ಔಷಧೀಯ ಇಲಾಖೆ
ನೀತಿಯ ಉತ್ತೇಜನ ಮತ್ತು ವಲಯದಲ್ಲಿ ನಾವೀನ್ಯತೆಯ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಿದ 9ನೇ ಇಂಡಿಯಾ ಫಾರ್ಮಾ
ಬಯೋಸಿಮಿಲರ್‌ಗಳು ಮತ್ತು ವಿಶೇಷ ಔಷಧಿಗಳ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುವ ಮೂಲಕ ಜಾಗತಿಕ ಫಾರ್ಮಾ ಆಯಾಮ ಮುನ್ನಡೆಸಲು ಭಾರತ ಸಿದ್ಧ: ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಜೆ.ಪಿ. ನಡ್ಡಾ
ಫಾರ್ಮಾ ವಲಯವು ನಾವೀನ್ಯತೆ ಆಧರಿತ ವಿಭಾಗಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕೆಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವೆ ಶ್ರೀಮತಿ ಅನುಪ್ರಿಯಾ ಪಟೇಲ್ ಹೇಳಿಕೆ; ಉದ್ಯಮ-ಶೈಕ್ಷಣಿಕ ಸಹಯೋಗ ಮತ್ತಷ್ಟು ಬಲಪಡಿಸಲು ಕರೆ
ಪ್ರಕಟಣಾ ದಿನಾಂಕ:
13 APR 2026 3:54PM by PIB Bengaluru

ಭಾರತ ಸರ್ಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಔಷಧ ಇಲಾಖೆಯ (ಡಿಒಪಿ) ಪ್ರಮುಖ ಕಾರ್ಯಕ್ರಮವಾದ ಇಂಡಿಯಾ ಫಾರ್ಮಾ 2026 ರ 9 ನೇ ಆವೃತ್ತಿಯು ನವದೆಹಲಿಯಲ್ಲಿಂದು ಆರಂಭವಾಯಿತು. ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (ಎಫ್ ಐಸಿಸಿಐ ) ಮತ್ತು ಭಾರತೀಯ ಔಷಧೀಯ ಒಕ್ಕೂಟ (ಐಪಿಎ ) ಸಹಯೋಗದೊಂದಿಗೆ ಆಯೋಜಿಸಲಾದ ಎರಡು ದಿನಗಳ ಸಮ್ಮೇಳನ (ಏಪ್ರಿಲ್ 13–14) ಜಾಗತಿಕ ಔಷಧೀಯ ಮತ್ತು ಆರೋಗ್ಯ ರಕ್ಷಣಾ ಪೂರಕ ವ್ಯವಸ್ಥೆಯಾದ್ಯಂತದ ಪ್ರಮುಖ ಪಾಲುದಾರರನ್ನು ಒಗೂಡಿಸುತ್ತದೆ ಹಾಗೂ ಇದು ನಾವೀನ್ಯತೆ, ಸ್ವಾವಲಂಬನೆ ಮತ್ತು ಜಾಗತಿಕ ನಾಯಕತ್ವದ ಮೇಲೆ ಹೆಚ್ಚಿನ ಗಮನಹರಿಸಲಿದೆ.

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಜೆ.ಪಿ. ನಡ್ಡಾ, ಉದ್ಘಾಟನಾ ಗೋಷ್ಠಿಯನ್ನುದ್ದೇಶಿಸಿ ವರ್ಚುವಲ್ ರೂಪದಲ್ಲಿ ಮಾತನಾಡಿ, ಈ ವೇದಿಕೆಯು ಭಾರತದ ಔಷಧೀಯ ಕ್ಷೇತ್ರದ ಶಕ್ತಿ ಮತ್ತು ಬೆಳೆಯುತ್ತಿರುವ ಜಾಗತಿಕ ಪ್ರಸ್ತುತತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಒತ್ತಿ ಹೇಳಿದರು. ಕೈಗೆಟುಕುವ ಜೆನೆರಿಕ್ ಔಷಧಿಗಳಲ್ಲಿ ನಾಯಕತ್ವದಿಂದಾಗಿ ಭಾರತವು ಬಹಳ ಹಿಂದಿನಿಂದಲೂ "ವಿಶ್ವದ ಔಷಧಾಲಯ" ಎಂದು ಗುರುತಿಸಲ್ಪಟ್ಟಿದೆ, ಆದರೆ ಜಾಗತಿಕ ಆಯಾಮಗಳು ಈಗ ಜೈವಿಕ ಔಷಧಗಳು, ಬಯೋಸಿಮಿಲರ್‌ಗಳು ಮತ್ತು ವಿಶೇಷ ಔಷಧಿಗಳ ಕಡೆಗೆ ವೇಗವಾಗಿ ಬದಲಾಗುತ್ತಿದೆ ಎಂದು ಅವರು ಉಲ್ಲೇಖಿಸಿದರು. "ಈ ವಿಕಸನಗೊಳ್ಳುತ್ತಿರುವ ವಾತಾವರಣದಲ್ಲಿ, ಭಾರತವು ಹೊಂದಿಕೊಳ್ಳಲು ಮಾತ್ರವಲ್ಲದೆ ಜಾಗತಿಕ ನಾಯಕನಾಗಿ ಹೊರಹೊಮ್ಮುವ ಉತ್ತಮ ಸ್ಥಾನದಲ್ಲಿದೆ" ಎಂದು ಹೇಳಿದರು. ನಾವೀನ್ಯತೆಯನ್ನು ಬೆಳೆಸುವ ಮತ್ತು ಸಂಶೋಧನಾ ಸಾಮರ್ಥ್ಯಗಳನ್ನು ಬಲಪಡಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದ ಅವರು, ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಯೋಫಾರ್ಮಾಸ್ಯುಟಿಕಲ್ ನಾವೀನ್ಯತೆಯಲ್ಲಿ ಸಾಮರ್ಥ್ಯಗಳನ್ನು ಹೆಚ್ಚಿಸುವ ಗುರಿಯೊಂದಿಗೆ ಇತ್ತೀಚೆಗೆ ಆರಂಭಿಸಲಾದ 10,000 ಕೋಟಿ ರೂ. ವೆಚ್ಚದ ಬಯೋಫಾರ್ಮಾಸ್ ಶಕ್ತಿ ಉಪಕ್ರಮವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.
ಔಷಧ ಮತ್ತು ವೈದ್ಯಕೀಯ ತಂತ್ರಜ್ಞಾನದಲ್ಲಿ ಸಂಶೋಧನೆಯನ್ನು ಉತ್ತೇಜಿಸಲು ಪಿಆರ್ ಐಪಿ ಯೋಜನೆಯಂತಹ ಪೂರಕ ಉಪಕ್ರಮಗಳ ಬಗ್ಗೆ ಒತ್ತಿ ಹೇಳಿದ ಅವರು, ಇದು ಉದ್ಯಮ-ಶೈಕ್ಷಣಿಕ ಸಹಯೋಗವನ್ನು ಮತ್ತಷ್ಟು ಬಲಗೊಳಿಸಲು ಮತ್ತು ನವೀನ ಚಿಕಿತ್ಸೆಗಳ ಅಭಿವೃದ್ಧಿಯನ್ನು ವೇಗಗೊಳಿಸಲು ಪ್ರಯತ್ನಿಸುತ್ತದೆ. ದೇಶೀಯ ಉತ್ಪಾದನೆಯನ್ನು ಬಲಪಡಿಸುವುದು ಪ್ರಮುಖ ಆದ್ಯತೆಯಾಗಿ ಉಳಿದಿದೆ, ಇದನ್ನು ಉತ್ಪಾದನೆ ಸಂಬಂಧಿತ ಪ್ರೋತ್ಸಾಹಕ (ಪಿಎಲ್ ಐ) ಯೋಜನೆಗಳು ಮತ್ತು ಸ್ವಾವಲಂಬನೆ ಮತ್ತು ಸ್ಥಿತಿಸ್ಥಾಪಕ ಪೂರೈಕೆ ಸರಣಿಗಳನ್ನು ವೃದ್ಧಿಸಲು ಬೃಹತ್ ಔಷಧ ಪಾರ್ಕ್‌ಗಳ ಅಭಿವೃದ್ಧಿಯಂತಹ ಯೋಜನೆಗಳು ಬೆಂಬಲಿಸುತ್ತವೆ. ದೇಶಾದ್ಯಂತ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ಔಷಧಿಗಳ ಲಭ್ಯತೆಯನ್ನು ವಿಸ್ತರಿಸುವುದನ್ನು ಮುಂದುವರಿಸುವ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನದಂತಹ ಉಪಕ್ರಮಗಳ ಮೂಲಕ ಕೈಗೆಟುಕುವ ಆರೋಗ್ಯ ಸೇವೆಗೆ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.
ಭಾರತ ಫಾರ್ಮಾ 2026 ಈ ವಲಯಕ್ಕೆ ಸಂವಾದ, ಪಾಲುದಾರಿಕೆಗಳು ಮತ್ತು ಭವಿಷ್ಯದ ನೀಲನಕ್ಷೆಯನ್ನು ರೂಪಿಸಲು ಒಂದು ಪ್ರಮುಖ ವೇದಿಕೆಯನ್ನು ಒದಗಿಸುತ್ತದೆ ಎಂದು ಅವರು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ರಾಸಾಯನಿಕ ಮತ್ತು ರಸಗೊಬ್ಬರಗಳ ರಾಜ್ಯ ಸಚಿವೆ ಶ್ರೀಮತಿ ಅನುಪ್ರಿಯಾ ಪಟೇಲ್, ಭಾರತವು ಜಾಗತಿಕ ಜೆನೆರಿಕ್ಸ್ ನಾಯಕನಿಂದ ಉದಯೋನ್ಮುಖ ಬಯೋಫಾರ್ಮಾ ನಾವೀನ್ಯತೆ ಕೇಂದ್ರಕ್ಕೆ ಗಮನಾರ್ಹ ಪರಿವರ್ತನೆಗೆ ಒಳಗಾಗುತ್ತಿದೆ ಎಂದು ಬಲವಾಗಿ ಪ್ರತಿಪಾದಿಸಿದರು. ಭಾರತವು ಸದ್ಯ ಜಾಗತಿಕ ಜೆನೆರಿಕ್ ಔಷಧಿಗಳಲ್ಲಿ ಸುಮಾರು ಶೇ.20ರಷ್ಟು ಕೊಡುಗೆ ನೀಡುತ್ತದೆ ಮತ್ತು ಜಾಗತಿಕ ಲಸಿಕೆ ಬೇಡಿಕೆಯ ಸುಮಾರು ಶೇ.70ರಷ್ಟನ್ನು ಪೂರೈಸುತ್ತದೆ ಎಂದು ಅವರು ಉಲ್ಲೇಖಿಸಿ, ಇದು ದೇಶದ ಸದೃಢವಾದ ಉತ್ಪಾದನಾ ಸಾಮರ್ಥ್ಯಗಳನ್ನು ಒತ್ತಿಹೇಳುತ್ತದೆ ಎಂದರು.
ಭವಿಷ್ಯದ ಅವಕಾಶಗಳನ್ನುಬಗ್ಗೆ ಬೆಳಕು ಚೆಲ್ಲಿದ ಅವರು, ಬಯೋಲಾಜಿಕ್ಸ್ ಮತ್ತು ಬಯೋಸಿಮಿಲರ್‌ಗಳಿಗೆ ಜಾಗತಿಕ ಬೇಡಿಕೆ ವೇಗವಾಗಿ ವಿಸ್ತರಿಸುತ್ತಿದೆ ಎಂದು ಅವರು ಹೇಳಿದರು, ಬಯೋಸಿಮಿಲರ್‌ಗಳ ಮಾರುಕಟ್ಟೆ 2030 ರ ವೇಳೆಗೆ 75 ಬಿಲಿಯನ್ ಅಮೆರಿಕನ್ ಡಾಲರ್ ತಲುಪುವ ನಿರೀಕ್ಷೆಯಿದೆ. ನವೀನ ಔಷಧಗಳು ಜಾಗತಿಕ ಔಷಧ ಮಾರುಕಟ್ಟೆ ಮೌಲ್ಯದ ಸುಮಾರು ಶೇ.8% ರಷ್ಟಿದೆ ಎಂದು ಅವರು ಗಮನಸೆಳೆದರು, ಇದು ಭಾರತವು ನಾವೀನ್ಯತೆ ಆಧರಿಸಿದ ವಿಭಾಗಗಳ ಮೇಲೆ ಹೆಚ್ಚಿನ ಗಮನವನ್ನು ಹರಿಸುವ ಅಗತ್ಯತೆಯನ್ನು ಪ್ರತಿಪಾದಿಸುತ್ತದೆ ಎಂದರು.
ಔಷಧ ಅನ್ವೇಷಣೆ ಮತ್ತು ಅಭಿವೃದ್ಧಿಯಲ್ಲಿ ಕೃತಕ ಬುದ್ಧಿಮತ್ತೆಯ ಸಂಯೋಜನೆಯಣದ ಬಗ್ಗೆಯೂ ಶ್ರೀಮತಿ ಪಟೇಲ್ ವಿವರಿಸಿದರು. ಮುಂದುವರಿದ ಸಂಶೋಧನೆ ಮತ್ತು ನಾವೀನ್ಯತೆಯನ್ನು ಬೆಂಬಲಿಸಲು ಎನ್ಐಪಿಇಆರ್ (NIPER) ಗಳು ಮತ್ತು ಐಐಟಿ (IIT) ಗಳಂತಹ ಪ್ರಮುಖ ಸಂಸ್ಥೆಗಳ ಮೂಲಕ ಮಾನವ ಸಂಪನ್ಮೂಲವನ್ನು ವೃದ್ಧಿಸುವ ಮಹತ್ವವನ್ನು ಅವರು ಒತ್ತಿ ಹೇಳಿದರು.

ಔಷಧ ಇಲಾಖೆಯ ಕಾರ್ಯದರ್ಶಿ ಶ್ರೀ ಮನೋಜ್ ಜೋಶಿ, ನಾವೀನ್ಯತೆಯ ಸಮಯಾವಧಿಯನ್ನು ವೇಗಗೊಳಿಸುವ, ನವೋದ್ಯಮ ಪೂರಕ ವ್ಯವಸ್ಥೆಗಳನ್ನು ಬಲಪಡಿಸುವ ಮತ್ತು ಕ್ಲಿನಿಕಲ್ ಪ್ರಯೋಗಗಳು ಮತ್ತು ಮುಂದುವರಿದ ಸಂಶೋಧನೆಗಾಗಿ ಸದೃಢವಾದ ಮೂಲಸೌಕರ್ಯವನ್ನು ನಿರ್ಮಿಸುವ ಅಗತ್ಯವನ್ನು ಒತ್ತಿ ಹೇಳಿದರು. ವರ್ಧಿತ ಹಣಕಾಸು ಕಾರ್ಯವಿಧಾನಗಳು, ಉದ್ಯಮ-ಸರ್ಕಾರದ ನಿಕಟ ಸಹಯೋಗ ಮತ್ತು ಕೌಶಲ್ಯಪೂರ್ಣ ಪ್ರತಿಭೆಗಳ ಅಭಿವೃದ್ಧಿಯ ಮಹತ್ವವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿ ಶ್ರೀಮತಿ ಪುಣ್ಯ ಸಲಿಲಾ ಶ್ರೀವಾಸ್ತವ, ನಿಯಂತ್ರಣ ಪೂರಕ ವ್ಯವಸ್ಥೆಯನ್ನು ಬಲಪಡಿಸುವ ಮತ್ತು ನಾವೀನ್ಯತೆಯನ್ನು ಸಕ್ರಿಯಗೊಳಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಭಾರತವನ್ನು ‘ಪ್ರಪಂಚದ ಔಷಧಾಲಯ’ ದಿಂದ “ಜಗತ್ತಿಗೆ ನಾವೀನ್ಯಕಾರ’’ ವಾಗಿ ಪರಿವರ್ತಿಸುವ ಗುರಿಯೊಂದಿಗೆ ಅನುಮೋದನೆ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ಮತ್ತು ಸಂಶೋಧನೆಗೆ ಸುಗವ ವಾತಾವರಣ ಸೃಷ್ಟಿಗೆ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಉಲ್ಲೇಖಿಸಿದರು.

ಎಫ್ ಐ ಸಿ ಸಿ ಐ ಫಾರ್ಮಾ ಸಮಿತಿಯ ಅಧ್ಯಕ್ಷರು ಮತ್ತು ಮ್ಯಾನ್‌ಕೈಂಡ್ ಫಾರ್ಮಾದ COO ಶ್ರೀ ಅರ್ಜುನ್ ಜುನೇಜಾ ಅವರು ಭಾರತದ ಬಲವಾದ ಔಷಧೀಯ ನೆಲೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿ, 3,000 ಕ್ಕೂ ಅಧಿಕ ಕಂಪನಿಗಳು ಮತ್ತು 10,500 ಕ್ಕೂ ಅಧಿಕ ಉತ್ಪಾದನಾ ಸೌಲಭ್ಯಗಳ ಉಪಸ್ಥಿತಿಯನ್ನು ಉಲ್ಲೇಖಿಸಿದರು. ಅದರಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಹೊರಗೆ ಅತಿ ಹೆಚ್ಚು USFDA- ಕಂಪ್ಲೈಂಟ್ ಸ್ಥಾವರಗಳು ಸೇರಿವೆ. ನಾವೀನ್ಯತೆ-ನೇತೃತ್ವದ ಬೆಳವಣಿಗೆಯನ್ನು ಹೆಚ್ಚಿಸಲು ಭಾರತೀಯ ಮತ್ತು ಜಾಗತಿಕ ಆಟಗಾರರ ನಡುವೆ ಆಳವಾದ ಸಹಯೋಗದ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಎಫ್ ಐಸಿಸಿಐ ಫಾರ್ಮಾ ಸಮಿತಿಯ ಸಹ-ಅಧ್ಯಕ್ಷರು ಮತ್ತು ಸಿಪ್ಲಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ & ಜಾಗತಿಕ ಸಿಇಒ ಶ್ರೀ ಅಚಿನ್ ಗುಪ್ತಾ ಅವರು ಧನ್ಯವಾದ ಅರ್ಪಿಸಿದರು.
ಎರಡು ದಿನಗಳ ಸಮ್ಮೇಳನ ಮತ್ತು ಪ್ರದರ್ಶನವು ನಾವೀನ್ಯತೆಗಾಗಿ ನೀತಿ ಚೌಕಟ್ಟುಗಳು, ಔಷಧ ಅನ್ವೇಷಣೆಯಲ್ಲಿ ಕೃತಕ ಬುದ್ಧಿಮತ್ತೆ, ಮುಂದಿನ ಪೀಳಿಗೆಯ ತಂತ್ರಜ್ಞಾನಗಳು ಮತ್ತು ಜೀವ ವಿಜ್ಞಾನಗಳಲ್ಲಿ ಭಾರತದ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ತಂತ್ರಗಳ ಕುರಿತು ಚರ್ಚೆಗಳನ್ನು ಒಳಗೊಂಡಿದೆ. ಈ ಕಾರ್ಯಕ್ರಮವು ಔಷಧೀಯ ಕ್ಷೇತ್ರದ ಭವಿಷ್ಯದ ನೀಲನಕ್ಷೆಯನ್ನು ರೂಪಿಸುವಲ್ಲಿ ಮತ್ತು ಜಾಗತಿಕ ಆರೋಗ್ಯ ರಕ್ಷಣಾ ನಾಯಕನಾಗಿ ಭಾರತದ ಸ್ಥಾನವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
*****
(ಪ್ರಕಟಣೆ ಐ.ಡಿ.: 2251598)
ವಿಸಿಟರ್ ಕೌಂಟರ್ : 6