ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಸೌರ ಇಂಗಾಟ್ಸ್ (ಅಚ್ಚುಗಟ್ಟಿ) ಮತ್ತು ವೇಫರ್ (ಹಾಳೆ) ಗಳಿಗೆ ಎ ಎಲ್ ಎಂ ಎಂ ಚೌಕಟ್ಟನ್ನು ವಿಸ್ತರಿಸಿದ ಸರ್ಕಾರ; 2028ರ ಜೂನ್ 1ರಿಂದ ಜಾರಿಗೆ
ದೇಶೀಯ ಸೌರಶಕ್ತಿ ಉತ್ಪಾದನೆಯನ್ನು ಬಲಪಡಿಸಲು ಎ ಎಲ್ ಎಂ ಎಂ ಚೌಕಟ್ಟಿನ ವಿಸ್ತರಣೆ: ಶ್ರೀ ಪ್ರಲ್ಹಾದ್ ಜೋಶಿ
ಸೌರಶಕ್ತಿ ಪೂರೈಕೆ ಸರಪಳಿಯಾದ್ಯಂತ ದೇಶೀಯ ಮೌಲ್ಯವರ್ಧನೆಯನ್ನು ಹೆಚ್ಚಿಸಲು, ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಜಾಗತಿಕ ಸೌರಶಕ್ತಿ ಉತ್ಪಾದನಾ ಕೇಂದ್ರವಾಗುವ ಭಾರತದ ಮಹತ್ವಾಕಾಂಕ್ಷೆಯನ್ನು ಬಲಪಡಿಸಲು ಕ್ರಮ
ಪ್ರಕಟಣಾ ದಿನಾಂಕ:
18 MAR 2026 9:34AM by PIB Bengaluru
ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಇಂಗಾಟ್ಸ್ (ಅಚ್ಚುಗಟ್ಟಿ) ಮತ್ತು ವೇಫರ್ (ಹಾಳೆ)ಗಳಿಗಾಗಿ 'ಎ ಎಲ್ ಎಂ ಎಂ ಪಟ್ಟಿ-III' (ಅನುಮೋದಿತ ಮಾದರಿಗಳು ಮತ್ತು ತಯಾರಕರ ಪಟ್ಟಿ) ಯನ್ನು ಪರಿಚಯಿಸುವ ಮೂಲಕ ಎ ಎಲ್ ಎಂ ಎಂ ಆದೇಶವನ್ನು ವಿಸ್ತರಿಸಿದೆ, ಇದು 1 ಜೂನ್ 2028 ರಿಂದ ಜಾರಿಗೆ ಬರಲಿದೆ. ಈಗಾಗಲೇ ಯೋಜಿಸಲಾಗಿರುವ ಯೋಜನೆಗಳನ್ನು ರಕ್ಷಿಸಲು ಸೂಕ್ತವಾದ 'ಗ್ರ್ಯಾಂಡ್‌ಫಾದರಿಂಗ್' (ಹಳೆಯ ನಿಯಮಗಳ ಮುಂದುವರಿಕೆ) ನಿಬಂಧನೆಗಳನ್ನು ರೂಪಿಸಲಾಗಿದೆ. ಪ್ರಸ್ತುತ ಮಾಡ್ಯೂಲ್‌ಗಳು ಮತ್ತು ಸೆಲ್‌ಗಳಿಗೆ ಈಗಾಗಲೇ ಜಾರಿಯಲ್ಲಿರುವ ಎ ಎಲ್ ಎಂ ಎಂ ಪಟ್ಟಿಗಳಿಂದ ಕಡ್ಡಾಯವಾಗಿ ಸರಕು ಪಡೆಯುವ ಅಗತ್ಯತೆಗಳನ್ನು, ಸೌರ ಪೂರೈಕೆ ಸರಪಳಿಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಇಂಗಾಟ್ಸ್ ಮತ್ತು ವೇಫರ್ ಗಳನ್ನು ಒಳಗೊಳ್ಳುವಂತೆ ಸಚಿವಾಲಯದ ಈ ಪ್ರಸ್ತುತ ಆದೇಶವು ವಿಸ್ತರಿಸುತ್ತದೆ. ಇವು ಪ್ರಸ್ತುತ ಹೆಚ್ಚಿನ ಪ್ರಮಾಣದಲ್ಲಿ ಆಮದಿನ ಮೇಲೆ ಅವಲಂಬಿತವಾಗಿವೆ.
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು, ಇದು ಭಾರತದ ಸೌರಶಕ್ತಿ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಒಂದು ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಹೇಳಿದರು. ಈ ಕ್ರಮವು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ, ಪೂರೈಕೆ ಸರಪಳಿಯ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುತ್ತದೆ, ಆಮದು ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಸೌರ ಮೌಲ್ಯ ಸರಪಳಿಯಾದ್ಯಂತ ಉನ್ನತ ಗುಣಮಟ್ಟದ ಮಾನದಂಡಗಳನ್ನು ಖಚಿತಪಡಿಸುತ್ತದೆ ಎಂದು ಸಚಿವರು ತಿಳಿಸಿದರು.
ಪ್ರಮುಖ ನಿಬಂಧನೆಗಳು
- ಜಾರಿಗೆ ಬರುವ ದಿನಾಂಕ: 1 ಜೂನ್ 2028 - ಈ ದಿನಾಂಕದಿಂದ ನೆಟ್ ಮೀಟರಿಂಗ್/ಓಪನ್ ಆಕ್ಸೆಸ್ ಯೋಜನೆಗಳು ಸೇರಿದಂತೆ ಎಲ್ಲಾ ಯೋಜನೆಗಳು ಕಡ್ಡಾಯವಾಗಿ ಎ ಎಲ್ ಎಂ ಎಂ -ಪಟ್ಟಿ ಮಾಡಲಾದ ವೇಫರ್ ಗಳನ್ನು ಬಳಸಬೇಕು.
- ಕಟ್-ಆಫ್ ದಿನಾಂಕ: ವೇಫರ್ ಗಳಿಗಾಗಿ ಮೊದಲ ಎ ಎಲ್ ಎಂ ಎಂ ಪಟ್ಟಿ-III ಪ್ರಕಟವಾದ 7 ದಿನಗಳ ನಂತರ. ಈ ದಿನಾಂಕದ ನಂತರ ಸೆಕ್ಷನ್ 63 ಅಡಿಯಲ್ಲಿ ಸಲ್ಲಿಸಲಾದ ಬಿಡ್ ಗಳು ಎ ಎಲ್ ಎಂ ಎಂ ಪಟ್ಟಿ-III ಕ್ಕೆ ಅನುಗುಣವಾಗಿರುವ ವೇಫರ್ ಗಳ ಬಳಕೆಯನ್ನು ಕಡ್ಡಾಯವಾಗಿ ನಮೂದಿಸಬೇಕು.
- ಆರಂಭಿಕ ಪಟ್ಟಿಯನ್ನು ಹೊರಡಿಸಲು ಮಿತಿ: ಕನಿಷ್ಠ 3 ಸ್ವತಂತ್ರ ಉತ್ಪಾದನಾ ಘಟಕಗಳು (ಸಾಮಾನ್ಯ ಮಾಲೀಕತ್ವ ಅಥವಾ ನಿಯಂತ್ರಣದಲ್ಲಿಲ್ಲದ) ಮತ್ತು 15 ಗಿವ್ಯಾ ಸಂಯೋಜಿತ ಸಾಮರ್ಥ್ಯವನ್ನು ಹೊಂದಿರಬೇಕು. ಕನಿಷ್ಠ ದೇಶೀಯ ಪೂರೈಕೆ ಲಭ್ಯವಿರುವಾಗ ಮಾತ್ರ ಪಟ್ಟಿಯನ್ನು ಬಿಡುಗಡೆ ಮಾಡುವುದನ್ನು ಇದು ಖಚಿತಪಡಿಸುತ್ತದೆ.
- ಕಡ್ಡಾಯ ಇಂಗಾಟ್ ಸಾಮರ್ಥ್ಯ: ವೇಫರ್ ಗಳಿಗಾಗಿ ಎ ಎಲ್ ಎಂ ಎಂ ಪಟ್ಟಿ-III ರಲ್ಲಿ ಸೇರ್ಪಡೆಗೊಳ್ಳಲು ಬಯಸುವ ತಯಾರಕರು ಸಮಾನವಾದ ಇಂಗಾಟ್ ಉತ್ಪಾದನಾ ಸಾಮರ್ಥ್ಯವನ್ನೂ ಹೊಂದಿರಬೇಕು, ಇದು ಇಂಗಾಟ್ ಗಳಿಗಾಗಿ ಅಪ್‌ಸ್ಟ್ರೀಮ್ ಏಕೀಕರಣವನ್ನು ಉತ್ತೇಜಿಸುತ್ತದೆ.
- ಮಾಡ್ಯೂಲ್ ಪಟ್ಟಿಯ ಸಮಗ್ರತೆ: ಜಾರಿಗೆ ಬರುವ ದಿನಾಂಕದಿಂದ, ಎ ಎಲ್ ಎಂ ಎಂ ಪಟ್ಟಿ-I (ಸೌರ ಪಿವಿ ಮಾಡ್ಯೂಲ್ ಗಳು) ಕೇವಲ ಎ ಎಲ್ ಎಂ ಎಂ -ಪಟ್ಟಿ ಮಾಡಲಾದ ಸೆಲ್‌ಗಳು ಮತ್ತು ವೇಫರ್ ಗಳನ್ನು ಬಳಸಿ ತಯಾರಿಸಿದ ಮಾಡ್ಯೂಲ್ ಗಳನ್ನು ಮಾತ್ರ ಒಳಗೊಂಡಿರುತ್ತದೆ. ಅಡಚಣೆಯನ್ನು ತಪ್ಪಿಸಲು ಗ್ರ್ಯಾಂಡ್‌ಫಾದರ್ಡ್ ಯೋಜನೆಗಳಿಗಾಗಿ ಪ್ರತ್ಯೇಕ ಪಟ್ಟಿಗಳನ್ನು ನಿರ್ವಹಿಸಲಾಗುತ್ತದೆ.
- ಡಿಸಿಆರ್ ನಿಬಂಧನೆಗಳು: ಈ ಆದೇಶವು ಅಸ್ತಿತ್ವದಲ್ಲಿರುವ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಯೋಜನೆಗಳ ಅಡಿಯಲ್ಲಿ ಯಾವುದೇ ದೇಶೀಯ ವಿಷಯದ ಅವಶ್ಯಕತೆ (ಡಿಸಿಆರ್) ನಿಬಂಧನೆಗಳನ್ನು ದುರ್ಬಲಗೊಳಿಸುವುದಿಲ್ಲ ಅಥವಾ ಅತಿಕ್ರಮಿಸುವುದಿಲ್ಲ.
ನಿರೀಕ್ಷಿತ ಪ್ರಯೋಜನಗಳು
ವೇಫರ್ ಗಳು ಸೌರ ಕೋಶಗಳು ಮತ್ತು ಪಾಲಿಸಿಲಿಕಾನ್ ನಡುವಿನ ನಿರ್ಣಾಯಕ ಮಧ್ಯಂತರ ಹಂತವಾಗಿದೆ. ಭಾರತವು ಪ್ರಸ್ತುತ ಸೀಮಿತ ದೇಶೀಯ ವೇಫರ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ ಮತ್ತು ಗಣನೀಯವಾಗಿ ಆಮದುಗಳ ಮೇಲೆ ಅವಲಂಬಿತವಾಗಿದೆ.
ಎ ಎಲ್ ಎಂ ಎಂ ಪಟ್ಟಿ-III ರ ಪರಿಚಯವು ಈ ಕೆಳಗಿನವುಗಳನ್ನು ನಿರೀಕ್ಷಿಸುತ್ತದೆ:
- ಭಾರತದಲ್ಲಿ ಇಂಗಾಟ್ ಮತ್ತು ವೇಫರ್ ಉತ್ಪಾದನಾ ಸೌಲಭ್ಯಗಳಲ್ಲಿ ಹೂಡಿಕೆಯನ್ನು ಉತ್ತೇಜಿಸುವುದು;
- ಪೂರೈಕೆ ಸರಪಳಿ ಸುರಕ್ಷತೆಯನ್ನು ಸುಧಾರಿಸುವುದು ಮತ್ತು ಆಮದು ಅಡಚಣೆಗಳ ಸಂವೇದನಾಶೀಲತೆಯನ್ನು ಕಡಿಮೆ ಮಾಡುವುದು;
- ವೇಫರ್ ನಿಂದ ಮಾಡ್ಯೂಲ್ ವರೆಗೆ ಸೌರ ಘಟಕಗಳ ಗುಣಮಟ್ಟ ಮತ್ತು ಪತ್ತೆಹಚ್ಚುವಿಕೆಯನ್ನು ಖಚಿತಪಡಿಸಿಕೊಳ್ಳುವುದು;
- ಅಪ್‌ಸ್ಟ್ರೀಮ್ ಸೌರ ಉತ್ಪಾದನೆಯಲ್ಲಿ ಕೌಶಲ್ಯದ ಉದ್ಯೋಗಗಳನ್ನು ಸೃಷ್ಟಿಸುವುದು;
ಎ ಎಲ್ ಎಂ ಎಂ ನ ಈ ವಿಸ್ತರಣೆಯು ಆತ್ಮನಿರ್ಭರ ಭಾರತದತ್ತ ಒಂದು ಪ್ರಮುಖ ಹೆಜ್ಜೆಯಾಗಿದೆ ಮತ್ತು 2030 ರ ವೇಳೆಗೆ 500 ಗಿಗಾವಾಟ್ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವನ್ನು ಸಾಧಿಸುವ ದೇಶದ ಬದ್ಧತೆಯನ್ನು ಪ್ರತಿನಿಧಿಸುತ್ತದೆ.
ಹಿನ್ನೆಲೆ
ಭಾರತದ ಅನುಮೋದಿತ ಮಾದರಿಗಳು ಮತ್ತು ತಯಾರಕರ ಪಟ್ಟಿ (ಎ ಎಲ್ ಎಂ ಎಂ) ಆದೇಶ, 2019 ಒಂದು ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯ ಚೌಕಟ್ಟಾಗಿದ್ದು, ಇದು ದೇಶದ ಸೌರಶಕ್ತಿ ಯೋಜನೆಗಳಲ್ಲಿ ಬಳಸುವ ಸೌರ ಉಪಕರಣಗಳು ದೇಶೀಯ ಉತ್ಪಾದನಾ ಮಾನದಂಡಗಳನ್ನು ಪೂರೈಸುವುದನ್ನು ಖಚಿತಪಡಿಸುತ್ತದೆ. ಇದು ವಿದ್ಯುತ್ ಕಾಯ್ದೆ 2003 ರ ಸೆಕ್ಷನ್ 63 ರ ಅಡಿಯಲ್ಲಿ ಸ್ಪರ್ಧಾತ್ಮಕ ಬಿಡ್ಡಿಂಗ್ ಮೂಲಕ ನೀಡಲಾದ ಯೋಜನೆಗಳಿಗೆ ಮತ್ತು ನೆಟ್-ಮೀಟರಿಂಗ್ ಅಥವಾ ಓಪನ್-ಆಕ್ಸೆಸ್ ಯೋಜನೆಗಳಿಗೆ ಅನ್ವಯಿಸುತ್ತದೆ.
ಎ ಎಲ್ ಎಂ ಎಂ ಅನ್ನು ಪರಿಚಯಿಸಿದಾಗಿನಿಂದ, ದೇಶೀಯ ಸೌರ ಉತ್ಪಾದನೆಯು ಗಣನೀಯವಾಗಿ ವಿಸ್ತರಿಸಿದೆ. ಎ ಎಲ್ ಎಂ ಎಂ ಪಟ್ಟಿ-I (ಸೌರ ಪಿವಿ ಮಾಡ್ಯೂಲ್ ಗಳು) 2021 ರಲ್ಲಿ 8.2 ಗಿಗಾವಾಟ್ ನಿಂದ ಪ್ರಸ್ತುತ ಸುಮಾರು 172 ಗಿಗಾವಾಟ್ ಗೆ ಬೆಳೆದಿದೆ. ಇತ್ತೀಚೆಗೆ ಪರಿಚಯಿಸಲಾದ ಎ ಎಲ್ ಎಂ ಎಂ ಪಟ್ಟಿ-II (ಸೌರ ಪಿವಿ ಕೋಶಗಳು), ಕೇವಲ ಏಳು ತಿಂಗಳೊಳಗೆ ಈಗಾಗಲೇ 27 ಗಿಗಾವಾಟ್ ತಲುಪಿದೆ, ಇದು ದೇಶೀಯ ಹೂಡಿಕೆಯನ್ನು ಉತ್ತೇಜಿಸುವಲ್ಲಿ ಚೌಕಟ್ಟಿನ ಪರಿಣಾಮಕಾರಿತ್ವವನ್ನು ತೋರಿಸುತ್ತದೆ.
*****
(ಪ್ರಕಟಣೆ ಐ.ಡಿ.: 2241615)
ವಿಸಿಟರ್ ಕೌಂಟರ್ : 17