ಪ್ರಧಾನ ಮಂತ್ರಿಯವರ ಕಛೇರಿ
azadi ka amrit mahotsav

ʻಭಾರತ ಇಂಧನ ಸಪ್ತಾಹ-2026ʼರ ಉದ್ಘಾಟನಾ ಸಮಾರಂಭವನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದ ಪ್ರಧಾನಮಂತ್ರಿ


ಇಂದು, ಭಾರತವು ಇಂಧನ ಕ್ಷೇತ್ರಕ್ಕೆ ವಿಪುಲ ಅವಕಾಶಗಳ ತಾಣವಾಗಿದೆ: ಪ್ರಧಾನಮಂತ್ರಿ

ಭಾರತ-ಐರೋಪ್ಯ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದವು (ಎಫ್‌ಟಿಎ) ವಿಶ್ವದ ಎರಡು ಅತಿದೊಡ್ಡ ಆರ್ಥಿಕತೆಗಳ ನಡುವಿನ ಸಮನ್ವಯಕ್ಕೆ ಒಂದು ಗಮನಾರ್ಹ ಉದಾಹರಣೆಯಾಗಿದೆ: ಪ್ರಧಾನಮಂತ್ರಿ

ಭಾರತವು ಈಗ ಇಂಧನ ಭದ್ರತೆಯನ್ನು ಮೀರಿ ಇಂಧನ ಸ್ವಾತಂತ್ರ್ಯದ ಧ್ಯೇಯದತ್ತ ಸಾಗುತ್ತಿದೆ: ಪ್ರಧಾನಮಂತ್ರಿ

ನಮ್ಮ ಇಂಧನ ಕ್ಷೇತ್ರವು ನಮ್ಮ ಆಕಾಂಕ್ಷೆಗಳ ಹೃದಯಭಾಗದಲ್ಲಿದ್ದು, 500 ಶತಕೋಟಿ ಡಾಲರ್ ಹೂಡಿಕೆಯ ಅವಕಾಶಗಳನ್ನು ಹೊಂದಿದೆ. ಹಾಗಾಗಿ, ʻಮೇಕ್ ಇನ್ ಇಂಡಿಯಾʼ, ʻಇನ್ನೋವೇಟ್ ಇನ್ ಇಂಡಿಯಾʼ, ʻಸ್ಕೇಲ್ ವಿತ್ ಇಂಡಿಯಾʼ, ʻಇನ್‌ವೆಸ್ಟ್‌ ಇನ್ ಇಂಡಿಯಾʼಗೆ ಬಾಗಿಲು ತೆರೆದಿದೆ: ಪ್ರಧಾನಮಂತ್ರಿ

प्रविष्टि तिथि: 27 JAN 2026 11:31AM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಭಾರತ ಇಂಧನ ಸಪ್ತಾಹ-2026ʼರ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾತನಾಡಿದರು. ಈ ಸಂದರ್ಭದಲ್ಲಿ ಮಾತು ಆರಂಭಿಸಿದ ಶ್ರೀ ಮೋದಿಯವರು, ಇಂಧನ ಸಪ್ತಾಹದ ಈ ಹೊಸ ಆವೃತ್ತಿಗಾಗಿ ಸುಮಾರು 125 ದೇಶಗಳ ಪ್ರತಿನಿಧಿಗಳು ಗೋವಾದಲ್ಲಿ ಸೇರಿದ್ದಾರೆ ಎಂದು ಹೇಳಿದರು. ಇಂಧನ-ಸುರಕ್ಷಿತ ಮತ್ತು ಸುಸ್ಥಿರ ಭವಿಷ್ಯದ ಬಗ್ಗೆ ಚರ್ಚಿಸಲು ಅವರು ಭಾರತಕ್ಕೆ ಬಂದಿದ್ದಾರೆ ಎಂದು ಅವರು ಒತ್ತಿ ಹೇಳಿದ ಪ್ರಧಾನಮಂತ್ರಿ, ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರನ್ನು ಸ್ವಾಗತಿಸಿದರು.

ʻಭಾರತ ಇಂಧನ ಸಪ್ತಾಹʼವು ಬಹಳ ಕಡಿಮೆ ಅವಧಿಯಲ್ಲಿ ಚರ್ಚೆ ಮತ್ತು ಕ್ರಿಯೆಯ ಜಾಗತಿಕ ವೇದಿಕೆಯಾಗಿ ಹೊರಹೊಮ್ಮಿದೆ. ಇಂದು ಭಾರತವು ಇಂಧನ ಕ್ಷೇತ್ರಕ್ಕೆ ಅಪಾರ ಅವಕಾಶಗಳ ತಾಣವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.  ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ, ಇದರರ್ಥ ದೇಶದಲ್ಲಿ ಇಂಧನ ಉತ್ಪನ್ನಗಳ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ ಎಂದು ಅವರು ಒತ್ತಿ ಹೇಳಿದರು. ಜಾಗತಿಕ ಬೇಡಿಕೆಯನ್ನು ಪೂರೈಸಲು ಭಾರತವು ಅತ್ಯುತ್ತಮ ಅವಕಾಶಗಳನ್ನು ಹೊಂದಿದೆ ಎಂದು ಅವರು ಒತ್ತಿ ಹೇಳಿದರು. 150ಕ್ಕೂ ಹೆಚ್ಚು ದೇಶಗಳಿಗೆ ರಫ್ತು ವ್ಯಾಪ್ತಿಯನ್ನು ವಿಸ್ತರಿಸುವುದರೊಂದಿಗೆ ಭಾರತವು ವಿಶ್ವದ ಅಗ್ರ ಐದು ಪೆಟ್ರೋಲಿಯಂ ಉತ್ಪನ್ನಗಳ ರಫ್ತುದಾರರಲ್ಲಿ ಒಂದಾಗಿದೆ ಎಂದು ಶ್ರೀ ಮೋದಿ ಉಲ್ಲೇಖಿಸಿದರು. ಭಾರತದ ಈ ಸಾಮರ್ಥ್ಯವು ಎಲ್ಲರಿಗೂ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ ಎಂದು ಅವರು ಹೇಳಿದರು. ಪಾಲುದಾರಿಕೆಯನ್ನು ಅನ್ವೇಷಿಸಲು ʻಇಂಧನ ಸಪ್ತಾಹʼ ವೇದಿಕೆಯು ಅತ್ಯುತ್ತಮ ಸ್ಥಳವಾಗಿದೆ ಎಂದು ಅವರು ಒತ್ತಿ ಹೇಳಿದರು ಮತ್ತು ಭಾಗವಹಿಸಿದ ಎಲ್ಲರಿಗೂ ತಮ್ಮ ಶುಭಾಶಯಗಳನ್ನು ತಿಳಿಸಿದರು.

ಪ್ರಧಾನಮಂತ್ರಿಯವರು ಇಂಧನ ವಿಚಾರದಲ್ಲಿ ತಮ್ಮ ಮಾತು ಮುಂದುವರಿಸುವ ಮೊದಲು, ಪ್ರಮುಖ ಬೆಳವಣಿಗೆಯೊಂದನ್ನು ಉಲ್ಲೇಖಿಸಲು ಬಯಸುತ್ತೇನೆ ಎಂದು ಹೇಳಿದರು. ನಿನ್ನೆಯಷ್ಟೇ ಭಾರತ ಮತ್ತು ಐರೋಪ್ಯ ಒಕ್ಕೂಟದ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ, ಇದನ್ನು ವಿಶ್ವದಾದ್ಯಂತದ ಜನರು "ಎಲ್ಲಾ ಒಪ್ಪಂದಗಳ ತಾಯಿ" ಎಂದು ಕರೆಯುತ್ತಿದ್ದಾರೆ ಎಂದು ಅವರು ಹೇಳಿದರು. ಈ ಒಪ್ಪಂದವು ಭಾರತದ 140 ಕೋಟಿ ಜನರಿಗೆ ಮತ್ತು ಯುರೋಪಿಯನ್ ರಾಷ್ಟ್ರಗಳಾದ್ಯಂತ ಲಕ್ಷಾಂತರ ಜನರಿಗೆ ಅಪಾರ ಅವಕಾಶಗಳನ್ನು ಒದಗಿಸಲಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ವಿಶ್ವದ ಎರಡು ಅತಿದೊಡ್ಡ ಆರ್ಥಿಕತೆಗಳ ನಡುವಿನ ಸಮನ್ವಯಕ್ಕೆ ಇದು ಗಮನಾರ್ಹ ಉದಾಹರಣೆಯಾಗಿದೆ ಎಂದು ಅವರು ಒತ್ತಿ ಹೇಳಿದರು. ಈ ಒಪ್ಪಂದವು ಜಾಗತಿಕ ಜಿಡಿಪಿಯ ಸುಮಾರು 25 ಪ್ರತಿಶತ ಮತ್ತು ಜಾಗತಿಕ ವ್ಯಾಪಾರದ ಮೂರನೇ ಒಂದು ಭಾಗವನ್ನು ಪ್ರತಿನಿಧಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು. ವ್ಯಾಪಾರದ ಹೊರತಾಗಿ, ಈ ಒಪ್ಪಂದವು ಪ್ರಜಾಪ್ರಭುತ್ವ ಮತ್ತು ಕಾನೂನಿನ ನಿಯಮಕ್ಕೆ ಸಮಾನ ಬದ್ಧತೆಯನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದರು.

ಐರೋಪ್ಯ ಒಕ್ಕೂಟದೊಂದಿಗಿನ ಮುಕ್ತ ವ್ಯಾಪಾರ ಒಪ್ಪಂದವು ಬ್ರಿಟನ್ ಮತ್ತು ʻಇಎಫ್‌ಟಿಎʼ ಜೊತೆಗಿನ ಒಪ್ಪಂದಗಳಿಗೆ ಪೂರಕವಾಗಿರುತ್ತದೆ, ಆ ಮೂಲಕ ವ್ಯಾಪಾರ ಮತ್ತು ಜಾಗತಿಕ ಪೂರೈಕೆ ಸರಪಳಿಗಳನ್ನು ಬಲಪಡಿಸುತ್ತದೆ ಎಂದು ಶ್ರೀ ಮೋದಿ ಗಮನಸೆಳೆದರು. ಈ ಸಾಧನೆಗಾಗಿ ಅವರು ಭಾರತದ ಯುವಕರು ಮತ್ತು ಎಲ್ಲಾ ನಾಗರಿಕರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು. ಜವಳಿ, ರತ್ನಗಳು ಮತ್ತು ಆಭರಣಗಳು, ಚರ್ಮ ಮತ್ತು ಪಾದರಕ್ಷೆಗಳಂತಹ ಕ್ಷೇತ್ರಗಳಲ್ಲಿ ತೊಡಗಿರುವವರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು. ಈ ಒಪ್ಪಂದವು ಅವರಿಗೆ ಹೆಚ್ಚು ಪ್ರಯೋಜನಕಾರಿಯಾಗಲಿದೆ ಎಂದರು. ಈ ವ್ಯಾಪಾರ ಒಪ್ಪಂದವು ಭಾರತದಲ್ಲಿ ಉತ್ಪಾದನೆಯನ್ನು ಹೆಚ್ಚಿಸುವುದಲ್ಲದೆ, ಸೇವಾ ವಲಯವನ್ನು ಮತ್ತಷ್ಟು ವಿಸ್ತರಿಸುತ್ತದೆ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ಮುಕ್ತ ವ್ಯಾಪಾರ ಒಪ್ಪಂದವು ಜಾಗತಿಕ ವ್ಯಾಪಾರ ಮತ್ತು ಭಾರತದ ಮೇಲೆ ಹೂಡಿಕೆದಾರರ ವಿಶ್ವಾಸವನ್ನು ಬಲಪಡಿಸುತ್ತದೆ ಎಂದು ಅವರು ದೃಢವಾಗಿ ಹೇಳಿದರು.

ಭಾರತವು ಪ್ರತಿಯೊಂದು ಕ್ಷೇತ್ರದಲ್ಲೂ ಜಾಗತಿಕ ಪಾಲುದಾರಿಕೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ಇಂಧನ ಕ್ಷೇತ್ರವೊಂದರಲ್ಲೇ ಇಂಧನ ಮೌಲ್ಯ ಸರಪಳಿಯ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕ ಹೂಡಿಕೆ ಅವಕಾಶಗಳಿವೆ ಎಂದು ತಿಳಿಸಿದರು. ಭಾರತವು ತನ್ನ ಶೋಧನಾ ಕ್ಷೇತ್ರವನ್ನು ಗಮನಾರ್ಹವಾಗಿ ಮುಕ್ತಗೊಳಿಸಿದೆ ಎಂದು ಒತ್ತಿ ಹೇಳಿದ ಶ್ರೀ ಮೋದಿ, ʻಸಮುದ್ರ ಮಂಥನ ಮಿಷನ್ʼ ಎಂದು ಕರೆಯಲ್ಪಡುವ ಆಳ ಸಮುದ್ರ ಪರಿಶೋಧನಾ ಉಪಕ್ರಮವನ್ನು ಉಲ್ಲೇಖಿಸಿದರು. ಈ ದಶಕದ ಅಂತ್ಯದ ವೇಳೆಗೆ, ಭಾರತವು ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ಹೂಡಿಕೆಯನ್ನು 100 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ, ಪರಿಶೋಧನೆಯ ವ್ಯಾಪ್ತಿಯನ್ನು ಒಂದು ದಶಲಕ್ಷ ಚದರ ಕಿಲೋಮೀಟರ್‌ಗೆ ವಿಸ್ತರಿಸುವ ಗುರಿಯನ್ನು ಹೊಂದಿದೆ ಎಂದು ಅವರು ಮಾಹಿತಿ ನೀಡಿದರು. ಈಗಾಗಲೇ 170ಕ್ಕೂ ಹೆಚ್ಚು ಬ್ಲಾಕ್‌ಗಳನ್ನು ನೀಡಲಾಗಿದೆ ಮತ್ತು ಅಂಡಮಾನ್ ಮತ್ತು ನಿಕೋಬಾರ್ ಜಲಾನಯನ ಪ್ರದೇಶವು ಮುಂದಿನ ಹೈಡ್ರೋಕಾರ್ಬನ್ ಆಶಾಕಿರಣವಾಗಿ ಹೊರಹೊಮ್ಮುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ನಿಷೇಧಿತ ಪ್ರದೇಶಗಳನ್ನು ಕಡಿಮೆ ಮಾಡುವುದು ಸೇರಿದಂತೆ ಪರಿಶೋಧನಾ ಕ್ಷೇತ್ರದಲ್ಲಿ ಹಲವಾರು ಸುಧಾರಣೆಗಳನ್ನು ಕೈಗೊಳ್ಳಲಾಗಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ʻಭಾರತ ಇಂಧನ ಸಪ್ತಾಹʼದ ಹಿಂದಿನ ಆವೃತ್ತಿಗಳಲ್ಲಿ ಸ್ವೀಕರಿಸಿದ ಸಲಹೆಗಳನ್ನು ಕಾಯ್ದೆಗಳು ಮತ್ತು ನಿಯಮಗಳಲ್ಲಿನ ಬದಲಾವಣೆಗಳ ಮೂಲಕ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು. ಪರಿಶೋಧನಾ ಕ್ಷೇತ್ರದಲ್ಲಿ ಹೂಡಿಕೆ ಮಾಡುವ ಕಂಪನಿಗಳು ಹೆಚ್ಚಿನ ಲಾಭದಾಯಕತೆಯನ್ನು ನೋಡುವುದು ಖಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇಂಧನ ಕ್ಷೇತ್ರದಲ್ಲಿ ಹೂಡಿಕೆಯನ್ನು ಹೆಚ್ಚು ಪ್ರಯೋಜನಕಾರಿಯಾಗಿಸುವ ಭಾರತದ ಮತ್ತೊಂದು ವಿಶಿಷ್ಟ ಶಕ್ತಿಯನ್ನು ಪ್ರಧಾನಮಂತ್ರಿ ಮೋದಿ ಉಲ್ಲೇಖಿಸಿದರು. ಭಾರತವು ಬಹಳ ದೊಡ್ಡ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದೆ ಮತ್ತು ಪ್ರಸ್ತುತ ಈ ನಿಟ್ಟಿನಲ್ಲಿ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಅವರು ಹೇಳಿದರು. ಶೀಘ್ರದಲ್ಲೇ ಭಾರತವು ಸಂಸ್ಕರಣಾ ಸಾಮರ್ಥ್ಯದಲ್ಲಿ ಜಾಗತಿಕವಾಗಿ ನಂಬರ್ ಒನ್ ದೇಶವಾಗಲಿದೆ ಎಂದು ಶ್ರೀ ಮೋದಿ ಒತ್ತಿ ಹೇಳಿದರು. ಭಾರತದ ಪ್ರಸ್ತುತ ಸಂಸ್ಕರಣಾ ಸಾಮರ್ಥ್ಯವು ವಾರ್ಷಿಕ ಸುಮಾರು 260 ದಶಲಕ್ಷ ಮೆಟ್ರಿಕ್‌ ಟನ್‌(ʻಎಂಎಂಟಿ)ನಷ್ಟಿದೆ ಮತ್ತು ಅದನ್ನು ವಾರ್ಷಿಕ 300 ದಶಲಕ್ಷ ಮೆಟ್ರಿಕ್‌ ಟನ್‌ಗೆ ಮೀರಿ ಹೆಚ್ಚಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಇದು ಹೂಡಿಕೆದಾರರಿಗೆ ಮಹತ್ವದ ಪ್ರಯೋಜನವನ್ನು ಸೂಚಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.

ಭಾರತದಲ್ಲಿ ʻಎಲ್ಎನ್‌ಜಿʼ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ ಮತ್ತು ದೇಶವು ತನ್ನ ಒಟ್ಟು ಇಂಧನ ಬೇಡಿಕೆಯ ಶೇಕಡಾ 15 ರಷ್ಟನ್ನು ʻಎಲ್ಎಲ್‌ಜಿʼ ಮೂಲಕ ಪೂರೈಸುವ ಗುರಿಯನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಡೀ ʻಎಲ್ಎನ್‌ಜಿʼ ಮೌಲ್ಯ ಸರಪಳಿಯಲ್ಲಿ ಕೆಲಸ ಮಾಡುವ ಅಗತ್ಯವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ ಭಾರತವು ಸಾರಿಗೆಯಲ್ಲಿ ದೊಡ್ಡ ಪ್ರಮಾಣದ ಪ್ರಯತ್ನಗಳನ್ನು ಕೈಗೊಳ್ಳುತ್ತಿದೆ ಎಂದರು. ಇತ್ತೀಚೆಗೆ ಪ್ರಾರಂಭಿಸಲಾದ ಎಪ್ಪತ್ತು ಸಾವಿರ ಕೋಟಿ ರೂ.ಗಳ ಹಡಗು ನಿರ್ಮಾಣ ಕಾರ್ಯಕ್ರಮದ ಬೆಂಬಲದೊಂದಿಗೆ ದೇಶೀಯವಾಗಿ ʻಎಲ್ಎನ್‌ಜಿʼ ಸಾಗಣೆಗೆ ಅಗತ್ಯವಾದ ಹಡಗುಗಳನ್ನು ನಿರ್ಮಿಸಲು ಭಾರತ ಕೆಲಸ ಮಾಡುತ್ತಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ಭಾರತೀಯ ಬಂದರುಗಳಲ್ಲಿ ʻಎಲ್ಎನ್‌ಜಿʼ ಟರ್ಮಿನಲ್‌ಗಳನ್ನು ನಿರ್ಮಿಸುವಲ್ಲಿ ಮತ್ತು ಮರುಅನಿಲೀಕರಣ ಯೋಜನೆಗಳಲ್ಲಿ ಹಲವಾರು ಹೂಡಿಕೆ ಅವಕಾಶಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ಹೇಳಿದರು.

ʻಎಲ್‌ಎನ್‌ಜಿʼ ಸಾಗಣೆಗೆ ಭಾರತಕ್ಕೆ ವಿಶಾಲವಾದ ಪೈಪ್ ಲೈನ್ ಜಾಲದ ಅಗತ್ಯವಿದೆ, ಅಲ್ಲಿ ಈಗಾಗಲೇ ಗಮನಾರ್ಹ ಹೂಡಿಕೆಗಳನ್ನು ಮಾಡಲಾಗಿದೆ. ಆದರೆ ದೊಡ್ಡ ಪ್ರಮಾಣದ ಅವಕಾಶಗಳು ಇನ್ನೂ ಉಳಿದಿವೆ ಎಂದು ಪ್ರಧಾನಮಂತ್ರಿ ಹೇಳಿದರು. ನಗರ ಅನಿಲ ವಿತರಣಾ ಜಾಲಗಳು ಈಗಾಗಲೇ ಭಾರತದ ಅನೇಕ ನಗರಗಳನ್ನು ತಲುಪಿವೆ ಮತ್ತು ಇತರ ನಗರಗಳಿಗೆ ವೇಗವಾಗಿ ವಿಸ್ತರಿಸುತ್ತಿವೆ, ಇದು ಈ ವಲಯವನ್ನು ಹೂಡಿಕೆಗೆ ಹೆಚ್ಚು ಆಕರ್ಷಕವಾಗಿದೆ ಎಂದು ಅವರು ಗಮನಸೆಳೆದರು.

ಭಾರತದ ಬೃಹತ್ ಜನಸಂಖ್ಯೆ ಮತ್ತು ಸ್ಥಿರವಾಗಿ ಬೆಳೆಯುತ್ತಿರುವ ಆರ್ಥಿಕತೆಯೊಂದಿಗೆ, ಪೆಟ್ರೋಕೆಮಿಕಲ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಲೇ ಇರುತ್ತದೆ. ಇದಕ್ಕೆ ವ್ಯಾಪಕವಾದ ಇಂಧನ ಮೂಲಸೌಕರ್ಯದ ಅಗತ್ಯವಿದೆ ಎಂದು ಶ್ರೀ ಮೋದಿ ಹೇಳಿದರು. ಈ ಕ್ಷೇತ್ರದಲ್ಲಿನ ಹೂಡಿಕೆಯು ಗಣನೀಯ ಬೆಳವಣಿಗೆಗೆ ದಾರಿ ಮಾಡುತ್ತದೆ ಎಂದು ದೃಢವಾಗಿ ಹೇಳಿದ ಅವರು, ಹೂಡಿಕೆದಾರರಿಗೆ ಪೂರೈಕೆ ಸರಣಿ ಚಟುವಟಿಕೆಗಳಲ್ಲಿ ಸಾಕಷ್ಟು ಅವಕಾಶಗಳಿವೆ ಎಂದು ಹೇಳಿದರು.

"ಇಂದಿನ ಭಾರತವು ʻಸುಧಾರಣಾ ಎಕ್ಸ್‌ಪ್ರೆಸ್‌ʼ ಮೂಲಕ ಸವಾರಿ ಮಾಡುತ್ತಿದೆ ಮತ್ತು ಪ್ರತಿಯೊಂದು ಕ್ಷೇತ್ರದಲ್ಲೂ ತ್ವರಿತ ಸುಧಾರಣೆಗಳನ್ನು ಕೈಗೊಳ್ಳುತ್ತಿದೆ" ಎಂದು ಶ್ರೀ ಮೋದಿ ಹೇಳಿದರು. ಜಾಗತಿಕ ಸಹಯೋಗಗಳಿಗೆ ಪಾರದರ್ಶಕ ಮತ್ತು ಹೂಡಿಕೆದಾರ ಸ್ನೇಹಿ ವಾತಾವರಣವನ್ನು ಸೃಷ್ಟಿಸುವುದರ ಜೊತೆಗೆ ದೇಶೀಯ ಹೈಡ್ರೋಕಾರ್ಬನ್‌ಗಳನ್ನು ಬಲಪಡಿಸಲು ಸುಧಾರಣೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು. ಭಾರತವು ಈಗ ಇಂಧನ ಭದ್ರತೆಯನ್ನು ಮೀರಿ ಇಂಧನ ಸ್ವಾತಂತ್ರ್ಯದ ಧ್ಯೇಯದತ್ತ ಸಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತವು ಸ್ಥಳೀಯ ಬೇಡಿಕೆಯನ್ನು ಪೂರೈಸುವ ಸಾಮರ್ಥ್ಯವಿರುವ ಇಂಧನ ವಲಯದ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಕೈಗೆಟುಕುವ ಸಂಸ್ಕರಣೆ ಮತ್ತು ಸಾರಿಗೆ ಪರಿಹಾರಗಳ ಮೂಲಕ ರಫ್ತುಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುತ್ತದೆ ಎಂದು ಅವರು ಹೇಳಿದರು.

ಭಾರತದ ಇಂಧನ ಕ್ಷೇತ್ರವು ರಾಷ್ಟ್ರದ ಆಕಾಂಕ್ಷೆಗಳ ಕೇಂದ್ರವಾಗಿದೆ. 500 ಶತಕೋಟಿ ಡಾಲರ್ ಮೌಲ್ಯದ ಹೂಡಿಕೆ ಅವಕಾಶಗಳನ್ನು ಹೊಂದಿದೆ ಎಂದು ಪ್ರಧಾನಮಂತ್ರಿ ಹೇಳಿದರು. ʻಮೇಕ್ ಇನ್ ಇಂಡಿಯಾʼ, ʻಇನ್ನೋವೇಟ್ ಇನ್ ಇಂಡಿಯಾʼ, ʻಸ್ಕೇಲ್ ವಿತ್ ಇಂಡಿಯಾʼ, ಇನ್‌ವೆಸ್ಟ್‌ ಇನ್ ಇಂಡಿಯಾʼ ಎಂಬ ಸಂದೇಶದೊಂದಿಗೆ ಜಾಗತಿಕ ಸಮುದಾಯಕ್ಕೆ ಹೂಡಿಕೆಗೆ ಕರೆ ನೀಡುವ ಮೂಲಕ ಅವರು ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಶ್ರೀ ಹರ್ ದೀಪ್ ಸಿಂಗ್ ಪುರಿ, ಗೋವಾ ಮುಖ್ಯಮಂತ್ರಿ ಶ್ರೀ ಪ್ರಮೋದ್ ಸಾವಂತ್ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

*****


(रिलीज़ आईडी: 2219056) आगंतुक पटल : 7
इस विज्ञप्ति को इन भाषाओं में पढ़ें: English , Urdu , Marathi , हिन्दी , Manipuri , Bengali , Gujarati , Tamil , Malayalam