ರೈಲ್ವೇ ಸಚಿವಾಲಯ
ಈಶಾನ್ಯದ ಅಭಿವೃದ್ಧಿಗೆ ಹೊಸ ವೇಗ; ಗುವಾಹಟಿ ನಿಲ್ದಾಣದಲ್ಲಿ ಸಂಯೋಜಿತ ಅತಿಥ್ಯ ಸೇವೆಗಳಿಗೆ ಚಾಲನೆ ನೀಡಿದ ಅಶ್ವಿನಿ ವೈಷ್ಣವ್
ಸೈರಾಂಗ್ - ಸಿಲ್ಚಾರ್ ರೈಲಿಗೆ ಅಶ್ವಿನಿ ವೈಷ್ಣವ್ ಹಸಿರು ನಿಶಾನೆ; ಈಶಾನ್ಯದ ರೈಲ್ವೆ ಸಂಪರ್ಕಕ್ಕೆ ಭಾರಿ ಉತ್ತೇಜನ
ಪ್ರಕಟಣಾ ದಿನಾಂಕ:
09 FEB 2026 4:31PM by PIB Bengaluru
ಈಶಾನ್ಯ ರಾಜ್ಯಗಳ ರೈಲ್ವೆ ಸಂಪರ್ಕವನ್ನು ಬಲಪಡಿಸಲು ಮತ್ತು ಅಭಿವೃದ್ಧಿಗೆ ಹೊಸ ವೇಗವನ್ನು ನೀಡಲು, ಕೇಂದ್ರ ರೈಲ್ವೆ, ವಾರ್ತಾ ಮತ್ತು ಬ್ರಾಡ್ಕಾಸ್ಟಿಂಗ್ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಅಸ್ಸಾಂನ ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ಸಂಯೋಜಿತ ಅತಿಥ್ಯ (blended hospitality) ಸೇವೆಗಳನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಅವರು ಸೈರಾಂಗ್ ಮತ್ತು ಸಿಲ್ಚಾರ್ ನಡುವಿನ ಹೊಸ ರೈಲು ಸೇವೆಗೆ ಹಸಿರು ನಿಶಾನೆ ತೋರಿಸಿದರು. ಮಿಜೋರಾಂ ಮುಖ್ಯಮಂತ್ರಿ ಶ್ರೀ ಲಾಲ್ದುಹೋಮ, ಸಿಲ್ಚಾರ್ ಸಂಸದ ಶ್ರೀ ಪರಿಮಳ್ ಸುಕ್ಲಾಬೈದ್ಯ, ರಾಜ್ಯಸಭಾ ಸದಸ್ಯ ಶ್ರೀ ಕಣಾದ್ ಪುರ್ಕಾಯಸ್ಥ ಮತ್ತು ಇತರ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸೈರಾಂಗ್ - ಸಿಲ್ಚಾರ್ ಪ್ಯಾಸೆಂಜರ್ ರೈಲು ಮಿಜೋರಾಂ ರಾಜಧಾನಿಯನ್ನು ಅಸ್ಸಾಂನ ಬರಾಕ್ ಕಣಿವೆಯೊಂದಿಗೆ ನೇರವಾಗಿ ಸಂಪರ್ಕಿಸಲಿದ್ದು, ಪ್ರಾದೇಶಿಕ ಏಕೀಕರಣವನ್ನು ಸುಧಾರಿಸುತ್ತದೆ. ಅಲ್ಲದೆ, ಇದು ವಿದ್ಯಾರ್ಥಿಗಳಿಗೆ, ದಿನನಿತ್ಯದ ಪ್ರಯಾಣಿಕರಿಗೆ ಮತ್ತು ರೋಗಿಗಳಿಗೆ ಸುರಕ್ಷಿತ, ವೇಗದ ಮತ್ತು ಆರಾಮದಾಯಕ ಪ್ರಯಾಣವನ್ನು ಒದಗಿಸುತ್ತದೆ.
ಅದೇ ಸಮಯದಲ್ಲಿ, ಗುವಾಹಟಿ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾಗಿರುವ ಸ್ಲೀಪಿಂಗ್ ಪಾಡ್ ಗಳು, ಆಧುನಿಕ ಹವಾನಿಯಂತ್ರಿತ ಲಾಂಜ್ ಮತ್ತು ಮಲ್ಟಿ-ಕ್ಯುಸಿನ್ ರೆಸ್ಟೋರೆಂಟ್ ಗಳು ಸೇರಿದಂತೆ ವಿವಿಧ ಆಧುನಿಕ ಆತಿಥ್ಯ ಸೌಲಭ್ಯಗಳು ಪ್ರಯಾಣಿಕರ ಅನುಕೂಲವನ್ನು ಹೆಚ್ಚಿಸಲಿವೆ. ಇವು ಪ್ರಯಾಣಿಕರಿಗೆ ಅತ್ಯಾಧುನಿಕ, ಶುಚಿಯಾದ ಮತ್ತು ಸ್ನೇಹಪರ ಪ್ರಯಾಣದ ಅನುಭವವನ್ನು ನೀಡುತ್ತವೆ. ಈ ಸೌಲಭ್ಯಗಳು ಪ್ರಯಾಣಿಕರಿಗೆ ಸುರಕ್ಷಿತ, ಅನುಕೂಲಕರ ಮತ್ತು ವಿಶ್ರಾಂತಿ ಪಡೆಯಲು ಪೂರಕವಾದ ವಾತಾವರಣವನ್ನು ಖಚಿತಪಡಿಸುವ ಮೂಲಕ, ನಿಲ್ದಾಣದ ಒಟ್ಟಾರೆ ಬಳಕೆಯ ಗುಣಮಟ್ಟವನ್ನು ಸುಧಾರಿಸುತ್ತವೆ.
ತಮ್ಮ ಭಾಷಣದಲ್ಲಿ ಶ್ರೀ ವೈಷ್ಣವ್ ಅವರು, ಕಳೆದ ದಶಕದಲ್ಲಿ ಸರ್ಕಾರವು ಈ ಭಾಗಕ್ಕೆ ರೈಲ್ವೆ ಅನುದಾನವನ್ನು ಗಣನೀಯವಾಗಿ ಹೆಚ್ಚಿಸಿದೆ ಎಂದು ತಿಳಿಸಿದರು. ಈಶಾನ್ಯ ರಾಜ್ಯಗಳಿಗಾಗಿ 2026-27ರ ಕೇಂದ್ರ ಬಜೆಟ್ ನಲ್ಲಿ ದಾಖಲೆಯ ₹11,486 ಕೋಟಿ ಅನುದಾನವನ್ನು ಮೀಸಲಿಡಲಾಗಿದೆ ಎಂದು ಅವರು ಹೇಳಿದರು. ಅಲ್ಲದೆ, ಈ ಪ್ರದೇಶದಲ್ಲಿ ಸುಮಾರು ₹72,468 ಕೋಟಿ ಮೌಲ್ಯದ ಯೋಜನೆಗಳು ಈಗಾಗಲೇ ಪ್ರಗತಿಯಲ್ಲಿದ್ದು, ಇದು ಮೂಲಸೌಕರ್ಯ ಮತ್ತು ಸಂಪರ್ಕ ವೃದ್ಧಿಗೆ ನೀಡುತ್ತಿರುವ ನಿರಂತರ ಆದ್ಯತೆಯನ್ನು ಒತ್ತಿಹೇಳುತ್ತದೆ ಎಂದು ಅವರು ಸೇರಿಸಿದರು.
ಈಶಾನ್ಯ ರಾಜ್ಯಗಳ ಅಭಿವೃದ್ಧಿಯು "ವಿಕಸಿತ ಭಾರತ" ನಿರ್ಮಾಣದ ಅವಿಭಾಜ್ಯ ಅಂಗವಾಗಿದೆ ಮತ್ತು ಪ್ರತಿಯೊಂದು ಪ್ರದೇಶವೂ ಒಟ್ಟಾಗಿ ಪ್ರಗತಿ ಸಾಧಿಸಬೇಕು ಎಂಬ ಪ್ರಧಾನಮಂತ್ರಿಯವರ ನಂಬಿಕೆಯನ್ನು ಈ ವಿಶೇಷ ಗಮನವು ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸಚಿವರು ತಿಳಿಸಿದರು. ರೈಲ್ವೆ ಸಂಪರ್ಕವು ಕೇವಲ ಪ್ರಯಾಣಿಕರ ಸಂಚಾರಕ್ಕೆ ಮಾತ್ರವಲ್ಲದೆ, ಸರಕುಗಳ ಸುಲಭ ಸಾಗಣೆ, ವ್ಯಾಪಾರ ವೃದ್ಧಿ ಮತ್ತು ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಅವಕಾಶಗಳನ್ನು ಕಲ್ಪಿಸುವ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ದೊಡ್ಡ ಉತ್ತೇಜನ ನೀಡುತ್ತದೆ ಎಂದು ಅವರು ಪ್ರತಿಪಾದಿಸಿದರು.
ಮಿಜೋರಾಂ ರಾಜಧಾನಿಯನ್ನು ಭಾರತೀಯ ರೈಲ್ವೆ ಜಾಲದೊಂದಿಗೆ ಸಂಪರ್ಕಿಸುವ ಬೈರಾಬಿ-ಸೈರಾಂಗ್ ರೈಲ್ವೆ ಮಾರ್ಗವು ಈ ವಿಸ್ತೃತ ಗಮನದ ಅಡಿಯಲ್ಲಿ ಪೂರ್ಣಗೊಂಡ ಐತಿಹಾಸಿಕ ಮತ್ತು ತಾಂತ್ರಿಕವಾಗಿ ಸವಾಲಿನ ಯೋಜನೆಯಾಗಿದೆ ಎಂದು ಶ್ರೀ ವೈಷ್ಣವ್ ಹೈಲೈಟ್ ಮಾಡಿದರು. ಪ್ರಧಾನಮಂತ್ರಿಯವರಿಂದ ಉದ್ಘಾಟಿಸಲ್ಪಟ್ಟ ಈ ರೈಲು ಸಂಪರ್ಕವನ್ನು ಹೆಚ್ಚುವರಿ ರೈಲು ಸೇವೆಗಳೊಂದಿಗೆ ಇನ್ನಷ್ಟು ಬಲಪಡಿಸಲಾಗುವುದು, ಇದು ಮಿಜೋರಾಂನಿಂದ ಅಸ್ಸಾಂ ಮತ್ತು ಅದಕ್ಕೂ ಮೀರಿದ ಪ್ರದೇಶಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ ಎಂದು ಅವರು ತಿಳಿಸಿದರು.
ಸೈರಾಂಗ್ ಮತ್ತು ಸಿಲ್ಚಾರ್ ನಡುವಿನ ಹೊಸ ಪ್ಯಾಸೆಂಜರ್ ರೈಲು ಸೇವೆಯು ಪ್ರಾದೇಶಿಕ ಏಕೀಕರಣವನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಮತ್ತು ದಕ್ಷಿಣ ಅಸ್ಸಾಂ, ಮಿಜೋರಾಂ ಮತ್ತು ಇತರ ಈಶಾನ್ಯ ರಾಜ್ಯಗಳ ನಿವಾಸಿಗಳಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಗಮನಸೆಳೆದರು.
ಶ್ರೀ ಲಾಲ್ದುಹೋಮ ಅವರು ರೈಲ್ವೆ ಸಚಿವರಿಗೆ ಕೃತಜ್ಞತೆ ಸಲ್ಲಿಸಿದರು. ಮಿಜೋರಾಂ ಮತ್ತು ಅಸ್ಸಾಂ ರಾಜ್ಯಗಳನ್ನು ಸಂಪರ್ಕಿಸುವ ವಿವಿಧ ರೈಲ್ವೆ ಯೋಜನೆಗಳು ಮತ್ತು ಉಪಕ್ರಮಗಳನ್ನು ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು, ಇವು ಈ ಭಾಗದ ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿವೆ.
ಕಳೆದ ದಶಕದಲ್ಲಿ, ಈಶಾನ್ಯ ರಾಜ್ಯಗಳ ರೈಲ್ವೆ ಭೂಪಟವು ವೇಗವಾಗಿ ರೂಪಾಂತರಗೊಂಡಿದೆ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಯೋಜನೆಗಳು ಈಗ ವಾಸ್ತವವಾಗಿವೆ ಮತ್ತು ಈ ರಾಜ್ಯಗಳ ರಾಜಧಾನಿಗಳು ರಾಷ್ಟ್ರೀಯ ರೈಲ್ವೆ ಜಾಲದೊಂದಿಗೆ ಸ್ಥಿರವಾಗಿ ಸಂಪರ್ಕ ಹೊಂದುತ್ತಿವೆ. ಕಳೆದ ವರ್ಷ ಮಿಜೋರಾಂನ 51 ಕಿ.ಮೀ ಉದ್ದದ ಬೈರಾಬಿ-ಸೈರಾಂಗ್ ಬ್ರಾಡ್-ಗೇಜ್ ಮಾರ್ಗದ ಕಾರ್ಯಾರಂಭವು ಐಜ್ವಾಲ್ ನಗರವನ್ನು ಮೊದಲ ಬಾರಿಗೆ ಭಾರತದ ರೈಲ್ವೆ ಭೂಪಟಕ್ಕೆ ಸೇರಿಸಿತು. ಈಗ ಸಿಲ್ಚಾರ್ ವರೆಗೆ ಪ್ಯಾಸೆಂಜರ್ ಸೇವೆಗಳ ವಿಸ್ತರಣೆಯು ಈ ಸಂಪರ್ಕವನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯುತ್ತಿದ್ದು, ಪ್ರಾದೇಶಿಕ ಸಂಚಾರವನ್ನು ಸುಧಾರಿಸುವ ಜೊತೆಗೆ ಈ ಭಾಗದ ಸರ್ವತೋಮುಖ ಬೆಳವಣಿಗೆಗೆ ಚಾಲನೆ ನೀಡುತ್ತಿದೆ.
*****
(ಪ್ರಕಟಣೆ ಐ.ಡಿ.: 2225478)
ವಿಸಿಟರ್ ಕೌಂಟರ್ : 11