ಭಾರೀ ಕೈಗಾರಿಕೆಗಳ ಸಚಿವಾಲಯ
azadi ka amrit mahotsav

ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ಪುಣೆಯಲ್ಲಿ ಎಸ್‌ ಐ ಎ ಟಿ 2026 ಉದ್ಘಾಟಿಸಿದರು; ಜಾಗತಿಕ ವಾಹನ ಉದ್ಯಮದ ನಾಯಕತ್ವಕ್ಕಾಗಿ ಭಾರತದ ದೃಷ್ಟಿಕೋನವನ್ನು ಒತ್ತಿ ಹೇಳಿದರು


ಭಾರತದ ವಾಹನ ಕ್ಷೇತ್ರವು ಸುಸ್ಥಿರ ಮತ್ತು ತಂತ್ರಜ್ಞಾನ ಆಧಾರಿತ ಬೆಳವಣಿಗೆಗೆ ಸಜ್ಜಾಗಿದೆ: ಶ್ರೀ ಹೆಚ್.ಡಿ. ಕುಮಾರಸ್ವಾಮಿ

ಪ್ರಧಾನಮಂತ್ರಿ ಮೋದಿಯವರ ನಾಯಕತ್ವದಲ್ಲಿ ಎಸ್‌ ಐ ಎ ಟಿ 2026 ನಾವೀನ್ಯತೆ, ಸುರಕ್ಷತೆ ಮತ್ತು ಸ್ವಚ್ಛ ಚಲನಶೀಲತೆಯನ್ನು ಉಲ್ಲೇಖಿಸಿದರು

ಸರ್ಕಾರವು ಇವಿ ಪರಿಸರ ವ್ಯವಸ್ಥೆ ಮತ್ತು ದೇಶೀಯ ಉತ್ಪಾದನೆಯನ್ನು ಬಲಪಡಿಸುತ್ತಿದೆ: ಶ್ರೀ ಹೆಚ್.ಡಿ. ಕುಮಾರಸ್ವಾಮಿ

ಎ ಆರ್‌ ಎ ಐ ನ ವಜ್ರ ಮಹೋತ್ಸವ ಮತ್ತು ಎಸ್‌ ಐ ಎ ಟಿ 2026 ಭಾರತದ ಚಲನಶೀಲತೆಯ ಪಯಣದಲ್ಲಿ ಹೊಸ ಅಧ್ಯಾಯವನ್ನು ಸಂಕೇತಿಸುತ್ತವೆ

प्रविष्टि तिथि: 27 JAN 2026 6:37PM by PIB Bengaluru

ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ ಹೆಚ್. ಡಿ. ಕುಮಾರಸ್ವಾಮಿ ಅವರು ಪುಣೆಯಲ್ಲಿ ಮೂರು ದಿನಗಳ ಅಂತಾರಾಷ್ಟ್ರೀಯ ವಾಹನ ತಂತ್ರಜ್ಞಾನ ವಿಚಾರಗೋಷ್ಠಿ (ಎಸ್‌ ಐ ಎ ಟಿ 2026) ಯನ್ನು ಉದ್ಘಾಟಿಸಿದರು. ಇದು ಸುರಕ್ಷಿತ, ಸುಸ್ಥಿರ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕವಾದ ಚಲನಶೀಲ ಪರಿಹಾರಗಳ ಕಡೆಗೆ ಭಾರತದ ಪಯಣದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ.

ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎ ಆರ್‌ ಎ ಐ), ಎಸ್‌ ಎ ಇ ಇಂಟರ್‌ನ್ಯಾಷನಲ್ ಮತ್ತು ಎಸ್‌ ಎ ಇ ಇಂಡಿಯಾ ಸಹಯೋಗದೊಂದಿಗೆ ಆಯೋಜಿಸಿರುವ ಎಸ್‌ ಐ ಎ ಟಿ 2026 ಅನ್ನು ಎ ಆರ್‌ ಎ ಐ ನ ವಜ್ರ ಮಹೋತ್ಸವದ ವರ್ಷದಲ್ಲಿ ನಡೆಸಲಾಗುತ್ತಿದೆ ಮತ್ತು ಇದು ಭವಿಷ್ಯದ ಸಾರಿಗೆ ವ್ಯವಸ್ಥೆಗಳ ನವೀನ ಹಾದಿಗಳ ಮೇಲೆ ಕೇಂದ್ರೀಕರಿಸುತ್ತದೆ.

ವಾಹನ ಕ್ಷೇತ್ರದ ತಜ್ಞರು, ಉದ್ಯಮದ ನಾಯಕರು, ಸಂಶೋಧಕರು ಮತ್ತು ನೀತಿ ನಿರೂಪಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು, ನಾವೀನ್ಯತೆಯನ್ನು ಚಾಲನೆ ಮಾಡುವಲ್ಲಿ ಮತ್ತು ಸುರಕ್ಷಿತ ಹಾಗೂ ಸ್ವಚ್ಛ ಚಲನಶೀಲತೆಯನ್ನು ಸಶಕ್ತಗೊಳಿಸುವಲ್ಲಿ ಕಳೆದ ಆರು ದಶಕಗಳ ಕೊಡುಗೆಗಾಗಿ ಎ ಆರ್‌ ಎ ಐ ಅನ್ನು ಅಭಿನಂದಿಸಿದರು. ಭಾರತದ ವಾಹನ ಪರಿಸರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಎ ಆರ್‌ ಎ ಐ ಪಾತ್ರವನ್ನು ಅವರು "ಶ್ಲಾಘನೀಯ ಮತ್ತು ಪರಿವರ್ತಕ" ಎಂದು ಬಣ್ಣಿಸಿದರು.

ಭಾರತದ ಕ್ಷಿಪ್ರ ಆರ್ಥಿಕ ಪ್ರಗತಿಯನ್ನು ಉಲ್ಲೇಖಿಸಿದ ಕೇಂದ್ರ ಸಚಿವರು, "ಭಾರತವು 4.18 ಟ್ರಿಲಿಯನ್ ಅಮೆರಿಕನ್ ಡಾಲರ್ ಜಿಡಿಪಿಯೊಂದಿಗೆ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಮತ್ತು ಮುಂಬರುವ ವರ್ಷಗಳಲ್ಲಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಹಾದಿಯಲ್ಲಿದೆ. 2030 ರ ವೇಳೆಗೆ ಭಾರತದ ಅಂದಾಜು 7.3 ಟ್ರಿಲಿಯನ್ ಅಮೆರಿಕನ್ ಡಾಲರ್ ಜಿಡಿಪಿಯು ರಾಷ್ಟ್ರದ ಬೆಳೆಯುತ್ತಿರುವ ವಿಶ್ವಾಸ, ಸಾಮರ್ಥ್ಯ ಮತ್ತು ಕೈಗಾರಿಕಾ ಶಕ್ತಿಯನ್ನು ಪ್ರತಿಬಿಂಬಿಸುತ್ತದೆ" ಎಂದು ಹೇಳಿದರು.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ದೂರದರ್ಶಿ ನಾಯಕತ್ವದಲ್ಲಿ, ಭಾರತವು 2070ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ ಸ್ಪಷ್ಟ ಮತ್ತು ಮಹತ್ವಾಕಾಂಕ್ಷೆಯ ಮಾರ್ಗಸೂಚಿಯನ್ನು ರೂಪಿಸಿದೆ ಎಂದು ಶ್ರೀ ಕುಮಾರಸ್ವಾಮಿ ಒತ್ತಿ ಹೇಳಿದರು. ಮೇಕ್ ಇನ್ ಇಂಡಿಯಾ ಮತ್ತು ಆತ್ಮನಿರ್ಭರ ಭಾರತ್ ಮೇಲಿನ ನವೀಕೃತ ಗಮನವು ಮುಂದುವರಿದ ಉತ್ಪಾದನಾ ವಲಯಗಳನ್ನು ಬಲಪಡಿಸುತ್ತಿದೆ, ಇದು ಭಾರತದ ಭವಿಷ್ಯದ ಬೆಳವಣಿಗೆ ಮತ್ತು ಜಾಗತಿಕ ಸ್ಥಾನಮಾನವನ್ನು ನಿರ್ಧರಿಸುತ್ತದೆ ಎಂದು ಅವರು ತಿಳಿಸಿದರು.

"ಎಲೆಕ್ಟ್ರಿಕ್ ಮೊಬಿಲಿಟಿಯು ಈ ಪರಿವರ್ತನೆಯ ಹೃದಯಭಾಗದಲ್ಲಿದೆ. ಇದು ಆಮದು ಮಾಡಿಕೊಳ್ಳುವ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ, ಹೊರಸೂಸುವಿಕೆಯನ್ನು ತಗ್ಗಿಸುತ್ತದೆ ಮತ್ತು ಭಾರತೀಯ ಉದ್ಯಮ, ನಾವೀನ್ಯಕಾರರು ಮತ್ತು ನಮ್ಮ ಯುವ ಕಾರ್ಯಪಡೆಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ" ಎಂದು ಅವರು ಹೇಳಿದರು.

ಸರ್ಕಾರದ ನೀತಿ ಉಪಕ್ರಮಗಳನ್ನು ವಿವರಿಸಿದ ಸಚಿವರು, ಎಲೆಕ್ಟ್ರಿಕ್ ವಾಹನಗಳಿಗೆ ಪರಿವರ್ತನೆಯನ್ನು ವೇಗಗೊಳಿಸಲು ಭಾರೀ ಕೈಗಾರಿಕೆಗಳ ಸಚಿವಾಲಯವು ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದರು. 11,500 ಕೋಟಿ ರೂಪಾಯಿ ವೆಚ್ಚದ ಫೇಮ್-II ಯೋಜನೆಯು 16.71 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳ ಅಳವಡಿಕೆಯನ್ನು ಬೆಂಬಲಿಸಿದೆ ಮತ್ತು ದೇಶಾದ್ಯಂತ 9,000 ಕ್ಕೂ ಹೆಚ್ಚು ಸಾರ್ವಜನಿಕ ಚಾರ್ಜಿಂಗ್ ಕೇಂದ್ರಗಳ ಮಂಜೂರಾತಿಗೆ ಅನುವು ಮಾಡಿಕೊಟ್ಟಿದೆ ಎಂದು ಅವರು ಹೇಳಿದರು.

ಪಿಎಂ ಇ-ಡ್ರೈವ್ ಯೋಜನೆಯು 10,900 ಕೋಟಿ ರೂಪಾಯಿ ವೆಚ್ಚದಲ್ಲಿ ಬೇಡಿಕೆ ಪ್ರೋತ್ಸಾಹಕಗಳ ಮೂಲಕ ಇವಿ ಅಳವಡಿಕೆಯನ್ನು ಬಲಪಡಿಸಿದೆ ಮತ್ತು ಚಾರ್ಜಿಂಗ್ ಮೂಲಸೌಕರ್ಯವನ್ನು ವಿಸ್ತರಿಸಿದೆ, ಈ ಯೋಜನೆಯಡಿ 20 ಲಕ್ಷಕ್ಕೂ ಹೆಚ್ಚು ಎಲೆಕ್ಟ್ರಕ್ರಿಕ್ ವಾಹನಗಳು ಮಾರಾಟವಾಗಿವೆ ಎಂದು ಅವರು ತಿಳಿಸಿದರು. 25,938 ಕೋಟಿ ರೂಪಾಯಿ ವೆಚ್ಚದ ಉತ್ಪಾದನೆ ಆಧಾರಿತ ಪ್ರೋತ್ಸಾಹಕ (ಪಿ ಎಲ್‌ ಐ) ಆಟೋ ಯೋಜನೆಯು ದೇಶೀಯ ಮೌಲ್ಯವರ್ಧನೆಯನ್ನು ಉತ್ತೇಜಿಸುತ್ತಿದೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತಿದೆ ಎಂದು ಅವರು ಹೇಳಿದರು.

ಪಿ ಎಲ್‌ ಐ-ಎಸಿಸಿ ಯೋಜನೆಯ ಬಗ್ಗೆ ಒತ್ತಿ ಹೇಳಿದ ಶ್ರೀ ಕುಮಾರಸ್ವಾಮಿ, "ನಾವು ಭಾರತದಲ್ಲಿ 50 GWh ಸುಧಾರಿತ ಕೆಮಿಸ್ಟ್ರಿ ಸೆಲ್‌ ಬ್ಯಾಟರಿ ಉತ್ಪಾದನಾ ಸಾಮರ್ಥ್ಯವನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದೇವೆ, ಇದು ದೀರ್ಘಕಾಲೀನ ಇಂಧನ ಭದ್ರತೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುತ್ತದೆ" ಎಂದರು. ಇತ್ತೀಚೆಗೆ ಅನುಮೋದಿಸಲಾದ ಅಪರೂಪದ ಭೂಮಿಯ ಶಾಶ್ವತ ಮ್ಯಾಗ್ನೆಟ್ (ಆರ್‌ ಇ ಪಿ ಎಂ) ಯೋಜನೆಯನ್ನು ಅವರು ಉಲ್ಲೇಖಿಸಿದರು. 7,280 ಕೋಟಿ ರೂಪಾಯಿಗಳ ಬಜೆಟ್ ವೆಚ್ಚದ ಈ ಯೋಜನೆಯು ಎಲೆಕ್ಟ್ರಿಕ್ ವಾಹನಗಳು, ಪವನ ಟರ್ಬೈನ್‌ ಗಳು, ರಕ್ಷಣಾ ವ್ಯವಸ್ಥೆಗಳು ಮತ್ತು ಎಲೆಕ್ಟ್ರಾನಿಕ್ಸ್‌ ಗಳಿಗೆ ಅಗತ್ಯವಿರುವ ನಿರ್ಣಾಯಕ ಬಿಡಿಭಾಗಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು.

ಪರಿಸರ ಕಾಳಜಿಯತ್ತ ಗಮನ ಸೆಳೆದ ಸಚಿವರು, ವಾಣಿಜ್ಯ ವಾಹನ ವಿಭಾಗದ ವಿದ್ಯುದ್ದೀಕರಣಕ್ಕೆ ವಿಶೇಷ ಗಮನ ನೀಡಬೇಕಾಗಿದೆ, ಏಕೆಂದರೆ ಈ ವಾಹನಗಳು ಸಾರಿಗೆ ಸಂಬಂಧಿತ ಮಾಲಿನ್ಯಕ್ಕೆ ಶೇಕಡಾ 40 ಕ್ಕಿಂತ ಹೆಚ್ಚು ಕೊಡುಗೆ ನೀಡುತ್ತವೆ ಎಂದು ಹೇಳಿದರು. ಈ ವಿಭಾಗದಲ್ಲಿ ಇವಿ ಅಳವಡಿಕೆಯನ್ನು ಬಲಪಡಿಸಲು ದೇಶಾದ್ಯಂತ 70,000ಕ್ಕೂ ಹೆಚ್ಚು ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲು ಪಿಎಂ ಇ-ಡ್ರೈವ್ ಯೋಜನೆಯಡಿ 2,000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ ಎಂದು ಅವರು ಹೇಳಿದರು.

ಉದ್ಯಮದ ಕಾರ್ಯಕ್ಷಮತೆಯ ಅಂಕಿಅಂಶಗಳನ್ನು ಮಂಡಿಸಿದ ಶ್ರೀ ಕುಮಾರಸ್ವಾಮಿ, "ವಾಹನ ಉತ್ಪಾದನೆಯು ಹಣಕಾಸು ವರ್ಷ 2023-24 ರಲ್ಲಿ 28.4 ಮಿಲಿಯನ್ ಯುನಿಟ್‌ ಗಳಿಂದ 2024-25 ರಲ್ಲಿ 31 ಮಿಲಿಯನ್ ಯುನಿಟ್‌ ಗಳಿಗೆ ಏರಿಕೆಯಾಗಿದೆ, ಇದೇ ಅವಧಿಯಲ್ಲಿ ರಫ್ತು 4.5 ಮಿಲಿಯನ್ ಯುನಿಟ್‌ ಗಳಿಂದ 5.36 ಮಿಲಿಯನ್ ಯುನಿಟ್‌ ಗಳಿಗೆ ಏರಿದೆ. ಈ ಅಂಕಿಅಂಶಗಳು ಸ್ವಚ್ಛ, ಸ್ಪರ್ಧಾತ್ಮಕ ಮತ್ತು ಸುಸ್ಥಿರ ವಾಹನ ಕ್ಷೇತ್ರವನ್ನು ಉತ್ತೇಜಿಸುವಲ್ಲಿ ಸರ್ಕಾರದ ಪ್ರಯತ್ನಗಳ ಯಶಸ್ಸನ್ನು ಪ್ರತಿಬಿಂಬಿಸುತ್ತವೆ" ಎಂದರು.

ಈ ಸಂದರ್ಭದಲ್ಲಿ, ಕೇಂದ್ರ ಸಚಿವರು ವಿವಿಧ ಪ್ರದರ್ಶನ ಮಳಿಗೆಗಳನ್ನು ವೀಕ್ಷಿಸಿದರು, ಉದ್ಯಮದ ಪಾಲುದಾರರು, ನವೋದ್ಯಮಗಳು ಮತ್ತು ಸಂಶೋಧಕರೊಂದಿಗೆ ಸಂವಾದ ನಡೆಸಿದರು ಮತ್ತು ಪ್ರಯಾಣಿಕರ ಸುರಕ್ಷತೆ ಮತ್ತು ಚಲನಶೀಲತೆಯ ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಉದಯೋನ್ಮುಖ ತಂತ್ರಜ್ಞಾನಗಳನ್ನು ಅನ್ವೇಷಿಸಿದರು. ಅವರು ಎ ಆರ್‌ ಎ ಐ ಪೆವಿಲಿಯನ್ ಮತ್ತು ತಂತ್ರಜ್ಞಾನ ಪೆವಿಲಿಯನ್‌ ಗೆ ಭೇಟಿ ನೀಡಿದರು, ಅಲ್ಲಿ ವಾಹನ ಪರೀಕ್ಷೆ, ಸುರಕ್ಷತಾ ವ್ಯವಸ್ಥೆಗಳು, ವಿದ್ಯುದ್ದೀಕರಣ ಮತ್ತು ಸಂಪರ್ಕಿತ ಚಲನಶೀಲತೆಯಲ್ಲಿನ ಅತ್ಯಾಧುನಿಕ ಆವಿಷ್ಕಾರಗಳನ್ನು ಪ್ರದರ್ಶಿಸಲಾಗಿತ್ತು.

ಶ್ರೀ ಕುಮಾರಸ್ವಾಮಿ ಅವರು ಪುಣೆ ಸಮೀಪದ ತಕ್ವೆಯಲ್ಲಿರುವ ಎ ಆರ್‌ ಎ ಐ ನ ಮೊಬಿಲಿಟಿ ರಿಸರ್ಚ್ ಸೆಂಟರ್‌ (ಎಂ ಆರ್‌ ಸಿ) ನಲ್ಲಿ ಸುರಕ್ಷತೆ, ಭದ್ರತೆ ಮತ್ತು ಸುಧಾರಿತ ಸಂಶೋಧನಾ ಸಾಮರ್ಥ್ಯಗಳನ್ನು ಬಲಪಡಿಸಲು ಸ್ಥಾಪಿಸಲಾದ ಮೂರು ಹೊಸ ಸೌಲಭ್ಯಗಳನ್ನು ಉದ್ಘಾಟಿಸಿದರು. ಈ ಸೌಲಭ್ಯಗಳು ಭಾರತದ ಪರೀಕ್ಷೆ ಮತ್ತು ಪ್ರಮಾಣೀಕರಣ ಮೂಲಸೌಕರ್ಯವನ್ನು ಇನ್ನಷ್ಟು ಹೆಚ್ಚಿಸುತ್ತವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಎಸ್‌ ಐ ಎ ಟಿ ನಲ್ಲಿ ಎಂ ಎಸ್‌ ಎಂ ಇ ಗಳು ಮತ್ತು ನವೋದ್ಯಮಗಳ ಬೆಳೆಯುತ್ತಿರುವ ಭಾಗವಹಿಸುವಿಕೆಯನ್ನು ಶ್ಲಾಘಿಸಿದ ಸಚಿವರು, ವಾಹನ ಕ್ಷೇತ್ರದಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಪೋಷಿಸುವಲ್ಲಿ ಎ ಆರ್‌ ಎ ಐ ನ ಸಂಪರ್ಕ ಉಪಕ್ರಮಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಿದರು.

ಎಸ್‌ ಐ ಎ ಟಿ 2026 ಸಂಶೋಧಕರು, ತಂತ್ರಜ್ಞರು ಮತ್ತು ಶಿಕ್ಷಣತಜ್ಞರಿಗೆ ಆಲೋಚನೆಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಭವಿಷ್ಯದ ಚಲನಶೀಲ ಪರಿಹಾರಗಳ ಕುರಿತು ಸಹಕರಿಸಲು ಪರಿಣಾಮಕಾರಿ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಶ್ರೀ ಹೆಚ್.ಡಿ. ಕುಮಾರಸ್ವಾಮಿ ಆಶಾವಾದ ವ್ಯಕ್ತಪಡಿಸಿದರು. ವಿಕಸಿತ ಭಾರತ ಮತ್ತು ಆತ್ಮನಿರ್ಭರ ಭಾರತ ದೃಷ್ಟಿಕೋನಕ್ಕೆ ಅನುಗುಣವಾಗಿ ಸ್ಥಿತಿಸ್ಥಾಪಕ, ನಾವೀನ್ಯತೆ ಆಧಾರಿತ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ವಾಹನ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

 

*****

 


(रिलीज़ आईडी: 2219411) आगंतुक पटल : 6
इस विज्ञप्ति को इन भाषाओं में पढ़ें: English , Urdu , Marathi , हिन्दी , Tamil