ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav AI Impact Summit 2026

ಕೃತಕ ಬುದ್ಧಿಮತ್ತೆ ಇನ್ನು ಮುಂದೆ ಒಂದು ಆಯ್ಕೆಯಾಗಿರಲಾರದು, ಬದಲಾಗಿ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೆಲಸ ಮಾಡುವ ಅತ್ಯಗತ್ಯ ಘಟಕವಾಗಲಿದೆ: ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್


ಭಾರತದ ಮೊದಲ ಸರ್ಕಾರಿ ಸ್ವಾಮ್ಯದ ಸಾರ್ವಭೌಮ 'ಬೃಹತ್  ಭಾಷಾ ಮಾದರಿ'ಯನ್ನು ಶ್ಲಾಘಿಸಿದ ಸಚಿವರು, ಬಹುಭಾಷಾ ಎ.ಐ. ಪದರಗಳ (ಸ್ಟ್ಯಾಕ್)  ರೂಪ ಪಡೆಯುತ್ತಿದೆ: ಭಾರತ್‌ಜೆನ್ ಅಧಿವೇಶನದಲ್ಲಿ ಸಂಪೂರ್ಣ ಸರ್ಕಾರದ ಮಾದರಿಯನ್ನು ಪ್ರಮುಖವಾಗಿ ಉಲ್ಲೇಖಿಸಿದ  ಡಾ. ಜಿತೇಂದ್ರ ಸಿಂಗ್

ಎನ್.ಎಂ.-ಐ.ಸಿ.ಪಿ.ಎಸ್. ಅಡಿಯಲ್ಲಿ ಭಾರತ್‌ಜೆನ್‌ಗೆ ₹235 ಕೋಟಿ ಬೆಂಬಲ ಮತ್ತು ₹10,585 ಕೋಟಿ ಭಾರತ ಎ.ಐ. ಮಿಷನ್ ಗಾತ್ರದಿಂದ ಮತ್ತಷ್ಟು ಬಲವರ್ಧನೆ: ಕೇಂದ್ರ ಸಚಿವರು

"ಪ್ರಧಾನಮಂತ್ರಿ ಮೋದಿ ಅವರು ಭಾರತ್‌ಜೆನ್‌ನ ಇತ್ತೀಚಿನ ಮಾದರಿಗಳನ್ನು ಬಿಡುಗಡೆ ಮಾಡಿದ್ದಾರೆ, ಇದರಲ್ಲಿ 22 ನಿಗದಿತ ಭಾರತೀಯ ಭಾಷೆಗಳಲ್ಲಿ 17 ಬಿಲಿಯನ್ ನಿಯತಾಂಕಗಳೊಂದಿಗೆ ಪರಮ್-2 ಪಠ್ಯ ಅಡಿಪಾಯ ಮಾದರಿ ಸೇರಿದೆ"

ಪ್ರಕಟಣಾ ದಿನಾಂಕ: 17 FEB 2026 7:23PM by PIB Bengaluru

ಭಾರತದ ಮೊದಲ ಸರ್ಕಾರಿ ಸ್ವಾಮ್ಯದ, ಸಾರ್ವಭೌಮ "ದೊಡ್ಡ ಭಾಷಾ ಮಾದರಿ", ಬಹುಭಾಷಾ ಎ.ಐ. ಸ್ಟ್ಯಾಕ್ ಅನ್ನು ಶ್ಲಾಘಿಸಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ; ಭೂ ವಿಜ್ಞಾನ; ಮತ್ತು ಪ್ರಧಾನ ಮಂತ್ರಿ ಕಚೇರಿ, ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿಗಳು, ಪರಮಾಣು ಶಕ್ತಿ ಇಲಾಖೆ ಹಾಗು ಬಾಹ್ಯಾಕಾಶ ಇಲಾಖೆಯ ಸ್ವತಂತ್ರ ಖಾತೆ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಇಂದು ಹೊಸದಿಲ್ಲಿಯ ಭಾರತ್ ಮಂಟಪದಲ್ಲಿ "ಭಾರತ್‌ಜೆನ್ ಮಾದರಿಗಳು: ಚಿಂತನೆ  ಮತ್ತು ತಾಂತ್ರಿಕ ಕಾರ್ಯಗತಗೊಳಿಸುವಿಕೆ 2026" ಎಂಬ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾ, ಕೃತಕ ಬುದ್ಧಿಮತ್ತೆ ಇನ್ನು ಮುಂದೆ ಒಂದು ಆಯ್ಕೆಯಾಗಿರುವುದಿಲ್ಲ, ಬದಲಾಗಿ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕೆಲಸ ಮಾಡುವ ಅತ್ಯಗತ್ಯ ಘಟಕಾಂಶವಾಗಿರುತ್ತದೆ  ಎಂದು ಹೇಳಿದರು.

ಜಾಗತಿಕ ಎ.ಐ.  ಶೃಂಗಸಭೆಯ ಭಾಗವಾಗಿ  ಅಧಿವೇಶನವನ್ನು ಇಂಡಿಯಾ ಎ.ಐ. ಮಿಷನ್ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂ.ಇ.ಐ.ಟಿ.ವೈ- MeitY) ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (ಡಿ.ಎಸ್.ಟಿ-DST) ಸಹಯೋಗದೊಂದಿಗೆ ಭಾರತ್‌ಜೆನ್, ಆಯೋಜಿಸಿತ್ತು.

ಭಾರತ್‌ಜೆನ್ ತಂಡವನ್ನು ಅಭಿನಂದಿಸಿದ ಸಚಿವರು, ಈ ಉಪಕ್ರಮವು ಭಾರತದ ತಾಂತ್ರಿಕ ಸ್ವಾವಲಂಬನೆಯತ್ತ ಸಾಗುವ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲು ಎಂದು ಹೇಳಿದರು. ಭಾರತ್‌ಜೆನ್ ಸರ್ಕಾರಿ ಸ್ವಾಮ್ಯದ ಸಾರ್ವಭೌಮ ಬಹುಭಾಷಾ ಮತ್ತು ಬಹುಮಾದರಿಯ ದೊಡ್ಡ ಭಾಷಾ ಮಾದರಿ (ಎಲ್.ಎಲ್.ಎಂ.-LLM) ಉಪಕ್ರಮವಾಗಿ ಎದ್ದು ಕಾಣುತ್ತದೆ ಎಂದು ಅವರು ಒತ್ತಿ ಹೇಳಿದರು, ಇದು ಭಾರತದ ಸಾಮಾಜಿಕ-ಸಾಂಸ್ಕೃತಿಕ ಸಂದರ್ಭ ಮತ್ತು ಭಾಷಾ ವೈವಿಧ್ಯತೆಗೆ ಅನುಗುಣವಾಗಿದೆ. ದೊಡ್ಡ ಭಾಷಾ ಮಾದರಿಗಳು ಜಾಗತಿಕವಾಗಿ ತಿಳಿದಿದ್ದರೂ, ಭಾರತ್‌ಜೆನ್‌ನ ವಿಶಿಷ್ಟ ವೈಶಿಷ್ಟ್ಯವು ಅದರ ಸಾರ್ವಭೌಮ, ಸರ್ಕಾರ-ಬೆಂಬಲಿತ ಪಾತ್ರದಲ್ಲಿದೆ, ಇದು ತಾಂತ್ರಿಕ ವಿಕಾಸದ ಆರಂಭಿಕ ಹಂತದಲ್ಲಿ ಪೂರ್ವಭಾವಿ ನೀತಿ ವಿಧಾನವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಭಾರತ್‌ಜೆನ್ "ಸಂಪೂರ್ಣ ವಿಜ್ಞಾನ, ಸಂಪೂರ್ಣ ಸರ್ಕಾರ ಮತ್ತು ಸಂಪೂರ್ಣ ರಾಷ್ಟ್ರ" ಮಾದರಿಯನ್ನು ಪ್ರತಿನಿಧಿಸುತ್ತದೆ ಎಂಬುದರತ್ತ ಕೇಂದ್ರ ಸಚಿವರು ಬೆಟ್ಟು ಮಾಡಿದರು. ಈ ಉಪಕ್ರಮವನ್ನು ಐಐಟಿ ಬಾಂಬೆಯಲ್ಲಿ ಟಿಐಎಚ್ ಫೌಂಡೇಶನ್ ಫಾರ್ ಐಒಟಿ ಮತ್ತು ಐಒಇ ನೇತೃತ್ವದ ಒಕ್ಕೂಟದ ಮೂಲಕ ಕಾರ್ಯಗತಗೊಳಿಸಲಾಗುತ್ತದೆ, ಐಐಐಟಿ ಹೈದರಾಬಾದ್, ಐಐಟಿ ಹೈದರಾಬಾದ್, ಐಐಟಿ ಮಂಡಿ, ಐಐಟಿ ಕಾನ್ಪುರ್, ಐಐಎಂ ಇಂದೋರ್ ಮತ್ತು ಐಐಟಿ ಮದ್ರಾಸ್ ಸೇರಿದಂತೆ ಪಾಲುದಾರ ಸಂಸ್ಥೆಗಳೊಂದಿಗೆ ಇದನ್ನು ಅನುಷ್ಟಾನಕ್ಕೆ ತರಲಾಗುತ್ತಿದೆ. ಡಿ.ಎಸ್.ಟಿ. ಇದನ್ನು ರಾಷ್ಟ್ರೀಯ ಅಂತರಶಿಸ್ತೀಯ ಸೈಬರ್-ಭೌತಿಕ ವ್ಯವಸ್ಥೆಗಳ ಮಿಷನ್ (ಎನ್‌ಎಂ-ಐಸಿಪಿಎಸ್) ಮೂಲಕ ₹235 ಕೋಟಿ ನಿಧಿಯೊಂದಿಗೆ ಬೆಂಬಲಿಸುತ್ತದೆ ಮತ್ತು ₹10,585 ಕೋಟಿ ವೆಚ್ಚದಲ್ಲಿ ಭಾರತ ಎಐ ಮಿಷನ್ ಆಫ್ ಎಂ.ಇ.ಐ.ಟಿ.ವೈ.  ಮೂಲಕ ಮತ್ತಷ್ಟು ಬಲಪಡಿಸುತ್ತದೆ.

ಯೋಜನೆಯ ತಾಂತ್ರಿಕ ಆಳವನ್ನು ಪ್ರಸ್ತಾಪಿಸಿದ ಅವರು, ಭಾರತ್‌ಜೆನ್ ಪಠ್ಯ ಆಧಾರಿತ ದೊಡ್ಡ ಭಾಷಾ ಮಾದರಿಗಳು, ಪಠ್ಯದಿಂದ ಭಾಷಣ ಮತ್ತು ಸ್ವಯಂಚಾಲಿತ ಪಠ್ಯ ಗುರುತಿಸುವಿಕೆಯಂತಹ ಭಾಷಣ ತಂತ್ರಜ್ಞಾನಗಳು ಮತ್ತು ದಾಖಲೆ ಗಳನ್ನು ತೋರಿಸುವ/ನೋಡುವ -ಭಾಷಾ ಮಾದರಿಗಳನ್ನು ಒಳಗೊಂಡಂತೆ ಬಹು ಎ.ಐ. ವಿಧಾನಗಳನ್ನು ವ್ಯಾಪಿಸಿದೆ ಎಂಬುದನ್ನೂ  ಉಲ್ಲೇಖಿಸಿದರು. ಭಾರತ್‌ಜೆನ್‌ನ ಮೂಲಭೂತ ಮಾದರಿಗಳನ್ನು ಆಡಳಿತ, ಆರೋಗ್ಯ ರಕ್ಷಣೆ, ಶಿಕ್ಷಣ, ಕೃಷಿ ಮತ್ತು ಕಾನೂನು ವ್ಯವಸ್ಥೆಗಳಲ್ಲಿ, ವಿಶೇಷವಾಗಿ ಭಾಷಾ ವೈವಿಧ್ಯಮಯ ಪ್ರದೇಶಗಳಲ್ಲಿ ಎಲ್ಲರನ್ನೂ ಒಳಗೊಳ್ಳುವ ಸಮಗ್ರ, ಭಾರತ-ಕೇಂದ್ರಿತ ಅನ್ವಯಿಕೆಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಅವರು ಹೇಳಿದರು.

ಇತ್ತೀಚಿನ ಬೆಳವಣಿಗೆಗಳನ್ನು ಉಲ್ಲೇಖಿಸಿದ ಡಾ. ಜಿತೇಂದ್ರ ಸಿಂಗ್, ಭಾರತ್‌ಜೆನ್ ಈಗಾಗಲೇ ಆಯುರ್ವೇದಕ್ಕಾಗಿ ಆಯುರ್ ಪರಮ್, ಕೃಷಿಗಾಗಿ ಕೃಷಿ ಪರಮ್ ಮತ್ತು ಭಾರತೀಯ ಕಾನೂನು ಕ್ಷೇತ್ರಕ್ಕಾಗಿ ಕಾನೂನು ಪರಮ್‌ನಂತಹ ಡೊಮೇನ್-ನಿರ್ದಿಷ್ಟ ಫೈನ್-ಟ್ಯೂನ್ಡ್ ಮಾದರಿಗಳನ್ನು ಬಿಡುಗಡೆ ಮಾಡಿದೆ ಎಂದು ಹೇಳಿದರು. ಗೌರವಾನ್ವಿತ ಪ್ರಧಾನ ಮಂತ್ರಿಗಳು ಭಾರತ್‌ಜೆನ್‌ನ ಇತ್ತೀಚಿನ ಮಾದರಿಗಳನ್ನು ಬಿಡುಗಡೆ ಮಾಡಿದ್ದಾರೆ ಎಂಬುದರತ್ತ ಅವರು ಗಮನ ಸೆಳೆದರು, ಇದರಲ್ಲಿ 17 ಬಿಲಿಯನ್ ನಿಯತಾಂಕಗಳನ್ನು ಹೊಂದಿರುವ 22 ನಿಗದಿತ ಭಾರತೀಯ ಭಾಷೆಗಳಲ್ಲಿ ಪರಮ್-2 ಪಠ್ಯ ಅಡಿಪಾಯ ಮಾದರಿ, 12 ಭಾರತೀಯ ಭಾಷೆಗಳಲ್ಲಿ ಶ್ರುತಮ್ ಭಾಷಣ-ಪಠ್ಯ ಮಾದರಿಗಳು, 12 ಭಾಷೆಗಳಲ್ಲಿ ಸೂಕ್ತಮ್ ಪಠ್ಯ-ಭಾಷಣ/ಮಾತನಾಡುವ ಮಾದರಿಗಳು ಮತ್ತು ಸಂಕೀರ್ಣ ಭಾರತೀಯ ದಾಖಲೆಗಳಿಗೆ ಬಹುಭಾಷಾ ಪ್ರವೇಶ ಲಭ್ಯತೆಗಾಗಿ ಡಾಕ್‌ಬೋಧ್ ಚೌಕಟ್ಟಿನ ಅಡಿಯಲ್ಲಿ ಪತ್ರಮ್ ಮಾದರಿಗಳು ಸೇರಿವೆ.

ಭಾರತದ ಭಾಷಾ ವೈವಿಧ್ಯತೆಯು 22 ನಿಗದಿತ ಭಾಷೆಗಳನ್ನು ಮೀರಿ ವಿಸ್ತರಿಸುತ್ತದೆ ಎಂದು ಸಚಿವರು ಒತ್ತಿ ಹೇಳಿದರು ಮತ್ತು ವ್ಯಾಪಕವಾಗಿ ಮಾತನಾಡುವ ಪ್ರಾದೇಶಿಕ ಭಾಷೆಗಳು ಹಾಗು ಉಪಭಾಷೆಗಳನ್ನು ಸೇರಿಸಲು ಡೇಟಾಸೆಟ್‌ಗಳನ್ನು ನಿರಂತರವಾಗಿ ವಿಸ್ತರಿಸುವ ಅಗತ್ಯವನ್ನು ಒತ್ತಿ ಹೇಳಿದರು. ವೈಜ್ಞಾನಿಕ ಪ್ರಗತಿಯನ್ನು ಆಡಳಿತಾತ್ಮಕ ಗಡಿಗಳಿಗೆ  ಸೀಮಿತಗೊಳಿಸಲು ಸಾಧ್ಯವಾಗುವುದಿಲ್ಲ ಮತ್ತು ವಿಶೇಷವಾಗಿ ಡಿಜಿಟಲ್ ಆರೋಗ್ಯ ಹಾಗು ಸಾರ್ವಜನಿಕ ಸೇವಾ ವಿತರಣೆಯಂತಹ ಕ್ಷೇತ್ರಗಳಲ್ಲಿ ನೈಜ-ಪ್ರಪಂಚದ ಭಾಷಾ ವೈವಿಧ್ಯತೆಗೆ ಪ್ರತಿಕ್ರಿಯಿಸಬೇಕು ಎಂಬುದರತ್ತಲೂ ಅವರು ಗಮನ ಸೆಳೆದರು.

ಭಾರತ್‌ಜೆನ್‌ನ ಪರಿಸರ ವ್ಯವಸ್ಥೆಯು ಶೈಕ್ಷಣಿಕ, ಸರ್ಕಾರ ಮತ್ತು ಕೈಗಾರಿಕೆಗಳನ್ನು ಸಂಯೋಜಿಸುತ್ತದೆ, ಇದಕ್ಕೆ ಸಹಯೋಗದ ಹಣಕಾಸು ಕಾರ್ಯವಿಧಾನಗಳು ಬೆಂಬಲ ನೀಡುತ್ತವೆ ಎಂದು ಡಾ. ಸಿಂಗ್ ಒತ್ತಿ ಹೇಳಿದರು. ಈ ಉಪಕ್ರಮವು ಭಾರತ್‌ಜೆನ್ ತಂತ್ರಜ್ಞಾನ ಪ್ರತಿಷ್ಠಾನ ಎಂಬ ವಿಭಾಗ-8 ಕಂಪನಿಯಾಗಿ ರೂಪಾಂತರಗೊಂಡಿದೆ, ಇದು ಭಾರತ್‌ಜೆನ್ ತಂತ್ರಜ್ಞಾನ ಫೌಂಡೇಶನ್ ಆಗಿ ರಾಷ್ಟ್ರೀಯ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ ಮತ್ತು ಭಾರತ್ ಡೇಟಾ ಸಾಗರ್‌ನಂತಹ ಉಪಕ್ರಮಗಳ ಮೂಲಕ ದತ್ತಾಂಶ ಹಾಗು ಮಾದರಿ ಸಾರ್ವಭೌಮತ್ವವನ್ನು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.

ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿ ಮನಸ್ಥಿತಿಯ ಬದಲಾವಣೆಗೆ ಕರೆ ನೀಡಿದ ಸಚಿವರು, ಎ.ಐ. ನಂತಹ ಉದಯೋನ್ಮುಖ ತಂತ್ರಜ್ಞಾನಗಳಿಗೆ ಏಕಾಂಗಿತನದಲ್ಲಿ ಸ್ಥಾಗಿತ್ಯ ಅಥವಾ ಮೌನವಾಗಿ ಕಾರ್ಯನಿರ್ವಹಿಸುವ ಬದಲು ಸಹಯೋಗದ ವಿಧಾನಗಳು ಬೇಕಾಗುತ್ತವೆ ಎಂದು ಹೇಳಿದರು. ಬೆಂಬಲ ನೀತಿಗಳು, ಆರಂಭಿಕ ಹಂತದ ಹಣಕಾಸು ಮತ್ತು ಖಾಸಗಿ ಭಾಗವಹಿಸುವಿಕೆಗೆ ಮುಕ್ತತೆಯ ಮೂಲಕ ನಾವೀನ್ಯತೆಯನ್ನು ಸಕ್ರಿಯಗೊಳಿಸಲು ಸರ್ಕಾರ ಬದ್ಧವಾಗಿದೆ ಎಂದು ಅವರು ಒತ್ತಿ ಹೇಳಿದರು, ಇದು ಭಾರತವು ಜಾಗತಿಕ ಪ್ರಗತಿಯೊಂದಿಗೆ ವೇಗವನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸುತ್ತದೆ ಎಂದರು. .

ಈ ಅಧಿವೇಶನವು  ಭಾರತ್‌ಜೆನ್ ಸಿಇಒ ಶ್ರೀ ರಿಷಿ ಬಾಲ್; ಐಐಟಿ ಬಾಂಬೆಯ ಪ್ರಧಾನ ಸಂಶೋಧಕ ಪ್ರೊ. ಗಣೇಶ್ ರಾಮಕೃಷ್ಣನ್; ಐಐಐಟಿ ಹೈದರಾಬಾದ್‌ನ ಪ್ರೊ. ಎಸ್. ರವಿ ಕಿರಣ್; ಮತ್ತು ಭಾರತ್‌ಜೆನ್‌ನ ಉಪಾಧ್ಯಕ್ಷ ಡಾ. ಅಮೋಲ್ ಗೈಟ್ ಅವರ ಪ್ರಸ್ತುತಿಗಳನ್ನು ಒಳಗೊಂಡಿತ್ತು, ಅವರು ಪರಿಸರ ವ್ಯವಸ್ಥೆ, ದತ್ತಾಂಶ ಪ್ರಯಾಣ, ನಿಯೋಜನೆ-ಸಿದ್ಧ ವೇದಿಕೆಗಳು ಮತ್ತು ವಲಯ ಪಾಲುದಾರಿಕೆಗಳನ್ನು ವಿವರಿಸಿದರು. ಎನ್‌ಎಂಐಸಿಪಿಎಸ್ ಅಧ್ಯಕ್ಷ ಡಾ. ಕ್ರಿಸ್ ಗೋಪಾಲಕೃಷ್ಣನ್; ಎಂಇಐಟಿವೈ ಕಾರ್ಯದರ್ಶಿ ಶ್ರೀ ಎಸ್. ಕೃಷ್ಣನ್; ಡಿಎಸ್‌ಟಿ ಕಾರ್ಯದರ್ಶಿ ಪ್ರೊ. ಅಭಯ್ ಕರಂಡಿಕರ್; ಮತ್ತು ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ. ಅಜಯ್ ಕುಮಾರ್ ಸೂದ್ ಅವರು ಉಪನ್ಯಾಸಗಳನ್ನು  ನೀಡಿದರು. ಸಚಿವರ ಸಮ್ಮುಖದಲ್ಲಿ ಭಾರತ್‌ಜೆನ್ ಮತ್ತು ಐಐಟಿ ಬಾಂಬೆ ಹೆರಿಟೇಜ್ ಫೌಂಡೇಶನ್ ನಡುವೆ ತಿಳುವಳಿಕಾ ಒಡಂಬಡಿಕೆ ವಿನಿಮಯವೂ ನಡೆಯಿತು.

ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಡಾ. ಜಿತೇಂದ್ರ ಸಿಂಗ್ ಅವರು ಭಾರತ್‌ಜೆನ್ ಭಾರತದ ಎ.ಐ. ಪ್ರಯಾಣದಲ್ಲಿ ಸಾರ್ವಭೌಮ ಸಾಮರ್ಥ್ಯ, ಸಹಯೋಗದ ಕಾರ್ಯಗತಗೊಳಿಸುವಿಕೆ ಮತ್ತು ಅಂತರ್ಗತ ವಿನ್ಯಾಸವನ್ನು ಸಂಯೋಜಿಸುವ ಹೊಸ ಹಂತವನ್ನು ಪ್ರತಿನಿಧಿಸುತ್ತದೆ ಮತ್ತು ವಿಕಸಿತ ಭಾರತದ ದೃಷ್ಟಿಕೋನಕ್ಕೆ ಅನುಗುಣವಾಗಿ ದೃಢವಾದ ರಾಷ್ಟ್ರೀಯ ಎ.ಐ. ಮೂಲಸೌಕರ್ಯವನ್ನು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.

 

*****


(ಪ್ರಕಟಣೆ ಐ.ಡಿ.: 2229665) ವಿಸಿಟರ್ ಕೌಂಟರ್ : 2
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Telugu