ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆಯು ವಿಶ್ವದ ಅತಿದೊಡ್ಡ AI ಶೃಂಗಸಭೆಯಾಗಿ ಹೊರಹೊಮ್ಮಿದೆ; ಇದು ಭಾರತದ AI ದೃಷ್ಟಿಕೋನದ ವ್ಯಾಪ್ತಿ ಮತ್ತು ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ: ಶ್ರೀ ಅಶ್ವಿನಿ ವೈಷ್ಣವ್
AI ಆವಿಷ್ಕಾರಗಳನ್ನು ಗುರುತಿಸುವ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಭಾರತದ ವೈವಿಧ್ಯತೆಯನ್ನು ಆಚರಿಸುವ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಎರಡನೇ ದಿನದ ಮುಕ್ತಾಯ
ಪ್ರಕಟಣಾ ದಿನಾಂಕ:
17 FEB 2026 9:13PM by PIB Bengaluru
ಇಂಡಿಯಾ AI ಇಂಪ್ಯಾಕ್ಟ್ ಸಮಿಟ್ 2026ರ ಎರಡನೇ ದಿನವು ವಿವಿಧ ರಾಷ್ಟ್ರೀಯ ಮತ್ತು ಜಾಗತಿಕ ಸವಾಲುಗಳಿಗೆ ಸಂಬಂಧಿಸಿದ ಅತ್ಯುತ್ತಮ ಕೃತಕ ಬುದ್ಧಿಮತ್ತೆ (AI) ಆವಿಷ್ಕಾರಗಳನ್ನು ಗುರುತಿಸುವ ಪ್ರಶಸ್ತಿ ಪ್ರದಾನ ಸಮಾರಂಭದೊಂದಿಗೆ ಮುಕ್ತಾಯವಾಯಿತು. ಇದರ ಬೆನ್ನಲ್ಲೇ ಭಾರತದ ಶ್ರೀಮಂತ ಕಲಾತ್ಮಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ 'AI by HER', 'AI for ALL' ಮತ್ತು 'ಯುವAI' (YuvaAI) ಎಂಬ ಮೂರು ಪ್ರಮುಖ ಉಪಕ್ರಮಗಳ ವಿಜೇತರನ್ನು ಗೌರವಿಸಲಾಯಿತು. ಇದು ಒಳಗೊಳ್ಳುವಿಕೆಯ ಆವಿಷ್ಕಾರ, ಬೃಹತ್ ಮಟ್ಟದ ಸಾಮಾಜಿಕ ಪ್ರಭಾವ ಮತ್ತು ಭಾರತದ AI ಪರಿಸರ ವ್ಯವಸ್ಥೆಯಲ್ಲಿ ಯುವಜನರ ಸಹಭಾಗಿತ್ವಕ್ಕೆ ಶೃಂಗಸಭೆಯು ನೀಡುತ್ತಿರುವ ಆದ್ಯತೆಯನ್ನು ಎತ್ತಿ ತೋರಿಸಿತು.
ಅಸಾಂಪ್ರದಾಯಿಕ ಆವಿಷ್ಕಾರಕರು ಮತ್ತು ಸಾಂಪ್ರದಾಯಿಕವಲ್ಲದ ಕೋಡರ್ ಗಳು ನೈಜ ಜಗತ್ತಿನ ಸವಾಲುಗಳಿಗೆ ಪರಿಹಾರಗಳನ್ನು ರೂಪಿಸಲು ಸಬಲೀಕರಣಗೊಳಿಸುವುದು ಈ ಶೃಂಗಸಭೆಯ ಒಂದು ಪ್ರಮುಖ ಆಶಯವಾಗಿತ್ತು. ಹ್ಯಾಕಥಾನ್ ಗಳು ಮತ್ತು ಮುಕ್ತ ಆವಿಷ್ಕಾರ ವೇದಿಕೆಗಳ ಮೂಲಕ, ಈ ಉಪಕ್ರಮವು ತಳಮಟ್ಟದಿಂದ ಅವಕಾಶಗಳನ್ನು ಸೃಷ್ಟಿಸಿದೆ. ಇದು ಯುವಕರು ಮತ್ತು ಹಿರಿಯರು ಸೇರಿದಂತೆ ಪ್ರತಿಯೊಬ್ಬ ನಾಗರಿಕರು ಕೇವಲ ಕೃತಕ ಬುದ್ಧಿಮತ್ತೆಯ (AI) ಬಳಕೆದಾರರಾಗಿ ಉಳಿಯದೆ, ಅದರ ಸೃಷ್ಟಿಕರ್ತರು ಮತ್ತು ಪರಿಹಾರ-ನಿರ್ಮಾಣಕಾರರಾಗುವುದನ್ನು ಖಚಿತಪಡಿಸಿದೆ. ಕೇಂದ್ರೀಕೃತವಾಗಿ ಪರಿಹಾರಗಳನ್ನು ನಿರ್ಧರಿಸುವ ಸಾಂಪ್ರದಾಯಿಕ ತಂತ್ರಜ್ಞಾನ ಮಾದರಿಗಳಿಗೆ ವ್ಯತಿರಿಕ್ತವಾಗಿ, ಈ ವಿಧಾನವು ಸಮುದಾಯಗಳ ಕೈಗೆ ಮಾಲೀಕತ್ವವನ್ನು ನೀಡುತ್ತದೆ. ಭಾಗವಹಿಸುವವರು ತಾವು ಎದುರಿಸುತ್ತಿರುವ ಸಮಸ್ಯೆಗಳನ್ನು ಗುರುತಿಸಲು, ಮುಕ್ತ AI ಪರಿಕರಗಳನ್ನು ಬಳಸಿಕೊಳ್ಳಲು ಮತ್ತು ಕೇವಲ ತಮಗಾಗಿ ಮಾತ್ರವಲ್ಲದೆ ಇಡೀ ಸಮಾಜಕ್ಕಾಗಿ ವಿಸ್ತರಿಸಬಹುದಾದ ಪರಿಹಾರಗಳನ್ನು ನಿರ್ಮಿಸಲು ಪ್ರೋತ್ಸಾಹಿಸಲಾಗುತ್ತದೆ. ಇದು ಆವಿಷ್ಕಾರವನ್ನು ಜನಸಾಮಾನ್ಯರಿಗೂ ತಲುಪಿಸುವ ಮೂಲಕ ಭಾರತದ 'ಜನ-ಕೇಂದ್ರಿತ AI' ದೃಷ್ಟಿಕೋನವನ್ನು ಬಲಪಡಿಸುತ್ತದೆ.
ಜಾಗತಿಕ ಆವಿಷ್ಕಾರ ಸವಾಲುಗಳ (Global Innovation Challenges) ವಿಜೇತರನ್ನು ಅಭಿನಂದಿಸುತ್ತಾ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ, ಮಾಹಿತಿ ಮತ್ತು ಪ್ರಸಾರ ಹಾಗೂ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, "ಇಂಡಿಯಾ AI ಇಂಪ್ಯಾಕ್ಟ್ ಶೃಂಗಸಭೆಯು ವಿಶ್ವದ ಅತಿದೊಡ್ಡ AI ಶೃಂಗಸಭೆಯಾಗಿ ಹೊರಹೊಮ್ಮಿದೆ. ಇದು ಭಾರತದ AI ದೃಷ್ಟಿಕೋನದ ವ್ಯಾಪ್ತಿ ಮತ್ತು ಮಹತ್ವಾಕಾಂಕ್ಷೆಯನ್ನು ಪ್ರತಿಬಿಂಬಿಸುತ್ತದೆ. ತಮ್ಮ ಅತ್ಯುತ್ತಮ ಕೊಡುಗೆಗಳಿಗಾಗಿ ಮತ್ತು AI ಹೇಗೆ ಸಮಾಜದ ಮೇಲೆ ಪರಿವರ್ತನಾತ್ಮಕ ಪ್ರಭಾವ ಬೀರಬಲ್ಲದು ಎಂಬುದನ್ನು ಪ್ರದರ್ಶಿಸಿದ್ದಕ್ಕಾಗಿ ನಾನು ಎಲ್ಲಾ ವಿಜೇತರನ್ನು ಅಭಿನಂದಿಸುತ್ತೇನೆ" ಎಂದು ಅವರು ಹೇಳಿದರು.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವರಾದ ಶ್ರೀ ಜಿತಿನ್ ಪ್ರಸಾದ ಅವರು ಮಾತನಾಡಿ, "ಭಾರತದ AI ಪಯಣಕ್ಕೆ ಯುವಶಕ್ತಿಯೇ ಭವಿಷ್ಯ ಎಂಬ ಅಶ್ವಿನಿ ವೈಷ್ಣವ್ ಅವರ ದೃಷ್ಟಿಕೋನವನ್ನು 'ಯುವAI' ಪ್ರತಿಬಿಂಬಿಸುತ್ತದೆ. ಕೃತಕ ಬುದ್ಧಿಮತ್ತೆ ಎಂಬುದು ಜನರು, ತಂತ್ರಜ್ಞಾನ ಮತ್ತು ಅವಕಾಶಗಳ ಮಿಶ್ರಣವಾಗಿದೆ. ಪ್ರತಿಯೊಬ್ಬರೂ ಇದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಿದಾಗ, ಭಾರತವು ಜಾಗತಿಕ ಮಟ್ಟದಲ್ಲಿ ಪ್ರಮುಖ AI ಸೇವಾ ಪೂರೈಕೆದಾರ ದೇಶವಾಗಿ ಹೊರಹೊಮ್ಮಲು ಸಾಧ್ಯವಿದೆ. 'AI by Her' ನಂತಹ ಉಪಕ್ರಮಗಳು ಒಳಗೊಳ್ಳುವಿಕೆಯ ಮಹತ್ವವನ್ನು ತೋರಿಸಿಕೊಡುತ್ತವೆ. ಏಕೆಂದರೆ ಮಹಿಳೆಯರು ಮತ್ತು ಯುವಕರನ್ನು ಒಟ್ಟಾಗಿ ಸಬಲೀಕರಣಗೊಳಿಸುವುದು ಭಾರತದ AI ಭವಿಷ್ಯವನ್ನು ಮತ್ತು ಅದು ಹೊತ್ತಿರುವ ಜವಾಬ್ದಾರಿಯನ್ನು ನಿಜವಾಗಿಯೂ ರೂಪಿಸುತ್ತದೆ" ಎಂದು ತಿಳಿಸಿದರು.


ಯುವAI (YuvaAI) – ಜಾಗತಿಕ ಯುವ ಸವಾಲು
'ಮೈ ಭಾರತ್' (MyBharat) ಮತ್ತು NIELIT ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ ಯುವAI – ಜಾಗತಿಕ ಯುವ ಸ್ಪರ್ಧೆ, 13 ರಿಂದ 21 ವರ್ಷ ವಯಸ್ಸಿನ ಯುವ ಆವಿಷ್ಕಾರಕರಿಗೆ ನೈಜ ಜಗತ್ತಿನ ಸವಾಲುಗಳನ್ನು ಎದುರಿಸಲು AI-ಆಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಆಹ್ವಾನ ನೀಡಿತ್ತು.
ಈ ಸವಾಲಿನ ಅಡಿಯಲ್ಲಿ, ಪ್ಯಾರಾಸ್ಪೀಕ್ (Paraspeak), ಅಗ್ನಿಸೇನಾ (AgniSena) ಮತ್ತು ಝಡ್-ಟ್ರಾಕ್ಸ್ (Z-TRACS) ಪ್ರಥಮ ಬಹುಮಾನವನ್ನು ಗೆದ್ದುಕೊಂಡಿದ್ದು, ತಲಾ 15 ಲಕ್ಷ ರೂಪಾಯಿಗಳ ಅನುದಾನವನ್ನು ಪಡೆದಿವೆ. ಸೈಟೋಸ್ಕ್ಯಾನ್‌ಝಡ್ (CytoScanZ), ವೇವ್ (WAYV) ಮತ್ತು ವೋಕ್ಸ್-ಏಡ್ (VOX-AID) ದ್ವಿತೀಯ ಬಹುಮಾನಕ್ಕೆ ಭಾಜನವಾಗಿದ್ದು, ತಲಾ 10 ಲಕ್ಷ ರೂಪಾಯಿಗಳ ಅನುದಾನವನ್ನು ಪಡೆದಿವೆ. ಇದರ ಜೊತೆಗೆ, ಮಲೇರಿಯಾಎಕ್ಸ್ (MalariaX) ಮತ್ತು ಕೆಡೋವೋAI (KedovoAI) ವಿಶೇಷ ಮಾನ್ಯತೆ ಪ್ರಶಸ್ತಿಗಳನ್ನು (Special Recognition Awards) ಪಡೆದಿದ್ದು, ತಲಾ 5 ಲಕ್ಷ ರೂಪಾಯಿಗಳ ಅನುದಾನವನ್ನು ಗಳಿಸಿವೆ.
AI by HER ಸವಾಲು
'AI by HER' ಸ್ಪರ್ಧೆ ಪ್ರತಿಭೆಗಳ ವಿಶ್ಲೇಷಣೆ , ಆರೋಗ್ಯ ತಪಾಸಣೆ, ನಿಖರ ಪೋಷಣೆ, AI-ಆಧಾರಿತ ಕಲಿಕಾ ವೇದಿಕೆಗಳು, ವಾಕ್ ಚಿಕಿತ್ಸೆ (speech therapy), ಇ.ಎಸ್.ಜಿ ಇಂಟೆಲಿಜೆನ್ಸ್ (ESG intelligence) ಮತ್ತು ಎಂ.ಎಸ್.ಎಂ.ಇ (MSME) ಸಬಲೀಕರಣದಂತಹ ವಿವಿಧ ಕ್ಷೇತ್ರಗಳಲ್ಲಿನ ನೈಜ ಜಗತ್ತಿನ ಸವಾಲುಗಳಿಗೆ ಪರಿಣಾಮಕಾರಿ AI-ಚಾಲಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಮಹಿಳಾ ನೇತೃತ್ವದ ತಂಡಗಳನ್ನು ಗುರುತಿಸಲು ಮತ್ತು ಬೆಂಬಲಿಸಲು ವಿನ್ಯಾಸಗೊಳಿಸಲಾಗಿದೆ.
'AI by HER' ಸರ್ಧೆಯಲ್ಲಿ ಫಾರ್ಮರ್ ಲೈಫ್‌ಲೈನ್ (Farmer Lifeline) ವಿಜೇತರಾಗಿ ಹೊರಹೊಮ್ಮಿದರೆ, ಪೆರಿವಿಂಕಲ್ ಟೆಕ್ನಾಲಜೀಸ್ (Periwinkle Technologies) ಪ್ರಥಮ ರನ್ನರ್ ಅಪ್ ಸ್ಥಾನ ಪಡೆಯಿತು. ದ್ವಿತೀಯ ರನ್ನರ್ ಅಪ್ ಸ್ಥಾನವನ್ನು ವೋಲಾರ್ ಅಲ್ಟಾ (Volar Alta) ಮತ್ತು ರೆಮಿಡಿಯೊ (Remidio) ಜಂಟಿಯಾಗಿ ಹಂಚಿಕೊಂಡವು. ಅಗ್ರ ವಿಜೇತರು ತಲಾ 25 ಲಕ್ಷ ರೂಪಾಯಿಗಳ ಅನುದಾನವನ್ನು ಪಡೆದರು. ಇದರ ಜೊತೆಗೆ, 'AI by HER' ಕಾರ್ಯಕ್ರಮದಡಿ ಅಂತಿಮ ಪಟ್ಟಿಯಲ್ಲಿದ್ದ (Top 10 shortlisted) ಆಯ್ದ ಸ್ಟಾರ್ಟ್ ಅಪ್ ತಂಡಗಳಿಗೆ ಒಟ್ಟು 10 ಲಕ್ಷ ರೂಪಾಯಿಗಳ ಹೆಚ್ಚುವರಿ ಅನುದಾನವನ್ನು ನೀಡಲಾಯಿತು.
AI for ALL: ಜಾಗತಿಕ ಪ್ರಭಾವದ ಸವಾಲು
'AI for ALL: ಜಾಗತಿಕ ಪ್ರಭಾವದ ಸವಾಲು' ವಿವಿಧ ಕ್ಷೇತ್ರಗಳಲ್ಲಿ ಬೃಹತ್ ಮಟ್ಟದ ಸಾಮಾಜಿಕ ಬದಲಾವಣೆಯನ್ನು ತರುವ ಸಾಮರ್ಥ್ಯವಿರುವ ಮತ್ತು ವಿಸ್ತರಿಸಬಹುದಾದ AI ಪರಿಹಾರಗಳನ್ನು ಗುರುತಿಸುತ್ತದೆ. ಈ ಕಾರ್ಯಕ್ರಮಕ್ಕೆ ಜಾಗತಿಕ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿಷಯ ತಜ್ಞರು, ನೀತಿ ನಿರೂಪಕರು ಮತ್ತು ಉದ್ಯಮದ ಪ್ರಮುಖರನ್ನು ಒಳಗೊಂಡ ಸಮಿತಿಗಳು ಕಟ್ಟುನಿಟ್ಟಾದ ಬಹು-ಹಂತದ ಪ್ರಕ್ರಿಯೆಯ ಮೂಲಕ ಅರ್ಜಿಗಳನ್ನು ಮೌಲ್ಯಮಾಪನ ಮಾಡಿವೆ.
'AI for ALL' ಸವಾಲಿನ ಅಡಿಯಲ್ಲಿ ಆಯ್ಕೆಯಾದ ಟಾಪ್ 10 ಪರಿಹಾರಗಳೆಂದರೆ: ಇನ್ಫಿಹೀಲ್ ಹೆಲ್ತ್‌ಟೆಕ್ ಪ್ರೈವೇಟ್ ಲಿಮಿಟೆಡ್ (Infiheal Healthtech Private Limited); ಇನ್ಫಿಯಸ್ ಹೆಲ್ತ್‌ನ ಇಕ್ವಿಟ್ವಿನ್ (EQUITWIN by Infiuss Health); ಒನ್ ಗ್ಲೋಬಲ್ ಮೆಡಿಕಲ್ ಟೆಕ್ನಾಲಜಿ ಲಿಮಿಟೆಡ್ (ಹೀಲಿಯಂ ಹೆಲ್ತ್); ರೆಸಿಲೆನ್ಸ್ 360 (Resilience360); ಹವಾಮಾನ ಸ್ನೇಹಿ ಸಾಲ ನೀಡಿಕೆಗಾಗಿ ಸ್ಯಾಟ್ ಸೂರ್ ನ ಫಾರ್ಮ್ ಸ್ಕೋರ್ (SatSure’s Farm Score); ಮಾನಸಿಕ ಆರೋಗ್ಯ ಸುಧಾರಣೆಗಾಗಿ ವೈಸಾದ (Wysa) ಸಂಭಾಷಣಾ AI; ಕಿಡೌರಾ ಇನ್ನೋವೇಶನ್ಸ್ ಪ್ರೈವೇಟ್ ಲಿಮಿಟೆಡ್; ಡಯಾಬಿಟಿಕ್ ರೆಟಿನೋಪತಿ ತಪಾಸಣೆಗಾಗಿ ಮಧುನೇತ್ರ AI (MadhuNetrAI); ಕಾರ್ಬ್ ಜಿಇಎಮ್ ಇಂಕ್. (CarbGeM Inc.); ಮತ್ತು ಬಯೋಮ್ ಮೇಕರ್ಸ್ ಇಂಕ್‌ನ ಬಿಕ್ರಾಪ್ (BeCrop®) ಮಣ್ಣಿನ ಬುದ್ಧಿವಂತಿಕೆ ವೇದಿಕೆ. ಈ ಅಗ್ರ 10 ತಂಡಗಳಲ್ಲಿ ಪ್ರತಿಯೊಂದಕ್ಕೂ ತಲಾ 25 ಲಕ್ಷ ರೂಪಾಯಿಗಳ ಅನುದಾನವನ್ನು ನೀಡಲಾಯಿತು.
ಈ ಪರಿಹಾರಗಳು ಆರೋಗ್ಯ ರಕ್ಷಣೆ, ಹವಾಮಾನ-ಸ್ಥಿತಿಸ್ಥಾಪಕ ಕೃಷಿ, ದತ್ತಾಂಶ ಆಧಾರಿತ ಸಾಲ ನೀಡಿಕೆಯ ಮೂಲಕ ಹಣಕಾಸು ಒಳಗೊಳ್ಳುವಿಕೆ, ಮಾನಸಿಕ ಆರೋಗ್ಯ ಬೆಂಬಲ, ಮಣ್ಣಿನ ಗುಣಮಟ್ಟದ ವಿಶ್ಲೇಷಣೆ ಮತ್ತು ತಂತ್ರಜ್ಞಾನ ಆಧಾರಿತ ಸ್ಥಿತಿಸ್ಥಾಪಕತ್ವದಂತಹ ಹೆಚ್ಚಿನ ಪ್ರಭಾವ ಬೀರುವ ಕ್ಷೇತ್ರಗಳನ್ನು ಒಳಗೊಂಡಿವೆ. ಇವು ಪ್ರಮುಖ ಅಭಿವೃದ್ಧಿ ಆದ್ಯತೆಗಳೊಂದಿಗೆ ಹೊಂದಾಣಿಕೆ ಆಗಿವೆ.

ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಭಾರತದ ವೈವಿಧ್ಯಮಯ ಕಲಾ ಸಂಪ್ರದಾಯಗಳನ್ನು ಪ್ರದರ್ಶಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ನವದೆಹಲಿಯ ಸಂಗೀತ ನಾಟಕ ಅಕಾಡೆಮಿಯು ಮಂಡಿಸಿದ "ನೃತ್ತ ಮೇಲಕಂ" ಎಂಬ ವಿಶೇಷ ನೃತ್ಯ ಪ್ರದರ್ಶನವು ಪ್ರಮುಖ ಆಕರ್ಷಣೆಯಾಗಿತ್ತು. ಇದು ಭಾರತದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ಮೂಲಕ ದೇಶದ ಸಾಂಸ್ಕೃತಿಕ ಬಹುತ್ವ, ಕಲಾತ್ಮಕ ಪರಂಪರೆ ಹಾಗೂ ಏಕತೆ, ಒಳಗೊಳ್ಳುವಿಕೆ ಮತ್ತು ರಾಷ್ಟ್ರೀಯ ಅಭಿವೃದ್ಧಿಯ ಆಶಯಗಳನ್ನು ಪ್ರತಿಬಿಂಬಿಸಿತು. ವಿವಿಧ ಪ್ರದೇಶಗಳ ಕಲಾವಿದರನ್ನು ಒಂದೆಡೆ ಸೇರಿಸಿದ ಈ ಪ್ರದರ್ಶನವು, ಭಾರತದ ಜಾನಪದ ಮತ್ತು ಶಾಸ್ತ್ರೀಯ ಪರಂಪರೆಗಳ ಭವ್ಯತೆಯನ್ನು ಉಲ್ಲೇಖಿಸಿತು.
*****
(ಪ್ರಕಟಣೆ ಐ.ಡಿ.: 2229671)
ವಿಸಿಟರ್ ಕೌಂಟರ್ : 4