ಉಪರಾಷ್ಟ್ರಪತಿಗಳ ಕಾರ್ಯಾಲಯ
ತಮಿಳು ಪರಂಪರೆ, ಸಂಸ್ಕೃತಿ ಮತ್ತು ವಾಸ್ತುಶಿಲ್ಪದ ಮಹತ್ವ ತಿಳಿಸುವ 13 ಪ್ರಕಟಣೆಗಳನ್ನು ನವದೆಹಲಿಯಲ್ಲಿ ಉಪರಾಷ್ಟ್ರಪತಿ ಅವರು ಬಿಡುಗಡೆ ಮಾಡಿದರು
ವೈವಿಧ್ಯತೆಯ ಹೊರತಾಗಿಯೂ ಭಾರತವು ಒಂದು ಧರ್ಮದಿಂದ ಸಾಂಸ್ಕೃತಿಕವಾಗಿ ಏಕೀಕೃತವಾಗಿದೆ: ಉಪರಾಷ್ಟ್ರಪತಿ
“ಭಾರತವು ಹಲವು ಭಾಷೆಗಳ ನಾಡು, ಆದರೆ ಅದರ ಆತ್ಮವು ಒಂದೇ”: ಉಪರಾಷ್ಟ್ರಪತಿ
ಪ್ರತಿದಿನ ಒಂದು ಗಂಟೆ ಪುಸ್ತಕಗಳಿಗೆ ಮೀಸಲಿಡಿ ಎಂದು ಉಪರಾಷ್ಟ್ರಪತಿಯವರು ಯುವ ಭಾರತಕ್ಕೆ ಹೇಳಿದರು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಾಗತಿಕವಾಗಿ ತಮಿಳಿನ ಮಹತ್ವವನ್ನು ನಿರಂತರವಾಗಿ ಸಾರುತ್ತಿದ್ದಾರೆ: ಉಪರಾಷ್ಟ್ರಪತಿ
ಪ್ರಕಟಣಾ ದಿನಾಂಕ:
02 MAR 2026 7:25PM by PIB Bengaluru
ಭಾರತದ ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಇಂದು ಉಪರಾಷ್ಟ್ರಪತಿ ಭವನದಲ್ಲಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಟಣೆ ವಿಭಾಗವು ಪ್ರಖ್ಯಾತ ತಮಿಳು ವಿದ್ವಾಂಸರು, ಪರಂಪರೆ, ವಾಸ್ತುಶಿಲ್ಪ, ಸಾಹಿತ್ಯ, ಸಂಸ್ಕೃತಿ ಮತ್ತು ನಾಗರಿಕತೆಯ ಚಿಂತನೆಯ ಕುರಿತು ಹೊರತಂದ 16 ಮಹತ್ವದ ಪುಸ್ತಕಗಳನ್ನು ಬಿಡುಗಡೆ ಮಾಡಿದ್ದಾರೆ.
ಪ್ರಕಟಣೆಗಳು ವ್ಯಾಪಕ ಶ್ರೇಣಿಯ ವಿಷಯಗಳನ್ನು ಒಳಗೊಂಡಿವೆ. ಅವುಗಳಲ್ಲಿ ಉತ್ತರದಿಂದ ದಕ್ಷಿಣ ಭಾರತದವರೆಗೆ ಆಧ್ಯಾತ್ಮಿಕ ಏಕತೆಯನ್ನು ಸಂಕೇತಿಸುವ ಪವಿತ್ರ ಕೇಂದ್ರವಾದ ರಾಮೇಶ್ವರಂ; ಶ್ರೀ ರಾಮಾನುಜರ ಜೀವನ ಮತ್ತು ತತ್ವಶಾಸ್ತ್ರ; ಐತಿಹಾಸಿಕ ನಡುಕಲ್ ಸಂಪ್ರದಾಯ; ಅರಿಕಮೇಡುವಿನ ಪ್ರಾಚೀನ ವ್ಯಾಪಾರ ಕೇಂದ್ರ; ನಾಯನ್ಮಾರರು ಮತ್ತು ಆಳ್ವಾರರ ಭಕ್ತಿ ಸಾಹಿತ್ಯ; ನೈಸರ್ಗಿಕ ಕೃಷಿ ಸಂಪ್ರದಾಯಗಳು; ಪ್ರಾಚೀನ ತಮಿಳು ಸಂಗೀತ ವಾದ್ಯಗಳು; ತಮಿಳುನಾಡಿನ ಜಾನಪದ ದೇವತೆಗಳು; ಉದಯೋನ್ಮುಖ ವೈಜ್ಞಾನಿಕ ತಂತ್ರಜ್ಞಾನಗಳು; ಮತ್ತು ಮೀನಾಕ್ಷಿ ಅಮ್ಮನ್ ದೇವಾಲಯ ಮತ್ತು ಬೃಹದೀಶ್ವರ ದೇವಾಲಯದ ವಾಸ್ತುಶಿಲ್ಪದ ಅದ್ಭುತಗಳು. ಮಣಿಮೇಕಲೈ ಮತ್ತು ಮಹಾವಿದ್ವಾನ್ ಮೀನಾಕ್ಷಿ ಸುಂದರಂ ಪಿಳ್ಳೈ ಅವರ ಕೃತಿಗಳು ಸಹ ಈ ಪ್ರಕಟಣೆಗಳ ಭಾಗವಾಗಿವೆ.
ಅಪಾರ ಹೆಮ್ಮೆ ಮತ್ತು ಸಂತೋಷವನ್ನು ವ್ಯಕ್ತಪಡಿಸಿದ ಉಪರಾಷ್ಟ್ರಪತಿಯವರು, ಇಂದು ಬಿಡುಗಡೆಯಾದ ಶೀರ್ಷಿಕೆಗಳು ದೇವಾಲಯ ಸಂಪ್ರದಾಯಗಳು, ತತ್ವಶಾಸ್ತ್ರ, ವಾಸ್ತುಶಿಲ್ಪ, ಸಾಹಿತ್ಯ, ಸಂಗೀತ, ವಿಜ್ಞಾನ, ಸಾಮಾಜಿಕ ಸುಧಾರಣೆ ಮತ್ತು ಆಧ್ಯಾತ್ಮಿಕ ಚಿಂತನೆಯನ್ನು ಒಳಗೊಂಡ ತಮಿಳು ನಾಗರಿಕತೆಯ ಆಳ ಮತ್ತು ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.
ಉಪರಾಷ್ಟ್ರಪತಿಯವರು ಶ್ರೀ ಬಂಕಿಮ್ ಚಂದ್ರ ಚಟರ್ಜಿ ಅವರ ಕುರಿತು ತಮಿಳು, ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಿದರು. ಶ್ರೀ ಬಂಕಿಮ್ ಚಂದ್ರ ಚಟರ್ಜಿ ಬರೆದ ವಂದೇ ಮಾತರಂನ ಅಮರ ಪದಗಳನ್ನು ನೆನಪಿಸಿಕೊಂಡ ಉಪರಾಷ್ಟ್ರಪತಿಯವರು, ಈ ಹಾಡು ಲಕ್ಷಾಂತರ ಜನರ ಹೃದಯಗಳಲ್ಲಿ ಕ್ರಾಂತಿಯನ್ನು ಹುಟ್ಟುಹಾಕಿತು ಮತ್ತು ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿ ನೀಡಿತು ಎಂದು ಹೇಳಿದರು. "ಆ ಎರಡು ಪದಗಳು ನಮ್ಮ ಮಣ್ಣಿನ ಪರಿಮಳ, ನಮ್ಮ ನದಿಗಳ ಶಕ್ತಿ ಮತ್ತು ನಮ್ಮ ಮಾತೃಭೂಮಿಯ ಚೈತನ್ಯವನ್ನು ಹೊತ್ತಿದ್ದವು" ಎಂದು ಅವರು ಹೇಳಿದರು, ಪುಸ್ತಕವನ್ನು ಹೊರತಂದಿದ್ದಕ್ಕಾಗಿ ಪ್ರಕಟಣೆ ವಿಭಾಗವನ್ನು ಅವರು ಶ್ಲಾಘಿಸಿದರು.
ಎರಡು ಸಹಸ್ರಮಾನಗಳಿಗೂ ಹೆಚ್ಚಿನ ಸಾಹಿತ್ಯ ಮತ್ತು ತಾತ್ವಿಕ ಸಂಪ್ರದಾಯವನ್ನು ಹೊಂದಿರುವ ತಮಿಳು ಭಾಷೆಯು ವಿಶ್ವದ ಅತ್ಯಂತ ಪ್ರಾಚೀನ ಶಾಸ್ತ್ರೀಯ ಭಾಷೆಗಳಲ್ಲಿ ಒಂದಾಗಿದೆ ಎಂದು ವಿವರಿಸಿದ ಉಪರಾಷ್ಟ್ರಪತಿಯವರು, ಇಂದು ಬಿಡುಗಡೆಯಾದ ಪುಸ್ತಕಗಳು ತಮಿಳು ಜ್ಞಾನ ವ್ಯವಸ್ಥೆಗಳ ಬೌದ್ಧಿಕ ಆಳ ಮತ್ತು ನಾಗರಿಕತೆಯ ನಿರಂತರತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.
ಭಾರತೀಯ ದೇವಾಲಯಗಳು ಕೇವಲ ಪೂಜಾ ಸ್ಥಳಗಳಲ್ಲ, ಬದಲಾಗಿ ಅವುಗಳು ಕಲೆ, ವಾಸ್ತುಶಿಲ್ಪ, ಸಂಗೀತ, ಖಗೋಳಶಾಸ್ತ್ರ, ಗಣಿತ ಮತ್ತು ಸಾಮಾಜಿಕ ಸಂಘಟನೆಯ ಕೇಂದ್ರಗಳಾಗಿವೆ ಎಂದು ಅವರು ಹೇಳಿದರು. ಭಾರತದ ಪೂರ್ವಜರು ತತ್ವಶಾಸ್ತ್ರ, ಸಾಹಿತ್ಯ, ವಿಜ್ಞಾನ ಮತ್ತು ಸಾಮಾಜಿಕ ಸುಧಾರಣೆಯಲ್ಲಿ ಶ್ರೇಷ್ಠರು ಎಂದು ಅವರು ಹೇಳಿದರು.
ಭಾರತವು ಅನೇಕ ಭಾಷೆಗಳ ಭೂಮಿ ಆದರೆ ಒಂದು ನಾಗರಿಕತೆಯ ಆತ್ಮ ಎಂದು ಉಪರಾಷ್ಟ್ರಪತಿಯವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು. ಭಾಷೆಗಳು, ಧರ್ಮಗಳು ಮತ್ತು ರಾಜಕೀಯ ಸಿದ್ಧಾಂತಗಳಲ್ಲಿನ ವ್ಯತ್ಯಾಸಗಳ ಹೊರತಾಗಿಯೂ ಭಾರತವು ಯಾವಾಗಲೂ ಒಂದೇ ದೇಶವಾಗಿದೆ, ಸಾಂಸ್ಕೃತಿಕವಾಗಿ ಒಂದೇ ಧರ್ಮದಿಂದ ಏಕೀಕೃತವಾಗಿದೆ ಎಂದು ಅವರು ಹೇಳಿದರು. ವಸುಧೈವ ಕುಟುಂಬಕಂ ಮತ್ತು "ಯಾದುಮ್ ಊರೇ ಯಾವರುಮ್ ಕೇಳಿರ್" ನ ಆದರ್ಶಗಳು ಒಂದೇ ಧರ್ಮವನ್ನು ಪ್ರತಿಬಿಂಬಿಸುತ್ತವೆ ಎಂದು ಅವರು ಹೇಳಿದರು.
ಭಾರತದ ಪ್ರತಿಯೊಂದು ಹಳ್ಳಿಯಲ್ಲಿ ರಾಮಾಯಣ ಮತ್ತು ಮಹಾಭಾರತದ ಸಾವಯವ ರೀತಿಯ ಹರಡುವಿಕೆಯನ್ನು ಪ್ರತಿಬಿಂಬಿಸುತ್ತಾ, ಈ ಮಹಾಕಾವ್ಯಗಳನ್ನು ಹೇರಲಾಗಿಲ್ಲ ಬದಲಾಗಿ ರಾಷ್ಟ್ರವನ್ನು ಒಟ್ಟಿಗೆ ಬಂಧಿಸುವ ಹಂಚಿಕೆಯ ಆಧ್ಯಾತ್ಮಿಕ ನೀತಿಯ ಮೂಲಕ ಅಳವಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
2047ರ ವೇಳೆಗೆ ವಿಕಸಿತ ಭಾರತಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೃಷ್ಟಿಕೋನವನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಯವರು, ಆರ್ಥಿಕ ಪ್ರಗತಿಯು ಸಾಂಸ್ಕೃತಿಕ ಸಂರಕ್ಷಣೆಯೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು. ಜಾಗತಿಕ ವೇದಿಕೆಗಳಲ್ಲಿ ತಿರುಕ್ಕುರಲ್ ಮತ್ತು ಸುಬ್ರಮಣಿಯ ಭಾರತಿಯನ್ನು ಆಗಾಗ್ಗೆ ಉಲ್ಲೇಖಿಸುವುದು ಸೇರಿದಂತೆ ತಮಿಳು ಪರಂಪರೆಯನ್ನು ಗೌರವಿಸುವಲ್ಲಿ ಪ್ರಧಾನಮಂತ್ರಿಯವರ ನಿರಂತರ ಪ್ರಯತ್ನಗಳನ್ನು ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು. ಬೇರೆಯವರಿಗಿಂತ ಹೆಚ್ಚಾಗಿ, ಪ್ರಧಾನಮಂತ್ರಿಯವರು ತಾವು ಹೋದಲ್ಲೆಲ್ಲಾ ತಮಿಳು ಭಾಷೆಯ ಶ್ರೇಷ್ಠತೆಯನ್ನು ನಿರಂತರವಾಗಿ ಗುರುತಿಸಿದ್ದಾರೆ ಮತ್ತು ಹೊಗಳಿದ್ದಾರೆ ಹಾಗೂ ಗೌರವಿಸಿದ್ದಾರೆ ಎಂದು ಅವರು ಹೇಳಿದರು.
ಮಲೇಷ್ಯಾದ ವಿಶ್ವವಿದ್ಯಾಲಯವೊಂದರಲ್ಲಿ ತಿರುವಳ್ಳುವರ್ ಪೀಠವನ್ನು ಸ್ಥಾಪಿಸುವ ಘೋಷಣೆಯನ್ನು ಅವರು ನೆನಪಿಸಿಕೊಂಡರು, ಮತ್ತು ಕಾಶಿ ತಮಿಳು ಸಂಗಮಮ್ ನಂತಹ ಉಪಕ್ರಮಗಳನ್ನು ರಾಷ್ಟ್ರೀಯ ಏಕೀಕರಣದ ಸಂಕೇತಗಳಾಗಿ ಶ್ಲಾಘಿಸಿದರು. ತಮಿಳು ಜಾಗತಿಕ ಮನ್ನಣೆಯನ್ನು ಪಡೆಯುತ್ತಿದೆ ಮತ್ತು ಪುಲಿತೇವರ್, ವೇಲು ನಾಚಿಯಾರ್, ವೀರಪಾಂಡ್ಯ ಕಟ್ಟಬೊಮ್ಮನ್, ಒಂಡಿವೀರನ್, ತಿರುಪ್ಪೂರ್ ಕುಮಾರನ್, ಥೀರನ್ ಚಿನ್ನಮಲೈ, ಕುಯಿಲಿ, ಸುಂದರಲಿಂಗನಾರ್, ಮರುಧು ಸಹೋದರರು ಮತ್ತು ಇತರ ತಮಿಳು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗಗಳನ್ನು ಈಗ ರಾಷ್ಟ್ರೀಯವಾಗಿ ಗುರುತಿಸಲಾಗಿದೆ ಎಂದು ಉಪರಾಷ್ಟ್ರಪತಿಯವರು ಹೆಮ್ಮೆ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರದ ಸಚಿವಾಲಯದ ಪ್ರಕಟಣೆ ವಿಭಾಗವು ಹೊರತರುವ ಪುಸ್ತಕಗಳು ಕೇವಲ ಸಾಹಿತ್ಯ ಕೃತಿಗಳಲ್ಲ ಎಂದು ಹೇಳಿದ ಉಪರಾಷ್ಟ್ರಪತಿಯವರು, ಅವುಗಳನ್ನು ಯುವ ಪೀಳಿಗೆಗೆ ಮಾರ್ಗದರ್ಶಕ ದೀಪಗಳು ಎಂದು ಬಣ್ಣಿಸಿದರು. ವೇಗವಾಗಿ ಬದಲಾಗುತ್ತಿರುವ ತಾಂತ್ರಿಕ ಜಗತ್ತಿನಲ್ಲಿ, ಯುವಕರಿಗೆ ರೆಕ್ಕೆಗಳ ಜೊತೆಗೆ ಬಲವಾದ ಬೇರುಗಳು ಬೇಕಾಗುತ್ತವೆ ಎಂದು ಅವರು ಹೇಳಿದರು. ಯುವಕರು ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ಪುಸ್ತಕಗಳನ್ನು ಓದಲು ಮೀಸಲಿಡಬೇಕೆಂದು ಅವರು ಅವರು ಯುವಜನತೆಯನ್ನು ಒತ್ತಾಯಿಸಿದರು.
ಕೇಂದ್ರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಮತ್ತು ಡಾ. ಎಲ್. ಮುರುಗನ್ ಅವರ ನೇತೃತ್ವದ ಅಡಿಯಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ ನಡೆಯುತ್ತಿರುವ ಪ್ರಯತ್ನಗಳನ್ನು ಅವರು ಈ ಸಂದರ್ಭದಲ್ಲಿ ಶ್ಲಾಘಿಸಿದರು ಮತ್ತು ಈ ಕೃತಿ ಸಂಪುಟಗಳನ್ನು ಎಚ್ಚರಿಕೆಯಿಂದ ಹೊರತಂದಿದ್ದಕ್ಕಾಗಿ ಪ್ರಕಟಣೆ ವಿಭಾಗವನ್ನು ಅವರು ಶ್ಲಾಘಿಸಿದರು.
ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಉಪರಾಷ್ಟ್ರಪತಿಯವರು "ಭಾರತವು ವಿಕಸಿತ ಭಾರತದ ಗುರಿಯತ್ತ ಸಾಗುತ್ತಿರುವಾಗ, ಆರ್ಥಿಕ ಬೆಳವಣಿಗೆಯೊಂದಿಗೆ ಸಾಂಸ್ಕೃತಿಕ ಬಲವೂ ಜೊತೆ ಜೊತೆಯಲ್ಲಿ ಇರಬೇಕು" ಎಂದು ಹೇಳಿದರು.
ಕೇಂದ್ರ ವಾರ್ತಾ ಮತ್ತು ಪ್ರಸಾರ; ರೈಲ್ವೆ; ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಶ್ರೀ ಅಶ್ವಿನಿ ವೈಷ್ಣವ್; ಕೇಂದ್ರ ವಾರ್ತಾ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವರಾದ ಡಾ. ಎಲ್. ಮುರುಗನ್; ಉಪರಾಷ್ಟ್ರಪತಿಯವರ ಕಾರ್ಯದರ್ಶಿ ಶ್ರೀ ಅಮಿತ್ ಖರೆ; ಮತ್ತು ಕೇಂದ್ರ ಪ್ರಕಟಣೆ ವಿಭಾಗದ ಪ್ರಧಾನ ಮಹಾನಿರ್ದೇಶಕ ಶ್ರೀ ಭೂಪೇಂದ್ರ ಕೈಂಥೋಲಾ ಅವರು ಈ ಸಂದರ್ಭದಲ್ಲಿ ಗಣ್ಯ ವಿದ್ವಾಂಸರು, ಬರಹಗಾರರು ಮತ್ತು ಗಣ್ಯರೊಂದಿಗೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
*****
(ಪ್ರಕಟಣೆ ಐ.ಡಿ.: 2234793)
ವಿಸಿಟರ್ ಕೌಂಟರ್ : 3