ಇಂಧನ ಸಚಿವಾಲಯ
ಭಾರತ್ ವಿದ್ಯುತ್ ಶೃಂಗಸಭೆ 2026 - ಭಾರತದ ವಿದ್ಯುತ್ ಭವಿಷ್ಯವನ್ನು ರೂಪಿಸಲು ನೀತಿ ನಿರೂಪಕರು ಮತ್ತು ಕೈಗಾರಿಕಾ ನಾಯಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವುದು
ಪ್ರಕಟಣಾ ದಿನಾಂಕ:
18 MAR 2026 2:03PM by PIB Bengaluru

ವಿದ್ಯುತ್ ಮತ್ತು ವಿದ್ಯುತ್ ವಲಯದ ಪ್ರಮುಖ ಜಾಗತಿಕ ಸಮ್ಮೇಳನ-ಹಾಗು-ಪ್ರದರ್ಶನವಾದ ಭಾರತ್ ವಿದ್ಯುತ್ ಶೃಂಗಸಭೆ 2026, ಹೊಸದಿಲ್ಲಿಯ ಯಶೋಭೂಮಿಯಲ್ಲಿ 2026ರ ಮಾರ್ಚ್ 19-ರಿಂದ 22, ರವರೆಗೆ ನಡೆಯಲಿದೆ.
ಈ ಶೃಂಗಸಭೆಯು 100 ಕ್ಕೂ ಹೆಚ್ಚು ಉನ್ನತ ಮಟ್ಟದ ಸಮ್ಮೇಳನ ಅಧಿವೇಶನಗಳು, 300 ಕ್ಕೂ ಹೆಚ್ಚು ಭಾಷಣಕಾರರು, 80 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು, 100 ಕ್ಕೂ ಹೆಚ್ಚು ನವೋದ್ಯಮಗಳು (ಸ್ಟಾರ್ಟ್‌ಅಪ್‌ಗಳು) ಸೇರಿದಂತೆ 500 ಕ್ಕೂ ಹೆಚ್ಚು ಪ್ರದರ್ಶಕರನ್ನು ಮತ್ತು 25,000 ಕ್ಕೂ ಅಧಿಕ ಸಂದರ್ಶಕರನ್ನು ಒಟ್ಟು ಸೇರಿಸುವ ನಿರೀಕ್ಷೆಯಿದೆ, ಇದು ಜಾಗತಿಕವಾಗಿ ಅತಿದೊಡ್ಡ ವಿದ್ಯುತ್-ಕೇಂದ್ರಿತ ವೇದಿಕೆಗಳಲ್ಲಿ ಒಂದಾಗಿರುತ್ತದೆ.
"ವಿದ್ಯುದ್ದೀಕರಣದ ಬೆಳವಣಿಗೆ. ಸುಸ್ಥಿರತೆಯನ್ನು ಸಬಲೀಕರಣ. ಜಾಗತಿಕವಾಗಿ ಸಂಪರ್ಕಿಸುವುದು" ಎಂಬ ವಿಷಯ ಶೀರ್ಷಿಕೆ ಹೊಂದಿರುವ ಶೃಂಗಸಭೆಯು, ಜಾಗತಿಕ ವಿದ್ಯುತ್ ವಲಯದ ಮುಂದಿನ ಹಂತದ ಬೆಳವಣಿಗೆಯನ್ನು ರೂಪಿಸುವ ಗುರಿಯನ್ನು ಹೊಂದಿರುವ ಕಾರ್ಯತಂತ್ರದ ಸಮ್ಮೇಳನಗಳು, ತಾಂತ್ರಿಕ ಸಮ್ಮೇಳನಗಳು, ನಾಯಕತ್ವ ಪ್ಯಾನೆಲ್ ಗಳು ಮತ್ತು ಗಮನ ಕೇಂದ್ರೀಕೃತ ಉದ್ಯಮ ಸಂವಹನಗಳನ್ನು ಒಳಗೊಂಡಂತೆ ಉನ್ನತ ಮಟ್ಟದ ಅಧಿವೇಶನಗಳು ಸೇರಿದಂತೆ ಸಮಗ್ರ ಕಾರ್ಯಕ್ರಮವನ್ನು ಒಳಗೊಂಡಿರುತ್ತದೆ.
ಹಲವಾರು ಅಂತಾರಾಷ್ಟ್ರೀಯ ಇಂಧನ ಸಚಿವರು ಮತ್ತು ಭಾರತೀಯ ರಾಜ್ಯಗಳ ಸಚಿವರು ಹಾಗು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಅನೇಕ ಹಿರಿಯ ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ವಿದ್ಯುತ್ ಮತ್ತು ಶುದ್ಧ ಇಂಧನ ಪರಿಸರ ವ್ಯವಸ್ಥೆಯಲ್ಲಿ ಸಂವಾದ, ಸಹಯೋಗ ಮತ್ತು ನಾವೀನ್ಯತೆಗಾಗಿ ಶೃಂಗಸಭೆಯು ಅತ್ಯಂತ ಪ್ರಮುಖ ಜಾಗತಿಕ ವೇದಿಕೆಗಳಲ್ಲಿ ಒಂದಾಗಿದೆ ಎಂಬುದನ್ನು ಭೌಗೋಳಿಕವಾಗಿ ವ್ಯಾಪಕವಾದ ಈ ಭಾಗವಹಿಸುವಿಕೆ ಪುನರುಚ್ಚರಿಸುತ್ತದೆ.
ಸಮ್ಮೇಳನದಲ್ಲಿ ಕೆಲವು ಪ್ರಮುಖ ಭಾಷಣಕಾರರಲ್ಲಿ ವಿದ್ಯುತ್ ಮತ್ತು ವಸತಿ ಹಾಗು ನಗರ ವ್ಯವಹಾರಗಳ ಸಚಿವರಾದ ಶ್ರೀ ಮನೋಹರ್ ಲಾಲ್; ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಮತ್ತು ಹೊಸ ಹಾಗು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಹೊಸ ಹಾಗು ನವೀಕರಿಸಬಹುದಾದ ಇಂಧನ ಖಾತೆ ಸಹಾಯಕ ಸಚಿವರಾದ ಶ್ರೀ. ಶ್ರೀಪಾದ್ ನಾಯಕ್; ಭಾರತ ಸರ್ಕಾರದ ವಿದ್ಯುತ್ ಸಚಿವಾಲಯದ ಕಾರ್ಯದರ್ಶಿ ಶ್ರೀ ಪಂಕಜ್ ಅಗರ್ವಾಲ್; ಭಾರತ ಸರ್ಕಾರದ ಕೇಂದ್ರ ವಿದ್ಯುತ್ ಪ್ರಾಧಿಕಾರದ (ಸಿಇಎ) ಅಧ್ಯಕ್ಷ ಶ್ರೀ ಘನಶ್ಯಾಮ್ ಪ್ರಸಾದ್; 10 ದೇಶಗಳಿಂದ ಅಂತರರಾಷ್ಟ್ರೀಯ ಇಂಧನ ಸಚಿವರು, 25 ಕ್ಕೂ ಹೆಚ್ಚು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿದ್ಯುತ್ ಮಂತ್ರಿಗಳು ಹಾಗು ಕಾರ್ಯದರ್ಶಿಗಳು, ಸುಮಾರು 60 ದೇಶಗಳ ರಾಯಭಾರಿಗಳು, ಎಲ್ಲಾ ಕೇಂದ್ರ ವಿದ್ಯುತ್ ವಲಯದ ಉದ್ಯಮಗಳ ಮುಖ್ಯಸ್ಥರು ಸೇರಿದಂತೆ 100 ಕ್ಕೂ ಹೆಚ್ಚು ಸಿಇಒಗಳು ಭಾಗವಹಿಸುತ್ತಾರೆ.
ಹೀಗಾಗಿ, ಈ ಕಾರ್ಯಕ್ರಮವು ಹಿರಿಯ ನೀತಿ ನಿರೂಪಕರು, ನಿಯಂತ್ರಕರು, ಶೈಕ್ಷಣಿಕ ಸಂಸ್ಥೆಗಳು, ವಲಯ ತಜ್ಞರು, ಸೌಲಭ್ಯಗಳನ್ನು ಒದಗಿಸುವವರು, ಹೂಡಿಕೆದಾರರು, ನಾವೀನ್ಯಕಾರರು ಮತ್ತು ಉದ್ಯಮ ನಾಯಕರನ್ನು ಒಟ್ಟುಗೂಡಿಸಿ ಭಾರತದ ವಿಕಸನಗೊಳ್ಳುತ್ತಿರುವ ವಿದ್ಯುತ್ ಪರಿಸರ ವ್ಯವಸ್ಥೆಯನ್ನು ರೂಪಿಸುವ ಪ್ರಮುಖ ಆದ್ಯತೆಗಳ ಕುರಿತು ಚರ್ಚಿಸುತ್ತದೆ.
ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ಮಾರಾಟಗಾರರ ಅಭಿವೃದ್ಧಿಗೆ ಶೃಂಗಸಭೆಯು ಬಲವಾದ ಒತ್ತು ನೀಡಲಿದ್ದು, ಹೊರಸೂಸುವಿಕೆ ವ್ಯವಸ್ಥೆಗಳು, ಸೌರಶಕ್ತಿ, ಇಂಧನ ಸಂಗ್ರಹಣೆ, ಪ್ರಸರಣ ಮೂಲಸೌಕರ್ಯ ಮತ್ತು ಡಿಜಿಟಲ್ ವಿತರಣಾ ತಂತ್ರಜ್ಞಾನಗಳಲ್ಲಿ ಪ್ರಮುಖ ತಂತ್ರಜ್ಞಾನಗಳ ದೇಶೀಕರಣ/ಸ್ಥಳೀಕರಣವನ್ನು ಮುನ್ನಡೆಸುವತ್ತ ಗಮನಹರಿಸಲಿದೆ. 2032 ರವರೆಗೆ ಉತ್ಪಾದನೆ, ಪ್ರಸರಣ, ವಿತರಣೆ ಮತ್ತು ಇಂಧನ ಸಂಗ್ರಹಣೆಯಲ್ಲಿ ₹50 ಲಕ್ಷ ಕೋಟಿಗಿಂತ ಹೆಚ್ಚಿನ ಹೂಡಿಕೆ ಅವಕಾಶಗಳನ್ನು ಅಂದಾಜಿಸಲಾಗಿದ್ದು, ಭಾರತದ ವಿದ್ಯುತ್ ವಲಯದಲ್ಲಿ ನಾವೀನ್ಯತೆ, ಸ್ಪರ್ಧಾತ್ಮಕತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ವೇಗವರ್ಧಿಸುವ ಗುರಿಯನ್ನು ಶೃಂಗಸಭೆ ಹೊಂದಿದೆ.
80 ಕ್ಕೂ ಹೆಚ್ಚು ದೇಶಗಳಿಂದ ಭಾಗವಹಿಸುವವರ ಉಪಸ್ಥಿತಿಯು ಭಾರತದ ವೇಗವಾಗಿ ವಿಕಸನಗೊಳ್ಳುತ್ತಿರುವ ವಿದ್ಯುತ್ ವಲಯದಲ್ಲಿ ಬೆಳೆಯುತ್ತಿರುವ ಜಾಗತಿಕ ಆಸಕ್ತಿಯನ್ನು ಪ್ರತಿಬಿಂಬಿಸುತ್ತದೆ ಮತ್ತು ಸ್ಥಿತಿಸ್ಥಾಪಕತ್ವ, ಕೈಗೆಟುಕುವ ಹಾಗು ಸುಸ್ಥಿರ ಇಂಧನ ಪರಿವರ್ತನೆಯನ್ನು ಸಕ್ರಿಯಗೊಳಿಸುವಲ್ಲಿ ದೇಶದ ರೂಪುಗೊಳ್ಳುತ್ತಿರುವ ಉದಯೋನ್ಮುಖ ನಾಯಕತ್ವವನ್ನು ಉಲ್ಲೇಖಿಸುತ್ತದೆ.
ಅಂತರರಾಷ್ಟ್ರೀಯ ಪ್ರಾತಿನಿಧ್ಯದ ಜೊತೆಗೆ, ಹರಿಯಾಣ (ಸ್ಟ್ರಾಟೆಜಿಕ್ ಸ್ಟೇಟ್ ಪಾರ್ಟ್ನರ್), ರಾಜಸ್ಥಾನ (ಪಾಲುದಾರ ರಾಜ್ಯ), ಉತ್ತರ ಪ್ರದೇಶ (ಸ್ಟ್ರಾಟೆಜಿಕ್ ಸ್ಟೇಟ್ ಪಾರ್ಟ್ನರ್), ಮಹಾರಾಷ್ಟ್ರ (ಸ್ಟ್ರಾಟೆಜಿಕ್ ಸ್ಟೇಟ್ ಪಾರ್ಟ್ನರ್), ಆಂಧ್ರಪ್ರದೇಶ (ಫೋಕಸ್ ಸ್ಟೇಟ್), ಬಿಹಾರ (ಫೋಕಸ್ ಸ್ಟೇಟ್), ಒಡಿಶಾ (ಫೋಕಸ್ ಸ್ಟೇಟ್), ಗುಜರಾತ್ (ಸ್ಟ್ರಾಟೆಜಿಕ್ ಸ್ಟೇಟ್ ಪಾರ್ಟ್ನರ್), ಪಂಜಾಬ್ (ಪಾಲುದಾರ ರಾಜ್ಯ), ಮಧ್ಯಪ್ರದೇಶ (ಪಾಲುದಾರ ರಾಜ್ಯ), ಛತ್ತೀಸ್‌ಗಢ (ಪಾಲುದಾರ ರಾಜ್ಯ) ಮತ್ತು ದಿಲ್ಲಿ (ಫೋಕಸ್ ಸ್ಟೇಟ್) ಗಳೊಂದಿಗೆ ವಿಶೇಷ ಆದ್ಯತೆಯೊಂದಿಗೆ 25 ಕ್ಕೂ ಹೆಚ್ಚು ಭಾರತೀಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಿರಿಯ ನಾಯಕತ್ವ ಹಾಗು ಅಧಿಕಾರಿಗಳು ತಮ್ಮ ಉಪಸ್ಥಿತಿಯನ್ನು ದೃಢಪಡಿಸಿದ್ದಾರೆ. ಭಾರತದ ವಿದ್ಯುತ್ ಚೌಕಟ್ಟನ್ನು ಬಲಪಡಿಸುವುದು, ನವೀಕರಿಸಬಹುದಾದ ಇಂಧನ ಏಕೀಕರಣವನ್ನು ವೇಗಗೊಳಿಸುವುದು, ಗ್ರಿಡ್ ಮೂಲಸೌಕರ್ಯವನ್ನು ಆಧುನೀಕರಿಸುವುದು ಮತ್ತು ದೇಶಾದ್ಯಂತ ವಿದ್ಯುತ್ ವಿತರಣಾ ದಕ್ಷತೆಯನ್ನು ಹೆಚ್ಚಿಸುವ ಕುರಿತು ನಿರ್ಣಾಯಕ ಸಂವಾದವನ್ನು ರಾಜ್ಯ ಸರ್ಕಾರಗಳ ಭಾಗವಹಿಸುವಿಕೆಯು ಸುಗಮಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
20,000 ಚದರ ಮೀಟರ್‌ಗಿಂತಲೂ ಹೆಚ್ಚು ಪ್ರದೇಶದಲ್ಲಿ ನಡೆಯಲಿರುವ ದೊಡ್ಡ ಪ್ರಮಾಣದ ಪ್ರದರ್ಶನವು ಶೃಂಗಸಭೆಯ ಕೇಂದ್ರ ಸ್ತಂಭವಾಗಿದ್ದು, ವಿದ್ಯುತ್ ಮೌಲ್ಯ ಸರಪಳಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳು, ನಾವೀನ್ಯತೆಗಳು ಮತ್ತು ಪರಿಹಾರಗಳನ್ನು ಪ್ರದರ್ಶಿಸುತ್ತದೆ. ವಿದ್ಯುತ್ ಉತ್ಪಾದನೆ, ಪ್ರಸರಣ, ನವೀಕರಿಸಬಹುದಾದ ಮತ್ತು ಶುದ್ಧ ಇಂಧನ, ಇಂಧನ ಸಂಗ್ರಹಣೆ, ವಿತರಣೆ ಮತ್ತು ಸ್ಮಾರ್ಟ್ ಗ್ರಿಡ್ ತಂತ್ರಜ್ಞಾನಗಳನ್ನು ಒಳಗೊಂಡ ವಿಷಯಾಧಾರಿತ ವಲಯಗಳಲ್ಲಿ ಪ್ರದರ್ಶನವನ್ನು ಆಯೋಜಿಸಲಾಗುವುದು, ಜೊತೆಗೆ ಇಂಧನ ನಾವೀನ್ಯತೆ, ಸ್ಟಾರ್ಟ್‌ಅಪ್‌ಗಳು ಮತ್ತು ಉದಯೋನ್ಮುಖ ತಂತ್ರಜ್ಞಾನಗಳಿಗೆ ಮೀಸಲಾದ ಕ್ಷೇತ್ರಗಳನ್ನು ಸಹ ಆಯೋಜಿಸಲಾಗುತ್ತದೆ. ಈ ವಲಯಗಳು ಉದ್ಯಮದ ನಾಯಕರು, ನಾವೀನ್ಯಕಾರರು ಮತ್ತು ತಯಾರಕರಿಗೆ ವಿದ್ಯುತ್ ಉತ್ಪಾದನಾ ತಂತ್ರಜ್ಞಾನಗಳು, ಪ್ರಸರಣ ವ್ಯವಸ್ಥೆಗಳು, ವಿತರಣೆ ಮತ್ತು ನಿಯಂತ್ರಣ ಪರಿಹಾರಗಳು, ಡಿಜಿಟಲ್ ತಂತ್ರಜ್ಞಾನಗಳು, ಇಂಧನ ಸಂಗ್ರಹಣೆ ಮತ್ತು ಬ್ಯಾಟರಿ ನಾವೀನ್ಯತೆಗಳು, ಇಂಧನ ದಕ್ಷತೆಯ ಪರಿಹಾರಗಳು ಮತ್ತು ನವೀಕರಿಸಬಹುದಾದ ಇಂಧನ ವ್ಯವಸ್ಥೆಗಳಲ್ಲಿ ಪ್ರಗತಿಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುತ್ತವೆ.
ಈ ಶೃಂಗಸಭೆಯು ಹೆಚ್ಚಿನ ಪ್ರಭಾವ ಬೀರುವ ಸಂವಾದ ಮತ್ತು ಕೈಗಾರಿಕಾ ಸಹಯೋಗವನ್ನು ಸುಗಮಗೊಳಿಸಲು ವಿನ್ಯಾಸಗೊಳಿಸಲಾದ ವಿಶೇಷ ಕಾರ್ಯಕ್ರಮಗಳ ಸರಣಿಯನ್ನು ಸಹ ಆಯೋಜಿಸುತ್ತದೆ. ಇವುಗಳಲ್ಲಿ ಅಂತಾರಾಷ್ಟ್ರೀಯ ಸಚಿವರ ಸಭೆ, ರಾಷ್ಟ್ರೀಯ ವಿದ್ಯುತ್ ಸಚಿವರ ಸಭೆ, ಉತ್ಪಾದನೆ, ಪ್ರಸರಣ ಮತ್ತು ವಿತರಣಾ ವಿಭಾಗಗಳಲ್ಲಿ ಸಿಇಒ ವೇದಿಕೆಗಳು ಮತ್ತು ಪ್ರಮುಖ ಇಂಧನ ಕಂಪನಿಗಳ ನಾಯಕರನ್ನು ಒಟ್ಟುಗೂಡಿಸುವ ಒಟ್ಟು/ಸಮಗ್ರ ವಲಯ ಸಿಇಒ ಸಂವಾದ (ಹಿಟಾಚಿ ಯುಎಸ್ಎ, ರೊಸೆಟ್ಟಿ ರಷ್ಯಾ, ಎಸ್ಕಾಮ್, ಟಿಎನ್‌ಬಿ ಮಲೇಷ್ಯಾ, ಆಫ್ರಿಕಾ 50, ಇಡಿಎಫ್ ಪವರ್ ಸೊಲ್ಯೂಷನ್ಸ್, ಜೆಸ್ಕೋ ಸಿ.ಇ.ಒ.ಗಳು ಒಳಗೊಂಡಂತೆ) ಸೇರಿವೆ. ಇದರ ಜೊತೆಗೆ, ಹಲವಾರು ವಿಷಯಾಧಾರಿತ ಅಧಿವೇಶನಗಳು ಸ್ಥಿರ ಇಂಧನ ದಾಸ್ತಾನು/ಸಂಗ್ರಹಣೆ ವ್ಯವಸ್ಥೆ, ಪ್ರಸರಣ ವಲಯದಲ್ಲಿ ಉದ್ಯಮ 4.0 ತಂತ್ರಜ್ಞಾನಗಳು, ಜಲವಿದ್ಯುತ್ ಅಭಿವೃದ್ಧಿ, ಇಂಗಾಲದ ಮಾರುಕಟ್ಟೆಗಳು, ಕಾನೂನು ಮತ್ತು ನಿಯಂತ್ರಕ ಚೌಕಟ್ಟುಗಳು ಹಾಗು ವಿದ್ಯುತ್ ಮೌಲ್ಯ ಸರಪಳಿಯಾದ್ಯಂತ ಮಾರಾಟಗಾರರ ಅಭಿವೃದ್ಧಿ ಅವಕಾಶಗಳಂತಹ ಪ್ರಮುಖ ಉದ್ಯಮ ಆದ್ಯತೆಗಳ ಮೇಲೆ ಗಮನ ಕೇಂದ್ರೀಕರಿಸುತ್ತವೆ. ವಿಶೇಷ ಅಧಿವೇಶನಗಳು ಇಂಧನ ಸ್ಟಾರ್ಟ್‌ಅಪ್‌ಗಳು, ಮುಂದಿನ ಪೀಳಿಗೆಯ ತಂತ್ರಜ್ಞಾನಗಳು, ಯುವಜನರು ಮತ್ತು ಯುವ ವೃತ್ತಿಪರರು ಸೇರಿದಂತೆ ಉದಯೋನ್ಮುಖ ಕ್ಷೇತ್ರಗಳನ್ನು ಹಾಗೂ ವಿದ್ಯುತ್ ನಾಯಕತ್ವದಲ್ಲಿ ಮಹಿಳೆಯರನ್ನು ಉತ್ತೇಜಿಸುವ ಉಪಕ್ರಮಗಳನ್ನು ಸಹ ಹೈಲೈಟ್ ಮಾಡುತ್ತವೆ.
ಈ ಶೃಂಗಸಭೆಯು ಆಫ್ರಿಕಾ ಸೆಷನ್, ಬ್ರಿಟಿಷ್ ಹೈಕಮಿಷನ್ ಮತ್ತು ಪ್ರಮುಖ ಇಂಧನ ಸಂಘಗಳಂತಹ ಜಾಗತಿಕ ಸಂಸ್ಥೆಗಳು ಮತ್ತು ಪಾಲುದಾರರನ್ನು ಸೇರಿಸಿಕೊಂಡಂತೆ ಅಧಿವೇಶನಗಳನ್ನು ಒಳಗೊಂಡ ಅಂತರರಾಷ್ಟ್ರೀಯ ಸಹಯೋಗ ವೇದಿಕೆಗಳನ್ನು ಮತ್ತಷ್ಟು ಹೊಂದಿರುತ್ತದೆ. ಕೇಬಲ್‌ಟೆಕ್ 2026 ಸೇರಿದಂತೆ ಪ್ರತ್ಯೇಕ ಮೀಸಲಾದ ಉದ್ಯಮ ಸಂವಾದಗಳು, ವಿತರಿಸಿದ ನವೀಕರಿಸಬಹುದಾದ ಇಂಧನಕ್ಕಾಗಿ ಮೀಟರ್ ಹಿಂದಿನ ಇಂಧನ ಸಂಗ್ರಹಣೆಯ ಕುರಿತು ಚರ್ಚೆಗಳು ಮತ್ತು ಇಂಡಿಯಾ ಎನರ್ಜಿ ಸ್ಟೋರೇಜ್ ಅಲೈಯನ್ಸ್ (ಐ.ಇ.ಎಸ್.ಎ.-IESA) ನಂತಹ ಸಂಸ್ಥೆಗಳ ನೇತೃತ್ವದ ಅಧಿವೇಶನಗಳು ವಿದ್ಯುತ್ ಕ್ಷೇತ್ರದ ಭವಿಷ್ಯವನ್ನು ರೂಪಿಸುವ ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಹೂಡಿಕೆ ಅವಕಾಶಗಳನ್ನು ಅನ್ವೇಷಿಸುತ್ತವೆ.
ಶೃಂಗಸಭೆಯಲ್ಲಿನ ಕಾರ್ಯತಂತ್ರದ, ವ್ಯೂಹಾತ್ಮಕ ಸಮ್ಮೇಳನದ ಚರ್ಚೆಗಳು ಜಾಗತಿಕ ವಿದ್ಯುತ್ ಪರಿಸರ ವ್ಯವಸ್ಥೆಯ ಭವಿಷ್ಯಕ್ಕೆ ನಿರ್ಣಾಯಕ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸುತ್ತವೆ ಮತ್ತು 120 ಕ್ಕೂ ಹೆಚ್ಚು ನಾಯಕರು, ಕಾರ್ಯತಂತ್ರದ ಸಮಿತಿಗಳಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವವರನ್ನು ಒಳಗೊಂಡಿರುತ್ತವೆ. ವಿಶ್ವಾದ್ಯಂತ ಅಂತರ ಸಂಪರ್ಕಿತ ವಿದ್ಯುತ್ ವ್ಯವಸ್ಥೆಗಳನ್ನು ಬಲಪಡಿಸುವುದು, ಜಾಗತಿಕ ಇಂಧನ ಪರಿವರ್ತನೆಯಲ್ಲಿ ಭಾರತದ ನಾಯಕತ್ವವನ್ನು ಮುನ್ನಡೆಸುವುದು, ಸ್ಥಿತಿಸ್ಥಾಪಕ ವಿದ್ಯುತ್ ಪೂರೈಕೆ ಸರಪಳಿಗಳನ್ನು ನಿರ್ಮಿಸುವುದು, ವಿದ್ಯುತ್ ವಲಯದಲ್ಲಿ ಹಣಕಾಸು ಮತ್ತು ಹೂಡಿಕೆಗೆ ಹೊಸ ಮಾರ್ಗಗಳನ್ನು ತೆರೆಯುವುದು, ಶುದ್ಧ ಇಂಧನ ತಂತ್ರಜ್ಞಾನಗಳ ನಿಯೋಜನೆಯನ್ನು ವೇಗಗೊಳಿಸುವುದು ಮತ್ತು ವಿದ್ಯುತ್ ಮೌಲ್ಯ ಸರಪಳಿಯಾದ್ಯಂತ ಸುಧಾರಿತ ತಾಂತ್ರಿಕ ನಾವೀನ್ಯತೆಯನ್ನು ಬೆಳೆಸುವುದು ಇವುಗಳಲ್ಲಿ ಸೇರಿವೆ.
ಈ ಅಧಿವೇಶನಗಳು ವಲಯದಲ್ಲಿ ವ್ಯವಹಾರ ಮಾಡುವ ಸುಲಭತೆಯನ್ನು ಹೆಚ್ಚಿಸುವ, ಸಮಗ್ರ ಇಂಧನ ಪ್ರವೇಶವನ್ನು ವಿಸ್ತರಿಸುವ ಮತ್ತು ವೇಗವಾಗಿ ವಿಕಸನಗೊಳ್ಳುತ್ತಿರುವ ವಿದ್ಯುತ್ ಭೂದೃಶ್ಯವನ್ನು ಬೆಂಬಲಿಸಲು ಅಗತ್ಯವಿರುವ ಮುಂದಿನ ಪೀಳಿಗೆಯ ಕಾರ್ಯಪಡೆಯನ್ನು ಅಭಿವೃದ್ಧಿಪಡಿಸುವ ಮಾರ್ಗಗಳನ್ನು ಸಹ ಪರಿಶೀಲಿಸುತ್ತವೆ.
ಈ ಕಾರ್ಯಕ್ರಮವು ಸರ್ಕಾರಿ ನಾಯಕರು, ಯೋಜನಾ ಮಾಲೀಕರು, ಎಂಜಿನಿಯರಿಂಗ್, ಖರೀದಿ ಮತ್ತು ನಿರ್ಮಾಣ ಕಂಪನಿಗಳು, ಮೂಲಸೌಕರ್ಯ ಅಭಿವೃದ್ಧಿ ಮಾಡುವವರು, ಅರ್ಹ ಅಂತಾರಾಷ್ಟ್ರೀಯ ಖರೀದಿದಾರರು, ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ನಾಯಕರು, ಹಣಕಾಸು ಸಂಸ್ಥೆಗಳು, ಎಂ.ಎಸ್.ಎಂ.ಇ. (MSME) ಗಳು, ಬೃಹತ್ ಉತ್ಪಾದಕರು/ ತಯಾರಕರು, ಉದ್ಯಮ ಸಂಘಗಳು ಮತ್ತು ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ವೈವಿಧ್ಯಮಯ ಜಾಗತಿಕ ಪ್ರೇಕ್ಷಕರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಶೃಂಗಸಭೆಯು ರಚನಾತ್ಮಕ ಖರೀದಿದಾರ-ಮಾರಾಟಗಾರರ ಸಭೆಗಳನ್ನು ಸಹ ಆಯೋಜಿಸುತ್ತದೆ, ಇದು ಅಂತಾರಾಷ್ಟ್ರೀಯ ಖರೀದಿ ಸಂಸ್ಥೆಗಳು, ಸೌಲಭ್ಯ ಒದಗಿಸುವ ಸಂಸ್ಥೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವವರು, ಮತ್ತು ಇತರರಿಗೆ ಭಾರತೀಯ ತಯಾರಕರು ಮತ್ತು ತಂತ್ರಜ್ಞಾನ ಪೂರೈಕೆದಾರರೊಂದಿಗೆ ನೇರವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಇಂಧನ ಭದ್ರತೆ, ಸುಸ್ಥಿರತೆ ಮತ್ತು ಜಾಗತಿಕ ನಾಯಕತ್ವಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಈ ಶೃಂಗಸಭೆಯು ಜಾಗತಿಕ ವಿದ್ಯುತ್ ಪರಿಸರ ವ್ಯವಸ್ಥೆಯಲ್ಲಿ ಭಾರತದ ಪಾತ್ರವನ್ನು ಬಲಪಡಿಸುವ ಜೊತೆಗೆ ಹೂಡಿಕೆ, ತಂತ್ರಜ್ಞಾನ ಪಾಲುದಾರಿಕೆ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ವೇಗವರ್ಧಕವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಭಾರತ್ ವಿದ್ಯುತ್ ಶೃಂಗಸಭೆ 2026 ಕುರಿತು ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಭೇಟಿ ನೀಡಿ: www.bharatelectricitysummit.com
(ಪ್ರಕಟಣೆ ಐ.ಡಿ.: 2241756)
ವಿಸಿಟರ್ ಕೌಂಟರ್ : 10