ವಾರ್ತಾ ಮತ್ತು ಪ್ರಸಾರ ಸಚಿವಾಲಯ
azadi ka amrit mahotsav

ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿ ಅವರಿಂದ ಪುಣೆಯ ಎಫ್‌‌ ಟಿ ಐ ಐ, ಎನ್‌ ಎಫ್‌ ಡಿ ಸಿ - ಎನ್‌ ಎಫ್ ಎ ಐ ಮತ್ತು ದೂರದರ್ಶನ ಕೇಂದ್ರಕ್ಕೆ ಭೇಟಿ 

ಪ್ರಕಟಣಾ ದಿನಾಂಕ: 04 APR 2026 7:29PM by PIB Bengaluru

ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಗಳಾದ ಶ್ರೀ ಚಂಚಲ್ ಕುಮಾರ್ ಅವರು ಪುಣೆಯ ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ (ಎಫ್‌ ಟಿ ಐ ಐ), ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ - ಭಾರತೀಯ ರಾಷ್ಟ್ರೀಯ ಚಲನಚಿತ್ರ ಆರ್ಕೈವ್‌ (ಎನ್‌ ಎಫ್‌ ಡಿ ಸಿ - ಎನ್‌ ಎಫ್ ಎ ಐ)  ಮತ್ತು ದೂರದರ್ಶನ ಕೇಂದ್ರಕ್ಕೆ ಭೇಟಿ ನೀಡಿದರು. 2026ರ ಏಪ್ರಿಲ್ 1 ರಂದು ಅಧಿಕಾರ ವಹಿಸಿಕೊಂಡ ನಂತರ ಈ ಸಂಸ್ಥೆಗಳಿಗೆ ಇದು ಅವರ ಮೊದಲ ಭೇಟಿಯಾಗಿದೆ.

ಭೇಟಿಯ ಸಮಯದಲ್ಲಿ, ಶ್ರೀ ಕುಮಾರ್ ಅವರು ಎಫ್ ಟಿ ಐ ಐ ನ ಚಟುವಟಿಕೆಗಳನ್ನು ಪರಾಮರ್ಶಿಸಿದರು ಮತ್ತು ಕ್ಯಾಂಪಸ್ ನ ಸಮಗ್ರ ಭೇಟಿ ಕೈಗೊಂಡರು. ಅವರನ್ನು ಎಫ್ ಟಿ ಐ ಐ ನ ಉಪಕುಲಪತಿಗಳಾದ ಶ್ರೀ ಧೀರಜ್ ಸಿಂಗ್ ಮತ್ತು ಎನ್‌ ಎಫ್‌ ಡಿ ಸಿ ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪ್ರಕಾಶ್ ಮಗ್ದುಮ್ ಆತ್ಮೀಯವಾಗಿ ಸ್ವಾಗತಿಸಿದರು.

ಹೊಸ ರಂಗಮಂದಿರ ಸಂಕೀರ್ಣ, ಕ್ಯಾಮೆರಾ ಮಳಿಗೆ, ಗ್ರಂಥಾಲಯ, ಶೈಕ್ಷಣಿಕ ವಿಭಾಗಗಳು, ಸ್ಟುಡಿಯೋಗಳು ಸೇರಿದಂತೆ ಎಫ್‌ ಟಿ ಐ ಐ ಯಲ್ಲಿನ ಪ್ರಮುಖ ಸೌಲಭ್ಯ ಕೇಂದ್ರಗಳಿಗೆ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಕಾರ್ಯದರ್ಶಿಯವರು ಭೇಟಿ ನೀಡಿದರು. ಹಿರಿಯ ಅಧ್ಯಾಪಕರು ಸಂಸ್ಥೆಯ ಅತ್ಯಾಧುನಿಕ ಉಪಕರಣಗಳು ಮತ್ತು ಶೈಕ್ಷಣಿಕ ಮೂಲಸೌಕರ್ಯಗಳ ಬಗ್ಗೆ ಅವರಿಗೆ ವಿವರಿಸಿದರು.

ಈ ಸಂದರ್ಭದಲ್ಲಿ, ಶ್ರೀ ಚಂಚಲ್ ಕುಮಾರ್ ಅವರು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ವೈವಿಧ್ಯಮಯ ವೇದಿಕೆಗಳಲ್ಲಿ ಪರಿಣಾಮಕಾರಿಯಾಗಿ ಪ್ರದರ್ಶಿಸುವಲ್ಲಿ ಚಲನಚಿತ್ರ ಮತ್ತು ಡಿಜಿಟಲ್ ಮಾಧ್ಯಮ ಶಿಕ್ಷಣದ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದರು. ದೇಶದ ಆರ್ಥಿಕತೆಯಲ್ಲಿ ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದ ಹೆಚ್ಚುತ್ತಿರುವ ಪ್ರಾಮುಖ್ಯತೆಯನ್ನು ವಿವರಿಸಿದ ಅವರು, ವಿದ್ಯಾರ್ಥಿಗಳಲ್ಲಿ ನಾವೀನ್ಯತೆ ಮತ್ತು ಕೌಶಲ್ಯಾಭಿವೃದ್ಧಿಯನ್ನು ಪೋಷಿಸುವಲ್ಲಿ ಎಫ್‌ ಟಿ ಐ ಐ ನಂತಹ ಸಂಸ್ಥೆಗಳು ಇನ್ನಷ್ಟು ಪಾತ್ರ ವಹಿಸುವಂತೆ ಮನವಿ ಮಾಡಿದರು.

 

ಅಂತಹ ಸಂಸ್ಥೆಗಳು ಉತ್ತಮ ಗುಣಮಟ್ಟದ ಚಲನಚಿತ್ರಗಳು ಮತ್ತು ದೂರದರ್ಶನ ಕಾರ್ಯಕ್ರಮಗಳನ್ನು ನೀಡಲು ಮಾತ್ರವಲ್ಲದೆ, ಚಲನಚಿತ್ರ ಮತ್ತು ಮಾಧ್ಯಮ ಉದ್ಯಮದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕೆಂದು ಅವರು ಕರೆ ನೀಡಿದರು.

ಪುಣೆಯ ಎಫ್ ಟಿ ಐ ಐ ಇತ್ತೀಚೆಗೆ ವಿಶ್ವವಿದ್ಯಾನಿಲಯವಾಗಿ ತನ್ನ ಹೊಸ ಪಾತ್ರಕ್ಕೆ ಪರಿವರ್ತನೆಗೊಂಡಿದ್ದು, ಈ ಭೇಟಿಯು ಹೆಚ್ಚಿನ ಮಹತ್ವವನ್ನು ಪಡೆದಿದೆ. ಇದು ಶೈಕ್ಷಣಿಕ ಕೊಡುಗೆಗಳನ್ನು ವಿಸ್ತರಿಸುವ ಮತ್ತು ವಿಕಸನಗೊಳ್ಳುತ್ತಿರುವ ಮಾಧ್ಯಮ ಮತ್ತು ಮನರಂಜನಾ ವಲಯದೊಂದಿಗೆ ತೊಡಗಿಸಿಕೊಳ್ಳುವಿಕೆಯನ್ನು ಬಲಪಡಿಸುವ ಗುರಿ ಹೊಂದಿದೆ.

ಪುಣೆಯಲ್ಲಿರುವ ಎನ್‌ ಎಫ್‌ ಡಿ ಸಿ - ಎನ್ ಎಫ್ ಎ ಐ ಕ್ಯಾಂಪಸ್ ಗಳಿಗೂ ಕಾರ್ಯದರ್ಶಿಗಳು ಭೇಟಿ ನೀಡಿದರು. ಅವರು ಪ್ರೊಜೆಕ್ಷನ್ ಕೊಠಡಿ, ರಂಗಮಂದಿರ, ಭದ್ರ ಕೊಠಡಿ ಮತ್ತು ಗ್ರಂಥಾಲಯವನ್ನು ವೀಕ್ಷಿಸಿದರು ಹಾಗೂ ರಾಷ್ಟ್ರೀಯ ಚಲನಚಿತ್ರ ಪರಂಪರೆಯ ಮಿಷನ್ (ಎನ್‌ ಎಫ್‌ ಹೆಚ್‌ ಎಂ) ಅಡಿಯಲ್ಲಿ ಡಿಜಿಟಲೀಕರಣ ಕಾರ್ಯವು ಪ್ರಸ್ತುತ ಪ್ರಗತಿಯಲ್ಲಿರುವ ಹಂತ II ರ ಸೌಲಭ್ಯ ಕೇಂದ್ರಕ್ಕೂ ಭೇಟಿ ನೀಡಿದರು.

ಪುಣೆಯ ದೂರದರ್ಶನ ಕೇಂದ್ರದಲ್ಲಿ, ಅವರು ದೂರದರ್ಶನ ಕೇಂದ್ರದ ಕಾರ್ಯವೈಖರಿ ಮತ್ತು ಕಾರ್ಯಕ್ರಮ ಪ್ರಸಾರ ಸೌಲಭ್ಯಗಳನ್ನು ಪರಿಶೀಲಿಸಿದರು ಹಾಗೂ ವಿಷಯ ರಚನೆಕಾರರು ಮತ್ತು ಔಟ್‌ ರೀಚ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.

 

*****


(ಪ್ರಕಟಣೆ ಐ.ಡಿ.: 2249073) ವಿಸಿಟರ್ ಕೌಂಟರ್ : 9
ಪ್ರಕಟಣೆಯನ್ನು ಇದರಲ್ಲಿ ಓದಿ: English , Marathi , Gujarati , Odia , Malayalam