ಗ್ರಾಮೀಣಾಭಿವೃದ್ಧಿ ಸಚಿವಾಲಯ
azadi ka amrit mahotsav

6 ಕೋಟಿ 'ಲಖ್ಪತಿ ದೀದಿ'ಗಳ ಗುರಿಯನ್ನು ಸಾಧಿಸಲು ಯುದ್ಧೋಪಾದಿಯಲ್ಲಿ ಕ್ರಮ ಕೈಗೊಳ್ಳಲು ಕೇಂದ್ರ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಸೂಚನೆ


10 ಕೋಟಿ ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಬೇಕು: ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಶ್ರೀ ಚೌಹಾಣ್

'ಲಖ್ಪತಿ ದೀದಿ'ಗಳು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಯೋಜನೆಗಳ ಗರಿಷ್ಠ ಪ್ರಯೋಜನವನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ: ಶ್ರೀ ಶಿವರಾಜ್ ಸಿಂಗ್ ಚೌಹಾಣ್

ಪ್ರಕಟಣಾ ದಿನಾಂಕ: 18 FEB 2026 5:55PM by PIB Bengaluru

ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಬುಧವಾರ ನವದೆಹಲಿಯ ಕೃಷಿ ಭವನದಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY–NRLM) ನ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದರು. ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಧಿಕಾರಿಗಳು ಈ ಕಾರ್ಯಾಚರಣೆಯ ಅನುಷ್ಠಾನ ಮತ್ತು ಪ್ರಗತಿಯ ಕುರಿತು ನವೀಕರಣಗಳನ್ನು ಪ್ರಸ್ತುತಪಡಿಸಿದರು.

ಸಭೆಯಲ್ಲಿ, ಯೋಜನೆಯ ಇತ್ತೀಚಿನ ಪ್ರಗತಿಯ ಕುರಿತು ಸಚಿವಾಲಯದ ಹಿರಿಯ ಅಧಿಕಾರಿಗಳಿಂದ ಕೇಂದ್ರ ಸಚಿವರು ವಿವರಣೆಯನ್ನು ಕೋರಿದರು. ಈ ಅಭಿಯಾನದ ಒಟ್ಟಾರೆ ಕಾರ್ಯಕ್ಷಮತೆಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಶ್ರೀ ಚೌಹಾಣ್, 6 ಕೋಟಿ 'ಲಖ್ಪತಿ ದೀದಿ'ಗಳನ್ನು ಸೃಷ್ಟಿಸುವ ಪರಿಷ್ಕೃತ ಗುರಿಯನ್ನು ಸಾಧಿಸಲು ವಿಶೇಷ, ಕೇಂದ್ರೀಕೃತ ಕಾರ್ಯತಂತ್ರವನ್ನು ರೂಪಿಸಲು ಮತ್ತು ಸಮರೋಪಾದಿಯಲ್ಲಿ ಕೆಲಸ ಮಾಡಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

6 ಕೋಟಿ 'ಲಖ್ಪತಿ ದೀದಿ'ಗಳ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಲು ಕನಿಷ್ಠ 10 ಕೋಟಿ ಮಹಿಳೆಯರನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯದ ವಿವಿಧ ಆರ್ಥಿಕ ಸೇರ್ಪಡೆ ಉಪಕ್ರಮಗಳಿಗೆ ಸಂಪರ್ಕಿಸುವ ಅಗತ್ಯವಿದೆ ಎಂದು ಕೇಂದ್ರ ಸಚಿವರು ಹೇಳಿದರು. ರಾಜ್ಯ ಸರ್ಕಾರಗಳೊಂದಿಗೆ ನಿಕಟ ಸಮನ್ವಯದಲ್ಲಿ ಕೆಲಸ ಮಾಡಲು ಮತ್ತು ಗುರಿಯ ಯಶಸ್ವಿ ಸಾಧನೆಯನ್ನು ಖಚಿತಪಡಿಸಿಕೊಳ್ಳಲು ಸಮಯಕ್ಕೆ ಅನುಗುಣವಾಗಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮೀಣ ಭಾರತದಲ್ಲಿ ಮಹಿಳಾ ಸಬಲೀಕರಣ ಮತ್ತು ಸುಸ್ಥಿರ ಜೀವನೋಪಾಯಕ್ಕೆ ಆರ್ಥಿಕ ಸೇರ್ಪಡೆ ಬೆನ್ನೆಲುಬು ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಸ್ವಸಹಾಯ ಗುಂಪು (SHG) ಸದಸ್ಯರನ್ನು ಆರ್ಥಿಕವಾಗಿ ಸ್ವತಂತ್ರ ಮತ್ತು ಸ್ವಾವಲಂಬಿ ವ್ಯಕ್ತಿಗಳಾಗಿ ಪರಿವರ್ತಿಸಲು ಬ್ಯಾಂಕ್ ಸಂಪರ್ಕಗಳು, ಸಾಲ ಪ್ರವೇಶ, ವಿಮಾ ರಕ್ಷಣೆ ಮತ್ತು ಆರ್ಥಿಕ ಸಾಕ್ಷರತೆಯ ಮೂಲಕ ಹೆಚ್ಚಿನ ಮಹಿಳೆಯರನ್ನು ಔಪಚಾರಿಕ ಹಣಕಾಸು ವ್ಯವಸ್ಥೆಗೆ ತರುವುದು ಅತ್ಯಗತ್ಯ ಎಂದು ಅವರು ಹೇಳಿದರು.

ಈ ಅಭಿಯಾನದ ಅಡಿಯಲ್ಲಿ ಹಂಚಿಕೆಯಾದ ಬಜೆಟ್‌ನ ಪರಿಣಾಮಕಾರಿ ಮತ್ತು ಅತ್ಯುತ್ತಮ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಿರೀಕ್ಷೆಗಿಂತ ಕಡಿಮೆ ಕಾರ್ಯಕ್ಷಮತೆ ಹೊಂದಿರುವ ಅಥವಾ ಹಂಚಿಕೆಯಾದ ಹಣವನ್ನು ಸಂಪೂರ್ಣವಾಗಿ ಬಳಸಿಕೊಳ್ಳದ ರಾಜ್ಯಗಳಿಗೆ ಅಗತ್ಯ ಮಾರ್ಗದರ್ಶನ, ಬೆಂಬಲ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಅವರು ಹೇಳಿದರು. ನಿಗದಿತ ಸಮಯದೊಳಗೆ ಯೋಜನೆಯ ಉದ್ದೇಶಗಳನ್ನು ಸಾಧಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಇದು ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು.

ರಾಜ್ಯಗಳೊಂದಿಗೆ ನಿರಂತರ ತೊಡಗಿಸಿಕೊಳ್ಳುವಿಕೆಯ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದ ಶ್ರೀ ಶಿವರಾಜ್ ಚೌಹಾಣ್, ರಾಜ್ಯ ಸರ್ಕಾರಗಳೊಂದಿಗೆ ನಿರಂತರ ಸಂವಾದ ಮತ್ತು ಸಮನ್ವಯವು DAY - NRLM ಅನುಷ್ಠಾನವನ್ನು ಬಲಪಡಿಸುತ್ತದೆ ಎಂದು ಹೇಳಿದರು. ಅಂತಹ ವಿಧಾನವು ಯೋಜನೆಯ ಪ್ರಯೋಜನಗಳನ್ನು ಹೆಚ್ಚಿನ ಸಂಖ್ಯೆಯ ಸ್ವ-ಸಹಾಯ ಗುಂಪುಗಳು ಮತ್ತು 'ಲಖ್ಪತಿ ದೀದಿ'ಗಳಿಗೆ ವಿಸ್ತರಿಸಲು ಸಹಾಯ ಮಾಡುತ್ತದೆ ಮತ್ತು ವಿವಿಧ ಜೀವನೋಪಾಯ ಮತ್ತು ಸಬಲೀಕರಣ ಉಪಕ್ರಮಗಳಿಂದ ಗರಿಷ್ಠ ಪ್ರಯೋಜನವನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.

ಗ್ರಾಮೀಣಾಭಿವೃದ್ಧಿ ಸಚಿವಾಲಯದ ಯೋಜನೆಗಳು ಮತ್ತು ಕಾರ್ಯಕ್ರಮಗಳಿಂದ 'ಲಖ್ಪತಿ ದೀದಿ'ಗಳು ಗರಿಷ್ಠ ಸಂಭಾವ್ಯ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರದ ದೃಢ ಬದ್ಧತೆಯನ್ನು ಕೇಂದ್ರ ಸಚಿವರು ಪುನರುಚ್ಚರಿಸಿದರು. ಈ ಕಾರ್ಯಾಚರಣೆಯ ಯಶಸ್ಸು ಸಂಖ್ಯಾತ್ಮಕ ಗುರಿಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಶಾಶ್ವತ ಆರ್ಥಿಕ ಸಬಲೀಕರಣ ಮತ್ತು ಸುಧಾರಿತ ಜೀವನ ಗುಣಮಟ್ಟವನ್ನು ಸೃಷ್ಟಿಸುವಲ್ಲಿಯೂ ನೆರವಾಗಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ–ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ನಾಲ್ಕು ಪ್ರಮುಖ ಘಟಕಗಳ ಮೂಲಕ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಉಲ್ಲೇಖಿಲಾಯಿತು. ಇವುಗಳಲ್ಲಿ ಸಾಂಸ್ಥಿಕ ನಿರ್ಮಾಣ ಮತ್ತು ಸಾಮರ್ಥ್ಯ ಅಭಿವೃದ್ಧಿ, ಸಾಮಾಜಿಕ ಸೇರ್ಪಡೆ ಮತ್ತು ಸಾಮಾಜಿಕ ಅಭಿವೃದ್ಧಿ, ಆರ್ಥಿಕ ಸೇರ್ಪಡೆ ಮತ್ತು ಜೀವನೋಪಾಯ ಪ್ರಚಾರ ಸೇರಿವೆ. ಒಟ್ಟಾಗಿ, ಈ ಘಟಕಗಳು ಬಲಿಷ್ಠ ಸಮುದಾಯ ಸಂಸ್ಥೆಗಳನ್ನು ರಚಿಸುವುದು, ಕೌಶಲ್ಯಗಳನ್ನು ಹೆಚ್ಚಿಸುವುದು, ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸುವುದು ಮತ್ತು ಗ್ರಾಮೀಣ ಕುಟುಂಬಗಳಿಗೆ ಆದಾಯ-ಉತ್ಪಾದಿಸುವ ಅವಕಾಶಗಳನ್ನು ಬಲಪಡಿಸುವ ಗುರಿಯನ್ನು ಹೊಂದಿವೆ.

ಈ ಮಿಷನ್ ಅಡಿಯಲ್ಲಿ, ಬ್ಯಾಂಕ್ ಸಂಪರ್ಕ ಕಾರ್ಯಕ್ರಮದ ಮೂಲಕ ಔಪಚಾರಿಕ ಸಾಲದ ಸೌಲಭ್ಯಗಳನ್ನು ವಿಸ್ತರಿಸುವಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದೆ. ಇಲ್ಲಿಯವರೆಗೆ, ಬ್ಯಾಂಕ್ ಸಂಪರ್ಕಗಳ ಮೂಲಕ ಫಲಾನುಭವಿಗಳಿಗೆ ಸುಮಾರು ₹1.5 ಲಕ್ಷ ಕೋಟಿ ಆರ್ಥಿಕ ಸಹಾಯವನ್ನು ವಿಸ್ತರಿಸಲಾಗಿದೆ, ಇದು ಸ್ವ-ಸಹಾಯ ಗುಂಪುಗಳು ಮತ್ತು ಅವರ ಸದಸ್ಯರು ಜೀವನೋಪಾಯ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಲು ಮತ್ತು ಅವರ ಆರ್ಥಿಕ ನೆಲೆಯನ್ನು ಬಲಪಡಿಸಲು ಅನುವು ಮಾಡಿಕೊಡುತ್ತದೆ.

ಇದರ ಜೊತೆಗೆ, ಸುಮಾರು 5 ಕೋಟಿ ವ್ಯಕ್ತಿಗಳು ಆರ್ಥಿಕ ಸಾಕ್ಷರತಾ ಉಪಕ್ರಮಗಳೊಂದಿಗೆ ಸಂಪರ್ಕ ಹೊಂದಿದ್ದಾರೆ, ಹಣಕಾಸು, ಉಳಿತಾಯ, ಸಾಲ ಮತ್ತು ಹೂಡಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಅಗತ್ಯವಿರುವ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಅವರನ್ನು ಸಜ್ಜುಗೊಳಿಸಿದ್ದಾರೆ. ಸಾಮಾಜಿಕ ಭದ್ರತಾ ವ್ಯಾಪ್ತಿಯನ್ನು ವಿಸ್ತರಿಸುವಲ್ಲಿ ಮಿಷನ್ ಪ್ರಮುಖ ಪಾತ್ರ ವಹಿಸಿದೆ, ಸುಮಾರು 7 ಕೋಟಿ ಜನರು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ವಿಮಾ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ.

ಈ ಸಾಧನೆಗಳು ಗ್ರಾಮೀಣ ಜೀವನೋಪಾಯ ಮತ್ತು ಮಹಿಳಾ ಸಬಲೀಕರಣದ ಮೇಲೆ DAY – NRLM ನ ಪರಿವರ್ತನಾತ್ಮಕ ಪರಿಣಾಮವನ್ನು ಪ್ರದರ್ಶಿಸುತ್ತವೆ ಎಂದು ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು. ಕೇಂದ್ರೀಕೃತ ಅನುಷ್ಠಾನ, ನಿಕಟ ಮೇಲ್ವಿಚಾರಣೆ ಮತ್ತು ರಾಜ್ಯಗಳೊಂದಿಗೆ ಬಲವಾದ ಸಮನ್ವಯದೊಂದಿಗೆ, ಲಕ್ಷಾಂತರ 'ಲಖ್ಪತಿ ದೀದಿ'ಗಳನ್ನು ಸೃಷ್ಟಿಸುವ ಮತ್ತು ಹೆಚ್ಚು ಒಳಗೊಳ್ಳುವ, ಸ್ವಾವಲಂಬಿ (ಆತ್ಮನಿರ್ಭರ್) ಗ್ರಾಮೀಣ ಆರ್ಥಿಕತೆಯನ್ನು ನಿರ್ಮಿಸುವ ಸರ್ಕಾರದ ದೃಷ್ಟಿಕೋನವನ್ನು ಸಾಧಿಸುವಲ್ಲಿ ಈ ಮಿಷನ್ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದರು.

ಈ ಅಭಿಯಾನದ ಅಡಿಯಲ್ಲಿ ಪ್ರಗತಿಯನ್ನು ವೇಗಗೊಳಿಸಲು ಮತ್ತು ಗ್ರಾಮೀಣ ಮಹಿಳೆಯರು ಆದಾಯ ಗಳಿಸುವವರಾಗಿ ಮಾತ್ರವಲ್ಲದೇ, ರಾಷ್ಟ್ರದ ಅಭಿವೃದ್ಧಿಗೆ ಆತ್ಮವಿಶ್ವಾಸ, ಸಬಲೀಕರಣಗೊಂಡ ಕೊಡುಗೆದಾರರಾಗಿ ಹೊರಹೊಮ್ಮುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಹೇಳುವ ಮೂಲಕ ಕೇಂದ್ರ ಸಚಿವರು ತಮ್ಮ ಭಾಷಣವನ್ನು ಮುಗಿಸಿದರು.

 

*****


(ಪ್ರಕಟಣೆ ಐ.ಡಿ.: 2229971) ವಿಸಿಟರ್ ಕೌಂಟರ್ : 8
ಪ್ರಕಟಣೆಯನ್ನು ಇದರಲ್ಲಿ ಓದಿ: हिन्दी , English , Urdu , Gujarati