ಅಂಕಿಅಂಶಗಳು ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ
azadi ka amrit mahotsav

ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಜನವರಿ 30, 2026 ರಂದು ಚೆನ್ನೈನಲ್ಲಿ ಜಿಡಿಪಿ, ಐಐಪಿ ಮತ್ತು ಸಿಪಿಐನ ಮೂಲ ಪರಿಷ್ಕರಣೆಯ ಕುರಿತು ಮೂರನೇ ಬಿಡುಗಡೆ-ಪೂರ್ವ ಸಮಾಲೋಚನಾ ಕಾರ್ಯಾಗಾರ ಆಯೋಜಿಸಿತ್ತು


ವಿಶ್ವಾಸಾರ್ಹ ಮತ್ತು ಪಾರದರ್ಶಕ ದತ್ತಾಂಶವು ಉತ್ತಮ ನೀತಿ ನಿರೂಪಣೆಗೆ ಪ್ರಮುಖವಾಗಿದೆ – ಡಾ. ಸಿ. ರಂಗರಾಜನ್, ಅಧ್ಯಕ್ಷರು, ಮದ್ರಾಸ್ ಸ್ಕೂಲ್ ಆಫ್ ಎಕನಾಮಿಕ್ಸ್, ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷರು ಮತ್ತು ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್

प्रविष्टि तिथि: 30 JAN 2026 7:45PM by PIB Bengaluru

ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು, ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ), ಕೈಗಾರಿಕಾ ಉತ್ಪಾದನಾ ಸೂಚ್ಯಂಕ (ಐಐಪಿ) ಮತ್ತು ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಗಳ ಮೂಲ ಪರಿಷ್ಕರಣೆಯ ಕುರಿತಾದ ಮೂರನೇ ಬಿಡುಗಡೆ-ಪೂರ್ವ ಸಮಾಲೋಚನಾ ಕಾರ್ಯಾಗಾರವನ್ನು 30 ಜನವರಿ 2026 ರಂದು ಚೆನ್ನೈನಲ್ಲಿ ಆಯೋಜಿಸಿತ್ತು. ಮೊದಲ ಬಿಡುಗಡೆ-ಪೂರ್ವ ಸಮಾಲೋಚನಾ ಕಾರ್ಯಾಗಾರವು 26 ನವೆಂಬರ್ 2025 ರಂದು ಮುಂಬೈನಲ್ಲಿ ಮತ್ತು ಎರಡನೆಯದು 23 ಡಿಸೆಂಬರ್ 2025 ರಂದು ನವದೆಹಲಿಯಲ್ಲಿ ನಡೆದಿತ್ತು.

ಪರಿಷ್ಕೃತ ಜಿಡಿಪಿ, ಐಐಪಿ ಮತ್ತು ಸಿಪಿಐ ಸರಣಿಗಳ ಬಿಡುಗಡೆಗೆ ಮುನ್ನ ಪ್ರಸ್ತಾವಿತ ವಿಧಾನ ಮತ್ತು ರಚನಾತ್ಮಕ ಸುಧಾರಣೆಗಳನ್ನು ಸಂಬಂಧಿತ ಪಾಲುದಾರರೊಂದಿಗೆ ಹಂಚಿಕೊಳ್ಳುವ ಮೂಲಕ ಪಾರದರ್ಶಕತೆಯನ್ನು ಬಲಪಡಿಸುವುದು, ಮಾಹಿತಿಪೂರ್ಣ ಸಂವಾದವನ್ನು ಉತ್ತೇಜಿಸುವುದು ಮತ್ತು ವ್ಯಾಪಕ ಸಮಾಲೋಚನೆಯನ್ನು ಖಚಿತಪಡಿಸಿಕೊಳ್ಳುವುದು ಈ ಕಾರ್ಯಾಗಾರಗಳ ಪ್ರಾಥಮಿಕ ಉದ್ದೇಶವಾಗಿದೆ. ಹಣಕಾಸು ವರ್ಷ 2022-23 ಅನ್ನು ಮೂಲ ವರ್ಷವಾಗಿ ಹೊಂದಿರುವ ಜಿಡಿಪಿ ಮತ್ತು ಐಐಪಿಯ ಹೊಸ ಸರಣಿಗಳನ್ನು ಕ್ರಮವಾಗಿ 27 ಫೆಬ್ರವರಿ 2026 ಮತ್ತು 28 ಮೇ 2026 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ, 2024 ಅನ್ನು ಮೂಲ ವರ್ಷವಾಗಿ ಹೊಂದಿರುವ ಸಿಪಿಐನ ಹೊಸ ಸರಣಿಯು 12 ಫೆಬ್ರವರಿ 2026 ರಂದು ಬಿಡುಗಡೆಯಾಗಲಿದೆ.

ಕಾರ್ಯಾಗಾರದ ಉದ್ಘಾಟನಾ ಅಧಿವೇಶನದಲ್ಲಿ ಮದ್ರಾಸ್ ಸ್ಕೂಲ್ ಆಫ್ ಎಕನಾಮಿಕ್ಸ್ ನ ಅಧ್ಯಕ್ಷರು, ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ ಮಾಜಿ ಅಧ್ಯಕ್ಷರು ಮತ್ತು ಆರ್‌ ಬಿ ಐ ನ ಮಾಜಿ ಗವರ್ನರ್ ಡಾ. ಸಿ. ರಂಗರಾಜನ್, ರಾಷ್ಟ್ರೀಯ ಸಾಂಖ್ಯಿಕ ಆಯೋಗದ ಅಧ್ಯಕ್ಷ ಪ್ರೊ. ರಾಜೀವ ಲಕ್ಷ್ಮಣ್ ಕರಂದಿಕರ್, ಸಚಿವಾಲಯದ ಕಾರ್ಯದರ್ಶಿ ಡಾ. ಸೌರಭ್ ಗರ್ಗ್, ಪ್ರಧಾನ ಮಂತ್ರಿಯವರ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾದ ಡಾ. ಶಮಿಕಾ ರವಿ ಮತ್ತು ಮಹಾನಿರ್ದೇಶಕರು (ಕೇಂದ್ರ ಸಾಂಖ್ಯಿಕ) ಶ್ರೀ ಎನ್. ಕೆ. ಸಂತೋಷಿ ಸೇರಿದಂತೆ ಪ್ರಮುಖ ಗಣ್ಯರು ಉಪಸ್ಥಿತರಿದ್ದರು. ಈ ಕಾರ್ಯಾಗಾರದಲ್ಲಿ ಸುಮಾರು 150 ಮಂದಿ ಭಾಗವಹಿಸಿದ್ದರು. ಅವರಲ್ಲಿ ಪ್ರಖ್ಯಾತ ಅರ್ಥಶಾಸ್ತ್ರಜ್ಞರು, ಆರ್‌ ಬಿ ಐ, ಬಾರ್ಕ್ಲೇಸ್ ಬ್ಯಾಂಕ್ ಪಿ ಎಲ್‌ ಸಿ ಮತ್ತು ಗೋಲ್ಡ್‌ಮನ್ ಸ್ಯಾಚ್ಸ್‌ ನಂತಹ ಹಣಕಾಸು ಸಂಸ್ಥೆಗಳ ತಜ್ಞರು, ವಿಷಯ ತಜ್ಞರು, ಶಿಕ್ಷಣ ತಜ್ಞರು, ಸಿ ಆರ್ ರಾವ್ ಅಡ್ವಾನ್ಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾಥಮ್ಯಾಟಿಕ್ಸ್, ಸಾಂಖ್ಯಿಕ ಮತ್ತು ಕಂಪ್ಯೂಟರ್ ಸೈನ್ಸ್‌ ನಂತಹ ಸಂಸ್ಥೆಗಳು, ನೀತಿ ಆಯೋಗದಂತಹ ಚಿಂತಕರ ಚಾವಡಿಗಳು ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹಿರಿಯ ಅಧಿಕಾರಿಗಳು ಸೇರಿದ್ದರು.

ಸ್ವಾಗತ ಭಾಷಣದಲ್ಲಿ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಮಹಾನಿರ್ದೇಶಕರಾದ (ಕೇಂದ್ರ ಸಾಂಖ್ಯಿಕ) ಶ್ರೀ ಎನ್. ಕೆ. ಸಂತೋಷಿ ಅವರು ಮುಖ್ಯ ಅತಿಥಿ ಡಾ. ಸಿ. ರಂಗರಾಜನ್ ಮತ್ತು ಇತರ ಗಣ್ಯರಿಗೆ ಕಾರ್ಯಾಗಾರಕ್ಕೆ ಆಗಮಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ಜಿಡಿಪಿ, ಸಿಪಿಐ ಮತ್ತು ಐಐಪಿಯ ಹೊಸ ಸರಣಿ ಮತ್ತು ಮೂಲ ವರ್ಷದ ಪರಿಷ್ಕರಣೆಗಾಗಿ ಕೈಗೊಳ್ಳಲಾದ ಪ್ರಮುಖ ಉಪಕ್ರಮಗಳನ್ನು ಅವರು ವಿವರಿಸಿದರು ಮತ್ತು ಈ ಪ್ರಕ್ರಿಯೆಯು ವ್ಯಾಪಕವಾದ ಕ್ರಮಶಾಸ್ತ್ರೀಯ ಪರಿಶೀಲನೆ, ನವೀಕರಿಸಿದ ವರ್ಗೀಕರಣಗಳು ಮತ್ತು ಸುದೀರ್ಘ ಸಮಾಲೋಚನೆಗಳನ್ನು ಅನುಸರಿಸಿದೆ ಎಂದು ತಿಳಿಸಿದರು.

ಮುಖ್ಯ ಅತಿಥಿ ಡಾ. ಸಿ. ರಂಗರಾಜನ್ ಅವರು, ಅಧಿಕೃತ ಅಂಕಿಅಂಶಗಳ ಮಾಹಿತಿಯ ವಿಶ್ವಾಸಾರ್ಹತೆ ಮತ್ತು ನಂಬಿಕೆಯನ್ನು ಬಲಪಡಿಸಲು ದತ್ತಾಂಶ ಬಳಕೆದಾರರು ಮತ್ತು ಪಾಲುದಾರರನ್ನು ತೊಡಗಿಸಿಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು ಮತ್ತು ಈ ಬಿಡುಗಡೆ-ಪೂರ್ವ ಸಮಾಲೋಚನಾ ಕಾರ್ಯಾಗಾರವನ್ನು ಈ ನಿಟ್ಟಿನಲ್ಲಿ ಒಂದು ಸಕಾರಾತ್ಮಕ ಹೆಜ್ಜೆ ಎಂದು ಬಣ್ಣಿಸಿದರು. ಭಾರತದ ಆರ್ಥಿಕ ಪರಿವರ್ತನೆಯನ್ನು ಪತ್ತೆಹಚ್ಚಲು ನಿಖರವಾದ, ಸಮಯೋಚಿತ ಮತ್ತು ವೈಜ್ಞಾನಿಕವಾಗಿ ಕಟ್ಟುನಿಟ್ಟಾದ ದತ್ತಾಂಶದ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಆರ್ಥಿಕತೆಯಲ್ಲಿನ ರಚನಾತ್ಮಕ ಬದಲಾವಣೆಗಳನ್ನು ಪ್ರತಿಬಿಂಬಿಸಲು ಜಿಡಿಪಿ ಸರಣಿಯ ಪರಿಷ್ಕರಣೆಗಳು ಅತ್ಯಗತ್ಯ ಎಂದು ಅವರು ತಿಳಿಸಿದರು. ಮೂಲ ವರ್ಷದ ಪರಿಷ್ಕರಣೆಯಲ್ಲಿ ಹೊಸ ದತ್ತಾಂಶದ ಬಳಕೆ, ಪಾರದರ್ಶಕ ವಿಧಾನ ಮತ್ತು ಸರಿಯಾಗಿ ವಿಶ್ಲೇಷಿಸಿದ ದತ್ತಾಂಶವು ಅಧಿಕೃತ ಅಂಕಿಅಂಶ ಮಾಹಿತಿಯ ವಿಶ್ವಾಸಾರ್ಹತೆ ಮತ್ತು ಉಪಯುಕ್ತತೆಯನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.

ಸಚಿವಾಲಯದ ಕಾರ್ಯದರ್ಶಿ ಡಾ. ಸೌರಭ್ ಗರ್ಗ್ ಅವರು ಕಾರ್ಯಾಗಾರದ ಹಿನ್ನೆಲೆಯನ್ನು ವಿವರಿಸುತ್ತಾ, ಪರಿಣಾಮಕಾರಿ ನೀತಿ ನಿರೂಪಣೆಗಾಗಿ ದತ್ತಾಂಶ-ಚಾಲಿತ ನಿರ್ಧಾರ ಕೈಗೊಳ್ಳುವಿಕೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಪುರಾವೆ ಆಧಾರಿತ ನೀತಿ ನಿರೂಪಣೆಯನ್ನು ಬೆಂಬಲಿಸಲು ಸಮಯೋಚಿತ, ವಿವರವಾದ ಮತ್ತು ಬಳಕೆದಾರ ಸ್ನೇಹಿ ದತ್ತಾಂಶ ಪ್ರಸರಣದ ಅಗತ್ಯವನ್ನು ಅವರು ಎತ್ತಿ ತೋರಿಸಿದರು. ಪರ್ಯಾಯ ದತ್ತಾಂಶ ಮೂಲಗಳ ಬಳಕೆ, ದತ್ತಾಂಶ ಸೆಟ್‌ ಗಳ ಸಮನ್ವಯ ಮತ್ತು ಅಧಿಕೃತ ಅಂಕಿಅಂಶ ಮಾಹಿತಿಯ ಪ್ರವೇಶ ಹಾಗೂ ಜಾಗೃತಿಯನ್ನು ಹೆಚ್ಚಿಸುವತ್ತ ಸಚಿವಾಲಯದ ಗಮನವನ್ನು ಅವರು ಒತ್ತಿಹೇಳಿದರು. ಮೊಬೈಲ್ ಅಪ್ಲಿಕೇಶನ್‌ ಗಳು ಮತ್ತು ದತ್ತಾಂಶ ಸಹಾಯ ಸೇವೆಗಳ ಮೂಲಕ ಹೆಚ್ಚು ವಿವರವಾದ ಮಟ್ಟದಲ್ಲಿ ದತ್ತಾಂಶವನ್ನು ಪ್ರಸಾರ ಮಾಡಲು ನಡೆಯುತ್ತಿರುವ ಪ್ರಯತ್ನಗಳನ್ನು ಅವರು ವಿವರಿಸಿದರು.

ಡಾ. ಶಮಿಕಾ ರವಿ ಅವರು ತಮ್ಮ ಮುಖ್ಯ ಭಾಷಣದಲ್ಲಿ, ಭಾರತದ ವೇಗವಾಗಿ ವಿಕಸನಗೊಳ್ಳುತ್ತಿರುವ ಆರ್ಥಿಕತೆ ಮತ್ತು ರಚನಾತ್ಮಕ ಪರಿವರ್ತನೆಯು ಆರ್ಥಿಕ ಚಟುವಟಿಕೆಯ ನೈಜ ಪ್ರಮಾಣವನ್ನು ತಿಳಿಯಲು ಅಧಿಕೃತ ಅಂಕಿಅಂಶ ಮಾಹಿತಿಯ ಅಳವಡಿಕೆಯನ್ನು ಬಯಸುತ್ತದೆ ಎಂದು ಹೇಳಿದರು. ಸುಧಾರಿತ ದತ್ತಾಂಶ ಗುಣಮಟ್ಟ, ವ್ಯಾಪ್ತಿ ಮತ್ತು ಲಭ್ಯತೆಯು ಪರಿಣಾಮಕಾರಿ ನೀತಿ ನಿರೂಪಣೆಗೆ ನಿರ್ಣಾಯಕವಾಗಿದೆ ಎಂದು ಅವರು ಒತ್ತಿಹೇಳಿದರು. ದತ್ತಾಂಶವು ವ್ಯಾಪಕವಾಗಿ ಬಳಕೆಯಾದಾಗ ಮತ್ತು ಬಳಕೆದಾರ ಸ್ನೇಹಿ ರೂಪದಲ್ಲಿ ಲಭ್ಯವಿದ್ದಾಗ ಅದರ ವಿಶ್ವಾಸಾರ್ಹತೆ ಹೆಚ್ಚುತ್ತದೆ ಎಂದು ಅವರು ತಿಳಿಸಿದರು. ಭಾರತದ ಅಂಕಿಅಂಶ ವ್ಯವಸ್ಥೆಯನ್ನು ಬಲಪಡಿಸಲು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ನಡೆಸುತ್ತಿರುವ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.

ಪ್ರೊ. ರಾಜೀವ ಲಕ್ಷ್ಮಣ್ ಕರಂದಿಕರ್ ಅವರು ತಮ್ಮ ಭಾಷಣದಲ್ಲಿ, ದತ್ತಾಂಶವನ್ನು ರಾಷ್ಟ್ರೀಯ ಆಸ್ತಿ ಎಂದು ಪರಿಗಣಿಸಬೇಕು ಎಂದು ಒತ್ತಿಹೇಳಿದರು. ನೀತಿ, ಸಂಶೋಧನೆ ಮತ್ತು ಆಡಳಿತಕ್ಕಾಗಿ ದತ್ತಾಂಶದ ಪರಿಣಾಮಕಾರಿ ಬಳಕೆಯನ್ನು ಖಚಿತಪಡಿಸಿಕೊಳ್ಳಲು ದತ್ತಾಂಶ ಹಂಚಿಕೆ ಮತ್ತು ಲಭ್ಯತೆಯ ಪ್ರಾಮುಖ್ಯತೆಯನ್ನು ಅವರು ಪ್ರತಿಪಾದಿಸಿದರು. ಭಾರತೀಯ ಅಂಕಿಅಂಶ ವ್ಯವಸ್ಥೆಯು ಜಾಗತಿಕ ಆರ್ಥಿಕ ಪರಿವರ್ತನೆಗೆ ತಕ್ಕಂತೆ ಸಮಯೋಚಿತವಾಗಿ, ಮುಂದಾಲೋಚನೆಯಿಂದ ಮತ್ತು ಬಳಕೆದಾರ ಸ್ನೇಹಿಯಾಗಿ ಬದಲಾಗಬೇಕಾದ ಅಗತ್ಯವಿದೆ ಎಂದು ಅವರು ಹೇಳಿದರು. ಹೊಸ ಸಮೀಕ್ಷೆಗಳು, ವಿಸ್ತೃತ ವ್ಯಾಪ್ತಿ ಮತ್ತು ನವೀಕರಿಸಿದ ಇತ್ತೀಚಿನ ವರ್ಗೀಕರಣ ಮಾನದಂಡಗಳು ಸೇರಿದಂತೆ ಸಚಿವಾಲಯವು ಕೈಗೊಂಡಿರುವ ಸುಧಾರಣೆಗಳನ್ನು ಅವರು ಈ ನಿಟ್ಟಿನಲ್ಲಿ ಅತ್ಯಗತ್ಯ ಹೆಜ್ಜೆಗಳೆಂದು ಶ್ಲಾಘಿಸಿದರು.

 

 

ಉದ್ಘಾಟನಾ ಅಧಿವೇಶನದ ನಂತರ ಮೂರು ತಾಂತ್ರಿಕ ಅಧಿವೇಶನಗಳು ನಡೆದವು. ದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಎಕನಾಮಿಕ್ ಗ್ರೋತ್‌ ನ ನಿವೃತ್ತ ಪ್ರೊಫೆಸರ್ ಬಿಸ್ವನಾಥ್ ಗೋಲ್ಡರ್ ಅವರ ಅಧ್ಯಕ್ಷತೆಯಲ್ಲಿ ಜಿಡಿಪಿ ಅಧಿವೇಶನ, ಐಐಎಂ ಕೋಝಿಕೋಡ್‌ ನ ಪ್ರೊ. ಮೃದುಲ್ ಕೆ ಸಗ್ಗರ್ ಅವರ ಅಧ್ಯಕ್ಷತೆಯಲ್ಲಿ ಐಐಪಿ ಅಧಿವೇಶನ ಮತ್ತು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಮಾಜಿ ಮಹಾನಿರ್ದೇಶಕ ಶ್ರೀ ಆಶಿಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಿಪಿಐ ಅಧಿವೇಶನ ನಡೆದವು. ಈ ಅಧಿವೇಶನಗಳಲ್ಲಿ ಪರಿಷ್ಕೃತ ಸರಣಿಯಲ್ಲಿ ಪ್ರಸ್ತಾವಿತ ಸುಧಾರಣೆಗಳನ್ನು ಮಂಡಿಸಲಾಯಿತು. ಪ್ರಸ್ತುತಿಗಳ ನಂತರ ಮುಕ್ತ ಚರ್ಚೆ ನಡೆಯಿತು, ಭಾಗವಹಿಸುವವರ ಪ್ರಶ್ನೆಗಳಿಗೆ ಉತ್ತರಿಸಲಾಯಿತು. ಹೊಸ ಸರಣಿಯಲ್ಲಿನ ಪ್ರಸ್ತಾವಿತ ಸುಧಾರಣೆಗಳು ಸಚಿವಾಲಯದ ವೆಬ್‌ಸೈಟ್‌ ನಲ್ಲಿ (www.mospi.gov.in) ಚರ್ಚಾ ಪತ್ರಗಳ ರೂಪದಲ್ಲಿ ಲಭ್ಯವಿವೆ. ರಾಷ್ಟ್ರೀಯ ಲೆಕ್ಕಪತ್ರಗಳು, ಐಐಪಿ ಮತ್ತು ಸಿಪಿಐ ದತ್ತಾಂಶದ ಬಳಕೆದಾರರು ಪ್ರಸ್ತಾವಿತ ಬದಲಾವಣೆಗಳ ಕುರಿತು ತಮ್ಮ ಪ್ರತಿಕ್ರಿಯೆ/ಅಭಿಪ್ರಾಯ/ಸಲಹೆಗಳನ್ನು ಸಚಿವಾಲಯದೊಂದಿಗೆ ಹಂಚಿಕೊಳ್ಳಬಹುದು.

 

*****

 


(रिलीज़ आईडी: 2221092) आगंतुक पटल : 4
इस विज्ञप्ति को इन भाषाओं में पढ़ें: English , Urdu , हिन्दी , Tamil