ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಡಾ. ಮನ್ಸುಖ್ ಮಾಂಡವೀಯ ಮತ್ತು ರಾಜ್ಯ ಸಚಿವರಾದ​​​​​​​ ಶ್ರೀಮತಿ ರಕ್ಷಾ ನಿಖಿಲ್ ಖಡ್ಸೆ ಅವರು ಮಾರ್ಚ್ 6–7 ರಂದು ಬೆಂಗಳೂರಿನಲ್ಲಿ ನಡೆಯಲಿರುವ 'ಮೈ ಭಾರತ್ – ಎನ್ ಎಸ್ ಎಸ್ ಚಿಂತನ ಶಿಬಿರ'ದಲ್ಲಿ ಭಾಗಿಯಾಗಲಿದ್ದಾರೆ


'ಅಮೃತ ಪೀಳಿಗೆ'ಯನ್ನು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾಲುದಾರರನ್ನಾಗಿ ಮಾಡಲು ಮತ್ತು 'ಮೈ ಭಾರತ್' ಹಾಗೂ 'ಎನ್ ಎಸ್ ಎಸ್' ಮೂಲಕ 'ವಿಕಸಿತ ಭಾರತ@2047' ದೃಷ್ಟಿಕೋನವನ್ನು ಮುನ್ನಡೆಸಲು ಯುವಜನ ವ್ಯವಹಾರಗಳ ಇಲಾಖೆಯು ಎರಡು ದಿನಗಳ ಚಿಂತನ ಶಿಬಿರ ಆಯೋಜಿಸಿದೆ

ಪ್ರಕಟಣಾ ದಿನಾಂಕ: 05 MAR 2026 3:53PM by PIB Bengaluru

ಭಾರತ ಸರ್ಕಾರದ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಯುವಜನ ವ್ಯವಹಾರಗಳ ಇಲಾಖೆಯು, ಮೇರಾ ಯುವ ಭಾರತ್ (ಮೈ ಭಾರತ್) ಮತ್ತು ರಾಷ್ಟ್ರೀಯ ಸೇವಾ ಯೋಜನೆ (ಎನ್ ಎಸ್ ಎಸ್) ಅಧಿಕಾರಿಗಳೊಂದಿಗೆ ಎರಡು ದಿನಗಳ ಚಿಂತನ ಶಿಬಿರವನ್ನು 2026ರ ಮಾರ್ಚ್ 6–7 ರಂದು ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಫಾರ್ ಸ್ಟೆಮ್ ಸೆಲ್ ಸೈನ್ಸ್ ಅಂಡ್ ರೀಜೆನೆರೇಟಿವ್ ಮೆಡಿಸಿನ್ (inStem) ನಲ್ಲಿ ಆಯೋಜಿಸಲಿದೆ. ಈ ಕಾರ್ಯಕ್ರಮವು ಯುವಜನರ ಪಾಲ್ಗೊಳ್ಳುವಿಕೆಯ ಚೌಕಟ್ಟುಗಳನ್ನು ಬಲಪಡಿಸಲು ಮತ್ತು ರಾಜ್ಯಗಳಾದ್ಯಂತ ಕಾರ್ಯಕ್ರಮಗಳ ಅನುಷ್ಠಾನವನ್ನು ಸುಧಾರಿಸುವ ಕುರಿತು ಚರ್ಚಿಸಲು ಹಿರಿಯ ಅಧಿಕಾರಿಗಳು ಮತ್ತು ಕ್ಷೇತ್ರ ಮಟ್ಟದ ಕಾರ್ಯಕರ್ತರನ್ನು ಒಂದೆಡೆ ಸೇರಿಸಲಿದೆ.

ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು, ಕೇರಳ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ಒಡಿಶಾ, ಛತ್ತೀಸಗಢ ಮತ್ತು ಮಹಾರಾಷ್ಟ್ರವನ್ನು ಪ್ರತಿನಿಧಿಸುವ ಅಧಿಕಾರಿಗಳು ಈ ಚರ್ಚೆಗಳಲ್ಲಿ ಭಾಗವಹಿಸಲಿದ್ದಾರೆ. ಚಿಂತನ ಶಿಬಿರವು 'ಮೈ ಭಾರತ್' ಮತ್ತು 'ಎನ್ ಎಸ್ ಎಸ್' ಜಾಲಗಳ ಮೂಲಕ ದೇಶಾದ್ಯಂತ ಜಾರಿಗೆ ತರಲಾಗುತ್ತಿರುವ ಯುವಜನ ಕಾರ್ಯಕ್ರಮಗಳನ್ನು ಮತ್ತಷ್ಟು ಬಲಪಡಿಸಲು ಪರಸ್ಪರ ಕಲಿಕೆ, ಅನುಭವ ಹಂಚಿಕೆ ಮತ್ತು ಕಾರ್ಯತಂತ್ರದ ನೀತಿ ಚರ್ಚೆಗಳಿಗೆ ಸಹಯೋಗದ ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

ಈ ಚಿಂತನ ಶಿಬಿರದಲ್ಲಿ ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವರಾದ ಡಾ. ಮನ್ಸುಖ್ ಮಾಂಡವೀಯ, ಯುವಜನ ವ್ಯವಹಾರಗಳು ಮತ್ತು ಕ್ರೀಡಾ ರಾಜ್ಯ ಸಚಿವರಾದ ಶ್ರೀಮತಿ ರಕ್ಷಾ ನಿಖಿಲ್ ಖಡ್ಸೆ, ಯುವಜನ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಡಾ. ಪಲ್ಲವಿ ಜೈನ್ ಗೋವಿಲ್, ಯುವಜನ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಶ್ರೀ ನಿತೇಶ್ ಕುಮಾರ್ ಮಿಶ್ರಾ ಸೇರಿದಂತೆ 'ಮೈ ಭಾರತ್' ಮತ್ತು 'ಎನ್ ಎಸ್ ಎಸ್'ನ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಚಿಂತನ ಶಿಬಿರದ ಮೊದಲ ದಿನವು “ಸಂವಾದ್‌ ಸೆ ಸಮಾಧಾನ್” ವಿಷಯದ ಮೇಲೆ ಕೇಂದ್ರೀಕರಿಸಲಿದ್ದು, ಭಾಗವಹಿಸುವ ರಾಜ್ಯಗಳ ನಡುವೆ ಸಂವಾದ, ನೀತಿ ಸಮನ್ವಯ ಮತ್ತು ಉತ್ತಮ  ಅಭ್ಯಾಸಗಳ ವಿನಿಮಯಕ್ಕೆ ಒತ್ತು ನೀಡಲಿದೆ. ಈ ಅಧಿವೇಶನಗಳು ಮೈ ಭಾರತ್ ಪೋರ್ಟಲ್ ಮೂಲಕ ಯುವಜನರ ಡಿಜಿಟಲ್ ಒಳಗೊಳ್ಳುವಿಕೆ, 2026ರ ವಾರ್ಷಿಕ ಕ್ರಿಯಾ ಯೋಜನೆಯ ಅನುಷ್ಠಾನ ಮತ್ತು ವಿವಿಧ ಸಚಿವಾಲಯಗಳ ನಡುವಿನ ಸಮನ್ವಯದ ಕುರಿತಾದ ಚರ್ಚೆಗಳನ್ನು ಒಳಗೊಂಡಿರುತ್ತವೆ.

ಈ ಚರ್ಚೆಗಳ ಮುಂದುವರಿದ ಭಾಗವಾಗಿ, ಎರಡನೇ ದಿನವು 'ಸಮಾಧಾನ್‌ ಸೆ ಸಂಕಲ್ಪ್' ಎಂಬ ವಿಷಯದ ಮೇಲೆ ಕೇಂದ್ರೀಕರಿಸಲಿದೆ. ಇಲ್ಲಿನ ವಿಶೇಷ ಅಧಿವೇಶನಗಳನ್ನು ಕೇವಲ ಆಲೋಚನೆಗಳಿಗೆ ಸೀಮಿತಗೊಳಿಸದೆ, ಅವುಗಳನ್ನು ಕಾರ್ಯಗತಗೊಳಿಸಬಹುದಾದ ಸ್ಪಷ್ಟ ತಂತ್ರಗಳನ್ನಾಗಿ ರೂಪಿಸಲು ವಿನ್ಯಾಸಗೊಳಿಸಲಾಗಿದೆ. ಕಾರ್ಯಕ್ರಮಗಳ ಅನುಷ್ಠಾನವನ್ನು ಬಲಪಡಿಸಲು ಮತ್ತು ರಾಜ್ಯಗಳ ನಡುವೆ ಉತ್ತಮ ಸಮನ್ವಯ ಸಾಧಿಸುವ ಉದ್ದೇಶದಿಂದ, ಭಾಗವಹಿಸುವವರು ಸಮೂಹ ನೀತಿ ರೂಪಿಸುವಿಕೆ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಭ್ಯಾಸಗಳು ಮತ್ತು ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸುವಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಇದಲ್ಲದೆ, 'ಫಿಟ್ ಇಂಡಿಯಾ' ಕುರಿತಾದ ಅಧಿವೇಶನ ಮತ್ತು 'ವಿಕಸಿತ ಭಾರತ ಯುವ ನಾಯಕರ ಸಂವಾದ 2027' ರ ಮುಂದಿನ ಹಾದಿಯ ಬಗ್ಗೆಯೂ ಇಲ್ಲಿ ಚರ್ಚಿಸಲಾಗುವುದು.

ಚಿಂತನ ಶಿಬಿರವು ಅನುಕರಣೀಯ ಉಪಕ್ರಮಗಳ ಗುರುತಿಸುವಿಕೆ ಮತ್ತು ಚರ್ಚೆಗಳಿಂದ ಹೊರಹೊಮ್ಮಿದ ಪ್ರಮುಖ ಒಳನೋಟಗಳ ವಿಶ್ಲೇಷಣೆಯೊಂದಿಗೆ ಸಮಾರೋಪಗೊಳ್ಳಲಿದೆ. ಈ ಎರಡು ದಿನಗಳ ಕ್ರಿಯಾತ್ಮಕ ಶಿಬಿರದ ಫಲಿತಾಂಶಗಳು 'ಮೈ ಭಾರತ್' ಮತ್ತು 'ಎನ್ ಎಸ್ ಎಸ್' ಮೂಲಕ ಯುವಜನರ ಪಾಲ್ಗೊಳ್ಳುವಿಕೆ, ಸ್ವಯಂಸೇವಕ ಮನೋಭಾವ ಮತ್ತು ಕಾರ್ಯಕ್ರಮಗಳ ಅನುಷ್ಠಾನವನ್ನು ಬಲಪಡಿಸಲು ಭವಿಷ್ಯದ ಕಾರ್ಯತಂತ್ರಗಳನ್ನು ರೂಪಿಸಲು ಸಹಕಾರಿಯಾಗಲಿವೆ. ಈ ಉಪಕ್ರಮವು 'ಅಮೃತ ಪೀಳಿಗೆ'ಯನ್ನು ರಾಷ್ಟ್ರ ನಿರ್ಮಾಣದಲ್ಲಿ ಸಕ್ರಿಯ ಪಾಲುದಾರರನ್ನಾಗಿ ಮಾಡಲು ಮತ್ತು 'ವಿಕಸಿತ ಭಾರತ@2047'ರ ಸಾಮೂಹಿಕ ಗುರಿಯನ್ನು ಸಾಕಾರಗೊಳಿಸಲು ಭಾರತ ಸರ್ಕಾರಕ್ಕಿರುವ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2235592) ವಿಸಿಟರ್ ಕೌಂಟರ್ : 82
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Marathi , Gujarati , Tamil