ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ
ಕೃಷಿಯಲ್ಲಿ ನವೀಕರಿಸಬಹುದಾದ ಇಂಧನವು ರೈತರಿಗೆ ವಿಶ್ವಾಸಾರ್ಹ ವಿದ್ಯುತ್ ಪಡೆಯಲು, ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ನೀರಾವರಿ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ: ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ
ಭಾರತದ 500 ಗಿಗಾ ವ್ಯಾಟ್ (ಜಿ.ಡಬ್ಲ್ಯು.) ಪಳೆಯುಳಿಕೆ ರಹಿತ ಇಂಧನ ಗುರಿಯನ್ನು ಸಾಧಿಸಲು ಹೊಲಗಳು, ಛಾವಣಿಗಳು ಮತ್ತು ಗ್ರಾಮೀಣ ಉದ್ಯಮಗಳಲ್ಲಿ ವಿಕೇಂದ್ರೀಕೃತ ನವೀಕರಿಸಿದ ಇಂಧನ ಘಟಕ: ಕೇಂದ್ರ ಸಚಿವರಾದ ಜೋಶಿ
ಸರ್ಕಾರವು ಕೃಷಿಗೆಂದೇ ಮೀಸಲಾದ -ಪಿ.ವಿ. ಘಟಕದೊಂದಿಗೆ ಪಿ.ಎಂ.-ಕುಸುಮ್ 2.0 ಸಿದ್ಧಪಡಿಸುತ್ತಿದೆ
10 ಲಕ್ಷಕ್ಕೂ ಹೆಚ್ಚು ಸ್ವತಂತ್ರ ಸೌರ ಪಂಪ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ಪಿ.ಎಂ.-ಕುಸುಮ್ ಅಡಿಯಲ್ಲಿ 13 ಲಕ್ಷ ಗ್ರಿಡ್-ಸಂಪರ್ಕಿತ ಪಂಪ್‌ಗಳನ್ನು ಸೌರೀಕರಣಗೊಳಿಸಲಾಗಿದೆ
ಪ್ರಕಟಣಾ ದಿನಾಂಕ:
10 MAR 2026 8:41PM by PIB Bengaluru
ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರು ಇಂದು ನವದೆಹಲಿಯಲ್ಲಿ ನಡೆದ 4ನೇ ರಾಷ್ಟ್ರೀಯ ಕೃಷಿ-ಆರ್‌ಇ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಭಾರತದ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವಲ್ಲಿ ಮತ್ತು ರೈತರ ಆದಾಯವನ್ನು ಹೆಚ್ಚಿಸುವಲ್ಲಿ ನವೀಕರಿಸಬಹುದಾದ ಇಂಧನದ ಪಾತ್ರ ಹೆಚ್ಚುತ್ತಿರುವುದನ್ನು ಉಲ್ಲೇಖಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಜೋಶಿ, ನವೀಕರಿಸಬಹುದಾದ ಇಂಧನವು ಭಾರತದ ಹೊಲಗಳು ಮತ್ತು ಮನೆಗಳನ್ನು ಹೆಚ್ಚು ಹೆಚ್ಚಾಗಿ ತಲುಪುತ್ತಿದೆ, ರೈತರು ನೀರಾವರಿ ವೆಚ್ಚವನ್ನು ಕಡಿಮೆ ಮಾಡುವುದರ ಜೊತೆಗೆ ವಿಶ್ವಾಸಾರ್ಹ ವಿದ್ಯುತ್ ಪಡೆಯಲು ಸಹಾಯ ಮಾಡುತ್ತದೆ ಮತ್ತು ಕೃಷಿ ಉತ್ಪಾದಕತೆಯನ್ನು ಸುಧಾರಿಸುತ್ತದೆ ಎಂದು ಹೇಳಿದರು. “ಇಂದು ತನ್ನ ಹೊಲಕ್ಕೆ ನೀರಾವರಿ ಮಾಡುವ ರೈತ ಸೌರಶಕ್ತಿಯನ್ನು ಬಳಸಿ ಹಾಗೆ ಮಾಡುತ್ತಿರಬಹುದು ಮತ್ತು ಒಂದು ಕಾಲದಲ್ಲಿ ವಿದ್ಯುತ್ ಬಿಲ್‌ಗಳ ಬಗ್ಗೆ ಚಿಂತಿತರಾಗಿದ್ದ ಮನೆಯು ಈಗ ಮೇಲ್ಛಾವಣಿಯ ಸೌರಶಕ್ತಿಯ ಮೂಲಕ ತನ್ನದೇ ಆದ ವಿದ್ಯುತ್ ಉತ್ಪಾದಿಸುತ್ತಿರಬಹುದು. ಇದು ಕೇವಲ ಇಂಧನ ಪರಿವರ್ತನೆಯಲ್ಲ, ಇದು ಗ್ರಾಮೀಣ ಆರ್ಥಿಕತೆಯ ರೂಪಾಂತರವೂ ಆಗಿದೆ” ಎಂದೂ ಸಚಿವರು ಹೇಳಿದರು.
ನೀರಾವರಿ ವೆಚ್ಚವನ್ನು ಕಡಿಮೆ ಮಾಡುವ ಸೌರ ಪಂಪ್ಗಳು
ವಿಶೇಷವಾಗಿ ಸೌರ ನೀರಾವರಿ ಪಂಪ್‌ಗಳ ಮೂಲಕ ಕೃಷಿಯಲ್ಲಿ ನವೀಕರಿಸಬಹುದಾದ ಇಂಧನ ತಂತ್ರಜ್ಞಾನಗಳು, ಹೆಚ್ಚು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಶ್ರೀ ಜೋಶಿ ಒತ್ತಿ ಹೇಳಿದರು, ಇದು ರೈತರಿಗೆ ಡೀಸೆಲ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ಹಗಲಿನ ಅವಧಿಯಲ್ಲಿ ವಿಶ್ವಾಸಾರ್ಹ ನೀರಾವರಿಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಡೀಸೆಲ್ ನೀರಾವರಿಯಲ್ಲಿ ಗೋಧಿಗೆ ಎಕರೆಗೆ ಸುಮಾರು ₹6,790 ಮತ್ತು ಹತ್ತಿಯಂತಹ ಬೆಳೆಗಳಿಗೆ ಎಕರೆಗೆ ₹8,000 ಕ್ಕಿಂತ ಹೆಚ್ಚು ವೆಚ್ಚವಾಗಬಹುದು. ಸೌರ ಪಂಪ್‌ಗಳು ರೈತರಿಗೆ ವಾರ್ಷಿಕವಾಗಿ ಎಕರೆಗೆ ₹5,000 ರಿಂದ ₹6,500 ರವರೆಗೆ ಉಳಿಸಲು ಸಹಾಯ ಮಾಡುತ್ತವೆ ಮತ್ತು ಮಾಲಿನ್ಯ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತವೆ.

ಪಿ.ಎಂ.-ಕುಸುಮ್ (PM-KUSUM) ಯೋಜನೆಯಡಿಯಲ್ಲಿ, 10 ಲಕ್ಷಕ್ಕೂ ಹೆಚ್ಚು ಸ್ವತಂತ್ರ ಸೌರ ಕೃಷಿ ಪಂಪ್‌ಗಳನ್ನು ಸ್ಥಾಪಿಸಲಾಗಿದೆ ಮತ್ತು ದೇಶಾದ್ಯಂತ 13 ಲಕ್ಷಕ್ಕೂ ಹೆಚ್ಚು ಗ್ರಿಡ್-ಸಂಪರ್ಕಿತ ಕೃಷಿ ಪಂಪ್‌ಗಳನ್ನು ಸೌರೀಕರಣಗೊಳಿಸಲಾಗಿದೆ. ಈ ಉಪಕ್ರಮಗಳು ರೈತರು "ಅನ್ನದಾತ" (ಆಹಾರ ಪೂರೈಕೆದಾರರು) ಆಗುವುದರ ಜೊತೆಗೆ "ಉರ್ಜಾದಾತ" (ಇಂಧನ ಪೂರೈಕೆದಾರರು) ಆಗಲು ಅನುವು ಮಾಡಿಕೊಡುತ್ತಿವೆ ಎಂಬುದರತ್ತ ಸಚಿವರು ಗಮನ ಸೆಳೆದರು.
ಕೃಷಿ-ಪಿವಿ ನಿಯೋಜನೆಯನ್ನು ಉತ್ತೇಜಿಸಲು ಪಿ.ಎಂ.-ಕುಸುಮ್ (PM-KUSUM) 2.0
ಸರ್ಕಾರವು ಪಿ.ಎಂ.-ಕುಸುಮ್ (PM-KUSUM) 2.0 ಸಿದ್ಧಪಡಿಸುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು, ಇದು ಬೆಳೆಗಳೊಂದಿಗೆ ಸೌರ ಫಲಕಗಳಿಗೂ ಸ್ಥಳವನ್ನು ಉತ್ತೇಜಿಸಲು ಮೀಸಲಾದ 10 ಜಿ.ವಿ. ಕೃಷಿ-ಪಿವಿ ಘಟಕವನ್ನು ಒಳಗೊಂಡಿರುತ್ತದೆ. ಈ ಉಪಕ್ರಮವು ರೈತರು ಒಂದೇ ಭೂಮಿಯಲ್ಲಿ ಕೃಷಿ ಚಟುವಟಿಕೆಗಳನ್ನು ಮುಂದುವರಿಸುವಾಗ ವಿದ್ಯುತ್ ಉತ್ಪಾದಿಸಲು ಅನುವು ಮಾಡಿಕೊಡುತ್ತದೆ, ಗ್ರಾಮೀಣ ಭಾರತದಲ್ಲಿ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೊಸ ಮಾದರಿಯನ್ನು ಸೃಷ್ಟಿಸುತ್ತದೆ ಎಂದರು.

ಕೃಷಿ ವೋಲ್ಟಾಯಿಕ್ಗಳು ಹೊಸ ಆದಾಯದ ಅವಕಾಶಗಳನ್ನು ತೆರೆಯುತ್ತಿವೆ
ಕೃಷಿ ವೋಲ್ಟಾಯಿಕ್ ವ್ಯವಸ್ಥೆಗಳ ಉದಯೋನ್ಮುಖ ಸಾಮರ್ಥ್ಯವನ್ನು ಉಲ್ಲೇಖಿಸುತ್ತಾ, ಶ್ರೀ ಜೋಶಿ ಅವರು ಸೌರ ವಿದ್ಯುತ್ ಉತ್ಪಾದನೆಯನ್ನು ಕೃಷಿ ಬೆಳೆಗಳೊಂದಿಗೆ ಸಂಯೋಜಿಸುವುದರಿಂದ ಭೂಮಿಯ ಉತ್ಪಾದಕತೆಯನ್ನು ಗಮನಾರ್ಹವಾಗಿ ಸುಧಾರಿಸಬಹುದು ಮತ್ತು ರೈತರಿಗೆ ಹೆಚ್ಚುವರಿ ಆದಾಯದ ಮೂಲವನ್ನು ಒದಗಿಸಬಹುದು ಎಂದು ಹೇಳಿದರು. ಭಾರತದ ಕೃಷಿ ವೋಲ್ಟಾಯಿಕ್ ಸಾಮರ್ಥ್ಯವು 3,000 ಜಿ.ಡಬ್ಲ್ಯು. ನಿಂದ ಸುಮಾರು 14,000 ಜಿ.ಡಬ್ಲ್ಯು.ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ, ಇದು ಕೃಷಿಯೊಂದಿಗೆ ನವೀಕರಿಸಬಹುದಾದ ಶಕ್ತಿಯನ್ನು ಸಂಯೋಜಿಸುವ ಅವಕಾಶದ ಪ್ರಮಾಣವನ್ನು ಪ್ರತಿಬಿಂಬಿಸುತ್ತದೆ.
ಕೃಷಿ ವೋಲ್ಟಾಯಿಕ್ ವ್ಯವಸ್ಥೆಗಳು ಅಂದರೆ ಬೆಳೆಯ ಜೊತೆ ಸೌರ ಫಲಕಗಳ ಅಳವಡಿಸುವಿಕೆ ರೈತರ ಗಳಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ, ಕೆಲವು ಸಂದರ್ಭಗಳಲ್ಲಿ ವಿದ್ಯುತ್ ಉತ್ಪಾದನೆಯ ಆದಾಯವನ್ನು ಕೃಷಿ ಬೆಳೆಯೊಂದಿಗೆ ಸಂಯೋಜಿಸಿದಾಗ ವಾರ್ಷಿಕ ಆದಾಯವು ಎಕರೆಗೆ ಸುಮಾರು ₹60,000 ರಿಂದ ಎಕರೆಗೆ ₹1 ಲಕ್ಷಕ್ಕಿಂತ ಹೆಚ್ಚಾಗುತ್ತದೆ.

ಮೇಲ್ಛಾವಣಿಯ ಸೌರಶಕ್ತಿಯು ಇಂಧನ ಲಭ್ಯತೆಯನ್ನು ವಿಸ್ತರಿಸಿದೆ
ಶ್ರೀ ಜೋಶಿ ಅವರು ಪ್ರಧಾನ ಮಂತ್ರಿ ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆಯ ಪ್ರಗತಿಯನ್ನು ಉಲ್ಲೇಖಿಸಿದರು. ಈ ಯೋಜನೆಯಡಿಯಲ್ಲಿ 31 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಈಗಾಗಲೇ ಮೇಲ್ಛಾವಣಿಯ ಸೌರಶಕ್ತಿ ಸ್ಥಾಪನೆಗಳಿಂದ ಪ್ರಯೋಜನ ಪಡೆದಿವೆ, ಇದು ಕುಟುಂಬಗಳು ತಮ್ಮದೇ ಆದ ವಿದ್ಯುತ್ ಉತ್ಪಾದಿಸಲು ಮತ್ತು ವಿದ್ಯುತ್ ಬಿಲ್‌ಗಳನ್ನು ಕಡಿಮೆ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
ಭಾರತದ ನವೀಕರಿಸಬಹುದಾದ ಇಂಧನ ಪ್ರಗತಿಯನ್ನು ಉಲ್ಲೇಖಿಸಿದ ಸಚಿವರು, ದೇಶದ ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯವು 2014 ರಲ್ಲಿ ಇದ್ದ ಸುಮಾರು 81 ಜಿ.ಡಬ್ಲ್ಯು. ನಿಂದ ಇಂದು ಸುಮಾರು 275 ಜಿ.ಡಬ್ಲ್ಯು.ಗೆ ಹೆಚ್ಚಾಗಿದೆ ಮತ್ತು ಭಾರತದ ಸ್ಥಾಪಿತ ವಿದ್ಯುತ್ ಸಾಮರ್ಥ್ಯದ ಅರ್ಧಕ್ಕಿಂತ ಹೆಚ್ಚು ಈಗ ಪಳೆಯುಳಿಕೆಯೇತರ ಮೂಲಗಳಿಂದ ಬರುತ್ತಿದೆ ಎಂಬುದರತ್ತಲೂ ಗಮನ ಸೆಳೆದರು. ಸೌರಶಕ್ತಿ ಸಾಮರ್ಥ್ಯವು 2014 ರಲ್ಲಿ ಸುಮಾರು 2.8 ಜಿ.ಡಬ್ಲ್ಯು ನಿಂದ ಸುಮಾರು 143 ಜಿ.ಡಬ್ಲ್ಯು. ಗೆ ವಿಸ್ತರಿಸಿತು, ಪವನ ಸಾಮರ್ಥ್ಯವು ಸುಮಾರು 21 ಜಿ.ಡಬ್ಲ್ಯು ನಿಂದ ಸುಮಾರು 55 ಜಿ.ಡಬ್ಲ್ಯು ಗೆ ಏರಿತು ಮತ್ತು ಜೈವಿಕ ವಿದ್ಯುತ್ ಸಾಮರ್ಥ್ಯವು 8.1 ಜಿ.ಡಬ್ಲ್ಯು ನಿಂದ ಸುಮಾರು 12 ಜಿ.ಡಬ್ಲ್ಯು ಗೆ ಏರಿತು, ಇದು ದೇಶದಲ್ಲಿ ನವೀಕರಿಸಬಹುದಾದ ಇಂಧನ ನಿಯೋಜನೆಯ ತ್ವರಿತ ಪ್ರಮಾಣವನ್ನು ಪ್ರತಿಬಿಂಬಿಸುತ್ತದೆ.
ಭಾರತದ 500 ಜಿ.ಡಬ್ಲ್ಯು. ಪಳೆಯುಳಿಕೆಯೇತರ ಇಂಧನ ಸಾಮರ್ಥ್ಯದ ಗುರಿಯನ್ನು ಕೃಷಿಭೂಮಿಗಳು, ಮೇಲ್ಛಾವಣಿಗಳು ಮತ್ತು ಗ್ರಾಮೀಣ ಉದ್ಯಮಗಳಲ್ಲಿ ಲಕ್ಷಾಂತರ ವಿಕೇಂದ್ರೀಕೃತ ನವೀಕರಿಸಬಹುದಾದ ಇಂಧನ ಘಟಕ ಸ್ಥಾಪನೆಗಳ ಮೂಲಕ ಸಾಧಿಸಲಾಗುವುದು ಎಂದು ಸಚಿವರು ಒತ್ತಿ ಹೇಳಿದರು.

ಈ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ವಿದ್ಯುತ್ ಮತ್ತು ಹೊಸ ಮತ್ತು ನವೀಕರಿಸಬಹುದಾದ ಇಂಧನ ರಾಜ್ಯ ಖಾತೆ ಸಚಿವರಾದ ಶ್ರೀ ಶ್ರೀಪಾದ್ ಯೆಸ್ಸೊ ನಾಯಕ್, ಭಾರತದ ಇಂಧನ ಪರಿವರ್ತನೆಗೆ ಪರಿವರ್ತಕ ಪರಿಹಾರವಾಗಿ ಕೃಷಿ ವೋಲ್ಟಾಯಿಕ್ಸ್‌ನ ಉದಯೋನ್ಮುಖ ಸಾಮರ್ಥ್ಯವನ್ನು ಎತ್ತಿ ತೋರಿಸಿದರು. ಕೃಷಿ ವೋಲ್ಟಾಯಿಕ್ ವ್ಯವಸ್ಥೆಗಳು ಏಕಕಾಲದಲ್ಲಿ ಶುದ್ಧ ವಿದ್ಯುತ್ ಉತ್ಪಾದನೆ ಮತ್ತು ಒಂದೇ ಭೂಮಿಯಲ್ಲಿ ಬೆಳೆಗಳನ್ನು ಬೆಳೆಸಲು ಅನುವು ಮಾಡಿಕೊಡುತ್ತದೆ, ನವೀಕರಿಸಬಹುದಾದ ಇಂಧನ ವಿಸ್ತರಣೆಗಾಗಿ ಸ್ಪರ್ಧಾತ್ಮಕ ಭೂ ಬೇಡಿಕೆಗಳ ಸವಾಲನ್ನು ಪರಿಹರಿಸುವಾಗ ಭೂ ಬಳಕೆಯ ದಕ್ಷತೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಅವರು ಗಮನಿಸಿದರು.
ಸಹಯೋಗದ ಮಹತ್ವವನ್ನು ಒತ್ತಿ ಹೇಳಿದ ಶ್ರೀ ನಾಯಕ್, ಕೃಷಿ ವೋಲ್ಟಾಯಿಕ್ ನಿಯೋಜನೆಯನ್ನು ಹೆಚ್ಚಿಸಲು ಮತ್ತು ದೇಶಾದ್ಯಂತ ರೈತರಿಗೆ ಅಂತಹ ತಂತ್ರಜ್ಞಾನಗಳನ್ನು ಪ್ರವೇಶಿಸುವಂತೆ ಮಾಡುವ ನವೀನ, ಕೈಗೆಟುಕುವ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ, ಕೈಗಾರಿಕೆ, ಸಂಶೋಧನಾ ಸಂಸ್ಥೆಗಳು ಮತ್ತು ಹಣಕಾಸು ಸಂಸ್ಥೆಗಳ ನಡುವೆ ಬಲವಾದ ಪಾಲುದಾರಿಕೆಗೆ ಕರೆ ನೀಡಿದರು.
ನವ ದೆಹಲಿಯಲ್ಲಿ 4 ನೇ ರಾಷ್ಟ್ರೀಯ ಕೃಷಿ-ಆರ್‌ಇ ಶೃಂಗಸಭೆಯ ಬಗ್ಗೆ
ಭಾರತದ ಕೃಷಿ ವೋಲ್ಟಾಯಿಕ್ಸ್ ಮಿತ್ರಕೂಟದ ಸಹಯೋಗದೊಂದಿಗೆ ಭಾರತದ ರಾಷ್ಟ್ರೀಯ ಸೌರಶಕ್ತಿ ಒಕ್ಕೂಟ (ಎನ್‌ಎಸ್‌ಇಎಫ್‌ಐ) ಆಯೋಜಿಸಿದ್ದ ಶೃಂಗಸಭೆಯು, ಕೃಷಿಯೊಂದಿಗೆ ನವೀಕರಿಸಬಹುದಾದ ಇಂಧನದ ಏಕೀಕರಣದ ಕುರಿತು ಚರ್ಚಿಸಲು ನೀತಿ ನಿರೂಪಕರು, ಉದ್ಯಮ ಮುಖಂಡರು, ರೈತ ಪ್ರತಿನಿಧಿಗಳು ಮತ್ತು ನವೀಕರಿಸಬಹುದಾದ ಇಂಧನ ಪಾಲುದಾರರನ್ನು ಒಟ್ಟುಗೂಡಿಸಿತು.
*****
(ಪ್ರಕಟಣೆ ಐ.ಡಿ.: 2237940)
ವಿಸಿಟರ್ ಕೌಂಟರ್ : 5