ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

'ಸರ್ವರಿಗೂ ಯುವ ಎಐ' ಉಪಕ್ರಮವು ಕೃತಕ ಬುದ್ಧಿಮತ್ತೆ ಜ್ಞಾನದ ಲಭ್ಯತೆಯನ್ನು ಪ್ರಜಾಸತ್ತಾತ್ಮಕಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ


ಈ ಕಾರ್ಯಕ್ರಮವು ಭಾರತದ ಯುವಕರನ್ನು ಕೃತಕ ಬುದ್ಧಿಮತ್ತೆ ಚಾಲಿತ ಭವಿಷ್ಯದ ಅವಕಾಶಗಳು ಮತ್ತು ಜವಾಬ್ದಾರಿಗಳಿಗೆ ಸಜ್ಜುಗೊಳಿಸುತ್ತದೆ

प्रविष्टि तिथि: 13 JAN 2026 3:16PM by PIB Bengaluru

ಜನವರಿ 12, 2026 ರಂದು 'ರಾಷ್ಟ್ರೀಯ ಯುವ ದಿನ'ದ ಸ್ಮರಣಾರ್ಥವಾಗಿ ಭಾರತ ಸರ್ಕಾರವು ಹೊಸದಾಗಿ ಪ್ರಾರಂಭಿಸಲಾದ 'ರಾಷ್ಟ್ರೀಯ ಎಐ ಸಾಕ್ಷರತಾ ಕಾರ್ಯಕ್ರಮ' ಮತ್ತು ತನ್ನ ಮಹತ್ವಕಾಂಕ್ಷೆಯ ಕೋರ್ಸ್ ಆಗಿರುವ 'ಸರ್ವರಿಗೂ ಯುವ ಎಐ' (ಯುವ ಎಐ ಫಾರ್ ಆಲ್) ಮೂಲಕ ಯುವಜನತೆಯ ಸಬಲೀಕರಣಕ್ಕೆ ಬದ್ಧತೆಯನ್ನು ಪುನರುಚ್ಚರಿಸಿದೆ. ಸ್ವಾಮಿ ವಿವೇಕಾನಂದರ ಪ್ರಬುದ್ಧ ಯುವಕರ ದೃಷ್ಟಿಕೋನವನ್ನು ಕೃತಕ ಬುದ್ಧಿಮತ್ತೆ ಆಧಾರಿತ ಭವಿಷ್ಯದ ಸಾಧನಗಳೊಂದಿಗೆ ಬೆಸೆದಿದೆ. ಜನವರಿ 6, 2026 ರಂದು ಜೈಪುರದಲ್ಲಿ ನಡೆದ 'ರಾಜಸ್ಥಾನ ಪ್ರಾದೇಶಿಕ ಕೃತಕ ಬುದ್ಧಿಮತ್ತೆ ಪರಿಣಾಮ ಶೃಂಗಸಭೆ'ಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ ಅವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ರೈಲ್ವೆ ಹಾಗೂ ವಾರ್ತಾ ಮತ್ತು ಪ್ರಸಾರ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್;  ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ವಾಣಿಜ್ಯ ಹಾಗೂ ಕೈಗಾರಿಕಾ ಸಹಾಯಕ ಖಾತೆ ಸಚಿವರಾದ ಶ್ರೀ ಜಿತಿನ್ ಪ್ರಸಾದ್ ಅವರು ಉಪಸ್ಥಿತರಿದ್ದರು. 'ರಾಷ್ಟ್ರೀಯ ಕೃತಕ ಬುದ್ಧಿಮತ್ತೆ ಸಾಕ್ಷರತಾ ಕಾರ್ಯಕ್ರಮ'ವು ಸರ್ಕಾರದ 'ವಿಕಸಿತ ಭಾರತ’, 'ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ' ವಿಸ್ತರಣೆಗೆ ಅನುಗುಣವಾಗಿದೆ. ಜೊತೆಗೆ ಎಲ್ಲರನ್ನೂ ಒಳಗೊಂಡ, ಜವಾಬ್ದಾರಿಯುತ ಮತ್ತು ಪ್ರಜಾಸತ್ತಾತ್ಮಕ ಎಐ ಅನ್ವಯಿಕೆಗೆ ಭಾರತದ ಬದ್ಧತೆಯನ್ನು ಇದು ಪ್ರತಿನಿಧಿಸುತ್ತದೆ.

ಈ ಕಾರ್ಯಕ್ರಮದ ಭಾಗವಾಗಿ, 'ಎಐ' ಸಾಕ್ಷರತೆಯನ್ನು ಪ್ರಮುಖ ಜೀವನ ಕೌಶಲ್ಯವನ್ನಾಗಿ ಮಾಡುವ ನಿಟ್ಟಿನಲ್ಲಿ 'ಯುವ ಎಐ ಫೌಂಡೇಷನಲ್' ಕೋರ್ಸ್ ಬಗ್ಗೆ ಒತ್ತಿ ಹೇಳಲಾಯಿತು. ಇದು ಯುವ ಶಕ್ತಿಯ ಮೇಲೆ  ರಾಷ್ಟ್ರೀಯ ಯುವ ದಿನದ ಗಮನಹರಿಸುವುದಕ್ಕೆ ಅನುಗುಣವಾಗಿದೆ. 4 ಗಂಟೆಗಿಂತಲೂ ಕೊಂಚ ಹೆಚ್ಚಿನ ಕಲಿಕಾ ಅವಧಿಯನ್ನು ಹೊಂದಿರುವ 'ಸರ್ವರಿಗೂ ಯುವ ಎಐ' ಕೋರ್ಸ್‌ ಅನ್ನು ಕೃತಕ ಬುದ್ಧಿಮತ್ತೆ ಕಲಿಕೆಗೆ  ಆರಂಭಿಕ ಬಿಂದುವಾಗಿ ವಿನ್ಯಾಸಗೊಳಿಸಲಾಗಿದೆ. ಯಾವುದೇ ಪೂರ್ವ ತಾಂತ್ರಿಕ ಹಿನ್ನೆಲೆಯ ಅಗತ್ಯವಿಲ್ಲದೆ ಯಾರ ಬೇಕಾದರೂ ಕೋರ್ಸ್‌ ಅನ್ನು ಕಲಿಯುವ ರೀತಿಯಲ್ಲಿ ಇದನ್ನು ರೂಪಿಸಲಾಗಿದೆ. ಇದು 'ಕೃತಕ ಬುದ್ಧಿಮತ್ತೆ ಎಂದರೇನು, ಕೃತಕ ಬುದ್ಧಿಮತ್ತೆಯ ಹಿಂದಿನ ತಂತ್ರಜ್ಞಾನ, ಕಲಿಯಲು, ರಚಿಸಲು, ಯೋಚಿಸಲು ಮತ್ತು ಯೋಜಿಸಲು ಕೃತಕ ಬುದ್ಧಿಮತ್ತೆಯ ಬಳಕೆ, ಕೃತಕ ಬುದ್ಧಿಮತ್ತೆ ನೈತಿಕತೆ ಮತ್ತು ಕೃತಕ ಬುದ್ಧಿಮತ್ತೆಯ ಭವಿಷ್ಯ' ಇತ್ಯಾದಿ  ಪಠ್ಯಕ್ರಮವವನ್ನು ಒಳಗೊಂಡಿದೆ.

ಕೃತಕ ಬುದ್ಧಿಮತ್ತೆಯ ಸಾಮೂಹಿಕ ಕಲಿಕೆಯ ರಾಷ್ಟ್ರವ್ಯಾಪಿ ಆಂದೋಲನವನ್ನು ರಚಿಸುವ ಕುರಿತು ಮಾತನಾಡಿದ ಶ್ರೀ ವೈಷ್ಣವ್ ಅವರು, "ರಾಷ್ಟ್ರೀಯ ಯುವ ದಿನದಂದು ನಾವು ಗೌರವಿಸುವ ನಾಗರಿಕರು, ವಿಶೇಷವಾಗಿ ಯುವಕರು, ಕೃತಕ ಬುದ್ಧಿಮತ್ತೆ ಎಂದರೇನು, ಅದು ಹೇಗೆ ಕಾರ್ಯನಿರ್ವಹಿಸುತ್ತದೆ, ಅದನ್ನು ಎಲ್ಲಿ ಬಳಸಲಾಗುತ್ತದೆ ಎಂಬುದರ ಬಗ್ಗೆ ಮೂಲಭೂತ ತಿಳುವಳಿಕೆಯನ್ನು ಹೊಂದಿರುವುದು ಮುಖ್ಯವಾಗಿದೆ. ಹಾಗಾದಾಗ ಮಾತ್ರ ಅದನ್ನು ತಮ್ಮ ಜೀವನದಲ್ಲಿ ಜವಾಬ್ದಾರಿಯುತವಾಗಿ ಬಳಸಲು ಸಾಧ್ಯವಾಗುತ್ತದೆ. ನಿರ್ದಿಷ್ಟವಾಗಿ, ಸಣ್ಣ ಪ್ರಮಾಣದ ಉದ್ಯಮಗಳು ದೈನಂದಿನ ಕೆಲಸದಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಲು ಮತ್ತು ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಲು ಸಾಧ್ಯವಾದರೆ ಕೃತಕ ಬುದ್ಧಿಮತ್ತೆಯ ಪ್ರಯೋಜನಗಳನ್ನು ಅವು ಪಡೆಯಬಹುದಾಗಿದೆ. ಈ ಉದ್ದೇಶದೊಂದಿಗೆ, 'ರಾಷ್ಟ್ರೀಯ ಕೃತಕ ಬುದ್ಧಿಮತ್ತೆ ಸಾಕ್ಷರತಾ ಕಾರ್ಯಕ್ರಮ'ವನ್ನು ಪ್ರಾರಂಭಿಸಲಾಗಿದೆ ಮತ್ತು ಈ ಕಾರ್ಯಕ್ರಮವು ಮುಂದಿನ ಒಂದು ವರ್ಷದಲ್ಲಿ 10 ಲಕ್ಷ ಕಲಿಕಾರ್ಥಿಗಳನ್ನು ಸಜ್ಜುಗೊಳಿಸುವ ನಿರೀಕ್ಷೆಯಿದೆ.

11 ಭಾಷೆಗಳಲ್ಲಿ (ಅಸ್ಸಾಮಿ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು ಮತ್ತು ತೆಲುಗು) ಲಭ್ಯವಾಗಲಿರುವ 'ಸರ್ವರಿಗೂ ಯುವ ಎಐ' ಕೋರ್ಸ್ ಸಂಪೂರ್ಣ ಉಚಿತವಾಗಿದ್ದು, ಯಾವುದೇ ಶುಲ್ಕವಿರುವುದಿಲ್ಲ. ಪ್ರಮುಖ ಕಲಿಕಾ ವೇದಿಕೆಗಳಾದ 'ಫ್ಯೂಚರ್ ಸ್ಕಿಲ್ಸ್ ಪ್ರೈಮ್’, 'ಐಜಿಒಟಿ ಕರ್ಮಯೋಗಿ’, 'ದೀಕ್'ಷಾ ಮತ್ತು ಇತರ ಜನಪ್ರಿಯ 'ಎಡ್-ಟೆಕ್' ಪೋರ್ಲ್‌ಗಳಲ್ಲಿ ಇದು ಲಭ್ಯವಿದೆ. ಕೋರ್ಸ್ ಪೂರ್ಣಗೊಳಿಸಿದ ನಂತರ, ಪ್ರತಿಯೊಬ್ಬ ಕಲಿಕಾರ್ಥಿಯು ಭಾರತ ಸರ್ಕಾರದಿಂದ ಅಧಿಕೃತ ಪ್ರಮಾಣಪತ್ರವನ್ನು ಪಡೆಯುತ್ತಾರೆ.

ರಾಷ್ಟ್ರೀಯ ಕೃತಕ ಬುದ್ಧಿಮತ್ತೆ ಸಾಕ್ಷರತಾ ಕಾರ್ಯಕ್ರಮದ ಭಾಗವಾಗಿರುವ `ಸರ್ವರಿಗೂ ಯುವ ಎಐ' ಕೋರ್ಸ್‌, ಕೃತಕ ಬುದ್ಧಿಮತ್ತೆ ಜ್ಞಾನದ ಪ್ರವೇಶವನ್ನು ಪ್ರಜಾಸತ್ತಾತ್ಮಕಗೊಳಿಸುವ ಮತ್ತು ಭಾರತದ ನಾಗರಿಕರನ್ನು ವಿಶೇಷವಾಗಿ ಯುವಕರನ್ನು ಕೃತಕ ಬುದ್ಧಿಮತ್ತೆ ಆಧಾರಿತ ಭವಿಷ್ಯದ ಅವಕಾಶಗಳು ಮತ್ತು ಜವಾಬ್ದಾರಿಗಳಿಗಾಗಿ ಸಿದ್ಧಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಕೇವಲ ಒಂದು ದಿನದ ಕಲಿಕೆಯ ಮೈಲುಗಲ್ಲಾಗಿ ಮಾತ್ರವಲ್ಲದೆ, ಸುಸ್ಥಿರ, ಗಣನೀಯ ಮತ್ತು ಎಲ್ಲರನ್ನೂ ಒಳಗೊಂಡ ಕೃತಕ ಬುದ್ಧಿಮತ್ತೆ ಸಾಕ್ಷರತಾ ಆಂದೋಲನದ ಅಡಿಪಾಯವಾಗಿ ಇದು ಕಾರ್ಯ ನಿರ್ವಹಿಸುತ್ತದೆ . 'ಸರ್ವರಿಗೂ ಯುವ ಎಐ' ಸಚಿವಾಲಯಗಳು, ರಾಜ್ಯಗಳು, ಶಿಕ್ಷಣ ಸಂಸ್ಥೆಗಳು, ಉದ್ಯಮ ಮತ್ತು ಡಿಜಿಟಲ್ ವೇದಿಕೆಗಳಾದ್ಯಂತ ಸಂಘಟಿತ ಕ್ರಮದ ಮೂಲಕ  'ವಿಕಸಿತ ಭಾರತ'ದ ದೃಷ್ಟಿಕೋನಕ್ಕೆ ಅರ್ಥಪೂರ್ಣವಾಗಿ ಕೊಡುಗೆ ನೀಡಲಿದೆ. ನಾಗರಿಕರನ್ನು ಸಬಲೀಕರಣಗೊಳಿಸುವ, ಜವಾಬ್ದಾರಿಯುತ ನಾವೀನ್ಯತೆಯನ್ನು ಪೋಷಿಸುವ ಮತ್ತು ಸಾರ್ವಜನಿಕ ಒಳಿತಿಗಾಗಿ ಕೃತಕ ಬುದ್ಧಿಮತ್ತೆಯಲ್ಲಿ ಭಾರತದ ನಾಯಕತ್ವವನ್ನು ಬಲಪಡಿಸುವ ಕೆಲಸವನ್ನು ಮಾಡಲಿದೆ.

ನಾಗರಿಕರು https://www.futureskillsprime.in/course/yuva-ai-for-all/ ಲಿಂಕ್‌ ಮೂಲಕ ಕೋರ್ಸ್‌ಗೆ ನೋಂದಾಯಿಸಿಕೊಳ್ಳಬಹುದು ಮತ್ತು ಎಐ ಸಾಕ್ಷರತೆಯ ಈ ರಾಷ್ಟ್ರವ್ಯಾಪಿ ಆಂದೋಲನದಲ್ಲಿ ಭಾಗಿಯಾಗಬಹುದು.

 

*****


(रिलीज़ आईडी: 2214163) आगंतुक पटल : 9
इस विज्ञप्ति को इन भाषाओं में पढ़ें: English , Urdu , हिन्दी , Malayalam