ರಕ್ಷಣಾ ಸಚಿವಾಲಯ
azadi ka amrit mahotsav

ಕರ್ನಾಟಕದ ವೇಮಗಲ್‌ನಲ್ಲಿ ಎಚ್-125 ಲೈಟ್ ಯುಟಿಲಿಟಿ ಹೆಲಿಕಾಪ್ಟರ್‌ನ (ಲಘು ವಿಮಾನ) ಅಂತಿಮ ಜೋಡಣೆ ವ್ಯವಸ್ಥೆ (ಅಸೆಂಬ್ಲಿ ಲೈನ್)  ಯನ್ನು ಪ್ರಧಾನಮಂತ್ರಿ ಮತ್ತು ಫ್ರೆಂಚ್ ಅಧ್ಯಕ್ಷರು ವರ್ಚುವಲ್ ಆಗಿ ಉದ್ಘಾಟಿಸಿದರು


ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಎಚ್-125 ಅಂತಿಮ ಜೋಡಣೆ ವ್ಯವಸ್ಥೆಯು ಒಂದು ಮೈಲಿಗಲ್ಲು: ರಕ್ಷಾ ಮಂತ್ರಿ

"ಪರಸ್ಪರ ಪ್ರಯೋಜನಕಾರಿ ಪಾಲುದಾರಿಕೆಗಳ ಮೂಲಕ ನಿರ್ಣಾಯಕ ತಂತ್ರಜ್ಞಾನ ಮತ್ತು ಉನ್ನತ-ಮಟ್ಟದ ಉತ್ಪನ್ನಗಳ ತಯಾರಿಕೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಲು ಸರ್ಕಾರ ಬದ್ಧವಾಗಿದೆ"

ಪ್ರಕಟಣಾ ದಿನಾಂಕ: 17 FEB 2026 10:16PM by PIB Bengaluru

ಕರ್ನಾಟಕದ ವೇಮಗಲ್‌ನಲ್ಲಿರುವ ಏರ್‌ಬಸ್ ಎಚ್-125 ಲೈಟ್ ಯುಟಿಲಿಟಿ ಹೆಲಿಕಾಪ್ಟರ್‌ನ (ವಿವಿಧೋಪಯೋಗಿ ಅಂದರೆ ಸರಕು ಸಾಗಾಟ, ಸೇನೆ ಹಾಗು ವಿವಿಧ ಉಪಕರಣಗಳ ಸಾಗಾಟಕ್ಕೆ ಬಳಕೆಯಾಗುವ ಲಘು ಹೆಲಿಕಾಪ್ಟರ್) ಟಾಟಾ ಅಡ್ವಾನ್ಸ್‌ಡ್ ಸಿಸ್ಟಮ್ಸ್ ಫೈನಲ್ ಅಸೆಂಬ್ಲಿ ಲೈನ್ (ಜೋಡಣಾ ವ್ಯವಸ್ಥೆ)ನ್ನು 2026ರ ಫೆಬ್ರವರಿ 17ರಂದು ಮುಂಬೈನಿಂದ ಪ್ರಧಾನಿ ಶ್ರೀ ನರೇಂದ್ರ ಮೋದಿ ಮತ್ತು ಫ್ರೆಂಚ್ ಅಧ್ಯಕ್ಷರಾದ ಶ್ರೀ ಎಮ್ಯಾನುಯೆಲ್ ಮ್ಯಾಕ್ರನ್ ಅವರು ವರ್ಚುವಲ್ ಆಗಿ ಉದ್ಘಾಟಿಸಿದರು. ವರ್ಚುವಲ್ ಉದ್ಘಾಟನಾ ಸಮಾರಂಭದಲ್ಲಿ ರಕ್ಷಾ ಮಂತ್ರಿ ಶ್ರೀ ರಾಜನಾಥ್ ಸಿಂಗ್, ಫ್ರೆಂಚ್ ಸಶಸ್ತ್ರ ಪಡೆ ಮತ್ತು ನಿವೃತ್ತ ಸೈನಿಕರ ವ್ಯವಹಾರಗಳ ಸಚಿವರಾದ ಶ್ರೀಮತಿ ಕ್ಯಾಥರೀನ್ ವೌಟ್ರಿನ್, ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಶ್ರೀ ಕೆ.ಆರ್. ನಾಯ್ಡು ಮತ್ತು ಕರ್ನಾಟಕ ಸರ್ಕಾರದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವರಾದ ಡಾ. ಎಂ.ಬಿ. ಪಾಟೀಲ್ ಅವರು ಫೈನಲ್ ಅಸೆಂಬ್ಲಿ ಲೈನ್ ಸೌಲಭ್ಯದಲ್ಲಿ ಉಪಸ್ಥಿತರಿದ್ದರು.

Description: A person in a suit and tie standing next to a person in a suit and tieDescription automatically generated

Description: A group of people standing on a stageDescription automatically generated

ತಮ್ಮ ಭಾಷಣದಲ್ಲಿ, ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ಎಚ್-125 ಹೆಲಿಕಾಪ್ಟರ್‌ಗಳ ಅಂತಿಮ ಜೋಡಣೆ ಸೌಲಭ್ಯವನ್ನು  ಭಾರತ ಮತ್ತು ಫ್ರಾನ್ಸ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ಒಂದು ಮೈಲಿಗಲ್ಲು ಎಂದು ಬಣ್ಣಿಸಿದರು. "ಫ್ರಾನ್ಸ್‌ನೊಂದಿಗಿನ ನಮ್ಮ ಸಹಯೋಗವು ಅಪರಿಮಿತವಾಗಿದೆ, ಅಲ್ಲಿ ನಮ್ಮ ಪರಸ್ಪರ ಪ್ರಯೋಜನಕಾರಿ ಪಾಲುದಾರಿಕೆಗೆ ಆಕಾಶವೂ ಮಿತಿಯಲ್ಲ" ಎಂದು ಅವರು ಹೇಳಿದರು, ಭಾರತದಲ್ಲಿ ಸಿ-295 ಸಾರಿಗೆ ವಿಮಾನಗಳನ್ನು ತಯಾರಿಸಲು ಅವರ ಈ ಮೊದಲಿನ  ಸಹಯೋಗವನ್ನು ಅನುಸರಿಸುವ ಎಚ್-125 ಉಪಕ್ರಮಕ್ಕಾಗಿ ಟಿ.ಎ.ಎಸ್.ಎಲ್. ಮತ್ತು ಏರ್‌ಬಸ್ ಹೆಲಿಕಾಪ್ಟರ್‌ಗಳನ್ನು ಅಭಿನಂದಿಸಿದರು. ಮೇಕ್-ಇನ್-ಇಂಡಿಯಾ ದೃಷ್ಟಿಕೋನಕ್ಕೆ ಕೊಡುಗೆ ನೀಡಲು ಭಾರತವು ಅಂತರರಾಷ್ಟ್ರೀಯ ಮೂಲ ಸಲಕರಣೆ ತಯಾರಕರೊಂದಿಗೆ ಹೇಗೆ ಸಹಕರಿಸಬಹುದು ಎಂಬುದರ ಸಂಕೇತ ಇದು ಎಂದು ಅವರು ಯೋಜನೆಯನ್ನು ಬಣ್ಣಿಸಿದರು.

2014 ರಿಂದ ಭಾರತದ ಆರ್ಥಿಕ ನೀತಿಯ ಮೂಲಾಧಾರವಾಗಿ ಮೇಕ್-ಇನ್-ಇಂಡಿಯಾ ಮತ್ತು ಆತ್ಮನಿರ್ಭರ ಭಾರತ್ ಯೋಜನೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಒತ್ತಿ ಹೇಳಿದ ರಕ್ಷಣಾ ಮಂತ್ರಿ, ಈ ಉಪಕ್ರಮವನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಸ್ನೇಹಪರ ರಾಷ್ಟ್ರಗಳೊಂದಿಗೆ ಪರಸ್ಪರ ಪ್ರಯೋಜನಕಾರಿ ಪಾಲುದಾರಿಕೆಗಳ ಮೂಲಕ ನಿರ್ಣಾಯಕ ತಂತ್ರಜ್ಞಾನಗಳು ಮತ್ತು ಉನ್ನತ-ಮಟ್ಟದ ಉತ್ಪನ್ನಗಳು ಹಾಗು ಉಪಕರಣಗಳ ತಯಾರಿಕೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಬದ್ಧತೆಯ ಪ್ರಮುಖ ಮುಖ್ಯಾಂಶಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದರು.

ಎಚ್-125 ಕಾರ್ಯಕ್ರಮದ ಹೂಡಿಕೆಯು ರೂ. 1,000 ಕೋಟಿ ಮೀರುವ ನಿರೀಕ್ಷೆಯಿದೆ ಮತ್ತು ಕೌಶಲ್ಯಪೂರ್ಣ ಹಾಗು ಶ್ರಮಶೀಲ ಯುವಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ ಎಂಬುದರತ್ತ ಶ್ರೀ ರಾಜನಾಥ್ ಸಿಂಗ್ ಗಮನಸೆಳೆದರು. ಎಚ್-125 ಹೆಲಿಕಾಪ್ಟರ್‌ಗಳು ಅಸಾಧಾರಣ ವಿಶ್ವಾಸಾರ್ಹತೆ, ಬಹುಮುಖತೆ ಮತ್ತು ವೈವಿಧ್ಯಮಯ ಕಾರ್ಯಾಚರಣಾ ಪರಿಸ್ಥಿತಿಗಳಲ್ಲಿ ಅತ್ಯುತ್ತಮ ಕಾರ್ಯಕ್ಷಮತೆಗೆ ಹೆಸರುವಾಸಿಯಾದ ವೇದಿಕೆಯಾಗಿವೆ ಎಂದು ಅವರು ಬಣ್ಣಿಸಿದರು. " ಎಚ್-125 ಜಾಗತಿಕವಾಗಿ ಅತ್ಯಂತ ಪರಿಣಾಮಕಾರಿ ಮತ್ತು ವಿಶ್ವಾಸಾರ್ಹ ಏಕ-ಎಂಜಿನ್ ಹೆಲಿಕಾಪ್ಟರ್‌ಗಳಲ್ಲಿ ಒಂದಾಗಿದೆ ಎಂಬುದೂ ಸಾಬೀತಾಗಿದೆ" ಎಂದು ಅವರು ಹೇಳಿದರು.

ಭಾರತವು ಒಂದು ದಶಕಕ್ಕೂ ಹೆಚ್ಚು ಕಾಲದಿಂದ ದೊಡ್ಡ ಪ್ರಮಾಣದ ಮೂಲಸೌಕರ್ಯ ನಿರ್ಮಾಣ, ಉತ್ಪಾದನೆ ಸಂಯೋಜಿತ ಪ್ರೋತ್ಸಾಹಕದಂತಹ ಹಲವಾರು ಯೋಜನೆಗಳ ಮೂಲಕ ಪ್ರಮುಖ ವಲಯಗಳಲ್ಲಿ ಬಂಡವಾಳ ಹೂಡಿಕೆಯನ್ನು ಮಾಡಿ ತ್ವರಿತ ಕೈಗಾರಿಕಾ ಅಭಿವೃದ್ಧಿಯ ಹಾದಿಯನ್ನು ರೂಪಿಸುತ್ತಿದೆ ಎಂದು ರಕ್ಷಾ ಮಂತ್ರಿ ಒತ್ತಿ ಹೇಳಿದರು. ಹೂಡಿಕೆಯನ್ನು ಸುಗಮಗೊಳಿಸಲು ಉದಾರೀಕೃತ ಆಡಳಿತವನ್ನು ಒದಗಿಸುವುದರ ಜೊತೆಗೆ, ಸಣ್ಣ ಮತ್ತು ಮಧ್ಯಮ ಉದ್ಯಮವನ್ನು ಬೆಂಬಲಿಸುವುದು ಮತ್ತು ನವೋದ್ಯಮ (ಸ್ಟಾರ್ಟ್-ಅಪ್) ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದು ಸಹ ಗಮನದಲ್ಲಿದೆ ಎಂದು ಅವರು ಹೇಳಿದರು. "ಒಟ್ಟಾರೆಯಾಗಿ, ನಮ್ಮ ದೇಶೀಯ ಅಗತ್ಯಗಳನ್ನು ಪೂರೈಸುವುದಲ್ಲದೆ, ಇತರ ದೇಶಗಳ ಅವಶ್ಯಕತೆಗಳನ್ನು ಪೂರೈಸುವ ಸಮಗ್ರ ಕೈಗಾರಿಕಾ ಅಭಿವೃದ್ಧಿಯನ್ನು ಖಚಿತಪಡಿಸುವುದು ನಮ್ಮ ಉದ್ದೇಶವಾಗಿದೆ" ಎಂದೂ  ಅವರು ನುಡಿದರು.

ರಕ್ಷಣಾ ಕೈಗಾರಿಕಾ ಪರಿಸರ ವ್ಯವಸ್ಥೆಯಲ್ಲಿ ಖಾಸಗಿ ವಲಯದ ಕೊಡುಗೆಯನ್ನು ಹೆಚ್ಚಿಸಲು ರಕ್ಷಣಾ ಸಚಿವಾಲಯವು ಕೈಗೊಂಡ ಸುಧಾರಣೆಗಳನ್ನು ಶ್ರೀ ರಾಜನಾಥ್ ಸಿಂಗ್ ವಿವರಿಸಿದರು, ಇದರಲ್ಲಿ ರಕ್ಷಣ ಸಾಮಗ್ರಿಗಳ ಆರ್ಡನೆನ್ಸ್ ಕಾರ್ಖಾನೆಗಳ ಕಾರ್ಪೊರೇಟೀಕರಣ, ಉದಾರೀಕೃತ ಹೂಡಿಕೆ ಯೋಜನೆಗಳು ಮತ್ತು ರಕ್ಷಣಾ ಕೈಗಾರಿಕಾ ಕಾರಿಡಾರ್‌ಗಳ ಸ್ಥಾಪನೆ ಸೇರಿವೆ. ಐತಿಹಾಸಿಕವಾಗಿ, ಹೆಚ್ಚಿನ ಬಂಡವಾಳ ಹೂಡಿಕೆಯ ಅಗತ್ಯತೆ ಮತ್ತು ದೀರ್ಘಾವಧಿಯ ನಿಧಾನಗತಿಯ ಬೆಳವಣಿಗೆಯಂತಹ ವಿವಿಧ ಕಾರಣಗಳಿಂದಾಗಿ ಭಾರತೀಯ ರಕ್ಷಣಾ ಉತ್ಪಾದನೆಯು ಹೆಚ್ಚಾಗಿ ಸಾರ್ವಜನಿಕ ವಲಯ ಆಧಾರಿತವಾಗಿತ್ತು, ಇದರ ಪರಿಣಾಮವಾಗಿ ಉತ್ಪಾದನೆ ಮತ್ತು ರಫ್ತುಗಳಲ್ಲಿ ಖಾಸಗಿ ವಲಯದ ಕೊಡುಗೆ ಕಡಿಮೆಯಾಗಿದೆ ಎಂದು ಅವರು ಹೇಳಿದರು. ಸರ್ಕಾರ ತೆಗೆದುಕೊಂಡ ಕ್ರಮಗಳಿಂದಾಗಿ, ಖಾಸಗಿ ವಲಯದ ಪಾಲು ಒಟ್ಟು ರಕ್ಷಣಾ ಉತ್ಪಾದನೆಯ ಸುಮಾರು ಕಾಲು ಭಾಗದಷ್ಟಿದೆ ಮತ್ತು ರಕ್ಷಣಾ ರಫ್ತುಗಳು ಹಲವು ಪಟ್ಟು ಹೆಚ್ಚಾಗಿ ಭಾರತವನ್ನು ವಿಶ್ವದ ಅಗ್ರ ರಕ್ಷಣಾ ರಫ್ತುದಾರರಲ್ಲಿ ಸ್ಥಾನ ಪಡೆಯುವಂತೆ ಮಾಡಿವೆ  ಎಂಬುದನ್ನು  ಅವರು ಎತ್ತಿ ತೋರಿಸಿದರು.

ಬೆಳವಣಿಗೆಯ ಪಥವು ಎಂ.ಎಸ್.ಎಂ.ಇ.ಗಳು ಮತ್ತು ಪೂರಕ ವಲಯಗಳಿಗೆ ಭಾರಿ ಉತ್ತೇಜನ ನೀಡಿದೆ ಎಂದು ರಕ್ಷಾ ಮಂತ್ರಿ ಹೇಳಿದರು, ಇವು ಇಂದು 16,000 ಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಬೆಳೆದಿವೆ, ಪ್ರಸ್ತುತ ಹೆಚ್ಚಿನ ಸಂಖ್ಯೆಯ ವಿದೇಶಿ ಕಂಪನಿಗಳು ಭಾರತೀಯ ಎಂ.ಎಸ್.ಎಂ.ಇ.ಗಳಿಂದ ಅನೇಕ ಬಿಡಿ ಭಾಗ/ಘಟಕಗಳನ್ನು ಪಡೆಯುತ್ತಿವೆ ಎಂದು ಹೇಳಿದರು. ಅರ್ಥಪೂರ್ಣ ತಂತ್ರಜ್ಞಾನ ವರ್ಗಾವಣೆಯ ಮೂಲಕ ಪಾಲುದಾರಿಕೆಯನ್ನು ಇನ್ನಷ್ಟು ಆಳಗೊಳಿಸಲು ಮತ್ತು ಇತರ ದೇಶಗಳ ಭದ್ರತಾ ಅಗತ್ಯಗಳನ್ನು ಪೂರೈಸಲು ಸುಧಾರಿತ ಪರಿಹಾರಗಳನ್ನು ನೀಡಲು ಅವರು ಕಂಪನಿಗಳನ್ನು ಆಹ್ವಾನಿಸಿದರು.

ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್, ರಕ್ಷಣಾ ಕಾರ್ಯದರ್ಶಿ ಶ್ರೀ ರಾಜೇಶ್ ಕುಮಾರ್ ಸಿಂಗ್, ಕಾರ್ಯದರ್ಶಿ (ರಕ್ಷಣಾ ಉತ್ಪಾದನೆ) ಶ್ರೀ ಸಂಜೀವ್ ಕುಮಾರ್ ಮತ್ತು ಇತರ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ನಿರ್ಣಾಯಕ ಕಾರ್ಯಾಚರಣೆಗಳ ಸಾಲಿನಲ್ಲಿ ಹೆಚ್ಚಿನ ಎತ್ತರದ ಬಲ ವರ್ಧಕವಾಗಿ ಕಾರ್ಯನಿರ್ವಹಿಸಲು ಎಚ್-125ಎಂ. ಅನ್ನು ಅತ್ಯುತ್ತಮವಾಗಿ ರೂಪಿಸಲಾಗಿದೆ. ಈ ಬಹುಮುಖ ವೇದಿಕೆಯು ಅದರ ಕಡಿಮೆ ಧ್ವನಿ ಪ್ರಸಾರ (ಅಕೌಸ್ಟಿಕ್)  ಮತ್ತು ಉಷ್ಣ ಸಹಿಷ್ಣು ವ್ಯವಸ್ಥೆ ಹೊಂದಿದ್ದು ಆ ಮೂಲಕ ಯುದ್ಧತಂತ್ರದ ವಿಚಕ್ಷಣ ಮತ್ತು ಕಣ್ಗಾವಲುಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಅನುವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಹೆಚ್ಚುವರಿಯಾಗಿ, ಎಚ್ 125ಎಂ ಹೆಚ್ಚಿನ ಎತ್ತರದ ಲಾಜಿಸ್ಟಿಕ್ಸ್‌ನಲ್ಲಿ ನಿರ್ಣಾಯಕ ಪ್ರಯೋಜನಗಳನ್ನು ಒದಗಿಸುತ್ತದೆ, ದೂರದ ಮುಂಚೂಣಿಯ ಗಡಿ/ಹೊರ ಠಾಣೆಗಳಿಗೆ ಪ್ರಮುಖ ಸರಬರಾಜುಗಳ ವಿತರಣೆಯನ್ನು ಖಚಿತಪಡಿಸುತ್ತದೆ ಮತ್ತು ಹುಡುಕಾಟ ಮತ್ತು ಪರಿಹಾರ/ಪಾರುಗಾಣಿಕಾ ಅಥವಾ ವೈದ್ಯಕೀಯ ಸ್ಥಳಾಂತರದ ಕಾರ್ಯಾಚರಣೆಗಳಿಗೆ ತ್ವರಿತ-ಪ್ರತಿಕ್ರಿಯಾ  ಸಂಪನ್ಮೂಲ/ ಆಸ್ತಿಯಾಗಿ ಕಾರ್ಯನಿರ್ವಹಿಸುತ್ತದೆ.

ಎಚ್ 125 ಹೆಲಿಕಾಪ್ಟರ್ ಇತಿಹಾಸದಲ್ಲಿ ಮೌಂಟ್ ಎವರೆಸ್ಟ್ ಶಿಖರದ ಮೇಲೆ ಇಳಿದ ಏಕೈಕ ಹೆಲಿಕಾಪ್ಟರ್ ಆಗಿದ್ದು, ಇದು ಅಸ್ತಿತ್ವದಲ್ಲಿರುವ ಹಗುರ ವಿವಿಧೋಪಯೋಗಿ ಹೆಲಿಕಾಪ್ಟರುಗಳನ್ನು ಮೀರಿದ ಕಾರ್ಯಕ್ಷಮತೆಯನ್ನು  ತೋರುತ್ತದೆ. ವಿಶ್ವದ ಕೆಲವು ಅತ್ಯಂತ ಸವಾಲಿನ ಎತ್ತರದ ಮತ್ತು ಬಿಸಿ ಪರಿಸರದಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಮಿಲಿಟರಿಗೆ, ಈ ಕಾರ್ಯಕ್ಷಮತೆಯು ನಿರ್ಣಾಯಕ ಉನ್ನತ ಸೌಲಭ್ಯವಾಗಬಹುದು.

ಇದು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಮತ್ತು ಏರ್‌ಬಸ್ ನಡುವಿನ ಎರಡನೇ ಪ್ರಮುಖ ಕೈಗಾರಿಕಾ ಸಹಯೋಗವಾಗಿದ್ದು, ಸಿ 295 ಮಿಲಿಟರಿ ಸಾರಿಗೆ ಅಂತಿಮ ಅಸೆಂಬ್ಲಿ ಲೈನ್  (ಅಂತಿಮ ಹಂತದ ಜೋಡಣೆ) ಅನುಸರಿಸಿ  ಭಾರತದಲ್ಲಿ ಸಮಗ್ರ ಮಿಲಿಟರಿ ಏರೋಸ್ಪೇಸ್ ಪರಿಸರ ವ್ಯವಸ್ಥೆಯನ್ನು ಭದ್ರಪಡಿಸುತ್ತದೆ.

 

*****


(ಪ್ರಕಟಣೆ ಐ.ಡಿ.: 2229855) ವಿಸಿಟರ್ ಕೌಂಟರ್ : 6
ಪ್ರಕಟಣೆಯನ್ನು ಇದರಲ್ಲಿ ಓದಿ: English , हिन्दी , Bengali , Telugu