ಪ್ರಧಾನ ಮಂತ್ರಿಯವರ ಕಛೇರಿ
ಕೇರಳದ ಆರ್ಯ ವೈದ್ಯ ಸಾಲಾ ಚಾರಿಟೇಬಲ್ ಆಸ್ಪತ್ರೆಯ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
ಭಾರತದಲ್ಲಿ ಆಯುರ್ವೇದವು ಯಾವುದೇ ಒಂದು ಅವಧಿ ಅಥವಾ ಪ್ರದೇಶಕ್ಕೆ ಸೀಮಿತವಲ್ಲ, ಯುಗಯುಗಗಳಿಂದಲೂ ಈ ಪ್ರಾಚೀನ ವೈದ್ಯಕೀಯ ಪದ್ಧತಿಯು ಜೀವನವನ್ನು ಅರ್ಥಮಾಡಿಕೊಳ್ಳಲು, ಸಮತೋಲನ ಸಾಧಿಸಲು ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕಲು ನಮಗೆ ಹಾದಿಯನ್ನು ತೋರಿಸಿದೆ: ಪ್ರಧಾನಮಂತ್ರಿ
ನಾವು ನಿರಂತರವಾಗಿ ಆರೋಗ್ಯದ ಮುನ್ನೆಚ್ಚರಿಕೆ ಮೇಲೆ ಹೆಚ್ಚಿನ ಗಮನಹರಿಸಿದ್ದೇವೆ, ರಾಷ್ಟ್ರೀಯ ಆಯುಷ್ ಮಿಷನ್ ಅನ್ನು ಈ ದೂರದೃಷ್ಟಿಯೊಂದಿಗೆ ಆರಂಭಿಸಲಾಗಿದೆ: ಪ್ರಧಾನಮಂತ್ರಿ
ಬದಲಾಗುತ್ತಿರುವ ಕಾಲಕ್ಕೆ ನಾವು ಹೊಂದಿಕೊಳ್ಳಬೇಕು ಮತ್ತು ಆಯುರ್ವೇದದಲ್ಲಿ ಆಧುನಿಕ ತಂತ್ರಜ್ಞಾನ ಮತ್ತು ಎಐ ಬಳಕೆಯನ್ನು ಹೆಚ್ಚಿಸಬೇಕು: ಪ್ರಧಾನಮಂತ್ರಿ
प्रविष्टि तिथि:
28 JAN 2026 2:25PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕೇರಳದ ಆರ್ಯ ವೈದ್ಯ ಸಾಲಾ ಚಾರಿಟೇಬಲ್ ಆಸ್ಪತ್ರೆಯ ಶತಮಾನೋತ್ಸವ ಸಮಾರಂಭವನ್ನು ಉದ್ದೇಶಿಸಿ ವಿಡಿಯೋ ಸಂದೇಶದ ಮೂಲಕ ಮಾತನಾಡಿದರು. ಈ ಸಂದರ್ಭವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾಮಂತ್ರಿ, ಈ ಶುಭ ಸಂದರ್ಭದಲ್ಲಿ ಎಲ್ಲರೊಂದಿಗೂ ಸಂಪರ್ಕ ಸಾಧಿಸುತ್ತಿರುವುದು ಸಂತೋಷದ ವಿಷಯ ಎಂದು ಹೇಳಿದರು. ಆರ್ಯ ವೈದ್ಯಶಾಲೆ ಆಯುರ್ವೇದವನ್ನು ಸಂರಕ್ಷಿಸುವಲ್ಲಿ, ರಕ್ಷಣೆ ಮಾಡುವಲ್ಲಿ ಮತ್ತು ಮುನ್ನಡೆಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ತನ್ನ 125 ವರ್ಷಗಳ ಪಯಣದಲ್ಲಿ, ಸಂಸ್ಥೆಯು ಆಯುರ್ವೇದವನ್ನು ಪ್ರಬಲ ಚಿಕಿತ್ಸಾ ವ್ಯವಸ್ಥೆಯಾಗಿ ಸ್ಥಾಪಿಸಿದೆ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. ಆರ್ಯ ವೈದ್ಯಶಾಲೆಯ ಸಂಸ್ಥಾಪಕ ವೈದ್ಯರತ್ನಂ ಪಿ.ಎಸ್. ವೇರಿಯರ್ ಅವರ ಕೊಡುಗೆಗಳನ್ನು ಸ್ಮರಿಸಿದ ಪ್ರಧಾನಮಂತ್ರಿ, ಆಯುರ್ವೇದದ ಬಗೆಗಿನ ಅವರ ವಿಧಾನವು ಮತ್ತು ಸಾರ್ವಜನಿಕ ಕಲ್ಯಾಣಕ್ಕಾಗಿ ಅವರ ಬದ್ಧತೆಯು ಸದಾ ಸ್ಫೂರ್ತಿ ನೀಡುವುದು ಮುಂದುವರಿಯುತ್ತದೆ ಎಂದು ಒತ್ತಿ ಹೇಳಿದರು.
ಕೇರಳದ ಆರ್ಯ ವೈದ್ಯಶಾಲೆ ಶತಮಾನಗಳಿಂದಲೂ ಮನುಕುಲಕ್ಕೆ ಸೇವೆ ಸಲ್ಲಿಸುತ್ತಿರುವ ಭಾರತದ ರೋಗ ವಾಸಿ ಮಾಡುವ ಅಥವಾ ಗುಣಪಡಿಸುವ ಸಂಪ್ರದಾಯದ ಜೀವಂತ ಸಂಕೇತವಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತದಲ್ಲಿ ಆಯುರ್ವೇದವು ಎಂದಿಗೂ ಒಂದು ಯುಗ ಅಥವಾ ಒಂದು ಪ್ರದೇಶಕ್ಕೆ ಸೀಮಿತವಾಗಿಲ್ಲ ಎಂದು ಒತ್ತಿ ಹೇಳಿದರು; ಪ್ರತಿಯೊಂದು ಯುಗದಲ್ಲೂ ಈ ಪ್ರಾಚೀನ ವೈದ್ಯಕೀಯ ಪದ್ಧತಿಯು ಜೀವನವನ್ನು ಅರ್ಥಮಾಡಿಕೊಳ್ಳಲು, ಸಮತೋಲನವನ್ನು ಕಾಯ್ದುಕೊಳ್ಳಲು ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯವನ್ನು ಸಾಧಿಸುವ ಮಾರ್ಗವನ್ನು ತೋರಿಸಿದೆ. ಇಂದು ಆರ್ಯ ವೈದ್ಯಶಾಲೆಯು 600 ಕ್ಕೂ ಅಧಿಕ ಆಯುರ್ವೇದ ಔಷಧಿಗಳನ್ನು ತಯಾರಿಸುತ್ತದೆ ಮತ್ತು ದೇಶದ ವಿವಿಧ ಭಾಗಗಳಲ್ಲಿರುವ ಅದರ ಆಸ್ಪತ್ರೆಗಳು ವಿಶ್ವದಾದ್ಯಂತ 60 ಕ್ಕೂ ಅಧಿಕ ದೇಶಗಳ ರೋಗಿಗಳು ಸೇರಿದಂತೆ ಆಯುರ್ವೇದ ಚಿಕಿತ್ಸಾ ವಿಧಾನಗಳ ಮೂಲಕ ರೋಗಿಗಳಿಗೆ ಚಿಕಿತ್ಸೆ ನೀಡುತ್ತವೆ ಎಂದು ಅವರು ಹೇಳಿದರು. ಆರ್ಯ ವೈದ್ಯಶಾಲೆಯು ತನ್ನ ಕೆಲಸದ ಮೂಲಕ ಈ ವಿಶ್ವಾಸವನ್ನು ಗಳಿಸಿದೆ ಮತ್ತು ಜನರು ಸಂಕಷ್ಟದಲ್ಲಿದ್ದಾಗ, ಸಂಸ್ಥೆಯು ಅವರಿಗೆ ಭರವಸೆಯ ಸೆಲೆಯಾಗಿದೆ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
“ಆರ್ಯ ವೈದ್ಯಶಾಲೆಗೆ, ಸೇವೆಯು ಕೇವಲ ಒಂದು ಕಲ್ಪನೆಯಲ್ಲ, ಬದಲಾಗಿ ಅದರ ಕಾರ್ಯಗಳು, ವಿಧಾನ ಮತ್ತು ಸಂಸ್ಥೆಗಳಲ್ಲಿ ಪ್ರತಿಫಲಿಸುವ ಭಾವನೆಯಾಗಿದೆ’’ ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಸಂಸ್ಥೆಯ ಚಾರಿಟೇಬಲ್ ಆಸ್ಪತ್ರೆ ಕಳೆದ 100 ವರ್ಷಗಳಿಂದ ನಿರಂತರವಾಗಿ ಜನರಿಗೆ ಸೇವೆ ಸಲ್ಲಿಸುತ್ತಾ ಬಂದಿದೆ ಎಂದ ಅವರು, ಆಸ್ಪತ್ರೆಯೊಂದಿಗೆ ನಿಕಟ ಸಂಬಂಧ ಹೊಂದಿರುವ ಎಲ್ಲರ ಕೊಡುಗೆಗಳನ್ನು ಶ್ಲಾಘಿಸಿದರು. ವೈದ್ಯರು, ನರ್ಸಿಂಗ್ ಸಿಬ್ಬಂದಿ ಮತ್ತು ಆಸ್ಪತ್ರೆಯೊಂದಿಗೆ ಸಂಪರ್ಕ ಹೊಂದಿದ ಎಲ್ಲರಿಗೂ ಅವರು ಶುಭಾಶಯಗಳನ್ನು ತಿಳಿಸಿದರು ಮತ್ತು ಚಾರಿಟೇಬಲ್ ಆಸ್ಪತ್ರೆಯ ಪಯಣವು 100 ವರ್ಷಗಳನ್ನು ಪೂರ್ಣಗೊಳಿಸಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು. ಕೇರಳದ ಜನರು ಶತಮಾನಗಳಿಂದ ಆಯುರ್ವೇದದ ಸಂಪ್ರದಾಯಗಳನ್ನು ಜೀವಂತವಾಗಿಟ್ಟಿದ್ದಾರೆ ಮತ್ತು ಅವುಗಳನ್ನು ಸಂರಕ್ಷಿಸುತ್ತಿದ್ದಾರೆ ಮತ್ತು ಅವುಗಳನ್ನು ಉತ್ತೇಜಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು.
ದೀರ್ಘಕಾಲದವರೆಗೆ ದೇಶದಲ್ಲಿ ಪ್ರಾಚೀನ ವೈದ್ಯಕೀಯ ವ್ಯವಸ್ಥೆಗಳನ್ನು ಅತ್ಯಂತ ನಿರ್ಲಕ್ಷ್ಯದಿಂದ ನೋಡಲಾಗುತ್ತಿತ್ತು, ಆದರೆ ಕಳೆದ 10–11 ವರ್ಷಗಳಲ್ಲಿ ಈ ವಿಧಾನದಲ್ಲಿ ಪ್ರಮುಖ ಬದಲಾವಣೆಯಾಗಿದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಇದೀಗ ಆರೋಗ್ಯ ಸೇವೆಗಳನ್ನು ಸಮಗ್ರ ದೂರದೃಷ್ಟಿಯೊಂದಿಗೆ ನೋಡಲಾಗುತ್ತಿದೆ, ಆಯುರ್ವೇದ, ಯುನಾನಿ, ಹೋಮಿಯೋಪತಿ, ಸಿದ್ಧ ಮತ್ತು ಯೋಗವನ್ನು ಒಂದೇ ಸೂರಿನಡಿ ತರಲಾಗುತ್ತಿದೆ ಮತ್ತು ಈ ಉದ್ದೇಶಕ್ಕಾಗಿ ಆಯುಷ್ ಸಚಿವಾಲಯವನ್ನು ಸ್ಥಾಪಿಸಲಾಗಿದೆ ಎಂದು ಅವರು ಒತ್ತಿ ಹೇಳಿದರು. ಸರ್ಕಾರವು ನಿರಂತರವಾಗಿ ಆರೋಗ್ಯದ ಮುನ್ನೆಚ್ಚರಿಕೆ ಮೇಲೆ ಹೆಚ್ಚಿನ ಗಮನಹರಿಸಿದೆ ಎಂದು ಹೇಳಿರುವ ಶ್ರೀ ನರೇಂದ್ರ ಮೋದಿ, ರಾಷ್ಟ್ರೀಯ ಆಯುಷ್ ಮಿಷನ್ ಅನ್ನು ಆರಂಭಿಸಲಾಗಿದ್ದು, ಅದರ ಮೂಲಕ ಯೋಗ, ಮುನ್ನೆಚ್ಚರಿಕೆ ಆರೈಕೆ ಮತ್ತು ಸಮುದಾಯ ಆರೋಗ್ಯ ಸೇವೆಗಳನ್ನು ಒದಗಿಸುವ 12,000 ಕ್ಕೂ ಅಧಿಕ ಆಯುಷ್ ಕ್ಷೇಮ ಕೇಂದ್ರಗಳನ್ನು ತೆರೆಯುತ್ತಿದೆ ಎಂದರು. ದೇಶಾದ್ಯಂತ ಇತರ ಆಸ್ಪತ್ರೆಗಳು ಸಹ ಆಯುಷ್ ಸೇವೆಗಳೊಂದಿಗೆ ಸಂಪರ್ಕ ಹೊಂದಿವೆ, ಆಯುಷ್ ಔಷಧಿಗಳ ನಿಯಮಿತ ಪೂರೈಕೆಗೆ ಗಮನ ನೀಡಲಾಗಿದೆ ಎಂದು ಅವರು ಹೇಳಿದರು. ಭಾರತದ ಸಾಂಪ್ರದಾಯಿಕ ವೈದ್ಯಕೀಯ ಜ್ಞಾನದ ಪ್ರಯೋಜನಗಳು ದೇಶದ ಮೂಲೆ ಮೂಲೆಯಲ್ಲಿರುವ ಜನರಿಗೆ ತಲುಪುವಂತೆ ನೋಡಿಕೊಳ್ಳುವ ಸ್ಪಷ್ಟ ಉದ್ದೇಶ ಹೊಂದಲಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಆಯುಷ್ ಉತ್ಪಾದನಾ ವಲಯವು ಅತ್ಯಂತ ವೇಗವಾಗಿ ಬೆಳೆಯುತ್ತಿದೆ ಮತ್ತು ವಿಸ್ತರಣೆಯಾಗುತ್ತಿದೆ, ಆಯುಷ್ ವಲಯದಲ್ಲಿ ಸರ್ಕಾರಿ ನೀತಿಗಳ ಸ್ಪಷ್ಟ ಪರಿಣಾಮವು ಗೋಚರಿಸುತ್ತಿದೆ ಎಂದು ಪ್ರಮುಖವಾಗಿ ಪ್ರಸ್ತಾಪಿಸಿದ ಶ್ರೀ ನರೇಂದ್ರ ಮೋದಿ, ಭಾರತೀಯ ಸಾಂಪ್ರದಾಯಿಕ ಸ್ವಾಸ್ಥ್ವನ್ನು ಜಗತ್ತಿಗೆ ಕೊಂಡೊಯ್ಯಲು ಸರ್ಕಾರವು ಆಯುಷ್ ರಫ್ತು ಪ್ರಚಾರ ಮಂಡಳಿಯನ್ನು ಸ್ಥಾಪಿಸಿದೆ, ಇದು ಜಾಗತಿಕ ಮಾರುಕಟ್ಟೆಗಳಲ್ಲಿ ಆಯುಷ್ ಉತ್ಪನ್ನಗಳು ಮತ್ತು ಸೇವೆಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ, ಅದು ಈಗಾಗಲೇ ಬಹಳ ಸಕಾರಾತ್ಮಕ ಫಲಿತಾಂಶಗಳನ್ನು ತೋರಿಸುತ್ತಿದೆ. 2014 ರಲ್ಲಿ, ಭಾರತವು ಸುಮಾರು 3,000 ಕೋಟಿ ಮೌಲ್ಯದ ಆಯುಷ್ ಮತ್ತು ಗಿಡಮೂಲಿಕೆ ಉತ್ಪನ್ನಗಳನ್ನು ರಫ್ತು ಮಾಡಿದೆ ಎಂದರು. ಆದರೆ ಈಗ ರಫ್ತು 6,500 ಕೋಟಿ ರೂಪಾಯಿಗೆ ಏರಿಕೆಯಾಗಿದೆ, ಇದು ದೇಶದ ರೈತರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಪ್ರಧಾನಮಂತ್ರಿ ಉಲ್ಲೇಖಿಸಿದರು.
ಭಾರತವು ಆಯುಷ್ ಆಧಾರಿತ ವೈದ್ಯಕೀಯ ಮೌಲ್ಯ ಪಯಣಕ್ಕೆ ವಿಶ್ವಾಸಾರ್ಹ ತಾಣವಾಗಿ ಹೊರಹೊಮ್ಮುತ್ತಿದೆ ಎಂದು ಒತ್ತಿ ಹೇಳಿದ ಶ್ರೀ ನರೇಂದ್ರ ಮೋದಿ, ಆಯುಷ್ ವೀಸಾ ಪರಿಚಯದಂತಹ ಕ್ರಮಗಳು ವಿದೇಶಿ ಪ್ರವಾಸಿಗಳಿಗೆ ಆಯುರ್ವೇದ ಮತ್ತು ಸಾಂಪ್ರದಾಯಿಕ ಔಷಧದಲ್ಲಿ ಉತ್ತಮ ಸೌಲಭ್ಯಗಳನ್ನು ಪಡೆಯಲು ಸಹಾಯ ಮಾಡುತ್ತಿವೆ ಎಂದು ಹೇಳಿದರು.
ಆಯುರ್ವೇದವನ್ನು ಉತ್ತೇಜಿಸಲು ಸರ್ಕಾರವು ಅದನ್ನು ಪ್ರತಿಯೊಂದು ಪ್ರಮುಖ ಜಾಗತಿಕ ವೇದಿಕೆಯಲ್ಲಿ ಹೆಮ್ಮೆಯಿಂದ ಪ್ರಸ್ತುತಪಡಿಸುತ್ತದೆ ಎಂದು ಪ್ರಧಾನಮಂತ್ರಿ ಬಲವಾಗಿ ಪ್ರತಿಪಾದಿಸಿದರು. ಅದು ಬ್ರಿಕ್ಸ್ ಶೃಂಗಸಭೆಗಳು ಅಥವಾ ಜಿ 20 ಸಭೆಗಳಲ್ಲಿ ಆಗಿರಬಹುದು, ಅಥವಾ ಇಲ್ಲೇ ಆಯುರ್ವೇದವನ್ನು ಸಮಗ್ರ ಆರೋಗ್ಯದ ವಿಧಾನವಾಗಿ ಪ್ರದರ್ಶಿಸಲಾಗಿದೆ. ಗುಜರಾತ್‌ನ ಜಾಮ್‌ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ ಮತ್ತು ಆಯುರ್ವೇದದಲ್ಲಿ ಬೋಧನೆ ಮತ್ತು ಸಂಶೋಧನಾ ಸಂಸ್ಥೆ ಈಗಾಗಲೇ ಅಲ್ಲಿ ತನ್ನ ಕೆಲಸವನ್ನು ಆರಂಭಿಸಿದೆ ಎಂದು ಪ್ರಧಾನಮಂತ್ರಿ ಗಮನಸೆಳೆದರು. ಆಯುರ್ವೇದ ಔಷಧಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಗಂಗಾ ನದಿಯ ದಡದಲ್ಲಿ ಔಷಧೀಯ ಕೃಷಿಯನ್ನು ಪ್ರೋತ್ಸಾಹಿಸಲಾಗುತ್ತಿದೆ ಎಂದು ಅವರು ಹೇಳಿದರು.
ಮತ್ತೊಂದು ಸಾಧನೆಯನ್ನು ಹಂಚಿಕೊಂಡ ಶ್ರೀ ನರೇಂದ್ರ ಮೋದಿ ಅವರು, ಐರೋಪ್ಯ ಒಕ್ಕೂಟದೊಂದಿಗೆ ಇತ್ತೀಚೆಗೆ ಘೋಷಿಸಿದ ಐತಿಹಾಸಿಕ ವ್ಯಾಪಾರ ಒಪ್ಪಂದವು ಭಾರತೀಯ ಸಾಂಪ್ರದಾಯಿಕ ಔಷಧ ಸೇವೆಗಳು ಮತ್ತು ವೈದ್ಯರಿಗೆ ಪ್ರಮುಖ ಉತ್ತೇಜನ ನೀಡುತ್ತದೆ ಎಂದು ಹೇಳಿದರು. ನಿಯಮಗಳು ಅಸ್ತಿತ್ವದಲ್ಲಿಲ್ಲದ ಇಯು ಸದಸ್ಯ ರಾಷ್ಟ್ರಗಳಲ್ಲಿ, ಆಯುಷ್ ವೈದ್ಯರು ಭಾರತದಲ್ಲಿ ಗಳಿಸಿದ ವೃತ್ತಿಪರ ಅರ್ಹತೆಗಳ ಆಧಾರದ ಮೇಲೆ ತಮ್ಮ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ, ಇದು ಆಯುರ್ವೇದ ಮತ್ತು ಯೋಗದೊಂದಿಗೆ ಗುರುತಿಸಿಕೊಂಡಿರುವ ಯುವಕರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ವಿವರಿಸಿದರು. ಈ ಒಪ್ಪಂದವು ಯುರೋಪಿನಲ್ಲಿ ಆಯುಷ್ ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ಉಲ್ಲೇಖಿಸಿದ ಅವರು, ಈ ಸಾಧನೆಗಾಗಿ ಆಯುರ್ವೇದ ಮತ್ತು ಆಯುಷ್‌ಗೆ ಸಂಬಂಧಿಸಿದ ಎಲ್ಲಾ ಗಣ್ಯರಿಗೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು.
ಭಾರತವು ಶತಮಾನಗಳಿಂದ ಆಯುರ್ವೇದದ ಮೂಲಕ ಜನರಿಗೆ ಚಿಕಿತ್ಸೆ ನೀಡುತ್ತಿದೆ, ಆದರೆ ದೇಶದೊಳಗೆ ಮತ್ತು ಅದರಲ್ಲೂ ಹೆಚ್ಚಾಗಿ ವಿದೇಶಗಳಲ್ಲಿ ಆಯುರ್ವೇದದ ಮಹತ್ವವನ್ನು ವಿವರಿಸಲು ಪ್ರಯತ್ನಗಳು ಬೇಕಾಗಿರುವುದು ದುರದೃಷ್ಟಕರ ಸಂಗತಿ ಎಂದು ಪ್ರಧಾನಮಂತ್ರಿ ಹೇಳಿದರು. ಇದಕ್ಕೆ ಪ್ರಮುಖ ಕಾರಣವೆಂದರೆ ಸಾಕ್ಷ್ಯಾಧಾರಿತ ಸಂಶೋಧನೆ ಮತ್ತು ಸಂಶೋಧನಾ ಪ್ರಬಂಧಗಳ ಕೊರತೆ ಎಂದು ಅವರು ಪ್ರಮುಖವಾಗಿ ಪ್ರಸ್ತಾಪಿದ ಅವರು, ಆಯುರ್ವೇದ ವಿಧಾನಗಳನ್ನು ವಿಜ್ಞಾನದ ತತ್ವಗಳ ಮೇಲೆ ಪರೀಕ್ಷಿಸಿದಾಗ, ಸಾರ್ವಜನಿಕ ನಂಬಿಕೆ ಬಲವರ್ಧನೆಗೊಳ್ಳುತ್ತದೆ ಎಂದು ಅವರು ಹೇಳಿದರು. ಆರ್ಯ ವೈದ್ಯಶಾಲೆಯು ಸಿಎಸ್ಐಆರ್ ಮತ್ತು ಐಐಟಿಯಂತಹ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯನಿರ್ವಹಿಸುತ್ತಾ ವಿಜ್ಞಾನ ಮತ್ತು ಸಂಶೋಧನೆಯ ಮಾನದಂಡವಾಗಿ ಆಯುರ್ವೇದವನ್ನು ನಿರಂತರವಾಗಿ ಪರೀಕ್ಷಿಸುತ್ತಿದೆ ಎಂದು ಶ್ರೀ ಮೋದಿ ಸಂತಸ ವ್ಯಕ್ತಪಡಿಸಿದರು. ಸಂಸ್ಥೆಯು ಔಷಧ ಸಂಶೋಧನೆ, ಕ್ಲಿನಿಕಲ್ ಸಂಶೋಧನೆ ಮತ್ತು ಕ್ಯಾನ್ಸರ್ ಆರೈಕೆಯ ಮೇಲೆ ಗಮನಹರಿಸಿದೆ ಮತ್ತು ಆಯುಷ್ ಸಚಿವಾಲಯದ ನೆರನಿನೊಂದಿಗೆ ಕ್ಯಾನ್ಸರ್ ಸಂಶೋಧನೆಗಾಗಿ ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸುವುದು, ಆ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಅವರು ವಿವರಿಸಿದರು.
ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ, ಆಯುರ್ವೇದವು ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು ಹೆಚ್ಚಾಗಿ ಅಳವಡಿಸಿಕೊಳ್ಳಬೇಕು, ಇದು ರೋಗದ ಸಾಧ್ಯತೆಗಳನ್ನು ಊಹಿಸಲು ಮತ್ತು ವಿಭಿನ್ನ ವಿಧಾನಗಳ ಮೂಲಕ ಚಿಕಿತ್ಸೆಯನ್ನು ನೀಡಲು ನವೀನ ವಿಧಾನಗಳನ್ನು ಸಕ್ರಿಯಗೊಳಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ಆರ್ಯ ವೈದ್ಯಶಾಲೆಯು ಸಂಪ್ರದಾಯ ಮತ್ತು ಆಧುನಿಕತೆ ಒಟ್ಟಿಗೆ ಚಲಿಸಬಹುದು ಮತ್ತು ಆರೋಗ್ಯ ರಕ್ಷಣೆ ಜನರ ಜೀವನದಲ್ಲಿ ನಂಬಿಕೆಯ ಅಡಿಪಾಯವಾಗಬಹುದು ಎಂಬುದನ್ನು ಪ್ರದರ್ಶಿಸಿದೆ ಎಂದು ಅವರಿ ಬಲವಾಗಿ ಪ್ರತಿಪಾದಿದರು. ಆಧುನಿಕ ಅಗತ್ಯತೆಗಳನ್ನು ಅಳವಡಿಸಿಕೊಳ್ಳುವಾಗ ಚಿಕಿತ್ಸೆಯನ್ನು ವ್ಯವಸ್ಥಿತಗೊಳಿಸುವ ಮತ್ತು ರೋಗಿಗಳಿಗೆ ಸೇವೆಗಳನ್ನು ಒದಗಿಸುವ ಮೂಲಕ ಸಂಸ್ಥೆಯು ಆಯುರ್ವೇದದ ಪ್ರಾಚೀನ ತಿಳಿವಳಿಕೆಯನ್ನು ಸಂರಕ್ಷಿಸಿದೆ ಎಂದು ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು. ಈ ಸ್ಪೂರ್ತಿದಾಯಕ ಪಯಣಕ್ಕಾಗಿ ಅವರು ಆರ್ಯ ವೈದ್ಯಶಾಲೆಯನ್ನು ಮತ್ತೊಮ್ಮೆ ಅಭಿನಂದಿಸಿದರು ಮತ್ತು ಮುಂಬರುವ ವರ್ಷಗಳಲ್ಲಿ ಸಂಸ್ಥೆಯು ಅದೇ ಬದ್ಧತೆ ಮತ್ತು ಸೇವಾ ಮನೋಭಾವದಿಂದ ಜೀವನವನ್ನು ಸುಧಾರಿಸುವುದನ್ನು ಮುಂದುವರಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕೇರಳದ ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೇಕರ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
*****
(रिलीज़ आईडी: 2219613)
आगंतुक पटल : 5