ಭಾರೀ ಕೈಗಾರಿಕೆಗಳ ಸಚಿವಾಲಯ
azadi ka amrit mahotsav

ಕರ್ನಾಟಕದ ಮಂಡ್ಯದಲ್ಲಿ ಒಳಾಂಗಣ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಮತ್ತು ಶ್ರೀ ಹೆಚ್.ಡಿ. ಕುಮಾರಸ್ವಾಮಿ  

ಪ್ರಕಟಣಾ ದಿನಾಂಕ: 15 MAR 2026 8:51AM by PIB Bengaluru

ಭಾರತ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ಕರ್ನಾಟಕದ ಮಂಡ್ಯಕ್ಕೆ ಮಂಜೂರಾದ 14 ಕೋಟಿ ರೂಪಾಯಿ ವೆಚ್ಚದ ಬಹುಪಯೋಗಿ ಒಳಾಂಗಣ ಕ್ರೀಡಾ ಸಂಕೀರ್ಣಕ್ಕೆ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವರಾದ ಮನ್ಸುಖ್ ಮಾಂಡವಿಯಾ ಮತ್ತು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಶನಿವಾರ ಭೂಮಿ ಪೂಜೆ ಮಾಡಿ ಶಂಕುಸ್ಥಾಪನೆ ನೆರವೇರಿಸಿದರು.

ಮಂಡ್ಯದ ವಿಸಿ ಫಾರ್ಮ್‌ನಲ್ಲಿರುವ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಆವರಣದಲ್ಲಿ ಹೊಸ ಸೌಲಭ್ಯ ನಿರ್ಮಾಣವಾಗುತ್ತಿದೆ. ಶಿಲಾನ್ಯಾಸ ನೆರವೇರಿಸುವ ಸಂದರ್ಭದಲ್ಲಿ ಇಬ್ಬರು ಸಚಿವರು ಜಿಲ್ಲೆಯ ಯುವಕರಿಗೆ "ಖೇಲೋ ಇಂಡಿಯಾ! ವೈಬ್ರೆಂಟ್ ಮಂಡ್ಯ!" ಎಂಬ ಘೋಷಣೆಗೆ ಅನುಗುಣವಾಗಿ ಮಂಡ್ಯದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಬಲಪಡಿಸಲು ಮತ್ತು ಆ ಪ್ರದೇಶದಿಂದ ಹೆಚ್ಚಿನ ಚಾಂಪಿಯನ್‌ಗಳನ್ನು ತಯಾರಾಗಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಇಬ್ಬರೂ ಕೇಂದ್ರ ಸಚಿವರು ಶಿಲಾನ್ಯಾಸ ಕಾರ್ಯಕ್ರಮದ ವಿಧ್ಯುಕ್ತ ಆಚರಣೆಗಳಲ್ಲಿ ಭಾಗವಹಿಸಿದರು. ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕೆ.ಆರ್. ಪೇಟೆ ಶಾಸಕ ಮಂಜುನಾಥ್, ಹಲವು ಸಾರ್ವಜನಿಕ ಪ್ರತಿನಿಧಿಗಳು ಮತ್ತು ಹಿರಿಯ ಜಿಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

ಮಂಡ್ಯದಲ್ಲಿ ಕ್ರೀಡಾ ಸಾಧನೆಗಳಿಗೆ ಶ್ಲಾಘನೆ

ವೇದಿಕೆ ಕಾರ್ಯಕ್ರಮದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವಿಯ, “ಖೇಲೋ ಇಂಡಿಯಾ ಉಪಕ್ರಮವು ಕೇಂದ್ರ ಸರ್ಕಾರವು ಕ್ರೀಡಾ ಸಂಸ್ಕೃತಿಯನ್ನು ತಳಮಟ್ಟದಲ್ಲಿ ಪುನರುಜ್ಜೀವನಗೊಳಿಸಲು ಮತ್ತು ಭಾರತವನ್ನು ಪ್ರಮುಖ ಕ್ರೀಡಾ ರಾಷ್ಟ್ರವನ್ನಾಗಿ ಪರಿವರ್ತಿಸಲು ಆರಂಭಿಸಿದ ಪ್ರಮುಖ ರಾಷ್ಟ್ರೀಯ ಕಾರ್ಯಕ್ರಮವಾಗಿದೆ’’ ಎಂದು ಹೇಳಿದರು.

ತಮ್ಮ ಸಂಪುಟ ಸಹೋದ್ಯೋಗಿ ಮತ್ತು ಎನ್‌ಡಿಎ ನಾಯಕರಾದ ಹೆಚ್.ಡಿ. ಕುಮಾರಸ್ವಾಮಿ ಅವರ ಪ್ರಯತ್ನಗಳಿಂದಾಗಿ ಮಂಡ್ಯದಲ್ಲಿ ಈ ಸುಸಜ್ಜಿತ ಕ್ರೀಡಾ ಸಂಕೀರ್ಣವನ್ನು ಸ್ಥಾಪಿಸಲು ಸಾಧ್ಯವಾಗುತ್ತಿದೆ ಎಂದು ಕ್ರೀಡಾ ಸಚಿವರು ಹೇಳಿದರು.

ಕುಮಾರಸ್ವಾಮಿ ಅವರನ್ನು ಉದ್ದೇಶಿಸಿ ಮಾತನಾಡಿದ ಮಾಂಡವಿಯ, ಜನರು ತೋರಿಸಿದ ಪ್ರೀತಿಯು ಅವರಿಗಾಗಿ ಅವರು ಮಾಡಿರುವ ಕೆಲಸವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಕುಮಾರಸ್ವಾಮಿ ಅವರ ವಿಶೇಷಚೇತನರ ಬಗೆಗಿನ ವಿಶೇಷ ಸಹಾನುಭೂತಿ ಮತ್ತು ಬದ್ಧತೆಯನ್ನು ಅವರು ಶ್ಲಾಘಿಸಿದರು. ಕುಮಾರಸ್ವಾಮಿ ಅವರ ವಿಶೇಷಚೇತನರ ಬಗ್ಗೆ ಅವರ ಕಾಳಜಿಯನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ ಎಂದು ಮಾಂಡವಿಯ ಹೇಳಿದರು ಮತ್ತು ವಿದ್ಯುತ್ ವಾಹನಗಳನ್ನು ವಿತರಿಸುವ ಉಪಕ್ರಮ ಅತ್ಯಂತ ಶ್ಲಾಘನೀಯ ಎಂದು ಅವರು ಬಣ್ಣಿಸಿದರು.

ಅಂತಹ ಪ್ರಯತ್ನಗಳು ಅಂಗವಿಕಲರಿಗೆ ಅವರ ದೈನಂದಿನ ಜೀವನದಲ್ಲಿ ಸಹಾಯ ಮಾಡುವುದಲ್ಲದೆ ಪರಿಸರ ಸಂರಕ್ಷಣೆಗೆ ಸಕಾರಾತ್ಮಕವಾಗಿ ಕೊಡುಗೆ ನೀಡುತ್ತವೆ ಎಂದು ಅವರು ಉಲ್ಲೇಖಿಸಿದರು.

ಮಂಡ್ಯವು ರಾಜ್ಯಕ್ಕೆ ಮಾತ್ರವಲ್ಲದೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಮನ್ನಣೆ ತಂದುಕೊಟ್ಟ ಹಲವು ಕ್ರೀಡಾಪಟುಗಳನ್ನು ನೀಡಿದೆ ಎಂದು ಮಾಂಡವಿಯ ಹೇಳಿದರು. ವಿಕಾಸ್ ಗೌಡ ಮತ್ತು ಕೆ.ಪಿ. ಶಿಲ್ಪಾ ಅವರಂತಹ ಕ್ರೀಡಾಪಟುಗಳನ್ನು ಅವರು ಸ್ಮರಿಸಿದರು, ಅವರು ಮಂಡ್ಯದ ಖ್ಯಾತಿಯನ್ನು ಹೆಚ್ಚಿಸಿದ್ದಾರೆ ಎಂದರು.

ವಿಶೇಷವಾಗಿ, ಪ್ರಸ್ತುತ ಭಾರತದ ನಂಬರ್ ಒನ್ ವೀಲ್‌ಚೇರ್ ಟೆನಿಸ್ ಆಟಗಾರ್ತಿ ಮತ್ತು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರುತ್ತಿರುವ ವೀಲ್‌ಚೇರ್ ಟೆನಿಸ್ ಆಟಗಾರ್ತಿ ಶಿಲ್ಪಾ ಅವರ ಸಾಧನೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.

ಮುಂದಿನ ವರ್ಷಗಳಲ್ಲಿ ಮಂಡ್ಯದಿಂದ ಇನ್ನೂ ಅನೇಕ ಪ್ರತಿಭಾನ್ವಿತ ಕ್ರೀಡಾಪಟುಗಳು ಹೊರಹೊಮ್ಮಬೇಕು ಎಂದು ಅವರು ಆಶಿಸಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಭಾರತದಲ್ಲಿ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಕಳೆದ ಹನ್ನೊಂದು ವರ್ಷಗಳಿಂದ ವ್ಯಾಪಕವಾಗಿ ಕೆಲಸ ಮಾಡಿದೆ ಎಂದು ಕೇಂದ್ರ ಸಚಿವರು ಹೇಳಿದರು. ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ಕ್ರೀಡಾ ಮೂಲಸೌಕರ್ಯವನ್ನು ಬಲಪಡಿಸಲು 4,000 ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ, ಒಂದು ದಶಕದ ಹಿಂದೆ 1,200 ಕೋಟಿ ರೂಪಾಯಿಗೆ ಹೋಲಿಸಿದರೆ, ಹಂಚಿಕೆಯನ್ನು ಮೂರು ಪಟ್ಟು ಹೆಚ್ಚಿಸಲಾಗಿದೆ ಎಂದರು.

ಆದಿಚುಂಚನಗಿರಿ ಶ್ರೀಗಳ ಆಶೀರ್ವಾದ

ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧಿಪತಿ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಆಶೀರ್ವಚನ ನೀಡಿದರು.

ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು ಮತ್ತು ಡಿ.ಸಿ. ತಮ್ಮಣ್ಣ, ಶಾಸಕ ಮಂಜುನಾಥ್, ಮಾಜಿ ಶಾಸಕ ಡಾ. ಕೆ. ಅನ್ನದಾನಿ, ಎಂಎಲ್‌ಸಿ ವಿವೇಕಾನಂದ, ಮಂಡ್ಯ ಜಿಲ್ಲಾ ಜೆಡಿಎಸ್ ಅಧ್ಯಕ್ಷ ರಮೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ವಿಶೇಷಚೇತನರಿಗೆ ಎಲೆಕ್ಟ್ರಿಕ್  ವಾಹನಗಳ ವಿತರಣೆ

ವೇದಿಕೆಯ ಕಾರ್ಯಕ್ರಮದ ನಂತರ 388 ವಿಶೇಷಚೇತನರಿಗೆ ಎಲೆಕ್ಟ್ರಿಕ್ ವಾಹನಗಳನ್ನು ವಿತರಿಸಲಾಯಿತು. ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮತ್ತು ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (ಎಸ್‌ಎಐಎಲ್) ನ ಸಿಎಸ್‌ಆರ್ ಉಪಕ್ರಮಗಳ ಅಡಿಯಲ್ಲಿ ಈ ವಾಹನಗಳನ್ನು ಒದಗಿಸಿವೆ.

ಹೆಚ್ಚುವರಿಯಾಗಿ ಇನ್ಫೋಸಿಸ್ ದಾನ ಮಾಡಿದ 500 ಡೆಸ್ಕ್‌ಟಾಪ್‌ಗಳು ಮತ್ತು 100 ಲ್ಯಾಪ್‌ಟಾಪ್‌ಗಳನ್ನು ಸರ್ಕಾರಿ ಶಾಲೆಗಳಿಗೆ ಹಸ್ತಾಂತರಿಸಲಾಯಿತು. ಹಿಂದೂಜಾ ಗ್ರೂಪ್‌ನ ಸಿಎಸ್‌ಆರ್ ಉಪಕ್ರಮದಡಿಯಲ್ಲಿ ದಾನ ಮಾಡಿದ ಅತ್ಯಾಧುನಿಕ ಆಂಬ್ಯುಲೆನ್ಸ್ ಅನ್ನು ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಮಿಮ್ಸ್) ಗೆ ನೀಡಲಾಯಿತು.

ಕುಮಾರಸ್ವಾಮಿಗೆ ಭಾವನಾತ್ಮಕ ಕ್ಷಣ

ವಿಶೇಷಚೇತನರಿಗೆ ಎಲೆಕ್ಟ್ರಿಕ್ ವಾಹನಗಳನ್ನು ಹಸ್ತಾಂತರಿಸುವಾಗ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಭಾವುಕರಾದರು. ಫಲಾನುಭವಿಗಳು ವಾಹನಗಳನ್ನು ಸ್ವೀಕರಿಸುವಾಗ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದಂತೆ, ಸಚಿವರು ಭಾವುಕರಾದರು. ಕುಮಾರಸ್ವಾಮಿ ಕಣ್ಣೀರು ಸುರಿಸುತ್ತಾ, ವಾಹನಗಳನ್ನು ಸ್ವೀಕರಿಸಲು ದೂರದ ಸ್ಥಳಗಳಿಂದ ಬಂದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

ಆದಿಚುಂಚನಗಿರಿ ಪೀಠಾಧ್ಯಕ್ಷರು, ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಮತ್ತಿತರ ಹಲವು ಗಣ್ಯರು ಈ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾದರು.

ಭವ್ಯ ಬೆಲ್ಲದ ಹಾರದ ಸ್ವಾಗತ

ಒಳಾಂಗಣ ಕ್ರೀಡಾಂಗಣಕ್ಕೆ ಭೂಮಿ ಪೂಜೆ ಸಲ್ಲಿಸಿದ ನಂತರ, ಇಬ್ಬರು ಕೇಂದ್ರ ಸಚಿವರನ್ನು ಭವ್ಯ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಕರೆದೊಯ್ಯಲಾಯಿತು.

ವಿಸಿ ಫಾರ್ಮ್ ಗೇಟ್‌ನಲ್ಲಿ ಬೆಂಬಲಿಗರು ಮಂಡ್ಯದ ವಿಶೇಷತೆಯಾದ ಬೆಲ್ಲದಿಂದ ಮಾಡಿದ ಬೃಹತ್ ಹಾರವನ್ನು ಹಾಕಿ ಸ್ವಾಗತಿಸಿದರು. ಈ ವಿಶಿಷ್ಟ ಸ್ವಾಗತದಿಂದ ಮಾಂಡವೀಯ ಆಶ್ಚರ್ಯಚಕಿತರಾದರು.  

ಮಾಂಡವೀಯ ಅವರಿಗೆ ಗುಣಮಟ್ಟಕ್ಕೆ ಹೆಸರುವಾಸಿಯಾದ ಮಂಡ್ಯದ ಬೆಲ್ಲದ ಮಹತ್ವ ಮತ್ತು ಖ್ಯಾತಿಯನ್ನು ಕುಮಾರಸ್ವಾಮಿ ಅವರು ವಿವರಿಸಿದರು.

 

*****


(ಪ್ರಕಟಣೆ ಐ.ಡಿ.: 2240341) ವಿಸಿಟರ್ ಕೌಂಟರ್ : 7
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Tamil