ಗೃಹ ವ್ಯವಹಾರಗಳ ಸಚಿವಾಲಯ
azadi ka amrit mahotsav

ರಾಷ್ಟ್ರೀಯ ಭದ್ರತಾ ತರಬೇತಿ ಮತ್ತು ಮಾನ್ಯತೆಯನ್ನು ಹೆಚ್ಚಿಸಲು ಮತ್ತು ರಾಷ್ಟ್ರೀಯ ಭದ್ರತಾ ಶ್ರೇಷ್ಠತೆ ವೃದ್ಧಿಸಲು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ (ಆರ್ ಆರ್ ಯು) ಮತ್ತು ಸಶಸ್ತ್ರ ಸೀಮಾ ಬಲ (ಎಸ್ ಎಸ್ ಬಿ) ಅಕಾಡೆಮಿ ಮಹತ್ವದ ಒಪ್ಪಂದಕ್ಕೆ ಸಹಿ


ಕಾರ್ಯತಂತ್ರದ ಪಾಲುದಾರಿಕೆಯು ಔಪಚಾರಿಕ ಚೌಕಟ್ಟನ್ನು ಸ್ಥಾಪಿಸಲಿದ್ದು, ಅಲ್ಲಿ ಎಸ್ ಎಸ್ ಬಿ ಅಕಾಡೆಮಿಯಲ್ಲಿ ನಡೆಸುವ ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ಶೈಕ್ಷಣಿಕ ಮಾನ್ಯತೆ ಒದಗಿಸಲಿರುವ ಆರ್ ಆರ್ ಯು

ಈ ಸಹಯೋಗವು ರಾಷ್ಟ್ರೀಯ ಭದ್ರತೆಯಲ್ಲಿ ಶೈಕ್ಷಣಿಕ ಸಂಶೋಧನೆ ಮತ್ತು ಗಡಿ ಕಾವಲು ಪಡೆಗಳ ಪ್ರಾಯೋಗಿಕ, ತಳಮಟ್ಟದ ಅಗತ್ಯತೆಗಳ ನಡುವಿನ ಅಂತರ ತಗ್ಗಿಸುವ ಗುರಿಯನ್ನು ಹೊಂದಿದೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಸ್ಥಾಪಿಸಲಾದ ಆರ್ ಆರ್ ಯು ನ ಪ್ರಾಥಮಿಕ ಉದ್ದೇಶವು ಎಸ್ ಎಸ್ ಬಿ ನಡೆಸುವ ಹಾಲಿ ಮತ್ತು ಭವಿಷ್ಯದ ಕೋರ್ಸ್‌ಗಳಿಗೆ ಮಾನ್ಯತೆ ನೀಡುವುದಾಗಿದೆ

ವೃತ್ತಿಪರ ಅಭಿವೃದ್ಧಿಯ ಅತ್ಯುನ್ನತ ಗುಣಮಟ್ಟ ಖಾತ್ರಿಪಡಿಸಿಕೊಳ್ಳಲು ಆರ್ ಆರ್ ಯು ತನ್ನ ಅತ್ಯಾಧುನಿಕ ಪ್ರಯೋಗಾಲಯಗಳು ಮತ್ತು ಕ್ಷೇತ್ರ ಆಧಾರಿತ ಕಾರ್ಯಾಗಾರಗಳ ಮೂಲಕ ಎಸ್ ಎಸ್ ಬಿ ಸಿಬ್ಬಂದಿಗೆ ಪ್ರಾಯೋಗಿಕ ತರಬೇತಿ ಒದಗಿಸಲಿದೆ

ಈ ಉಪಕ್ರಮವು ಎಸ್ ಎಸ್ ಬಿ ಗಾಗಿ ತರಬೇತಿ ಪಠ್ಯಕ್ರಮವನ್ನು ಆಧುನೀಕರಿಸುವ ನಿರೀಕ್ಷೆಯಿದೆ, ಗಡಿ ಕಣ್ಗಾವಲು ಮತ್ತು ಆಂತರಿಕ ಭದ್ರತಾ ಸವಾಲುಗಳಿಗೆ ತಂತ್ರಜ್ಞಾನ-ಚಾಲಿತ ಪರಿಹಾರಗಳ ಮೇಲೆ ಕೇಂದ್ರೀಕರಿಸುತ್ತದೆ

ಎರಡೂ ಸಂಸ್ಥೆಗಳ ಪ್ರತಿಭಾನ್ವಿತರನ್ನು ಬಳಸಿಕೊಳ್ಳುವ ಮೂಲಕ ಈ ಉಪಕ್ರಮದಡಿ ಎಸ್ ಎಸ್ ಬಿ ಒಳಗೆ ನಿರಂತರ ವೃತ್ತಿಪರ ಅಭಿವೃದ್ಧಿಗಾಗಿ ಉತ್ಕೃಷ್ಟ ಪೂರಕ  ವ್ಯವಸ್ಥೆ ಸೃಷ್ಟಿಸುವ ಗುರಿ

ಪ್ರಕಟಣಾ ದಿನಾಂಕ: 21 MAR 2026 11:01AM by PIB Bengaluru

ಭಾರತದ ಆಂತರಿಕ ಭದ್ರತಾ ಚೌಕಟ್ಟನ್ನು ಬಲಪಡಿಸುವ ನಿಟ್ಟಿನಲ್ಲಿ ಇತ್ತೀಚಿನ ಮಹತ್ವದ ಕ್ರಮದಡಿ, ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ (ಆರ್ ಆರ್ ಯು) ಮತ್ತು ಸಶಸ್ತ್ರ ಸೀಮಾ ಬಲ್ (ಎಸ್ ಎಸ್ ಬಿ) ಅಕಾಡೆಮಿ ಹಾಗೂ ಅದರ ತರಬೇತಿ ಸಂಸ್ಥೆಗಳೊಂದಿಗೆ ವಿಶೇಷ ಭದ್ರತಾ ಕೋರ್ಸ್‌ಗಳನ್ನು ಸಂಯೋಜಿಸಲು ಮತ್ತು ಮಾನ್ಯತೆ ನೀಡಲು ಇಂದು ಅಧಿಕೃತವಾಗಿ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿವೆ. ಅಧಿಕೃತ ಸಹಿ ಸಮಾರಂಭವು ದೆಹಲಿಯ ಎಸ್ ಎಸ್ ಬಿ ಪ್ರಧಾನ ಕಚೇರಿಯಲ್ಲಿ ನಡೆಯಿತು, ಆರ್ ಆರ್ ಯುನ ಪ್ರೊ-ವೈಸ್ ಚಾನ್ಸೆಲರ್ ಪ್ರೊ. (ಡಾ.) ಕಲ್ಪೇಶ್ ಎಚ್. ವಾಂಡ್ರ; ಆರ್ ಆರ್ ಯು ನಲ್ಲಿ ಅಫಿಲಿಯೇಶನ್ ಮತ್ತು ಮಾನ್ಯತೆಯ ಡೀನ್ ಶ್ರೀ ಅವಿನಾಶ್ ಖರೇಲ್; ಮತ್ತು ಎಸ್ ಎಸ್ ಬಿಯ ಮಹಾನಿರ್ದೇಶಕ (ಡಿಜಿ) ಶ್ರೀ ಸಂಜಯ್ ಸಿಂಘಾಲ್ ಮತ್ತು ಅವರ ಇತರ ಅಧಿಕಾರಿಗಳು ಸೇರಿದಂತೆ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.

ಈ ಕಾರ್ಯತಂತ್ರದ ಪಾಲುದಾರಿಕೆಯು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಯಾದ ಆರ್ ಆರ್ ಯು, ಎಸ್ ಎಸ್ ಬಿ ಅಕಾಡೆಮಿಯಲ್ಲಿ ನಡೆಸುವ ವಿವಿಧ ತರಬೇತಿ ಕಾರ್ಯಕ್ರಮಗಳಿಗೆ ಶೈಕ್ಷಣಿಕ ಮಾನ್ಯತೆಯನ್ನು ಒದಗಿಸುವ ಔಪಚಾರಿಕ ಚೌಕಟ್ಟನ್ನು ಸ್ಥಾಪಿಸುತ್ತದೆ. ಒಪ್ಪಂದದ ನಿಯಮಗಳಡಿಯಲ್ಲಿ ಎರಡೂ ಸಂಸ್ಥೆಗಳು ಅಧ್ಯಾಪಕರ ನೈಪುಣ್ಯತೆ, ಶೈಕ್ಷಣಿಕ ಸಾಧನಗಳು ಮತ್ತು ವಿಶೇಷ ತರಬೇತಿ ಸೌಲಭ್ಯಗಳು ಸೇರಿದಂತೆ ಸಂಪನ್ಮೂಲಗಳ ಸಮಗ್ರ ವಿನಿಮಯಕ್ಕೆ ಬದ್ಧವಾಗಿವೆ. ಈ ಸಹಯೋಗವು ರಾಷ್ಟ್ರೀಯ ಭದ್ರತೆಯಲ್ಲಿನ ಶೈಕ್ಷಣಿಕ ಸಂಶೋಧನೆ ಮತ್ತು ಗಡಿ ಕಾವಲು ಪಡೆಗಳ ಪ್ರಾಯೋಗಿಕ, ತಳಮಟ್ಟದ ಅವಶ್ಯಕತೆಗಳ ನಡುವಿನ ಅಂತರವನ್ನು ತಗ್ಗಿಸುವ ಗುರಿಯನ್ನು ಹೊಂದಿದೆ.

ಈ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರೊ. (ಡಾ.) ಕಲ್ಪೇಶ್ ಎಚ್. ವಾಂಡ್ರಾ ಅವರು ಸಹಯೋಗವು ಈಗಾಗಲೇ ಫಲಿತಾಂಶಗಳನ್ನು ನೀಡುತ್ತಿದೆ ಎಂದು ಪ್ರಮುಖವಾಗಿ ಉಲ್ಲೇಖಿಸಿದರು. ಆರ್‌ಆರ್‌ಯು ಇತ್ತೀಚೆಗೆ ಎಸ್‌ಎಸ್‌ಬಿ ಅಧಿಕಾರಿಗಳಿಗೆ ವಿಶೇಷವಾದ ’’ಸ್ಮಾರ್ಟ್ ಬಾರ್ಡರ್ ಮ್ಯಾನೇಜ್‌ಮೆಂಟ್’’ ಕೋರ್ಸ್ ಅನ್ನು ನಡೆಸಿದೆ ಎಂದು ಉಲ್ಲೇಖಿಸಿದರು. ವೃತ್ತಿಪರ ಅಭಿವೃದ್ಧಿಯ ಅತ್ಯುನ್ನತ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಲು, ಆರ್‌ಆರ್‌ಯು ತನ್ನ ಅತ್ಯಾಧುನಿಕ ಪ್ರಯೋಗಾಲಯಗಳು ಮತ್ತು ಕ್ಷೇತ್ರ ಆಧಾರಿತ ಕಾರ್ಯಾಗಾರಗಳ ಮೂಲಕ ಎಸ್‌ಎಸ್‌ಬಿ ಸಿಬ್ಬಂದಿಗೆ ಪ್ರಾಯೋಗಿಕ ತರಬೇತಿ ನೀಡುತ್ತದೆ. ಗಡಿ ಕಣ್ಗಾವಲು ಮತ್ತು ಆಂತರಿಕ ಭದ್ರತಾ ಸವಾಲುಗಳಿಗೆ ತಂತ್ರಜ್ಞಾನ ಆಧಾರಿತ ಪರಿಹಾರಗಳ ಮೇಲೆ ಕೇಂದ್ರೀಕರಿಸುವ ಮೂಲಕ ಎಸ್‌ಎಸ್‌ಬಿಗೆ ತರಬೇತಿ ಪಠ್ಯಕ್ರಮವನ್ನು ಆಧುನೀಕರಿಸುವ ನಿರೀಕ್ಷೆಯಿದೆ.

ಈ ವೇಳೆ ಮಾತನಾಡಿದ ಎಸ್ ಎಸ್ ಬಿಯ ಮಹಾನಿರ್ದೇಶಕ ಶ್ರೀ ಸಂಜಯ್ ಸಿಂಘಾಲ್, ಪಡೆಗೆ ಅಗತ್ಯವಾದ ಶೈಕ್ಷಣಿಕ ಮೂಲಸೌಕರ್ಯವನ್ನು ಒದಗಿಸುವ ಆರ್ ಆರ್ ಯು ಸಾಮರ್ಥ್ಯದ ಬಗ್ಗೆ ದೃಢ ವಿಶ್ವಾಸ ವ್ಯಕ್ತಪಡಿಸಿದರು. ಗಡಿ ನಿರ್ವಹಣೆ ಮತ್ತು ಆಂತರಿಕ ಭದ್ರತೆಯ ವಿಕಸನಗೊಳ್ಳುತ್ತಿರುವ ಹೊಸ ಭೂ ಆಯಾಮಕ್ಕೆ ಹೊಂದಿಕೊಳ್ಳಲು ಅಧಿಕಾರಿಗಳ ‘’ಉನ್ನತೀಕರಣ (ಅಪ್‌ಗ್ರೇಡ್) ಮತ್ತು ಮರು-ಕೌಶಲ್ಯ’’ ದ ಮೇಲೆ ಪಾಲುದಾರಿಕೆಯು ಹೆಚ್ಚು ಗಮನಹರಿಸುತ್ತದೆ ಎಂದು ಅವರು ಒತ್ತಿ ಹೇಳಿದರು. ಎರಡೂ ಸಂಸ್ಥೆಗಳ ಪ್ರತಿಭಾನ್ವಿತರನ್ನು ಬಳಸಿಕೊಳ್ಳುವ ಮೂಲಕ ಈ ಉಪಕ್ರಮವು ಸಶಸ್ತ್ರ ಸೀಮಾ ಬಲದೊಳಗೆ ನಿರಂತರ ವೃತ್ತಿಪರ ಅಭಿವೃದ್ಧಿಗಾಗಿ ಉತ್ಕೃಷ್ಠ ಪೂರಕ ವ್ಯವಸ್ಥೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮತ್ತು ಕೇಂದ್ರ ಗೃಹ ಸಚಿವರಾದ ಶ್ರೀ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಸ್ಥಾಪಿಸಲಾದ ಈ ವಿಶ್ವವಿದ್ಯಾಲಯದ ಪ್ರಾಥಮಿಕ ಉದ್ದೇಶವೆಂದರೆ ರಾಷ್ಟ್ರೀಯ ಭದ್ರತೆ ಮತ್ತು ಪೊಲೀಸ್ ವ್ಯವಸ್ಥೆಗಾಗಿ ಪ್ರಮುಖ ಶೈಕ್ಷಣಿಕ ಮತ್ತು ಸಂಶೋಧನಾ ಪೂರಕ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುವುದು, ಶಿಸ್ತಿನ ಚೌಕಟ್ಟಿನೊಳಗೆ ವಿಶೇಷ ವೃತ್ತಿಪರ ಶಿಕ್ಷಣವನ್ನು ನೀಡಲು ತಜ್ಞರ ಜಾಗತಿಕ ಜಾಲವನ್ನು ಬಳಸಿಕೊಳ್ಳುವುದೂ ಸಹ ಸೇರಿದೆ.

ಈ ಒಪ್ಪಂದದ ಪ್ರಕಾರ, ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯವು ಎಸ್‌ಎಸ್‌ಬಿ ನಡೆಸುವ ಹಾಲಿ ಇರುವ ಮತ್ತು ಭವಿಷ್ಯದ ಕೋರ್ಸ್‌ಗಳಿಗೆ ಮಾನ್ಯತೆ ನೀಡುತ್ತದೆ, ಇದು ಆರ್‌ಆರ್‌ಯುನ ಜಂಟಿ ಮಾನ್ಯತೆ ಮತ್ತು ಕೋರ್ಸ್‌ಗಳ ಪ್ರಮಾಣೀಕರಣ ಮಾರ್ಗಸೂಚಿಗಳ ಆಧಾರದ ಮೇಲೆ ಪ್ರಮಾಣಪತ್ರ/ಡಿಪ್ಲೊಮಾ/ಪಿಜಿ ಡಿಪ್ಲೊಮಾ/ಅಡ್ವಾನ್ಸ್ಡ್ ಡಿಪ್ಲೊಮಾ/ಸ್ನಾತಕೋತ್ತರ ಪದವಿ/ಸ್ನಾತಕೋತ್ತರ ಪದವಿಯನ್ನು ನೀಡಲಿದೆ.

ಪಾಲುದಾರಿಕೆಯು ಅನುಷ್ಠಾನಕ್ಕೆ ತಾರ್ಕಿಕ ಚೌಕಟ್ಟನ್ನು ಒಳಗೊಂಡಿದೆ:

  • ಕೋರ್ಸ್ ಮೌಲ್ಯಮಾಪನ: ತರಬೇತಿ ಸಮಯ ಮತ್ತು ಕಂಟೆಂಟ್(ವಿಷಯದ) ಶೈಕ್ಷಣಿಕ ಶ್ರೇಯಾಂಕಗಳಿಗೆ  ಸಮಾನತೆಯನ್ನು ನಿರ್ಧರಿಸಲು ಆರ್‌ಆರ್‌ಯು ಎಸ್‌ಎಸ್‌ಬಿ ಸಂಸ್ಥೆಗಳಲ್ಲಿ ಸದ್ಯದ ಪಠ್ಯಕ್ರಮವನ್ನು ಮೌಲ್ಯಮಾಪನ ಮಾಡುತ್ತದೆ.
  • ಪಠ್ಯಕ್ರಮ ವರ್ಧನೆ: ನಿರ್ದಿಷ್ಟ ಪದವಿಗಳು ಅಥವಾ ಡಿಪ್ಲೊಮಾ ಮಾರ್ಗಗಳಿಗೆ ‘’ಹೆಚ್ಚುವರಿ ಕ್ರೆಡಿಟ್‌ಗಳು’’ ಅವಶ್ಯಕತೆಗಳನ್ನು ಪೂರೈಸಲು ಹೆಚ್ಚುವರಿ ಕೋರ್ಸ್ ವಿಷಯ ಅಥವಾ ಪಠ್ಯಕ್ರಮವನ್ನು ವಿನ್ಯಾಸಗೊಳಿಸುವಲ್ಲಿ ಎರಡೂ ಸಂಸ್ಥೆಗಳು ಸಹಕರಿಸುತ್ತವೆ.
  • ಪ್ರಮಾಣೀಕೃತ ಮೌಲ್ಯಮಾಪನ: ಆರ್‌ಆರ್‌ಯು ಶಾಸನಗಳಿಂದ ಅಗತ್ಯವಿರುವ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಪ್ರತಿ ಮಾನ್ಯತೆ ಪಡೆದ ಕೋರ್ಸ್‌ಗೆ ದೃಢವಾದ ಮೌಲ್ಯಮಾಪನ ಪ್ರಕ್ರಿಯೆ ಮತ್ತು ಶ್ರೇಣೀಕರಣ ಕಾರ್ಯವಿಧಾನವನ್ನು ಸ್ಥಾಪಿಸಲಾಗುತ್ತದೆ.

ಶೈಕ್ಷಣಿಕ ಸಮಗ್ರತೆಯ ಅತ್ಯುನ್ನತ ಮಾನದಂಡಗಳನ್ನು ಕಾಯ್ದುಕೊಳ್ಳಲು, ಪಾಲುದಾರಿಕೆಯು ಹಾಲಿ ಇರುವ ಮತ್ತು ಹೆಚ್ಚುವರಿ ಕೋರ್ಸ್ ವಿಷಯದ ನಿಯತಕಾಲಿಕ ಪರಿಶೀಲನೆ ಮತ್ತು ಮೌಲ್ಯೀಕರಣವನ್ನು ಕಡ್ಡಾಯಗೊಳಿಸುತ್ತದೆ. ಇದು ಪಠ್ಯಕ್ರಮವು ಕ್ರಿಯಾತ್ಮಕವಾಗಿ ಮತ್ತು ವಿಕಸನಗೊಳ್ಳುತ್ತಿರುವ ಭದ್ರತಾ ಅಪಾಯಗಳಿಗೆ ಸ್ಪಂದಿಸುವಂತೆ ಮಾಡುತ್ತದೆ. ಅಲ್ಲದೆ, ಒಪ್ಪಂದವು ಸಶಸ್ತ್ರ ಸೀಮಾ ಬಾಲ್ ಅಕಾಡೆಮಿಯಲ್ಲಿ ಮೀಸಲಾದ ಆರ್ ಆರ್ ಯು ಡೆಸ್ಕ್ ಅನ್ನು ಸ್ಥಾಪಿಸಲು ಅನುಕೂಲ ಮಾಡಿಕೊಡುತ್ತದೆ. ಈ ಆಡಳಿತ ಕೇಂದ್ರವು ದತ್ತಾಂಶವನ್ನು ನಿರ್ವಹಿಸುತ್ತದೆ, ದಿನನಿತ್ಯದ ಸಂವಹನಗಳನ್ನು ಸುಗಮಗೊಳಿಸುತ್ತದೆ ಮತ್ತು ಮಾನ್ಯತೆ ಪ್ರಕ್ರಿಯೆಯ ಪರಿಣಾಮಕಾರಿ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ, ವಿಶ್ವವಿದ್ಯಾಲಯ ಮತ್ತು ಅರೆಸೈನಿಕ ಪಡೆಗಳ ನಡುವೆ ತಡೆರಹಿತ ಸಮನ್ವಯವನ್ನು ಖಾತ್ರಿಪಡಿಸುತ್ತದೆ.

ಈ ಸಹಯೋಗವು ಗೃಹ ಸಚಿವಾಲಯದ ’ಸಮಗ್ರ ತರಬೇತಿ’’ ದೂರದೃಷ್ಟಿಯ ಕಡೆಗೆ ಮಹತ್ವದ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ,  ಸೈದ್ಧಾಂತಿಕ ಸಂಶೋಧನೆ ಮತ್ತು ಪ್ರಾಯೋಗಿಕ ಗಡಿ ನಿರ್ವಹಣೆಯ ನಡುವಿನ ಅಂತರವನ್ನು ನಿವಾರಿಸುತ್ತದೆ. ಎಸ್ ಎಸ್ ಬಿ ಸಿಬ್ಬಂದಿ ಪಡೆದ ಕಠಿಣ ತರಬೇತಿಯನ್ನು ಪ್ರಮಾಣೀಕರಿಸುವ ಮೂಲಕ, ಒಪ್ಪಂದವು ಅವರಿಗೆ ವರ್ಧಿತ ವೃತ್ತಿ ಪ್ರಗತಿ ಅವಕಾಶಗಳು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಗೆ ಹೊಂದಿಕೆಯಾಗುವ ಶೈಕ್ಷಣಿಕ ಮನ್ನಣೆಯನ್ನು ಒದಗಿಸುತ್ತದೆ.

ಪ್ರಮುಖ ಆಂತರಿಕ ಭದ್ರತಾ ವಿಶ್ವವಿದ್ಯಾಲಯ ಮತ್ತು ಮುಂಚೂಣಿಯ ಗಡಿ ಕಾವಲು ಪಡೆಯ ನಡುವಿನ ಈ ಸಮನ್ವಯ ಭಾರತದ ಭದ್ರತಾ ಚೌಕಟ್ಟನ್ನು ವೃತ್ತಿಪರಗೊಳಿಸುವ ಕಡೆಗೆ ಒಂದು ಕಾರ್ಯತಾಂತ್ರಿಕ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ. ಯುದ್ಧತಂತ್ರದ ತರಬೇತಿಯನ್ನು ರಾಷ್ಟ್ರೀಯ ಕ್ರೆಡಿಟ್ ಫ್ರೇಮ್‌ವರ್ಕ್ (ಎನ್ ಸಿ ಆರ್ ಎಫ್) ನೊಂದಿಗೆ ಸಂಯೋಜಿಸುವ ಮೂಲಕ ಎಸ್ ಎಸ್ ಬಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಬದ್ಧತೆಯು ರಾಷ್ಟ್ರವ್ಯಾಪಿ ಗುರುತಿಸಲ್ಪಟ್ಟ ಸಾಂಸ್ಥಿಕ ಶೈಕ್ಷಣಿಕ ಸಾಧನೆಗಳಲ್ಲಿ ಪ್ರತಿಫಲಿಸುತ್ತದೆ ಎಂಬುದನ್ನು ಒಪ್ಪಂದವು ಖಾತ್ರಿಪಡಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2243329) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Marathi , हिन्दी , Assamese , Gujarati