ಗೃಹ ವ್ಯವಹಾರಗಳ ಸಚಿವಾಲಯ
ಗೃಹ ಸಚಿವಾಲಯದ (MHA) ಸ್ತಬ್ಧಚಿತ್ರವು ನವೀನ ನ್ಯಾಯ ಸಂಹಿತೆಗಳ ರಾಷ್ಟ್ರವ್ಯಾಪಿ ಅನುಷ್ಠಾನ ಮತ್ತು ತಂತ್ರಜ್ಞಾನ ಆಧಾರಿತ ನ್ಯಾಯಾಂಗ ಸುಧಾರಣೆಗಳನ್ನು ಪ್ರದರ್ಶಿಸಲಿದೆ
प्रविष्टि तिथि:
24 JAN 2026 7:26PM by PIB Bengaluru
ಗೃಹ ಸಚಿವಾಲಯವು 2024ರ ಜುಲೈ 1 ರಿಂದ ಜಾರಿಗೆ ಬಂದ ನೂತನ ನ್ಯಾಯ ಸಂಹಿತೆಗಳಾದ ಭಾರತೀಯ ನ್ಯಾಯ ಸಂಹಿತೆ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮಗಳ ರಾಷ್ಟ್ರವ್ಯಾಪಿ ಅನುಷ್ಠಾನವನ್ನು ಬಿಂಬಿಸುವ ಸ್ತಬ್ಧಚಿತ್ರವನ್ನು ಪ್ರಸ್ತುತಪಡಿಸಲಿದೆ. ಈ ಮೂರು ಕಾನೂನುಗಳ ಜಾರಿಯು ಈ ಶತಮಾನದ ಅತಿದೊಡ್ಡ ಸುಧಾರಣೆಗಳಲ್ಲಿ ಒಂದಾಗಿದೆ. ಶಿಕ್ಷೆಯ ತತ್ವದ ಮೇಲೆ ಆಧಾರಿತವಾಗಿದ್ದ ವಸಾಹತುಶಾಹಿ ಪರಂಪರೆಯನ್ನು ತೆಗೆದುಹಾಕುವ ಮೂಲಕ, ಈ ಕಾನೂನುಗಳು 'ನ್ಯಾಯ' ಎಂಬ ಭಾರತೀಯ ದರ್ಶನವನ್ನು ಅಳವಡಿಸಿಕೊಂಡು ವಿಕಸಿತ ಭಾರತದ ಆಕಾಂಕ್ಷೆಯನ್ನು ಸಂಕೇತಿಸುತ್ತವೆ ("ದಂಡನೆಯಿಂದ ನ್ಯಾಯದ ಕಡೆಗೆ").
ಈ ಸ್ತಬ್ಧಚಿತ್ರವನ್ನು 77ನೇ ಗಣರಾಜ್ಯೋತ್ಸವ ಪರೇಡ್ ನ ಸಂದರ್ಭದಲ್ಲಿ ಕರ್ತವ್ಯ ಪಥದಲ್ಲಿ ಪ್ರದರ್ಶಿಸಲಾಗುವುದು. ಇದು ಹೊಸ ಕಾನೂನುಗಳ ರಾಷ್ಟ್ರವ್ಯಾಪಿ ಕಾರ್ಯಾಚರಣೆ ಮತ್ತು ಆಧುನಿಕ, ತಂತ್ರಜ್ಞಾನ ಆಧಾರಿತ, ಕಾಲಬದ್ಧ ಹಾಗೂ ನಾಗರಿಕ ಕೇಂದ್ರಿತ ನ್ಯಾಯ ವ್ಯವಸ್ಥೆಯತ್ತ ಭಾರತದ ಪರಿವರ್ತನೆಯನ್ನು ಉಲ್ಲೇಖಿಸುತ್ತದೆ.

ಸ್ತಬ್ಧಚಿತ್ರದಲ್ಲಿ ಪ್ರದರ್ಶಿಸಲಾದ ಪ್ರಮುಖ ವೈಶಿಷ್ಟ್ಯಗಳಲ್ಲಿ ಡಿಜಿಟಲ್ ಪುರಾವೆಗಳ ಸಂಗ್ರಹಣೆಗಾಗಿ ಇ-ಸಾಕ್ಷ್ಯ (e-Sakshya) ಬಳಕೆ, ಬಯೋಮೆಟ್ರಿಕ್ ಗುರುತಿಸುವಿಕೆಗಾಗಿ ರಾಷ್ಟ್ರೀಯ ಸ್ವಯಂಚಾಲಿತ ಬೆರಳಚ್ಚು ಗುರುತಿಸುವಿಕೆ ವ್ಯವಸ್ಥೆ (NAFIS), ನ್ಯಾಯಾಲಯಗಳು ಡಿಜಿಟಲ್ ಸಹಿಯೊಂದಿಗೆ ಎಲೆಕ್ಟ್ರಾನಿಕ್ ಮೂಲಕ ಸಮನ್ಸ್ ಗಳನ್ನು ನೀಡಲು ಅನುವು ಮಾಡಿಕೊಡುವ ಇ-ಸಮನ್ (e-Summon) ಮತ್ತು ವರ್ಚುವಲ್ ವಿಚಾರಣೆಗಳಂತಹ ತಂತ್ರಜ್ಞಾನ ಆಧಾರಿತ ನ್ಯಾಯಾಲಯದ ಪ್ರಕ್ರಿಯೆಗಳು ಸೇರಿವೆ. ಇದು ಅಂತರ-ಕಾರ್ಯನಿರ್ವಹಣಾ ಕ್ರಿಮಿನಲ್ ನ್ಯಾಯ ವ್ಯವಸ್ಥೆಯ (ICJS) ಚೌಕಟ್ಟಿನಡಿಯಲ್ಲಿ ಪೊಲೀಸ್, ಫೋರೆನ್ಸಿಕ್, ಪ್ರಾಸಿಕ್ಯೂಷನ್, ನ್ಯಾಯಾಲಯಗಳು ಮತ್ತು ಕಾರಾಗೃಹಗಳ ನಡುವಿನ ಸುಗಮ ಏಕೀಕರಣವನ್ನು ಪ್ರತಿನಿಧಿಸುತ್ತದೆ. ಸ್ತಬ್ಧಚಿತ್ರದಲ್ಲಿ ಚಿತ್ರಿಸಲಾದ ಮೊಬೈಲ್ ಫೋರೆನ್ಸಿಕ್ ಘಟಕಗಳು ಸುಧಾರಿತ ಫೋರೆನ್ಸಿಕ್ ವ್ಯಾಪ್ತಿ ಮತ್ತು ಅಪರಾಧ ಸ್ಥಳಗಳಲ್ಲಿನ ಕ್ಷಿಪ್ರ ಪ್ರತಿಕ್ರಿಯೆಯನ್ನು ಸಂಕೇತಿಸುತ್ತವೆ.

ಸ್ತಬ್ಧಚಿತ್ರವು ಸಮಗ್ರ ನಿಯಂತ್ರಣ ಕೊಠಡಿ ವ್ಯವಸ್ಥೆಗಳು, ಸಿಸಿಟಿವಿ ಕ್ಯಾಮೆರಾಗಳಂತಹ ಸುಧಾರಿತ ಕಣ್ಗಾವಲು ಮೂಲಸೌಕರ್ಯಗಳು ಮತ್ತು ಫೀಲ್ಡ್ ಕಾರ್ಯಾಚರಣೆ ಹಾಗೂ ರೆಸ್ಪಾನ್ಸ್ ಯುನಿಟ್‌ಗಳಲ್ಲಿ ತರಬೇತಿ ಪಡೆದ ಮಹಿಳಾ ಪೊಲೀಸ್ ಸಿಬ್ಬಂದಿಯ ಹೆಚ್ಚುತ್ತಿರುವ ಪಾತ್ರದ ಮೂಲಕ ಕ್ಷಿಪ್ರ ಪ್ರತಿಕ್ರಿಯೆ ಕಾರ್ಯವಿಧಾನಗಳನ್ನು ಎತ್ತಿ ತೋರಿಸುತ್ತದೆ. ಹೊಸ ಕಾನೂನುಗಳ ಅಡಿಯಲ್ಲಿ ಸುಧಾರಣಾತ್ಮಕ ಶಿಕ್ಷೆಯ ರೂಪವಾಗಿ ಸಮುದಾಯ ಸೇವೆಯನ್ನು ಸೇರಿಸಿರುವುದು ನ್ಯಾಯದ ಕಡೆಗಿನ ಪ್ರಗತಿಪರ ಮತ್ತು ಮಾನವೀಯ ಧೋರಣೆಯನ್ನು ಪ್ರತಿಬಿಂಬಿಸುತ್ತದೆ.
ಹೊಸ ಕಾನೂನು ಪುಸ್ತಕಗಳ ಬಹುಭಾಷಾ ಪ್ರಾತಿನಿಧ್ಯವು ಸುಲಭ ಲಭ್ಯತೆ, ಒಳಗೊಳ್ಳುವಿಕೆ ಮತ್ತು ಪಾರದರ್ಶಕತೆಗೆ ಸರ್ಕಾರದ ಬದ್ಧತೆಯನ್ನು ಒತ್ತಿಹೇಳುತ್ತದೆ, ಇದು ಸುಧಾರಿತ ಕಾನೂನು ಚೌಕಟ್ಟು ದೇಶದಾದ್ಯಂತದ ನಾಗರಿಕರಿಗೆ ಅರ್ಥವಾಗುವಂತೆ ಮತ್ತು ಸುಲಭವಾಗಿ ಲಭ್ಯವಾಗುವಂತೆ ಖಚಿತಪಡಿಸುತ್ತದೆ.

ಗೃಹ ವ್ಯವಹಾರಗಳ ಸಚಿವಾಲಯದ ಈ ಸ್ತಬ್ಧಚಿತ್ರವು ಆಧುನಿಕ, ವೃತ್ತಿಪರ ಮತ್ತು ತಂತ್ರಜ್ಞಾನ ಆಧಾರಿತ ನ್ಯಾಯ ವ್ಯವಸ್ಥೆಯತ್ತ ಭಾರತವು ಇಟ್ಟಿರುವ ನಿರ್ಣಾಯಕ ಹೆಜ್ಜೆಯನ್ನು ಪ್ರತಿಬಿಂಬಿಸುತ್ತದೆ. ಇದು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವುದಲ್ಲದೆ, ನ್ಯಾಯದಾನ ಪ್ರಕ್ರಿಯೆಯಲ್ಲಿ ನಿಶ್ಚಿತತೆ, ವೇಗ ಮತ್ತು ಘನತೆಯನ್ನು ಖಚಿತಪಡಿಸುವ ಮೂಲಕ ಸಾರ್ವಜನಿಕರ ವಿಶ್ವಾಸವನ್ನು ಬಲಪಡಿಸುತ್ತದೆ.
*****
(रिलीज़ आईडी: 2218297)
आगंतुक पटल : 4