಪಟುಗಳಿಗಾಗಿ ವಿಶೇಷ ಶಿಕ್ಷಣ ಮಾದರಿಗಳನ್ನು ಸಹ ಅಭಿವೃದ್ಧಿಪಡಿಸಲಾಗಿದೆ ಎಂದರು.
ಭಾರತದ ಸಕ್ರೀಯ ಮನೋಭಾವವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಕಾರ್ಯದರ್ಶಿ (ಕ್ರೀಡೆ) ಶ್ರೀ ಹರಿ ರಂಜನ್ ರಾವ್, “ಜಾರಿ ಸಂಸ್ಥೆಗಳೊಂದಿಗೆ ನಿಕಟ ಸಮನ್ವಯ ಮತ್ತು ಸುಧಾರಿತ ಮಾಹಿತಿ ಹಂಚಿಕೆ ಸೇರಿದಂತೆ ರಾಷ್ಟ್ರೀಯ ಡೋಪಿಂಗ್ ನಿಗ್ರಹ ಸಂಸ್ಥೆಯ ಸಾಂಸ್ಥಿಕ ಮತ್ತು ತನಿಖಾ ಸಾಮರ್ಥ್ಯವನ್ನು ಬಲಪಡಿಸುವ ಕಡೆಗೆ ಕ್ರೀಡಾ ಸಚಿವಾಲಯ ಕೆಲಸ ಮಾಡಿದೆ. ಕಲುಷಿತ ಅಥವಾ ಅನಿಯಂತ್ರಿತ ವಸ್ತುಗಳಿಂದ ಉಂಟಾಗುವ ಅಪಾಯಗಳನ್ನು ಪರಿಹರಿಸುವಲ್ಲಿ ಭಾರತದ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ ಮತ್ತು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯಂತಹ ಸಂಸ್ಥೆಗಳೊಂದಿಗೆ ಪಾಲುದಾರಿಕೆಗಳು ನಿರ್ಣಾಯಕವಾಗಿವೆ, ಇದು ಗಮನಾರ್ಹ ಜಾಗತಿಕ ಕಾಳಜಿಯಾಗಿದೆ’’ ಎಂದರು.
ನಿಷೇಧಿತ ವಸ್ತುಗಳಿಗೆ ಔಷಧಿಗಳನ್ನು ಪರಿಶೀಲಿಸಲು ಕ್ರೀಡಾಪಟುಗಳಿಗೆ ಸಹಾಯ ಮಾಡುವ “ನಿಮ್ಮ ಔಷಧವನ್ನು ತಿಳಿದುಕೊಳ್ಳಿ’’ (Know Your Medicine) ಮೊಬೈಲ್ ಅಪ್ಲಿಕೇಶನ್‌ನಂತಹ ತಾಂತ್ರಿಕ ಮಧ್ಯಸ್ಥಿಕೆಗಳನ್ನು ಸಚಿವರು ಉಲ್ಲೇಖಿಸಿದರು. ಉದ್ದೀಪನ ಪೂರಕ ವಸ್ತುಗಳ ಸಮಸ್ಯೆಯನ್ನು ಪರಿಹರಿಸುತ್ತಾ, ಕ್ರೀಡಾಪಟುಗಳನ್ನು ರಕ್ಷಿಸಲು ಪ್ರಮುಖ ಸಂಸ್ಥೆಗಳಲ್ಲಿ ಸುಧಾರಿತ ಪರೀಕ್ಷಾ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದರು.

ಪರೀಕ್ಷೆ ಮತ್ತು ಜಾರಿಯಲ್ಲಿ ಪ್ರಗತಿಯನ್ನು ಹಂಚಿಕೊಂಡ ಡಾ. ಮಾಂಡವಿಯಾ, ಭಾರತವು 2019ರಲ್ಲಿ ಸುಮಾರು 4,000 ಪರೀಕ್ಷೆಗಳಿಂದ ಕಳೆದ ವರ್ಷ ಸುಮಾರು 8,000 ಪರೀಕ್ಷೆಗಳಿಗೆ ತನ್ನ ಡೋಪಿಂಗ್ ನಿಗ್ರಹ ಪರೀಕ್ಷೆಗಳನ್ನು ವಿಸ್ತರಣೆ ಮಾಡಿದೆ ಎಂದು ಹೇಳಿದರು. 2019ರಲ್ಲಿ ಶೇ.5.6 ರಿಂದ ಪ್ರಸ್ತುತ ಶೇ.2 ಕ್ಕಿಂತ ಕಡಿಮೆ ಇರುವ ಪ್ರತಿಕೂಲ ವಿಶ್ಲೇಷಣಾತ್ಮಕ ಸಂಶೋಧನೆಗಳಲ್ಲಿ ಗಮನಾರ್ಹ ಕುಸಿತವನ್ನು ಅವರು ಉಲ್ಲೇಖಿಸಿ, ಇದು ನಿರಂತರ ಜಾಗೃತಿ ಮತ್ತು ಮುನ್ನೆಚ್ಚರಿಕೆ ಪ್ರಯತ್ನಗಳ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ನಾಡಾ ಇಂಡಿಯಾದ ಮಹಾನಿರ್ದೇಶಕ ಶ್ರೀ ಅನಂತ್ ಕುಮಾರ್, ಭಾರತದ ಡೋಪಿಂಗ್ ನಿಗ್ರಹ ಪ್ರಯತ್ನಗಳ ಪ್ರಮಾಣ ಮತ್ತು ವಿಕಸನವನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಾ, “ನಮ್ಮ ಪರೀಕ್ಷಾ ಕಾರ್ಯಕ್ರಮವು ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾಗಿ ವಿಸ್ತರಣೆತಾಗಿದೆ. ಅಪಾಯ-ಆಧಾರಿತ ಮತ್ತು ಪರಿಣಾಮಕಾರಿತ್ವ-ಆಧರಿಸಿದ ವಿಧಾನಗಳೆಡೆಗೆ ಕಾರ್ಯತಂತ್ರದ ಬದಲಾವಣೆಯಿಂದ ಪೂರಕವಾಗಿದೆ. ಆದರೂ ನಾವು ಗುರುತಿಸುವಂತೆ, ಪರೀಕ್ಷೆ ಮಾತ್ರ ಇನ್ನು ಮುಂದೆ ಸಾಕಾಗುವುದಿಲ್ಲ ಮತ್ತು ಏಕೀಕರಣ, ಬುದ್ಧಿವಂತಿಕೆ ಮತ್ತು ಶಿಕ್ಷಣವು ನಮ್ಮ ಡೋಪಿಂಗ್ ನಿಗ್ರಹ ಚೌಕಟ್ಟಿನ ತಿರುಳನ್ನು ರೂಪಿಸಬೇಕು ಎಂದರು.
ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮತ್ತು ರಾಷ್ಟ್ರೀಯ ಡೋಪಿಂಗ್ ವಿರೋಧಿ ಚೌಕಟ್ಟನ್ನು ಬಲಪಡಿಸಲು ಭಾರತವು ಹೊಸ ವಾಡಾ- ಕಂಪ್ಲೈಂಟ್ ಔಷಧ ಪರೀಕ್ಷಾ ಪ್ರಯೋಗಾಲಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಸಚಿವರು ಮತ್ತಷ್ಟು ಮಾಹಿತಿ ಹಂಚಿಕೊಂಡರು.
ಭಾರತದ ಬದ್ಧತೆಯನ್ನು ಪುನರುಚ್ಚರಿಸುತ್ತಾ, "ಯಾವುದೇ ಒಂದು ಘಟಕವು ಡೋಪಿಂಗ್ ಸವಾಲನ್ನು ಪ್ರತ್ಯೇಕವಾಗಿ ಎದುರಿಸಲು ಸಾಧ್ಯವಿಲ್ಲ" ಎಂದು ಸಚಿವರು ಹೇಳಿದರು, ಸರ್ಕಾರಗಳು, ನಿಯಂತ್ರಕರು ಮತ್ತು ಕ್ರೀಡಾ ಸಂಸ್ಥೆಗಳ ನಡುವೆ ಬಲವಾದ ಪಾಲುದಾರಿಕೆಯ ಅಗತ್ಯಯೆಯನ್ನು ಬಲವಾಗಿ ಪ್ರತಿಪಾದಿಸಿದರು. "ಭಾರತವು ಕ್ರೀಡಾ ಶ್ರೇಷ್ಠತೆಗೆ ಮಾತ್ರವಲ್ಲದೆ ಸಮಗ್ರತೆಯ ಅತ್ಯುನ್ನತ ಮಾನದಂಡಗಳನ್ನು ಎತ್ತಿಹಿಡಿಯಲು ಬದ್ಧವಾಗಿದೆ" ಎಂದು ಅವರು ಹೇಳಿದರು. ಕ್ರೀಡೆಯು ನ್ಯಾಯಯುತವಾಗಿ ಮತ್ತು ಅದರ ಮೌಲ್ಯಗಳಿಗೆ ನೈಜವಾಗಿ ಉಳಿಯುತ್ತದೆ ಎಂದು ಖಾತ್ರಿಪಡಿಸಿಕೊಳ್ಳುವುದು ನಮ್ಮ ಸಮ್ಮೇಳನದ ಸಾಮೂಹಿಕ ಸಂಕಲ್ಪವನ್ನು ಪ್ರತಿಬಿಂಬಿಸುತ್ತದೆ ಎಂದು ವಿವರಿಸಿದರು.
ಸಂವಾದದ ತಂಡದಲ್ಲಿ ವಾಡಾದ ಗುಪ್ತಚರ ಮತ್ತು ತನಿಖಾ ನಿರ್ದೇಶಕರಾದ ಶ್ರೀ ಗುಂಟರ್ ಯಂಗರ್; ಮತ್ತು ಇಂಟರ್ ಪೋಲ್ ನ ಶ್ರೀ ಫ್ರಾನ್ಸಿಸ್ಕೊ ಪೋರ್ಚುಗಲ್ ಕೂಡ ಉಪಸ್ಥಿತರಿದ್ದರು.
*****
(ಪ್ರಕಟಣೆ ಐ.ಡಿ.: 2252578)
ವಿಸಿಟರ್ ಕೌಂಟರ್ : 14