ರಕ್ಷಣಾ ಸಚಿವಾಲಯ
ಬೆಂಗಳೂರಿನಲ್ಲಿ ಎಡಿಎ ದ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ 'ಏರೋನಾಟಿಕ್ಸ್ 2047' ಆರಂಭ
प्रविष्टि तिथि:
04 JAN 2026 3:41PM by PIB Bengaluru
ವೈಮಾನಿಕ ಅಭಿವೃದ್ಧಿ ಸಂಸ್ಥೆ (ಏರೋನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿ - ADA) ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ 'ಏರೋನಾಟಿಕ್ಸ್ 2047' ಬೆಂಗಳೂರಿನ ಸೆಂಟರ್ ಫಾರ್ ಏರ್ಬೋರ್ನ್ ಸಿಸ್ಟಮ್ಸ್ (CABS) ನಲ್ಲಿ 2026ರ ಜನವರಿ 04 ರಂದು ಪ್ರಾರಂಭವಾಯಿತು. ಈ ವಿಚಾರ ಸಂಕಿರಣವನ್ನು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಉದ್ಘಾಟಿಸಿದರು. ವಾಯುಪಡೆಯ ಮುಖ್ಯಸ್ಥರು ತಮ್ಮ ಭಾಷಣದಲ್ಲಿ, ಲಘು ಯುದ್ಧ ವಿಮಾನ (LCA) ತೇಜಸ್ ಹಾರಾಟ 25 ವರ್ಷಗಳನ್ನು ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ADA ಅನ್ನು ಅಭಿನಂದಿಸಿದರು ಮತ್ತು ಪ್ರಸ್ತುತದ ನಿರಂತರವಾಗಿ ವಿಕಸನಗೊಳ್ಳುತ್ತಿರುವ ಕಾಲಘಟ್ಟದಲ್ಲಿ ಭಾರತೀಯ ವಾಯುಪಡೆ (IAF) ಅನ್ನು ಕಾರ್ಯಾಚರಣೆಗೆ ಸನ್ನದ್ಧವಾಗಿರಿಸಲು ನಿರ್ದಿಷ್ಟ ಕಾಲಮಿತಿಯೊಳಗೆ ಕೆಲಸ ಪೂರ್ಣಗೊಳಿಸಿ ಸಮಯ ಪಾಲನೆ ಮಾಡಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.
XOO9.JPG)
ಈ ಸಂದರ್ಭದಲ್ಲಿ ಮಾತನಾಡಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ ಡಿ ಆರ್ ಡಿ ಒ ಅಧ್ಯಕ್ಷರಾಗಿರುವ ಡಾ. ಸಮೀರ್ ವಿ. ಕಾಮತ್ ಅವರು, ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಅತ್ಯಾಧುನಿಕ ತಂತ್ರಜ್ಞಾನವನ್ನು ದೇಶೀಯವಾಗಿ ಅಭಿವೃದ್ಧಿಪಡಿಸುವ ಮಹತ್ವವನ್ನು ಒತ್ತಿ ಹೇಳುತ್ತಾ, ಈ ಮೂಲಕ 2047ರ ವಿಕಸಿತ ಭಾರತದ ಮುನ್ನೋಟವನ್ನು ಸಾಕಾರಗೊಳಿಸಬಹುದು ಎಂದು ವಿವರಿಸಿದರು.
ಈ ವಿಚಾರ ಸಂಕಿರಣವು ಏರೋನಾಟಿಕ್ಸ್ ನ ವಿಕಸನ, ವಿನ್ಯಾಸ ನಾವಿನ್ಯತೆ, ಉತ್ಪಾದನೆ ಮತ್ತು ಭವಿಷ್ಯದ ಗಡಿಗಳ ಕುರಿತು ತಮ್ಮ ಒಳನೋಟಗಳನ್ನು ಹಂಚಿಕೊಳ್ಳಲು ಏರೋಸ್ಪೇಸ್ ಸಮುದಾಯದಾದ್ಯಂತದ ವಿಷಯ ತಜ್ಞರು, ಕೈಗಾರಿಕಾ ಪಾಲುದಾರರು, ಶಿಕ್ಷಣ ತಜ್ಞರು, ವಾಯುಯಾನ ಉತ್ಸಾಹಿಗಳು ಮತ್ತು ಭಾಷಣಕಾರರನ್ನು ಒಟ್ಟುಗೂಡಿಸಿದೆ. ಮುಂದಿನ ಪೀಳಿಗೆಯ ವಿಮಾನಗಳಿಗೆ ಉತ್ಪಾದನೆ ಮತ್ತು ಜೋಡಣೆ, ಡಿಜಿಟಲ್ ಉತ್ಪಾದನೆ, ಭವಿಷ್ಯದ ಪೀಳಿಗೆಯ ಯುದ್ಧ ವಿಮಾನಗಳಿಗೆ ಏರೋಡೈನಮಿಕ್ಸ್ (ಗಾಳಿಯ ಗತಿ ಅಧ್ಯಯನ), ಪ್ರೊಪಲ್ಷನ್ (ಸಂಚಲನಾತ್ಮಕ) ತಂತ್ರಜ್ಞಾನಗಳು, ಹಾರಾಟ ಪರೀಕ್ಷಾ ತಂತ್ರಗಳು, ಡಿಜಿಟಲ್ ಅವಳಿ ತಂತ್ರಜ್ಞಾನ, ಪ್ರಮಾಣೀಕರಣ ಸವಾಲುಗಳು, ಹಾರಾಟ ನಿಯಂತ್ರಣ ವ್ಯವಸ್ಥೆಗಳು ಮತ್ತು ಏವಿಯಾನಿಕ್ಸ್, ಯುದ್ಧ ವಿಮಾನಗಳಲ್ಲಿ ನಿರ್ವಹಣೆಯ ಸವಾಲುಗಳು, ವಿಮಾನ ವಿನ್ಯಾಸದಲ್ಲಿ AI ಮತ್ತು ಆಕ್ಚ್ಯುಯೇಟರ್ ಗಳ ನಿಖರ ಉತ್ಪಾದನೆ ಸೇರಿದಂತೆ ಆಧುನಿಕ ಏರೋಸ್ಪೇಸ್ (ಅಂತರಿಕ್ಷಯಾನ) ತಂತ್ರಜ್ಞಾನಗಳ ವಿವಿಧ ಅಂಶಗಳನ್ನು ಅನ್ವೇಷಿಸಲು ಏರೋನಾಟಿಕ್ಸ್-2047 ರ ಗಮನ ಹರಿಸಿದೆ.
DLH4.JPG)
ಈ ವಿಚಾರ ಸಂಕಿರಣವು ಭಾರತೀಯ ಬಾಹ್ಯಾಕಾಶ ತಂತ್ರಜ್ಞಾನಗಳ ಭವಿಷ್ಯ ಮತ್ತು ಲಘು ಯುದ್ಧ ವಿಮಾನ (LCA) ತೇಜಸ್ ನ ಯೋಜನಾ ಹಂತದಿಂದ ಅಂತಿಮ ಹಂತದವರೆಗಿನ (ಸ್ಕೆಚ್ ನಿಂದ ಸ್ಕ್ವಾಡ್ರನ್ವರೆಗಿನ) ಪಯಣವನ್ನು ಸಾರಿದೆ. ADA 5,600 ಕ್ಕೂ ಹೆಚ್ಚು ಯಶಸ್ವಿ ಹಾರಾಟ ಪ್ರಯೋಗಗಳೊಂದಿಗೆ LCA ತೇಜಸ್ ಅನ್ನು ವಿನ್ಯಾಸಗೊಳಿಸಿದೆ ಮತ್ತು ಅಭಿವೃದ್ಧಿಪಡಿಸಿದೆ. ಸರ್ಕಾರಿ ಪ್ರಯೋಗಾಲಯಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಕೈಗಾರಿಕೆಗಳು ಸೇರಿದಂತೆ 100 ಕ್ಕೂ ಹೆಚ್ಚು ವಿನ್ಯಾಸ ಕಾರ್ಯ ಕೇಂದ್ರಗಳು ಈ ಕಾರ್ಯಕ್ರಮದೊಂದಿಗೆ ನಂಟು ಹೊಂದಿವೆ. LCA ಅನ್ನು ನಾಲ್ಕನೇ ತಲೆಮಾರಿನ ಯುದ್ಧವಿಮಾನವನ್ನಾಗಿ ಮಾಡಲು ಕಾರ್ಬನ್ ಸಂಯೋಜನೆಗಳು, ಹಗುರವಾದ ವಸ್ತುಗಳು, ಫ್ಲೈ-ಬೈ-ವೈರ್ ಹಾರಾಟ ನಿಯಂತ್ರಣ, ಡಿಜಿಟಲ್ ಯುಟಿಲಿಟಿ ನಿರ್ವಹಣಾ ವ್ಯವಸ್ಥೆ, ಗ್ಲಾಸ್ ಕಾಕ್ಪಿಟ್, ಇತ್ಯಾದಿಗಳಂತಹ ಅನೇಕ ಸ್ಥಾಪಿತ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ.
LCA Mk1A ದೇಶೀಯವಾಗಿ ವಿನ್ಯಾಸಗೊಳಿಸಲಾದ ಮತ್ತು ತಯಾರಿಸಿದ ಯುದ್ಧ ವಿಮಾನದ ಮುಂದುವರಿದ ರೂಪಾಂತರವಾಗಿದ್ದು, IAF ನ ಕಾರ್ಯಾಚರಣೆಯ ಅವಶ್ಯಕತೆಗಳನ್ನು ಪೂರೈಸಲು ಪ್ರಬಲ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. LCA MK II ಮತ್ತು LCA ನೌಕಾಪಡೆ ಪ್ರಸ್ತುತ ಅಭಿವೃದ್ಧಿ ಹಂತದಲ್ಲಿವೆ. ವಿಚಾರ ಸಂಕಿರಣದ ಸಮಯದಲ್ಲಿ, ತೇಜಸ್ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿಷಯಗಳನ್ನು ಗಣ್ಯರು ಮತ್ತು ಖ್ಯಾತ ಭಾಷಣಕಾರರು ತಾಂತ್ರಿಕ ಸಂವಾದದ ಸರಣಿ ಕಾರ್ಯಕ್ರಮದಲ್ಲಿ ತಿಳಿಸಿಕೊಡುವರು.
LCA ತೇಜಸ್ ಅಭಿವೃದ್ಧಿಯಿಂದ ಭಾರತಕ್ಕೆ ಅಪಾರ ಅನುಕೂಲವಾಗಿದೆ, ಏಕೆಂದರೆ ಅದು ಈಗ ಸ್ಥಳೀಯವಾಗಿ ಯುದ್ಧ ವಿಮಾನಗಳನ್ನು ನಿರ್ಮಿಸುವ ಸಾಮರ್ಥ್ಯ ಗಳಿಸಿದೆ. LCA ಕಾರ್ಯಕ್ರಮವು ಅತ್ಯಂತ ಯಶಸ್ವಿ ಸ್ಥಳೀಯ ರಕ್ಷಣಾ ಕಾರ್ಯಕ್ರಮಗಳಲ್ಲಿ ಒಂದಾಗಿದೆ, ಇದರ ಮೂಲಕ IAF ಗೆ ಅಸಾಧಾರಣವಾದ ವಾಯು ಶ್ರೇಷ್ಠ ವಿಮಾನ ದೊರೆತಿದೆ. ಇಲ್ಲಿಯವರೆಗೆ, 38 ವಿಮಾನಗಳನ್ನು (32 ಫೈಟರ್ ಗಳು ಮತ್ತು 6 ತರಬೇತುದಾರರು ಸೇರಿ) ಭಾರತೀಯ ವಾಯುಪಡೆಗೆ ಸೇರ್ಪಡೆ ಮಾಡಲಾಗಿದೆ.
ವಿಚಾರ ಸಂಕಿರಣದ ಭಾಗವಾಗಿ, ಹೆಚ್ಚಿನ ಸಂಖ್ಯೆಯ ಸಾರ್ವಜನಿಕ ವಲಯ ಸಂಸ್ಥೆ (ಪಿ ಎಸ್ ಯು) ಗಳು, ರಕ್ಷಣಾ ವಲಯ ಡಿ ಪಿ ಎಸ್ ಯು ಗಳು, ಕೈಗಾರಿಕೆಗಳು, ಎಂಎಸ್ಎಂಇ ಗಳು ವಾಯು ಬಳಕೆಗೆ ದೇಶೀಯವಾಗಿ ವಿನ್ಯಾಸಗೊಳಿಸಿರುವ ಮತ್ತು ಅಭಿವೃದ್ಧಿಪಡಿಸಿರುವ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿವೆ.
*****
(रिलीज़ आईडी: 2211382)
आगंतुक पटल : 21