ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಭಾರತದ ಜವಾಬ್ದಾರಿಯುತ ಎಐ ದೃಷ್ಟಿಕೋನಕ್ಕೆ ಜಾಗತಿಕ ಬೆಂಬಲದೊಂದಿಗೆ ಭಾರತ ಮಂಟಪದಲ್ಲಿ 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026' ಮುಕ್ತಾಯ
ಮೂಲಸೌಕರ್ಯ ವಲಯದಲ್ಲಿ 250 ಬಿಲಿಯನ್ ಡಾಲರ್ ಗೂ ಅಧಿಕ ಹೂಡಿಕೆಯ ಭರವಸೆ; 20 ಬಿಲಿಯನ್ ಡಾಲರ್ ನ ಡೀಪ್-ಟೆಕ್ ಬದ್ಧತೆಗಳು ಭಾರತದ ಎಐ ಪರಿಸರ ವ್ಯವಸ್ಥೆಯ ಮೇಲಿನ ಜಾಗತಿಕ ವಿಶ್ವಾಸವನ್ನು ಪ್ರತಿಬಿಂಬಿಸುತ್ತವೆ
ಹೊಸ ಎಐ ಯುಗದಲ್ಲಿ ಭಾರತದ ಪಾತ್ರದ ಮೇಲೆ ಜಗತ್ತು ವಿಶ್ವಾಸ ಹೊಂದಿದೆ: ಶ್ರೀ ಅಶ್ವಿನಿ ವೈಷ್ಣವ್
ಮೈಲಿಗಲ್ಲು ಎನಿಸಿದ ಎಐ ಸಮಾವೇಶದಲ್ಲಿ 20ಕ್ಕೂ ಹೆಚ್ಚು ಸರ್ಕಾರಿ ಮುಖ್ಯಸ್ಥರು ಮತ್ತು 118 ದೇಶಗಳ ಪ್ರತಿನಿಧಿಗಳ ಭಾಗಿ
5 ಲಕ್ಷಕ್ಕೂ ಹೆಚ್ಚು ಭಾಗವಹಿಸುವವರು ಮತ್ತು 550 ಶೃಂಗಸಭೆ-ಪೂರ್ವ ಕಾರ್ಯಕ್ರಮಗಳು 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ'ಯನ್ನು ವಿಶ್ವದ ಅತಿದೊಡ್ಡ ಎಐ ಸಮಾವೇಶಗಳಲ್ಲಿ ಒಂದಾಗಿಸಿದವು
ಪ್ರಕಟಣಾ ದಿನಾಂಕ:
20 FEB 2026 8:32PM by PIB Bengaluru
ನವದೆಹಲಿಯ ಭಾರತ ಮಂಟಪದಲ್ಲಿ ಇಂದು 'ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆ 2026' ಮುಕ್ತಾಯಗೊಂಡಿತು. ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, ಐದು ದಿನಗಳ ಈ ಜಾಗತಿಕ ಸಮಾವೇಶದ ಪ್ರಮಾಣ, ಫಲಿತಾಂಶಗಳು ಮತ್ತು ಪ್ರಮುಖ ಘೋಷಣೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು. ಈ ಮಾಧ್ಯಮಗೋಷ್ಠಿಯಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವರಾದ ಶ್ರೀ ಜಿತಿನ್ ಪ್ರಸಾದ್, ಸಚಿವಾಲಯದ ಕಾರ್ಯದರ್ಶಿ ಶ್ರೀ ಎಸ್. ಕೃಷ್ಣನ್, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಶ್ರೀ ರಣಧೀರ್ ಜೈಸ್ವಾಲ್ ಮತ್ತು ಭಾರತ ಸರ್ಕಾರದ ಪ್ರಧಾನ ವಕ್ತಾರ ಹಾಗೂ ಪಿಐಬಿಯ ಪ್ರಧಾನ ಮಹಾನಿರ್ದೇಶಕ ಶ್ರೀ ಧೀರೇಂದ್ರ ಓಜಾ ಉಪಸ್ಥಿತರಿದ್ದರು.
ಈ ಶೃಂಗಸಭೆಯು ಅಭೂತಪೂರ್ವ ಅಂತರರಾಷ್ಟ್ರೀಯ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು, ಇದು ಜಾಗತಿಕ ಕೃತಕ ಬುದ್ಧಿಮತ್ತೆಯ ಚರ್ಚೆಯನ್ನು ರೂಪಿಸುವಲ್ಲಿ ಭಾರತದ ಬೆಳೆಯುತ್ತಿರುವ ನಾಯಕತ್ವವನ್ನು ಪುನರುಚ್ಚರಿಸಿತು. ಉದ್ಘಾಟನಾ ಸಮಾರಂಭದಲ್ಲಿ 20ಕ್ಕೂ ಹೆಚ್ಚು ಸರ್ಕಾರಿ ಮುಖ್ಯಸ್ಥರು ಮತ್ತು 59 ಸಚಿವ ಮಟ್ಟದ ಪ್ರತಿನಿಧಿಗಳು ಹಾಗೂ 118 ದೇಶಗಳ ಸರ್ಕಾರಿ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಶೃಂಗಸಭೆಯು 100ಕ್ಕೂ ಹೆಚ್ಚು ಜಾಗತಿಕ ಎಐ ನಾಯಕರು, ಸಿಇಒಗಳು ಮತ್ತು ಸಿ ಕ್ಸ್ ಒ ಗಳು ಹಾಗೂ ಪ್ರಪಂಚದಾದ್ಯಂತದ 500ಕ್ಕೂ ಹೆಚ್ಚು ಪ್ರಮುಖ ಎಐ ತಜ್ಞರನ್ನು ಒಂದುಗೂಡಿಸಿತು.

ಭಾರತದ ಎಐ ಪಥದ ಬಗ್ಗೆ ಜಾಗತಿಕವಾಗಿ ಇರುವ ಅಪಾರ ಆಸಕ್ತಿಯನ್ನು ಪ್ರತಿಬಿಂಬಿಸುವಂತೆ, ಶೃಂಗಸಭೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ಬಗ್ಗೆ ಕೇವಲ ಭಾರತದಲ್ಲಷ್ಟೇ ಅಲ್ಲದೆ ಜಾಗತಿಕವಾಗಿ ಸಂಚಲನ ನಿರ್ಮಾಣವಾಗಿತ್ತು; 30 ದೇಶಗಳಲ್ಲಿ 550 ಪೂರ್ವ-ಶೃಂಗಸಭೆ ಕಾರ್ಯಕ್ರಮಗಳು ನಡೆದಿದ್ದವು ಮತ್ತು ಮುಖ್ಯ ಶೃಂಗಸಭೆಯ ದಿನಗಳಲ್ಲಿ 500ಕ್ಕೂ ಹೆಚ್ಚು ಪೂರಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಇದು ಈವರೆಗಿನ ಅತ್ಯಂತ ವಿಸ್ತಾರವಾದ ಬಹು-ಪಾಲುದಾರರ ಎಐ ಸಂವಾದಗಳಲ್ಲಿ ಒಂದಾಗಿದೆ.
ಪ್ರಬಲ ಜಾಗತಿಕ ಭಾಗವಹಿಸುವಿಕೆ, ಭಾರತದ ಜವಾಬ್ದಾರಿಯುತ ಎಐ ದೃಷ್ಟಿಕೋನಕ್ಕೆ ದೊರೆತ ವ್ಯಾಪಕ ಬೆಂಬಲ ಮತ್ತು ದೇಶದ ತಾಂತ್ರಿಕ ಸಾಮರ್ಥ್ಯಗಳ ಮೇಲೆ ಬೆಳೆಯುತ್ತಿರುವ ವಿಶ್ವಾಸವನ್ನು ಎತ್ತಿ ತೋರಿಸಿದ ಶ್ರೀ ಅಶ್ವಿನಿ ವೈಷ್ಣವ್ ಅವರು, ಅಂಕಿಅಂಶಗಳು ಮುಖ್ಯ, ಆದರೆ ನಿಜವಾಗಿಯೂ ಮುಖ್ಯವಾದುದೆಂದರೆ ಹೊಸ ಎಐ ಯುಗದಲ್ಲಿ ಭಾರತದ ಪಾತ್ರದ ಬಗ್ಗೆ ಜಗತ್ತು ಹೊಂದಿರುವ ವಿಶ್ವಾಸವಾಗಿದೆ ಎಂದರು. ಭಾಗವಹಿಸುವಿಕೆಯ ಗುಣಮಟ್ಟ, ಸಂವಾದದ ಆಳ ಮತ್ತು ಜವಾಬ್ದಾರಿಯುತ ಹಾಗೂ ಸಾರ್ವಭೌಮ ಎಐ ಕುರಿತಾದ ನಮ್ಮ ವಿಧಾನಕ್ಕೆ ದೊರೆತಿರುವ ಜಾಗತಿಕ ಅನುಮೋದನೆಯು ಭಾರತವು ಈ ರೂಪಾಂತರದಲ್ಲಿ ಕೇವಲ ಭಾಗವಹಿಸುತ್ತಿಲ್ಲ, ಬದಲಾಗಿ ಅದನ್ನು ರೂಪಿಸಲು ಸಹಾಯ ಮಾಡುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಹೇಳಿದರು.

ಈ ಎಐ ಶೃಂಗಸಭೆಯು ಕೃತಕ ಬುದ್ಧಿಮತ್ತೆಯಲ್ಲಿ ಭಾರತದ ಜಾಗತಿಕ ನಾಯಕತ್ವಕ್ಕೆ ಒಂದು ಮೈಲಿಗಲ್ಲು ಎಂದು ಸಚಿವರು ಬಣ್ಣಿಸಿದರು. ಪ್ರಮುಖ ಜಾಗತಿಕ ಎಐ ಕಂಪನಿಗಳ ಭಾಗವಹಿಸುವಿಕೆ, ಸಚಿವರ ಮಟ್ಟದ ತೊಡಗಿಸಿಕೊಳ್ಳುವಿಕೆ ಮತ್ತು ಹಿಂದೆಂದೂ ಕಾಣದ ಯುವಜನರ ಸಹಭಾಗಿತ್ವವನ್ನು ಅವರು ಒತ್ತಿಹೇಳಿದರು. ವಿಶೇಷವಾಗಿ, 2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಜವಾಬ್ದಾರಿಯುತ ಮತ್ತು ನೈತಿಕ ಎಐ ಕುರಿತ ಚರ್ಚೆಗಳಲ್ಲಿ ಭಾಗವಹಿಸಿದ್ದು ಗಿನ್ನೆಸ್ ವಿಶ್ವ ದಾಖಲೆಗೆ ಕಾರಣವಾಗಿದೆ ಎಂದು ತಿಳಿಸಿದರು.
ಮೂಲಸೌಕರ್ಯಕ್ಕೆ ಸಂಬಂಧಿಸಿದ ಹೂಡಿಕೆಯ ಭರವಸೆಗಳು 250 ಬಿಲಿಯನ್ ಡಾಲರ್ ಗಳನ್ನು ದಾಟಿದೆ ಮತ್ತು ಸುಮಾರು 20 ಬಿಲಿಯನ್ ಡಾಲರ್ ನಷ್ಟು ಡೀಪ್-ಟೆಕ್ ವೆಂಚರ್ ಬದ್ಧತೆಗಳು ಬಂದಿವೆ. ಇದು ಭಾರತದ ಎಐ ಮೂಲಸೌಕರ್ಯ ಪರಿಸರ ವ್ಯವಸ್ಥೆಯ ಮೇಲಿನ ಜಾಗತಿಕ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಹೇಳಿದರು. ಭಾರತದ 'ಸಾರ್ವಭೌಮ ಎಐ ಮಾಡೆಲ್' ಕಾರ್ಯತಂತ್ರಕ್ಕೆ ದೊರೆತ ಅಂತರರಾಷ್ಟ್ರೀಯ ಬೆಂಬಲವನ್ನು ಅವರು ಒತ್ತಿಹೇಳಿದರು ಮತ್ತು ಮಿತವ್ಯಯದ ನಾವೀನ್ಯತೆಯೊಂದಿಗೆ ಅಭಿವೃದ್ಧಿಪಡಿಸಲಾದ ಸ್ವದೇಶಿ ಮಾದರಿಗಳ ಗುಣಮಟ್ಟವನ್ನು ಶ್ಲಾಘಿಸಿದರು.
2047ರ ವೇಳೆಗೆ "ವಿಕಸಿತ ಭಾರತ" ನಿರ್ಮಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ವಿಶಾಲ ದೃಷ್ಟಿಕೋನದ ಅಡಿಯಲ್ಲಿ ಈ ಬೆಳವಣಿಗೆಗಳನ್ನು ವಿವರಿಸಿದ ಅವರು, ಈ ಶೃಂಗಸಭೆಯು ಭಾರತದಲ್ಲಿ ದೀರ್ಘಕಾಲೀನ ತಾಂತ್ರಿಕ ಮತ್ತು ಸೆಮಿಕಂಡಕ್ಟರ್ ಸಾಮರ್ಥ್ಯವನ್ನು ನಿರ್ಮಿಸುವ ನಿಟ್ಟಿನಲ್ಲಿ ಒಂದು ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಬಣ್ಣಿಸಿದರು.
*****
(ಪ್ರಕಟಣೆ ಐ.ಡಿ.: 2231029)
ವಿಸಿಟರ್ ಕೌಂಟರ್ : 3