ಕೃಷಿ ಸಚಿವಾಲಯ
ರೈತರಿಗಾಗಿ ಎಲ್ಲಾ ಯೋಜನೆಗಳನ್ನು ಒಂದೇ ಸೂರಿನಡಿ ತರಲು ಮೂರು ದಿನಗಳ ರಾಷ್ಟ್ರೀಯ ಕೃಷಿ ಮೇಳ
ರಾಯಸೇನ್ ಕೃಷಿ ಮೇಳದಲ್ಲಿ ಸುಧಾರಿತ ಬೀಜಗಳು, ಸಮತೋಲಿತ ರಸಗೊಬ್ಬರಗಳು, ಸಾವಯವ ಪ್ರಮಾಣೀಕರಣ ಮತ್ತು ರೈತರ ಹಕ್ಕುಗಳ ಬಗ್ಗೆ ಪ್ರಮುಖವಾಗಿ ಚರ್ಚೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್
ಕೃಷಿ ಉತ್ಸವದಲ್ಲಿ ಪಾಲ್ಗೊಳ್ಳಲು ಹಳ್ಳಿಗಳಿಂದ ಸಾವಿರಾರು ರೈತರು; ಕೇಂದ್ರ ಸಚಿವರಿಂದ ಸರಪಂಚ್ ಗಳೊಂದಿಗೆ ಸಂವಾದ
ಪ್ರಕಟಣಾ ದಿನಾಂಕ:
08 APR 2026 9:13PM by PIB Bengaluru
ಮಧ್ಯಪ್ರದೇಶದ ರಾಯಸೇನ್ ನಲ್ಲಿ ಏಪ್ರಿಲ್ 11 ರಿಂದ 13 ರವರೆಗೆ ನಡೆಯಲಿರುವ ರಾಷ್ಟ್ರೀಯ ಕೃಷಿ ಮೇಳದಲ್ಲಿ ಬೆಳೆ ವಿಮೆ, ಸಾಲ, ಕೃಷಿ ಮೂಲಸೌಕರ್ಯ ನಿಧಿ, ಸುಧಾರಿತ ಬೀಜಗಳು ಮತ್ತು ರಸಗೊಬ್ಬರಗಳು, ಸಾವಯವ ಪ್ರಮಾಣೀಕರಣ, ರೈತ ಉತ್ಪಾದಕ ಸಂಸ್ಥೆ (ಎಫ್ ಪಿ ಒ) ಮಾರುಕಟ್ಟೆ ಮತ್ತು ಭವಿಷ್ಯದ 'ಕೃಷಿ ಮಾರ್ಗಸೂಚಿ'ಯ ಸಮಗ್ರ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ರೈತರು ಪಡೆಯಲಿದ್ದಾರೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಬುಧವಾರ ಈ ಪ್ರದೇಶದ ಸರಪಂಚರೊಂದಿಗೆ ವರ್ಚುಯಲ್ ರೂಪದಲ್ಲಿ ಸಂವಾದ ನಡೆಸಿ, ಪ್ರತಿ ಹಳ್ಳಿಯಿಂದ ಗರಿಷ್ಠ ಸಂಖ್ಯೆಯಲ್ಲಿ ರೈತರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವಂತೆ ಮತ್ತು ಸಾಮೂಹಿಕ ಒಳಗೊಳ್ಳುವಿಕೆಯ ಮೂಲಕ ಮೇಳವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ರೈತರಿಗೆ 'ಜೀವಂತ ವಿಶ್ವವಿದ್ಯಾಲಯ'ದಂತೆ ಈ ಮೂರು ದಿನಗಳು
ರಾಯಸೇನ್ ನಲ್ಲಿ ಏಪ್ರಿಲ್ 11 ರಿಂದ 13 ರವರೆಗೆ ನಡೆಯಲಿರುವ ರಾಷ್ಟ್ರ ಮಟ್ಟದ ಕೃಷಿ ಮೇಳವು ಮಹತ್ವದ ಪರಿವರ್ತಕ 'ಕೃಷಿ ಮಹಾಕುಂಭ'ವಾಗಿರಲಿದ್ದು, ಬೀಜದಿಂದ ಮಾರುಕಟ್ಟೆಯವರೆಗೆ ಮತ್ತು ವಿಮೆಯಿಂದ ಸಾಲದವರೆಗೆ ಎಲ್ಲಾ ಪರಿಹಾರಗಳು ಒಂದೆಡೆಯಲ್ಲಿ ಲಭ್ಯವಿರಲಿದೆ ಎಂದು ಶ್ರೀ ಚೌಹಾಣ್ ಹೇಳಿದ್ದಾರೆ. ಈ ಮೂರು ದಿನಗಳು ರೈತರಿಗೆ "ಜೀವಂತ ವಿಶ್ವವಿದ್ಯಾಲಯ" ದಂತಿರಲಿದ್ದು, ಅಲ್ಲಿ ಅವರು ಆಧುನಿಕ ಉಪಕರಣಗಳು, ಡ್ರೋನ್ ಗಳು, ಸುಧಾರಿತ ಬೀಜಗಳು, ರಸಗೊಬ್ಬರಗಳು, ಸಾವಯವ ಕೃಷಿ ಪದ್ಧತಿಗಳು ಮತ್ತು ಎಫ್ ಪಿ ಒ ಆಧಾರಿತ ಮಾರುಕಟ್ಟೆ ಮಾದರಿಗಳನ್ನು ಅನ್ವೇಷಿಸಲು ಸಾಧ್ಯವಾಗಲಿದೆ ಎಂದು ಅವರು ಸರಪಂಚರಿಗೆ ವರ್ಚುಯಲ್ ಸಂವಾದದಲ್ಲಿ ವಿವರಿಸಿದ್ದಾರೆ. ಅದೇ ಸಮಯದಲ್ಲಿ, ರೈತರಿಗೆ ವಿಮೆ, ಸಾಲ, ಮೂಲಸೌಕರ್ಯ ಮತ್ತು ಕೃಷಿ ಮಾರ್ಗಸೂಚಿಯ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದ್ದು, ಇದು ಇನ್ನಷ್ಟು ಸುರಕ್ಷಿತ ಮತ್ತು ಸಮೃದ್ಧ ಕೃಷಿ ಭವಿಷ್ಯದತ್ತ ಸಾಗಲು ಪೂರಕವಾಗಿರಲಿದೆ.

ಶ್ರೀ ಚೌಹಾಣ್ ಅವರು ರಾಯ್ ಸೇನ್, ವಿದಿಶಾ, ಸೆಹೋರ್ ಮತ್ತು ಸುತ್ತಮುತ್ತಲಿನ ಗ್ರಾಮ ಪಂಚಾಯತ್ ಗಳ ಸರಪಂಚರೊಂದಿಗೆ ಮೇಳದ ವಿವರವಾದ ನೀಲನಕ್ಷೆಯನ್ನು ಹಂಚಿಕೊಂಡಿದ್ದಾರೆ. ಪ್ರತಿ ಹಳ್ಳಿಯಿಂದ ಗರಿಷ್ಠ ಸಂಖ್ಯೆಯ ರೈತರು, ಮಹಿಳಾ ಸ್ವಸಹಾಯ ಗುಂಪುಗಳು ಮತ್ತು ಎಫ್ ಪಿ ಒ ಸದಸ್ಯರು ಮೇಳದಲ್ಲಿ ಪಾಲ್ಗೊಳ್ಳುವುದನ್ನು ಖಾತರಿಪಡಿಸಿಕೊಳ್ಳುವಂತೆ ಅವರು ಮನವಿ ಮಾಡಿದರು. ಸಾವಿರಾರು ರೈತರಿಗೆ ಈ ಕಾರ್ಯಕ್ರಮದಿಂದ ಅನುಕೂಲವಾಗುವ ನಿರೀಕ್ಷೆಯಿದೆ. ಸರಪಂಚರು ಇದನ್ನು ತಮ್ಮ ಹಳ್ಳಿಗಳಿಗೆ ಮಿಷನ್ ರೂಪದಲ್ಲಿ ಕೈಗೊಂಡಲ್ಲಿ, ಇದು ಮುಂಬರುವ ವರ್ಷಗಳಲ್ಲಿ ಇದು ಕೃಷಿಯ ದಿಸೆಯನ್ನು ರೂಪಿಸುವ ರೈತ-ಚಾಲಿತ ಉತ್ಸವವಾಗಬಹುದು ಎಂದು ಕೇಂದ್ರ ಕೃಷಿ ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಬೆಳೆ ವಿಮೆ, ಕಂಪನಿಗಳು ಮತ್ತು 'ಕೃಷಿ ರಕ್ಷಕ' ವೇದಿಕೆ
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ (PMFBY) ವಿಭಾಗದಲ್ಲಿ, ವಿಮಾ ಕಂಪನಿಗಳು ಆಸಕ್ತ ರೈತರಿಗೆ ಸ್ಥಳದಲ್ಲೇ ಬೆಳೆ ವಿಮಾ ಪಾಲಿಸಿಗಳನ್ನು ಒದಗಿಸಲಿವೆ, ಇದರಿಂದಾಗಿ ಅವರು ನೇರ ವಿಮಾ ರಕ್ಷಣೆ ಪಡೆದು ವಾಪಸಾಗಬಹುದಾಗಿದೆ ಎಂದು ಶ್ರೀ ಚೌಹಾಣ್ ಹೇಳಿದ್ದಾರೆ. 'ಕಿಸಾನ್ ಪಾಠಶಾಲೆ' (ರೈತರ ಕಾರ್ಯಾಗಾರಗಳು), ಎಐಡಿಇ ಅಪ್ಲಿಕೇಶನ್ (ಮಧ್ಯವರ್ತಿ ನೋಂದಣಿಗಾಗಿ ಅಪ್ಲಿಕೇಶನ್), ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ವಸ್ತುಗಳು, ಕಾಮಿಕ್ ಕಿರುಪುಸ್ತಕಗಳು, ಪ್ರಶ್ನೋತ್ತರ ಕಿರುಪುಸ್ತಕಗಳು, ಕರಪತ್ರಗಳು, ಅನುಭವಗಳ ವೀಡಿಯೊಗಳು ಮತ್ತು 'ಕೃಷಿ ರಕ್ಷಕ ಪೋರ್ಟಲ್ ಮತ್ತು ಸಹಾಯವಾಣಿ' ಬಗ್ಗೆ ಮಾಹಿತಿಯ ಮೂಲಕ, ಬೆಳೆ ವಿಮೆಗೆ ಸಂಬಂಧಿಸಿದ ಎಲ್ಲಾ ಪ್ರಶ್ನೆಗಳಿಗೂ ಸ್ಥಳದಲ್ಲಿಯೇ ಉತ್ತರ ಸಿಗಲಿದೆ.
ಮೇಳದಲ್ಲಿನ ತಜ್ಞರು ರೈತರಿಗೆ ಪ್ರೀಮಿಯಂ ಹಂಚಿಕೆ, ಕ್ಲೇಮ್ ಕಾರ್ಯವಿಧಾನಗಳು, ಬೆಳೆ ನಷ್ಟದ ವರದಿ ಮಾಡುವಿಕೆ, ಸಮೀಕ್ಷಾ ಪ್ರಕ್ರಿಯೆಗಳು ಮತ್ತು ಕ್ಲೇಮುಗಳ ಸಕಾಲಿಕ ಇತ್ಯರ್ಥ ಮುಂತಾದ ಅಂಶಗಳ ಕುರಿತು ಸರಳ ಭಾಷೆಯಲ್ಲಿ ಮಾರ್ಗದರ್ಶನ ನೀಡಲಿದ್ದಾರೆ. ರೈತರು ವಿಮೆಯ ಬಗ್ಗೆ ಪ್ರಾಯೋಗಿಕವಾಗಿ ಅರ್ಥೈಸಿಕೊಳ್ಳುವಂತಾಗಲು ಮತ್ತು ಅದನ್ನು ಅಪಾಯ ನಿರ್ವಹಣಾ ಸಾಧನ (ರಿಸ್ಕ್ ಮ್ಯಾನೇಜ್ಮೆಂಟ್ ಟೂಲ್) ಆಗಿ ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತಾಗುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.
ಕೃಷಿ ಸಾಲ, ಕೆಸಿಸಿ ಮತ್ತು ಮೂಲಸೌಕರ್ಯ ನಿಧಿ
ಕೃಷಿ ಸಾಲ ಮತ್ತು ಹಣಕಾಸಿನ ಕುರಿತಾದ ಕಾರ್ಯಕ್ರಮದಲ್ಲಿ, ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಗಳು (ಕೆಸಿಸಿ), ನಿರ್ದಿಷ್ಟ ಅವಧಿ ಸಾಲಗಳು, ಜಂಟಿ ಹೊಣೆಗಾರಿಕಾ ಗುಂಪುಗಳು (ಜೆ ಎಲ್ ಜಿ), ಸ್ವ-ಸಹಾಯ ಗುಂಪು ಸಾಲಗಳು ಮತ್ತು ಕೃಷಿ ಮೂಲಸೌಕರ್ಯ ನಿಧಿಯಡಿಯಲ್ಲಿನ ಅವಕಾಶಗಳ ಬಗ್ಗೆ ತಿಳಿಸಲಾಗುವುದು. ಗೋದಾಮುಗಳು, ಶೀತಲ ಸಂಗ್ರಹಾಗಾರಗಳು, ಪ್ರಾಥಮಿಕ ಸಂಸ್ಕರಣಾ ಸೌಲಭ್ಯಗಳು, ಮೌಲ್ಯವರ್ಧನೆ ಘಟಕಗಳು ಮತ್ತು ಲಾಜಿಸ್ಟಿಕ್ಸ್ ಯೋಜನೆಗಳನ್ನು ಸ್ಥಾಪಿಸುವ ಬಗ್ಗೆ ವಿವರವಾದ ಮಾರ್ಗದರ್ಶನ ನೀಡಲಾಗುವುದು. ಜೊತೆಗೆ ಬಡ್ಡಿ ಸಹಾಯಧನ ಮತ್ತು ಸಾಲ ಖಾತರಿಗಳ ಕುರಿತೂ ಮಾಹಿತಿ ನೀಡಲಾಗುವುದು.
ಸಮರ್ಪಕ ಸಂಗ್ರಹಣೆ, ಸಂಸ್ಕರಣೆ ಮತ್ತು ಸದೃಢ ಮಾರುಕಟ್ಟೆ ಸಂಪರ್ಕಗಳೊಂದಿಗೆ ಉತ್ತಮ ಉತ್ಪಾದನೆಯನ್ನು ಬೆಂಬಲಿಸಿದಾಗ ಮಾತ್ರ 'ಸುರಕ್ಷಿತ ಉತ್ಪನ್ನ, ಸಮೃದ್ಧ ರೈತ' ಗುರಿಯನ್ನು ಸಾಧಿಸಬಹುದು ಎಂಬ ಬಗ್ಗೆ ರೈತರಿಗೆ ತಿಳಿಸಲಾಗುತ್ತದೆ. ರೈತರು ಅರ್ಜಿ ಸಲ್ಲಿಸಲು, ದಾಖಲಾತಿಗಳ ಕಾರ್ಯ ಪೂರ್ಣಗೊಳಿಸಲು ಮತ್ತು ಸ್ಥಳದಲ್ಲೇ ಅನುಮೋದನೆಗಳನ್ನು ಪಡೆಯುವುದನ್ನು ಸಾಧ್ಯವಾಗಿಸಲು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಮಳಿಗೆಗಳನ್ನು ಸ್ಥಾಪಿಸುವ ನಿರೀಕ್ಷೆಯಿದೆ, ಇದು ಕಾರ್ಯವಿಧಾನದ ವಿಳಂಬವಿಲ್ಲದೆ ನೇರವಾಗಿ ಹೂಡಿಕೆಯತ್ತ ಸಾಗಲು ಅನುವು ಮಾಡಿಕೊಡಲಿದೆ.
ಸುಧಾರಿತ ಬೀಜಗಳು, ರಸಗೊಬ್ಬರಗಳು ಮತ್ತು ರೈತರ ಹಕ್ಕುಗಳು
ಬೀಜ ವಿಭಾಗದ ಅಡಿಯಲ್ಲಿ, ಸರ್ಕಾರಿ ಮತ್ತು ಖಾಸಗಿ ಬೀಜ ಕಂಪನಿಗಳು ಸುಧಾರಿತ ಬೀಜಗಳು, ಹೆಚ್ಚಿನ ಇಳುವರಿ ನೀಡುವ ತಳಿಗಳು, ಹೈಬ್ರಿಡ್ ಬೀಜಗಳು, ಸಂಶೋಧನಾ ಬೀಜಗಳು ಮತ್ತು ಮಿನಿ ಕಿಟ್ ಗಳನ್ನು ಪ್ರದರ್ಶಿಸಲಿವೆ ಎಂದು ಶ್ರೀ ಚೌಹಾಣ್ ಹೇಳಿದ್ದಾರೆ. ಇದು ರೈತರು ತಮ್ಮ ಬೆಳೆ ಪದ್ಧತಿಗಳ ಆಧಾರದ ಮೇಲೆ ಸೂಕ್ತವಾದ ತಳಿಗಳನ್ನು ಆಯ್ಕೆ ಮಾಡಿಕೊಳ್ಳಲು ಪೂರಕವಾಗಲಿದೆ.
ಸಸ್ಯ ಪ್ರಭೇದಗಳ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರವು (ಪಿ ಪಿ ವಿ ಎಫ್ ಆರ್ ಎ) ಬೀಜಗಳು ಮತ್ತು ಸಸ್ಯ ಪ್ರಭೇದಗಳಿಗೆ ಸಂಬಂಧಿಸಿದ ರೈತರ ಹಕ್ಕುಗಳ ಬಗ್ಗೆ ಮಾಹಿತಿ ಒದಗಿಸಲಿದ್ದು, ಈ ಪೈಕಿ ಸ್ಥಳೀಯ ಪ್ರಭೇದಗಳ ಸಂರಕ್ಷಣೆ ಮತ್ತು ನೋಂದಣಿ ಪ್ರಕ್ರಿಯೆಯೂ ಸೇರಿದೆ. ಸಸ್ಯ ಪ್ರಭೇದಗಳ ಮಾಲೀಕತ್ವ, ರಕ್ಷಣೆ ಮತ್ತು ಬಳಕೆಯ ಬಗ್ಗೆ ರೈತರಿಗೆ ಜ್ಞಾನ ನೀಡುವ ಮೂಲಕ ಅವರನ್ನು ಸಬಲಗೊಳಿಸುವುದು ಇದರ ಉದ್ದೇಶವಾಗಿದೆ.
ಜೈವಿಕ ಗೊಬ್ಬರಗಳು, ಜೈವಿಕ ಉತ್ತೇಜಕಗಳು, ಸೂಕ್ಷ್ಮ ಪೋಷಕಾಂಶಗಳು ಮತ್ತು ಸಮತೋಲಿತ ಪೋಷಕಾಂಶ ನಿರ್ವಹಣೆಯ ಮೂಲಕ ಮಣ್ಣಿನ ಆರೋಗ್ಯ ಸುಧಾರಣೆಯ ಮಹತ್ವವನ್ನು ರಸಗೊಬ್ಬರ ಕಂಪನಿಗಳು ವಿವರಿಸಲಿವೆ. ಮಣ್ಣು ಪರೀಕ್ಷಾ ವರದಿಗಳ ಆಧಾರದ ಮೇಲೆ ರಸಗೊಬ್ಬರಗಳನ್ನು ಹೇಗೆ ಬಳಸುವುದು, ವೆಚ್ಚವನ್ನು ಹೇಗೆ ಕಡಿಮೆ ಮಾಡಬಹುದು ಮತ್ತು ಉತ್ಪಾದಕತೆಯನ್ನು ಸುಧಾರಿಸುವುದು ಹೇಗೆ ಎಂಬುದರ ಕುರಿತು ಪ್ರಾಯೋಗಿಕ ಮಾದರಿಗಳನ್ನು ರೈತರಿಗೆ ತೋರಿಸಲಾಗುತ್ತದೆ. "ಕಡಿಮೆ ವೆಚ್ಚ, ಹೆಚ್ಚಿನ ಇಳುವರಿ ಮತ್ತು ಆರೋಗ್ಯಕರ ಮಣ್ಣು" ಎಂಬ ಸಂದೇಶವನ್ನು ವಾಸ್ತವ ಜಗತ್ತಿನ ಪ್ರದರ್ಶನಗಳ ಮೂಲಕ ಒತ್ತಿಹೇಳಲಾಗುತ್ತದೆ.
ಸಾವಯವ ಮತ್ತು ನೈಸರ್ಗಿಕ ಕೃಷಿ, ಎಫ್ ಪಿ ಒ ಗಳು ಮತ್ತು ಮಾರುಕಟ್ಟೆ ಸಂಪರ್ಕಗಳು
ಸಾವಯವ ಮತ್ತು ನೈಸರ್ಗಿಕ ಕೃಷಿ ವಿಭಾಗದಲ್ಲಿ, 'ಶುದ್ಧ ಮಣ್ಣು, ಆರೋಗ್ಯಕರ ಬೆಳೆ - ನೈಸರ್ಗಿಕ ಕೃಷಿಯ ಮೂಲಕ ಸುವರ್ಣ ಭವಿಷ್ಯ' ಎಂಬ ವಿಷಯವನ್ನು ಪ್ರಚುರಪಡಿಸಲಾಗುವುದು. ಸಾವಯವ ಉತ್ಪನ್ನಗಳಿಗಾಗಿ ರಾಸಾಯನಿಕಗಳ ಕನಿಷ್ಠ ಬಳಕೆ, ಸಾವಯವ ಗೊಬ್ಬರ, ಗೊಬ್ಬರ ತಯಾರಿಕೆ, ಹಸುವಿನ ಸಗಣಿ ಆಧಾರಿತ ಪರಿಕರಗಳು, ಪ್ರಮಾಣೀಕರಣ ಪ್ರಕ್ರಿಯೆಗಳು ಮತ್ತು ಮಾರುಕಟ್ಟೆ ಅವಕಾಶಗಳ ಕುರಿತು ಮಾಹಿತಿಯನ್ನು ರೈತರು ಪಡೆಯಲಿದ್ದಾರೆ. ಈ ಮೇಳವು ಎಫ್ ಪಿ ಒ - ಆಧಾರಿತ ನೇರ ಮಾರುಕಟ್ಟೆ, ಸಹಕಾರಿ ವ್ಯವಸ್ಥೆಗಳು ಹಾಗೂ ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ನಿಯಮಿತ (ಎನ್ ಎ ಎಫ್ ಇ ಡಿ), ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ (ಎನ್ ಸಿ ಸಿ ಎಫ್) ಮತ್ತು ರಾಷ್ಟ್ರೀಯ ಬೀಜ ನಿಗಮ (ಎನ್ ಎಸ್ ಸಿ) ನಂತಹ ಸಂಸ್ಥೆಗಳೊಂದಿಗಿನ ಸಂಪರ್ಕಗಳ ಬಗ್ಗೆ ಹಾಗೂ ಇತರ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವೇದಿಕೆಗಳ ಮೇಲೆ ಕೇಂದ್ರೀಕರಿಸಲಿದೆ. ಮಧ್ಯವರ್ತಿಗಳಿಲ್ಲದೆ ರೈತರು ನೇರವಾಗಿ ಮಾರುಕಟ್ಟೆಗಳೊಂದಿಗೆ ಸಂಪರ್ಕ ಸಾಧಿಸಲು ಮತ್ತು ಅವರ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ಸಹಾಯ ಮಾಡುವ ಗುರಿಯನ್ನು ಈ ಉಪಕ್ರಮಗಳು ಹೊಂದಿವೆ. ರೈತರಿಗೆ ಅವರವರ ಪ್ರದೇಶಗಳಿಗೆ ಸೂಕ್ತವಾದ ಬೆಳೆ ವೈವಿಧ್ಯೀಕರಣ ಮಾದರಿಗಳ ಬಗ್ಗೆ ಪರಿಚಯಿಸಲಾಗುವುದು. ಈ ಪೈಕಿ ಸಿರಿಧಾನ್ಯ, ತೋಟಗಾರಿಕಾ ಬೆಳೆಗಳು, ಹಣ್ಣು ಮತ್ತು ತರಕಾರಿ ಸಂಸ್ಕರಣೆ ಹಾಗೂ ಮೌಲ್ಯವರ್ಧಿತ ಉತ್ಪನ್ನ ಸರಪಳಿಗಳು ಸೇರಿವೆ. ರೈತರು ವೈವಿಧ್ಯಮಯ ಮತ್ತು ಶೀಘ್ರ ಚೇತರಿಸಿಕೊಳ್ಳಬಲ್ಲ ಸ್ಥಿರ ಕೃಷಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಸಹಾಯ ಮಾಡಲು ಪ್ರಾಯೋಗಿಕ ಉದಾಹರಣೆಗಳನ್ನು ನೀಡಲಾಗುವುದು.
*****
(ಪ್ರಕಟಣೆ ಐ.ಡಿ.: 2250592)
ವಿಸಿಟರ್ ಕೌಂಟರ್ : 10