ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಭಾರತವನ್ನು ಬಾಲ್ಯ ವಿವಾಹ ಮುಕ್ತವಾಗಿಸುವ ಗುರಿಯೊಂದಿಗೆ 'ಬಾಲ ವಿವಾಹ ಮುಕ್ತ ಭಾರತ' ಕುರಿತ ಜಾಗೃತಿ ಕಾರ್ಯಕ್ರಮಗಳು 6 ಕೋಟಿ ಜನರನ್ನು ತಲುಪಿವೆ
ಪೋರ್ಟಲ್‌ಗಳಲ್ಲಿ ಬಾಲ್ಯ ವಿವಾಹದ ವಿರುದ್ಧ 28 ಲಕ್ಷಕ್ಕೂ ಅಧಿಕ ಸಂಕಲ್ಪಗಳನ್ನು ನೋಂದಾಯಿಸಲಾಗಿದೆ
ದೇಶಾದ್ಯಂತ ಬಲವಾದ ಸಮುದಾಯ ತೊಡಗಿಸಿಕೊಳ್ಳುವಿಕೆ ಮತ್ತು ಸಕ್ರಿಯ ಭಾಗವಹಿಸುವಿಕೆ ಕಂಡುಬಂದಿದೆ
ಪ್ರಕಟಣಾ ದಿನಾಂಕ:
04 FEB 2026 1:26PM by PIB Bengaluru
ಭಾರತವನ್ನು ಬಾಲ್ಯ ವಿವಾಹ ಮುಕ್ತಗೊಳಿಸುವ ಗುರಿಯೊಂದಿಗೆ ಭಾರತ ಸರ್ಕಾರವು 2024ರ ನವೆಂಬರ್ 27 ರಂದು 'ಬಾಲ ವಿವಾಹ ಮುಕ್ತ ಭಾರತ' ಎಂಬ ರಾಷ್ಟ್ರೀಯ ಅಭಿಯಾನವನ್ನು ಪ್ರಾರಂಭಿಸಿತು. 'ಇಡೀ ಸರ್ಕಾರ' ಮತ್ತು 'ಇಡೀ ಸಮಾಜ' ಕಾರ್ಯವಿಧಾನದ ಮೂಲಕ 'ವಿಕಸಿತ ಭಾರತ'ದ ದೃಷ್ಟಿಕೋನವನ್ನು ಸಾಕಾರಗೊಳಿಸಲು ಬಾಲಕಿಯರು ಮತ್ತು ಮಹಿಳೆಯರಲ್ಲಿ ಶಿಕ್ಷಣ, ಕೌಶಲ್ಯ, ಹಾಗೂ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಅತ್ಯಂತ ಮಹತ್ವದ ಅಗತ್ಯಗಳಲ್ಲಿ ಒಂದಾಗಿದೆ. ಈ ಅಭಿಯಾನವು ಬಾಲ್ಯ ವಿವಾಹ ತಡೆಗಟ್ಟುವಿಕೆಗಾಗಿ ಜಾಗೃತಿ ಮೂಡಿಸುವುದು, ಪೋಷಕರು, ಕುಟುಂಬಗಳು ಮತ್ತು ಸಮುದಾಯಗಳ ಒಳಗೊಳ್ಳುವಿಕೆಯನ್ನು ಹೆಚ್ಚಿಸುವುದು ಹಾಗೂ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳ (ಸಿಎಂಪಿಒ) ಪಾತ್ರ ಮತ್ತು ಸಾಮರ್ಥ್ಯವನ್ನು ಬಲಪಡಿಸುವುದು, ಬಾಲ್ಯ ವಿವಾಹ ಪ್ರಕರಣಗಳ ಸಮಯೋಚಿತ ವರದಿಯನ್ನು ಉತ್ತೇಜಿಸುವುದು ಜೊತೆಗ ಶಾಲೆಯಿಂದ ಹೊರಗುಳಿದ ಅಥವಾ ಬಾಲ್ಯ ವಿವಾಹದ ಅಪಾಯದಲ್ಲಿರುವ ಹದಿಹರೆಯದ ಹುಡುಗಿಯರನ್ನು ಗುರುತಿಸುವ ಗುರಿಯನ್ನು ಹೊಂದಿದೆ.
ಅಭಿಯಾನದ ಯಶಸ್ಸಿನ ಸ್ಮರಣಾರ್ಥವಾಗಿ ಮತ್ತು ಪ್ರಯತ್ನಗಳನ್ನು ಮತ್ತಷ್ಟು ತೀವ್ರಗೊಳಿಸುವ ನಿಟ್ಟಿನಲ್ಲಿ, ಎಲ್ಲಾ ಮಧ್ಯಸ್ಥಗಾರರನ್ನು ರಚನಾತ್ಮಕ ಮತ್ತು ಸಮಯಕ್ಕೆ ಅನುಗುಣವಾಗಿ ಸಜ್ಜುಗೊಳಿಸಲು ʻಬಾಲ ವಿವಾಹ ಮುಕ್ತ ಭಾರತ್ʼ ಅಡಿಯಲ್ಲಿ 100 ದಿನಗಳ ವಿಶೇಷ ಅಭಿಯಾನವನ್ನು 2025ರ ಡಿಸೆಂಬರ್ 4 ರಂದು ಪ್ರಾರಂಭಿಸಲಾಯಿತು. ಹೆಚ್ಚು ಹೆಚ್ಚು ಸಂಸ್ಥೆಗಳು, ಸಮುದಾಯದ ಮುಖಂಡರು ಮತ್ತು ಸೇವಾ ಪೂರೈಕೆದಾರರನ್ನು ತಲಪುವುದರ ಜೊತೆಗೆ ʻಬಿವಿಎಂಬಿʼ ಪೋರ್ಟಲ್‌ನಲ್ಲಿ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳ (ಸಿಎಂಪಿಒ) ವಿವರಗಳನ್ನು ಕಡ್ಡಾಯವಾಗಿ ಅಪ್ಲೋಡ್ ಮಾಡುವುದರ ಮೇಲೆ 100 ದಿನಗಳ ವಿಶೇಷ ಅಭಿಯಾನವು ಮೇಲೆ ಗಮನ ಕೇಂದ್ರೀಕರಿಸಿದೆ.
ಅಭಿಯಾನವು ʻಸ್ಪೆಲ್ʼ ವಿಷಯಾಧಾರಿತ ಅನುಷ್ಠಾನ ಯೋಜನೆಯನ್ನು ಅನುಸರಿಸುತ್ತದೆ. ʻಸ್ಪೆಲ್-1ʼ (27ನೇ ನವೆಂಬರ್, 2025 ರಿಂದ 31ನೇ ಡಿಸೆಂಬರ್, 2025 ರವರೆಗೆ) ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಚರ್ಚೆಗಳು, ಪ್ರಬಂಧ ಸ್ಪರ್ಧೆಗಳು ಹಾಗೂ ಪ್ರತಿಜ್ಞಾವಿಧಿ ಸಮಾರಂಭಗಳ ಮೂಲಕ ಜಾಗೃತಿ ಚಟುವಟಿಕೆಗಳ ಮೇಲೆ ಗಮನ ಕೇಂದ್ರೀಕರಿಸಿತು. ಮತ್ತೊಂದೆಡೆ ʻಸ್ಪೆಲ್-2’(1ನೇ ಜನವರಿ, 2026 ರಿಂದ ಜನವರಿ 31, 2026 ರವರೆಗೆ) ಬಾಲ್ಯ ವಿವಾಹವನ್ನು ನಿರುತ್ಸಾಹಗೊಳಿಸಲು ಮತ್ತು ʻಐಇಸಿʼ ವಸ್ತುಗಳನ್ನು ಪ್ರದರ್ಶಿಸಲು ದೇವಾಲಯಗಳು, ಮಸೀದಿಗಳು, ಅಡುಗೆ ಪೂರೈಕೆದಾರರು, ಟೆಂಟ್ ಹೌಸ್‌ಗಳು ಮತ್ತು ಡಿಜೆಗಳು ಸೇರಿದಂತೆ ಧಾರ್ಮಿಕ ಸಂಸ್ಥೆಗಳು ಮತ್ತು ಮದುವೆಗೆ ಸಂಬಂಧಿಸಿದ ಸೇವಾ ಪೂರೈಕೆದಾರರೊಂದಿಗೆ ತೊಡಗಿಸಿಕೊಳ್ಳುವುದರ ಮೇಲೆ ಗಮನ ಕೇಂದ್ರೀಕರಿಸಿತು. ʻಸ್ಪೆಲ್-3ʼ ಹಂತವು (1ನೇ ಫೆಬ್ರವರಿ, 2026 ರಿಂದ 8ನೇ ಮಾರ್ಚ್, 2026 ರವರೆಗೆ) ತಮ್ಮ ಅಧಿಕಾರ ವ್ಯಾಪ್ತಿಯ ಪ್ರದೇಶಗಳನ್ನು ಬಾಲ್ಯ ವಿವಾಹ ಮುಕ್ತವೆಂದು ಘೋಷಿಸುವ ನಿರ್ಣಯಗಳನ್ನು ಅಂಗೀಕರಿಸಲು ಗ್ರಾಮ ಪಂಚಾಯಿತಿಗಳು ಮತ್ತು ಪುರಸಭೆ ವಾರ್ಡ್‌ಗಳನ್ನು ಸಜ್ಜುಗೊಳಿಸುವತ್ತ ಗಮನ ಹರಿಸುತ್ತದೆ.
ʻಬಾಲ ವಿವಾಹ ಮುಕ್ತ ಭಾರತ್ʼ ಪೋರ್ಟಲ್ (https://stopchildmarriage.wcd.gov.in) ಎಂಬ ವಿಶೇಷ ಡಿಜಿಟಲ್ ವೇದಿಕೆಯು ಬಾಲ್ಯ ವಿವಾಹ ಪ್ರಕರಣಗಳ ವರದಿ, ಮಾಹಿತಿಯ ಪ್ರಸಾರ ಮತ್ತು ಸಂಕಲ್ಪ ನೋಂದಣಿಯನ್ನು ಸುಗಮಗೊಳಿಸುತ್ತದೆ. ನಾಗರಿಕರು, ಸಂಸ್ಥೆಗಳು ಮತ್ತು ಜನ ಪ್ರತಿನಿಧಿಗಳು ವಿಶೇಷ ಪೋರ್ಟಲ್‌ನಲ್ಲಿ ಮತ್ತು ʻಮೈಗವರ್ನಮೆಂಟ್ʼ ಪೋರ್ಟಲ್ ಮೂಲಕ ಬಾಲ ವಿವಾಹ ಮುಕ್ತ ಭಾರತ ಸಂಕಲ್ಪವನ್ನು ತೆಗೆದುಕೊಳ್ಳಬಹುದು. ಇದು ವ್ಯಾಪಕ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ. ಇಲ್ಲಿಯವರೆಗೆ, ಜಾಗೃತಿ ಕಾರ್ಯಕ್ರಮಗಳು 6 ಕೋಟಿಗೂ ಹೆಚ್ಚು ನಾಗರಿಕರನ್ನು ತಲುಪಿವೆ ಮತ್ತು ಬಾಲ್ಯ ವಿವಾಹದ ವಿರುದ್ಧ 28 ಲಕ್ಷಕ್ಕೂ ಹೆಚ್ಚು ಸಂಕಲ್ಪಗಳನ್ನು ಪೋರ್ಟಲ್‌ಗಳಲ್ಲಿ ನೋಂದಾಯಿಸಲಾಗಿದೆ. ಇದು ದೇಶಾದ್ಯಂತ ಬಲವಾದ ಸಮುದಾಯ ತೊಡಗಿಸಿಕೊಳ್ಳುವಿಕೆ ಮತ್ತು ಸಕ್ರಿಯ ಭಾಗವಹಿಸುವಿಕೆಯನ್ನು ಪ್ರತಿಬಿಂಬಿಸುತ್ತದೆ.
ಈ ಅಭಿಯಾನವು ದೂರುಗಳಿಗೆ ತಕ್ಷಣದ ಪ್ರತಿಕ್ರಿಯೆಗಾಗಿ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು (ಸಿಎಂಪಿಒಗಳು), ಪೊಲೀಸ್ ಅಧಿಕಾರಿಗಳು, ಮಕ್ಕಳ ರಕ್ಷಣಾ ಸಮಿತಿಗಳು, ಆಶಾ ಕಾರ್ಯಕರ್ತರು, ʻಎಎನ್ಎಂʼಗಳು ಸೇರಿದಂತೆ ಸಂಬಂಧಪಟ್ಟವರ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ 'ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 (ಪಿಸಿಎಂಎ)' ಜಾರಿಯನ್ನು ಬಲಪಡಿಸುತ್ತದೆ. ʻಬಿವಿಎಂಬಿ ಪೋರ್ಟಲ್ʼ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 60,700ಕ್ಕೂ ಹೆಚ್ಚು ʻಸಿಎಂಪಿಒʼಗಳ ಕೇಂದ್ರೀಕೃತ ಭಂಡಾರವಾಗಿ ಕಾರ್ಯನಿರ್ವಹಿಸುತ್ತದೆ. ಆ ಮೂಲಕ ನಾಗರಿಕರಿಗೆ ಸಮರ್ಥ ವರದಿ ಮಾಡುವ ಕಾರ್ಯವಿಧಾನವನ್ನು ಒದಗಿಸುತ್ತದೆ. ಅಲ್ಲಿ ಮೊದಲೇ ವರದಿ ಮಾಡುವುದರಿಂದ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಸಮಯೋಚಿತ ಮಧ್ಯಸ್ಥಿಕೆಯನ್ನು ಸಾಧ್ಯವಾಗಿಸುತ್ತದೆ.
ಕೇಂದ್ರ ಸರ್ಕಾರವು ಜಾಗೃತಿ ಅಭಿಯಾನಗಳು, ಮಾಧ್ಯಮ ಅಭಿಯಾನಗಳು ಮತ್ತು ಜನಸಂಪರ್ಕ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ ಮತ್ತು ಬಾಲ್ಯ ವಿವಾಹದ ಹಾನಿಕಾರಕ ಪರಿಣಾಮಗಳನ್ನು ಕುರಿತು ಕಾಲಕಾಲಕ್ಕೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆಗಳನ್ನು ನೀಡುತ್ತದೆ. ʻಮಿಷನ್ ಶಕ್ತಿʼಯ ಅಡಿಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ʻಬೇಟಿ ಬಚಾವೋ ಬೇಟಿ ಪಢಾವೋʼ(ಬಿಬಿಬಿಪಿ) ಅಭಿಯಾನವನ್ನು ಜಾರಿಗೆ ತರುತ್ತದೆ, ಇದು ಲಿಂಗ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಬಾಲ್ಯ ವಿವಾಹವನ್ನು ನಿರುತ್ಸಾಹಗೊಳಿಸುವತ್ತ ಗಮನ ಹರಿಸುತ್ತದೆ. ʻರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗʼವು (ಎನ್‌ಸಿಪಿಸಿಆರ್) ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತದೆ ಮತ್ತು ಮಧ್ಯಸ್ಥಗಾರರೊಂದಿಗೆ ಸಮಾಲೋಚನೆಗಳನ್ನು ನಡೆಸುತ್ತದೆ. ಮತ್ತೊಂದೆಡೆ, ʻರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರʼವು (ಎನ್ಎಎಲ್ಎಸ್ಎ) ತನ್ನ ರಾಜ್ಯ ಮತ್ತು ಜಿಲ್ಲಾ ವಿಭಾಗಗಳ ಮೂಲಕ, ಬಾಲ್ಯ ವಿವಾಹದ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುತ್ತದೆ. ಜೊತೆಗೆ ಪರಿಣಾಮಕಾರಿಯಾಗಿ ಬಾಲ್ಯ ವಿವಾಹಗಳನ್ನು ತಡೆಯಲು ಸಾಮಾನ್ಯ ಕಾರ್ಯವಿಧಾನಗಳನ್ನು ಒದಗಿಸುತ್ತದೆ. ಜೊತೆಗೆ ತನ್ನ ಸಹಾಯವಾಣಿ 15100 ಮೂಲಕ ಉಚಿತ ಕಾನೂನು ಸಹಾಯವನ್ನು ಒದಗಿಸುತ್ತದೆ.
ಇದಲ್ಲದೆ, ಭಾರತ ಸರ್ಕಾರವು ಕಿರುಕೋಡ್ ʻ1098ʼ ಮೂಲಕ ಮಕ್ಕಳ ಸಹಾಯವಾಣಿಯನ್ನು ಪರಿಚಯಿಸಿದೆ. ಇದು ಬಿಕ್ಕಟ್ಟಿನಲ್ಲಿರುವ ಮಕ್ಕಳಿಗಾಗಿ ಉಚಿತ 24X7X365 ದೂರವಾಣಿ ತುರ್ತು ಸಂಪರ್ಕ ಸೇವೆಯಾಗಿದ್ದು, ಇದು ಪೊಲೀಸರು, ಸಿಎಂಪಿಒಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕಗಳು ಇತ್ಯಾದಿಗಳ ನಡುವೆ ಸಮನ್ವಯ ಮೂಡಿಸುತ್ತದೆ. ಆ ಮೂಲಕ ಬಾಲ್ಯ ವಿವಾಹ ತಡೆಗಟ್ಟುವಿಕೆ ಸೇರಿದಂತೆ ಮಗುವಿಗೆ ಅಗತ್ಯವಿರುವ ಯಾವುದೇ ರೀತಿಯ ಸಹಾಯವನ್ನು ಕೋರಲು ಸೂಕ್ತ ಮಧ್ಯಸ್ಥಿಕೆಗಳನ್ನು ವಹಿಸಲು ನೆರವಾಗುತ್ತದೆ. 24x7x365 ತುರ್ತು ಪ್ರತಿಕ್ರಿಯೆ ಹಾಗೂ ಸಂಪನ್ಮೂಲಗಳು ಮತ್ತು ಸೇವೆಗಳನ್ನು ಒದಗಿಸಲು ಮಕ್ಕಳ ಸಹಾಯವಾಣಿಯನ್ನು ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ (ಇಆರ್‌ಎಸ್ಎಸ್-112) ಜೊತೆ ಸಂಯೋಜಿಸಲಾಗಿದೆ. ಇದಲ್ಲದೆ, ತುರ್ತು ಮತ್ತು ತುರ್ತುರಹಿತ ಸಹಾಯವನ್ನು ಒದಗಿಸಲು ʻಇಆರ್‌ಇಸ್ಎಸ್ʼ ಜೊತೆ ಸಂಯೋಜಿಸಲಾದ ಮಹಿಳಾ ಸಹಾಯವಾಣಿ (181) ಸೇವೆಗಳು ಹಗಲಿರುಳು ಲಭ್ಯವಿರುತ್ತವೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಶ್ರೀಮತಿ ಅನ್ನಪೂರ್ಣ ದೇವಿ ಅವರು ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಈ ಮಾಹಿತಿಯನ್ನು ಒದಗಿಸಿದರು.
*****
(ಪ್ರಕಟಣೆ ಐ.ಡಿ.: 2223056)
ವಿಸಿಟರ್ ಕೌಂಟರ್ : 10