ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಹೆಣ್ಣು ಮಕ್ಕಳ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣಕ್ಕಾಗಿ ಸಾಧಿಸಲು ಸರ್ಕಾರದಿಂದ ಬಹುಮುಖಿ ವಿಧಾನ ಅಳವಡಿಕೆ
ಪ್ರಕಟಣಾ ದಿನಾಂಕ:
13 FEB 2026 3:01PM by PIB Bengaluru
ದೇಶದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ, ಭದ್ರತೆ ಮತ್ತು ಸಬಲೀಕರಣಕ್ಕೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತದೆ. ಆ ನಿಟ್ಟಿನಲ್ಲಿ ಹೆಣ್ಣು ಮಕ್ಕಳ ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣವನ್ನು ಸಾಧಿಸಲು ಸರ್ಕಾರ ಬಹುಮುಖಿ ವಿಧಾನವನ್ನು ಅಳವಡಿಸಿಕೊಂಡಿದೆ.
ಮಕ್ಕಳ ಲಿಂಗಾನುಪಾತ (ಸಿಎಸ್‌ಆರ್) ಮತ್ತು ಜೀವನ ಚಕ್ರದ (ಲೈಫ್ ಸೈಕಲ್) ನಿರಂತರತೆಯಲ್ಲಿ ಯುವತಿಯರು ಮತ್ತು ಮಹಿಳೆಯರ ಸಬಲೀಕರಣದ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡಲು ಬೇಟಿ ಬಚಾವೊ ಬೇಟಿ ಪಡಾವೊ (ಬಿಬಿಬಿಪಿ) ಯೋಜನೆಯನ್ನು 2015ರ ಜನವರಿ 22 ರಂದು ಆರಂಭಿಸಲಾಯಿತು. ಬೇಟಿ ಬಚಾವೊ ಬೇಟಿ ಪಡಾವೊ (ಬಿಬಿಬಿಪಿ) ಯೋಜನೆಯು ಸರ್ಕಾರಿ ಸಂಸ್ಥೆಗಳು, ಸಮುದಾಯಗಳು, ಮಾಧ್ಯಮ, ನಾಗರಿಕ ಸಮಾಜ ಮತ್ತು ಸಾರ್ವಜನಿಕರನ್ನು ಒಳಗೊಂಡಂತೆ ವಿವಿಧ ಪಾಲುದಾರರನ್ನು ಸಜ್ಜುಗೊಳಿಸುವ ಮೂಲಕ ನೀತಿ ಉಪಕ್ರಮದಿಂದ ರಾಷ್ಟ್ರೀಯ ಚಳವಳಿಯಾಗಿ ಪರಿವರ್ತನೆಯಾಗಿದೆ. ಈ ಆಂದೋಲನವು ಲಿಂಗಾನುಪಾತ ಮತ್ತು ಲಿಂಗ ಆಧಾರಿತ ತಾರತಮ್ಯಕ್ಕೆ ಸಂಬಂಧಿಸಿದ ತಕ್ಷಣದ ಕಾಳಜಿಗಳನ್ನು ಪರಿಹರಿಸುವುದು ಮಾತ್ರವಲ್ಲದೆ ಹೆಣ್ಣು ಮಗುವನ್ನು ಮೌಲ್ಯೀಕರಿಸುವ ಮತ್ತು ಅವಳ ಹಕ್ಕುಗಳು ಮತ್ತು ಅವಕಾಶಗಳನ್ನು ಖಾತರಿಪಡಿಸುವ ಕಡೆಗೆ ಸಾಂಸ್ಕೃತಿಕ ಬದಲಾವಣೆಯನ್ನು ಬೆಳೆಸುವ ಗುರಿ ಹೊಂದಿದೆ. ಈ ಯೋಜನೆಯು ಎಲ್ಲಾ ಪಾಲುದಾರರಿಗೆ ಮಾಹಿತಿ ನೀಡುವ, ಉತ್ತೇಜಿಸುವ, ಪ್ರೇರೇಪಿಸುವ, ತೊಡಗಿಸಿಕೊಳ್ಳುವ ಮತ್ತು ಸಬಲೀಕರಣಗೊಳಿಸುವ ಮೂಲಕ ಹೆಣ್ಣು ಮಗುವಿನ ಕಡೆಗೆ ಮನಸ್ಥಿತಿ ಮತ್ತು ನಡವಳಿಕೆಯ ಬದಲಾವಣೆ ಮಾಡುವುದರ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸುತ್ತದೆ.
ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ, ವಿಶೇಷವಾಗಿ ದೇಶದ ಗ್ರಾಮೀಣ ಪ್ರದೇಶಗಳಲಲ್ಲಿ, ಹೆಣ್ಣು ಮಕ್ಕಳು ಮತ್ತು ಮಹಿಳೆಯರ ಜೀವನ ಸುಲಭಗೊಳಿಸುವ ಸಲುವಾಗಿ 11.8 ಕೋಟಿಗೂ ಅಧಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆ (ಎಸ್ ಎಸ್ ವೈ) ಹೆಣ್ಣು ಮಕ್ಕಳ ಭವಿಷ್ಯವನ್ನು ಸುರಕ್ಷಿತಗೊಳಿಸಲು ವಿನ್ಯಾಸಗೊಳಿಸಲಾದ ಸಣ್ಣ ಉಳಿತಾಯ ಯೋಜನೆಯಾಗಿದ್ದು, ಹೆಚ್ಚಿನ ಬಡ್ಡಿದರವನ್ನು ನೀಡುತ್ತದೆ. ಸಮಗ್ರ ಶಿಕ್ಷಾ ಎಂಬುದು ಪ್ರಿಸ್ಕೂಲ್‌ನಿಂದ ಹನ್ನೆರಡನೇ ತರಗತಿಯವರೆಗೆ ಶಾಲಾ ಶಿಕ್ಷಣಕ್ಕಾಗಿ ಒಂದು ಸಂಯೋಜಿತ ಯೋಜನೆಯಾಗಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ 2020 ಮತ್ತು ಶಿಕ್ಷಣ ಹಕ್ಕು ಕಾಯ್ದೆ 2009 ರ ಅನುಷ್ಠಾನವನ್ನು ಬೆಂಬಲಿಸುತ್ತದೆ. ಇದು ಬಾಲ್ಯದ ಆರೈಕೆ ಮತ್ತು ಶಿಕ್ಷಣ, ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರ, ಸಮಗ್ರ ಮತ್ತು ಅಂತರ್ಗತ ಪಠ್ಯಕ್ರಮ, ಕಲಿಕೆಯ ಫಲಿತಾಂಶಗಳನ್ನು ಹೆಚ್ಚಿಸುವುದು, ಸಾಮಾಜಿಕ ಮತ್ತು ಲಿಂಗ ಅಂತರಗಳನ್ನು ನಿವಾರಿಸುವುದು ಮತ್ತು ಎಲ್ಲಾ ಶಿಕ್ಷಣ ಹಂತಗಳಲ್ಲಿ ಸಮಾನತೆ ಮತ್ತು ಸೇರ್ಪಡೆಯನ್ನು ಖಾತ್ರಿಪಡಿಸಿಕೊಳ್ಳುವುದನ್ನು ಒತ್ತಿಹೇಳುತ್ತದೆ.
ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ (ಕೆಜಿಬಿವಿ) ಯೋಜನೆಯು ಹನ್ನೆರಡನೇ ತರಗತಿಯವರೆಗಿನ ಬಾಲಕಿಯರಿಗೆ ವಸತಿ ಶಾಲಾ ಸೌಲಭ್ಯಗಳನ್ನು ಒದಗಿಸುವ ಮೂಲಕ ಶಾಲಾ ಶಿಕ್ಷಣದಲ್ಲಿನ ಲಿಂಗ ಮತ್ತು ಸಾಮಾಜಿಕ ವರ್ಗದ ಅಂತರವನ್ನು ತಗ್ಗಿಸಲು ಪ್ರಯತ್ನಿಸುತ್ತದೆ. ಈ ಯೋಜನೆಯಡಿಯಲ್ಲಿ, ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಇತರ ಹಿಂದುಳಿದ ವರ್ಗ (ಒಬಿಸಿ), ಅಲ್ಪಸಂಖ್ಯಾತ ಸಮುದಾಯಗಳು ಮತ್ತು ಬಿಪಿಎಲ್ ಕುಟುಂಬಗಳ 10-18 ವರ್ಷ ವಯಸ್ಸಿನ ಯುವತಿಯರನ್ನು ಒಳಗೊಂಡಿದೆ.
ಹದಿಹರೆಯದ ಯುವತಿಯರ ಯೋಜನೆಯನ್ನು (ಎಸ್‌ಎಜಿ) ಮಿಷನ್ ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಅಡಿಯಲ್ಲಿ 2022ರ ಏ.1 ರಿಂದ ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ ಉದ್ದೇಶಿತ ಫಲಾನುಭವಿಗಳು ಆಶೋತ್ತರ ಜಿಲ್ಲೆಗಳು ಮತ್ತು ಎಲ್ಲಾ ಈಶಾನ್ಯ ರಾಜ್ಯಗಳಲ್ಲಿ 14 - 18 ವರ್ಷ ವಯಸ್ಸಿನ ಯುವತಿಯರು.
ವಿಜ್ಞಾನ ಜ್ಯೋತಿ ಕಾರ್ಯಕ್ರಮವು ಲಿಂಗ ಸಮತೋಲನವನ್ನು ಸುಧಾರಿಸಲು ಹುಡುಗಿಯರು ಎಸ್ ಟಿಇಎಂ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ) ಕ್ಷೇತ್ರಗಳಲ್ಲಿ ಶಿಕ್ಷಣ ಮತ್ತು ವೃತ್ತಿಜೀವನವನ್ನು ಮುಂದುವರಿಸಲು ಪ್ರೋತ್ಸಾಹಿಸುತ್ತದೆ. ಇದು ಒಂಬತ್ತನೇ ತರಗತಿಯಿಂದ ಹನ್ನೆರಡನೇ ತರಗತಿಯವರೆಗಿನ ಪ್ರತಿಭಾನ್ವಿತ ಯುವತಿಯರನ್ನು ಗುರಿಯಾಗಿರಿಸಿಕೊಂಡಿದೆ ಮತ್ತು ವಿದ್ಯಾರ್ಥಿ-ಪೋಷಕರ ಸಮಾಲೋಚನೆ, ವೃತ್ತಿ ಸಮಾಲೋಚನೆ, ಹೆಚ್ಚುವರಿ ಶೈಕ್ಷಣಿಕ ಬೆಂಬಲ ತರಗತಿಗಳು, ಟಿಂಕರಿಂಗ್ ಚಟುವಟಿಕೆಗಳು, ವಿಶೇಷ ಉಪನ್ಯಾಸಗಳು, ವೈಜ್ಞಾನಿಕ ಸಂಸ್ಥೆಗಳು, ಪ್ರಯೋಗಾಲಯಗಳು, ಕೈಗಾರಿಕೆಗಳು ಮತ್ತು ವಿಜ್ಞಾನ ಶಿಬಿರಗಳು ಮತ್ತು ಕಾರ್ಯಾಗಾರಗಳಿಗೆ ಭೇಟಿಗಳನ್ನು ಒಳಗೊಂಡಿದೆ.
ಒಂಟಿ ಹೆಣ್ಣು ಮಕ್ಕಳು ಸೇರಿ ಯುವತಿಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ಖಾತ್ರಿಪಡಿಸಿಕೊಳ್ಳುವ ಉದ್ದೇಶದಿಂದ ಸರ್ಕಾರವು ಸಮಗ್ರ ಕೌಶಲ್ಯ ಅಭಿವೃದ್ಧಿ ಮತ್ತು ವೃತ್ತಿಪರ ತರಬೇತಿಯನ್ನು ಒದಗಿಸಲು ಕೌಶಲ್ಯ ಭಾರತ ಮಿಷನ್ ಅನ್ನು ಆರಂಭಿಸಿದೆ. ಸರ್ಕಾರವು ದೇಶಾದ್ಯಂತ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಡಿಯಲ್ಲಿ ಪ್ರಧಾನ ಮಂತ್ರಿ ಕೌಶಲ ಕೇಂದ್ರಗಳನ್ನು ಸ್ಥಾಪಿಸಿದೆ. ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (ಪಿಎಂಕೆವಿವೈ) ಅಡಿಯಲ್ಲಿ, ಮಹಿಳೆಯರಿಗೆ ಕೌಶಲ್ಯ ಮತ್ತು ವೃತ್ತಿಪರ ತರಬೇತಿಯನ್ನು ನೀಡಲಾಗುವುದು.
ಅಲ್ಲದೆ, ಪಿಎಂಕೆವಿವೈ 4.0 ಮಹಿಳೆಯರನ್ನು ಪ್ರಾಥಮಿಕ ಫಲಾನುಭವಿಗಳಾಗಿ ಒತ್ತು ನೀಡುವ ಯೋಜನೆಗಳಿಗೆ ಆದ್ಯತೆ ನೀಡುತ್ತದೆ ಮತ್ತು ವಿಶೇಷ ಗಮನವನ್ನು ನೀಡುತ್ತದೆ. ಈ ಎಲ್ಲರನ್ನೂ ಒಳಗೊಂಡ ವಿಧಾನವು ದೇಶಾದ್ಯಂತ ಕೌಶಲ್ಯ ತರಬೇತಿ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ಗಮನಾರ್ಹ ಪ್ರಾತಿನಿಧ್ಯ ಮತ್ತು ಪ್ರಯೋಜನವನ್ನು ಖಾತ್ರಿಪಡಿಸುತ್ತದೆ.
ದೀನದಯಾಳ್ ಅಂತ್ಯೋದಯ ಯೋಜನೆ - ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಡಿಎವೈ-ಎನ್ ಆರ್ ಎಲ್ ಎಂ), ಇದರ ಅಡಿಯಲ್ಲಿ ಮಹಿಳಾ ಸ್ವ-ಸಹಾಯ ಗುಂಪುಗಳು ಉದ್ಯೋಗ ಮತ್ತು ಸ್ವ-ಉದ್ಯೋಗಕ್ಕಾಗಿ ಗ್ರಾಮೀಣ ಆಯಾಮವನ್ನು ಬದಲಾಯಿಸುತ್ತಿವೆ. ಅದೇ ರೀತಿ ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (ಎನ್ ಯುಎಲ್ ಎಂ) ನಗರ ಪ್ರದೇಶಗಳಲ್ಲಿ ಜಾರಿಗೊಳಿಸಲಾಗಿದೆ. ಅಲ್ಲದೆ,ಉದ್ಯೋಗ/ಸ್ವ-ಉದ್ಯೋಗ ಮತ್ತು ಸಾಲ ಸೌಲಭ್ಯಗಳನ್ನು ಒದಗಿಸಲು ಸ್ಟ್ಯಾಂಡ್-ಅಪ್ ಇಂಡಿಯಾ, ಸ್ಟಾರ್ಟ್-ಅಪ್ ಇಂಡಿಯಾ, ಪ್ರಧಾನ ಮಂತ್ರಿ ಬೀದಿ ಮಾರಾಟಗಾರರ ಆತ್ಮನಿರ್ಭರನಿಧಿ (ಪಿಎಂ-ಸ್ವನಿಧಿ), ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನ್ರೇಗಾ) ದಂತಹ ಯೋಜನೆಗಳಿವೆ. ಈ ಯೋಜನೆಗಳಡಿಯಲ್ಲಿ ಹೆಚ್ಚಿನ ಫಲಾನುಭವಿಗಳು ಮಹಿಳೆಯರಾಗಿದ್ದಾರೆ.
2017 ರಲ್ಲಿ ಮೊದಲ ಎರಡು ಮಕ್ಕಳಿಗೆ ಪಾವತಿಸಿದ ಮಾತೃತ್ವ ರಜೆಯನ್ನು 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಲು ಮಾತೃತ್ವ ಸೌಲಭ್ಯ ಕಾಯ್ದೆಯನ್ನು ತಿದ್ದುಪಡಿ ಮಾಡಲಾಯಿತು. ಈ ಕಾಯ್ದೆಯು ಐವತ್ತು ಅಥವಾ ಅದಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ಎಲ್ಲಾ ಸಂಸ್ಥೆಗಳಲ್ಲಿ ನಿಗದಿತ ದೂರದಲ್ಲಿ ಮಹಿಳಾ ಕಾರ್ಮಿಕರಿಗೆ ಮತ್ತು ಶಿಶುವಿಹಾರ ಸೌಲಭ್ಯಕ್ಕೆ ಸಹ ಅವಕಾಶ ನೀಡುತ್ತದೆ.
2016ರ ಏ.5 ರಂದು ಸ್ಟ್ಯಾಂಡ್-ಅಪ್ ಇಂಡಿಯಾ ಯೋಜನೆಯನ್ನು ಆರಂಭಿಸಲಾಯಿತು. ಇದು ಪರಿಶಿಷ್ಟ ವಾಣಿಜ್ಯ ಬ್ಯಾಂಕುಗಳಿಂದ (ಎಸ್ ಸಿಬಿ) 10 ಲಕ್ಷ ರೂ,ಗಳಿಂದ 1 ಕೋಟಿ ರೂಪಾಯಿವರೆಗಿನ ಮೌಲ್ಯದ ಸಾಲವನ್ನು ಕನಿಷ್ಠ ಒಬ್ಬ ಪರಿಶಿಷ್ಟ ಜಾತಿ (ಎಸ್ ಸಿ) ಅಥವಾ ಪರಿಶಿಷ್ಟ ಪಂಗಡ (ಎಸ್ ಟಿ) ಸಾಲಗಾರರಿಗೆ ಮತ್ತು ಪ್ರತಿ ಬ್ಯಾಂಕ್ ಶಾಖೆಗೆ ಒಬ್ಬ ಮಹಿಳಾ ಸಾಲಗಾರರಿಗೆ ಉತ್ಪಾದನೆ, ಸೇವೆಗಳು ಅಥವಾ ವ್ಯಾಪಾರ ವಲಯದಲ್ಲಿ ಹಸಿರು ಕ್ಷೇತ್ರ ಉದ್ಯಮವನ್ನು ಸ್ಥಾಪಿಸಲು ಅನುಕೂಲವಾಗುವಂತೆ ಮಾಡುವ ಗುರಿಯನ್ನು ಹೊಂದಿದೆ. ಈ ಯೋಜನೆಯನ್ನು 2025 ರವರೆಗೆ ವಿಸ್ತರಿಸಲಾಗಿದೆ.
ಮಹಿಳೆಯರು ತಮ್ಮದೇ ಆದ ಉದ್ಯಮಗಳನ್ನು ಸ್ಥಾಪಿಸಲು ಸಹಾಯ ಮಾಡಲು ಪ್ರಧಾನ ಮಂತ್ರಿ ಮುದ್ರಾ ಯೋಜನೆ ಮತ್ತು ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮ (ಪಿಎಂಇಜಿಪಿ) ಯಂತಹ ಯೋಜನೆಗಳನ್ನು ಆರಂಭಿಸಲಾಗಿದೆ.
ರಾಜಕೀಯ ನಾಯಕತ್ವದ ಮುಖ್ಯವಾಹಿನಿಗೆ ಮಹಿಳೆಯರನ್ನು ತರುವ ಸಲುವಾಗಿ ಸರ್ಕಾರವು ಸಂವಿಧಾನದ 73ನೇ ತಿದ್ದುಪಡಿಯ ಮೂಲಕ ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ (ಪಿಆರ್ ಐ) ಕನಿಷ್ಠ ಶೇ.33 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಟ್ಟಿದೆ. ಲಭ್ಯವಿರುವ ಮಾಹಿತಿಯ ಪ್ರಕಾರ ಪಿಆರ್ ಐ ಗಳಲ್ಲಿ 12.06 ಲಕ್ಷಕ್ಕೂ ಹೆಚ್ಚು ಚುನಾಯಿತ ಮಹಿಳಾ ಪ್ರತಿನಿಧಿಗಳು (ಇಡಬ್ಲೂಆರ್ ) ಇದ್ದಾರೆ, ಇದು ಒಟ್ಟು ಚುನಾಯಿತ ಪ್ರತಿನಿಧಿಗಳಲ್ಲಿ ಸರಿಸುಮಾರು ಶೇ.49.75 ರಷ್ಟಾಗಿದೆ.
ದೇಶದ ಅತ್ಯುನ್ನತ ರಾಜಕೀಯ ಕಚೇರಿಗಳಲ್ಲಿ ಮಹಿಳಾ ಸಬಲೀಕರಣ ಮತ್ತು ಪ್ರಾತಿನಿಧ್ಯಕ್ಕಾಗಿ ಸರ್ಕಾರವು 2023ರ ಸೆಪ್ಟೆಂಬರ್ 28 ರಂದು ನಾರಿ ಶಕ್ತಿ ವಂದನ ಅಧಿನಿಯಮ 2023 (ಸಂವಿಧಾನ ನೂರ ಆರನೇ ತಿದ್ದುಪಡಿ) ಕಾಯ್ದೆ 2023 ರ ಅಧಿಸೂಚನೆಯನ್ನು ಹೊರಡಿಸಿದೆ. ಇದು ದೆಹಲಿಯ ಎನ್ ಸಿಟಿಯ ಶಾಸಕಾಂಗ ಸಭೆ ಸೇರಿದಂತೆ ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಕಾಯ್ದಿರಿಸಲು ಉದ್ದೇಶಿಸಿದೆ.
ಮಿಷನ್ ಶಕ್ತಿಯು ಮಹಿಳಾ ಸುರಕ್ಷತೆ, ಭದ್ರತೆ ಮತ್ತು ಸಬಲೀಕರಣಕ್ಕಾಗಿ ಮಧ್ಯಸ್ಥಿಕೆಗಳನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ಮಿಷನ್ ಶಕ್ತಿಯು ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗಾಗಿ 'ಸಂಬಲ್' ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ 'ಸಾಮರ್ಥ್ಯ' ಎಂಬ ಎರಡು ವಿಭಾಗಗಳನ್ನು ಒಳಗೊಂಡಿದೆ. 'ಸಂಬಲ್' ಒನ್ ಸ್ಟಾಪ್ ಸೆಂಟರ್ (ಒಎಸ್ ಸಿ), ಮಹಿಳಾ ಸಹಾಯವಾಣಿ (ಡಬ್ಲೂಎಚ್ ಎಲ್), ಬೇಟಿ ಬಚಾವೊ ಬೇಟಿ ಪಡಾವೊ (ಬಿಬಿಬಿಪಿ) ಮತ್ತು ನಾರಿ ಅದಾಲತ್ (ನಾರಿ ಅದಾಲತ್) ಘಟಕಗಳನ್ನು ಒಳಗೊಂಡಿದೆ. 'ಸಮರ್ಥ್ಯ' ಶಕ್ತಿ ಸದನ್, ಸಖಿ ನಿವಾಸ್, ಪಧಾನ್ ಮಂತ್ರಿ ಮಾತೃ ವಂದನಾ ಯೋಜನೆ (ಪಿಎಂಎಂವಿವೈ), ಪಲ್ನಾ ಮತ್ತು ಸಂಕಲ್ಪ: ಮಹಿಳಾ ಸಬಲೀಕರಣ ಕೇಂದ್ರ (ಸಂಕಲ್ಪ: ಎಚ್ ಇಡಬ್ಲೂ) ಘಟಕಗಳನ್ನು ಒಳಗೊಂಡಿದೆ.
ಭಾರತ ಸರ್ಕಾರವು ಯುವತಿಯರು ಮತ್ತು ಮಹಿಳೆಯರನ್ನು ಸಬಲೀಕರಣಗೊಳಿಸಲು ಮತ್ತು ವ್ಯಾಪಕ ಶ್ರೇಣಿಯ ಯೋಜನೆಗಳು ಮತ್ತು ಉಪಕ್ರಮಗಳ ಮೂಲಕ ಲಿಂಗ ತಾರತಮ್ಯವನ್ನು ಕೊನೆಗೊಳಿಸಲು ಸಮಗ್ರ ಮತ್ತು ಎಲ್ಲವನ್ನೂ ಒಳಗೊಂಡ ವಿಧಾನವನ್ನು ಅಳವಡಿಸಿಕೊಂಡಿದೆ. ಈ ಕ್ರಮಗಳು ಒಟ್ಟಾಗಿ ಸುರಕ್ಷತೆ ಮತ್ತು ಭದ್ರತೆ ಖಾತ್ರಿಪಡಿಸುವುದು, ಉದ್ಯೋಗಾವಕಾಶವನ್ನು ಸುಧಾರಿಸುವುದು, ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ಮಹಿಳೆಯರಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ (ಎಂಒಎಚ್ ಎಫ್ ಡಬ್ಲೂ) ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಯ (ಎಚ್ ಎಂಐಎಸ್) ಇತ್ತೀಚಿನ ವರದಿಯ ಪ್ರಕಾರ, ರಾಷ್ಟ್ರೀಯ ಮಟ್ಟದಲ್ಲಿ ಜನನದ ಸಮಯದಲ್ಲಿ ಲಿಂಗ ಅನುಪಾತ (ಎಸ್ ಆರ್ ಬಿ) 2014-15ರಲ್ಲಿ 918 ರಿಂದ 2024-25ರಲ್ಲಿ 929 ಕ್ಕೆ ಏರಿದೆ.
ಅಲ್ಲದೆ, ಭ್ರೂಣದ ಲಿಂಗವನ್ನು ಪತ್ತೆಹಚ್ಚುವ ಮತ್ತು ಬಹಿರಂಗಪಡಿಸುವ ಸಾಮರ್ಥ್ಯವಿರುವ ತಂತ್ರಜ್ಞಾನಗಳ ಬಳಕೆಯನ್ನು ನಿಯಂತ್ರಿಸಲು ಗರ್ಭಧಾರಣೆ ಪೂರ್ವ ಮತ್ತು ಪ್ರಸವಪೂರ್ವ ರೋಗನಿರ್ಣಯ ತಂತ್ರಗಳು (ಲಿಂಗ ಆಯ್ಕೆ ನಿಷೇಧ) ಕಾಯ್ದೆ, 1994 ಅನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (MoHFW) ನಿರ್ವಹಿಸುತ್ತದೆ. ಗರ್ಭಧಾರಣೆಯ ಮೊದಲು ಅಥವಾ ನಂತರ ಲಿಂಗ ಆಯ್ಕೆಯ ನಿಷೇಧಕ್ಕಾಗಿ ಮತ್ತು ಆನುವಂಶಿಕ ಅಸಹಜತೆಗಳು ಅಥವಾ ಚಯಾಪಚಯ ಅಸ್ವಸ್ಥತೆಗಳು ಅಥವಾ ವರ್ಣತಂತು ಅಸಹಜತೆಗಳು ಅಥವಾ ಕೆಲವು ಜನ್ಮಜಾತ ಅಸಮರ್ಪಕ ಕಾರ್ಯಗಳು ಅಥವಾ ಲಿಂಗ-ಸಂಬಂಧಿತ ಅಸ್ವಸ್ಥತೆಗಳನ್ನು ಪತ್ತೆಹಚ್ಚುವ ಉದ್ದೇಶಗಳಿಗಾಗಿ ಪ್ರಸವಪೂರ್ವ ರೋಗನಿರ್ಣಯ ತಂತ್ರಗಳ ನಿಯಂತ್ರಣಕ್ಕಾಗಿ ಮತ್ತು ಹೆಣ್ಣು ಭ್ರೂಣಹತ್ಯೆಗೆ ಕಾರಣವಾಗುವ ಲಿಂಗ ನಿರ್ಣಯಕ್ಕಾಗಿ ಅವುಗಳ ದುರುಪಯೋಗವನ್ನು ತಡೆಗಟ್ಟಲು ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಪ್ರಾಸಂಗಿಕ ವಿಷಯಗಳಿಗಾಗಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿದೆ.
ಪಿಸಿ&ಪಿಎನ್‌ಡಿಟಿ ಕಾಯ್ದೆಯು ಲಿಂಗ ಪಕ್ಷಪಾತದ ಲಿಂಗ-ಆಯ್ದ ಪದ್ಧತಿಗಳನ್ನು ನಿಗ್ರಹಿಸಲು ಮತ್ತು ಲಿಂಗ-ಸೂಕ್ಷ್ಮ ನೀತಿಗಳು, ಜಾಗೃತಿ ಮೂಡಿಸುವಿಕೆ ಮತ್ತು ಶಾಸಕಾಂಗ ಕ್ರಮಗಳ ಮೂಲಕ ಹೆಣ್ಣು ಮಗುವಿಗೆ ಸಕಾರಾತ್ಮಕ ವಾತಾವರಣವನ್ನು ಉತ್ತೇಜಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಏಕರೂಪವಾಗಿ ಜಾರಿಗೆ ತರಲಾದ ಕೇಂದ್ರ ಶಾಸನವಾಗಿದೆ.
ಗರ್ಭಧಾರಣೆ ಪೂರ್ವ ಮತ್ತು ಪ್ರಸವಪೂರ್ವ ರೋಗಪತ್ತೆ ತಂತ್ರಗಳ ಕಾಯ್ದೆ (ಪಿಸಿ&ಪಿಎನ್‌ಡಿಟಿ) ಯ ಪರಿಣಾಮಕಾರಿ ಜಾರಿಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ತೆಗೆದುಕೊಂಡ ಕ್ರಮಗಳು ಈ ಕೆಳಗಿನಂತಿವೆ:
- ಪಿಸಿ&ಪಿಎನ್‌ಡಿಟಿ ಕಾಯ್ದೆಯ ಕುರಿತು ಸಂವೇದನೆ ಮತ್ತು ಸಾಮರ್ಥ್ಯ ವೃದ್ಧಿಗಾಗಿ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಬೆಂಬಲ ನೀಡುವುದು.
- ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ ಎಚ್ ಎಂ) ಅಡಿಯಲ್ಲಿ, ಪಿಸಿ&ಪಿಎನ್ ಡಿಟಿ ಕಾಯ್ದೆಯ ಅನುಷ್ಠಾನವನ್ನು ಬಲಪಡಿಸಲು ಎಂಒಎಚ್ ಎಫ್ ಡಬ್ಲೂ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಆರ್ಥಿಕ ಬೆಂಬಲವನ್ನು ಒದಗಿಸುತ್ತದೆ.
- ನಡವಳಿಕೆಯಲ್ಲಿನ ಬದಲಾವಣೆಯನ್ನು ಬೆಳೆಸುವ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ ಮಾಹಿತಿ, ಶಿಕ್ಷಣ ಮತ್ತು ಸಂವಹನ (ಐಇಸಿ) ಮತ್ತು ಸಹಾಯಕ ಚಟುವಟಿಕೆಗಳಿಗೆ ಬೆಂಬಲ ವಿಸ್ತರಿಸಲಾಗುತ್ತಿದೆ.
- ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸುವ ಆನ್‌ಲೈನ್ ಜಾಹೀರಾತುಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ತೆಗೆದುಹಾಕಲು ಅನುಕೂಲವಾಗುವಂತೆ ಗೌರವಾನ್ವಿತ ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಎಂಒಎಚ್ ಎಫ್ ಡಬ್ಲೂ 'ನೋಡಲ್ ಏಜೆನ್ಸಿ'ಯನ್ನು ರಚಿಸಿದೆ.
- ಪಿಸಿ &ಪಿಎನ್ ಡಿಟಿ ಕಾಯ್ದೆಯ ತಳಮಟ್ಟದ ಅನುಷ್ಠಾನವನ್ನು ಮತ್ತಷ್ಟು ಬಲಪಡಿಸಲು ಕೇಂದ್ರ, ರಾಜ್ಯಗಳು ಮತ್ತು ಜಿಲ್ಲೆಗಳು ಸಾಮಾನ್ಯ ಪರಿಶೀಲನಾ ಮಿಷನ್ ಭೇಟಿಗಳು, ತಪಾಸಣೆ ಮತ್ತು ಮೇಲ್ವಿಚಾರಣಾ ಭೇಟಿಗಳಂತಹ ವಿವಿಧ ಸಾಂಸ್ಥಿಕ ಕಾರ್ಯವಿಧಾನಗಳ ಮೂಲಕ ನಿಯಮಿತ ಪರಿಶೀಲನೆ ಮತ್ತು ಮೌಲ್ಯಮಾಪನವನ್ನು ನಡೆಸುತ್ತವೆ.
ಪಿಸಿ &ಪಿಎನ್ ಡಿಟಿ ಗೆ ಸಂಬಂಧಿಸಿದ ವಿವರವಾದ ಮಾಹಿತಿಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ 2024-25 ರ ವಾರ್ಷಿಕ ವರದಿಯಲ್ಲಿ ಕೆಳಗೆ ತಿಳಿಸಲಾದ ಲಿಂಕ್‌ನಲ್ಲಿ ಲಭ್ಯವಿದೆ:
https://mohfw.gov.in/?q=en/publications-12
ಈ ಮಾಹಿತಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ರಾಜ್ಯ ಸಚಿವರಾದ ಶ್ರೀಮತಿ ಸಾವಿತ್ರಿ ಠಾಕೂರ್ ಅವರು ಲೋಕಸಭೆಯಲ್ಲಿಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ನೀಡಿದ್ದಾರೆ.
*****
(ಪ್ರಕಟಣೆ ಐ.ಡಿ.: 2227577)
ವಿಸಿಟರ್ ಕೌಂಟರ್ : 5