ರೈಲ್ವೇ ಸಚಿವಾಲಯ
‘ಸುಧಾರಣಾ ಎಕ್ಸ್ ಪ್ರೆಸ್’ ಅಡಿಯಲ್ಲಿ ಭಾರತೀಯ ರೈಲ್ವೆಯಿಂದ ಐದು ಹೊಸ ಸುಧಾರಣೆಗಳ ಘೋಷಣೆ; ಸರಕು ಸಾಗಣೆ, ನಿರ್ಮಾಣ ಮತ್ತು ಪ್ರಯಾಣಿಕರ ಸೌಕರ್ಯದ ಮೇಲೆ ಗಮನ
ಶೀಘ್ರದಲ್ಲೇ ಪ್ರಯಾಣಿಕರು ರೈಲು ಹೊರಡುವ 30 ನಿಮಿಷಗಳ ಮೊದಲು ಬೋರ್ಡಿಂಗ್ ನಿಲ್ದಾಣವನ್ನು ಬದಲಾಯಿಸಬಹುದು
ಕೊನೆಯ ಕ್ಷಣದ ಅನಗತ್ಯ ಬುಕಿಂಗ್ ಗಳನ್ನು ತಡೆಯಲು ಮತ್ತು ನೈಜ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಟಿಕೆಟ್ ಸಿಗುವಂತೆ ಖಚಿತಪಡಿಸಲು ರೈಲ್ವೆಯು ಮರುಪಾವತಿ ನಿಯಮಗಳಲ್ಲಿ ಬದಲಾವಣೆ ತರಲು ಉದ್ದೇಶಿಸಿದೆ
ಕೊನೆಯ ಕ್ಷಣದ ಬುಕ್ಕಿಂಗ್ ಗಳನ್ನು ತಡೆಗಟ್ಟಲು ಮತ್ತು ನಿಜವಾದ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಟಿಕೆಟ್ ಖಚಿತಪಡಿಸಿಕೊಳ್ಳಲು ರೈಲ್ವೆಯಿಂದ ಮರುಪಾವತಿ ಗುರಿ
ಆಟೋಮೊಬೈಲ್ ಉದ್ಯಮವು ಈಗ ಉಪ್ಪು ಮತ್ತು ವಾಹನಗಳನ್ನು ಸಾಗಿಸಲು ವಿಶೇಷ ಕಂಟೈನರ್ ಗಳನ್ನು ವಿನ್ಯಾಸಗೊಳಿಸಬಹುದು
ಉಪ್ಪು ಸಾಗಣೆಯಲ್ಲಿ ತನ್ನ ಪಾಲನ್ನು ಹೆಚ್ಚಿಸಲು ರೈಲ್ವೆಯಿಂದ ತುಕ್ಕು-ನಿರೋಧಕ ಸ್ಟೇನ್‌ಲೆಸ್ ಸ್ಟೀಲ್ ಕಂಟೈನರ್ ಗಳ ಪರಿಚಯ; ಮೇಲ್ಭಾಗದಿಂದ ಲೋಡಿಂಗ್ ಮತ್ತು ಪಾರ್ಶ್ವದಿಂದ ಅನ್‌ಲೋಡಿಂಗ್ ಮಾಡುವ ವ್ಯವಸ್ಥೆ
ಯೋಜನೆಯ ಗುಣಮಟ್ಟ, ಹೊಣೆಗಾರಿಕೆ ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದನ್ನು ಬಲಪಡಿಸಲು ನಿರ್ಮಾಣ ನಿಯಮಗಳಲ್ಲಿ ಏಳು ಪ್ರಮುಖ ಬದಲಾವಣೆಗಳ ಘೋಷಣೆ
ಪ್ರಕಟಣಾ ದಿನಾಂಕ:
24 MAR 2026 5:42PM by PIB Bengaluru
2026ರ ಅವಧಿಯಲ್ಲಿ ಸುಧಾರಣೆಗಳನ್ನು ತರುವ ಭಾರತೀಯ ರೈಲ್ವೆಯ ಸಂಕಲ್ಪಕ್ಕೆ ಅನುಗುಣವಾಗಿ, ಐದು ಹೊಸ ಸುಧಾರಣೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಇಂದು ಘೋಷಿಸಿದರು. ಈ ಹೊಸ ಸುಧಾರಣೆಗಳ ಅನುಮೋದನೆಯೊಂದಿಗೆ, 2026ರ ಸಾಲಿನ ಒಟ್ಟು ಸುಧಾರಣೆಗಳ ಸಂಖ್ಯೆ ಒಂಬತ್ತಕ್ಕೆ ತಲುಪಿದೆ.
ಚಾಲ್ತಿಯಲ್ಲಿರುವ “ಸುಧಾರಣಾ ಎಕ್ಸ್ ಪ್ರೆಸ್” ಉಪಕ್ರಮದ ಅಡಿಯಲ್ಲಿ ಈಗಾಗಲೇ ನಾಲ್ಕು ಸುಧಾರಣೆಗಳನ್ನು ಘೋಷಿಸಲಾಗಿದ್ದು, ಈಗ ಐದು ಹೊಸ ಸುಧಾರಣೆಗಳನ್ನು ಪರಿಚಯಿಸಲಾಗುತ್ತಿದೆ ಎಂದು ಶ್ರೀ ಅಶ್ವಿನಿ ವೈಷ್ಣವ್ ತಿಳಿಸಿದರು. ಈ ಐದು ಹೊಸ ಸುಧಾರಣೆಗಳಲ್ಲಿ, ಎರಡು ಸರಕು ಸಾಗಣೆಗೆ, ಒಂದು ನಿರ್ಮಾಣಕ್ಕೆ ಮತ್ತು ಎರಡು ಪ್ರಯಾಣಿಕರ ಸೌಕರ್ಯಕ್ಕೆ ಸಂಬಂಧಿಸಿವೆ.
ಉಪ್ಪು ಸಾಗಣೆಯಲ್ಲಿ ಸುಧಾರಣೆ
ಉಪ್ಪು ಸಾಗಣೆಯ ಮೇಲೆ ಕೇಂದ್ರೀಕರಿಸುವ ಐದನೇ ಸುಧಾರಣೆಯ ಬಗ್ಗೆ ಮಾತನಾಡಿದ ಶ್ರೀ ವೈಷ್ಣವ್, ಭಾರತವು ವಿಶ್ವದ ಅತಿದೊಡ್ಡ ಉಪ್ಪು ಉತ್ಪಾದಕ ಮತ್ತು ರಫ್ತುದಾರ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದರು. ತಮಿಳುನಾಡು, ಗುಜರಾತ್ ಮತ್ತು ರಾಜಸ್ಥಾನ ಪ್ರಮುಖ ಉತ್ಪಾದನಾ ರಾಜ್ಯಗಳಾಗಿವೆ. ಭಾರತದಲ್ಲಿ ವಾರ್ಷಿಕವಾಗಿ ಉತ್ಪಾದನೆಯಾಗುವ ಸುಮಾರು 35 ಮಿಲಿಯನ್ ಟನ್ ಉಪ್ಪಿನ ಪೈಕಿ ಸುಮಾರು 9.2 ಮಿಲಿಯನ್ ಟನ್ ರೈಲ್ವೆ ಮೂಲಕ ಸಾಗಿಸಲ್ಪಡುತ್ತಿದೆ, ಇದು ಇನ್ನೂ ದೊಡ್ಡ ಅವಕಾಶವಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು.

ಉಪ್ಪು ಸಾಗಣೆಯಲ್ಲಿ ರೈಲ್ವೆಯ ಪಾಲು ಬಳಕೆಗೆ ಅನುಗುಣವಾಗಿ ಬದಲಾಗುತ್ತದೆ - ಕೈಗಾರಿಕಾ ಉಪ್ಪಿಗೆ ಸುಮಾರು ಶೇ 25 ರಷ್ಟು ಮತ್ತು ಮಾನವ ಬಳಕೆಯ ಉಪ್ಪಿಗೆ ಸುಮಾರು ಶೇ 65 ರಷ್ಟು ಇದೆ ಎಂದು ಕೇಂದ್ರ ಸಚಿವರು ಹೇಳಿದರು. ರೈಲು ಆಧಾರಿತ ಒಟ್ಟು ಉಪ್ಪು ಸಾಗಣೆಯಲ್ಲಿ ಶೇ 62 ರಷ್ಟು ಭಾಗವು 1,000 ರಿಂದ 2,500 ಕಿಲೋಮೀಟರ್ ದೂರವನ್ನು ಕ್ರಮಿಸುತ್ತದೆ, ಇದು ರೈಲು ಸಂಚಾರಕ್ಕೆ ಸೂಕ್ತವಾದ ವಿಭಾಗವಾಗಿದೆ ಎಂದು ಅವರು ಹೇಳಿದರು.
ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಉಪ್ಪು ಉತ್ಪಾದಕರು ಮತ್ತು ಸಾಗಣೆದಾರರೊಂದಿಗೆ ವಿವರವಾದ ಸಮಾಲೋಚನೆ ನಡೆಸಲಾಗಿದೆ ಎಂದು ಅವರು ತಿಳಿಸಿದರು. ಈ ಅಧ್ಯಯನವು ವ್ಯಾಗನ್ ವಿನ್ಯಾಸದ ಅಸಮರ್ಪಕತೆ, ಉಪ್ಪಿನಿಂದ ವ್ಯಾಗನ್ ಗಳು ತುಕ್ಕು ಹಿಡಿಯುವುದು, ಟಾರ್ಪಾಲಿನ್ ಹೊದಿಕೆಯಿದ್ದರೂ ತೆರೆದ ವ್ಯಾಗನ್ ಗಳಲ್ಲಿ ನೀರು ಜಿನುಗುವುದು ಮತ್ತು ಬಹು ಹಂತದ ನಿರ್ವಹಣೆಯಿಂದಾಗಿ ಹೆಚ್ಚಿನ ವೆಚ್ಚ ಮತ್ತು ನಷ್ಟದಂತಹ ಪ್ರಮುಖ ಸಮಸ್ಯೆಗಳನ್ನು ಗುರುತಿಸಿದೆ ಎಂದು ಅವರು ಹೇಳಿದರು.
ಈ ಸಮಸ್ಯೆಗಳನ್ನು ಪರಿಹರಿಸಲು, ಸ್ಟೇನ್‌ಲೆಸ್ ಸ್ಟೀಲ್ ನಿಂದ ಮಾಡಲ್ಪಟ್ಟ, ಮೇಲ್ಭಾಗದಿಂದ ಲೋಡಿಂಗ್ ಮತ್ತು ಪಾರ್ಶ್ವದಿಂದ ಅನ್ ಲೋಡಿಂಗ್ ಮಾಡುವ ಕಂಟೈನರ್ ವ್ಯವಸ್ಥೆಯನ್ನು ಈಗ ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಈ ಕಂಟೈನರ್ ತುಕ್ಕು ತಡೆಗಟ್ಟಲು ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲ್ಪಟ್ಟಿದೆ ಮತ್ತು ಮೇಲ್ಭಾಗದಲ್ಲಿ ಲೋಡಿಂಗ್ ಫ್ಲಾಪ್ ಗಳನ್ನು ಹಾಗೂ ಹೈಡ್ರಾಲಿಕ್ ಸೈಡ್-ಡಿಸ್‌ಚಾರ್ಜ್ ಕಾರ್ಯವಿಧಾನವನ್ನು ಹೊಂದಿದೆ, ಇದು ತಲುಪಬೇಕಾದ ಸ್ಥಳದಲ್ಲಿ ಟ್ರಕ್ ಗಳಿಗೆ ಸುಲಭವಾಗಿ ಅನ್‌ಲೋಡ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
ನೇರ ಲೋಡಿಂಗ್ ಗಾಗಿ ಉಪ್ಪು ಉತ್ಪಾದನಾ ಸ್ಥಳಗಳಲ್ಲಿ ಕಂಟೈನರ್ ಗಳನ್ನು ಇರಿಸಬಹುದು ಎಂದು ಕೇಂದ್ರ ಸಚಿವರು ವಿವರಿಸಿದರು. ಈ ಕಂಟೈನರ್ ಗಳನ್ನು ನಂತರ ಎತ್ತಿ ಕಂಟೈನರ್ ರೈಲುಗಳಿಗೆ ಲೋಡ್ ಮಾಡಬಹುದು. ತಲುಪಬೇಕಾದ ಸ್ಥಳದಲ್ಲಿ, ಕಂಟೈನರ್ ಗಳನ್ನು ಅನ್‌ಲೋಡ್ ಮಾಡಿ ಗೋದಾಮುಗಳಲ್ಲಿ ಇರಿಸಬಹುದು ಮತ್ತು ಅವಶ್ಯಕತೆಗೆ ಅನುಗುಣವಾಗಿ ಅನ್‌ಲೋಡ್ ಮಾಡಬಹುದು. ಈ ವ್ಯವಸ್ಥೆಯು ಹೆಚ್ಚಿನ ನಮ್ಯತೆಯನ್ನು ನೀಡುತ್ತದೆ, ಸುಗಮ ಮಲ್ಟಿಮೋಡಲ್ ಸಂಚಾರವನ್ನು ಬೆಂಬಲಿಸುತ್ತದೆ, ನಿರ್ವಹಣಾ ನಷ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಉದ್ಯಮದಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ ಎಂದು ಅವರು ಹೇಳಿದರು.
ಆಟೋಮೊಬೈಲ್ ಸಾಗಣೆಯಲ್ಲಿ ಸುಧಾರಣೆ
ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯು ವಾರ್ಷಿಕವಾಗಿ ಸುಮಾರು 31 ಮಿಲಿಯನ್ ಯುನಿಟ್ ಗಳನ್ನು ಉತ್ಪಾದಿಸುತ್ತದೆ, ಅದರಲ್ಲಿ ಪ್ರಯಾಣಿಕ ವಾಹನಗಳು ಸುಮಾರು 5 ಮಿಲಿಯನ್ ಯುನಿಟ್ ಗಳಾಗಿವೆ. ಪ್ರಯಾಣಿಕ ವಾಹನ ಸಾಗಣೆಯಲ್ಲಿ ರೈಲ್ವೆಯ ಪಾಲು ಸುಮಾರು ಶೇ 24 ರಷ್ಟಿದೆ, ಇದು ಆಟೋಮೊಬೈಲ್ ಸಂಚಾರದ ದೊಡ್ಡ ಪಾಲು ಇನ್ನೂ ರಸ್ತೆ ಮಾರ್ಗದ ಮೂಲಕವೇ ನಡೆಯುತ್ತಿದೆ ಎಂಬುದನ್ನು ಸೂಚಿಸುತ್ತದೆ ಎಂದು ಸಚಿವರು ಹೇಳಿದರು.
ಉದ್ಯಮದಿಂದ ಬಂದ ಪ್ರತಿಕ್ರಿಯೆಯು ಪ್ರಮುಖ ವಿನ್ಯಾಸ ಮತ್ತು ಕಾರ್ಯಾಚರಣೆಯ ಮಿತಿಗಳನ್ನು ಎತ್ತಿ ತೋರಿಸಿದೆ ಎಂದು ಅವರು ಹೇಳಿದರು. ರೈಲ್ವೆ ಸೇವೆಯಿರುವ ಪ್ರಮುಖ ಆಟೋಮೊಬೈಲ್ ಉತ್ಪಾದನಾ ಕೇಂದ್ರಗಳಲ್ಲಿ ಗುಜರಾತ್ ನ ಮೆಹ್ಸಾನಾ; ಮಹಾರಾಷ್ಟ್ರ ಮತ್ತು ಕರ್ನಾಟಕದ ಚಿಂಚವಾಡ ಮತ್ತು ಬಿಡದಿ; ಆಂಧ್ರಪ್ರದೇಶದ ಪೆನುಕೊಂಡ; ತಮಿಳುನಾಡಿನ ಮೇಲ್ಪಾಕ್ಕಂ ಮತ್ತು ವಾಲಜಾಬಾದ್; ಮತ್ತು ಹರಿಯಾಣದ ಗುರುಗ್ರಾಮದ ಫರುಖಾನಗರ ಸೇರಿವೆ. ಅಸ್ತಿತ್ವದಲ್ಲಿರುವ ಪ್ರಯಾಣಿಕ ಕೋಚ್ ಗಳನ್ನು ಆಟೋಮೊಬೈಲ್ ಕ್ಯಾರಿಯರ್ ವ್ಯಾಗನ್ ಗಳಾಗಿ ಪರಿವರ್ತಿಸುವುದು ಮತ್ತು ಹೊಸ ಪರಿಹಾರಗಳನ್ನು ಪರಿಚಯಿಸುವುದು ಸೇರಿದಂತೆ ಈ ಹಿಂದಿನ ಉಪಕ್ರಮಗಳನ್ನು ಅವರು ಉಲ್ಲೇಖಿಸಿದರು. ಆದಾಗ್ಯೂ, ಹೆಚ್ಚಿನ ಸಮಾಲೋಚನೆಗಳು ಪ್ರಾಥಮಿಕ ಸಮಸ್ಯೆ ಆಟೋಮೊಬೈಲ್ ಕ್ಯಾರಿಯರ್ ವ್ಯಾಗನ್ ಗಳ ವಿನ್ಯಾಸದಲ್ಲಿದೆ ಎಂದು ಬಹಿರಂಗಪಡಿಸಿವೆ ಎಂದು ಅವರು ಹೇಳಿದರು.
ಪ್ರಸ್ತುತ ಇರುವ ವ್ಯಾಗನ್ ವಿನ್ಯಾಸಗಳು ಕೇವಲ ಸಿಂಗಲ್-ಸ್ಟ್ಯಾಕ್ ಅಥವಾ ಡಬಲ್-ಸ್ಟ್ಯಾಕ್ ಕಾನ್ಫಿಗರೇಶನ್ ಗಳಿಗೆ ಮಾತ್ರ ಸೂಕ್ತವಾಗಿದ್ದು, ನಮ್ಯತೆಯನ್ನು ಸೀಮಿತಗೊಳಿಸಿವೆ ಎಂದು ಕೇಂದ್ರ ಸಚಿವರು ಹೇಳಿದರು. ಅನೇಕ ಮಾರ್ಗಗಳು ಸುರಂಗಗಳು ಮತ್ತು ಸೇತುವೆಗಳಿಂದಾಗಿ ನಿರ್ಬಂಧಗಳನ್ನು ಎದುರಿಸುತ್ತಿವೆ, ಅಲ್ಲಿ ಎತ್ತರದ ಮಿತಿಗಳು ಕೆಲವು ಪ್ರಕಾರದ ವ್ಯಾಗನ್ ಗಳ ಸಂಚಾರವನ್ನು ತಡೆಯುತ್ತವೆ ಎಂದು ಅವರು ತಿಳಿಸಿದರು.

ಇದನ್ನು ಪರಿಹರಿಸಲು, ರೈಲ್ವೆಯು ಉದ್ಯಮಕ್ಕೆ ನಮ್ಯತೆಯನ್ನು ನೀಡುವ ಮೂಲಕ ವಿಶೇಷ ವ್ಯಾಗನ್ ವಿನ್ಯಾಸಗಳನ್ನು ಅನುಮತಿಸುವ ಸುಧಾರಣೆಯನ್ನು ಪರಿಚಯಿಸಿದೆ ಎಂದು ಶ್ರೀ ವೈಷ್ಣವ್ ಹೇಳಿದರು. ತಯಾರಕರು ಈಗ ಹೆಚ್ಚಿನ ಸಾಮರ್ಥ್ಯದೊಂದಿಗೆ ನಿರ್ದಿಷ್ಟ ಮೂಲ-ಗಮ್ಯಸ್ಥಾನ ಮಾರ್ಗಗಳ ಆಧಾರದ ಮೇಲೆ ವ್ಯಾಗನ್ ಗಳನ್ನು ವಿನ್ಯಾಸಗೊಳಿಸಬಹುದು ಎಂದು ಅವರು ಹೇಳಿದರು.
ಹಿಂದಿನ ಬಲ್ಕ್ ಸಿಮೆಂಟ್ ನೀತಿ ಸುಧಾರಣೆಯ ಪ್ರಭಾವವನ್ನು ಉಲ್ಲೇಖಿಸಿದ ಅವರು, ಜಾರಿಗೆ ತಂದ ಬದಲಾವಣೆಗಳು ಲೋಡಿಂಗ್ ನಲ್ಲಿ ತಕ್ಷಣದ ಹೆಚ್ಚಳಕ್ಕೆ ಕಾರಣವಾಯಿತು - ರೈಲು ಮೂಲಕ ಸಾಗಿಸಲಾದ ಬಲ್ಕ್ ಸಿಮೆಂಟ್ ಟನ್ ಪ್ರಮಾಣವು ಸೆಪ್ಟೆಂಬರ್ 2025 ರಲ್ಲಿ ಸುಮಾರು 37,000 ಟನ್ ಗಳಿಂದ ಜನವರಿ 2026 ರ ವೇಳೆಗೆ ಸುಮಾರು 95,000 ಟನ್ ಗಳಿಗೆ ಏರಿತು. ಇದೇ ರೀತಿಯಲ್ಲಿ ಉಪ್ಪು ಮತ್ತು ಆಟೋಮೊಬೈಲ್ ಸಾಗಣೆಯಲ್ಲಿನ ಸುಧಾರಣೆಗಳು ಆ ವಲಯಗಳಲ್ಲಿ ರೈಲು ಸರಕು ಸಾಗಣೆಯ ಪಾಲನ್ನು ಗಮನಾರ್ಹವಾಗಿ ಸುಧಾರಿಸುವ ಸಚಿವರು ನಿರೀಕ್ಷೆಯನ್ನು ವ್ಯಕ್ತಪಡಿಸಿದರು.
ನಿರ್ಮಾಣದ ಗುಣಮಟ್ಟ ಸುಧಾರಣೆ
ಮುಂದಿನ ಸುಧಾರಣೆಯು ರೈಲ್ವೆ ಯೋಜನೆಗಳಲ್ಲಿ ನಿರ್ಮಾಣ ಗುಣಮಟ್ಟವನ್ನು ಸುಧಾರಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಏಳು ಪ್ರಮುಖ ಬದಲಾವಣೆಗಳನ್ನು ಪರಿಚಯಿಸುತ್ತದೆ ಎಂದು ಶ್ರೀ ಅಶ್ವಿನಿ ವೈಷ್ಣವ್ ಹೇಳಿದರು.
ಮೊದಲ ಬದಲಾವಣೆಯು ಅರ್ಹತಾ ಮಾನದಂಡಗಳಿಗೆ ಸಂಬಂಧಿಸಿದೆ ಎಂದು ಕೇಂದ್ರ ಸಚಿವರು ತಿಳಿಸಿದರು. ಏಕೈಕ ಯೋಜನೆಯ ಮೂಲಕ ಗುತ್ತಿಗೆದಾರರ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡುವ ಮಿತಿಯನ್ನು ಯೋಜನಾ ಮೌಲ್ಯದ ಶೇ 35 ರಿಂದ ಶೇ 50 ಕ್ಕೆ ಹೆಚ್ಚಿಸಲಾಗಿದೆ. ಇದು ದೊಡ್ಡ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಬೀತಾದ ಸಾಮರ್ಥ್ಯ ಹೊಂದಿರುವ ಸಂಸ್ಥೆಗಳು ಮಾತ್ರ ಅಂತಹ ಕೆಲಸಗಳಿಗೆ ಬಿಡ್ ಮಾಡುವುದನ್ನು ಖಚಿತಪಡಿಸುತ್ತದೆ. ಹೆಚ್ಚುವರಿಯಾಗಿ, ಕನಿಷ್ಠ ಶೇ 20 ರಷ್ಟು ಪೂರ್ವ ಅನುಭವವು ರೈಲ್ವೆ ಸಂಬಂಧಿತ ಕೆಲಸಗಳಲ್ಲಿರಬೇಕು, ಏಕೆಂದರೆ ಹೆದ್ದಾರಿಗಳು, ಬಂದರುಗಳು ಮತ್ತು ವಿಮಾನ ನಿಲ್ದಾಣಗಳಂತಹ ಇತರ ವಲಯಗಳು ವಿಭಿನ್ನ ಸಂಕೀರ್ಣತೆಗಳನ್ನು ಹೊಂದಿವೆ ಎಂದು ಗುರುತಿಸಲಾಗಿದೆ. ರೈಲ್ವೆ ಕೆಲಸಗಳ ಒಳಗೆ, ಸಂಕೀರ್ಣತೆಯ ಮಟ್ಟಗಳನ್ನು ವ್ಯಾಖ್ಯಾನಿಸಲಾಗಿದೆ, ಸಿಗ್ನಲಿಂಗ್ ಅತ್ಯಂತ ಸಂಕೀರ್ಣವಾಗಿದೆ, ನಂತರ ಓವರ್ ಹೆಡ್ ಎಲೆಕ್ಟ್ರಿಕಲ್ ಮತ್ತು ಟ್ರ್ಯಾಕ್ ಕೆಲಸಗಳು ಬರುತ್ತವೆ ಮತ್ತು ಅದಕ್ಕೆ ಅನುಗುಣವಾಗಿ ಅನುಭವದ ಅಗತ್ಯವಿರುತ್ತದೆ ಎಂದು ಅವರು ಹೇಳಿದರು
ಎರಡನೇ ಬದಲಾವಣೆಯು ಬಿಡ್ ಭದ್ರತಾ ಠೇವಣಿಯನ್ನು ಯೋಜನಾ ಮೌಲ್ಯದ ಶೇ 2 ಕ್ಕೆ ನಿಗದಿಪಡಿಸಿದೆ. ಇದು ಕ್ಷುಲ್ಲಕ ಬಿಡ್ ಗಳನ್ನು ನಿರುತ್ಸಾಹಗೊಳಿಸುವ ಮತ್ತು ಗಂಭೀರವಾಗಿ ಭಾಗವಹಿಸುವವರು ಮಾತ್ರ ಟೆಂಡರ್ ಪ್ರಕ್ರಿಯೆಗೆ ಪ್ರವೇಶಿಸುವುದನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ ಎಂದರು.
ಮೂರನೇ ಬದಲಾವಣೆಯು ₹₹10 ಕೋಟಿಗಿಂತ ಹೆಚ್ಚಿನ ಎಲ್ಲಾ ಯೋಜನೆಗಳಿಗೆ ಬಿಡ್ ಸಾಮರ್ಥ್ಯದ ಕಡ್ಡಾಯ ಮೌಲ್ಯಮಾಪನವನ್ನು ಪರಿಚಯಿಸುತ್ತದೆ, ನಾಲ್ಕನೆಯದು ಭ್ರಷ್ಟ, ವಂಚನೆ ಮತ್ತು ಸ್ಪರ್ಧಾತ್ಮಕವಲ್ಲದ ಅಭ್ಯಾಸಗಳನ್ನು ನಿಷೇಧಿಸುವ ಕಟ್ಟುನಿಟ್ಟಾದ ಶಿಕ್ಷಾರ್ಹ ನಿಬಂಧನೆಗಳನ್ನು ಜಾರಿಗೊಳಿಸುತ್ತದೆ ಎಂದು ಅವರು ಹೇಳಿದರು
ಐದನೇ ಬದಲಾವಣೆಯು ಯಾವುದೇ ಯೋಜನೆಯ ಪ್ರಾರಂಭದ ಮೊದಲು ವಿವರವಾದ ಕೆಲಸದ ಯೋಜನೆಯನ್ನು ಕಡ್ಡಾಯಗೊಳಿಸುತ್ತದೆ, ಇದು ಸುಧಾರಿತ ಮೇಲ್ವಿಚಾರಣೆಯನ್ನು ಶಕ್ತಗೊಳಿಸುತ್ತದೆ ಮತ್ತು ಸಮಯಕ್ಕೆ ಸರಿಯಾಗಿ ಕಾರ್ಯಗತಗೊಳಿಸುವುದನ್ನು ಖಚಿತಪಡಿಸುತ್ತದೆ.
ಆರನೇ ಬದಲಾವಣೆಯು ಅನುಮತಿಸಬಹುದಾದ ಉಪ-ಗುತ್ತಿಗೆ ಮಿತಿಯನ್ನು ಶೇ 70 ರಿಂದ ಶೇ 40 ಕ್ಕೆ ಇಳಿಸುತ್ತದೆ. ಗುತ್ತಿಗೆದಾರರು ಈಗ ಕನಿಷ್ಠ ಶೇ 60 ರಷ್ಟು ಕೆಲಸವನ್ನು ತಮ್ಮ ಸ್ವಂತ ಮೇಲ್ವಿಚಾರಣೆಯಲ್ಲಿ ನೇರವಾಗಿ ನಿರ್ವಹಿಸಬೇಕಾಗುತ್ತದೆ, ಇದು ಹೊಣೆಗಾರಿಕೆಯನ್ನು ಖಚಿತಪಡಿಸುತ್ತದೆ ಮತ್ತು ಬಿಡ್‌ಚಗಳನ್ನು ಪಡೆದ ನಂತರ ಒಪ್ಪಂದಗಳನ್ನು ಇತರರಿಗೆ ವರ್ಗಾಯಿಸುವ ಪದ್ಧತಿಯನ್ನು ಕಡಿಮೆ ಮಾಡುತ್ತದೆ ಎಂದು ಅಸವರು ಹೇಳಿದರು.
ಏಳನೇ ಬದಲಾವಣೆಯು 'ಪ್ರೆಡೇಟರಿ ಬಿಡ್ಡಿಂಗ್' (ಲಾಭದ ಉದ್ದೇಶವಿಲ್ಲದೆ ಅತೀ ಕಡಿಮೆ ದರ ನಮೂದಿಸುವುದು) ಅನ್ನು ತಡೆಯುವುದಕ್ಕೆ ಸಂಬಂಧಿಸಿದೆ. ಅಂದಾಜು ಯೋಜನಾ ವೆಚ್ಚಕ್ಕಿಂತ ಶೇ. 5 ಕ್ಕಿಂತ ಕಡಿಮೆ ದರಕ್ಕೆ ಯಾರಾದರೂ ಬಿಡ್ ಮಾಡಿದರೆ, ಅಂತಹ ಬಿಡ್ ದಾರರು ಹೆಚ್ಚುವರಿಯಾಗಿ ಶೇ. 5 ರಷ್ಟು 'ಕಾರ್ಯಕ್ಷಮತೆಯ ಗ್ಯಾರಂಟಿ'ಯನ್ನು ನೀಡಬೇಕಾಗುತ್ತದೆ ಎಂದು ಸಚಿವರು ತಿಳಿಸಿದರು. ವಾಸ್ತವಕ್ಕೆ ದೂರವಾದ ಕಡಿಮೆ ದರದ ಬಿಡ್ ಗಳನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ. ಏಕೆಂದರೆ ಇಂತಹ ಬಿಡ್ ಗಳು ಮುಂದೆ ವಿವಾದಗಳು, ಕಾನೂನು ಹೋರಾಟಗಳು ಮತ್ತು ಯೋಜನೆಗಳು ವಿಳಂಬವಾಗಲು ಕಾರಣವಾಗುತ್ತವೆ ಎಂದು ಅವರು ಹೇಳಿದರು.
ಈ ಬದಲಾವಣೆಗಳು ಒಟ್ಟಾಗಿ ರೈಲ್ವೆ ಯೋಜನಾ ಅನುಷ್ಠಾನದ ಚೌಕಟ್ಟನ್ನು ಬಲಪಡಿಸುತ್ತವೆ. ಕಟ್ಟುನಿಟ್ಟಾದ ನೈತಿಕ ಮತ್ತು ಶಿಕ್ಷಾರ್ಹ ಕ್ರಮಗಳ ಮೂಲಕ ಪಾರದರ್ಶಕತೆ ಮತ್ತು ಸಮಗ್ರತೆಯನ್ನು ಹೆಚ್ಚಿಸುವುದು, ಕಟ್ಟುನಿಟ್ಟಾದ ಅರ್ಹತಾ ಮಾನದಂಡಗಳು ಮತ್ತು ಕಡಿಮೆ ಉಪ-ಗುತ್ತಿಗೆ ಮೂಲಕ ಗುಣಮಟ್ಟದ ಭರವಸೆ ನೀಡುವುದು ಮತ್ತು ಸ್ಥಿರ ಬಿಡ್ ಸೆಕ್ಯೂರಿಟಿ, ಬಿಡ್ ಸಾಮರ್ಥ್ಯದ ಮೌಲ್ಯಮಾಪನ ಮತ್ತು ಹೆಚ್ಚುವರಿ ಕಾರ್ಯಕ್ಷಮತೆಯ ಗ್ಯಾರಂಟಿಗಳಂತಹ ಕಾರ್ಯವಿಧಾನಗಳೊಂದಿಗೆ ಸಮಯಕ್ಕೆ ಸರಿಯಾಗಿ ಕಾಮಗಾರಿ ಮುಗಿಸುವುದನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ. ಈ ಕ್ರಮಗಳು ಹೆಚ್ಚು ಹೊಣೆಗಾರಿಕೆಯುಳ್ಳ, ಸಮರ್ಥ ಮತ್ತು ದೃಢವಾದ ಮೂಲಸೌಕರ್ಯ ಅಭಿವೃದ್ಧಿ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿವೆ ಎಂದು ಸಚಿವರು ಹೇಳಿದರು.
ಟಿಕೆಟ್ ರದ್ದತಿ ಮತ್ತು ಮರುಪಾವತಿ
ಎಂಟನೇ ಸುಧಾರಣೆಯು ಪ್ರಯಾಣಿಕರ ಸೌಕರ್ಯದ ಮೇಲೆ ಕೇಂದ್ರೀಕರಿಸುತ್ತದೆ, ಟಿಕೆಟ್ ವ್ಯವಸ್ಥೆಗಳ ದುರುಪಯೋಗವನ್ನು ತಡೆಯುವ ಮತ್ತು ನಿಜವಾದ ಪ್ರಯಾಣಿಕರಿಗೆ ಸುಲಭ ಲಭ್ಯತೆಯನ್ನು ಸುಧಾರಿಸುವ ಕ್ರಮಗಳನ್ನು ಒಳಗೊಂಡಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಟಿಕೆಟ್ ಕಾಳಸಂತೆ ಮತ್ತು ತತ್ಕಾಲ್ ವ್ಯವಸ್ಥೆಯ ದುರುಪಯೋಗವು ಪ್ರಮುಖ ಕಳಕಳಿಯಾಗಿದೆ ಎಂದು ಅವರು ಹೇಳಿದರು. ಇದನ್ನು ಪರಿಹರಿಸಲು, ರೈಲ್ವೆಯು ಬಾಟ್ ಗಳು (Bots) ಮತ್ತು ವಂಚನೆಯ ಸಾಫ್ಟ್ ವೇರ್ ಗಳನ್ನು ಪತ್ತೆಹಚ್ಚಲು ತಂತ್ರಜ್ಞಾನವನ್ನು ಪರಿಚಯಿಸಿತು. ಆಧಾರ್ ಆಧಾರಿತ ಒಟಿಪಿ ಪರಿಶೀಲನೆಯ ಪರಿಚಯದ ಜೊತೆಗೆ, ತತ್ಕಾಲ್ ವಿಂಡೋ ತೆರೆದ ತಕ್ಷಣ ಟಿಕೆಟ್ ಬುಕ್ ಮಾಡುವ ಏಜೆಂಟರು ಮತ್ತು ದಲ್ಲಾಳಿಗಳ ಸಾಮರ್ಥ್ಯವನ್ನು ಹೆಚ್ಚಿನ ತಾಂತ್ರಿಕ ಹಸ್ತಕ್ಷೇಪಗಳು ಕಡಿತಗೊಳಿಸಿದವು. ವಿವರವಾದ ದತ್ತಾಂಶ ವಿಶ್ಲೇಷಣೆಯು ಐ ಆರ್ ಸಿ ಟಿ ಸಿ ವ್ಯವಸ್ಥೆಯಿಂದ ಸುಮಾರು 3 ಕೋಟಿ ನಕಲಿ ಖಾತೆಗಳನ್ನು ಗುರುತಿಸಲು ಮತ್ತು ತೆಗೆದುಹಾಕಲು ಕಾರಣವಾಯಿತು, ಇದರ ಪರಿಣಾಮವಾಗಿ ಟಿಕೆಟ್ ಲಭ್ಯತೆಯಲ್ಲಿ ಗಮನಾರ್ಹ ಸುಧಾರಣೆಯಾಗಿದೆ ಎಂದು ಅವರು ಹೇಳಿದರು.
ಈ ನಿಟ್ಟಿನಲ್ಲಿ, ರೈಲು ಹೊರಡುವ ಮೊದಲು ಇದ್ದ 48, 12 ಮತ್ತು 4 ಗಂಟೆಗಳ ಹಿಂದಿನ ರದ್ದತಿ ಸಮಯದ ವಿಂಡೋಗಳನ್ನು ಈಗ 72, 24 ಮತ್ತು 8 ಗಂಟೆಗಳಿಗೆ ಪರಿಷ್ಕರಿಸಲಾಗಿದೆ. ಇದು ಕಾಯ್ದಿರಿಸುವಿಕೆ ಚಾರ್ಟ್ ಗಳ ಸಿದ್ಧತೆಗೆ ಅನುಗುಣವಾಗಿದೆ, ಇದು ಈಗ ರೈಲು ಹೊರಡುವ 4 ಗಂಟೆಗಳ ಬದಲು 9-18 ಗಂಟೆಗಳ ಮೊದಲೇ ನಡೆಯುತ್ತದೆ. ಇದನ್ನು ಪ್ರಯಾಣಿಕರಿಂದ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಮಾಡಲಾಗುತ್ತದೆ. ಮುಂಗಡ ಕಾಯ್ದಿರಿಸುವಿಕೆ ಚಾರ್ಟ್ ಗಳು ಅನಿಶ್ಚಿತತೆಯನ್ನು ಕಡಿಮೆ ಮಾಡುವ ಮೂಲಕ, ವೇಟಿಂಗ್ ಲಿಸ್ಟ್ ಪ್ರಯಾಣಿಕರಿಗೆ ಉತ್ತಮ ಯೋಜನೆಯನ್ನು ಶಕ್ತಗೊಳಿಸುವ ಮೂಲಕ ಮತ್ತು ದೂರದ ಸ್ಥಳಗಳ ಪ್ರಯಾಣಿಕರಿಗೆ ಬೆಂಬಲ ನೀಡುವ ಮೂಲಕ ಪ್ರಯಾಣಿಕರ ಸೌಕರ್ಯವನ್ನು ಸುಧಾರಿಸುತ್ತದೆ. ಚಾರ್ಟ್ ಮೊದಲೇ ಸಿದ್ಧವಾಗುವುದರಿಂದ ಪರ್ಯಾಯ ಪ್ರಯಾಣದ ವ್ಯವಸ್ಥೆಗಳಿಗೆ ಅವಕಾಶ ನೀಡುತ್ತದೆ, ಖಾಲಿ ಬರ್ತ್ ಗಳ ಬಳಕೆಯನ್ನು ಉತ್ತಮಗೊಳಿಸುತ್ತದೆ ಮತ್ತು ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಈ ಬದಲಾವಣೆಗಳು ಕೊನೆಯ ಕ್ಷಣದ ಅನಗತ್ಯ ಬುಕ್ಕಿಂಗ್ ಗಳ ಪ್ರೋತ್ಸಾಹವನ್ನು ತೆಗೆದುಹಾಕುವ ಮತ್ತು ನಿಜವಾದ ಪ್ರಯಾಣಿಕರಿಗೆ ಟಿಕೆಟ್ ಲಭ್ಯತೆಯನ್ನು ಖಚಿತಪಡಿಸುವ ಗುರಿಯನ್ನು ಹೊಂದಿವೆ ಎಂದು ಅಚಿವರು ಹೇಳಿದರು.
ಕೌಂಟರ್ ಟಿಕೆಟ್ ಗಳನ್ನು ಶೀಘ್ರದಲ್ಲೇ ದೇಶಾದ್ಯಂತ ಯಾವುದೇ ರೈಲು ನಿಲ್ದಾಣದಿಂದ ರದ್ದುಗೊಳಿಸಬಹುದು ಎಂದು ಕೇಂದ್ರ ಸಚಿವರು ಘೋಷಿಸಿದರು, ಈ ಮೊದಲು ಕೇವಲ ಪ್ರಯಾಣದ ಮೂಲ ನಿಲ್ದಾಣದಲ್ಲಿ ಮಾತ್ರ ರದ್ದುಗೊಳಿಸುವ ಮಿತಿಯನ್ನು ಇದು ತೆಗೆದುಹಾಕಿದೆ. ಇ-ಟಿಕೆಟ್ ಗಳಿಗಾಗಿ ಟಿಕೆಟ್ ಡೆಪಾಸಿಟ್ ರಶೀದಿ (ಟಿಡಿಆರ್) ಸಲ್ಲಿಸುವ ಅವಶ್ಯಕತೆಯನ್ನು ತೆಗೆದುಹಾಕಲಾಗಿದೆ ಮತ್ತು ರದ್ದಾದ ನಂತರ ಮರುಪಾವತಿಯನ್ನು ಈಗ ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ ಎಂದು ಅವರು ಹೇಳಿದರು. ಮತ್ತೊಂದು ಪ್ರಯಾಣಿಕರ ಕ್ರಮವಾಗಿ, ಪ್ರಯಾಣಿಕರು ಈಗ ರೈಲು ಹೊರಡುವ 30 ನಿಮಿಷಗಳ ಮೊದಲು ತಮ್ಮ ಪ್ರಯಾಣದ ವರ್ಗವನ್ನು ಅಪ್‌ಗ್ರೇಡ್ ಮಾಡಬಹುದು, ಮೊದಲು ಇದು ಚಾರ್ಟ್ ತಯಾರಿಕೆಯ ಮೊದಲು ಮಾತ್ರ ಸೀಮಿತವಾಗಿತ್ತು.
ಈ ಸುಧಾರಣೆಗಳು ಪಾರದರ್ಶಕತೆಯನ್ನು ಇನ್ನಷ್ಟು ಸುಧಾರಿಸುತ್ತವೆ, ದುರುಪಯೋಗವನ್ನು ಕಡಿಮೆ ಮಾಡುತ್ತವೆ ಮತ್ತು ರೈಲ್ವೆ ಟಿಕೆಟ್ ಬುಕ್ಕಿಂಗ್ ನಲ್ಲಿ ಪ್ರಯಾಣಿಕರ ಅನುಭವವನ್ನು ಹೆಚ್ಚಿಸುತ್ತವೆ ಎಂದು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.
ರೈಲು ಹತ್ತುವ ನಿಲ್ದಾಣದ ಬದಲಾವಣೆ
ಒಂಬತ್ತನೇ ಸುಧಾರಣೆಯು ಪ್ರಯಾಣಿಕರು ತಮ್ಮ ಬೋರ್ಡಿಂಗ್ ನಿಲ್ದಾಣವನ್ನು ರೈಲು ತನ್ನ ಮೂಲ ನಿಲ್ದಾಣದಿಂದ ಹೊರಡುವ 30 ನಿಮಿಷಗಳ ಮೊದಲು ಡಿಜಿಟಲ್ ಆಗಿ ಬದಲಾಯಿಸಲು ಅನುವು ಮಾಡಿಕೊಡುತ್ತದೆ ಎಂದು ಕೇಂದ್ರ ಸಚಿವರು ಹೇಳಿದರು. ಮೊದಲಿಗೆ ಪ್ರಯಾಣಿಕರು ಚಾರ್ಟ್ ತಯಾರಿಕೆಯ ಮೊದಲು ಮಾತ್ರ ಬೋರ್ಡಿಂಗ್ ಪಾಯಿಂಟ್ ಬದಲಾಯಿಸಬಹುದಿತ್ತು. ಹೊಸ ನಿಬಂಧನೆಯ ಅಡಿಯಲ್ಲಿ, ಒಬ್ಬ ಪ್ರಯಾಣಿಕ ಮೂಲ ನಿಲ್ದಾಣದಿಂದ ರೈಲು ಹತ್ತಲು ಸಾಧ್ಯವಾಗದಿದ್ದರೆ, ಅವರು ಮುಂದಿನ ಅನುಕೂಲಕರ ನಿಲ್ದಾಣವನ್ನು ಆಯ್ಕೆ ಮಾಡಬಹುದು ಮತ್ತು ತಮ್ಮ ಖಚಿತವಾದ ಸೀಟನ್ನು ಕಳೆದುಕೊಳ್ಳದೆ ರೈಲು ಹತ್ತಬಹುದು ಎಂದು ಅವರು ವಿವರಿಸಿದರು.
ಹಿಂದಿನ ಸುಧಾರಣೆಗಳ ಅಪ್‌ಡೇಟ್
ಹಿಂದಿನ ಸುಧಾರಣೆಗಳಲ್ಲಿ ಉತ್ತಮ ಆನ್-ಬೋರ್ಡ್ ಸೇವೆಗಳಿಗಾಗಿ ಸುಧಾರಣೆಗಳು, ಸರಕು ಸಾಗಣೆ ಗುರಿಗಳನ್ನು ತಲುಪಲು ಉತ್ತಮ ಸೌಲಭ್ಯಗಳೊಂದಿಗೆ ಗತಿ ಶಕ್ತಿ ಕಾರ್ಗೋ ಟರ್ಮಿನಲ್ ಗಳ ವಿಸ್ತರಣೆ, ರೈಲ್ ಟೆಕ್ ನೀತಿ ಮತ್ತು ಪೋರ್ಟಲ್, ಮತ್ತು ವೇಗದ ಹಾಗೂ ಕಾಗದ ರಹಿತ ಕ್ಲೈಮುಗಳ ವಿಲೇವಾರಿಗಾಗಿ ರೈಲ್ವೆ ಕ್ಲೈಮುಗಳ ನ್ಯಾಯಮಂಡಳಿಯ (ಇ-ಆರ್ ಸಿ ಟಿ) ಡಿಜಿಟಲೀಕರಣ ಸೇರಿವೆ ಎಂದು ಸಚಿವರು ತಿಳಿಸಿದರು.
ಸಾಮಾನ್ಯ ಮತ್ತು ಕಾಯ್ದಿರಿಸದ ಬೋಗಿಗಳಿಗಾಗಿ ಆನ್-ಬೋರ್ಡ್ ಸ್ವಚ್ಛತಾ ಸೇವೆಗಳನ್ನು ಒಂದು ಧ್ಯೇಯವಾಗಿ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಒಟ್ಟು 86 ರೈಲುಗಳನ್ನು ವಲಯ ರೈಲ್ವೆಗಳಾದ್ಯಂತ ಗುರುತಿಸಲಾಗಿದೆ. ಈಗಾಗಲೇ 5 ವಲಯ ರೈಲ್ವೆಗಳು ಎಂಪ್ಯಾನೆಲ್‌ಮೆಂಟ್ ಗಾಗಿ ಆಸಕ್ತಿಯನ್ನು ವ್ಯಕ್ತಪಡಿಸಲು ಆಹ್ವಾನಿಸಿವೆ ಎಂದು ಅವರು ಹೇಳಿದರು. ಕಾರ್ಗೋ ಸುಧಾರಣೆಗಳ ಕುರಿತು ಮಾತನಾಡಿದ ಅವರು, ಗತಿ ಶಕ್ತಿ ಕಾರ್ಗೋ ಟರ್ಮಿನಲ್ ನೀತಿಯಲ್ಲಿನ ಬದಲಾವಣೆಗಳನ್ನು ಅಧಿಸೂಚಿಸಲಾಗಿದೆ ಮತ್ತು ಪರಿಷ್ಕೃತ ಚೌಕಟ್ಟಿನ ಅಡಿಯಲ್ಲಿ ಹೊಸ ಅರ್ಜಿಗಳನ್ನು ಪ್ರಕ್ರಿಯೆಗೊಳಿಸಲಾಗುತ್ತಿದೆ ಎಂದು ಹೇಳಿದರು.
ಇತ್ತೀಚೆಗೆ ಪ್ರಾರಂಭಿಸಲಾದ ರೈಲ್ ಟೆಕ್ ನೀತಿಯನ್ನು ಉಲ್ಲೇಖಿಸಿದ ಅವರು, ಒಂದು ತಿಂಗಳೊಳಗೆ 123 ಪ್ರಸ್ತಾವನೆಗಳು ಬಂದಿದ್ದು, ಅವುಗಳಲ್ಲಿ 94 ಅನ್ನು ಮುಂದಿನ ಹಂತಕ್ಕೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಸುಧಾರಣೆಗಳು ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸುವ, ಪ್ರಯಾಣಿಕರ ಸೌಕರ್ಯವನ್ನು ಹೆಚ್ಚಿಸುವ ಮತ್ತು ರೈಲ್ವೆ ವಲಯದಲ್ಲಿ ನಾವೀನ್ಯತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ ಎಂದು ಕೇಂದ್ರ ಸಚಿವರು ತಿಳಿಸಿದರು.
.
******
(ಪ್ರಕಟಣೆ ಐ.ಡಿ.: 2244686)
ವಿಸಿಟರ್ ಕೌಂಟರ್ : 33