ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ
ಮಾಹಿತಿ ಲೇಖನ
ಭಾರತ ಮತ್ತು ಯುರೋಪಿಯನ್ ಒಕ್ಕೂಟದ ವ್ಯಾಪಾರ ಒಪ್ಪಂದ
"ಎಲ್ಲಾ ಒಪ್ಪಂದಗಳ ತಾಯಿ" - ಅವಕಾಶಗಳ ಅನಾವರಣ
ಸಬಲ ಭಾರತ @2047
प्रविष्टि तिथि:
27 JAN 2026 3:56PM by PIB Bengaluru
ಭಾರತ ಮತ್ತು ಯುರೋಪಿಯನ್ ಯೂನಿಯನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಇದು ಭಾರತದ ಅತ್ಯಂತ ಕಾರ್ಯತಂತ್ರದ ಆರ್ಥಿಕ ಸಹಭಾಗಿತ್ವದಲ್ಲಿ ಒಂದು ಪ್ರಮುಖ ಮೈಲಿಗಲ್ಲಾಗಿದೆ. ಆಧುನಿಕ ಮತ್ತು ನಿಯಮ ಆಧಾರಿತ ವ್ಯಾಪಾರ ಪಾಲುದಾರಿಕೆಯಾಗಿ ರೂಪಿಸಲಾದ ಈ ಎಫ್‌ಟಿಎ, ಸಮಕಾಲೀನ ಜಾಗತಿಕ ಸವಾಲುಗಳಿಗೆ ಸ್ಪಂದಿಸುವ ಜೊತೆಗೆ ವಿಶ್ವದ 4ನೇ ಮತ್ತು 2ನೇ ಅತಿದೊಡ್ಡ ಆರ್ಥಿಕತೆಗಳ ನಡುವೆ ಆಳವಾದ ಮಾರುಕಟ್ಟೆ ಏಕೀಕರಣವನ್ನು ಸಕ್ರಿಯಗೊಳಿಸುತ್ತದೆ.
ಅಂದಾಜು INR 2,091.6 ಲಕ್ಷ ಕೋಟಿ (USD 24 ಟ್ರಿಲಿಯನ್) ಗೂ ಹೆಚ್ಚಿನ ಸಂಯೋಜಿತ ಮಾರುಕಟ್ಟೆಯೊಂದಿಗೆ, ಭಾರತ ಮತ್ತು ಯುರೋಪ್ ಒಕ್ಕೂಟ ನ 2 ಶತಕೋಟಿ ಜನರಿಗೆ ಸಾಟಿಯಿಲ್ಲದ ಅವಕಾಶಗಳನ್ನು ತರುವ ಈ ಎಫ್‌ಟಿಎ, ವ್ಯಾಪಾರ ಮತ್ತು ನಾವೀನ್ಯತೆಗಾಗಿ ಗಮನಾರ್ಹ ಸಾಮರ್ಥ್ಯವನ್ನು ಮುಕ್ತಗೊಳಿಸುತ್ತದೆ. ಈ ಒಪ್ಪಂದವು ಭಾರತದ ರಫ್ತಿನ ವ್ಯಾಪಾರ ಮೌಲ್ಯದ ಶೇಕಡಾ 99 ಕ್ಕಿಂತ ಹೆಚ್ಚು ಭಾಗಕ್ಕೆ ಅಭೂತಪೂರ್ವ ಮಾರುಕಟ್ಟೆ ಪ್ರವೇಶವನ್ನು ನೀಡುತ್ತದೆ, ಅದೇ ಸಮಯದಲ್ಲಿ ಸೂಕ್ಷ್ಮ ವಲಯಗಳಿಗೆ ನೀತಿ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳುತ್ತದೆ ಮತ್ತು ಭಾರತದ ಅಭಿವೃದ್ಧಿ ಆದ್ಯತೆಗಳನ್ನು ಬಲಪಡಿಸುತ್ತದೆ.
ಭಾರತ ಮತ್ತು EU ನಡುವಿನ ದ್ವಿಪಕ್ಷೀಯ ಸರಕು ವ್ಯಾಪಾರವು ನಿರಂತರ ಬೆಳವಣಿಗೆಯನ್ನು ಪ್ರದರ್ಶಿಸಿದೆ. 2024-25ರಲ್ಲಿ ಇದರ ಮೌಲ್ಯ ಸುಮಾರು INR 11.5 ಲಕ್ಷ ಕೋಟಿ (USD 136.54 ಬಿಲಿಯನ್) ಆಗಿದ್ದು, ಭಾರತವು ಯುರೋಪ್ ಗೆ ಸರಿಸುಮಾರು INR 6.4 ಲಕ್ಷ ಕೋಟಿ (USD 75.85 ಬಿಲಿಯನ್) ಮೌಲ್ಯದ ಸರಕನ್ನು ರಫ್ತು ಮಾಡಿದೆ. ಭಾರತ-ಯುರೋಪ್ ಒಕ್ಕೂಟ ನಡುವಿನ ಸೇವಾ ವಲಯದ ವ್ಯಾಪಾರವು 2024 ರಲ್ಲಿ INR 7.2 ಲಕ್ಷ ಕೋಟಿ (USD 83.10 ಬಿಲಿಯನ್) ತಲುಪಿದೆ.
ಆರೋಗ್ಯಕರ ಮತ್ತು ಬೆಳೆಯುತ್ತಿರುವ ವ್ಯಾಪಾರದ ಹೊರತಾಗಿಯೂ, ಪರಸ್ಪರರ ಮಾರುಕಟ್ಟೆ ಮತ್ತು ವ್ಯಾಪಾರದ ಗಾತ್ರವನ್ನು ಪರಿಗಣಿಸಿದರೆ ಇನ್ನೂ ಹೆಚ್ಚಿನ ಗಣನೀಯ ಸಾಮರ್ಥ್ಯವು ಬಳಕೆಯಾಗದೆ ಉಳಿದಿದೆ. ಈ ಮುಕ್ತ ವ್ಯಾಪಾರ ಒಪ್ಪಂದವು (FTA) ಭಾರತ ಮತ್ತು ಯುರೋಪಿಯನ್ ಯೂನಿಯನ್ (EU) ಎರಡೂ ಪರಸ್ಪರ ಪ್ರಮುಖ ಆರ್ಥಿಕ ಪಾಲುದಾರರಾಗಿ ಹೊರಹೊಮ್ಮಲು ಒಂದು ಸಾಟಿಯಿಲ್ಲದ ಹಾದಿಯನ್ನು ಕಲ್ಪಿಸುತ್ತದೆ ಮತ್ತು ಅಪಾರ ಭರವಸೆಯನ್ನು ನೀಡುತ್ತದೆ.
ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಹೊಂದಿರುವ ಈ FTA, ಭಾರತ-EU ಸಂಬಂಧಗಳನ್ನು ಸಾಂಪ್ರದಾಯಿಕತೆಯಿಂದ ಆಧುನಿಕ, ಬಹುಮುಖಿ ಪಾಲುದಾರಿಕೆಯಾಗಿ ವಿಕಸನಗೊಳಿಸುತ್ತದೆ. ಇದು ರಫ್ತುದಾರರಿಗೆ ಸ್ಥಿರ ಮತ್ತು ಊಹಿಸಬಹುದಾದ ವಾತಾವರಣವನ್ನು ಒದಗಿಸುತ್ತದೆ. ಅಲ್ಲದೆ, ಎಂ ಎಸ್ ಎಂ ಇ (MSME) ಸೇರಿದಂತೆ ಭಾರತೀಯ ಉದ್ಯಮಗಳಿಗೆ ದೀರ್ಘಾವಧಿಯ ಹೂಡಿಕೆಗಳನ್ನು ಯೋಜಿಸಲು, ಯುರೋಪಿಯನ್ ಮೌಲ್ಯ ಸರಪಳಿಗಳೊಂದಿಗೆ ಸಂಯೋಜನೆಗೊಳ್ಳಲು ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆಗಳ ನಡುವೆ ನಿರಂತರ ಅನುಕೂಲಕರ ಮಾರುಕಟ್ಟೆ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ತಡೆರಹಿತ ಮಾರುಕಟ್ಟೆ ಪ್ರವೇಶದ ಮೂಲಕ ವ್ಯವಹಾರಗಳ ಸಬಲೀಕರಣ ಮತ್ತು ಭವಿಷ್ಯದ ಭದ್ರತೆ
ಯುರೋಪಿಯನ್ ಮಾರುಕಟ್ಟೆಗಳಿಗೆ ಭಾರತದ ಕಾರ್ಯತಂತ್ರದ ಪ್ರವೇಶ
ಭಾರತವು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಶೇಕಡಾ 97 ರಷ್ಟು ಸುಂಕದ ಸಾಲುಗಳಲ್ಲಿ (tariff lines) ಆದ್ಯತೆಯ ಪ್ರವೇಶವನ್ನು ಪಡೆದುಕೊಂಡಿದೆ, ಇದು ಒಟ್ಟು ವ್ಯಾಪಾರ ಮೌಲ್ಯದ ಶೇಕಡಾ 99.5 ರಷ್ಟನ್ನು ಒಳಗೊಂಡಿದೆ. ಅದರ ವಿವರಗಳು ಹೀಗಿವೆ:
- ಭಾರತದ ರಫ್ತಿನ ಶೇಕಡಾ 90.7 ರಷ್ಟನ್ನು ಒಳಗೊಂಡಿರುವ 70.4% ಸುಂಕದ ಸಾಲುಗಳ ಮೇಲೆ ತಕ್ಷಣದ ಸುಂಕ ವಿನಾಯಿತಿ ದೊರೆಯಲಿದೆ. ಇದು ಪ್ರಮುಖವಾಗಿ ಕಾರ್ಮಿಕ-ತೀವ್ರ ವಲಯಗಳಾದ ಜವಳಿ, ಚರ್ಮ ಮತ್ತು ಪಾದರಕ್ಷೆಗಳು, ಚಹಾ, ಕಾಫಿ, ಸಾಂಬಾರ ಪದಾರ್ಥಗಳು, ಕ್ರೀಡಾ ಸಾಮಗ್ರಿಗಳು, ಆಟಿಕೆಗಳು, ರತ್ನಗಳು ಮತ್ತು ಆಭರಣಗಳು ಹಾಗೂ ಕೆಲವು ಸಮುದ್ರ ಉತ್ಪನ್ನಗಳನ್ನು ಒಳಗೊಂಡಿದೆ ;
- ಭಾರತದ ರಫ್ತಿನ ಶೇಕಡಾ 2.9 ರಷ್ಟನ್ನು ಒಳಗೊಂಡಿರುವ 20.3% ಸುಂಕದ ಸಾಲುಗಳಿಗೆ ಮುಂದಿನ 3 ರಿಂದ 5 ವರ್ಷಗಳಲ್ಲಿ ಶೂನ್ಯ ಸುಂಕದ ಪ್ರವೇಶ ದೊರೆಯಲಿದೆ. ಇದು ಕೆಲವು ಸಮುದ್ರ ಉತ್ಪನ್ನಗಳು, ಸಂಸ್ಕರಿಸಿದ ಆಹಾರ ಪದಾರ್ಥಗಳು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಒಳಗೊಂಡಿದೆ ;
- ಭಾರತದ ರಫ್ತಿನ ಶೇಕಡಾ 6 ರಷ್ಟನ್ನು ಒಳಗೊಂಡಿರುವ 6.1% ಸುಂಕದ ಸಾಲುಗಳಿಗೆ 'ಸುಂಕ ಕಡಿತ'ದ (Tariff Reduction) ಮೂಲಕ ಆದ್ಯತೆಯ ಪ್ರವೇಶ ಸಿಗಲಿದೆ. ಇದು ಕೆಲವು ಕೋಳಿ ಉತ್ಪನ್ನಗಳು, ಸಂರಕ್ಷಿತ ತರಕಾರಿಗಳು, ಬೇಕರಿ ಉತ್ಪನ್ನಗಳಿಗೆ ಅನ್ವಯಿಸುತ್ತದೆ. ಇನ್ನುಳಿದಂತೆ ಕಾರುಗಳು, ಉಕ್ಕು, ಕೆಲವು ಸೀಗಡಿ ಉತ್ಪನ್ನಗಳಿಗೆ TRQ (Tariff Rate Quotas) ಮೂಲಕ ಪ್ರವೇಶ ಕಲ್ಪಿಸಲಾಗುತ್ತದೆ ;
ಪ್ರಮುಖ ಕಾರ್ಮಿಕ-ತೀವ್ರ ವಲಯಗಳು (ಜವಳಿ, ಉಡುಪು, ಸಮುದ್ರ ಉತ್ಪನ್ನಗಳು, ಚರ್ಮ, ಪಾದರಕ್ಷೆಗಳು, ರಾಸಾಯನಿಕಗಳು, ಪ್ಲಾಸ್ಟಿಕ್/ರಬ್ಬರ್, ಕ್ರೀಡಾ ಸಾಮಗ್ರಿಗಳು, ಆಟಿಕೆಗಳು, ರತ್ನಗಳು ಮತ್ತು ಆಭರಣಗಳಂತಹವು), ಇವುಗಳು 2.87 ಲಕ್ಷ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚಿನ ಮೊತ್ತವನ್ನು ಒಳಗೊಂಡಿವೆ.
ಯುರೋಪಿಯನ್ ಒಕ್ಕೂಟದಲ್ಲಿ (EU) ಪ್ರಸ್ತುತ ಶೇ. 4 ರಿಂದ ಶೇ. 26 ರಷ್ಟು ಆಮದು ಸುಂಕಕ್ಕೆ ಒಳಪಟ್ಟಿರುವ ಮತ್ತು ಉದ್ಯೋಗ ಸೃಷ್ಟಿಗೆ ಅತ್ಯಂತ ಪ್ರಮುಖವಾಗಿರುವ ಸುಮಾರು ₹2.75 ಲಕ್ಷ ಕೋಟಿ (33 ಬಿಲಿಯನ್ ಯುಎಸ್ ಡಾಲರ್) ಮೌಲ್ಯದ ರಫ್ತುಗಳು, ಮುಕ್ತ ವ್ಯಾಪಾರ ಒಪ್ಪಂದ (FTA) ಜಾರಿಗೆ ಬಂದ ನಂತರ ಶೂನ್ಯ ಸುಂಕದೊಂದಿಗೆ ಪ್ರವೇಶ ಪಡೆಯಲಿವೆ. ಇದರಿಂದಾಗಿ ಇವುಗಳು ಯುರೋಪಿಯನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಪರ್ಧಾತ್ಮಕತೆಯನ್ನು ಹೊಂದಲಿವೆ. ಈ ವಲಯಗಳು ಸುಂಕದ ಉದಾರೀಕರಣ ಮತ್ತು ವರ್ಧಿತ ಸ್ಪರ್ಧಾತ್ಮಕತೆಯಿಂದ ಪ್ರಯೋಜನ ಪಡೆಯಲು ಸಿದ್ಧವಾಗಿದ್ದು, ಜಾಗತಿಕ ಮತ್ತು ಯುರೋಪಿಯನ್ ಮೌಲ್ಯ ಸರಪಳಿಗಳೊಂದಿಗೆ ಆಳವಾದ ಏಕೀಕರಣವನ್ನು ಸಾಧಿಸಲು ಹಾಗೂ ಏಕಕಾಲದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನೆರವಾಗಲಿವೆ.
ಯುರೋಪಿಯನ್ ಯೂನಿಯನ್ಗೆ (EU) ಭಾರತದ ಪ್ರಸ್ತಾವನೆ
ಒಟ್ಟಾರೆಯಾಗಿ, ಭಾರತವು ತನ್ನ ಶೇ. 92.1 ರಷ್ಟು ಸುಂಕದ ಶ್ರೇಣಿಗಳನ್ನು (tariff lines) ನೀಡುತ್ತಿದೆ, ಇದು ಯುರೋಪಿಯನ್ ಯೂನಿಯನ್ ರಫ್ತುಗಳ ಶೇ. 97.5 ರಷ್ಟನ್ನು ಒಳಗೊಂಡಿದೆ, ಪ್ರಮುಖವಾಗಿ:
• ಶೇ. 49.6 ರಷ್ಟು ಸುಂಕದ ಶ್ರೇಣಿಗಳಲ್ಲಿ ತಕ್ಷಣದ ಸುಂಕ ರದ್ದತಿ ಇರುತ್ತದೆ;
• ಶೇ. 39.5 ರಷ್ಟು ಸುಂಕದ ಶ್ರೇಣಿಗಳು 5, 7 ಮತ್ತು 10 ವರ್ಷಗಳ ಅವಧಿಯಲ್ಲಿ ಹಂತ-ಹಂತವಾಗಿ ರದ್ದತಿಗೆ ಒಳಪಡುತ್ತವೆ;
• ಶೇ. 3 ರಷ್ಟು ಉತ್ಪನ್ನಗಳು ಹಂತ-ಹಂತದ ಸುಂಕ ಕಡಿತಕ್ಕೆ ಒಳಪಡುತ್ತವೆ ಮತ್ತು ಕೆಲವು ಉತ್ಪನ್ನಗಳಾದ ಸೇಬು, ಪೇರಳೆ, ಪೀಚ್ ಹಾಗೂ ಕಿವಿ ಹಣ್ಣುಗಳಿಗೆ 'ಸುಂಕದ ಪ್ರಮಾಣದ ಕೋಟಾ' (TRQs) ಅನ್ವಯಿಸುತ್ತದೆ.
ಯುರೋಪಿಯನ್ ಯೂನಿಯನ್ ನ ಉನ್ನತ ತಂತ್ರಜ್ಞಾನದ ಸರಕುಗಳ ಆಮದು ಭಾರತದ ಆಮದು ಮೂಲಗಳನ್ನು ವೈವಿಧ್ಯಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದು ಉದ್ಯಮಗಳ ಇನ್ ಪುಟ್ ವೆಚ್ಚವನ್ನು ಕಡಿಮೆ ಮಾಡುತ್ತದೆ, ಗ್ರಾಹಕರಿಗೆ ಪ್ರಯೋಜನ ನೀಡುತ್ತದೆ ಮತ್ತು ಭಾರತೀಯ ಉದ್ಯಮಗಳು ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಸಂಯೋಜನೆಗೊಳ್ಳಲು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ.
ಕೃಷಿ ಬೆಳವಣಿಗೆ ಮತ್ತು ರೈತರ ಜೀವನೋಪಾಯಕ್ಕೆ ಉತ್ತೇಜನ, ಜೊತೆಗೆ ಸೂಕ್ತ ರಕ್ಷಣೆ
ಯುರೋಪಿಯನ್ ಒಕ್ಕೂಟದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದವು (FTA) ಭಾರತದ ಕೃಷಿ ಮತ್ತು ಸಂಸ್ಕರಿಸಿದ ಆಹಾರ ವಲಯದ ಮೇಲೆ ಗಮನಾರ್ಹ ಸಕಾರಾತ್ಮಕ ಪರಿಣಾಮ ಬೀರುವ ನಿರೀಕ್ಷೆಯಿದೆ. ಚಹಾ, ಕಾಫಿ, ಸಾಂಬಾರ ಪದಾರ್ಥಗಳು, ದ್ರಾಕ್ಷಿ, ಸೌತೆಕಾಯಿ, ಒಣಗಿದ ಈರುಳ್ಳಿ, ತಾಜಾ ತರಕಾರಿಗಳು ಮತ್ತು ಹಣ್ಣುಗಳು ಹಾಗೂ ಸಂಸ್ಕರಿಸಿದ ಆಹಾರ ಉತ್ಪನ್ನಗಳಿಗೆ ಆದ್ಯತೆಯ ಮಾರುಕಟ್ಟೆ ಪ್ರವೇಶ ದೊರೆಯುವುದರಿಂದ, ಇವು ಯುರೋಪಿಯನ್ ಮಾರುಕಟ್ಟೆಯಲ್ಲಿ ಹೆಚ್ಚಿನ ಸ್ಪರ್ಧಾತ್ಮಕತೆಯನ್ನು ಪಡೆಯಲಿವೆ.
ಈ ಮಾರುಕಟ್ಟೆ ಪ್ರವೇಶವು ರೈತರ ನೈಜ ಆದಾಯವನ್ನು ಬಲಪಡಿಸುತ್ತದೆ, ಗ್ರಾಮೀಣ ಜೀವನೋಪಾಯಕ್ಕೆ ಆಸರೆಯಾಗುತ್ತದೆ ಮತ್ತು ಭಾರತೀಯ ಕೃಷಿ ಉತ್ಪನ್ನಗಳ ಜಾಗತಿಕ ಸ್ಪರ್ಧಾತ್ಮಕತೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ.
ಭಾರತವು ರಫ್ತು ಬೆಳವಣಿಗೆ ಮತ್ತು ದೇಶೀಯ ಆದ್ಯತೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಡೈರಿ, ಧಾನ್ಯಗಳು, ಕೋಳಿ ಸಾಕಾಣಿಕೆ, ಸೋಯಾ ಮೀಲ್ ಮತ್ತು ಕೆಲವು ಹಣ್ಣು-ತರಕಾರಿಗಳನ್ನು ಒಳಗೊಂಡಂತೆ ಸೂಕ್ಷ್ಮ ವಲಯಗಳಿಗೆ ಎಚ್ಚರಿಕೆಯಿಂದ ರಕ್ಷಣೆ ನೀಡಿದೆ. ಈ ಮುಕ್ತ ವ್ಯಾಪಾರ ಒಪ್ಪಂದವು ಭಾರತೀಯ ಕೃಷಿ ವಲಯವು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಹೆಚ್ಚಿನ ಮೌಲ್ಯವನ್ನು ಪಡೆಯಲು ಪೂರಕವಾಗಿದ್ದು, ಸುಸ್ಥಿರ ಜೀವನೋಪಾಯ ಮತ್ತು ಸುಭದ್ರ ಆದಾಯದ ಅವಕಾಶಗಳ ಮೂಲಕ ಈ ವಲಯದ ದೀರ್ಘಕಾಲೀನ ಸಮೃದ್ಧಿಯನ್ನು ಖಚಿತಪಡಿಸುತ್ತದೆ.
ಅಸ್ತಿತ್ವದಲ್ಲಿರುವ ಪೂರೈಕೆ ಸರಪಳಿಗಳಿಗೆ ಅನುಗುಣವಾಗಿ ಉತ್ಪನ್ನ ಆಧಾರಿತ ನಿಯಮಗಳು
ಈ FTA ಅಡಿಯಲ್ಲಿ ರಫ್ತು ಮಾಡಲಾಗುವ ಸರಕುಗಳು 'ಮೂಲದ ಸ್ಥಾನಮಾನ' ಮತ್ತು ಆದ್ಯತೆಯ ಪ್ರವೇಶವನ್ನು ಪಡೆಯಲು ಬೇಕಾದ ಸಮರ್ಪಕ ಸಂಸ್ಕರಣೆ ಅಥವಾ ಉತ್ಪಾದನಾ ಪ್ರಕ್ರಿಯೆಗೆ ಒಳಪಟ್ಟಿರುವುದನ್ನು ಈ ಒಪ್ಪಂದವು ಖಚಿತಪಡಿಸುತ್ತದೆ. ಉತ್ಪನ್ನ ಆಧಾರಿತ ನಿಯಮಗಳು (PSRs) ಸಮತೋಲಿತವಾಗಿದ್ದು, ಅಸ್ತಿತ್ವದಲ್ಲಿರುವ ಪೂರೈಕೆ ಸರಪಳಿಗಳೊಂದಿಗೆ ಹೊಂದಿಕೆಯಾಗುತ್ತವೆ. ಜಾಗತಿಕ ಮೌಲ್ಯ ಸರಪಳಿಗಳಿಂದ ಕಚ್ಚಾ ವಸ್ತು ಅಥವಾ ಇನ್ಪುಟ್ಗಳನ್ನು ಪಡೆಯಲು ಅಗತ್ಯವಾದ ನಮ್ಯತೆಯನ್ನು ನೀಡುವ ಜೊತೆಗೆ, ಭಾಗಿದಾರ ದೇಶಗಳಲ್ಲಿ ಗಮನಾರ್ಹವಾದ ಸಂಸ್ಕರಣೆ ನಡೆಯುವುದನ್ನು ಈ ನಿಯಮಗಳು ಖಚಿತಪಡಿಸುತ್ತವೆ.
ಇದಲ್ಲದೆ, 'ಮೂಲದ ಹೇಳಿಕೆ'ಯ ಮೂಲಕ ಸ್ವಯಂ-ಪ್ರಮಾಣೀಕರಣಕ್ಕೆ ಅವಕಾಶ ನೀಡುವ ಮೂಲಕ, ಈ ಒಪ್ಪಂದವು ಭಾರತೀಯ ರಫ್ತುದಾರರಿಗೆ ಪಾಲನಾ ವೆಚ್ಚ ಮತ್ತು ಸಮಯವನ್ನು ಕಡಿಮೆ ಮಾಡಿ 'ಸುಲಭ ವ್ಯಾಪಾರ'ಕ್ಕೆ ಅನುವು ಮಾಡಿಕೊಡುತ್ತದೆ. ಸೀಗಡಿಗಳು ಮತ್ತು ಅಲ್ಯೂಮಿನಿಯಂ ಉತ್ಪನ್ನಗಳಿಗೆ ನಿರ್ದಿಷ್ಟ ಕೋಟಾಗಳನ್ನು ನಿಗದಿಪಡಿಸುವ ಮೂಲಕ ಈ ನಿಯಮಗಳು ಎಂ ಎಸ್ ಎಂ ಇ ಗಳ (MSMEs) ಅಗತ್ಯತೆಗಳನ್ನು ಪರಿಗಣಿಸಿ ಒಂದು ನವೀನ ಹಾದಿಯನ್ನು ರೂಪಿಸಿವೆ; ಇದು ಎಂ ಎಸ್ ಎಂ ಇ ಗಳಿಗೆ ಹೊರಗಿನಿಂದ ಇನ್ ಪುಟ್ ಗಳನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಅಲ್ಲದೆ, ಯಂತ್ರೋಪಕರಣ ಮತ್ತು ಏರೋಸ್ಪೇಸ್ ವಲಯದ ಕೆಲವು ನಿಯಮಗಳಿಗೆ 'ಪರಿವರ್ತನಾ ಅವಧಿ'ಯನ್ನು ನೀಡುವ ಮೂಲಕ, ಇವು 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ಉತ್ತೇಜನ ನೀಡುತ್ತವೆ.
ಸೇವಾ ವಲಯ - ಭವಿಷ್ಯದ ವ್ಯಾಪಾರದ ಪ್ರಮುಖ ಬೆಳವಣಿಗೆಯ ಚಾಲಕ
ಎರಡೂ ಆರ್ಥಿಕತೆಗಳಲ್ಲಿ ಸೇವಾ ವಲಯವು ಪ್ರಬಲವಾಗಿದ್ದು, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಭಾಗವಾಗಿದೆ. ಆದ್ದರಿಂದ ಭವಿಷ್ಯದಲ್ಲಿ ಈ ವಲಯದಲ್ಲಿ ಹೆಚ್ಚಿನ ವ್ಯಾಪಾರ ನಡೆಯಲಿದೆ. ಮಾರುಕಟ್ಟೆ ಪ್ರವೇಶದ ಖಚಿತತೆ, ತಾರತಮ್ಯವಿಲ್ಲದ ನಡವಳಿಕೆ, ಡಿಜಿಟಲ್ ಮೂಲಕ ಒದಗಿಸಲಾಗುವ ಸೇವೆಗಳ ಮೇಲೆ ಹೆಚ್ಚಿನ ಗಮನ ಮತ್ತು ಸಂಚಾರದ ಸುಲಭ ಸಾಧ್ಯತೆಗಳು ಸೇವಾ ರಫ್ತಿಗೆ ದೊಡ್ಡ ಮಟ್ಟದ ಉತ್ತೇಜನ ನೀಡುವ ನಿರೀಕ್ಷೆಯಿದೆ.
ಈ ಮುಕ್ತ ವ್ಯಾಪಾರ ಒಪ್ಪಂದದ (FTA) ಅಡಿಯಲ್ಲಿ, IT/ITeS, ವೃತ್ತಿಪರ ಸೇವೆಗಳು, ಶಿಕ್ಷಣ ಮತ್ತು ಇತರ ವ್ಯವಹಾರ ಸೇವೆಗಳು ಸೇರಿದಂತೆ ಒಟ್ಟು 144 ಸೇವಾ ಉಪ-ವಲಯಗಳಲ್ಲಿ ಯುರೋಪಿಯನ್ ಒಕ್ಕೂಟದಿಂದ (EU) ವಿಸ್ತಾರವಾದ ಮತ್ತು ಆಳವಾದ ಬದ್ಧತೆಗಳನ್ನು ಖಚಿತಪಡಿಸಿಕೊಳ್ಳಲಾಗಿದೆ. ಇದು ವಿಶಾಲ ವ್ಯಾಪ್ತಿಯ ಸೇವಾ ವಲಯಗಳನ್ನು ಒಳಗೊಂಡಿದ್ದು, ಭಾರತೀಯ ಸೇವಾ ಪೂರೈಕೆದಾರರು ತಮ್ಮ ಸೇವೆಗಳನ್ನು ಒದಗಿಸಲು ಯುರೋಪಿಯನ್ ಮಾರುಕಟ್ಟೆಯಲ್ಲಿ ಸ್ಥಿರ ಮತ್ತು ಪೂರಕವಾದ ವ್ಯವಸ್ಥೆಯನ್ನು ಪಡೆಯಲಿದ್ದಾರೆ. ಭಾರತದ ಅತ್ಯಾಧುನಿಕ ಮತ್ತು ಸ್ಪರ್ಧಾತ್ಮಕ ಸೇವೆಗಳು ರಫ್ತಿಗೆ ವೇಗ ನೀಡುವ ಜೊತೆಗೆ, ಯುರೋಪಿಯನ್ ವ್ಯವಹಾರಗಳು ಮತ್ತು ಗ್ರಾಹಕರಿಗೂ ಪ್ರಯೋಜನವನ್ನು ನೀಡಲಿವೆ.
ವೃತ್ತಿಪರ, ವ್ಯವಹಾರ, ದೂರಸಂಪರ್ಕ, ಕಡಲ , ಹಣಕಾಸು ಮತ್ತು ಪರಿಸರ ಸೇವೆಗಳಂತಹ EU ಆದ್ಯತೆಯ 102 ಉಪ-ವಲಯಗಳಲ್ಲಿ ಭಾರತವು ತನ್ನ ಕೊಡುಗೆಯನ್ನು ನೀಡಿದೆ. ಇದು ಯುರೋಪಿಯನ್ ಕಂಪನಿಗಳು ಭಾರತಕ್ಕೆ ಹೂಡಿಕೆ ಮತ್ತು ನವೀನ ಸೇವೆಗಳನ್ನು ತರಲು ಮುನ್ಸೂಚಿತ ವ್ಯವಸ್ಥೆಯನ್ನು ಒದಗಿಸುತ್ತದೆ. ಇದರಿಂದ ಅವರ ರಫ್ತು ಹೆಚ್ಚಾಗುವುದಲ್ಲದೆ, ಭಾರತೀಯ ಉದ್ಯಮಗಳಿಗೆ ವಿಶ್ವದರ್ಜೆಯ ಸೇವೆಗಳು ಲಭ್ಯವಾಗಲಿವೆ. ಈ ಪರಸ್ಪರ ಲಾಭದಾಯಕ ಚೌಕಟ್ಟು ಸೇವಾ ವ್ಯಾಪಾರವನ್ನು ವೇಗಗೊಳಿಸಲು, ಭಾರತೀಯ ವೃತ್ತಿಪರರು ಮತ್ತು ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ತೆರೆಯಲು ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಉಪಸ್ಥಿತಿಯನ್ನು ಬಲಪಡಿಸಲು ಸಿದ್ಧವಾಗಿದೆ. ಇದು ನಾವೀನ್ಯತೆ, ಕೌಶಲ್ಯಗಳ ಸಂಚಾರ ಮತ್ತು ಜ್ಞಾನಾಧಾರಿತ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
ಯುರೋಪಿನಾದ್ಯಂತ ಭಾರತದ ಪ್ರತಿಭೆಗಳಿಗೆ ಶಕ್ತಿ
ಈ ಮುಕ್ತ ವ್ಯಾಪಾರ ಒಪ್ಪಂದವು (FTA) ವ್ಯಾಪಾರ ಸಂದರ್ಶಕರು, ಕಂಪನಿಯ ಆಂತರಿಕ ವರ್ಗಾವಣೆದಾರರು, ಒಪ್ಪಂದದ ಆಧಾರಿತ ಸೇವಾ ಪೂರೈಕೆದಾರರು ಮತ್ತು ಸ್ವತಂತ್ರ ವೃತ್ತಿಪರರು ಸೇರಿದಂತೆ ವಿವಿಧ ವೃತ್ತಿಪರರ ತಾತ್ಕಾಲಿಕ ಪ್ರವೇಶ ಮತ್ತು ವಾಸ್ತವ್ಯಕ್ಕಾಗಿ ಒಂದು ಸುಭದ್ರ ವ್ಯವಸ್ಥೆಯನ್ನು ರೂಪಿಸುತ್ತದೆ.
ಒಂದು ಸಮಗ್ರ ಸಂಚಾರ ಚೌಕಟ್ಟಿನ ಮೂಲಕ, ಭಾರತವು ಜಾಗತಿಕ ಪ್ರತಿಭೆಗಳ ಕೇಂದ್ರವಾಗಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುತ್ತಿದೆ. ಈ ಚೌಕಟ್ಟು ಯುರೋಪಿಯನ್ ಒಕ್ಕೂಟದಲ್ಲಿ ಸ್ಥಾಪಿತವಾಗಿರುವ ಭಾರತೀಯ ಕಾರ್ಪೊರೇಟ್ ಸಂಸ್ಥೆಗಳ ಉದ್ಯೋಗಿಗಳು (ಮತ್ತು ಅವರ ಸಂಗಾತಿಗಳು ಹಾಗೂ ಅವಲಂಬಿತರು) ಎಲ್ಲಾ ಸೇವಾ ವಲಯಗಳಲ್ಲಿ ಸುಲಭವಾಗಿ ಸಂಚರಿಸಲು ಅನುವು ಮಾಡಿಕೊಡುತ್ತದೆ. ಯುರೋಪಿಯನ್ ಗ್ರಾಹಕರಿಗೆ ಒಪ್ಪಂದದ ಅಡಿಯಲ್ಲಿ ಸೇವೆಗಳನ್ನು ಒದಗಿಸುವ ಉದ್ದೇಶ ಹೊಂದಿರುವ ವ್ಯಾಪಾರ ಸಂಸ್ಥೆಗಳಿಗೆ, IT, ವ್ಯವಹಾರ ಮತ್ತು ವೃತ್ತಿಪರ ಸೇವೆಗಳು ಸೇರಿದಂತೆ 37 ಉಪ-ವಲಯಗಳಲ್ಲಿ ಭಾರತಕ್ಕೆ ಪ್ರವೇಶಾವಕಾಶ ದೊರೆಯಲಿದೆ.
ಯುರೋಪಿಯನ್ ಗ್ರಾಹಕರಿಗೆ ಸೇವೆ ನೀಡಲು ಇಚ್ಛಿಸುವ ಸ್ವತಂತ್ರ ವೃತ್ತಿಪರರು, IT, ಸಂಶೋಧನೆ ಮತ್ತು ಅಭಿವೃದ್ಧಿ (R&D) ಹಾಗೂ ಉನ್ನತ ಶಿಕ್ಷಣ ಸೇರಿದಂತೆ 17 ಉಪ-ವಲಯಗಳಲ್ಲಿ ನಿಶ್ಚಿತ ಅವಕಾಶಗಳನ್ನು ಪಡೆಯಲಿದ್ದಾರೆ. ಇದು ಭಾರತೀಯ ವೃತ್ತಿಪರರಿಗೆ ಮತ್ತು ಜ್ಞಾನಾಧಾರಿತ ವ್ಯಾಪಾರಕ್ಕೆ ವಿಶಾಲವಾದ ಅವಕಾಶಗಳನ್ನು ಸೃಷ್ಟಿಸುತ್ತದೆ. ಭಾರತ ಮತ್ತು ಯುರೋಪಿಯನ್ ಒಕ್ಕೂಟವು ಮುಂದಿನ 5 ವರ್ಷಗಳಲ್ಲಿ ಎಲ್ಲಾ EU ಸದಸ್ಯ ರಾಷ್ಟ್ರಗಳೊಂದಿಗೆ 'ಸಾಮಾಜಿಕ ಭದ್ರತಾ ಒಪ್ಪಂದಗಳನ್ನು' ಮಾಡಿಕೊಳ್ಳಲು ರಚನಾತ್ಮಕ ಚೌಕಟ್ಟನ್ನು ಒಪ್ಪಿಕೊಂಡಿವೆ. ಅಲ್ಲದೆ, ಭಾರತೀಯ ವಿದ್ಯಾರ್ಥಿಗಳು ಅಲ್ಲಿ ವ್ಯಾಸಂಗ ಮಾಡಲು ಮತ್ತು ವ್ಯಾಸಂಗದ ನಂತರದ ಕೆಲಸದ ವೀಸಾ ಪಡೆಯಲು ಪೂರಕವಾದ ವ್ಯವಸ್ಥೆಯನ್ನು ಮುಂದುವರಿಸಲು ಸಮ್ಮತಿಸಿವೆ.
ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗೆ ವಿಸ್ತಾರವಾದ ಅವಕಾಶಗಳು
ಈ ಮುಕ್ತ ವ್ಯಾಪಾರ ಒಪ್ಪಂದವು (FTA) ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ಸೇವೆಗಳು ಮತ್ತು ವೈದ್ಯರಿಗೆ ಹೆಚ್ಚಿನ ಉತ್ತೇಜನ ನೀಡುವ ನಿರೀಕ್ಷೆಯಿದೆ. ನಿಯಮಾವಳಿಗಳು ಅಸ್ತಿತ್ವದಲ್ಲಿಲ್ಲದ ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳಲ್ಲಿ, ಆಯುಷ್ (AYUSH) ವೈದ್ಯರು ಭಾರತದಲ್ಲಿ ತಾವು ಪಡೆದ ವೃತ್ತಿಪರ ಅರ್ಹತೆಗಳನ್ನು ಬಳಸಿಕೊಂಡು ತಮ್ಮ ಸೇವೆಗಳನ್ನು ನೀಡಲು ಸಾಧ್ಯವಾಗುತ್ತದೆ.
ಈ ಒಪ್ಪಂದವು ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳಲ್ಲಿ ಆಯುಷ್ ಕ್ಷೇಮ ಕೇಂದ್ರಗಳು (AYUSH wellness centres) ಮತ್ತು ಚಿಕಿತ್ಸಾಲಯಗಳನ್ನು ಸ್ಥಾಪಿಸಲು ಭವಿಷ್ಯದ ನಿಶ್ಚಿತತೆಯನ್ನು ಒದಗಿಸುತ್ತದೆ ಮತ್ತು ಯುರೋಪಿಯನ್ ಯೂನಿಯನ್ ನ ಮುಕ್ತತೆಯನ್ನು ಕಾಯ್ದಿರಿಸುತ್ತದೆ. ಅಲ್ಲದೆ, ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ಸೇವೆಗಳ ವ್ಯಾಪಾರವನ್ನು ಸುಲಭಗೊಳಿಸಲು ಯುರೋಪಿಯನ್ ಯೂನಿಯನ್ ನೊಂದಿಗೆ ಹೆಚ್ಚಿನ ವಿನಿಮಯ ಮತ್ತು ಸಹಕಾರವನ್ನು ಈ FTA ಯೋಜಿಸಿದೆ.
ನಾವೀನ್ಯತೆ, ರಕ್ಷಣೆ, ಸಮೃದ್ಧಿ: ಬೌದ್ಧಿಕ ಆಸ್ತಿಯ ಉನ್ನತೀಕರಣ
ಈ ಮುಕ್ತ ವ್ಯಾಪಾರ ಒಪ್ಪಂದವು (FTA), ಕೃತಿಸ್ವಾಮ್ಯ, ಟ್ರೇಡ್ ಮಾರ್ಕ್ ಗಳು, ವಿನ್ಯಾಸಗಳು, ವ್ಯಾಪಾರ ರಹಸ್ಯಗಳು, ಸಸ್ಯ ತಳಿಗಳು ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳ (IPR) ಜಾರಿ ಕುರಿತಾದ 'ಟ್ರಿಪ್ಸ್' (TRIPS) ಅಡಿಯಲ್ಲಿ ಒದಗಿಸಲಾದ ರಕ್ಷಣೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಇದು ದೋಹಾ ಘೋಷಣೆಯನ್ನು ಅನುಮೋದಿಸುತ್ತದೆ ಮತ್ತು ಡಿಜಿಟಲ್ ಲೈಬ್ರರಿಗಳ ಮಹತ್ವವನ್ನು ಗುರುತಿಸುತ್ತದೆ, ವಿಶೇಷವಾಗಿ ಭಾರತವು ಪ್ರಾರಂಭಿಸಿರುವ 'ಸಾಂಪ್ರದಾಯಿಕ ಜ್ಞಾನದ ಡಿಜಿಟಲ್ ಲೈಬ್ರರಿ' (TKDL) ಯೋಜನೆಯನ್ನು ಎತ್ತಿಹಿಡಿಯುತ್ತದೆ. IPR ಅಧ್ಯಾಯವು ತಂತ್ರಜ್ಞಾನ ವರ್ಗಾವಣೆಗೆ ಸಂಬಂಧಿಸಿದ ಕಾನೂನುಗಳು ಮತ್ತು ಪದ್ಧತಿಗಳ ಬಗ್ಗೆ ಪರಸ್ಪರ ಅಭಿಪ್ರಾಯ ಹಾಗೂ ಮಾಹಿತಿ ವಿನಿಮಯಕ್ಕೆ ಅವಕಾಶ ಕಲ್ಪಿಸುತ್ತದೆ. ಇದು ಮಾಹಿತಿ ಹರಿವು ಮತ್ತು ವ್ಯಾಪಾರ ಪಾಲುದಾರಿಕೆಗಳನ್ನು ಸುಗಮಗೊಳಿಸುವ ಕ್ರಮಗಳನ್ನು ಸಹ ಒಳಗೊಂಡಿದೆ.
ಸುರಕ್ಷಿತ, ಪ್ರಮಾಣೀಕೃತ ಮತ್ತು ತಡೆರಹಿತ ವ್ಯಾಪಾರಕ್ಕಾಗಿ SPS ಮತ್ತು TBT ಸಂಬಂಧಗಳ ಬಲವರ್ಧನೆ
ಈ ಮುಕ್ತ ವ್ಯಾಪಾರ ಒಪ್ಪಂದವು (FTA), ನೈರ್ಮಲ್ಯ ಮತ್ತು ಸಸ್ಯ ನೈರ್ಮಲ್ಯ (SPS) ಹಾಗೂ ವ್ಯಾಪಾರಕ್ಕೆ ಇರುವ ತಾಂತ್ರಿಕ ಅಡೆತಡೆಗಳ (TBT) ವಿಷಯಗಳಲ್ಲಿ ವರ್ಧಿತ ಸಹಕಾರವನ್ನು ಪರಿಚಯಿಸುತ್ತದೆ. ಇದು ಅನುಸರಣೆ ಮೌಲ್ಯಮಾಪನ ಫಲಿತಾಂಶಗಳ ಪರಸ್ಪರ ಮಾನ್ಯತೆಯನ್ನು ಸುಗಮಗೊಳಿಸುತ್ತದೆ. ತಾಂತ್ರಿಕ ಸಮರ್ಥನೆಯ ಆಧಾರದ ಮೇಲೆ SPS ಕ್ರಮಗಳಲ್ಲಿ ಸಮಾನತೆಯನ್ನು ಸಾಧಿಸಲು ಮತ್ತು ಕೀಟ ಅಥವಾ ರೋಗ ಹರಡುವಿಕೆಯ ಸಂದರ್ಭಗಳಲ್ಲಿ ಸ್ಥಳೀಯ ಮಟ್ಟದಲ್ಲೇ ಸ್ಪಂದಿಸಲು ಇದು ಅನುವು ಮಾಡಿಕೊಡುತ್ತದೆ. ಡಿಜಿಟಲೀಕರಣ, ಮಾಹಿತಿ ಹಂಚಿಕೆ ಮತ್ತು ಅಂತರಾಷ್ಟ್ರೀಯ ಮಾನದಂಡಗಳ ಪಾಲನೆಯ ಮೂಲಕ, ಈ ಒಪ್ಪಂದವು ವ್ಯಾಪಾರ ಅಡೆತಡೆಗಳನ್ನು ಕಡಿಮೆ ಮಾಡುತ್ತದೆ. ಇದು ಮಾರುಕಟ್ಟೆ ಪ್ರವೇಶವನ್ನು ಸುಲಭಗೊಳಿಸುವುದಲ್ಲದೆ, ರಫ್ತುದಾರರಿಗೆ ನಿಯಂತ್ರಕ ಕ್ರಮಗಳ ಕುರಿತು ಮುನ್ಸೂಚನೆ ಮತ್ತು ಸ್ಪಷ್ಟತೆಯನ್ನು ನೀಡುವ ಮೂಲಕ ವ್ಯಾಪಾರ ವ್ಯವಸ್ಥೆಯನ್ನು ಬಲಪಡಿಸುತ್ತದೆ.
ಭಾರತ-ಯುರೋಪಿಯನ್ ಒಕ್ಕೂಟದ FTA ಅಡಿಯಲ್ಲಿ ವಲಯವಾರು ಲಾಭಗಳು
ಕೃಷಿಯಾಚೆಗಿನ ಬೆಳವಣಿಗೆ: ಆದ್ಯತೆಯ ಮಾರುಕಟ್ಟೆ ಪ್ರವೇಶದಿಂದ ಕೃಷಿ ವೃದ್ಧಿಗೆ ಇಂಧನ
ಭಾರತವು ತನ್ನ ಕೃಷಿ ರಫ್ತುಗಳಿಗಾಗಿ ಆದ್ಯತೆಯ ಮಾರುಕಟ್ಟೆ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ. ಇದು ಸಂಸ್ಕರಿಸಿದ ಆಹಾರಗಳು, ಚಹಾ, ಕಾಫಿ, ಸಾಂಬಾರ ಪದಾರ್ಥಗಳು, ದ್ರಾಕ್ಷಿ, ಸೌತೆಕಾಯಿ (Gherkins & Cucumbers), ಕುರಿ ಮತ್ತು ಮರಿ ಕುರಿ ಮಾಂಸ, ಸ್ವೀಟ್ ಕಾರ್ನ್, ಒಣಗಿದ ಈರುಳ್ಳಿ ಮತ್ತು ಇತರ ಕೆಲವು ಹಣ್ಣು ಮತ್ತು ತರಕಾರಿ ಉತ್ಪನ್ನಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲಿದೆ.
ಇದು ಗ್ರಾಮೀಣ ಆದಾಯವನ್ನು ಬಲಪಡಿಸುತ್ತದೆ, ಮಹಿಳೆಯರ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಯುರೋಪಿನಲ್ಲಿ ಭಾರತದ ಸ್ಥಾನವನ್ನು 'ಪ್ರೀಮಿಯಂ ಮತ್ತು ವಿಶ್ವಾಸಾರ್ಹ ಪೂರೈಕೆದಾರ'ನಾಗಿ ಭದ್ರಪಡಿಸುತ್ತದೆ.
ಡೈರಿ, ಧಾನ್ಯಗಳು, ಕೋಳಿ ಸಾಕಾಣಿಕೆ, ಸೋಯಾ ಮೀಲ್ ಮತ್ತು ಕೆಲವು ನಿರ್ದಿಷ್ಟ ಹಣ್ಣು-ತರಕಾರಿಗಳನ್ನು ಒಳಗೊಂಡಂತೆ ಸೂಕ್ಷ್ಮ ವಲಯಗಳಿಗೆ ಆಯಕಟ್ಟಿನ ರಕ್ಷಣೆ ನೀಡಲಾಗಿದೆ. ಇದು ದೇಶೀಯ ಆದ್ಯತೆಗಳನ್ನು ಕಾಪಾಡುವ ಜೊತೆಗೆ ರಫ್ತು ಬೆಳವಣಿಗೆಯನ್ನು ಖಚಿತಪಡಿಸುತ್ತದೆ.
ಎಂಜಿನಿಯರಿಂಗ್ ಶ್ರೇಷ್ಠತೆಯ ಮೂಲಕ ರಫ್ತು ವೇಗವರ್ಧನೆ
ಪ್ರಸ್ತುತ ಶೇಕಡಾ 22 ರಷ್ಟು ಹೆಚ್ಚಿನ ಸುಂಕವನ್ನು ಎದುರಿಸುತ್ತಿರುವ ಎಂಜಿನಿಯರಿಂಗ್ ಸರಕುಗಳಿಗೆ 'ಆದ್ಯತೆಯ ಮಾರುಕಟ್ಟೆ ಪ್ರವೇಶ' ದೊರೆಯುವುದರಿಂದ, ಯುರೋಪಿಯನ್ ಒಕ್ಕೂಟಕ್ಕೆ ಭಾರತದ ರಫ್ತು ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಪ್ರಸ್ತುತ ಈ ರಫ್ತು ಸುಮಾರು ₹1.44 ಲಕ್ಷ ಕೋಟಿ ($16.6 ಬಿಲಿಯನ್) ಆಗಿದ್ದು, ಯುರೋಪಿಯನ್ ಒಕ್ಕೂಟದ ಸುಮಾರು ₹174.3 ಲಕ್ಷ ಕೋಟಿ ($2 ಟ್ರಿಲಿಯನ್) ಮೊತ್ತದ ಒಟ್ಟು ಎಂಜಿನಿಯರಿಂಗ್ ಆಮದಿನಲ್ಲಿ ಭಾರತದ ಪಾಲನ್ನು ಇದು ಸುಧಾರಿಸಲಿದೆ. ಈ ಮುಕ್ತ ವ್ಯಾಪಾರ ಒಪ್ಪಂದವು (FTA) ಎಂ ಎಸ್ ಎಂ ಇ (MSME) ಆಧಾರಿತ ಕೈಗಾರಿಕಾ ಕೇಂದ್ರಗಳನ್ನು ಸಬಲೀಕರಣಗೊಳಿಸುವ ಮೂಲಕ ಕೈಗಾರಿಕಾ ಆಧುನೀಕರಣ ಮತ್ತು ಜಾಗತಿಕ ಸ್ಪರ್ಧಾತ್ಮಕತೆಗೆ ವೇಗ ನೀಡಲಿದೆ.
ಉದ್ಯೋಗ ಮತ್ತು ಬೆಳವಣಿಗೆ: ಶ್ರಮದಾಯಕ ಕೈಗಾರಿಕೆಗಳ ಸ್ಪರ್ಧಾತ್ಮಕತೆ ವೃದ್ಧಿ
ಜವಳಿ, ಚರ್ಮದ ಉತ್ಪನ್ನಗಳು, ಪಾದರಕ್ಷೆಗಳು, ಸಮುದ್ರ ಉತ್ಪನ್ನಗಳು, ಕ್ರೀಡಾ ಸಾಮಗ್ರಿಗಳು, ಆಟಿಕೆಗಳು ಹಾಗೂ ರತ್ನ ಮತ್ತು ಆಭರಣಗಳಂತಹ ವಲಯಗಳು ಸುಂಕದ ನಿರ್ಮೂಲನೆಯ ಮೂಲಕ ಹೆಚ್ಚಿನ ಸ್ಪರ್ಧಾತ್ಮಕತೆಯನ್ನು ಪಡೆಯಲಿವೆ. ಇದು ಉದ್ಯೋಗ ಸೃಷ್ಟಿಗೆ ಬೆಂಬಲ ನೀಡುವುದಲ್ಲದೆ, ಯುರೋಪಿಯನ್ ಮಾರುಕಟ್ಟೆಯೊಂದಿಗೆ ಈ ವಲಯಗಳ ಏಕೀಕರಣಕ್ಕೆ ಸಹಕಾರಿಯಾಗಲಿದೆ.
ಯುರೋಪಿನಲ್ಲಿ ಭಾರತದ ಚರ್ಮ ಮತ್ತು ಪಾದರಕ್ಷೆಗಳ ರಫ್ತು ಹೆಚ್ಚಳ
ಗಣನೀಯ ಪ್ರಮಾಣದ ಉದ್ಯೋಗಾವಕಾಶಗಳನ್ನು ಬೆಂಬಲಿಸುತ್ತಿರುವ ಚರ್ಮ ಮತ್ತು ಪಾದರಕ್ಷೆಗಳ ವಲಯದಲ್ಲಿ ಭಾರತದ ವಿಶ್ವವಿಖ್ಯಾತ ಕಲೆಗಾರಿಕೆ ಮತ್ತು ಎಂ ಎಸ್ ಎಂ ಇ (MSME) ನಾವೀನ್ಯತೆಯು, ಯುರೋಪಿನ ಮಾರುಕಟ್ಟೆಯಲ್ಲಿ ಹಿಂದೆಂದೂ ಕಾಣದಂತಹ ಜಿಗಿತಕ್ಕೆ ಸನ್ನದ್ಧವಾಗಿದೆ.
ಈ ಮುಕ್ತ ವ್ಯಾಪಾರ ಒಪ್ಪಂದವು ಜಾರಿಗೆ ಬಂದ ತಕ್ಷಣ, ಶೇಕಡಾ 17 ರಷ್ಟಿದ್ದ ಸುಂಕವನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ಇದು ಯುರೋಪಿಯನ್ ಒಕ್ಕೂಟಕ್ಕೆ ನಡೆಯುತ್ತಿರುವ ಸುಮಾರು ₹20.9 ಸಾವಿರ ಕೋಟಿ ($2.4 ಬಿಲಿಯನ್) ಮೌಲ್ಯದ ಭಾರತದ ರಫ್ತಿಗೆ ಸಮಾನವಾದ ಸ್ಪರ್ಧಾತ್ಮಕ ವೇದಿಕೆಯನ್ನು ಕಲ್ಪಿಸುತ್ತದೆ. ಅಲ್ಲದೆ, ಯುರೋಪಿಯನ್ ಒಕ್ಕೂಟದ ಸುಮಾರು ₹8.71 ಲಕ್ಷ ಕೋಟಿ ($100 ಬಿಲಿಯನ್) ಮೊತ್ತದ ಒಟ್ಟು ಚರ್ಮ ಮತ್ತು ಪಾದರಕ್ಷೆಗಳ ಆಮದಿನಲ್ಲಿ ಭಾರತದ ಪಾಲನ್ನು ಇದು ಸುಧಾರಿಸಲಿದೆ. ನಿಯಂತ್ರಕ ಸಮನ್ವಯತೆ, ಸರಳೀಕೃತ ಅನುಸರಣೆ ಮತ್ತು ವಿನ್ಯಾಸ-ಚಾಲಿತ ಸುಸ್ಥಿರ ಉತ್ಪನ್ನಗಳಿಗೆ ಬೆಂಬಲ ನೀಡುವುದರಿಂದ, ಕಡಿಮೆ ಲಾಭದ ಉತ್ಪಾದನೆಯಿಂದ ಹೆಚ್ಚಿನ ಮೌಲ್ಯವರ್ಧಿತ ಜಾಗತಿಕ ನಾಯಕತ್ವದತ್ತ ಬದಲಾಗಲು ಸಾಧ್ಯವಾಗುತ್ತದೆ.
ಸಮುದ್ರ ಉತ್ಪನ್ನಗಳ ರಫ್ತಿಗೆ ಭಾರಿ ಉತ್ತೇಜನ
ಶೇಕಡಾ 100 ರಷ್ಟು ವ್ಯಾಪಾರ ಮೌಲ್ಯವನ್ನು ಒಳಗೊಂಡಿರುವ 'ಆದ್ಯತೆಯ ಪ್ರವೇಶ' ಮತ್ತು ಶೇಕಡಾ 26 ರಷ್ಟಿದ್ದ ಸುಂಕದ ಕಡಿತವು, ಸುಮಾರು ₹4.67 ಲಕ್ಷ ಕೋಟಿ ($53.6 ಬಿಲಿಯನ್) ಮೌಲ್ಯದ ಯುರೋಪಿಯನ್ ಒಕ್ಕೂಟದ ಸಮುದ್ರ ಉತ್ಪನ್ನಗಳ ಮಾರುಕಟ್ಟೆಯನ್ನು ಭಾರತಕ್ಕೆ ಮುಕ್ತಗೊಳಿಸಲಿದೆ. ಈ ಸುಧಾರಿತ ಮಾರುಕಟ್ಟೆ ಪ್ರವೇಶವು ಭಾರತದ ಸಮುದ್ರ ಉತ್ಪನ್ನಗಳ ರಫ್ತಿನ ಸ್ಪರ್ಧಾತ್ಮಕತೆಯನ್ನು ಗಮನಾರ್ಹವಾಗಿ ಹೆಚ್ಚಿಸುವ ನಿರೀಕ್ಷೆಯಿದೆ. ಪ್ರಸ್ತುತ ಯುರೋಪಿಯನ್ ಒಕ್ಕೂಟಕ್ಕೆ ನಡೆಯುತ್ತಿರುವ ₹8,715 ಕೋಟಿ ($1 ಬಿಲಿಯನ್) ಮೌಲ್ಯದ ರಫ್ತು ಸಾಮರ್ಥ್ಯವನ್ನು ಇದು ಮತ್ತಷ್ಟು ಬಲಪಡಿಸಲಿದೆ. ಈ ಮುಕ್ತ ವ್ಯಾಪಾರ ಒಪ್ಪಂದವು (FTA) ಸೀಗಡಿ, ಘನೀಕೃತ ಮೀನು (Frozen fish) ಮತ್ತು ಮೌಲ್ಯವರ್ಧಿತ ಸಮುದ್ರ ಆಹಾರಗಳ ರಫ್ತಿಗೆ ವೇಗ ನೀಡಲಿದೆ. ಇದು ಆಂಧ್ರಪ್ರದೇಶ, ಗುಜರಾತ್, ಕೇರಳ ಮತ್ತು ಇತರ ಕರಾವಳಿ ತೀರದ ಸಮುದಾಯಗಳನ್ನು ಸಬಲೀಕರಣಗೊಳಿಸುವುದಲ್ಲದೆ, ಭಾರತದ 'ನೀಲಿ ಆರ್ಥಿಕತೆ'ಯನ್ನು ಬಲಪಡಿಸಲಿದೆ.
ಭಾರತದ ವೈದ್ಯಕೀಯ ಉಪಕರಣಗಳು, ಸಾಧನಗಳು ಮತ್ತು ಪ್ರಮುಖ ಸರಬರಾಜುಗಳು
ಅತ್ಯಾಧುನಿಕ ಉತ್ಪಾದನೆ, ನಾವೀನ್ಯತೆ ಮತ್ತು ನುರಿತ ಪ್ರತಿಭೆಗಳ ಆಧಾರದ ಮೇಲೆ ನಿರ್ಮಾಣವಾಗಿರುವ ಭಾರತದ ವೈದ್ಯಕೀಯ ಉಪಕರಣಗಳು ಮತ್ತು ಸಾಧನಗಳ ವಲಯವು ಯುರೋಪಿಯನ್ ಒಕ್ಕೂಟದಲ್ಲಿ ಭಾರಿ ಜಿಗಿತಕ್ಕೆ ಸಿದ್ಧವಾಗಿದೆ. ಶೇಕಡಾ 99.1 ರಷ್ಟು ವ್ಯಾಪಾರ ಶ್ರೇಣಿಗಳ ಮೇಲೆ ಇದ್ದ ಶೇಕಡಾ 6.7 ರವರೆಗಿನ ಸುಂಕವನ್ನು ರದ್ದುಗೊಳಿಸಲಾಗಿದೆ. ಇದು ಲೆನ್ಸ್ಗಳು, ಕನ್ನಡಕ, ವೈದ್ಯಕೀಯ ಸಾಧನಗಳು, ಅಳತೆ ಮತ್ತು ಪರೀಕ್ಷಾ ಉಪಕರಣಗಳು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಕಡಿಮೆ ಬೆಲೆಗೆ ಮತ್ತು ಸ್ಪರ್ಧಾತ್ಮಕವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
ಭಾರತದ ಆಭರಣ ರಫ್ತಿಗೆ ಉತ್ತೇಜನ ಮತ್ತು ಅಪಾರ ಉದ್ಯೋಗಾವಕಾಶಗಳ ಸೃಷ್ಟಿ
ಕಲೆ, MSME ಉದ್ಯಮಶೀಲತೆ ಮತ್ತು ಪರಂಪರೆಯ ಕರಕುಶಲತೆಯ ಸಮ್ಮಿಲನವಾಗಿರುವ ರತ್ನ ಮತ್ತು ಆಭರಣ ವಲಯವು ಯುರೋಪಿಯನ್ ಒಕ್ಕೂಟದ ಮಾರುಕಟ್ಟೆಯಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಲಿದೆ. ಈ ಹಿಂದೆ ಶೇಕಡಾ 4 ರಷ್ಟಿದ್ದ ಸುಂಕದ ಬದಲಿಗೆ ಈಗ ಶೇಕಡಾ 100 ರಷ್ಟು ವ್ಯಾಪಾರ ಮೌಲ್ಯದ ಮೇಲೆ 'ಆದ್ಯತೆಯ ಪ್ರವೇಶ' ದೊರೆಯಲಿದೆ. ಇದರಿಂದ ಸುಮಾರು ₹6.89 ಲಕ್ಷ ಕೋಟಿ ($79.2 ಬಿಲಿಯನ್) ಮೊತ್ತದ ಯುರೋಪಿಯನ್ ಆಮದು ಮಾರುಕಟ್ಟೆಯಲ್ಲಿ, ಭಾರತದ ₹23.5 ಸಾವಿರ ಕೋಟಿ ($2.7 ಬಿಲಿಯನ್) ಮೌಲ್ಯದ ಆಭರಣ ರಫ್ತು ಪ್ರಬಲ ಸ್ಪರ್ಧೆಯನ್ನು ನೀಡಲು ಸಾಧ್ಯವಾಗುತ್ತದೆ.
ಯಶಸ್ಸಿನ ಎಳೆಗಳು: ಜವಳಿ ಮತ್ತು ಸಿದ್ಧ ಉಡುಪು ವಲಯದ ಸಾಧನೆ
ಜವಳಿ ಮತ್ತು ಬಟ್ಟೆ ಉದ್ಯಮದಲ್ಲಿ ಎಲ್ಲಾ ವ್ಯಾಪಾರ ಶ್ರೇಣಿಗಳ ಮೇಲೆ ಶೂನ್ಯ ಸುಂಕದ ಪ್ರವೇಶವನ್ನು ಪಡೆಯುವುದು ಮತ್ತು ಶೇಕಡಾ 12 ರಷ್ಟಿದ್ದ ಸುಂಕವನ್ನು ಕಡಿತಗೊಳಿಸುವುದು, ಯುರೋಪಿಯನ್ ಒಕ್ಕೂಟದ ಸುಮಾರು ₹22.9 ಲಕ್ಷ ಕೋಟಿ ($263.5 ಬಿಲಿಯನ್) ಮೊತ್ತದ ಆಮದು ಮಾರುಕಟ್ಟೆಯನ್ನು ಭಾರತಕ್ಕೆ ಮುಕ್ತಗೊಳಿಸಲಿದೆ. ಭಾರತವು ಪ್ರಸ್ತುತ ಜಾಗತಿಕವಾಗಿ ₹3.19 ಲಕ್ಷ ಕೋಟಿ ($36.7 ಬಿಲಿಯನ್) ಮೌಲ್ಯದ ಜವಳಿ ಮತ್ತು ಸಿದ್ಧ ಉಡುಪುಗಳನ್ನು ರಫ್ತು ಮಾಡುತ್ತಿದೆ, ಇದರಲ್ಲಿ ಯುರೋಪಿಯನ್ ಒಕ್ಕೂಟಕ್ಕೆ ₹62.7 ಸಾವಿರ ಕೋಟಿ ($7.2 ಬಿಲಿಯನ್) ರಫ್ತಾಗುತ್ತಿದೆ. ಇಂತಹ ಮಾರುಕಟ್ಟೆ ಪ್ರವೇಶವು ವಿಶೇಷವಾಗಿ ನೂಲು, ಹತ್ತಿ ನೂಲು, ಮಾನವ ನಿರ್ಮಿತ ನಾರಿನ ಉಡುಪುಗಳು, ಸಿದ್ಧ ಉಡುಪುಗಳು, ಪುರುಷರ ಮತ್ತು ಮಹಿಳೆಯರ ಉಡುಪುಗಳು ಹಾಗೂ ಗೃಹ ಬಳಕೆಯ ಜವಳಿ ವಲಯಗಳಲ್ಲಿ ಹೆಚ್ಚಿನ ಅವಕಾಶಗಳನ್ನು ಗಣನೀಯವಾಗಿ ವಿಸ್ತರಿಸುತ್ತದೆ. ಇದು ಎಂಎಸ್ಎಂಇಗಳು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು, ಉದ್ಯೋಗ ಸೃಷ್ಟಿಸಲು ಮತ್ತು ಭಾರತವನ್ನು ವಿಶ್ವಾಸಾರ್ಹ, ಸುಸ್ಥಿರ ಹಾಗೂ ಹೆಚ್ಚಿನ ಮೌಲ್ಯದ ಪೂರೈಕೆದಾರ ರಾಷ್ಟ್ರವಾಗಿ ಬಲಪಡಿಸಲು ಅನುವು ಮಾಡಿಕೊಡುತ್ತದೆ.
ಪ್ಲಾಸ್ಟಿಕ್ ಮತ್ತು ರಬ್ಬರ್ ರಫ್ತಿಗೆ ಹೆಚ್ಚಿನ ಲಾಭ
ಭಾರತದ ಪ್ಲಾಸ್ಟಿಕ್ ಮತ್ತು ರಬ್ಬರ್ ಉದ್ಯಮಗಳು ಯುರೋಪಿಯನ್ ಒಕ್ಕೂಟದ ಮಾರುಕಟ್ಟೆಗೆ ಆದ್ಯತೆಯ ಪ್ರವೇಶವನ್ನು ಪಡೆಯಲಿವೆ. ಈ ಮಾರುಕಟ್ಟೆಯ ಒಟ್ಟು ಜಾಗತಿಕ ಆಮದು ಮೌಲ್ಯ ಸುಮಾರು ₹27.67 ಲಕ್ಷ ಕೋಟಿ ($317.5 ಬಿಲಿಯನ್) ಆಗಿದೆ. ಪ್ರಸ್ತುತ ಭಾರತವು ಯುರೋಪಿಯನ್ ಒಕ್ಕೂಟಕ್ಕೆ ₹20.9 ಸಾವಿರ ಕೋಟಿ ($2.4 ಬಿಲಿಯನ್) ಮತ್ತು ಜಾಗತಿಕವಾಗಿ ಒಟ್ಟು ₹1.13 ಲಕ್ಷ ಕೋಟಿ ($13 ಬಿಲಿಯನ್) ಮೌಲ್ಯದ ರಫ್ತು ಮಾಡುತ್ತಿದ್ದು, ಈ ಪ್ರವೇಶವು ಬೆಳವಣಿಗೆಗೆ ಗಣನೀಯವಾದ ಅವಕಾಶವಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. FTA ಅಡಿಯಲ್ಲಿ ಸಿಗುವ ಈ ಸುಧಾರಿತ ಪ್ರವೇಶದ ಜೊತೆಗೆ ಭಾರತದ ನುರಿತ ಉತ್ಪಾದನಾ ಕಾರ್ಮಿಕ ಶಕ್ತಿ ಮತ್ತು ಎಂ ಎಸ್ ಎಂ ಇ ಆಧಾರಿತ ನಾವೀನ್ಯತೆಯು ಉದ್ಯೋಗ ಹೆಚ್ಚಿಸಲು, ರಫ್ತು ವೃದ್ಧಿಸಲು ಮತ್ತು ಜಾಗತಿಕ ವ್ಯಾಪಾರದಲ್ಲಿ ಭಾರತದ ಸ್ಥಾನಮಾನವನ್ನು ಬಲಪಡಿಸಲು ಸಹಕಾರಿಯಾಗಲಿದೆ.
ರಾಸಾಯನಿಕ ವಲಯ: ರಫ್ತು ವಿಸ್ತರಣೆ ಮತ್ತು ಉದ್ಯೋಗ ಸೃಷ್ಟಿ
ಈ ಮುಕ್ತ ವ್ಯಾಪಾರ ಒಪ್ಪಂದವು (FTA) ಭಾರತದ ರಾಸಾಯನಿಕ ರಫ್ತು ಬುಟ್ಟಿಯ ಮೌಲ್ಯದ ಶೇಕಡಾ 97.5 ರಷ್ಟು ಉತ್ಪನ್ನಗಳ ಮೇಲೆ ಶೂನ್ಯ ಸುಂಕವನ್ನು ಖಚಿತಪಡಿಸುತ್ತದೆ. ಇದು ಶೇಕಡಾ 12.8 ರಷ್ಟಿದ್ದ ಸುಂಕವನ್ನು ರದ್ದುಗೊಳಿಸುವ ಮೂಲಕ ಅಜೈವಿಕ, ಜೈವಿಕ ಮತ್ತು ಕೃಷಿ ರಾಸಾಯನಿಕಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ಈ ಒಪ್ಪಂದವು ರಫ್ತನ್ನು ವಿಸ್ತರಿಸುವ, ಎಂ ಎಸ್ ಎಂ ಇ (MSME) ನೇತೃತ್ವದ ಕ್ಲಸ್ಟರ್ ಗಳನ್ನು ಬಲಪಡಿಸುವ ಮತ್ತು ಹೆಚ್ಚಿನ ಮೌಲ್ಯದ, ಸುಸ್ಥಿರ ಹಾಗೂ ತಾಂತ್ರಿಕವಾಗಿ ಮುಂದುವರಿದ ಉತ್ಪನ್ನಗಳನ್ನು ಉತ್ತೇಜಿಸುವ ನಿರೀಕ್ಷೆಯಿದೆ. ಇದು ಯುರೋಪಿಯನ್ ಒಕ್ಕೂಟದ ಸುಮಾರು ₹43.57 ಲಕ್ಷ ಕೋಟಿ ಅಥವಾ $500 ಬಿಲಿಯನ್ ಮೌಲ್ಯದ ಬೃಹತ್ ರಾಸಾಯನಿಕ ಆಮದು ಮಾರುಕಟ್ಟೆಗೆ ಭಾರತವನ್ನು ಒಂದು ವಿಶ್ವಾಸಾರ್ಹ ಪೂರೈಕೆದಾರ ರಾಷ್ಟ್ರವನ್ನಾಗಿ ರೂಪಿಸಲಿದೆ.
ಗಣಿ ಮತ್ತು ಖನಿಜ ವಲಯದಲ್ಲಿ ಹೊಸ ಅವಕಾಶಗಳ ಅನಾವರಣ
ಶೇ. 100 ರಷ್ಟು ಸುಂಕದ ಶ್ರೇಣಿಗಳಲ್ಲಿ ಶೂನ್ಯ ಸುಂಕವು ವೆಚ್ಚದ ಅಡೆತಡೆಗಳನ್ನು ನಿವಾರಿಸುತ್ತದೆ, ಇದು ಭಾರತವು ಗುಣಮಟ್ಟದ, ವಿಶ್ವಾಸಾರ್ಹ ಮತ್ತು ಮೌಲ್ಯವರ್ಧಿತ ಖನಿಜಗಳನ್ನು ಯುರೋಪಿಯನ್ ಯೂನಿಯನ್ಗೆ ರಫ್ತು ಮಾಡುವುದನ್ನು ಖಚಿತಪಡಿಸುತ್ತದೆ. ಈ ಮುಕ್ತ ವ್ಯಾಪಾರ ಒಪ್ಪಂದವು (FTA) ಯುರೋಪ್ ನ ಉನ್ನತ ಮೌಲ್ಯದ ಮಾರುಕಟ್ಟೆಗಳಲ್ಲಿ ಭಾರತದ ಅಸ್ತಿತ್ವವನ್ನು ವಿಸ್ತರಿಸಲು ಅವಕಾಶಗಳನ್ನು ನೀಡುತ್ತದೆ. ಅಲ್ಲದೆ, ದೀರ್ಘಕಾಲೀನ ಮತ್ತು ನಿರೀಕ್ಷಿತ ಪ್ರವೇಶವು ಉಕ್ಕು, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ ಮತ್ತು ನವೀಕರಿಸಬಹುದಾದ ಇಂಧನ ವಲಯದ ಯುರೋಪಿಯನ್ ತಯಾರಕರೊಂದಿಗೆ ಪಾಲುದಾರಿಕೆಯನ್ನು ಬಲಪಡಿಸಲು ಉತ್ತೇಜನ ನೀಡುತ್ತದೆ.
ಮನೆ ಅಲಂಕಾರಿಕ ವಸ್ತುಗಳು, ಮರದ ಕರಕುಶಲ ವಸ್ತುಗಳು ಮತ್ತು ಪೀಠೋಪಕರಣಗಳಿಗೆ ಗಮನಾರ್ಹ ಮಾರುಕಟ್ಟೆ ಪ್ರವೇಶ
ಶೇ. 10.5 ರವರೆಗಿನ ಕಡಿಮೆ ಸುಂಕವು ಸುಧಾರಿತ ಪ್ರವೇಶವನ್ನು ಒದಗಿಸುತ್ತದೆ, ಇದು ಭಾರತೀಯ ಮರ, ಬಿದಿರು ಮತ್ತು ಕರಕುಶಲ ಪೀಠೋಪಕರಣಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುತ್ತದೆ. ಈ FTA ಉನ್ನತ ಮೌಲ್ಯದ ಮತ್ತು ವಿನ್ಯಾಸ-ಆಧಾರಿತ ವಿಭಾಗಗಳಲ್ಲಿ ಬೆಳವಣಿಗೆಯನ್ನು ಬೆಂಬಲಿಸುತ್ತದೆ ಮತ್ತು ಜಾಗತಿಕ ಪೀಠೋಪಕರಣ ಪೂರೈಕೆ ಸರಪಳಿಗಳಲ್ಲಿ ಭಾರತದ ಪಾತ್ರವನ್ನು ಬಲಪಡಿಸುತ್ತದೆ.
******
(रिलीज़ आईडी: 2219241)
आगंतुक पटल : 28