ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಭಾರತದ ಗುಣಮಟ್ಟದ ಚಿತ್ರಣವನ್ನು ಬಿಐಎಸ್ (BIS) ಪರಿವರ್ತಿಸುತ್ತಿರುವಂತೆ, ನಿಯಂತ್ರಣದಿಂದ ಸೌಲಭ್ಯ ಒದಗಿಸುವಿಕೆಯತ್ತ ಸಂಸ್ಥೆಯು ಬದಲಾಗಿರುವುದನ್ನು ಉಲ್ಲೇಖಿಸಿದ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ 


ಪ್ರಮುಖ ಉಪಕ್ರಮಗಳ ಚಾಲನೆ ಮತ್ತು ಬಿಡುಗಡೆಯೊಂದಿಗೆ ಭಾರತೀಯ ಮಾನದಂಡಗಳ ಬ್ಯೂರೋ (ಬಿಐಎಸ್) ಸಂಸ್ಥಾಪನಾ ದಿನಾಚರಣೆಯ ಆಚರಣೆ

प्रविष्टि तिथि: 06 JAN 2026 7:18PM by PIB Bengaluru

79ನೇ ಬಿಐಎಸ್ (BIS) ಸಂಸ್ಥಾಪನಾ ದಿನಾಚರಣೆಯನ್ನು ಇಂದು ನವದೆಹಲಿಯಲ್ಲಿ ಪ್ರಮುಖ ಉಪಕ್ರಮಗಳ ಚಾಲನೆ ಮತ್ತು ಬಿಡುಗಡೆಯೊಂದಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗೌರವಾನ್ವಿತ ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಹಾಗೂ ನವೀಕರಿಸಬಹುದಾದ ಇಂಧನ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಮತ್ತು ಗ್ರಾಹಕ ವ್ಯವಹಾರಗಳು ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ಗೌರವಾನ್ವಿತ ರಾಜ್ಯ ಸಚಿವರಾದ ಶ್ರೀ ಬಿ. ಎಲ್. ವರ್ಮಾ ಅವರು ಉಪಸ್ಥಿತರಿದ್ದರು.

ಗ್ರಾಹಕ ವ್ಯವಹಾರಗಳ ಸಚಿವಾಲಯ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಗ್ರಾಹಕ ವ್ಯವಹಾರಗಳ ಇಲಾಖೆಯ ಅಡಿಯಲ್ಲಿರುವ ಭಾರತದ ರಾಷ್ಟ್ರೀಯ ಮಾನದಂಡಗಳ ಸಂಸ್ಥೆಯಾದ ಭಾರತೀಯ ಮಾನದಂಡಗಳ ಬ್ಯೂರೋ (BIS), ನಾವೀನ್ಯತೆ, ಡಿಜಿಟಲ್ ರೂಪಾಂತರ ಮತ್ತು ಸರ್ವವ್ಯಾಪಿ ತಲುಪುವಿಕೆಯ ಮೂಲಕ ದೇಶದ ಗುಣಮಟ್ಟ ಮತ್ತು ಮಾನದಂಡಗಳ ಪರಿಸರ ವ್ಯವಸ್ಥೆಯನ್ನು ಬಲಪಡಿಸುವುದನ್ನು ಮುಂದುವರಿಸಿದೆ. 23,300 ಕ್ಕೂ ಹೆಚ್ಚು ಭಾರತೀಯ ಮಾನದಂಡಗಳು ಜಾರಿಯಲ್ಲಿದ್ದು, ವಿವಿಧ ವಲಯಗಳಾದ್ಯಂತ ಉತ್ಪನ್ನಗಳು ಮತ್ತು ಸೇವೆಗಳ ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಖಚಿತಪಡಿಸುವಲ್ಲಿ BIS ಪ್ರಮುಖ ಪಾತ್ರ ವಹಿಸುತ್ತದೆ.

ಬಿಐಎಸ್‌ ನ ರೂಪಾಂತರ ಮತ್ತು ಜಾಗತಿಕ ಪಾತ್ರವನ್ನು ಉಲ್ಲೇಖಿಸಿದ ಕೇಂದ್ರ ಸಚಿವರು

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀ ಪ್ರಲ್ಹಾದ್ ಜೋಶಿ ಅವರು, ಬಿಐಎಸ್ (BIS) ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಗೀಕರಿಸಲ್ಪಟ್ಟ ಉತ್ತಮ ಪದ್ಧತಿಗಳನ್ನು ರೂಪಿಸುವ ಮತ್ತು ಅಳವಡಿಸಿಕೊಳ್ಳುವ ಮೂಲಕ ಪ್ರಮಾಣೀಕರಣದ ಕ್ಷೇತ್ರದಲ್ಲಿ ನಿರಂತರವಾಗಿ ವಿಕಸನಗೊಳ್ಳುತ್ತಿದೆ ಎಂದು ತಿಳಿಸಿದರು. ಭಾರತೀಯ ಮಾನದಂಡಗಳು ಇಂದು ಕೇವಲ ಸಾಂಪ್ರದಾಯಿಕ ವಲಯಗಳಿಗೆ ಸೀಮಿತವಾಗಿರದೆ ನವೀಕರಿಸಬಹುದಾದ ಇಂಧನ, ಎಲೆಕ್ಟ್ರಿಕ್ ಮೊಬಿಲಿಟಿ, ಸ್ಮಾರ್ಟ್ ಮೂಲಸೌಕರ್ಯ, ಡಿಜಿಟಲ್ ತಂತ್ರಜ್ಞಾನಗಳು, ಸುಸ್ಥಿರತೆ, ಪರಿಸರ ಸ್ನೇಹಿ (ಗ್ರೀನ್) ಉತ್ಪನ್ನಗಳ ಜೊತೆಗೆ ಬಾಂಬ್ ನಿಷ್ಕ್ರಿಯ ವ್ಯವಸ್ಥೆಗಳು ಮತ್ತು ಎಲೆಕ್ಟ್ರಿಕ್ ಕೃಷಿ ಟ್ರಾಕ್ಟರ್‌ ಗಳಂತಹ ಉದಯೋನ್ಮುಖ ಕ್ಷೇತ್ರಗಳನ್ನೂ ಒಳಗೊಂಡಿವೆ ಎಂದು ಅವರು ಗಮನಿಸಿದರು.

ಕಳೆದ ದಶಕದಲ್ಲಿ, ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಬಿಐಎಸ್ ನಿಯಂತ್ರಣದಿಂದ ಸೌಕರ್ಯ ಒದಗಿಸುವಿಕೆಯತ್ತ ಮತ್ತು ಕೇವಲ ನಿಯಮಗಳ ಅನುಸರಣೆಯಿಂದ ಗುಣಮಟ್ಟದ ಸಂಸ್ಕೃತಿಯತ್ತ ಮೂಲಭೂತ ರೂಪಾಂತರವನ್ನು ಕಂಡಿದೆ ಎಂದು ಕೇಂದ್ರ ಸಚಿವರು ಒತ್ತಿ ಹೇಳಿದರು. ಸರ್ಕಾರದ 'ವ್ಯವಹಾರದ ಸುಲಭೀಕರಣ' (Ease of Doing Business) ಗುರಿಗೆ ಅನುಗುಣವಾಗಿ, ಬಿಐಎಸ್ ಅನುಸರಣಾ ಪ್ರಕ್ರಿಯೆಗಳನ್ನು ಸರಳಗೊಳಿಸಿದೆ, MSME ಮತ್ತು ಪ್ರಯೋಗಾಲಯಗಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಿದೆ, ದೊಡ್ಡ ಕೈಗಾರಿಕೆಗಳಿಗೆ ಆಂತರಿಕ ಪ್ರಯೋಗಾಲಯದ ಅಗತ್ಯತೆಗಳನ್ನು ಐಚ್ಛಿಕಗೊಳಿಸಿದೆ ಮತ್ತು ಗ್ರಾಹಕರಿಗೆ ಗುಣಮಟ್ಟದ ಸರಕುಗಳು ಸಿಗುವಂತೆ ಖಚಿತಪಡಿಸಿಕೊಳ್ಳಲು ಮಾರುಕಟ್ಟೆ ಕಣ್ಗಾವಲನ್ನು ಬಲಪಡಿಸಿದೆ.

MSME ಗಳನ್ನು ಬೆಂಬಲಿಸಲು, ಬಿಐಎಸ್ (BIS) ವಾರ್ಷಿಕ ಕನಿಷ್ಠ ಮಾರ್ಕಿಂಗ್ ಶುಲ್ಕದಲ್ಲಿ ರಿಯಾಯಿತಿಗಳನ್ನು ನೀಡುತ್ತಿದೆ - ಅತಿಸಣ್ಣ ಉದ್ಯಮಗಳಿಗೆ ಶೇ. 80, ಸಣ್ಣ ಉದ್ಯಮಗಳಿಗೆ ಶೇ. 50 ಮತ್ತು ಮಧ್ಯಮ ಉದ್ಯಮಗಳಿಗೆ ಶೇ. 20 ರಷ್ಟು ರಿಯಾಯಿತಿ ಒದಗಿಸಲಾಗಿದೆ. ಗುಣಮಟ್ಟ ನಿಯಂತ್ರಣ ಸಿಬ್ಬಂದಿಯ ಸಾಮರ್ಥ್ಯ ವೃದ್ಧಿಗಾಗಿ ಇ-ಲರ್ನಿಂಗ್ ಮಾಡ್ಯೂಲ್‌ ಗಳ ಪ್ರಾರಂಭವನ್ನು ಸಚಿವರು ಇದೇ ವೇಳೆ ಎತ್ತಿ ತೋರಿಸಿದರು. ಹಾಲ್‌ಮಾರ್ಕಿಂಗ್ ಸುಧಾರಣೆಗಳ ಬಗ್ಗೆ ಪ್ರಸ್ತಾಪಿಸಿದ ಶ್ರೀ ಜೋಶಿ ಅವರು, 2025 ರ ಸೆಪ್ಟೆಂಬರ್ 1 ರಂದು ಪ್ರಾರಂಭಿಸಲಾದ 'ಸಿಲ್ವರ್ ಹೆಚ್‌ ಯು ಐ ಡಿ (HUID) ಹಾಲ್‌ ಮಾರ್ಕಿಂಗ್ ಯೋಜನೆ'ಯು ಗ್ರಾಹಕ ರಕ್ಷಣೆ ಮತ್ತು ಪಾರದರ್ಶಕತೆಯ ನಿಟ್ಟಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ತಿಳಿಸಿದರು. ಹೊಸ ವ್ಯವಸ್ಥೆಯಡಿ ಈಗಾಗಲೇ 21 ಲಕ್ಷಕ್ಕೂ ಹೆಚ್ಚು ಬೆಳ್ಳಿಯ ವಸ್ತುಗಳಿಗೆ ಹಾಲ್‌ ಮಾರ್ಕ್ ಮಾಡಲಾಗಿದೆ. ಬೆಳ್ಳಿ ಹಾಲ್‌ ಮಾರ್ಕಿಂಗ್ ಸ್ವಯಂಪ್ರೇರಿತವಾಗಿದ್ದರೂ, ಹೆಚ್‌.ಯು.ಐ.ಡಿ ಆಧಾರಿತ ಮಾರ್ಕಿಂಗ್ ಅನ್ನು 2025ರ ಸೆಪ್ಟೆಂಬರ್ 1 ರಿಂದ ಕಡ್ಡಾಯಗೊಳಿಸಲಾಗಿದೆ.

ಬಿಐಎಸ್ ಪ್ರಮಾಣೀಕರಣ ಪೋರ್ಟಲ್‌ ನ ಬೀಟಾ (Beta) ಆವೃತ್ತಿಯ ಬಿಡುಗಡೆ, ಮಹಿಳಾ ಸಬಲೀಕರಣಕ್ಕಾಗಿ 'ಮಾನಕ್ ಸೆ ಮಹಿಳಾ ಶಕ್ತಿ' ಅಭಿಯಾನ ಮತ್ತು ವಾರ್ಷಿಕ ಶ್ರೇಷ್ಠತಾ ಮಾನ್ಯತಾ ಯೋಜನೆಯಾದ 'ಬಿಐಎಸ್-ಸಕ್ಷಮ್' (BIS-SAKSHAM) ಬಿಡುಗಡೆಯ ಮಹತ್ವವನ್ನು ಕೇಂದ್ರ ಸಚಿವರು ಒತ್ತಿ ಹೇಳಿದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಐಎಸ್‌ನ ನಾಯಕತ್ವವನ್ನು ಅವರು ಉಲ್ಲೇಖಿಸಿದರು, ಇದರಲ್ಲಿ ಗ್ರಾಹಕರ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದ ಅಂತರರಾಷ್ಟ್ರೀಯ ಎಲೆಕ್ಟ್ರೋಟೆಕ್ನಿಕಲ್ ಕಮಿಷನ್ (IEC) ಸಾಮಾನ್ಯ ಸಭೆಯ ಇತ್ತೀಚಿನ ಆಯೋಜನೆಯೂ ಸೇರಿದೆ.

ಮುಂದಿನ ಹಾದಿಯ ಬಗ್ಗೆ ವಿವರಿಸುತ್ತಾ, ಬಿಐಎಸ್ ಪ್ರಯೋಗಾಲಯಗಳ ನಿರಂತರ ಮೇಲ್ದರ್ಜೆಗೇರಿಸುವಿಕೆ, ರಾಷ್ಟ್ರೀಯ ಆದ್ಯತೆಯ ಕ್ಷೇತ್ರಗಳಿಗೆ ವೇಗವಾಗಿ ಮಾನದಂಡಗಳನ್ನು ರೂಪಿಸುವುದು ಮತ್ತು ಅಂತರರಾಷ್ಟ್ರೀಯ ಪ್ರಮಾಣೀಕರಣದಲ್ಲಿ ಬಲವಾದ ಭಾರತೀಯ ನಾಯಕತ್ವಕ್ಕೆ ಶ್ರೀ ಜೋಶಿ ಅವರು ಕರೆ ನೀಡಿದರು. "ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್" ದೃಷ್ಟಿಕೋನಕ್ಕೆ ಅನುಗುಣವಾಗಿ, "ಮೇಡ್ ಇನ್ ಇಂಡಿಯಾ" ಉತ್ಪನ್ನಗಳನ್ನು "ಭಾರತದ ನಂಬಿಕೆ ಮತ್ತು ವಿಶ್ವದ ನಂಬಿಕೆ" (Trusted by India and Trusted by the World) ಆಗಿ ಪರಿವರ್ತಿಸುವ ಸರ್ಕಾರದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಈ ಸಂದರ್ಭದಲ್ಲಿ ಹಲವಾರು ಪ್ರಮುಖ ಯೋಜನೆಗಳು ಮತ್ತು ಉಪಕ್ರಮಗಳನ್ನು ಪ್ರಾರಂಭಿಸಲಾಗಿದೆ

1. ಬಿಐಎಸ್ ಪ್ರಮಾಣೀಕರಣ ಪೋರ್ಟಲ್‌ನ ಬೀಟಾ ಆವೃತ್ತಿಯ ಬಿಡುಗಡೆ

ಹೊಸ ಬಿಐಎಸ್ ಪ್ರಮಾಣೀಕರಣ ಪೋರ್ಟಲ್‌ ನ ಬೀಟಾ ಆವೃತ್ತಿಯು ಭವಿಷ್ಯದ ಅಗತ್ಯಗಳಿಗೆ ಸಿದ್ಧವಿರುವ ಒಂದು ಡಿಜಿಟಲ್ ವೇದಿಕೆಯಾಗಿದೆ. ಇದು ಮಾನದಂಡಗಳ ಅಭಿವೃದ್ಧಿಯ ಸಂಪೂರ್ಣ ಜೀವನಚಕ್ರವನ್ನು (lifecycle) ಒಂದೇ ಇಂಟರ್‌ಫೇಸ್‌ನಲ್ಲಿ ಸಂಯೋಜಿಸುತ್ತದೆ. ಮಾನದಂಡಗಳ ರೂಪಿಸುವಿಕೆ (Formulation), ವಿಮರ್ಶೆ ಮತ್ತು ತಜ್ಞರ ಸಹಯೋಗಕ್ಕಾಗಿ ಮೀಸಲಾದ ಮಾಡ್ಯೂಲ್‌ ಗಳ ಮೂಲಕ, ಪ್ರಸ್ತಾವನೆಯಿಂದ ಪ್ರಕಟಣೆಯವರೆಗೆ ಸಂಪೂರ್ಣ ಕೆಲಸದ ಪ್ರಕ್ರಿಯೆಯನ್ನು ಇದು ಸರಳಗೊಳಿಸುತ್ತದೆ. ಸುಧಾರಿತ ಡೇಟಾ-ಚಾಲಿತ ಡ್ಯಾಶ್‌ ಬೋರ್ಡ್‌ಗಳು ಮತ್ತು ಪಾತ್ರ-ಆಧಾರಿತ ಪ್ರವೇಶದ (role-based access) ಮೂಲಕ, ಈ ಪೋರ್ಟಲ್ ಮಾನದಂಡಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಒಳಗೊಳ್ಳುವಿಕೆ ಮತ್ತು ವೇಗವನ್ನು ಖಚಿತಪಡಿಸುತ್ತದೆ.

2. ಭಾರತೀಯ ಮಾನದಂಡಗಳ ಬಗ್ಗೆ ಸ್ವಸಹಾಯ ಸಂಘಗಳ ಜಾಗೃತಿ ಮೂಲಕ ಮಹಿಳಾ ಸಬಲೀಕರಣ

“SHINE- Standards Help Inform & Nurture Empowered Women” (ಸಬಲ ಮಹಿಳೆಯರಿಗೆ ಮಾಹಿತಿ ಮತ್ತು ಪೋಷಣೆ ನೀಡುವ ಮಾನದಂಡಗಳು) —ಇದು ಬಿಐಎಸ್‌ನ (BIS) ಒಂದು ಹೊಸ ಯೋಜನೆಯಾಗಿದ್ದು, ಇದು ಭಾರತದ ಗುಣಮಟ್ಟದ ಪಯಣದ ಕೇಂದ್ರಬಿಂದುವಾಗಿ ಮಹಿಳೆಯರನ್ನು ಇರಿಸುತ್ತದೆ. ವ್ಯವಸ್ಥಿತ ತರಬೇತಿ, ಸ್ವಯಂ ಸೇವಾ ಸಂಸ್ಥೆಗಳು (NGO) ಮತ್ತು ಸ್ವಸಹಾಯ ಸಂಘಗಳ (SHG) ಜೊತೆಗಿನ ತಳಮಟ್ಟದ ಸಹಭಾಗಿತ್ವ ಹಾಗೂ ಸ್ಥಳೀಯವಾಗಿ ನೀಡಲಾಗುವ ಪ್ರಾಯೋಗಿಕ ಕಾರ್ಯಕ್ರಮಗಳ ಮೂಲಕ, ಈ ಯೋಜನೆಯು ಮಹಿಳೆಯರಿಗೆ ಕುಟುಂಬಗಳನ್ನು ರಕ್ಷಿಸುವ ಮತ್ತು ಜೀವನೋಪಾಯವನ್ನು ಬಲಪಡಿಸುವ ಜ್ಞಾನವನ್ನು ನೀಡಿ ಸಬಲೀಕರಣಗೊಳಿಸುತ್ತದೆ.

ಈ ಉಪಕ್ರಮವು ಮಹಿಳೆಯರನ್ನು ಕೇವಲ ಗ್ರಾಹಕರನ್ನಾಗಿ ಮಾತ್ರವಲ್ಲದೆ, ಮನೆಗಳು, ಸ್ವಸಹಾಯ ಸಂಘಗಳು ಮತ್ತು ಸಮುದಾಯಗಳಲ್ಲಿ ಮಾನದಂಡಗಳು, ಸುರಕ್ಷತೆ ಮತ್ತು ಗುಣಮಟ್ಟದ ಬಗ್ಗೆ ಜಾಗೃತಿ ಮೂಡಿಸುವ ಬದಲಾವಣೆಯ ಹರಿಕಾರರನ್ನಾಗಿ (Change agents) ರೂಪಿಸುವ ದೂರದೃಷ್ಟಿಯನ್ನು ಹೊಂದಿದೆ.

3. ರಾಷ್ಟ್ರೀಯ ಇ-ಪುಸ್ತಕಾಲಯದಲ್ಲಿ ಬಿಐಎಸ್ (BIS) ಶೈಕ್ಷಣಿಕ ಸಾಹಿತ್ಯ

ಮಕ್ಕಳಲ್ಲಿ ಮಾನದಂಡಗಳು, ಗುಣಮಟ್ಟ, ಸುರಕ್ಷತೆ ಮತ್ತು ನಕಲಿ ಉತ್ಪನ್ನಗಳ ಬಗ್ಗೆ ಜಾಗೃತಿ ಮೂಡಿಸಲು, ಬಿಐಎಸ್ ಶೈಕ್ಷಣಿಕ ಸರಣಿಯ ಭಾಗವಾಗಿ ಮುದ್ರಿತ ಮತ್ತು 2D ಅನಿಮೇಟೆಡ್ ರೂಪಗಳಲ್ಲಿ ಆಕರ್ಷಕ ಕಾಮಿಕ್ ಪುಸ್ತಕಗಳನ್ನು ಬಿಐಎಸ್ ಅಭಿವೃದ್ಧಿಪಡಿಸಿದೆ. ಸರಳ ಭಾಷೆ ಮತ್ತು ದೃಶ್ಯ ಕಥೆ ಹೇಳುವಿಕೆಯ ಮೂಲಕ, ಈ ಉಪಕ್ರಮವು ಚಿಕ್ಕ ವಯಸ್ಸಿನಿಂದಲೇ ಗುಣಮಟ್ಟದ ಪ್ರಜ್ಞೆಯನ್ನು ಬೆಳೆಸುವ ಗುರಿಯನ್ನು ಹೊಂದಿದೆ.

ಈ ಪುಸ್ತಕಗಳು ಈಗ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಮುಖ ಡಿಜಿಟಲ್ ಲೈಬ್ರರಿ ಉಪಕ್ರಮವಾದ 'ರಾಷ್ಟ್ರೀಯ ಇ-ಪುಸ್ತಕಾಲಯ' (Rashtriya e-Pustakalay) ವೇದಿಕೆಯಲ್ಲಿ ಉಚಿತವಾಗಿ ಓದಲು ಲಭ್ಯವಿವೆ. ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರಿಗಾಗಿ ಸಿದ್ಧಪಡಿಸಲಾದ ಈ ರಾಷ್ಟ್ರೀಯ ಡಿಜಿಟಲ್ ಲೈಬ್ರರಿಯು 3.17 ಲಕ್ಷಕ್ಕೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿದೆ. ಈ ಸಹಯೋಗವು "ಮಾನದಂಡಗಳ ವಿಜ್ಞಾನ" (Science of Standards) ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕೆಯ ಪ್ರಯಾಣದ ಸುಲಭವಾಗಿ ಲಭ್ಯವಿರುವ ಮತ್ತು ಅವಿಭಾಜ್ಯ ಅಂಗವಾಗುವುದನ್ನು ಖಚಿತಪಡಿಸುತ್ತದೆ.

4. IIIT ಧಾರವಾಡ, IIT ಪಾಲಕ್ಕಾಡ್, NIT ಅರುಣಾಚಲ ಪ್ರದೇಶದೊಂದಿಗೆ ಒಪ್ಪಂದಕ್ಕೆ (MoU) ಸಹಿ

ಭಾರತೀಯ ಮಾನದಂಡಗಳನ್ನು ಶೈಕ್ಷಣಿಕ ಪಠ್ಯಕ್ರಮದಲ್ಲಿ ಸೇರಿಸಲು, ಪ್ರಮಾಣೀಕರಣ ಪೂರ್ವ ಸಂಶೋಧನೆ ಮತ್ತು ಅಭಿವೃದ್ಧಿ (R&D) ಯೋಜನೆಗಳನ್ನು ವಿಸ್ತರಿಸಲು ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಪ್ರಮಾಣೀಕರಣ-ಸಿದ್ಧ ವೃತ್ತಿಪರರನ್ನಾಗಿ (Standards-Ready professional) ಪರಿವರ್ತಿಸಲು ಬಿಐಎಸ್ (BIS) ದೇಶದ ಅನೇಕ ಪ್ರಮುಖ ಶೈಕ್ಷಣಿಕ ಸಂಸ್ಥೆಗಳೊಂದಿಗೆ ತಿಳುವಳಿಕೆ ಪತ್ರಗಳಿಗೆ (MoUs) ಸಹಿ ಹಾಕಿದೆ. ಶೈಕ್ಷಣಿಕ ಕ್ಷೇತ್ರಕ್ಕೆ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲು, IIIT ಧಾರವಾಡ, IIT ಪಾಲಕ್ಕಾಡ್ ಮತ್ತು NIT ಅರುಣಾಚಲ ಪ್ರದೇಶದಂತಹ ಇನ್ನೂ 3 ಪ್ರತಿಷ್ಠಿತ ಸಂಸ್ಥೆಗಳು ಒಪ್ಪಂದದ ಪಾಲುದಾರರಾಗಿ ಈ ಉಪಕ್ರಮಕ್ಕೆ ಸೇರ್ಪಡೆಗೊಂಡಿವೆ.

ಒಪ್ಪಂದದ ಪಾಲುದಾರರಾಗಿ, ಬಿಐಎಸ್ ವಿದ್ಯಾರ್ಥಿ ಘಟಕಗಳ (Students chapters) ಉಪಕ್ರಮವನ್ನೂ ವಿಸ್ತರಿಸಲಾಗುವುದು. ಪ್ರಸ್ತುತ, 400 ಕ್ಕೂ ಹೆಚ್ಚು ವಿದ್ಯಾರ್ಥಿ ಘಟಕಗಳಲ್ಲಿ 21,000 ಕ್ಕೂ ಹೆಚ್ಚು ಯುವ ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. 27 ಸಂಸ್ಥೆಗಳ ಪಠ್ಯಕ್ರಮದಲ್ಲಿ ಪ್ರಮಾಣೀಕರಣದ ಪರಿಕಲ್ಪನೆಗಳನ್ನು ನೇರವಾಗಿ ಸಂಯೋಜಿಸಲು ಬಿಐಎಸ್ ಶೈಕ್ಷಣಿಕ ವಲಯದೊಂದಿಗೆ ನಿಕಟವಾಗಿ ಕೆಲಸ ಮಾಡಿದೆ ಮತ್ತು 17 ಪ್ರಮಾಣೀಕರಣ ಪೀಠಗಳನ್ನು (Standardization Chairs) ಸ್ಥಾಪಿಸಿದೆ.

ಬಿಐಎಸ್-ಸಕ್ಷಮ್ (BIS-SAKSHAM) (Scheme for Acknowledging Knowledge, Skills and High-impact Merit) ಎಂಬ ವಾರ್ಷಿಕ ಶ್ರೇಷ್ಠತಾ ಮಾನ್ಯತಾ ಯೋಜನೆಯನ್ನು ಸಹ ಈ ಸಂದರ್ಭದಲ್ಲಿ ಪ್ರಾರಂಭಿಸಲಾಯಿತು. ಇದು ಸಂಸ್ಥೆಯಾದ್ಯಂತ ಜ್ಞಾನ, ಕೌಶಲ್ಯ ಮತ್ತು ಹೆಚ್ಚಿನ ಪ್ರಭಾವದ ಅರ್ಹತೆಯನ್ನು ಗುರುತಿಸುವ ಒಂದು ವ್ಯವಸ್ಥಿತ ಉಪಕ್ರಮವಾಗಿದೆ.

ಶ್ರೀ ಅಮನ್‌ದೀಪ್ ಸಿಂಗ್ (ಡಿಜಿಎಂ, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್) ಅವರಿಗೆ ಪ್ರತಿಷ್ಠಿತ 1906 IEC ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಭಾರತೀಯ UHV ಟ್ರಾನ್ಸ್‌ಮಿಷನ್ ಲೈನ್ ಎಂಜಿನಿಯರಿಂಗ್‌ ನಲ್ಲಿನ ಅವರ ಅನುಭವದ ಆಧಾರದ ಮೇಲೆ ಐಇಸಿ (IEC) ವರ್ಕಿಂಗ್ ಗ್ರೂಪ್ ಸದಸ್ಯರಾಗಿ ಅವರು ನೀಡಿದ ಅಸಾಧಾರಣ ಕೊಡುಗೆಗಾಗಿ ಈ ಗೌರವ ಸಲ್ಲಿಸಲಾಗಿದೆ.

ಗ್ರಾಹಕರ ವಿಶ್ವಾಸ, ಸಂವಹನ ಮತ್ತು ಶೈಕ್ಷಣಿಕ ವಲಯದ ಸಹಭಾಗಿತ್ವ

ಗ್ರಾಹಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾದ ಶ್ರೀ ಭರತ್ ಖೇರಾ ಅವರು, ಗ್ರಾಹಕರ ವಿಶ್ವಾಸವನ್ನು ವೃದ್ಧಿಸುವ ಮೂಲಕ ಮತ್ತು 'ಆತ್ಮನಿರ್ಭರ ಭಾರತ'ಕ್ಕೆ ಬೆಂಬಲ ನೀಡುವ ಮೂಲಕ ದೇಶದ ಗುಣಮಟ್ಟದ ಸಂರಚನೆಯಲ್ಲಿ (quality architecture) ಬಿಐಎಸ್ (BIS) ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಒತ್ತಿ ಹೇಳಿದರು. ಬಿಐಎಸ್‌ನ ಡಿಜಿಟಲ್ ರೂಪಾಂತರವನ್ನು, ವಿಶೇಷವಾಗಿ 'ಆನ್‌ಲೈನ್ ಮಾನದಂಡಗಳ ಅಭಿವೃದ್ಧಿ ಮಾಡ್ಯೂಲ್' ಅನ್ನು ಅವರು ಎತ್ತಿ ತೋರಿಸಿದರು. ಇದು ವಿವಿಧ ವಲಯಗಳ ತಜ್ಞರನ್ನು ಒಂದೇ ವೇದಿಕೆಗೆ ತರುತ್ತದೆ, ಆ ಮೂಲಕ ಸಮಯವನ್ನು ಉಳಿಸುತ್ತದೆ ಮತ್ತು ಪಾರದರ್ಶಕತೆ ಹಾಗೂ ಸಹಭಾಗಿತ್ವವನ್ನು ಹೆಚ್ಚಿಸುತ್ತದೆ. ಮಾನದಂಡಗಳು ಕೇವಲ ನಿಯಂತ್ರಕ ಸಾಧನಗಳಲ್ಲ, ಬದಲಿಗೆ ಅವು ಸಹಜವಾಗಿ ರೂಢಿಸಿಕೊಳ್ಳಬೇಕಾದ ಗುಣಮಟ್ಟದ ಸಂಸ್ಕೃತಿಯನ್ನು ಪೋಷಿಸುವ ಸಾಧನಗಳಾಗಿವೆ ಎಂದು ಅವರು ತಿಳಿಸಿದರು. ಗ್ರಾಹಕ ಸಬಲೀಕರಣದ ಬಗ್ಗೆ ಒತ್ತಿ ಹೇಳಿದ ಅವರು, ಮಾನದಂಡಗಳನ್ನು ಸರಳ ಮತ್ತು ಜನಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಸಂವಹನ ಮಾಡುವುದು ಮುಖ್ಯ ಎಂದು ತಿಳಿಸಿದರು ಮತ್ತು ಈ ನಿಟ್ಟಿನಲ್ಲಿ 'ಬಿಐಎಸ್ ಕೇರ್ ಆ್ಯಪ್' (BIS Care App) ನಂತಹ ಉಪಕ್ರಮಗಳನ್ನು ಉಲ್ಲೇಖಿಸಿದರು.

ಬಿಐಎಸ್ ಸಾಧನೆಗಳು ಮತ್ತು ಡಿಜಿಟಲ್ ರೂಪಾಂತರ

ಶ್ರೀ ಸಂಜಯ್ ಗರ್ಗ್, ಮಹಾನಿರ್ದೇಶಕರು, ಬಿಐಎಸ್, ಅವರು ತಮ್ಮ ಭಾಷಣದಲ್ಲಿ 2025ನೇ ವರ್ಷವು ಬಿಐಎಸ್ ಪಾಲಿಗೆ ಒಂದು ಐತಿಹಾಸಿಕ ಮೈಲಿಗಲ್ಲಾಗಿದೆ ಎಂದು ತಿಳಿಸಿದರು. ಈ ವರ್ಷದಲ್ಲಿ ಬಿಐಎಸ್ 600 ಕ್ಕೂ ಹೆಚ್ಚು ಹೊಸ ಮಾನದಂಡಗಳನ್ನು ಅಭಿವೃದ್ಧಿಪಡಿಸಿದೆ, ಇದರೊಂದಿಗೆ ಒಟ್ಟು ಮಾನದಂಡಗಳ ಸಂಖ್ಯೆ 23,293 ಕ್ಕೆ ಏರಿದೆ. ಇವು ಆಯುಷ್ (AYUSH), ರೊಬೊಟಿಕ್ಸ್, ಕೃತಕ ಬುದ್ಧಿಮತ್ತೆ (AI), ಪರಿಸರ ವಿಜ್ಞಾನ ಮತ್ತು ಇತರ ಉದಯೋನ್ಮುಖ ತಂತ್ರಜ್ಞಾನಗಳಂತಹ ವೈವಿಧ್ಯಮಯ ಕ್ಷೇತ್ರಗಳನ್ನು ಒಳಗೊಂಡಿವೆ.

ಉತ್ಪನ್ನ ಪ್ರಮಾಣೀಕರಣವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ ಎಂದು ಅವರು ಮಾಹಿತಿ ನೀಡಿದರು. ಫಾಸ್ಟ್-ಟ್ರಾಕ್ ಪ್ರಮಾಣೀಕರಣ ಯೋಜನೆಯಡಿಯಲ್ಲಿ ಉತ್ಪನ್ನಗಳ ಸಂಖ್ಯೆ 758 ರಿಂದ 1,288 ಕ್ಕೆ ಏರಿದೆ. 2025 ರಲ್ಲಿಯೇ ಸುಮಾರು 9,700 ಹೊಸ ಪರವಾನಗಿಗಳನ್ನು (licences) ನೀಡಲಾಗಿದ್ದು, ಅವುಗಳಲ್ಲಿ ಹೆಚ್ಚಿನವುಗಳನ್ನು 30 ದಿನಗಳೊಳಗೆ ಮಂಜೂರು ಮಾಡಲಾಗಿದೆ. ಇದರಿಂದ ಒಟ್ಟು ಉತ್ಪನ್ನ ಪ್ರಮಾಣೀಕರಣ ಪರವಾನಗಿಗಳ ಸಂಖ್ಯೆ 51,500 ಕ್ಕಿಂತ ಹೆಚ್ಚಿದೆ. ಮೊದಲ ಬಾರಿಗೆ, 124 ಹೊಸ ಉತ್ಪನ್ನಗಳನ್ನು 2025 ರಲ್ಲಿ ಕಡ್ಡಾಯ ಬಿಐಎಸ್ ಪ್ರಮಾಣೀಕರಣದ ವ್ಯಾಪ್ತಿಗೆ ತರಲಾಗಿದೆ, ಇದರಿಂದ ಪ್ರಮಾಣೀಕೃತ ಉತ್ಪನ್ನಗಳ ಒಟ್ಟು ಸಂಖ್ಯೆ 1,437+ ಕ್ಕೆ ಏರಿದೆ. ಇದರಲ್ಲಿ ಆರ್‌ಬಿಐ (RBI) ಸಹಯೋಗದೊಂದಿಗೆ ರೂಪಿಸಲಾದ ಕರೆನ್ಸಿ ನೋಟ್ ಸಾರ್ಟಿಂಗ್ ಯಂತ್ರಗಳು ಮತ್ತು ಐಎಸ್ಒ (ISO) ಮಾನದಂಡಗಳಿಗೆ ಅನುಗುಣವಾಗಿ ಯಂತ್ರೋಪಕರಣಗಳ ಸುರಕ್ಷತೆಗಾಗಿ ಇಂಜೆಕ್ಷನ್ ಮೋಲ್ಡಿಂಗ್ ಯಂತ್ರಗಳಂತಹ ಪ್ರಮುಖ ಸೇರ್ಪಡೆಗಳು ಸೇರಿವೆ.

ಶ್ರೀ ಗರ್ಗ್ ಅವರು ಮಾನಕ್ ಆನ್‌ ಲೈನ್ ಪೋರ್ಟಲ್, ಸರಳೀಕೃತ ಪರವಾನಗಿ ಪ್ರಕ್ರಿಯೆಗಳು, ಫಾಸ್ಟ್-ಟ್ರಾಕ್ ಟ್ರಯಲ್ ಲೈಸೆನ್ಸ್‌ಗಳು, ಕ್ಲಸ್ಟರ್ ಆಧಾರಿತ ಪರೀಕ್ಷಾ ಸೌಲಭ್ಯಗಳು ಮತ್ತು ಬಲವರ್ಧಿತ ಪರೀಕ್ಷಾ ಮೂಲಸೌಕರ್ಯಗಳಂತಹ ಉಪಕ್ರಮಗಳ ಮೂಲಕ ಬಿಐಎಸ್ (BIS) ಡಿಜಿಟಲೀಕರಣವನ್ನು ಹೇಗೆ ಸದುಪಯೋಗಪಡಿಸಿಕೊಂಡಿದೆ ಎಂಬುದನ್ನು ಎತ್ತಿ ತೋರಿಸಿದರು. ಇದರ ಪರಿಣಾಮವಾಗಿ, ಸರಳೀಕೃತ ಪ್ರಕ್ರಿಯೆಯ ಅಡಿಯಲ್ಲಿ ಶೇ. 98 ರಷ್ಟು ಮತ್ತು ಸಾಮಾನ್ಯ ಪ್ರಕ್ರಿಯೆಯ ಅಡಿಯಲ್ಲಿ ಶೇ. 85 ರಷ್ಟು ಪರವಾನಗಿಗಳನ್ನು 30 ದಿನಗಳೊಳಗೆ ನೀಡಲಾಗುತ್ತಿದೆ.

ಈ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಕೈಗಾರಿಕಾ ಸಂಘಗಳು, ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕಾರಿಗಳು, ಶೈಕ್ಷಣಿಕ ತಜ್ಞರು ಸೇರಿದಂತೆ ವಿವಿಧ ಪಾಲುದಾರರು ಭಾಗವಹಿಸಿದ್ದರು. ಗ್ರಾಹಕ ವ್ಯವಹಾರಗಳ ಇಲಾಖೆಯ (DOCA) ಹೆಚ್ಚುವರಿ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರರಾದ ಶ್ರೀ ಸಂಜೀವ್ ಶಂಕರ್, ಡಿಡಿಜಿ (ಪ್ರಮಾಣೀಕರಣ) ಶ್ರೀ ಎಚ್.ಜೆ.ಎಸ್. ಪಾಸ್ರಿಚಾ ಮತ್ತು ಲೆಫ್ಟಿನೆಂಟ್ ಕರ್ನಲ್ (ನಿವೃತ್ತ) ಕುಮಾರ್ ಶಾಂತನು ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 

*****


(रिलीज़ आईडी: 2211948) आगंतुक पटल : 20
इस विज्ञप्ति को इन भाषाओं में पढ़ें: English , Urdu , हिन्दी , Tamil