ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ಎಲ್ಲರನ್ನೂ ಒಳಗೊಂಡ ಮತ್ತು ಜವಾಬ್ದಾರಿಯುತ ಕೃತಕ ಬುದ್ಧಿಮತ್ತೆಗಾಗಿ ಭಾರತದ ದೃಷ್ಟಿಕೋನವನ್ನು ಮುನ್ನಡೆಸುವ ನಿಟ್ಟಿನಲ್ಲಿ 'ಪ್ರಾದೇಶಿಕ ಕೃತಕ ಬುದ್ಧಿಮತ್ತೆ ಪರಿಣಾಮ ಸಮ್ಮೇಳನ' ಆಯೋಜಿಸಿದ ರಾಜಸ್ಥಾನ


1 ದಶಲಕ್ಷ ಯುವಜನರಿಗೆ ಕೃತಕ ಬುದ್ಧಿಮತ್ತೆ ಕೌಶಲ್ಯಗಳಲ್ಲಿ ತರಬೇತಿ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು

प्रविष्टि तिथि: 07 JAN 2026 12:13PM by PIB Bengaluru

ಜನವರಿ 06, 2026 ಮಂಗಳವಾರದಂದು 'ರಾಜಸ್ಥಾನ ಪ್ರಾದೇಶಿಕ ಕೃತಕ ಬುದ್ಧಿಮತ್ತೆ ಪರಿಣಾಮ ಸಮ್ಮೇಳನ'ವು  ನಡೆಯಿತು.  ಆಡಳಿತ, ಮೂಲಸೌಕರ್ಯ, ನಾವೀನ್ಯತೆ ಮತ್ತು ನುರಿತ ಸಿಬ್ಬಂದಿಯ ಅಭಿವೃದ್ಧಿಯಲ್ಲಿ ಕೃತಕ ಬುದ್ಧಿಮತ್ತೆಯ ಕ್ರಾಂತಿಕಾರಿ ಪಾತ್ರದ ಬಗ್ಗೆ ಚರ್ಚಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು, ನೀತಿ ನಿರೂಪಕರು, ಉದ್ಯಮದ ನಾಯಕರು, ನವೋದ್ಯಮಗಳು ಮತ್ತು ಶೈಕ್ಷಣಿಕ ಸಂಸ್ಥೆಗಳನ್ನು ಈ ಕಾರ್ಯಕ್ರಮವು ಒಟ್ಟುಗೂಡಿಸಿತು. ಈ ಸಮ್ಮೇಳನವು 2026ರ ಫೆಬ್ರವರಿ 15 ರಿಂದ 20 ರವರೆಗೆ ನಡೆಯಲಿರುವ 'ಇಂಡಿಯಾ ಎಐ ಪರಿಣಾಮ ಶೃಂಗಸಭೆ'ಗೆ ಪೂರ್ವಭಾವಿಯಾಗಿ ಕಾರ್ಯಕ್ರಮವಾಗಿದೆ.

ಸಮ್ಮೇಳನದಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ, ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು (ವರ್ಚುವಲ್ ಆಗಿ ಭಾಗವಹಿಸಿದ್ದರು), ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಸಚಿವರಾದ (ಎಂಒಎಸ್) ಜಿತಿನ್ ಪ್ರಸಾದ್ ಹಾಗೂ ರಾಜಸ್ಥಾನ ಸರ್ಕಾರದ ಐಟಿ ಮತ್ತು ಸಂಪರ್ಕ ಖಾತೆ ಸಂಪುಟ ಸಚಿವರಾದ ಕರ್ನಲ್ ರಾಜ್ಯವರ್ಧನ್ ರಾಥೋಡ್, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂಇಐಟಿವೈ) ಹಾಗೂ ರಾಜಸ್ಥಾನ ಸರ್ಕಾರದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಈ ಗಣ್ಯರ  ಭಾಗವಹಿಸುವಿಕೆಯು, ರಾಜಸ್ಥಾನವನ್ನು ಭಾರತದ ಕೃತಕ ಬುದ್ಧಿಮತ್ತೆ ಆಧರಿತ ಬೆಳವಣಿಗೆಯ ಪ್ರಯಾಣಕ್ಕೆ ಪ್ರಮುಖ ಕೊಡುಗೆದಾರನನ್ನಾಗಿ ಮಾಡುವಲ್ಲಿ ಬಲವಾದ ಕೇಂದ್ರ-ರಾಜ್ಯ ಸಹಯೋಗವನ್ನು ಉಲ್ಲೇಖಿಸುತ್ತದೆ.

ಸಭಿಕರನ್ನುದ್ದೇಶಿಸಿ ಮಾತನಾಡಿದ ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು "ಕೈಗಾರಿಕಾ ಕ್ರಾಂತಿ, ವಿದ್ಯುತ್, ಕಂಪ್ಯೂಟರ್‌ಗಳು, ಸೆಮಿಕಂಡಕ್ಟರ್‌ಗಳು, ಅಂತರ್ಜಾಲ ಮತ್ತು ಮೊಬೈಲ್ ತಂತ್ರಜ್ಞಾನವು ಉಂಟು ಮಾಡಿದಂಥದ್ದೇ ಪರಿವರ್ತನೆಯು ಈಗ ಕೃತಕ ಬುದ್ಧಿಮತ್ತೆಯ ಮೂಲಕ ಅದೇ ಪ್ರಮಾಣದಲ್ಲಿ ಸಂಭವಿಸಲಿದೆ.  ಕೃತಕ ಬುದ್ಧಿಮತ್ತೆಯ ಪ್ರಯೋಜನವು ಆಯ್ದ ಕೆಲವರಿಗಷ್ಟೇ ಸೀಮಿತವಾಗುವ ಬದಲು ಪ್ರತಿ ವ್ಯಕ್ತಿ, ಪ್ರತಿ ಮನೆ ಮತ್ತು ಪ್ರತಿ ಉದ್ಯಮವನ್ನು ತಲುಪುವಂತೆ ತಂತ್ರಜ್ಞಾನವನ್ನು ಪ್ರಜಾಸತ್ತಾತ್ಮಕಗೊಳಿಸುವ ಸ್ಪಷ್ಟ ಧ್ಯೇಯವನ್ನು ಪ್ರಧಾನ ಮಂತ್ರಿಯವರು ಹೊಂದಿದ್ದಾರೆ. ಈ ಧ್ಯೇಯಕ್ಕೆ ಅನುಗುಣವಾಗಿ, ಒಂದು ದಶಲಕ್ಷ ಯುವಕರಿಗೆ ಕೃತಕ ಬುದ್ಧಿಮತ್ತೆ ಕೌಶಲ್ಯಗಳಲ್ಲಿ ತರಬೇತಿ ನೀಡಲು ಇಂದು ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಇದು ಭಾರತದ ಯುವಕರು ಈ ಹೊಸ ತಾಂತ್ರಿಕ ಯುಗಕ್ಕೆ ಸಂಪೂರ್ಣವಾಗಿ ಸನ್ನದ್ಧರಾಗುವುದನ್ನು ಖಚಿತಪಡಿಸುತ್ತದೆ,’’ ಎಂದು ಹೇಳಿದರು.

"ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ಸಹಾಯಕ ಸಚಿವರಾದ (ಎಂಒಎಸ್) ಶ್ರೀ ಜಿತಿನ್ ಪ್ರಸಾದ್ ಅವರು ಮಾತನಾಡಿ, "ತಂತ್ರಜ್ಞಾನವನ್ನು ಎಲ್ಲರಿಗೂ ತಲುಪುವಂತೆ ಮಾಡಬೇಕೆಂದು ಎಂದು ಪ್ರಧಾನಿ ನರೇಂದ್ರ ಮೋದಿ ದೃಢವಾಗಿ ನಂಬಿದ್ದಾರೆ. ಈ ದೃಷ್ಟಿಕೋನದಿಂದ ಪ್ರೇರಿತವಾಗಿರುವ ಸರ್ಕಾರವು ಕೃಷಿ, ಆರೋಗ್ಯ ರಕ್ಷಣೆ, ಶಿಕ್ಷಣ ಮತ್ತು ಪರಿಸರದಂತಹ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳಲು 'ಇಂಡಿಯಾ ಎಐ ಮಿಷನ್' ಅಡಿಯಲ್ಲಿ 10,000 ಕೋಟಿ ರೂ.ಗಳ ಹೂಡಿಕೆಗೆ ಬದ್ಧವಾಗಿದೆ. ಕೃತಕ ಬುದ್ಧಿಮತ್ತೆಯ ಜವಾಬ್ದಾರಿಯುತ ಬಳಕೆ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆ  ಮೂಲಕ ನಾಗರಿಕರ ಆದಾಯವನ್ನು ಹೆಚ್ಚಿಸುವುದು, ಜೀವನ ಸೌಕರ್ಯವನ್ನು ಸುಧಾರಿಸುವುದು ಜೊತೆಗೆ ದೇಶದ ಒಟ್ಟಾರೆ ಉತ್ಪಾದಕತೆಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ,’’ ಎಂದು ಹೇಳಿದರು.

ರಾಜಸ್ಥಾನದ ಮುಖ್ಯಮಂತ್ರಿ ಶ್ರೀ ಭಜನ್ ಲಾಲ್ ಶರ್ಮಾ ಅವರು ಮಾತನಾಡಿ, "ಇಂದು, ರಾಜಸ್ಥಾನವು ಇ-ಆಡಳಿತ ಮತ್ತು ಎಲ್ಲರನ್ನೂ ಒಳಗೊಳ್ಳುವಿಕೆಯನ್ನು ಮೀರಿ ಸಾಗುತ್ತಿದೆ. ಕೃತಕ ಬುದ್ಧಿಮತ್ತೆ ಮತ್ತು 'ಯಂತ್ರ ಕಲಿಕೆ'ಯಲ್ಲಿ (ಮಷಿನ್‌ ಲರ್ನಿಂಗ್-ಎಂಎಲ್‌) ನಾಯಕನಾಗುವತ್ತ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಕೃತಕ ಬುದ್ಧಿಮತ್ತೆಯು ನಮ್ಮ ದೇಶದ ಪ್ರಯಾಣದ ಮುಂದಿನ ಪ್ರಮುಖ ಹಂತವನ್ನು ಪ್ರತಿನಿಧಿಸುತ್ತದೆ. ಈ ನಿಟ್ಟಿನಲ್ಲಿ ಮತ್ತಷ್ಟು ಮುಂದುವರೆಯುತ್ತಾ, ನಾವು 'ಕೃತಕ ಬುದ್ಧಿಮತ್ತೆ ಮತ್ತು ಎಂಎಲ್' ನೀತಿಯನ್ನು ಪರಿಚಯಿಸಿದ್ದೇವೆ. ಈ ನೀತಿಯು ಕೃತಕ ಬುದ್ಧಿಮತ್ತೆ ವ್ಯವಸ್ಥೆಗಳು ಹೆಚ್ಚು ಪಾರದರ್ಶಕ, ನ್ಯಾಯಸಮ್ಮತ ಮತ್ತು ಸಮಗ್ರತೆಯ ತತ್ವಗಳಿಗೆ ಉತ್ತರದಾಯಿಯಾಗುವುದನ್ನು ಖಚಿತಪಡಿಸುತ್ತದೆ. ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯನ್ನು ಬಳಸಿಕೊಳ್ಳುವ ಮೂಲಕ, ಸಾರ್ವಜನಿಕ ಸೇವಾ ವಿತರಣೆಯನ್ನು ವೇಗವಾಗಿ, ಹೆಚ್ಚು ಪಾರದರ್ಶಕವಾಗಿ ಮತ್ತು ಹೆಚ್ಚು ನಾಗರಿಕ-ಕೇಂದ್ರಿತವಾಗಿಸಬಹುದು. ಇದು ಆಡಳಿತಾತ್ಮಕ ದಕ್ಷತೆಯನ್ನು ಹೆಚ್ಚಿಸುತ್ತದೆ ಜೊತೆಗೆ ನಾವೀನ್ಯತೆ-ಚಾಲಿತ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ," ಎಂದು ಹೇಳಿದರು.

ಕೃತಕ ಬುದ್ಧಿಮತ್ತೆ ಆಧಾರಿತ ನಾವೀನ್ಯತೆ ಮತ್ತು ಆಡಳಿತದ ಪ್ರಮುಖ ಕೇಂದ್ರವಾಗಿ ರಾಜಸ್ಥಾನದ ಪಾತ್ರವನ್ನು ಬಲಪಡಿಸುವಂತಹ ಹಲವಾರು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಕೃತಕ ಬುದ್ಧಿಮತ್ತೆ ಉಪಕ್ರಮಗಳ ಘೋಷಣೆ ಹಾಗೂ ಪ್ರಾರಂಭವು ಸಮ್ಮೇಳನದ ಪ್ರಮುಖ ಅಂಶವಾಗಿತ್ತು. ಈ ಕಾರ್ಯಕ್ರಮಗಳು ಮತ್ತು ಉಪಕ್ರಮಗಳು ಈ ಕೆಳಗಿನಂತಿವೆ:

  • ಎಲ್ಲರಿಗೂ 'ಯುವ ಕೃತಕ ಬುದ್ಧಿಮತ್ತೆ'(ಯುವ ಎಐ): ಭಾರತ ಸರ್ಕಾರವು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ 'ಇಂಡಿಯಾ ಎಐ ಮಿಷನ್' ನೇತೃತ್ವದಲ್ಲಿ 'ರಾಷ್ಟ್ರೀಯ ಕೃತಕ ಬುದ್ಧಿಮತ್ತೆ ಸಾಕ್ಷರತಾ ಕಾರ್ಯಕ್ರಮ' ಎಂಬ ಮಹತ್ವಾಕಾಂಕ್ಷೆಯ ಅಭಿಯಾನವನ್ನು ಕೈಗೊಂಡಿದೆ. ರಾಷ್ಟ್ರವ್ಯಾಪಿ ವಿದ್ಯಾರ್ಥಿಗಳು ಮತ್ತು ಯುವಕರಲ್ಲಿ ಅಡಿಪಾಯದ ಕೃತಕ ಬುದ್ಧಿಮತ್ತೆ ಜಾಗೃತಿಯನ್ನು ನಿರ್ಮಿಸುವುದು ಇದರ ಗುರಿಯಾಗಿದೆ. 'ರಾಷ್ಟ್ರೀಯ ಯುವ ದಿನ'ದ(ಜನವರಿ 12) ಹಿಂದೆ-ಮುಂದೆ ಹೊಂದಿಸಲಾದ ಈ ಅಭಿಯಾನವು ಲಕ್ಷಾಂತ ವಿದ್ಯಾರ್ಥಿಗಳನ್ನು ಅಲ್ಪಾವಧಿಯ ಮತ್ತು ಯಾವುದೇ ಕಲಿಕಾ ವೇಗದಲ್ಲಿ ಕಲಿಯಲು ಅವಕಾಶವಿರುವ 'ಫೌಂಡೇಷನಲ್ ಎಐ'(ಎಐ101) ಕೋರ್ಸ್  ಪೂರ್ಣಗೊಳಿಸಲು ಸಜ್ಜುಗೊಳಿಸುತ್ತದೆ. ಇದು 'ವಿಕಸಿತ ಭಾರತ' ಮತ್ತು ಎಲ್ಲರನ್ನೂ ಒಳಗೊಂಡ, ಪ್ರಜಾಸತ್ತಾತ್ಮಕ ಎಐ ಅಳವಡಿಕೆಯ ದೃಷ್ಟಿಕೋನಕ್ಕೆ ಹೊಂದಿಕೆಯಾಗುವ ಸಾಮೂಹಿಕ 'ಎಐ' ಕಲಿಕೆಯ ರಾಷ್ಟ್ರವ್ಯಾಪಿ ಅಭಿಯಾನವನ್ನು ರೂಪಿಸುತ್ತದೆ.
  • 'ರಾಜಸ್ಥಾನ ಕೃತಕ ಬುದ್ಧಿಮತ್ತೆ / ಎಂಎಲ್ ನೀತಿ-2026’ಗೆ ಚಾಲನೆ:  ಇದು ಆಡಳಿತವನ್ನು ಬಲಪಡಿಸುವ, ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸುವ, ಸಂಶೋಧನೆ ಮತ್ತು ನಾವೀನ್ಯತೆಯನ್ನು ಉತ್ತೇಜಿಸುವ ಹಾಗೂ ಹೆಚ್ಚಿನ ಮೌಲ್ಯದ ಉದ್ಯೋಗವನ್ನು ಸೃಷ್ಟಸುವ ಗುರಿಯನ್ನು ಹೊಂದಿದೆ. ಈ ನೀತಿಯ ಜೊತೆಗೆ ರಾಜಸ್ಥಾನದ ಕೃತಕ ಬುದ್ಧಿಮತ್ತೆ ಪೋರ್ಟಲ್.
  • 'ಐಸ್ಟಾರ್ಟ್ ಲರ್ನಿಂಗ್ ಮ್ಯಾನೇಜ್ಮೆಂಟ್ ಸಿಸ್ಟಮ್'ಗೆ (ಎಲ್ಎಂಎಸ್)  ಚಾಲನೆ ನೀಡಲಾಗಿದೆ. ಇದು ರಾಜ್ಯದಾದ್ಯಂತ ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ನಾವೀನ್ಯತೆಯನ್ನು ಬೆಂಬಲಿಸುವ ಉದ್ದೇಶವನ್ನು ಹೊಂದಿದೆ.
  • 'ರಾಜಸ್ಥಾನ ಎವಿಜಿಸಿ-ಎಕ್ಸ್ಆರ್ ಪೋರ್ಟಲ್'ಗೆ ಚಾಲನೆಇದು ರಾಜ್ಯದಲ್ಲಿ ಅನಿಮೇಷನ್, ವಿಎಫ್ಎಕ್ಸ್, ಗೇಮಿಂಗ್, ಕಾಮಿಕ್ಸ್ ಮತ್ತು ಎಕ್ಸ್ಟೆಂಡೆಡ್ ರಿಯಾಲಿಟಿ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಭಾರತ ಮತ್ತು ರಾಜಸ್ಥಾನದ ಕೃತಕ ಬುದ್ಧಿಮತ್ತೆ ದೃಷ್ಟಿಕೋನವನ್ನು ಪ್ರದರ್ಶಿಸುವ ಕೃತಕ ಬುದ್ಧಿಮತ್ತೆ ಕಂಟೆಂಟ್‌ ಹೊಂದಿರುವ ವೀಡಿಯೊವನ್ನು ಸಹ ಅನಾವರಣಗೊಳಿಸಲಾಯಿತು.
  • ಹಲವು ಒಪ್ಪಂದಗಳಿಗೆ ಸಹಿ: ಸಾಂಸ್ಥಿಕ ಸಹಯೋಗವನ್ನು ಬಲಪಡಿಸುವ ಭಾಗವಾಗಿ 'ಎಐ' ಸಂಶೋಧನೆ, ಕೌಶಲ್ಯ, ನೈತಿಕ ಚೌಕಟ್ಟುಗಳು ಮತ್ತು ನಾವೀನ್ಯತೆ ಪರಿಸರ ವ್ಯವಸ್ಥೆಗಳನ್ನು ಮುನ್ನಡೆಸಲು ಗೂಗಲ್, ಐಐಟಿ ದೆಹಲಿ, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ, ಜೋಧ್‌ಪುರ ಮತ್ತು 'ಕೌಶಲ್ಯ ಅಭಿವೃದ್ಧಿ ಜಾಲ'ದ(ವಾಧ್ವಾನಿ ಫೌಂಡೇಶನ್) ಜೊತೆ ಒಪ್ಪಂದಗಳಿಗೆ ಕಾರ್ಯಕ್ರಮವು ಸಾಕ್ಷಿಯಾಯಿತು.

ಉನ್ನತ ಮಟ್ಟದ ಕಾರ್ಯತಂತ್ರದ ಅಧಿವೇಶನದಲ್ಲಿ 'ಎಂಇಐಟಿವೈ' ಹೆಚ್ಚುವರಿ ಕಾರ್ಯದರ್ಶಿ, 'ಇಂಡಿಯಾ ಎಐ ಮಿಷನ್'ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ 'ಎನ್ಐಸಿ' ಮಹಾನಿರ್ದೇಶಕ ಶ್ರೀ ಅಭಿಷೇಕ್ ಸಿಂಗ್ ಅವರನ್ನು 'ಎನ್‌ವಿಡಿಯಾ'ದ ದಕ್ಷಿಣ ಏಷ್ಯಾದ ವ್ಯವಸ್ಥಾಪಕ ನಿರ್ದೇಶಕ ಶ್ರೀ ವಿಶಾಲ್ ಧೂಪರ್ ಅವರೊಂದಿಗೆ ಸಂಭಾಷಣೆಯಲ್ಲಿ ಒಟ್ಟುಗೂಡಿಸಿತು. 'ಪ್ರೈಮಸ್ ಪಾರ್ಟ್‌ನರ್ಸ್‌'ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ಸಮೀರ್ ಜೈನ್ ಅವರು ಅಧಿವೇಶನವನ್ನು ನಡೆಸಿಕೊಟ್ಟರು. ಜವಾಬ್ದಾರಿಯುತ ಮತ್ತು ವಿಶ್ವಾಸಾರ್ಹ ಕೃತಕ ಬುದ್ಧಿಮತ್ತೆಗಾಗಿ ಸಾರ್ವಜನಿಕ ವಲಯದ ವ್ಯವಸ್ಥೆಯನ್ನು ನಿರ್ಮಿಸುವುದರ ಜೊತೆಗೆ ಎಐ ಮೂಲಸೌಕರ್ಯವನ್ನು ಎಲ್ಲರಿಗೂ ತಲುಪುವಂತೆ ಮಾಡಲು, ಸಾರ್ವಜನಿಕ-ಖಾಸಗಿ ಸಹಯೋಗವನ್ನು ಬಲಪಡಿಸಲು, ದೊಡ್ಡ ಪ್ರಮಾಣದಲ್ಲಿ ನಾವೀನ್ಯತೆಯನ್ನು ಸಕ್ರಿಯಗೊಳಿಸಲು ಹಾಗೂ ಜಾಗತಿಕ ಎಐ ಸರುಕ್ಷತೆ ನೀತಿಯ ರಚನೆಯನ್ನು ಮುನ್ನಡೆಸುವ ಭಾರತದ ಕಾರ್ಯತಂತ್ರದ ಬಗ್ಗೆ ಚರ್ಚಿಸಲಾಯಿತು.

'ಎಂಇಐಟಿವೈ'ನ ತಂಡ ಸಂಚಾಲಕರು, ವಿಜ್ಞಾನಿ(ಜಿ) ಹಾಗೂ 'ಇಂಡಿಯಾ ಎಐ ಮಿಷನ್'ನ ಮುಖ್ಯ ಕಾರ್ಯಕಾರಿ ಅಧಿಕಾರಿ  ಶ್ರೀಮತಿ ಕವಿತಾ ಭಾಟಿಯಾ ಅವರು 'ಇಂಡಿಯಾ ಎಐ ಮಿಷನ್' ಅವಲೋಕನವನ್ನು ಪ್ರಸ್ತುತಪಡಿಸಿದರು. ಇದೇ ವೇಳೆ, 'ಇಂಡಿಯಾ ಎಐ ಪರಿಣಾಮ ಶೃಂಗಸಭೆ-2026’ರ ದೃಷ್ಟಿಕೋನ ಮತ್ತು ಆದ್ಯತೆಗಳನ್ನು ವಿವರಿಸಿದರು.

"ಜಾಗತಿಕ ಕೃತಕ ಬುದ್ಧಿಮತ್ತೆ, ರಾಷ್ಟ್ರೀಯ ಕೃತಕ ಬುದ್ಧಿಮತ್ತೆ ಮತ್ತು ಪ್ರಾದೇಶಿಕ ಕೃತಕ ಬುದ್ಧಿಮತ್ತೆ ಕುರಿತ ದೃಷ್ಟಿಕೋನ" ಎಂಬ ಅಧಿವೇಶನವನ್ನೂ ಸಮ್ಮೇಳನವು ಒಳಗೊಂಡಿತ್ತು. ಐಐಟಿ-ಜೋಧ್‌ಪುರದ ಪ್ರಾಧ್ಯಾಪಕ ಶ್ರೀ ಅವಿನಾಶ್ ಶರ್ಮಾ ಅವರ ಭಾಷಣವನ್ನು ಒಳಗೊಂಡ  ಈ ಅಧಿವೇಶನವು ಜಾಗತಿಕವಾಗಿ ಪ್ರಸ್ತುತವಾದ, ಸಂದರ್ಭ-ಅರಿವಿನ ಕೃತಕ ಬುದ್ಧಿಮತ್ತೆ ಪರಿಹಾರಗಳನ್ನು ರೂಪಿಸುವಲ್ಲಿ ಪ್ರಾದೇಶಿಕ ಸಂಶೋಧನಾ ಸಂಸ್ಥೆಗಳು ಹೇಗೆ ನಿರ್ಣಾಯಕ ಪಾತ್ರ ವಹಿಸಬಹುದು ಎಂಬುದನ್ನು ಉಲ್ಲೇಖಿಸಿತು.

ಇದೇವೇಳೆ ನಡೆದ ಇತರೆ ವಿಷಯಾಧಾರಿತ ಅಧಿವೇಶನಗಳಲ್ಲಿ ಆಡಳಿತ, ಮೂಲಸೌಕರ್ಯ, ನಾವೀನ್ಯತೆ, ನೈತಿಕತೆ ಮತ್ತು ಉದ್ಯೋಗ ಕ್ಷೇತ್ರಗಳಾದ್ಯಂತ ಕೃತಕ ಬುದ್ಧಿಮತ್ತೆಯ ನೈಜ-ಪ್ರಪಂಚದ ಅನ್ವಯಿಕೆಗಳ ಬಗ್ಗೆ ಚರ್ಚಿಸಲಾಯಿತು.

'ರಾಜಸ್ಥಾನ ಪ್ರಾದೇಶಿಕ ಎಐ ಪರಿಣಾಮ ಸಮ್ಮೇಳನ'ವು 'ಇಂಡಿಯಾ ಎಐ ಪರಿಣಾಮ ಶೃಂಗಸಭೆ-2026’ರ ಪೂರ್ವಭಾವಿಯಾಗಿ ಮಹತ್ವದ ಪ್ರಾದೇಶಿಕ ಮೈಲುಗಲ್ಲಾಗಿ ಕಾರ್ಯನಿರ್ವಹಿಸಿತು. ಸಾರ್ವಜನಿಕ ಒಳಿತು, ಎಲ್ಲರನ್ನೂ ಒಳಗೊಂಡ ಬೆಳವಣಿಗೆ ಮತ್ತು ಎಲ್ಲಾ ಪ್ರದೇಶಗಳಲ್ಲೂ ಸುಸ್ಥಿರ ಅಭಿವೃದ್ಧಿಗಾಗಿ  ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಳ್ಳುವ ಭಾರತದ ಬದ್ಧತೆಯನ್ನು ಈ ಸಮಾವೇಶವು ಬಲಪಡಿಸಿತು.

 

*****


(रिलीज़ आईडी: 2212063) आगंतुक पटल : 20
इस विज्ञप्ति को इन भाषाओं में पढ़ें: Tamil , English , Urdu , हिन्दी , Gujarati , Telugu