ರಕ್ಷಣಾ ಸಚಿವಾಲಯ
azadi ka amrit mahotsav

ರಕ್ಷಣಾ ಸಚಿವರು ಬೆಂಗಳೂರಿನ ಡಿ ಆರ್‌ ಡಿ ಒ ದಲ್ಲಿ ಜಿ ಟಿ ಆರ್‌ ಇ ಭೇಟಿಯ ಸಂದರ್ಭದಲ್ಲಿ ದೇಶೀಯ ಮಿಲಿಟರಿ ಗ್ಯಾಸ್ ಟರ್ಬೈನ್ ಇಂಜಿನ್ ಅಭಿವೃದ್ಧಿ ಯೋಜನೆಗಳ ಪರಾಮರ್ಶೆ ನಡೆಸಿದರು


ಆತ್ಮನಿರ್ಭರತೆಯ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುತ್ತಿರುವುದಕ್ಕಾಗಿ ಜಿ ಟಿ ಆರ್‌ ಇ ಸಂಸ್ಥೆಯನ್ನು ರಕ್ಷಣಾ ಸಚಿವರುಬ ಶ್ಲಾಘಿಸಿದರು


“ಏರೋ ಇಂಜಿನ್ ಅಭಿವೃದ್ಧಿಯಲ್ಲಿ ಸ್ವಾವಲಂಬನೆ ಸಾಧಿಸಲು ಸರ್ಕಾರ ಬದ್ಧವಾಗಿದೆ”


“ಆಪರೇಷನ್ ಸಿಂಧೂರ್ ರಕ್ಷಣಾ ವಲಯದಲ್ಲಿ ಭಾರತದ ಬೆಳೆಯುತ್ತಿರುವ ಆತ್ಮನಿರ್ಭರತೆಯನ್ನು ಪ್ರದರ್ಶಿಸಿದೆ, ವಿಶ್ವದರ್ಜೆಯ ದೇಶೀಯ ವ್ಯವಸ್ಥೆಗಳ ತಯಾರಿಕೆಯತ್ತ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ”

ಪ್ರಕಟಣಾ ದಿನಾಂಕ: 16 FEB 2026 3:28PM by PIB Bengaluru

ರಕ್ಷಣಾ ಸಚಿವರಾದ ಶ್ರೀ ರಾಜನಾಥ್ ಸಿಂಗ್ ಅವರು ಫೆಬ್ರವರಿ 16, 2026 ರಂದು ಬೆಂಗಳೂರಿನ ಡಿ ಆರ್‌ ಡಿ ಒ ಅಧೀನದ ಗ್ಯಾಸ್ ಟರ್ಬೈನ್ ಸಂಶೋಧನಾ ಸಂಸ್ಥೆಗೆ (ಜಿ ಟಿ ಆರ್‌ ಇ) ಭೇಟಿ ನೀಡಿದರು ಮತ್ತು ಪ್ರಗತಿಯಲ್ಲಿರುವ ದೇಶೀಯ ಮಿಲಿಟರಿ ಗ್ಯಾಸ್ ಟರ್ಬೈನ್ ಇಂಜಿನ್ ಅಭಿವೃದ್ಧಿ ಯೋಜನೆಗಳ ಸ್ಥಿತಿಗತಿಗಳನ್ನು ಪರಾಮರ್ಶಿಸಿದರು. ಸಂಸ್ಥೆಯು ಕೈಗೆತ್ತಿಕೊಳ್ಳಲಿರುವ ಯೋಜನೆಗಳು, ಭಾರತೀಯ ಕೈಗಾರಿಕೆಗಳು, ಶೈಕ್ಷಣಿಕ ವಲಯ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಅಂಡ್ ಡಿ) ಸಂಸ್ಥೆಗಳೊಂದಿಗಿನ ಸಂವಹನ ಹಾಗೂ ರಕ್ಷಣಾ ಪಡೆಗಳಿಗೆ ನೀಡಲಾಗುತ್ತಿರುವ ಬೆಂಬಲದ ಕುರಿತು ಅವರಿಗೆ ಮಾಹಿತಿ ನೀಡಲಾಯಿತು. ಅವರು ವಿವಿಧ ದೇಶೀಯ ಇಂಜಿನ್‌ ಗಳು ಮತ್ತು ಅವುಗಳ ಬಿಡಿಭಾಗಗಳನ್ನು ಪ್ರದರ್ಶಿಸುವ ಪ್ರದರ್ಶನವನ್ನು ವೀಕ್ಷಿಸಿದರು ಹಾಗೂ ಕಾವೇರಿ ಇಂಜಿನ್‌ ನ ಸಂಪೂರ್ಣ ಆಫ್ಟರ್ ಬರ್ನರ್ ಇಂಜಿನ್ ಪರೀಕ್ಷೆಗೆ ಸಾಕ್ಷಿಯಾದರು.

ವಿಜ್ಞಾನಿಗಳು ಮತ್ತು ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ ರಕ್ಷಣಾ ಸಚಿವರು, ಆತ್ಮನಿರ್ಭರತೆಯ ಮೂಲಕ ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಜಿ ಟಿ ಆರ್‌ ಇ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ಡಿ ಆರ್‌ ಡಿ ಒ ಭಾರತದ ಕಾರ್ಯತಂತ್ರದ ಸಾಮರ್ಥ್ಯದ ಅಡಿಪಾಯ ಎಂದು ಬಣ್ಣಿಸಿದರು. ಪ್ರಸ್ತುತ ವೇಗವಾಗಿ ಬದಲಾಗುತ್ತಿರುವ ಭೌಗೋಳಿಕ ರಾಜಕೀಯ ಪರಿಸ್ಥಿತಿಯಲ್ಲಿ ಏರೋ ಇಂಜಿನ್ ತಂತ್ರಜ್ಞಾನದಲ್ಲಿ ಆತ್ಮನಿರ್ಭರತೆ ಸಾಧಿಸುವುದು ಅತ್ಯಂತ ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು ಮತ್ತು ಭಾರತದಲ್ಲಿ ಏರೋ ಇಂಜಿನ್‌ ಗಳ ಅಭಿವೃದ್ಧಿಗೆ ಆದ್ಯತೆ ನೀಡಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ತಿಳಿಸಿದರು. “ಪೂರೈಕೆ ಸರಪಳಿಗಳು ಮುರಿಯುತ್ತಿವೆ ಮತ್ತು ಹೊಸ ಪರಿಸರ ವ್ಯವಸ್ಥೆಗಳು ಅಭಿವೃದ್ಧಿ ಹೊಂದುತ್ತಿವೆ. ದೇಶೀಯ ನಿರ್ಣಾಯಕ ತಂತ್ರಜ್ಞಾನಗಳನ್ನು ಹೊಂದಿರುವ ರಾಷ್ಟ್ರಗಳು ಮಾತ್ರ ಸುರಕ್ಷಿತವಾಗಿರಲು ಮತ್ತು ತಮ್ಮನ್ನು ತಾವು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದರು. ಪ್ರತಿಯೊಂದು ಕ್ಷೇತ್ರದಲ್ಲೂ ಸ್ವಾವಲಂಬನೆ ಸಾಧಿಸುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಈ ನಿರ್ಣಾಯಕ ತಂತ್ರಜ್ಞಾನ ಕ್ಷೇತ್ರದಲ್ಲಿ ಜಿ ಟಿ ಆರ್‌ ಇ ಪ್ರಯತ್ನಗಳನ್ನು ಶ್ಲಾಘಿಸಿದ ಶ್ರೀ ರಾಜನಾಥ್ ಸಿಂಗ್ ಅವರು, ಏರೋ ಇಂಜಿನ್‌ ಗಳಲ್ಲಿ ಸ್ವಾವಲಂಬನೆ ಸಾಧಿಸುವ ಜೊತೆಗೆ ದೇಶಾದ್ಯಂತ ಬಲವಾದ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಮೂಲಕ ಮುಂದಿನ ಪೀಳಿಗೆಯ ಇಂಜಿನ್‌ ಗಳ ಮೇಲೆ ಗಮನ ಹರಿಸಲು ಪ್ರಯೋಗಾಲಯಕ್ಕೆ ಕರೆ ನೀಡಿದರು. “ನಾವು ಸುಧಾರಿತ ಮಧ್ಯಮ ಯುದ್ಧ ವಿಮಾನ (ಎಎಂಸಿಎ) ವಿನ್ಯಾಸ ಮತ್ತು ಅಭಿವೃದ್ಧಿಯತ್ತ ವೇಗವಾಗಿ ಸಾಗುತ್ತಿದ್ದೇವೆ. ಏರೋ ಇಂಜಿನ್ ಕ್ಷೇತ್ರದಲ್ಲಿ ಪರಿಣತಿ ಪಡೆಯಲು ನಾವು ಹಿಂದೆ ಹಲವಾರು ಪ್ರಯತ್ನಗಳನ್ನು ಮಾಡಿದ್ದೇವೆ. ಈಗ ಆ ಪ್ರಯತ್ನಗಳನ್ನು ಪೂರ್ಣಗೊಳಿಸುವ ಸಮಯ ಬಂದಿದೆ. ನಾವು ಕೇವಲ 5ನೇ ಪೀಳಿಗೆಯ ಇಂಜಿನ್‌ ಗಳಿಗೆ ಸೀಮಿತವಾಗಬಾರದು. ನಾವು ಆದಷ್ಟು ಬೇಗ 6ನೇ ಪೀಳಿಗೆಯ ಸುಧಾರಿತ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಪ್ರಾರಂಭಿಸಬೇಕು. ಅವುಗಳ ಮೇಲಿನ ಸಂಶೋಧನೆಯು ಇಂದಿನ ಅಗತ್ಯವಾಗಿದೆ. ಕೃತಕ ಬುದ್ಧಿಮತ್ತೆ (ಎಐ), ಮೆಷಿನ್ ಲರ್ನಿಂಗ್ ಮತ್ತು ಹೊಸ ವಸ್ತುಗಳ ಬಳಕೆ ಹೆಚ್ಚುತ್ತಿದೆ. ನಾವು ಕಾಲಕ್ಕಿಂತ ಮುಂದಿರಬೇಕು” ಎಂದು ಹೇಳಿದರು.

ಏರೋ ಇಂಜಿನ್ ಅಭಿವೃದ್ಧಿಯನ್ನು ಥರ್ಮೋಡೈನಾಮಿಕ್ಸ್, ಮೆಟೀರಿಯಲ್ ಸೈನ್ಸ್, ಫ್ಲೂಯಿಡ್ ಮೆಕ್ಯಾನಿಕ್ಸ್ ಮತ್ತು ಸುಧಾರಿತ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅನ್ನು ಸಂಯೋಜಿಸುವ ಅತ್ಯಂತ ಸಂಕೀರ್ಣವಾದ ಪ್ರಯತ್ನ ಎಂದು ರಕ್ಷಣಾ ಸಚಿವರು ವಿವರಿಸಿದರು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳೂ ಸಹ ಮುಂದಿನ ಪೀಳಿಗೆಯ ಇಂಜಿನ್‌ ಗಳನ್ನು ಅಭಿವೃದ್ಧಿಪಡಿಸಲು ಸಾಮಾನ್ಯವಾಗಿ 25-30 ವರ್ಷಗಳನ್ನು ತೆಗೆದುಕೊಳ್ಳುತ್ತವೆ ಎಂದು ಹೇಳಿದ ಅವರು, ದೇಶದ ಕಾರ್ಯತಂತ್ರದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಮಯದ ಮಿತಿಯನ್ನು ಕಡಿಮೆ ಮಾಡಲು ಭಾರತೀಯ ವಿಜ್ಞಾನಿಗಳಿಗೆ ಕರೆ ನೀಡಿದರು. “ಈಗಾಗಲೇ 20 ವರ್ಷಗಳು ಕಳೆದಿವೆ ಮತ್ತು ನಮ್ಮ ಬಳಿ ಕೇವಲ 5-7 ವರ್ಷಗಳು ಮಾತ್ರ ಉಳಿದಿವೆ ಎಂದು ನಾವು ಭಾವಿಸಬೇಕು,” ಎಂದು ಅವರು ಹೇಳಿದರು, ಇದು ರಾಷ್ಟ್ರೀಯ ಆಕಾಂಕ್ಷೆಗಳಿಗೆ ಅನುಗುಣವಾಗಿ ಕಾರ್ಯಪ್ರವೃತ್ತರಾಗಲು ನೀಡಿದ ಕರೆಯಾಗಿದೆ ಎಂದು ಅವರು ಹೇಳಿದರು.

ಆಪರೇಷನ್ ಸಿಂಧೂರ್ ಅನ್ನು ಉಲ್ಲೇಖಿಸಿದ ಶ್ರೀ ರಾಜನಾಥ್ ಸಿಂಗ್ ಅವರು, ಈ ಕಾರ್ಯಾಚರಣೆಯ ಸಮಯದಲ್ಲಿ ರಕ್ಷಣಾ ಪಡೆಗಳು ರಕ್ಷಣಾ ವಲಯದಲ್ಲಿ ಭಾರತದ ಬೆಳೆಯುತ್ತಿರುವ ಆತ್ಮನಿರ್ಭರತೆಯನ್ನು ಪ್ರದರ್ಶಿಸಿವೆ ಎಂದು ಒತ್ತಿಹೇಳಿದರು. “ಅದು ಸಂವಹನ ವ್ಯವಸ್ಥೆಗಳಿರಲಿ, ಕಣ್ಗಾವಲು ಸಾಧನಗಳಿರಲಿ ಅಥವಾ ದಾಳಿ ಮಾಡುವ ಶಸ್ತ್ರಾಸ್ತ್ರಗಳಿರಲಿ, ಎಲ್ಲವೂ ದೇಶೀಯವಾಗಿದ್ದವು. ಇದು ನಮ್ಮ ಸೈನಿಕರ ನೈತಿಕ ಸ್ಥೈರ್ಯವನ್ನು ಹೆಚ್ಚಿಸಿತು ಮತ್ತು ನಾಗರಿಕರಲ್ಲಿ ಹೆಮ್ಮೆ ಮೂಡಿಸಿತು. ಬದಲಾಗುತ್ತಿರುವ ಸವಾಲುಗಳ ಹಿನ್ನೆಲೆಯಲ್ಲಿ, ದೇಶೀಯ ವಿಧಾನಗಳ ಮೇಲೆ ಹೆಚ್ಚು ಗಮನ ಹರಿಸುವುದು ಮತ್ತು ನಮ್ಮ ಪಡೆಗಳಿಗೆ ವಿಶ್ವದರ್ಜೆಯ ವ್ಯವಸ್ಥೆಗಳು ಮತ್ತು ಉಪಕರಣಗಳನ್ನು ಒದಗಿಸುವುದು ಅನಿವಾರ್ಯವಾಗಿದೆ” ಎಂದು ಅವರು ಹೇಳಿದರು.

ಏರೋ ಇಂಜಿನ್ ಅಭಿವೃದ್ಧಿಗಾಗಿ ಯುಕೆಯೊಂದಿಗೆ ನಡೆಸುತ್ತಿರುವ ಜಂಟಿ ಅಧ್ಯಯನಕ್ಕಾಗಿ ಜಿ ಟಿ ಆರ್‌ ಇ ಅನ್ನು ಶ್ಲಾಘಿಸಿದ ರಕ್ಷಣಾ ಸಚಿವರು, ನ್ಯಾಷನಲ್ ಏರೋ ಇಂಜಿನ್ ಮಿಷನ್ ಅಡಿಯಲ್ಲಿ ಏರೋ ಇಂಜಿನ್‌ ಗಳಿಗಾಗಿ ಫ್ರಾನ್ಸ್‌ ನೊಂದಿಗೂ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದರು. “ಫ್ರಾನ್ಸ್ ಮತ್ತು ಯುಕೆ ಎರಡೂ ಏರೋ ಇಂಜಿನ್ ತಂತ್ರಜ್ಞಾನದಲ್ಲಿ ಬಹಳ ಮುಂದುವರಿದಿವೆ. ಈ ಸಹಯೋಗಗಳು ನಮಗೆ ಹೊಸ ತಂತ್ರಜ್ಞಾನಗಳನ್ನು ಕಲಿಯಲು ಅವಕಾಶವನ್ನು ನೀಡುವುದಲ್ಲದೆ, ಕಳೆದ ದಶಕಗಳಲ್ಲಿ ಅವರು ಎದುರಿಸಿದ ಸವಾಲುಗಳನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತವೆ” ಎಂದು ಅವರು ಹೇಳಿದರು.

ಇಂತಹ ಸಂಕೀರ್ಣ ತಂತ್ರಜ್ಞಾನಗಳ ಉಭಯ ಬಳಕೆಯ ಸಾಮರ್ಥ್ಯವನ್ನು ಉಲ್ಲೇಖಿಸಿದ ಶ್ರೀ ರಾಜನಾಥ್ ಸಿಂಗ್ ಅವರು, ಜಿ ಟಿ ಆರ್‌ ಇ ಅಧಿಕ-ತಾಪಮಾನದ ಸಂಯೋಜಿತ ವಸ್ತುಗಳನ್ನು ತಯಾರಿಸುತ್ತಿದೆ, ಇದು ಭವಿಷ್ಯದಲ್ಲಿ ನಾಗರಿಕ ವಿಮಾನಯಾನ, ವಿದ್ಯುತ್ ಉತ್ಪಾದನೆ ಮತ್ತು ಬಾಹ್ಯಾಕಾಶ ಕ್ಷೇತ್ರಗಳಿಗೆ ಗಮನಾರ್ಹ ಪ್ರಯೋಜನವನ್ನು ನೀಡುತ್ತದೆ ಎಂದು ಹೇಳಿದರು. ಭಾರತವು ವಿಶ್ವದ ವೇಗವಾಗಿ ಬೆಳೆಯುತ್ತಿರುವ ನಾಗರಿಕ ವಿಮಾನಯಾನ ಮಾರುಕಟ್ಟೆಗಳಲ್ಲಿ ಒಂದಾಗಿದೆ ಮತ್ತು ಇಂದು ರಕ್ಷಣಾ ಏರೋ ಇಂಜಿನ್‌ ಗಳಲ್ಲಿ ಸಾಧಿಸಿದ ತಾಂತ್ರಿಕ ಪ್ರಗತಿಗಳು ನಾಳೆಯ ನಾಗರಿಕ ವಿಮಾನಯಾನ ಮತ್ತು ಆರ್ಥಿಕ ಬೆಳವಣಿಗೆಯಲ್ಲಿ ಪರಿವರ್ತಕ ಪಾತ್ರವನ್ನು ವಹಿಸಬಹುದು ಎಂದು ಅವರು ತಿಳಿಸಿದರು.

ಭಾರತವು ಒದಗಿಸುವ ಹಲವಾರು ಅವಕಾಶಗಳನ್ನು ಬಳಸಿಕೊಳ್ಳಲು ರಕ್ಷಣಾ ಸಚಿವರು ಕರೆ ನೀಡಿದರು. ಕಳೆದ 18 ವರ್ಷಗಳಿಂದ ಬಾಕಿ ಉಳಿದಿದ್ದ ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ಈಗ ಪೂರ್ಣಗೊಂಡಿದೆ ಎಂದು ಅವರು ವಿಶೇಷವಾಗಿ ಉಲ್ಲೇಖಿಸಿದರು. ಈ ವ್ಯಾಪಾರ ಒಪ್ಪಂದವು ಭಾರತದ ಬೆಳೆಯುತ್ತಿರುವ ಆರ್ಥಿಕ ಮತ್ತು ರಾಜಕೀಯ ಶಕ್ತಿಯ ಗುರುತಿಸುವಿಕೆಯಾಗಿದೆ ಎಂದು ಅವರು ಹೇಳಿದರು. ಇತ್ತೀಚೆಗೆ ಗ್ರೀಸ್ ರಕ್ಷಣಾ ಸಚಿವರೊಂದಿಗೆ ನಡೆದ ಭೇಟಿಯನ್ನು ಅವರು ಸ್ಮರಿಸಿದರು, ಅವರು ಭಾರತವನ್ನು ಉದಯೋನ್ಮುಖ ಶಕ್ತಿಯಾಗಿ ಮಾತ್ರವಲ್ಲದೆ, ಒಂದು ಸೂಪರ್‌ ಪವರ್‌ ಆಗಿ ನೋಡುತ್ತಾರೆ ಎಂದು ಹೇಳಿದರು.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ಡಿ ಆರ್‌ ಡಿ ಒ ಅಧ್ಯಕ್ಷ ಡಾ. ಸಮೀರ್ ವಿ ಕಾಮತ್ ಮತ್ತು ಜಿ ಟಿ ಆರ್‌ ಇ ಯ ಹಿರಿಯ ವಿಜ್ಞಾನಿಗಳು ಮತ್ತು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



******


(ಪ್ರಕಟಣೆ ಐ.ಡಿ.: 2228771) ವಿಸಿಟರ್ ಕೌಂಟರ್ : 38
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , हिन्दी , Gujarati , Tamil