ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ನವ ದೆಹಲಿಯಲ್ಲಿ ನಡೆದ ಭಾರತ ಎಐ ಇಂಪ್ಯಾಕ್ಟ್ ಶೃಂಗಸಭೆ 2026ರಲ್ಲಿ “ಉತ್ಪಾದನಾ ಎಂಎಸ್‌ಎಂಇಗಳಲ್ಲಿ ಕೃತಕ ಬುದ್ಧಿಮತ್ತೆ ಸಿದ್ಧತೆ ಮತ್ತು ಅಳವಡಿಕೆಯನ್ನು ಹೆಚ್ಚಿಸುವುದು” ಕುರಿತ ಅಧಿವೇಶನ
“ಆರ್ಥಿಕತೆಯ ನೈಜ ವಲಯಗಳ ಮೇಲೆ, ವಿಶೇಷವಾಗಿ ಉತ್ಪಾದನಾ ಎಂಎಸ್‌ಎಂಇಗಳ ಮೇಲೆ ಎ.ಐ. ಅರ್ಥಪೂರ್ಣ ಪರಿಣಾಮ ಬೀರುತ್ತದೆ ಎಂದು ಖಚಿತಪಡಿಸಿಕೊಳ್ಳಲು ಭಾರತ ಎಐ ಮಿಷನ್ ಬದ್ಧವಾಗಿದೆ” ಎಂದು ಎಂಇಟಿವೈ ಕಾರ್ಯದರ್ಶಿ ಶ್ರೀ ಎಸ್. ಕೃಷ್ಣನ್ ಹೇಳಿಕೆ
"ಕೈಗಾರಿಕೆ ಮತ್ತು ಆತ್ಮನಿರ್ಭರ ಭಾರತಕ್ಕೆ ಎ.ಐ. ಒಂದು 'ಮಹಾ ಶಕ್ತಿ ವರ್ಧಕ’ ಎಂದು ಎಂ.ಎಸ್.ಎಂ.ಇ. ಕಾರ್ಯದರ್ಶಿ ಹೇಳುತ್ತಾರೆ
"ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಭಾರತದ ಪ್ರಯಾಣದಲ್ಲಿ ಎ.ಐ. ಪ್ರಮುಖ ಪಾತ್ರ ವಹಿಸುತ್ತದೆ" ಎಂದು ಎನ್.ಐ.ಎಸ್.ಜಿ. ಸಿಇಒ ಶ್ರೀ ಭುವನೇಶ್ ಕುಮಾರ್ ಹೇಳುತ್ತಾರೆ
ಪ್ರಕಟಣಾ ದಿನಾಂಕ:
17 FEB 2026 7:52PM by PIB Bengaluru
ನವ ದೆಹಲಿಯಲ್ಲಿ ನಡೆಯುತ್ತಿರುವ ಭಾರತ ಎ.ಐ. ಇಂಪ್ಯಾಕ್ಟ್ ಶೃಂಗಸಭೆ 2026 ರ ಎರಡನೇ ದಿನದಂದು "ಉತ್ಪಾದನಾ ಎಂ.ಎಸ್.ಎಂ.ಇ. ಗಳಲ್ಲಿ ಎ.ಐ. ಸಿದ್ಧತೆ ಮತ್ತು ಅಳವಡಿಕೆಯನ್ನು ಸುಧಾರಿಸುವುದು" ಎಂಬ ಶೀರ್ಷಿಕೆಯ ಉನ್ನತ ಮಟ್ಟದ ವಿಷಯಾಧಾರಿತ ಅಧಿವೇಶನ ನಡೆಯಿತು. ಈ ಅಧಿವೇಶನವು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂ.ಇ.ಐ.ಟಿ.ವೈ.-MeitY), ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ (ಎಂ.ಎಸ್.ಎಂ.ಇ.-MSME), ಜವಳಿ ಸಚಿವಾಲಯ ಮತ್ತು ಔಷಧೀಯ ಇಲಾಖೆ (ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯ) ಸೇರಿದಂತೆ ಭಾರತ ಸರ್ಕಾರದ ಪ್ರಮುಖ ಸಚಿವಾಲಯಗಳನ್ನು ನೀತಿ ನಿರೂಪಕರು, ಉದ್ಯಮ ಪ್ರತಿನಿಧಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಒಟ್ಟುಗೂಡಿಸಿತು.
ಈ ಅಧಿವೇಶನದಲ್ಲಿ, ಎಂ.ಇ.ಐ.ಟಿ.ವೈ ಮತ್ತು ಭಾರತ ಎ.ಐ. ಮಿಷನ್ ಆಶ್ರಯದಲ್ಲಿ ರಾಷ್ಟ್ರೀಯ ಸ್ಮಾರ್ಟ್ ಗವರ್ನೆನ್ಸ್ ಸಂಸ್ಥೆ (ಎನ್.ಐ.ಎಸ್.ಜಿ.-NISG) ಮತ್ತು ಅಥೇನಾ ಇನ್ಫೋನೋಮಿಕ್ಸ್ ಜಂಟಿಯಾಗಿ ಕೈಗೊಂಡ ಅಧ್ಯಯನವನ್ನು ಕಾರ್ಯಾರಂಭ ಮಾಡಲಾಯಿತು.. ಜವಳಿ, ಔಷಧಗಳು (ವೈದ್ಯಕೀಯ ಸಾಧನಗಳು ಸೇರಿದಂತೆ) ಮತ್ತು ಎಲೆಕ್ಟ್ರಾನಿಕ್ಸ್‌ನಂತಹ ಕ್ಷೇತ್ರಗಳಲ್ಲಿ ಉತ್ಪಾದನಾ ಎಂ.ಎಸ್.ಎಂ.ಇ.ಗಳಲ್ಲಿ ಎ.ಐ. ಅಳವಡಿಕೆಯನ್ನು ವೇಗಗೊಳಿಸಲು ಪ್ರಾಯೋಗಿಕ ಮತ್ತು ಕಾರ್ಯಾಚರಣೆಯ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸುವತ್ತ ಈ ಅಧ್ಯಯನವು ಗಮನಹರಿಸುತ್ತದೆ. ಈ ಸಂಶೋಧನೆಗಳು ಎಂ.ಎಸ್.ಎಂ.ಇ.ಗಳಿಗೆ ಅಳವಡಿಕೆ ಮಾರ್ಗಗಳನ್ನು ತಿಳಿಸುತ್ತವೆ ಮತ್ತು ರಾಷ್ಟ್ರೀಯ ಉತ್ಪಾದನಾ ಪ್ರಮಾಣ, ರಫ್ತು ಸ್ಪರ್ಧಾತ್ಮಕತೆ ಮತ್ತು ಉದ್ಯೋಗ ಫಲಿತಾಂಶಗಳ ಮೇಲೆ ನೇರವಾಗಿ ಪರಿಣಾಮ ಬೀರುವ ಸರ್ಕಾರದ ಮಧ್ಯಪ್ರವೇಶಗಳಿಗೆ ಮಾರ್ಗದರ್ಶನ ಮಾಡುತ್ತವೆ.

ಉತ್ಪಾದನಾ ಎಂಎಸ್‌ಎಂಇ ವಲಯದಲ್ಲಿ ಉತ್ಪಾದಕತೆ, ದಕ್ಷತೆ ಮತ್ತು ಸಾಮರ್ಥ್ಯಗಳನ್ನು ಹೆಚ್ಚಿಸಲು ಎಐ ಬಳಸಿಕೊಳ್ಳುವ ಅಗತ್ಯವನ್ನು ಎಂಇಐಟಿವೈ ಕಾರ್ಯದರ್ಶಿ ಶ್ರೀ ಎಸ್. ಕೃಷ್ಣನ್ ಒತ್ತಿ ಹೇಳಿದರು. ಆರ್ಥಿಕತೆಯ ನೈಜ ವಲಯಗಳ ಮೇಲೆ, ವಿಶೇಷವಾಗಿ ಉತ್ಪಾದನಾ ಎಂಎಸ್‌ಎಂಇಗಳನ್ನು ಉತ್ತೇಜಿಸುವಲ್ಲಿ ಎಐ ಅರ್ಥಪೂರ್ಣವಾಗಿ ಪರಿಣಾಮ ಬೀರುತ್ತದೆ ಎಂದು ಖಚಿತಪಡಿಸಿಕೊಳ್ಳಲು ಭಾರತ ಎಐ ಮಿಷನ್ ಬದ್ಧವಾಗಿದೆ ಎಂದು ಅವರು ಹೇಳಿದರು.
ತಮ್ಮ ಭಾಷಣದಲ್ಲಿ, ಎಂಎಸ್‌ಎಂಇ ಕಾರ್ಯದರ್ಶಿ ಶ್ರೀ ಎಸ್. ಸಿ. ಎಲ್. ದಾಸ್, ಎಐ ಅನ್ನು "ಮಹಾ ಶಕ್ತಿ ವರ್ಧಕ " ಎಂದು ಪ್ರತಿಪಾದಿಸಿದರು ಮತ್ತು ಉದ್ಯಮವು ಭಾರತೀಯ ಆರ್ಥಿಕತೆಯ ಎಐ-ಚಾಲಿತ ಪರಿವರ್ತನೆಯಿಂದಾಗಿ ಆತ್ಮನಿರ್ಭರ ಭಾರತಕ್ಕೆ ಅನುವು ಮಾಡಿಕೊಡುತ್ತದೆ ಎಂದು ಒತ್ತಿ ಹೇಳಿದರು. ಎಂಎಸ್‌ಎಂಇಗಳು ಹೆಚ್ಚು ಸ್ಪರ್ಧಾತ್ಮಕವಾಗಲು ಅಂಗಡಿ ಮಟ್ಟದಲ್ಲಿ ಎಐನ ಸಂಗಮವು ನಿರ್ಣಾಯಕವಾಗಿರುತ್ತದೆ ಎಂದು ಅವರು ಮತ್ತಷ್ಟು ವಿವರಿಸಿದರು.
2025–26ರ ಆರ್ಥಿಕ ಸಮೀಕ್ಷೆಯ ಪ್ರಕಾರ, ಎಂ.ಎಸ್.ಎಂ.ಇ. ವಲಯವು ಭಾರತದ ಜಿ.ಡಿ.ಪಿ.ಗೆ ಸರಿಸುಮಾರು 31.1% ಕೊಡುಗೆ ನೀಡುತ್ತದೆ, ಒಟ್ಟು ಉತ್ಪಾದನಾ ಪ್ರಮಾಣವು 35.4% ಮತ್ತು ದೇಶದ ರಫ್ತಿನ 48.6% ರಷ್ಟಿದೆ. 2047 ರ ವೇಳೆಗೆ $35 ಟ್ರಿಲಿಯನ್ ಆರ್ಥಿಕತೆಯಾಗುವ ಭಾರತದ ಮಹತ್ವಾಕಾಂಕ್ಷೆಯಲ್ಲಿ ಉತ್ಪಾದನೆಯು ಪ್ರಮುಖ ಚಾಲಕ ಶಕ್ತಿಯಾಗಿರುವುದರಿಂದ, ಭವಿಷ್ಯದಲ್ಲಿ ಎಂ.ಎಸ್.ಎಂ.ಇ. ಗಳ ಕೊಡುಗೆಗೆ ಸಂಬಂಧಿಸಿ ರಾಷ್ಟ್ರೀಯ ಆರ್ಥಿಕ ಬೆಳವಣಿಗೆಗಾಗಿ ತಂತ್ರಜ್ಞಾನ ಅಳವಡಿಕೆಯನ್ನು ವೇಗಗೊಳಿಸುವುದು, ಹಣಕಾಸಿನ ಪ್ರವೇಶವನ್ನು/ಲಭ್ಯತೆಯನ್ನು ಸುಧಾರಿಸುವುದು ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಬಲಪಡಿಸುವುದು ಅತ್ಯಗತ್ಯವಾಗಿರುತ್ತದೆ.
ಈ ಅಧ್ಯಯನವು ಭಾರತದಾದ್ಯಂತ 350 ಕ್ಕೂ ಹೆಚ್ಚು ಎಂ.ಎಸ್.ಎಂ.ಇ. ಉತ್ಪಾದನಾ ಕಾರ್ಖಾನೆಗಳನ್ನು ಒಳಗೊಳ್ಳುತ್ತದೆ, ಅಂಗಡಿಯಿಂದ ಹಿಡಿದು ಹಿರಿಯ ಆಡಳಿತ ವರ್ಗದವರೆಗೆ ಸೂಕ್ಷ್ಮವಾದ, ಅನುಭವ-ಆಧಾರಿತ ತಿಳುವಳಿಕೆಯನ್ನು ಸಂಗ್ರಹಿಸುತ್ತದೆ. ಈ ಸಂಶೋಧನೆಯು ಘಟಕ ಅರ್ಥಶಾಸ್ತ್ರವನ್ನು ಭೌತಿಕವಾಗಿ ಸುಧಾರಿಸುವ, ಉತ್ಪನ್ನ-ಸೇವಾ ವಿಸ್ತರಣೆಯನ್ನು ಹೆಚ್ಚಿಸುವ ಮತ್ತು ಜಾಗತಿಕ ಮಾರುಕಟ್ಟೆ ಪ್ರವೇಶ ಹಾಗು ಭಾಗವಹಿಸುವಿಕೆಯನ್ನು ವಿಸ್ತರಿಸುವ ಎ.ಐ. ಮಧ್ಯಪ್ರವೇಶಗಳನ್ನು ಗುರುತಿಸುವ ಗುರಿಯನ್ನು ಹೊಂದಿದೆ.
ಎನ್.ಐ.ಎಸ್.ಜಿ. ಯ ಸಿಇಒ ಶ್ರೀ ಭುವನೇಶ್ ಕುಮಾರ್ ಅವರು ಈ ಅಧ್ಯಯನವನ್ನು ಕೈಗೊಳ್ಳುವ ಬಗ್ಗೆ ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದರು, ಇದು ಉತ್ಪಾದನಾ ಎಂ.ಎಸ್.ಎಂ.ಇ. ಗಳಲ್ಲಿ ಎ.ಐ. ಅಳವಡಿಕೆಗೆ ಚಾಲನೆ ನೀಡಲು ಕಾರ್ಯಗತಗೊಳಿಸಬಹುದಾದ ಮಾರ್ಗಸೂಚಿಯನ್ನು ಒದಗಿಸುತ್ತದೆ ಎಂದು ಹೇಳಿದರು. ಜಾಗತಿಕವಾಗಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಭಾರತದ ಪ್ರಯಾಣದಲ್ಲಿ ಎ.ಐ. ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ಜವಳಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಶ್ರೀ ರೋಹಿತ್ ಕನ್ಸಾಲ್, ಭಾರತದ ಎ.ಐ. ಲಾಭಾಂಶವನ್ನು ಕಾರ್ಖಾನೆ ಸ್ಥಳದಲ್ಲಿ/ನೆಲದಲ್ಲಿ ವಾಸ್ತವೀಕರಣಗೊಳ್ಳುತ್ತದೆ ಎಂದು ಒತ್ತಿ ಹೇಳಿದರು. ಭಾರತದ ದೀರ್ಘಕಾಲೀನ ಆರ್ಥಿಕ ಬದಲಾವಣೆಯು ಎ.ಐ.ಯಿಂದಾಗಿ ಜವಳಿ, ಆಹಾರ ಸಂಸ್ಕರಣೆ ಮತ್ತು ಇಂತಹ ಇತರ ಪರಂಪರೆಯ ಕೈಗಾರಿಕೆಗಳನ್ನು ಆಧುನೀಕರಿಸಬಹುದೇ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಅವರು ಹೇಳಿದರು.
ಔಷಧ ಇಲಾಖೆಯ ಜಂಟಿ ಕಾರ್ಯದರ್ಶಿ ಶ್ರೀ ಅಮನ್ ಶರ್ಮಾ, ಎ.ಐ. ಯಿಂದಾಗಿ ವೆಚ್ಚ ಗಮನಾರ್ಹವಾಗಿ ಕಡಿಮೆಯಾಗ ಬಲ್ಲುದು ಮತ್ತು ಎಂ.ಎಸ್.ಎಂ.ಇ. ಗಳಿಗೆ ಉತ್ಪಾದನೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯವಾಗಬಲ್ಲುದು ಎಂಬ ಅಂಶದತ್ತ ಗಮನಸೆಳೆದರು, ಇದು ಈ ವಲಯದ 80% ಕ್ಕಿಂತ ಹೆಚ್ಚು ಉತ್ಪಾದನಾ ಘಟಕಗಳನ್ನು ಪ್ರತಿನಿಧಿಸುತ್ತದೆ.
ಈ ವಿಷಯಾಧಾರಿತ ಅಧಿವೇಶನವು ಭಾರತ ಎ.ಐ. ಶೃಂಗಸಭೆ 2026 ರ ಅತ್ಯಗತ್ಯ ಭಾಗವಾಗಿದ್ದು, ಎ.ಐ. ಪರಿಸರ ವ್ಯವಸ್ಥೆಯಲ್ಲಿನ ವಿವಿಧ ಪಾಲುದಾರರಲ್ಲಿ ರಚನಾತ್ಮಕ ಸಂವಾದ, ಜ್ಞಾನ ವಿನಿಮಯ ಮತ್ತು ಸಂಘಟಿತ ಕ್ರಿಯೆಗೆ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ.
*****
(ಪ್ರಕಟಣೆ ಐ.ಡಿ.: 2229388)
ವಿಸಿಟರ್ ಕೌಂಟರ್ : 3