ಕೃಷಿ ಸಚಿವಾಲಯ
azadi ka amrit mahotsav

ಕೇಂದ್ರ ಕೃಷಿ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿದರು

प्रविष्टि तिथि: 08 JAN 2026 8:04PM by PIB Bengaluru

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವರಾದ ಶ್ರೀ ಶಿವರಾಜ್ ಸಿಂಗ್ ಚೌಹಾಣ್ ಅವರು ಇಂದು ನವದೆಹಲಿಯ ಕೃಷಿ ಭವನದಲ್ಲಿ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಭೆಯು ಆಹಾರ ಮತ್ತು ಕೃಷಿ ಸಂಸ್ಥೆ (FAO), ವಿಶ್ವ ಆಹಾರ ಕಾರ್ಯಕ್ರಮ (WFP), ಕೃಷಿ ಅಭಿವೃದ್ಧಿಗಾಗಿ ಅಂತಾರಾಷ್ಟ್ರೀಯ ನಿಧಿ (IFAD), ವಿಶ್ವ ಬ್ಯಾಂಕ್, ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB), ಜರ್ಮನ್ ಅಂತರಾಷ್ಟ್ರೀಯ ಸಹಕಾರ ಸಂಸ್ಥೆ (GIZ) ಮತ್ತು ಜಪಾನ್ ಅಂತಾರಾಷ್ಟ್ರೀಯ ಸಹಕಾರ ಸಂಸ್ಥೆ (JICA) ಸೇರಿದಂತೆ ಪ್ರಮುಖ ಅಂತಾರಾಷ್ಟ್ರೀಯ ಮತ್ತು ಬಹುಪಕ್ಷೀಯ ಅಭಿವೃದ್ಧಿ ಪಾಲುದಾರರ ಪ್ರತಿನಿಧಿಗಳನ್ನು ಒಳಗೊಂಡಿತ್ತು. ಸಹಯೋಗವನ್ನು ಬಲಪಡಿಸುವುದು, ದೀರ್ಘಕಾಲೀನ ಅಭಿವೃದ್ಧಿ ಆದ್ಯತೆಗಳನ್ನು ಸಮನ್ವಯಗೊಳಿಸುವುದು ಮತ್ತು ರೈತರ ಕಲ್ಯಾಣ ಹಾಗೂ ಜೀವನೋಪಾಯವನ್ನು ಸುಧಾರಿಸಲು ದೀರ್ಘಕಾಲೀನ ನೀತಿಗಳನ್ನು ರೂಪಿಸುವುದು ಸೇರಿದಂತೆ ಸುಸ್ಥಿರ ಅಭಿವೃದ್ಧಿ ಉಪಕ್ರಮಗಳನ್ನು ಬೆಂಬಲಿಸುವ ಕುರಿತು ಸಭೆಯಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು.

ಪ್ರತಿನಿಧಿಗಳನ್ನು ಸ್ವಾಗತಿಸಿದ ಶ್ರೀ ಚೌಹಾಣ್ ಅವರು, ಆಹಾರದ ಕೊರತೆಯಿದ್ದ ಸ್ಥಿತಿಯಿಂದ ಪ್ರಮುಖ ಕೃಷಿ ಉತ್ಪನ್ನಗಳ ರಫ್ತುದಾರ ರಾಷ್ಟ್ರವಾಗಿ ರೂಪಾಂತರಗೊಂಡ ಭಾರತದ ಕೃಷಿ ಪಯಣವು ಅಭೂತಪೂರ್ವವಾದುದು ಎಂದು ಹೈಲೈಟ್ ಮಾಡಿದರು ಹಾಗೂ ಇದರಲ್ಲಿ ಅಂತಾರಾಷ್ಟ್ರೀಯ ಸಂಸ್ಥೆಗಳ ಪಾತ್ರವನ್ನು ಸ್ಮರಿಸಿದರು. ದೇಶವು ಯಶಸ್ವಿಯಾಗಿ ಆಹಾರ ಭದ್ರತೆಯನ್ನು ಸಾಧಿಸಿದೆ ಮತ್ತು ಈಗ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಪೌಷ್ಟಿಕಾಂಶದ ಭದ್ರತೆಯನ್ನು ಹೆಚ್ಚಿಸುವತ್ತ ದೃಢವಾಗಿ ಗಮನಹರಿಸಿದೆ ಎಂದು ಅವರು ತಿಳಿಸಿದರು. ಭಾರತವು ತನ್ನ ಅನುಭವಗಳು ಮತ್ತು ಉತ್ತಮ ಕಾರ್ಯವಿಧಾನಗಳನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳಲು ಸೂಕ್ತ ಸ್ಥಾನದಲ್ಲಿದೆ, ಹಾಗೆಯೇ ಜಾಗತಿಕ ಆವಿಷ್ಕಾರಗಳು ಮತ್ತು ಇತರ ದೇಶಗಳಲ್ಲಿನ ಯಶಸ್ವಿ ಮಾದರಿಗಳಿಂದ ಕಲಿಯುವ ಮೂಲಕ ಕೃಷಿ ಹಾಗೂ ಸಂಬಂಧಿತ ವಲಯಗಳಲ್ಲಿ ಪರಸ್ಪರ ಬೆಳವಣಿಗೆ ಮತ್ತು ಸಹಕಾರವನ್ನು ಉತ್ತೇಜಿಸಲು ಸಿದ್ಧವಿದೆ ಎಂದು ಅವರು ಈ ಸಂದರ್ಭದಲ್ಲಿ ಒತ್ತಿ ಹೇಳಿದರು.

ಈ ಸಂಸ್ಥೆಗಳ ಪ್ರತಿನಿಧಿಗಳು ಪರಸ್ಪರ ಸಹಯೋಗಕ್ಕಾಗಿ ಕೆಲವು ಪ್ರಮುಖ ಕ್ಷೇತ್ರಗಳನ್ನು ಗುರುತಿಸಿದರು. ಇದರಲ್ಲಿ ಎಲ್ಲಾ ವರ್ಗದವರನ್ನೂ ಒಳಗೊಳ್ಳುವ ಕೃಷಿ ವಿಕಾಸ, ಸಣ್ಣ ರೈತರಿಗೆ ಸುಧಾರಿತ ಮಾರುಕಟ್ಟೆ ಸೌಲಭ್ಯ ಒದಗಿಸುವುದು ಹಾಗೂ ಯುವಕರು, ಮಹಿಳೆಯರು ಮತ್ತು ರೈತ ಸಂಘಟನೆಗಳಿಗೆ ಹೆಚ್ಚಿನ ಆದ್ಯತೆ ನೀಡುವುದೂ ಸೇರಿದೆ. ಅವರು ತಂತ್ರಜ್ಞಾನ ಮತ್ತು ನಾವೀನ್ಯತೆ, ಹಣಕಾಸು ನೆರವು, ಖಾಸಗಿ ವಲಯದ ಪಾಲ್ಗೊಳ್ಳುವಿಕೆ ಮತ್ತು ಹೂಡಿಕೆಯ ಮಹತ್ವವನ್ನು ಒತ್ತಿ ಹೇಳಿದರು. ಇದರೊಂದಿಗೆ ಸಂಶೋಧನೆ ಮತ್ತು ಅಭಿವೃದ್ಧಿ (R&D), ಡಿಜಿಟಲ್ ಕೃಷಿ, ಕೊಯ್ಲಿನ ನಂತರದ ಮೂಲಸೌಕರ್ಯಗಳ ಅಭಿವೃದ್ಧಿ, ಹವಾಮಾನ ಬದಲಾವಣೆಯನ್ನು ತಡೆದುಕೊಳ್ಳುವ ಬೆಳೆಗಳ ಪ್ರೋತ್ಸಾಹ ಮತ್ತು ಸುಸ್ಥಿರ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯ ಮೇಲೆ ಹೆಚ್ಚಿನ ಗಮನ ಹರಿಸಬೇಕೆಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಪ್ರತಿನಿಧಿಗಳು ನೀಡಿದ ಅಮೂಲ್ಯವಾದ ಸಲಹೆಗಳು ಮತ್ತು ಒಳನೋಟಗಳಿಗಾಗಿ ಗೌರವಾನ್ವಿತ ಸಚಿವರು ಧನ್ಯವಾದಗಳನ್ನು ಅರ್ಪಿಸಿದರು. ಕೃಷಿ ವಲಯದಲ್ಲಿ ದೀರ್ಘಕಾಲೀನ ಯೋಜನೆ ಮತ್ತು ನೀತಿ ರೂಪಣೆಯನ್ನು ಬಲಪಡಿಸಲು ಹಾಗೂ ಈ ಹಂಚಿಕೆಯ ದೃಷ್ಟಿಕೋನವನ್ನು ಸಾಕಾರಗೊಳಿಸಲು ನಮ್ಮ ಸಹಯೋಗವನ್ನು ಮತ್ತಷ್ಟು ಗಟ್ಟಿಗೊಳಿಸಲು ಇವುಗಳು ಅತ್ಯಂತ ಸಹಕಾರಿಯಾಗಲಿವೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಈ ಸಭೆಯಲ್ಲಿ ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ (DA&FW) ಕಾರ್ಯದರ್ಶಿಗಳು, ಕೃಷಿ ಸಂಶೋಧನೆ ಮತ್ತು ಶಿಕ್ಷಣ ಇಲಾಖೆಯ (DARE) ಕಾರ್ಯದರ್ಶಿಗಳು, ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಗಳು ಹಾಗೂ ಇಲಾಖೆಯ ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

 

*****


(रिलीज़ आईडी: 2212741) आगंतुक पटल : 9
इस विज्ञप्ति को इन भाषाओं में पढ़ें: English , Urdu , हिन्दी , Gujarati , Odia , Tamil , Telugu