ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ನವದೆಹಲಿಯಲ್ಲಿ 2026ರ ಮೊದಲ ಬ್ರಿಕ್ಸ್ ಆರೋಗ್ಯ ಕಾರ್ಯಕಾರಿ ಗುಂಪಿನ ಸಭೆಯ ಆತಿಥ್ಯ
"ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ" ಎಂಬುದು ಬ್ರಿಕ್ಸ್ 2026ರ ಮಾರ್ಗದರ್ಶಿ ವಿಷಯವಾಗಿದ್ದು, ಇದು ಜನಕೇಂದ್ರಿತ ಮತ್ತು ಭವಿಷ್ಯಕ್ಕೆ ಸಜ್ಜಾದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ
ಆರೋಗ್ಯ ಕಾರ್ಯಕಾರಿ ಗುಂಪು ಸಹಕಾರ, ಪರಸ್ಪರ ಕಲಿಕೆ ಮತ್ತು ಸಾಕ್ಷ್ಯಾಧಾರಿತ ನೀತಿ ನಿರೂಪಣೆಯ ಮೂಲಕ ಹೊಂದಾಣಿಕೆಯ ಮತ್ತು ಸ್ಥಿತಿಸ್ಥಾಪಕ ಆರೋಗ್ಯ ವ್ಯವಸ್ಥೆಗಳನ್ನು ನಿರ್ಮಿಸುವತ್ತ ಗಮನಹರಿಸಲಿದೆ: ಕೇಂದ್ರ ಆರೋಗ್ಯ ಕಾರ್ಯದರ್ಶಿ
ತಡೆಗಟ್ಟುವಿಕೆ, ಜನಕೇಂದ್ರಿತ ಮತ್ತು ಸಮಗ್ರ ಆರೋಗ್ಯದ ಮೇಲೆ ಗಮನಹರಿಸಿರುವ ಭಾರತವು, "ಆರೋಗ್ಯಕರ ಜೀವನಶೈಲಿ" ಮತ್ತು "ಮಾನಸಿಕ ಸ್ವಾಸ್ಥ್ಯದ ಉತ್ತೇಜನ" ಎಂಬ ಎರಡು ಹೊಸ ಆದ್ಯತೆಯ ಕ್ಷೇತ್ರಗಳನ್ನು ಪರಿಚಯಿಸಿದೆ
ಟಿಬಿ (ಕ್ಷಯರೋಗ) ಸಂಶೋಧನಾ ಜಾಲ ಮತ್ತು ಸಾಕ್ಷ್ಯಾಧಾರಿತ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿ ಸೇರಿದಂತೆ ಚಾಲ್ತಿಯಲ್ಲಿರುವ ಆದ್ಯತೆಗಳು ಭಾರತದ ಬ್ರಿಕ್ಸ್ ಅಧ್ಯಕ್ಷತೆಯಲ್ಲಿ ಕಾರ್ಯತಂತ್ರದ ಕೇಂದ್ರಬಿಂದುವಾಗಿ ಮುಂದುವರಿಯಲಿವೆ
ಪ್ರಕಟಣಾ ದಿನಾಂಕ:
15 APR 2026 7:12PM by PIB Bengaluru
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು 2026ರ ಸಾಲಿನ ಬ್ರಿಕ್ಸ್ (BRICS) ಚೌಕಟ್ಟಿನ ಅಡಿಯಲ್ಲಿ ಮೊದಲ ಆರೋಗ್ಯ ಕಾರ್ಯಕಾರಿ ಗುಂಪಿನ ಸಭೆಯ ಅಧ್ಯಕ್ಷತೆಯನ್ನು ನವದೆಹಲಿಯಲ್ಲಿ ವಹಿಸಿತ್ತು. ಈ ಸಭೆಯು ಬ್ರಿಕ್ಸ್ ಸದಸ್ಯ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಈಜಿಪ್ಟ್, ಇಥಿಯೋಪಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಇಂಡೋನೇಷ್ಯಾದ ಹಿರಿಯ ಆರೋಗ್ಯ ಅಧಿಕಾರಿಗಳು, ತಾಂತ್ರಿಕ ತಜ್ಞರು ಮತ್ತು ಪ್ರತಿನಿಧಿಗಳನ್ನು ಸಾರ್ವಜನಿಕ ಆರೋಗ್ಯದ ಸಹಕಾರದ ಆದ್ಯತೆಯ ಕ್ಷೇತ್ರಗಳ ಕುರಿತು ಚರ್ಚಿಸಲು ಒಂದೆಡೆ ಸೇರಿಸಿತು.
2026ರ ಬ್ರಿಕ್ಸ್ ಅಧ್ಯಕ್ಷ ರಾಷ್ಟ್ರವಾಗಿ ಭಾರತವು, "ಸ್ಥಿತಿಸ್ಥಾಪಕತ್ವ, ನಾವೀನ್ಯತೆ, ಸಹಕಾರ ಮತ್ತು ಸುಸ್ಥಿರತೆಗಾಗಿ ನಿರ್ಮಾಣ" ಎಂಬ ಸಮಗ್ರ ವಿಷಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು 2025ರ ರಿಯೋ ಶೃಂಗಸಭೆಯಲ್ಲಿ ಗೌರವಾನ್ವಿತ ಪ್ರಧಾನಮಂತ್ರಿಯವರು ವ್ಯಕ್ತಪಡಿಸಿದ ಜನಕೇಂದ್ರಿತ ಮತ್ತು ಮಾನವೀಯತೆಗೆ ಮೊದಲ ಆದ್ಯತೆ ನೀಡುವ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ಈ ವಿಷಯವು ಸ್ಪಂದನೆಯ, ಒಳಗೊಳ್ಳುವಿಕೆಯ ಮತ್ತು ಭವಿಷ್ಯಕ್ಕೆ ಸಜ್ಜಾದ ಸಹಯೋಗದ ಚೌಕಟ್ಟುಗಳನ್ನು ಬಲಪಡಿಸುವ ಭಾರತದ ಬದ್ಧತೆಯನ್ನು ಉಲ್ಲೇಖಿಸುತ್ತದೆ.

ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ, ಕೇಂದ್ರ ಆರೋಗ್ಯ ಕಾರ್ಯದರ್ಶಿ ಶ್ರೀಮತಿ ಪುಣ್ಯ ಸಲಿಲ ಶ್ರೀವಾಸ್ತವ ಅವರು ಎಲ್ಲಾ ಬ್ರಿಕ್ಸ್ ಸದಸ್ಯ ರಾಷ್ಟ್ರಗಳನ್ನು ಸ್ವಾಗತಿಸಿದರು ಮತ್ತು ಸಾರ್ವಜನಿಕ ಆರೋಗ್ಯದಲ್ಲಿ ಸಹಕಾರವನ್ನು ಮುನ್ನಡೆಸಲು ಆರೋಗ್ಯ ಕಾರ್ಯಕಾರಿ ಗುಂಪು ಒಂದು ಪ್ರಮುಖ ವೇದಿಕೆಯಾಗಿದೆ ಎಂದು ಅದರ ಮಹತ್ವವನ್ನು ಒತ್ತಿ ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ ಬ್ರಿಕ್ಸ್ ಆರೋಗ್ಯ ಕಾರ್ಯಕಾರಿ ಗುಂಪಿನ ಸಭೆಗಳು ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳು, ಆರೋಗ್ಯ ವ್ಯವಸ್ಥೆಗಳ ಬಲವರ್ಧನೆ ಮತ್ತು ಕೈಗೆಟುಕುವ ದರದಲ್ಲಿ ಔಷಧಿಗಳ ಲಭ್ಯತೆಯನ್ನು ಸುಧಾರಿಸುವುದು ಸೇರಿದಂತೆ ತುರ್ತು ಆರೋಗ್ಯ ಸವಾಲುಗಳ ಮೇಲೆ ಸಹಕರಿಸಲು ದಾರಿ ಮಾಡಿಕೊಟ್ಟಿವೆ ಎಂದು ಅವರು ಹೇಳಿದರು. ಈ ಪ್ರಯತ್ನಗಳು ಸಾಂಕ್ರಾಮಿಕ ಸಿದ್ಧತೆ, ಆರೋಗ್ಯ ತಂತ್ರಜ್ಞಾನದ ನಾವೀನ್ಯತೆ ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಯ ವ್ಯಾಪ್ತಿಯನ್ನು ಉತ್ತೇಜಿಸುವಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸಿವೆ ಎಂದು ತಿಳಿಸಿದರು.
2026ರ ಅಧ್ಯಕ್ಷತೆಯಲ್ಲಿ ಭಾರತದ ಆದ್ಯತೆಗಳನ್ನು ಉಲ್ಲೇಖಿಸುತ್ತಾ, ಆರೋಗ್ಯ ಕಾರ್ಯಕಾರಿ ಗುಂಪು ಒಳಗೊಳ್ಳುವಿಕೆಯ, ಸುಸ್ಥಿರ ಮತ್ತು ಸಾಕ್ಷ್ಯಾಧಾರಿತ ಆರೋಗ್ಯ ಸಹಕಾರವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಬ್ರಿಕ್ಸ್ ರಾಷ್ಟ್ರಗಳ ವೈವಿಧ್ಯಮಯ ಆರೋಗ್ಯ ವ್ಯವಸ್ಥೆಗಳು ಮತ್ತು ಸಾಮಾಜಿಕ-ಆರ್ಥಿಕ ಸಂದರ್ಭಗಳನ್ನು ಗುರುತಿಸುತ್ತಾ, ವಿಸ್ತರಿಸಬಹುದಾ ಮತ್ತು ಹೆಚ್ಚಿನ ಪ್ರಭಾವ ಬೀರುವ ಆರೋಗ್ಯ ಕ್ರಮಗಳನ್ನು ವಿನ್ಯಾಸಗೊಳಿಸಲು ಪರಸ್ಪರ ಕಲಿಕೆ ಮತ್ತು ಸಾಮೂಹಿಕ ಪರಿಣತಿಯನ್ನು ಬಳಸಿಕೊಳ್ಳುವ ಪ್ರಾಮುಖ್ಯತೆಯನ್ನು ಅವರು ಒತ್ತಿ ಹೇಳಿದರು.

ಉತ್ತಮ ಪದ್ಧತಿಗಳನ್ನು ಹಂಚಿಕೊಳ್ಳುವುದು, ಆರೋಗ್ಯ ಮೂಲಸೌಕರ್ಯಗಳನ್ನು ಬಲಪಡಿಸುವುದು ಮತ್ತು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವ ಸಾಮರ್ಥ್ಯವಿರುವ ಸ್ಥಿತಿಸ್ಥಾಪಕ ಆರೋಗ್ಯ ವ್ಯವಸ್ಥೆಗಳನ್ನು ನಿರ್ಮಿಸುವ ಮಹತ್ವವನ್ನು ಸತತ ಬ್ರಿಕ್ಸ್ ಆರೋಗ್ಯ ಸಚಿವರ ಸಭೆಗಳು ಮತ್ತು ಘೋಷಣೆಗಳು ಪುನರುಚ್ಚರಿಸಿವೆ ಎಂದು ಕಾರ್ಯದರ್ಶಿಯವರು ಹೇಳಿದರು. ಜಂಟಿ ಸಂಶೋಧನೆ ಮತ್ತು ಅಭಿವೃದ್ಧಿ, ಲಸಿಕೆಗಳು ಮತ್ತು ಔಷಧಿಗಳ ಸಮಾನ ಲಭ್ಯತೆ ಮತ್ತು ಸಾಮರ್ಥ್ಯ ವೃದ್ಧಿಯ ಉಪಕ್ರಮಗಳಲ್ಲಿ ಹೆಚ್ಚಿನ ಸಹಕಾರದ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಅಸ್ತಿತ್ವದಲ್ಲಿರುವ ಆದ್ಯತೆಗಳಿಗೆ ಬದ್ಧತೆಯನ್ನು ಪುನರುಚ್ಚರಿಸುವ ಸಂದರ್ಭದಲ್ಲಿಯೇ, ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು ಭಾರತದ ಅಧ್ಯಕ್ಷತೆಯ ಅಡಿಯಲ್ಲಿ ಎರಡು ಹೊಸ ಆದ್ಯತೆಯ ಕ್ಷೇತ್ರಗಳನ್ನು ಪ್ರಸ್ತಾವಿಸಿದರು:
- ಆರೋಗ್ಯಕರ ಜೀವನಶೈಲಿಗಾಗಿ ಬ್ರಿಕ್ಸ್ ಮಿಷನ್: ಆರೋಗ್ಯಕರ ನಡವಳಿಕೆಗಳನ್ನು ಉತ್ತೇಜಿಸುವುದು ಮತ್ತು ಅಸಮತೋಲಿತ ಆಹಾರ, ದೈಹಿಕ ಚಟುವಟಿಕೆಯ ಕೊರತೆ, ತಂಬಾಕು ಬಳಕೆ ಮತ್ತು ಮದ್ಯದ ಹಾನಿಕಾರಕ ಬಳಕೆಯಂತಹ ಪ್ರಮುಖ ಅಪಾಯಕಾರಿ ಅಂಶಗಳನ್ನು ತಡೆಗಟ್ಟುವ ಗುರಿ ಹೊಂದಿದೆ.
- ಮಾನಸಿಕ ಆರೋಗ್ಯ ಮತ್ತು ಸ್ವಾಸ್ಥ್ಯದ ಉತ್ತೇಜನ: ಮಾನಸಿಕ ಆರೋಗ್ಯ ಸೇವೆಗಳನ್ನು ಬಲಪಡಿಸುವುದು, ಮಾನಸಿಕ ಕಾಯಿಲೆಗಳ ಬಗೆಗಿನ ಸಾಮಾಜಿಕ ಕಳಂಕವನ್ನು ಹೋಗಲಾಡಿಸುವುದು ಮತ್ತು ಮಾನಸಿಕ ಆರೋಗ್ಯವನ್ನು ವಿಶಾಲವಾದ ಸಾರ್ವತ್ರಿಕ ಆರೋಗ್ಯ ಚೌಕಟ್ಟುಗಳಲ್ಲಿ ಸಂಯೋಜಿಸುವತ್ತ ಗಮನಹರಿಸುತ್ತದೆ.
ಜೈವಿಕ ವೈವಿಧ್ಯತೆ ಮತ್ತು ಸ್ಥಳೀಯ ಜ್ಞಾನ ಪದ್ಧತಿಗಳಲ್ಲಿ ಬೇರೂರಿರುವ ಸಾಕ್ಷ್ಯಾಧಾರಿತ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗೆ ಭಾರತವು ನೀಡುತ್ತಿರುವ ಪ್ರಾಮುಖ್ಯತೆಯನ್ನು ಅವರು ಎತ್ತಿ ತೋರಿಸಿದರು. ಇದು ಸಾರ್ವತ್ರಿಕ ಆರೋಗ್ಯ ರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡಬಲ್ಲದು ಎಂದು ಹೇಳಿದ ಅವರು, ಈ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸಲು ಕರೆ ನೀಡಿದರು.
ಬಹುವಿಧದ ಸಹಕಾರ ಮತ್ತು ಪಾಲುದಾರಿಕೆಯ ಪ್ರಾಮುಖ್ಯತೆಯನ್ನು ಪುನರುಚ್ಚರಿಸಿದ ಕೇಂದ್ರ ಆರೋಗ್ಯ ಕಾರ್ಯದರ್ಶಿಯವರು, ಆರೋಗ್ಯ ವಿಭಾಗದ ಅಡಿಯಲ್ಲಿ ನಡೆಯುವ ಈ ಚರ್ಚೆಗಳು ಬ್ರಿಕ್ಸ್ ರಾಷ್ಟ್ರಗಳ ನಡುವೆ ಸಹಕಾರವನ್ನು ಬಲಪಡಿಸುತ್ತವೆ ಮತ್ತು ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸುತ್ತವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಸಮಾನ ಬದ್ಧತೆಗಳನ್ನು ಜಾಗತಿಕ ಆರೋಗ್ಯಕ್ಕಾಗಿ ಸ್ಪಷ್ಟ ಫಲಿತಾಂಶಗಳಾಗಿ ಪರಿವರ್ತಿಸಲು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಅವರು ಎಲ್ಲಾ ನಿಯೋಗಗಳಿಗೆ ಕರೆ ನೀಡಿದರು.

ಸಭೆಯು ಬ್ರಿಕ್ಸ್ ಆರೋಗ್ಯ ಕಾರ್ಯಕಾರಿ ಗುಂಪಿನ ಅಡಿಯಲ್ಲಿ ಗುರುತಿಸಲಾದ ಒಂಬತ್ತು ಆದ್ಯತೆಯ ಕ್ಷೇತ್ರಗಳ ಕುರಿತು ಚರ್ಚಿಸಿತು. ಅವುಗಳೆಂದರೆ: (i) ಬ್ರಿಕ್ಸ್ ಟಿಬಿ ಸಂಶೋಧನಾ ಜಾಲ; (ii) ಬ್ರಿಕ್ಸ್ ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಪ್ರಾಧಿಕಾರಗಳ ನಡುವೆ ಸಹಯೋಗ; (iii) ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಮತ್ತು ಪ್ರತಿಕ್ರಿಯೆಗಾಗಿ ಬ್ರಿಕ್ಸ್ ಸಮಗ್ರ ಮುನ್ನೆಚ್ಚರಿಕೆ ವ್ಯವಸ್ಥೆ; (iv) ದೂರದ ಪ್ರದೇಶಗಳಲ್ಲಿನ ವಿಶೇಷ ಆರೋಗ್ಯ ರಕ್ಷಣೆ ಸೇರಿದಂತೆ ನಿರಂತರ ಆರೈಕೆಗಾಗಿ ಡಿಜಿಟಲ್ ಆರೋಗ್ಯ ಸಂರಚನೆ; (v) ಆರೋಗ್ಯಕರ ಜೀವನಶೈಲಿಗಾಗಿ ಬ್ರಿಕ್ಸ್ ಮಿಷನ್; (vi) ಮಾನಸಿಕ ಆರೋಗ್ಯ ಮತ್ತು ಸ್ವಾಸ್ಥ್ಯದ ಉತ್ತೇಜನ; (vii) ಸಾಂಪ್ರದಾಯಿಕ, ಪೂರಕ ಮತ್ತು ಸಮಗ್ರ ವೈದ್ಯಕೀಯ ಪದ್ಧತಿ (ಟಿಸಿಐಎಂ); (viii) ಆರೋಗ್ಯದ ಸಾಮಾಜಿಕ ನಿರ್ಧಾರಕಗಳಿಂದ ಉಂಟಾಗುವ ರೋಗಗಳ ವಿರುದ್ಧ ಹೋರಾಟ (ಡಿ ಡಿ ಎಸ್ ಡಿ ಎಚ್); ಮತ್ತು (ix) ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಬ್ರಿಕ್ಸ್ ಜಾಲ.
ಈ ಆದ್ಯತೆಯ ಕ್ಷೇತ್ರಗಳು ಸಂಶೋಧನೆ, ನಾವೀನ್ಯತೆ, ನಿಯಂತ್ರಕ ಸಮನ್ವಯ, ಡಿಜಿಟಲ್ ಆರೋಗ್ಯ ಮತ್ತು ಸಮಾನ ಆರೋಗ್ಯ ವಿತರಣೆಯಲ್ಲಿ ಸಹಕಾರವನ್ನು ಬಲಪಡಿಸುವ ಗುರಿಯನ್ನು ಹೊಂದಿವೆ.

ಭಾರತದ ನಾಯಕತ್ವ ಮತ್ತು ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವ ವಿಷಯವನ್ನು ಸದಸ್ಯ ರಾಷ್ಟ್ರಗಳು ಸ್ವಾಗತಿಸಿದವು. ಬ್ರೆಜಿಲ್, ಚೀನಾ, ಈಜಿಪ್ಟ್, ಇಥಿಯೋಪಿಯಾ ಮತ್ತು ಇಂಡೋನೇಷ್ಯಾ ದೇಶಗಳು ಆರೋಗ್ಯಕರ ಜೀವನಶೈಲಿ ಮತ್ತು ಮಾನಸಿಕ ಸ್ವಾಸ್ಥ್ಯದ ಹೊಸ ಆದ್ಯತೆಗಳಿಗೆ ಹಾಗೂ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳನ್ನು ಆರೋಗ್ಯ ವ್ಯವಸ್ಥೆಯಲ್ಲಿ ಸಂಯೋಜಿಸಲು ತಮ್ಮ ದೃಢ ಬೆಂಬಲವನ್ನು ವ್ಯಕ್ತಪಡಿಸಿದವು. ಕ್ಷಯರೋಗದ ಕುರಿತ ಸಹಯೋಗ, ಸಾಂಕ್ರಾಮಿಕ ರೋಗಗಳ ಮುನ್ನೆಚ್ಚರಿಕೆ ವ್ಯವಸ್ಥೆ, ದೂರದ ಪ್ರದೇಶಗಳಿಗೆ ಆರೋಗ್ಯ ಸೇವೆ ತಲುಪಿಸಲು ಡಿಜಿಟಲ್ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದು ಮತ್ತು ಔಷಧಿ ಹಾಗೂ ಲಸಿಕೆಗಳ ಸ್ಥಳೀಯ ಉತ್ಪಾದನೆಯಲ್ಲಿ ಸಹಕಾರವನ್ನು ಹೆಚ್ಚಿಸುವ ಬಗ್ಗೆ ಅವು ಒತ್ತು ನೀಡಿದವು. ಸಾರ್ವತ್ರಿಕ ಆರೋಗ್ಯ ರಕ್ಷಣೆ ಮತ್ತು ಆರೋಗ್ಯ ತಂತ್ರಜ್ಞಾನಗಳ ನ್ಯಾಯಸಮ್ಮತ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಎಲ್ಲಾ ರಾಷ್ಟ್ರಗಳ ಸಮಾನ ಗುರಿಯಾಗಿದೆ ಎಂದು ಈ ರಾಷ್ಟ್ರಗಳು ತಮ್ಮ ಹೇಳಿಕೆಗಳಲ್ಲಿ ತಿಳಿಸಿದವು.
ಸಭೆಯು ಆದ್ಯತೆಯ ಫಲಿತಾಂಶಗಳು ಮತ್ತು 2026ರ ಬ್ರಿಕ್ಸ್ ಆರೋಗ್ಯ ವಿಭಾಗದ ಅಡಿಯಲ್ಲಿ ನಡೆಯಲಿರುವ ತಾಂತ್ರಿಕ ಸಭೆಗಳು ಹಾಗೂ ಸಚಿವ ಮಟ್ಟದ ಚರ್ಚೆಗಳು ಸೇರಿದಂತೆ ಮುಂದಿನ ಕಾರ್ಯಚಟುವಟಿಕೆಗಳ ಮಾರ್ಗಸೂಚಿಯ ಕುರಿತು ಒಮ್ಮತದೊಂದಿಗೆ ಮುಕ್ತಾಯವಾಯಿತು.
ಪಾಲುದಾರಿಕೆ, ನಾವೀನ್ಯತೆ ಮತ್ತು ಸಮಾನ ಜವಾಬ್ದಾರಿಯ ಮೂಲಕ ಬ್ರಿಕ್ಸ್ ಕಾರ್ಯಸೂಚಿಯನ್ನು ಮುನ್ನಡೆಸಲು ಮತ್ತು ಜಾಗತಿಕ ಆರೋಗ್ಯ ಭದ್ರತೆಗೆ ಅರ್ಥಪೂರ್ಣ ಕೊಡುಗೆ ನೀಡಲು ಭಾರತವು ಬದ್ಧವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಪುನರುಚ್ಚರಿಸಿತು.
*****
(ಪ್ರಕಟಣೆ ಐ.ಡಿ.: 2252368)
ವಿಸಿಟರ್ ಕೌಂಟರ್ : 13