ಉಪರಾಷ್ಟ್ರಪತಿಗಳ ಕಾರ್ಯಾಲಯ
ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ 7ನೇ ಪುಣ್ಯಸ್ಮರಣೆ; ತುಮಕೂರಿನಲ್ಲಿ ಉಪರಾಷ್ಟ್ರಪತಿ ಅವರಿಂದ ಗೌರವ ಸಲ್ಲಿಕೆ
"ಸೇವೆಯೇ ಸಾಧನೆ, ಮಾನವೀಯತೆಯೇ ಅತ್ಯುನ್ನತ ಆರಾಧನೆ": ಸಿದ್ಧಗಂಗಾ ಮಠದಲ್ಲಿ ಉಪರಾಷ್ಟ್ರಪತಿ
ಸಿದ್ಧಗಂಗಾ ಮಠದ ಸೇವೆ, ಶಿಕ್ಷಣ ಮತ್ತು ಸಹಾನುಭೂತಿಯ ಸಂಪ್ರದಾಯವನ್ನು ಶ್ಲಾಘಿಸಿದ ಉಪರಾಷ್ಟ್ರಪತಿ
ಭಾರತದ ನಾಗರಿಕತೆಯ ಮೌಲ್ಯಗಳು ಜಾಗತಿಕ ಆಡಳಿತದ ಮೂಲಕ ಸಾಂಸ್ಥಿಕ ಅಭಿವ್ಯಕ್ತಿ ಪಡೆಯುತ್ತಿವೆ: ಉಪರಾಷ್ಟ್ರಪತಿ
प्रविष्टि तिथि:
21 JAN 2026 3:36PM by PIB Bengaluru
ಉಪರಾಷ್ಟ್ರಪತಿ ಶ್ರೀ ಸಿ.ಪಿ. ರಾಧಾಕೃಷ್ಣನ್ ಅವರು ಇಂದು ಕರ್ನಾಟಕದ ತುಮಕೂರಿನ ಶ್ರೀ ಸಿದ್ಧಗಂಗಾ ಮಠದಲ್ಲಿ ನಡೆದ ಡಾ. ಶ್ರೀ ಶ್ರೀ ಮಹಾಸ್ವಾಮಿಗಳವರ 7ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಪರಮಪೂಜ್ಯ ಶ್ರೀಗಳಿಗೆ ಭಕ್ತಿಪೂರ್ವಕ ಗೌರವ ನಮನ ಸಲ್ಲಿಸಿದ ಅವರು, ಸ್ವಾಮೀಜಿಯವರನ್ನು ಕರುಣೆ, ತ್ಯಾಗ ಮತ್ತು ನಿಸ್ವಾರ್ಥ ಸೇವೆಯ ದಾರಿದೀಪ ಎಂದು ಸ್ಮರಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿಯವರು, ಮಹಾಸ್ವಾಮೀಜಿಯವರು ಲಿಂಗೈಕ್ಯರಾಗಿ ಏಳು ವರ್ಷಗಳು ಕಳೆದಿದ್ದರೂ, ಸಮಯ ಕಳೆದಂತೆ ಅವರ ಪ್ರಸ್ತುತತೆ ಮತ್ತಷ್ಟು ಆಳವಾಗುತ್ತಿದೆ ಎಂದರು. ಅನಿಶ್ಚಿತತೆ, ವಿಭಜನೆ ಮತ್ತು ಅವಿಶ್ರಾಂತ ಮಹತ್ವಾಕಾಂಕ್ಷೆಗಳಿಂದ ಕೂಡಿದ ಈ ಯುಗದಲ್ಲಿ, ಸ್ವಾರ್ಥಕ್ಕಿಂತ ಮಾನವೀಯತೆಯನ್ನು ಆರಿಸಿಕೊಳ್ಳುವಂತೆ ಸಮಾಜಕ್ಕೆ ಮಾರ್ಗದರ್ಶನ ನೀಡುವ ನೈತಿಕ ದಿಕ್ಸೂಚಿಯಾಗಿ ಸ್ವಾಮೀಜಿಯವರ ಜೀವನ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.
15ನೇ ಶತಮಾನದಲ್ಲಿ ಸ್ಥಾಪಿತವಾದ ಶ್ರೀ ಸಿದ್ಧಗಂಗಾ ಮಠದ ಶ್ರೀಮಂತ ಪರಂಪರೆಯನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಯವರು, ಅನ್ನ, ಶಿಕ್ಷಣ ಮತ್ತು ಆಶ್ರಯದ ಮೂಲಕ ಮಠವು ನೀಡುತ್ತಿರುವ 'ತ್ರಿವಿಧ ದಾಸೋಹ'ದ ಸುದೀರ್ಘ ಸಂಪ್ರದಾಯವನ್ನು ಸ್ಮರಿಸಿದರು. 1941ರಲ್ಲಿ ಮಠದ ಜವಾಬ್ದಾರಿಯನ್ನು ವಹಿಸಿಕೊಂಡ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರು ಕೇವಲ ಆಚರಣೆಗಳಿಗೆ ಸೀಮಿತರಾದ ಸಂತರಲ್ಲ, ಬದಲಾಗಿ ಆಧ್ಯಾತ್ಮಿಕತೆಯನ್ನು ಸೇವೆಯನ್ನಾಗಿ ಮತ್ತು ಭಕ್ತಿಯನ್ನು ಕರ್ತವ್ಯವನ್ನಾಗಿ ಪರಿವರ್ತಿಸಿದ ಕರ್ಮಯೋಗಿಯಾಗಿದ್ದರು ಎಂದು ಅವರು ಬಣ್ಣಿಸಿದರು.
ಸೇವೆಯೇ ಸಾಧನೆ ಮತ್ತು ಮಾನವೀಯತೆಯೇ ಅತ್ಯುನ್ನತ ಆರಾಧನೆ ಎಂಬ ಕಾಲಾತೀತ ಭಾರತೀಯ ಸತ್ಯವನ್ನು ಸ್ವಾಮೀಜಿಯವರ ಜೀವನವು ಪುನರುಚ್ಚರಿಸಿದೆ ಎಂದು ಉಪರಾಷ್ಟ್ರಪತಿಯವರು ಹೇಳಿದರು. ವಯೋಸಹಜ ಅಡೆತಡೆಗಳ ನಡುವೆಯೂ ಸ್ವಾಮೀಜಿಯವರು ಅಚಲ ಶಿಸ್ತು, ನಮ್ರತೆ ಮತ್ತು ಸಹಾನುಭೂತಿಯೊಂದಿಗೆ ಸೇವೆಗೆ ಬದ್ಧರಾಗಿದ್ದರು ಎಂದು ಅವರು ಹೇಳಿದರು.
ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರ ಮಾರ್ಗದರ್ಶನದಲ್ಲಿ ಮತ್ತು ಈಗಿನ ಪೀಠಾಧಿಪತಿಗಳ ನೇತೃತ್ವದಲ್ಲಿ ಸಿದ್ಧಗಂಗಾ ಮಠವು ಒಂದು ಪ್ರಬಲ ಸಾಮಾಜಿಕ ಚಳವಳಿಯಾಗಿ ವಿಕಸನಗೊಂಡಿದೆ ಎಂದು ಉಪರಾಷ್ಟ್ರಪತಿಯವರು ತಿಳಿಸಿದರು. ಜಾತಿ, ಸಮುದಾಯ ಮತ್ತು ಪ್ರಾದೇಶಿಕ ಭೇದವಿಲ್ಲದೆ ಅತ್ಯಂತ ಬಡ ಕುಟುಂಬಗಳ ಲಕ್ಷಾಂತರ ಮಕ್ಕಳು ಮಠದಲ್ಲಿ ಶಿಕ್ಷಣ, ಅನ್ನ ಮತ್ತು ಆಶ್ರಯವನ್ನು ಪಡೆಯುತ್ತಿದ್ದಾರೆ. ಇದು ದಾನದ ರೂಪದಲ್ಲಿರದೆ, ಘನತೆ ಮತ್ತು ಪ್ರೀತಿಯಿಂದ ನೀಡಲಾಗುವ ಹಕ್ಕಿನಂತೆ ಲಭ್ಯವಾಗುತ್ತಿದೆ ಎಂದು ಅವರು ಹೇಳಿದರು.
'ವಿಕಸಿತ ಭಾರತ'ದತ್ತ ಭಾರತದ ಪಯಣದಲ್ಲಿ ಸಿದ್ಧಗಂಗಾ ಮಠದಂತಹ ಆಧ್ಯಾತ್ಮಿಕ ಸಂಸ್ಥೆಗಳು ವಹಿಸುತ್ತಿರುವ ಪ್ರಮುಖ ಪಾತ್ರವನ್ನು ಉಪರಾಷ್ಟ್ರಪತಿಯವರು ವಿವರಿಸಿದರು. ಧರ್ಮ, ಸೇವೆ, ವಸುಧೈವ ಕುಟುಂಬಕಂ ಮತ್ತು ಪ್ರಕೃತಿಯ ಮೇಲಿನ ಗೌರವದ ಮೌಲ್ಯಗಳ ಮೂಲಕ ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಪ್ರದಾಯಗಳು ಸಮಾಜವನ್ನು ಸುಸ್ಥಿರವಾಗಿರಿಸಿವೆ. ಇವು ಎಲ್ಲರನ್ನೂ ಒಳಗೊಂಡ ಸುಸ್ಥಿರ ಅಭಿವೃದ್ಧಿಗೆ ಮಾರ್ಗದರ್ಶನ ನೀಡುತ್ತಿವೆ ಎಂದು ಅವರು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ, ಈ ಕಾಲಾತೀತ ನಾಗರಿಕ ಮೌಲ್ಯಗಳು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಆಡಳಿತದ ಮೂಲಕ ಸಾಂಸ್ಥಿಕ ಅಭಿವ್ಯಕ್ತಿಯನ್ನು ಕಂಡುಕೊಂಡಿವೆ ಎಂದು ಅಭಿಪ್ರಾಯಪಟ್ಟರು. ಪರಂಪರೆಯ ಸಂರಕ್ಷಣೆ, ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳು ಮತ್ತು ಸಂತರನ್ನು, ಆಧ್ಯಾತ್ಮಿಕ ಸಂಸ್ಥೆಗಳನ್ನು ಗೌರವಿಸುವ ಕ್ರಮಗಳು ಎಲ್ಲ ನಾಗರಿಕರನ್ನು ಸಮಾನವಾಗಿ ಸೇವೆ ಮಾಡುವ ಹಾಗೂ ನಂಬಿಕೆಯನ್ನು ಗೌರವಿಸುವ ಆಡಳಿತ ಮಾದರಿಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಹಿಂದೂ ಪ್ರಜ್ಞೆಯ ಪುನರುತ್ಥಾನವು ನಾವು ಯಾರು, ಎಲ್ಲಿಂದ ಬಂದಿದ್ದೇವೆ ಮತ್ತು ಯಾವ ಮೌಲ್ಯಗಳು ನಮ್ಮನ್ನು ಮುನ್ನಡೆಸುತ್ತವೆ ಎಂಬ ಘನತೆಯನ್ನು ತಿಳಿಯುವ ಕುರಿತಾಗಿದೆ ಎಂದು ಉಪರಾಷ್ಟ್ರಪತಿಯವರು ಹೇಳಿದರು.
'ವಿಕಾಸ' (ಅಭಿವೃದ್ಧಿ) ಮತ್ತು 'ವಿರಾಸತ್' (ಪರಂಪರೆ) ನಡುವಿನ ಸಾಮರಸ್ಯವನ್ನು ತಿಳಿಸಿದ ಉಪರಾಷ್ಟ್ರಪತಿಯವರು, ತನ್ನ ನಾಗರಿಕತೆಯ ಬೇರುಗಳಲ್ಲಿ ಭದ್ರವಾಗಿರುವ ರಾಷ್ಟ್ರವು ಆಧುನಿಕ ಜಗತ್ತಿನಲ್ಲಿ ಹೆಚ್ಚು ಉನ್ನತವಾಗಿ ನಿಲ್ಲುತ್ತದೆ; ಆತ್ಮವಿಶ್ವಾಸ, ಕರುಣೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಗುಣವನ್ನು ಹೊಂದಿರುತ್ತದೆ ಎಂದರು. ಸಿದ್ಧಗಂಗಾ ಮಠದಂತಹ ಸಂಸ್ಥೆಗಳು ಸಮಾಜವನ್ನು ಆಧ್ಯಾತ್ಮಿಕವಾಗಿ ನೆಲೆಗೊಳಿಸುವುದರ ಜೊತೆಗೆ ಶಿಕ್ಷಣ, ಆರೋಗ್ಯ, ಸಾಮಾಜಿಕ ಸಾಮರಸ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಪ್ರಮುಖ ಕೊಡುಗೆ ನೀಡುತ್ತಿವೆ ಎಂದು ಹೇಳಿದರು.
ತಮ್ಮ ಸಮಾರೋಪ ನುಡಿಗಳಲ್ಲಿ, ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳವರಿಗೆ ಸಲ್ಲಿಸುವ ನಿಜವಾದ ಗೌರವವು ಕೇವಲ ಪುಷ್ಪಹಾರಗಳು ಮತ್ತು ಭಾಷಣಗಳಲ್ಲಿ ಇಲ್ಲ, ಬದಲಾಗಿ ಅದು ಕ್ರಿಯೆಯಲ್ಲಿದೆ - ಇನ್ನೂ ಒಂದು ಮಗುವಿಗೆ ಶಿಕ್ಷಣ ನೀಡುವುದು, ಇನ್ನೂ ಒಬ್ಬ ಹಸಿದ ಜೀವಿಗೆ ಅನ್ನ ನೀಡುವುದು ಮತ್ತು ಸಂಕಷ್ಟದಲ್ಲಿರುವ ವ್ಯಕ್ತಿಯ ಪರವಾಗಿ ನಿಲ್ಲುವುದರಲ್ಲಿದೆ ಎಂದರು. ಸಮಾಜವು ಈ 'ದಾಸೋಹ'ದ ಹಾದಿಯಲ್ಲಿ ನಡೆದರೆ, ಸ್ವಾಮೀಜಿಯವರು ಕೇವಲ ಭೂತಕಾಲದ ನೆನಪಾಗಿ ಉಳಿಯದೆ, ಭಾರತದ ಭವಿಷ್ಯವನ್ನು ರೂಪಿಸುವ ಜೀವಂತ ಶಕ್ತಿಯಾಗಿ ಇರುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕದ ರಾಜ್ಯಪಾಲರಾದ ಶ್ರೀ ಥಾವರ್ಚಂದ್ ಗೆಹ್ಲೋಟ್, ಸಿದ್ಧಗಂಗಾ ಮಠಾಧೀಶರಾದ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳವರು, ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವರಾದ ಶ್ರೀ ವಿ. ಸೋಮಣ್ಣ, ಕರ್ನಾಟಕದ ಗೃಹ ಸಚಿವರು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ, ಸಂಸತ್ ಸದಸ್ಯರು, ಶಾಸಕರು ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.
*****
(रिलीज़ आईडी: 2216881)
आगंतुक पटल : 32