ಅತಿಸಣ್ಣ, ಸಣ್ಣ, ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳ ಸಚಿವಾಲಯ
azadi ka amrit mahotsav

ವರ್ಷಾಂತ್ಯದ ಪರಾಮರ್ಶೆ 2025: ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ(ಎಂಎಸ್ಎಂಇ)ಗಳ ಸಚಿವಾಲಯ


2025ನೇ ವರ್ಷವು ಎಂಎಸ್ಎಂಇ ಸಚಿವಾಲಯದ ಹಲವಾರು ಮೈಲಿಗಲ್ಲು ಸಾಧನೆಗಳಿಗೆ ಸಾಕ್ಷಿಯಾಗಿದೆ; ಇದರಲ್ಲಿ ಹೊಸ ಅಭಿಯಾನಗಳು ಮತ್ತು ಉಪಕ್ರಮಗಳ ಪ್ರಾರಂಭ; ಹಾಗೆಯೇ ಇತರೆ ದೇಶಗಳೊಂದಿಗೆ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ

ಕಾರ್ಯತಂತ್ರ ಹೆಚ್ಚಳ: ಕೈಗಾರಿಕಾ ಬೆಳವಣಿಗೆ ಹೆಚ್ಚಿಸಲು ಪರಿಷ್ಕೃತ ಎಂಎಸ್ಎಂಇ ವರ್ಗೀಕರಣ ಮಿತಿಗಳು ಜಾರಿಗೆ ಬರಲಿವೆ

ಡಿಜಿಟಲ್ ಪರಿವರ್ತನೆಯ ಮೈಲಿಗಲ್ಲು: ಔಪಚಾರೀಕರಣ ವೇಗಗೊಂಡಂತೆ ಉದ್ಯಮ ನೋಂದಣಿಗಳು 7.3 ಕೋಟಿ ದಾಟಿವೆ

ಕ್ರೆಡಿಟ್ ಪ್ರವೇಶದಲ್ಲಿ ಪ್ರಗತಿ: ಸಣ್ಣ ಮತ್ತು ಅತಿಸಣ್ಣ ಉದ್ಯಮಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ(ಸಿಜಿಎಸ್ಎಂಎಸ್ಇ) ಜಾರಿಗೆ ಬಂದ 25 ವರ್ಷಗಳ ಆಚರಣೆ; ಗ್ಯಾರಂಟಿ ವ್ಯಾಪ್ತಿಯ ಮಿತಿ 10 ಕೋಟಿ ರೂ.ಗೆ ಹೆಚ್ಚಳ

ಪರಂಪರೆಯ ಸಂರಕ್ಷಣೆ, ಭವಿಷ್ಯದ ಸಬಲೀಕರಣ: ಪಿಎಂ ವಿಶ್ವಕರ್ಮ ಯೋಜನೆಯಡಿ 30 ಲಕ್ಷ ಫಲಾನುಭವಿಗಳ ನೋಂದಣಿ ಗುರಿಯಲ್ಲಿ ಯೋಜನೆ ಅನುಷ್ಠಾನದ 2 ವರ್ಷಗಳಲ್ಲೇ ಯಶಸ್ಸು ಸಾಧಿಸಲಾಗಿದೆ

ಖಾದಿ ಮತ್ತು ಗ್ರಾಮೋದ್ಯೋಗ ಮಾರಾಟ 1.27 ಲಕ್ಷ ಕೋಟಿ ರೂ. ದಾಟಿದೆ, ಇದು 'ಸ್ಥಳೀಯವಾಗಿ ತಯಾರಿಸಿದ ಉತ್ಪನ್ನಗಳನ್ನೇ ಖರೀದಿಸಿ' ಮತ್ತು 'ಆತ್ಮನಿರ್ಭರ ಭಾರತ'ದ ಮನೋಭಾವಕ್ಕೆ ಶಕ್ತಿ ತುಂಬಿದೆ

ತಂತ್ರಜ್ಞಾನ-ಸಕ್ರಿಯಗೊಳಿಸಿದ ಆಡಳಿತ: ಅತ್ಯುತ್ತಮ ಸಂಪನ್ಮೂಲ ಹಂಚಿಕೆಗಾಗಿ ಸಚಿವಾಲಯವು ಪ್ರಧಾನಮಂತ್ರಿ ಗತಿ ಶಕ್ತಿಯೊಂದಿಗೆ ಎಂಎಸ್ಎಂಇ ಸ್ವತ್ತುಗಳನ್ನು ಜೋಡಿಸುತ್ತದೆ.

प्रविष्टि तिथि: 30 DEC 2025 12:49PM by PIB Bengaluru

ಭಾರತದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯಲ್ಲಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮ(ಎಂಎಸ್ಎಂಇ)ಗಳ ವಲಯವು ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇದು ಕಡಿಮೆ ಬಂಡವಾಳ ವೆಚ್ಚದಲ್ಲಿ ಗಮನಾರ್ಹ ಉದ್ಯೋಗಗಳನ್ನು ಸೃಷ್ಟಿಸುತ್ತದೆ, ಬೃಹತ್ ಕೈಗಾರಿಕೆಗಳಿಗೆ ಪೂರಕ ಘಟಕಗಳಾಗಿ ಬೆಂಬಲ ನೀಡುತ್ತದೆ, ಜತೆಗೆ ಗ್ರಾಮೀಣ ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಕೈಗಾರಿಕೀಕರಣವನ್ನು ಉತ್ತೇಜಿಸುತ್ತದೆ. ಜತೆಗೆ, ಪ್ರಾದೇಶಿಕ ಅಸಮಾನತೆ ಕಡಿಮೆ ಮಾಡಲು ಮತ್ತು ಹೆಚ್ಚು ಸಮಾನ ಆದಾಯ ವಿತರಣೆ ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಭಾರತ ಸರ್ಕಾರದ ಎಂಎಸ್ಎಂಇ ಸಚಿವಾಲಯವು ತನ್ನ ವಿವಿಧ ಸಂಸ್ಥೆಗಳು ಮತ್ತು ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ಖಾದಿ ಮತ್ತು ಗ್ರಾಮೋದ್ಯೋಗ ಮತ್ತು ತೆಂಗಿನನಾರು ಕೈಗಾರಿಕೆಗಳು ಸೇರಿದಂತೆ ಎಂಎಸ್ಎಂಇ ಕ್ಷೇತ್ರದ ಬೆಳವಣಿಗೆ ಮತ್ತು ಅಭಿವೃದ್ಧಿ ಉತ್ತೇಜಿಸುವ ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿದೆ. ಸಾಲ ಬೆಂಬಲ, ತಾಂತ್ರಿಕ ನೆರವು, ಮೂಲಸೌಕರ್ಯ ಅಭಿವೃದ್ಧಿ, ಕೌಶಲ್ಯ ಅಭಿವೃದ್ಧಿ ಮತ್ತು ತರಬೇತಿಯನ್ನು ಒದಗಿಸುವ ಜತೆಗೆ ಎಂಎಸ್ಎಂಇ ಗಳ ಸ್ಪರ್ಧಾತ್ಮಕತೆ ಮತ್ತು ಮಾರುಕಟ್ಟೆ ಪ್ರವೇಶ ಹೆಚ್ಚಿಸುವ ಕ್ರಮಗಳನ್ನು ಒದಗಿಸುವ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ.

2025ನೇ ವರ್ಷವು ಎಂಎಸ್ಎಂಇ ಸಚಿವಾಲಯದ ಹಲವಾರು ಮೈಲಿಗಲ್ಲು ಸಾಧನೆಗಳಿಗೆ ಸಾಕ್ಷಿಯಾಗಿದೆ. ಇದರಲ್ಲಿ ಹೊಸ ಅಭಿಯಾನಗಳು ಮತ್ತು ಉಪಕ್ರಮಗಳ ಪ್ರಾರಂಭ, ಹಾಗೆಯೇ ದ್ವಿಪಕ್ಷೀಯ ಸಹಕಾರ ಬಲಪಡಿಸಲು ಇತರೆ ದೇಶಗಳೊಂದಿಗೆ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕುವುದು ಸೇರಿವೆ. ಈ ವರ್ಷ ಸಚಿವಾಲಯಕ್ಕೆ ವಿಶೇಷವಾಗಿ ಮಹತ್ವದ್ದಾಗಿದೆ, ಹಲವಾರು ಹೊಸ ಕಾರ್ಯಕ್ರಮಗಳನ್ನು ಪರಿಚಯಿಸಲಾಗಿದೆ. 2025ರಲ್ಲಿ ಸಚಿವಾಲಯದ ಕೆಲವು ಪ್ರಮುಖ ಉಪಕ್ರಮಗಳು ಮತ್ತು ಸಾಧನೆಗಳನ್ನು ಕೆಳಗೆ ವಿವರಿಸಲಾಗಿದೆ:

2. 2025ರಲ್ಲಿ ವಿವಿಧ ಯೋಜನೆಗಳು/ಕಾರ್ಯಕ್ರಮಗಳ ಅಡಿ ಪ್ರಮುಖ ಸಾಧನೆಗಳು ಮತ್ತು ಉಪಕ್ರಮಗಳು:

2.1 ಎಂಎಸ್ಎಂಇಗಳ ಔಪಚಾರೀಕರಣ:

ಎಂಎಸ್ಎಂಇಗಳ ನೋಂದಣಿ ಸುಲಭಗೊಳಿಸಲು, ಎಲ್ಲಾ ಯೋಜನೆಗಳು ಮತ್ತು ಪ್ರಯೋಜನಗಳನ್ನು ಪಡೆಯಲು ಅನುಕೂಲವಾಗುವಂತೆ ಉದ್ಯಮ ನೋಂದಣಿ ಪೋರ್ಟಲ್ ಅನ್ನು 01.07.2020ರಂದು ಪ್ರಾರಂಭಿಸಲಾಯಿತು. ನೋಂದಣಿ ಪ್ರಕ್ರಿಯೆಯು ಉಚಿತ, ಕಾಗದರಹಿತ ಮತ್ತು ಡಿಜಿಟಲ್ ಆಗಿದೆ. ಇದಲ್ಲದೆ, ಅನೌಪಚಾರಿಕ ಸೂಕ್ಷ್ಮ ಉದ್ಯಮ(ಐಎಂಇಗಳು)ಗಳನ್ನು ಔಪಚಾರಿಕ ವ್ಯಾಪ್ತಿಗೆ ತರಲು ಮತ್ತು ಆದ್ಯತಾ ವಲಯದ ಸಾಲ(ಪಿಎಸ್ಎಲ್) ಪ್ರಯೋಜನಗಳನ್ನು ಪಡೆಯಲು ಸಚಿವಾಲಯವು 11.01.2023ರಂದು ಉದ್ಯಮ ನೆರವು ವೇದಿಕೆ(ಯುಎಪಿ) ಪೋರ್ಟಲ್ ಪ್ರಾರಂಭಿಸಿತು.

01.07.2020ರಿಂದ 17.12.2025ರ ವರೆಗೆ 7.30 ಕೋಟಿಗೂ ಹೆಚ್ಚು ಉದ್ಯಮಗಳು ಉದ್ಯಮ ನೋಂದಣಿ ಪೋರ್ಟಲ್ ಮತ್ತು ಉದ್ಯಮ ಅಸಿಸ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಿಕೊಂಡಿವೆ. ಇದರಲ್ಲಿ ಉದ್ಯಮ ಪೋರ್ಟಲ್‌ನಲ್ಲಿ 4.37 ಕೋಟಿ ನೋಂದಣಿಗಳು ಮತ್ತು ಯುಎಪಿಯಲ್ಲಿ 2.92 ಕೋಟಿ ನೋಂದಣಿಗಳು ಸೇರಿವೆ.

ಇದಲ್ಲದೆ, ಎಂಎಸ್‌ಎಂಇಗಳು ಕಾರ್ಯಾಚರಣೆಗಳನ್ನು ಅಳೆಯಲು ಮತ್ತು ಉತ್ತಮ ಸಂಪನ್ಮೂಲಗಳನ್ನು ಪಡೆಯುವಂತೆ ಸಹಾಯ ಮಾಡಲು, ಕೇಂದ್ರ ಬಜೆಟ್ 2025-26ರಲ್ಲಿ  ಹೂಡಿಕೆ ಮತ್ತು ವಹಿವಾಟು ಮಿತಿಗಳನ್ನು ವರ್ಗೀಕರಿಸಿ ಕ್ರಮವಾಗಿ 2.5 ಪಟ್ಟು ಮತ್ತು 2 ಪಟ್ಟು ಹೆಚ್ಚಿಸಿದೆ. ಹೊಸ ವ್ಯಾಖ್ಯಾನವು 01.04.2025ರಿಂದ ಜಾರಿಗೆ ಬಂದಿದೆ. ಹೋಲಿಸಬಹುದಾದ ಕೋಷ್ಟಕವನ್ನು ಕೆಳಗೆ ನೀಡಲಾಗಿದೆ:

ಕೋಟಿ ರೂ.ಗಳಲ್ಲಿ

ಉದ್ಯಮ ಅಥವಾ ಸಂಸ್ಥೆ

ಹೂಡಿಕೆ

ವಹಿವಾಟು

 

ಹಳೆಯದು

ಪರಿಷ್ಕೃತ

ಹಳೆಯದು

ಪರಿಷ್ಕೃತ

ಅತಿಸಣ್ಣ

1

2.5

5

10

ಸಣ್ಣ

10

25

50

100

ಮಧ್ಯಮ

50

125

250

500

2.2 ಸಾಲದ ಲಭ್ಯತೆ:

2.2.1 ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ(ಪಿಎಂಇಜಿಪಿ)

ಪಿಎಂಇಜಿಪಿ ಎಂಬುದು ಕೃಷಿಯೇತರ ವಲಯದಲ್ಲಿ ಅತಿಸಣ್ಣ ಉದ್ಯಮಗಳ ಸ್ಥಾಪನೆಯ ಮೂಲಕ ಉದ್ಯೋಗಾವಕಾಶಗಳನ್ನು ಒದಗಿಸಲು ಸಾಲ ಸಂಪರ್ಕಿತ ಸಬ್ಸಿಡಿ ಯೋಜನೆಯಾಗಿದೆ. ಉತ್ಪಾದನೆ ಅಥವಾ ತಯಾರಿಕೆ ವಲಯದಲ್ಲಿ 50 ಲಕ್ಷ ರೂ. ಮತ್ತು ಸೇವಾ ವಲಯದಲ್ಲಿ 20 ಲಕ್ಷ ರೂ. ಗರಿಷ್ಠ ಯೋಜನಾ ವೆಚ್ಚದೊಂದಿಗೆ ಹೊಸ ಉದ್ಯಮಗಳನ್ನು ಸ್ಥಾಪಿಸಲು ಬ್ಯಾಂಕ್‌ಗಳಿಂದ ಸಾಲ ಪಡೆಯುವ ಫಲಾನುಭವಿಗಳಿಗೆ ಈ ಯೋಜನೆಯಲ್ಲಿ ಮಾರ್ಜಿನ್ ಮನಿ(ಸಬ್ಸಿಡಿ) ಒದಗಿಸಲಾಗುತ್ತದೆ.

ಇದು ಪ್ರಾರಂಭವಾದಾಗಿನಿಂದ ಅಂದರೆ ಹಣಕಾಸು ವರ್ಷ 2008-09ರಿಂದ ಹಣಕಾಸು ವರ್ಷ 2025-26ರ ವರೆಗೆ (16.12.2025ರ ವರೆಗೆ ಅನ್ವಯವಾಗುವಂತೆ), ದೇಶಾದ್ಯಂತ 10.71 ಲಕ್ಷಕ್ಕೂ ಹೆಚ್ಚು ಸೂಕ್ಷ್ಮ ಅಥವಾ ಅತಿಸಣ್ಣ ಉದ್ಯಮಗಳಿಗೆ 29,249.43 ಕೋಟಿ ರೂ. ಮಾರ್ಜಿನ್ ಮನಿ ಸಬ್ಸಿಡಿ ವಿತರಣೆಯೊಂದಿಗೆ ಸಹಾಯ ಮಾಡಲಾಗಿದೆ, ಇದು ಒಟ್ಟು ಅಂದಾಜು 87 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳಿಗೆ ಉದ್ಯೋಗ ಸೃಷ್ಟಿಸಿದೆ.

2025-26ರ ಅವಧಿಯಲ್ಲಿ(2025 ಜನವರಿ 1ರಿಂದ ಡಿಸೆಂಬರ್ 16ರ ವರೆಗೆ), ದೇಶಾದ್ಯಂತ 84,034 ಹೊಸ ಅತಿಸಣ್ಣ ಅಥವಾ ಸೂಕ್ಷ್ಮ ಉದ್ಯಮಗಳಿಗೆ 3125.35 ಕೋಟಿ ರೂ. ಮಾರ್ಜಿನ್ ಮನಿ ಸಬ್ಸಿಡಿ ವಿತರಿಸುವ ಮೂಲಕ ಸಹಾಯ ಮಾಡಲಾಗಿದೆ, ಇದು ಅಂದಾಜು ಒಟ್ಟು 6.7 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಸೃಷ್ಟಿಸಿದೆ.

2025 ಜೂನ್ ನಿಂದ ಇಂಗ್ಲಿಷ್ ಮತ್ತು ಹಿಂದಿ ಹೊರತುಪಡಿಸಿ 19 ಪ್ರಾದೇಶಿಕ ಭಾಷೆಗಳಲ್ಲಿ ಸಂಭಾವ್ಯ ಫಲಾನುಭವಿಗಳಿಂದ ಪಿಎಂಇಜಿಪಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ.

2.2.2 ಕ್ರೆಡಿಟ್ ಗ್ಯಾರಂಟಿ ಯೋಜನೆ

ಸಣ್ಣ ಮತ್ತು ಅತಿಸಣ್ಣ ಉದ್ಯಮಗಳಿಗೆ ಕ್ರೆಡಿಟ್ ಗ್ಯಾರಂಟಿ ಯೋಜನೆ (ಸಿಜಿಎಸ್ಎಂಎಸ್ಇ)ಯು ಎಂಎಸ್ಎಂಇ ಸಚಿವಾಲಯದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ, ಇದನ್ನು ಸಣ್ಣ ಮತ್ತು ಅತಿಸಣ್ಣ ಉದ್ಯಮಗಳಿಗೆ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್(ಸಿಜಿಟಿಎಂಎಸ್ಇ) ಮೂಲಕ ಜಾರಿಗೊಳಿಸಲಾಗಿದ್ದು, ಸದಸ್ಯ ಸಾಲ ನೀಡುವ ಸಂಸ್ಥೆಗಳು ಸಣ್ಣ ಮತ್ತು ಅತಿಸಣ್ಣ ಉದ್ಯಮ(ಎಂಎಸ್ಇಗಳು)ಗಳಿಗೆ ಮೇಲಾಧಾರ ಭದ್ರತೆ ಅಥವಾ 3ನೇ ವ್ಯಕ್ತಿಯ ಗ್ಯಾರಂಟಿಗಳಿಲ್ಲದೆ ವಿಸ್ತರಿಸಿದ ಸಾಲ ಸೌಲಭ್ಯಗಳಿಗೆ ಕ್ರೆಡಿಟ್ ಗ್ಯಾರಂಟಿಗಳನ್ನು ಒದಗಿಸುತ್ತವೆ. ಸಿಜಿಎಸ್ಎಂಎಸ್ಇ ತನ್ನ 25ನೇ ವಾರ್ಷಿಕೋತ್ಸವ ಆಚರಿಸುತ್ತಿದ್ದು, ಈ ಮೈಲಿಗಲ್ಲು ವರ್ಷದಲ್ಲಿ ಪ್ರಾರಂಭವಾದಾಗಿನಿಂದ 1 ಕೋಟಿ ಗ್ಯಾರಂಟಿಗಳನ್ನು ದಾಟಿದೆ.

2025 ಜನವರಿ 1ರಿಂದ ನವೆಂಬರ್ 30ರ ಅವಧಿಯಲ್ಲಿ 3.77 ಲಕ್ಷ ಕೋಟಿ ರೂ. ಮೊತ್ತದ 29.03 ಲಕ್ಷ ಗ್ಯಾರಂಟಿಗಳನ್ನು ಅನುಮೋದಿಸಲಾಗಿದೆ. ಇದಲ್ಲದೆ, ಭಾರತ ಸರ್ಕಾರವು ಗ್ಯಾರಂಟಿ ವ್ಯಾಪ್ತಿಯ ಮಿತಿಯನ್ನು 5 ಕೋಟಿ ರೂ.ಗಳಿಂದ 10 ಕೋಟಿ ರೂ.ಗಳಿಗೆ ಹೆಚ್ಚಿಸಿದೆ. 01.04.2025ರಿಂದ ಜಾರಿಗೆ ಬರುವಂತೆ 1 ಕೋಟಿ ರೂ.ಗಿಂತ ಹೆಚ್ಚಿನ ಗ್ಯಾರಂಟಿಗಳಿಗೆ ವಾರ್ಷಿಕ ಗ್ಯಾರಂಟಿ ಶುಲ್ಕವನ್ನು ತರ್ಕಬದ್ಧಗೊಳಿಸಿದೆ.

ಇದಲ್ಲದೆ, ತೃತೀಯ ಲಿಂಗಿ(ಮಂಗಳಮುಖಿ) ಉದ್ಯಮಿಗಳಿಂದ ಉತ್ತೇಜಿಸಲ್ಪಟ್ಟ ಎಂಎಸ್ಇಗಳಿಗೆ ವಿಶೇಷ ನಿಬಂಧನೆ ಪರಿಚಯಿಸಲಾಗಿದೆ, ಇದು 01.03.2025ರಿಂದ ಜಾರಿಗೆ ಬರುವಂತೆ, ಗ್ಯಾರಂಟಿ ಶುಲ್ಕದಲ್ಲಿ 10% ರಿಯಾಯಿತಿ ಮತ್ತು 85% ಸುಧಾರಿತ ಗ್ಯಾರಂಟಿ ವ್ಯಾಪ್ತಿಯನ್ನು ಒದಗಿಸುತ್ತದೆ.

2.2.3 ಸ್ವಾವಲಂಬಿ ಭಾರತ (ಎಸ್ಆರ್ ಐ) ನಿಧಿ

ಎಂಎಸ್ಎಂಇ ಸಚಿವಾಲಯದ ಸ್ವಾವಲಂಬಿ ಭಾರತ(ಎಸ್ಆರ್ ಐ) ನಿಧಿ ಯೋಜನೆಯು ದೊಡ್ಡದಾಗಿ ಬೆಳೆಯುವ ಸಾಮರ್ಥ್ಯ ಮತ್ತು ಕಾರ್ಯಸಾಧ್ಯತೆ ಹೊಂದಿರುವ ಎಂಎಸ್ಎಂಇಗಳಿಗೆ ಈಕ್ವಿಟಿ ಹಣ ಒದಗಿಸುತ್ತದೆ. 2021 ಅಕ್ಟೋಬರ್ ನಲ್ಲಿ ಇದು ಪ್ರಾರಂಭವಾದಾಗಿನಿಂದ 30.11.2025ರ ವರೆಗೆ, 69 ಡಾಟರ್(ಎಂಎಸ್ಎಂಇ) ಫಂಡ್‌ಗಳನ್ನು ಎನ್‌ಎಸ್‌ಐಸಿ ವೆಂಚರ್ ಕ್ಯಾಪಿಟಲ್ ಫಂಡ್ ಲಿಮಿಟೆಡ್(ಎನ್‌ವಿಸಿಎಫ್‌ಎಲ್), ಅಂದರೆ ಮದರ್ ಫಂಡ್‌ನೊಂದಿಗೆ ಸೇರಿಸಲಾಗಿದೆ. ಎಸ್ಆರ್ ಐ ನಿಧಿಯು 682 ಎಂಎಸ್ಎಂಇಗಳಿಗೆ 1,823 ಕೋಟಿ ರೂ. ಹೂಡಿಕೆಯ ಮೂಲಕ ಸಹಾಯ ಮಾಡಿದೆ.

2025 ಜನವರಿ 1ರಿಂದ ನವೆಂಬರ್ 30ರ ವರೆಗೆ, 9 ಡಾಟರ್ ಫಂಡ್‌ಗಳನ್ನು ಎನ್‌ವಿಸಿಎಫ್‌ಎಲ್ ನೊಂದಿಗೆ ಸೇರಿಸಲಾಗಿದೆ. 129 ಸಂಭಾವ್ಯ ಎಂಎಸ್ಎಂಇಗಳಿಗೆ  ಸಹಾಯ ಮಾಡಲು 613 ಕೋಟಿ ರೂಪಾಯಿಗಿಂತ ಹೆಚ್ಚಿನ ಹೂಡಿಕೆ ಮಾಡಲಾಗಿದೆ.

2.3 ಮೂಲಸೌಕರ್ಯ ಮತ್ತು ಸಾಮರ್ಥ್ಯ ವೃದ್ಧಿ

2.3.1 ಪಿಎಂ ವಿಶ್ವಕರ್ಮ(ರಾಷ್ಟ್ರೀಯ ಕಾರ್ಯಕ್ರಮ 20.9.2024)

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 17.09.2023ರಂದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಪ್ರಾರಂಭಿಸಿದರು, ಇದು ತಮ್ಮ ಕೈಗಳು ಮತ್ತು ಉಪಕರಣಗಳಿಂದ ಕೆಲಸ ಮಾಡುವ 18 ವೃತ್ತಿಗಳ ಕುಶಲಕರ್ಮಿಗಳು ಮತ್ತು ಕಸುಬುದಾರರಿಗೆ ಸಂಪೂರ್ಣ ಬೆಂಬಲ ಒದಗಿಸುತ್ತದೆ. ಯೋಜನೆ ಅನುಷ್ಠಾನಗೊಂಡ 2 ವರ್ಷಗಳಲ್ಲಿ 30 ಲಕ್ಷ ಫಲಾನುಭವಿ ನೋಂದಣಿ ಗುರಿಯನ್ನು ಯಶಸ್ವಿಯಾಗಿ ಸಾಧಿಸಲಾಗಿದೆ.

ಪಿಎಂ ವಿಶ್ವಕರ್ಮ ಯೋಜನೆಯಡಿ(2025 ಜನವರಿ 1ರಿಂದ ಡಿಸೆಂಬರ್ 5ರ ವರೆಗೆ) ಸಾಧಿಸಿರುವ ಪ್ರಮುಖ ಮೈಲಿಗಲ್ಲುಗಳು ಈ ಕೆಳಗಿನಂತಿವೆ:-

  • ಕೌಶಲ್ಯ ಉನ್ನತೀಕರಣ: 7.7 ಲಕ್ಷ ಫಲಾನುಭವಿಗಳು ಮೂಲ ಕೌಶಲ್ಯ ತರಬೇತಿ ಪೂರ್ಣಗೊಳಿಸಿದ್ದಾರೆ.
  • ಸಾಲ ಬೆಂಬಲ: ರಿಯಾಯಿತಿ ಬಡ್ಡಿ ದರದಲ್ಲಿ ಮೇಲಾಧಾರ-ಮುಕ್ತ ಸಾಲಗಳ ರೂಪದಲ್ಲಿ 2.62 ಲಕ್ಷ ಫಲಾನುಭವಿಗಳಿಗೆ 2,257 ಕೋಟಿ ರೂ. ಮಂಜೂರು ಮಾಡಲಾಗಿದೆ.
  • ಡಿಜಿಟಲ್ ಪ್ರೋತ್ಸಾಹ: 6.7 ಲಕ್ಷ ಫಲಾನುಭವಿಗಳು ಡಿಜಿಟಲ್ ಆಗಿ ಸಕ್ರಿಯಗೊಂಡಿದ್ದಾರೆ.
  • ಟೂಲ್‌ಕಿಟ್ ಪ್ರೋತ್ಸಾಹ: ಫಲಾನುಭವಿಗಳ ಮನೆ ಬಾಗಿಲಿಗೆ 10.57 ಲಕ್ಷ ಆಧುನಿಕ ಟೂಲ್‌ಕಿಟ್‌ಗಳನ್ನು ತಲುಪಿಸಲಾಗಿದೆ
  • ಮಾರುಕಟ್ಟೆ ಬೆಂಬಲ: ಕುಶಲಕರ್ಮಿಗಳು ಮತ್ತು ಅವರ ಕರಕುಶಲ ವಸ್ತುಗಳು ಮತ್ತು ಕೌಶಲ್ಯಗಳನ್ನು ಉತ್ತೇಜಿಸಲು ದೇಶಾದ್ಯಂತ 138 ವ್ಯಾಪಾರ ಮೇಳಗಳು, ಪ್ರದರ್ಶನಗಳು ಮತ್ತು ಕಾರ್ಯಾಗಾರಗಳನ್ನು ಆಯೋಜಿಸಲಾಗಿದೆ.

2.3.2 ಎಂಎಸ್ಎಂಇ ಕಾರ್ಯಕ್ಷಮತೆ ಹೆಚ್ಚಿಸುವ, ವೇಗಗೊಳಿಸುವ(RAMP) ಯೋಜನೆ

ಆರ್ ಎಎಂಪಿ(RAMP) ವಿಶ್ವ ಬ್ಯಾಂಕ್ ಬೆಂಬಲಿತ ಕೇಂದ್ರ ವಲಯ ಯೋಜನೆಯಾಗಿದೆ. ಮಾರುಕಟ್ಟೆ, ಹಣಕಾಸು ಮತ್ತು ತಂತ್ರಜ್ಞಾನ ಮೇಲ್ದರ್ಜೆಗೇರಿಸುವ ಮೂಲಕ ಎಂಎಸ್ಎಂಇಗಳ ಪ್ರವೇಶ ಸುಧಾರಿಸುವ ಗುರಿ ಹೊಂದಿದೆ. ಈ ಕಾರ್ಯಕ್ರಮವು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸಂಸ್ಥೆಗಳನ್ನು ಬಲಪಡಿಸುವುದು ಮತ್ತು ಕೇಂದ್ರ-ರಾಜ್ಯ ಸಹಯೋಗ ಹೆಚ್ಚಿಸುವ ಗುರಿ ಹೊಂದಿದೆ. ಇಲ್ಲಿಯವರೆಗೆ ಎಲ್ಲಾ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಲ್ಲಿಸಿದ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿಗಳು)ಗಳನ್ನು ಮೌಲ್ಯಮಾಪನ ಮಾಡಲಾಗಿದೆ. ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ 3211.75 ಕೋಟಿ ರೂ. ಮೊತ್ತದ 398 ಪ್ರಸ್ತಾವನೆಗಳನ್ನು ಅನುಮೋದಿಸಲಾಗಿದೆ. ಇದರ ಪ್ರಾರಂಭದಿಂದಲೂ ಆರ್ ಎಎಂಪಿ ಯೋಜನೆಯ ಎಲ್ಲಾ ಉಪಕ್ರಮಗಳು 10 ಲಕ್ಷಕ್ಕೂ ಹೆಚ್ಚು ಎಂಎಸ್ಎಂಇಗಳ ಮೇಲೆ ಪರಿಣಾಮ ಬೀರಿವೆ. ವಿತರಣೆಗಳನ್ನು ಪೂರ್ಣಗೊಳಿಸಿದ ಕಾರಣ, ಮರುಪಾವತಿ ಪಡೆಯುವ ವಿಷಯದಲ್ಲಿ ಸಚಿವಾಲಯವು ಕಾರ್ಯಕ್ರಮದ ಗುರಿಯ 50% ಸಾಧಿಸಿದೆ.

2.3.3 ಸಣ್ಣ, ಅತಿಸಣ್ಣ ಉದ್ಯಮಗಳ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮ(ಎಂಎಸ್‌ಇ-ಸಿಡಿಪಿ)

ಸಣ್ಣ, ಅತಿಸಣ್ಣ ಉದ್ಯಮಗಳ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮ(ಎಂಎಸ್‌ಇ-ಸಿಡಿಪಿ)ವನ್ನು 2003ರಲ್ಲಿ ಪ್ರಾರಂಭಿಸಲಾಯಿತು. 'ಸಾಮಾನ್ಯ ಸೌಲಭ್ಯ ಕೇಂದ್ರಗಳು(ಸಿಎಫ್‌ಸಿಗಳು), ಫ್ಲಾಟ್ ಕಾರ್ಖಾನೆಗಳು ಮತ್ತು ಕೈಗಾರಿಕಾ ಎಸ್ಟೇಟ್‌ಗಳ ರಚನೆ ಮತ್ತು ಮೇಲ್ದರ್ಜೀಕರಣಕ್ಕೆ ಹಣಕಾಸಿನ ನೆರವಿನ ಮೂಲಕ ಸಣ್ಣ, ಅತಿಸಣ್ಣ ಉದ್ಯಮಗಳ(ಎಂಎಸ್ಇಗಳು) ಉತ್ಪಾದಕತೆ ಮತ್ತು ಸ್ಪರ್ಧಾತ್ಮಕತೆ ಹೆಚ್ಚಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯಡಿ, 609 ಯೋಜನೆಗಳನ್ನು ಅನುಮೋದಿಸಲಾಗಿದೆ, ಅವುಗಳಲ್ಲಿ 353 ಯೋಜನೆಗಳು ಇಲ್ಲಿಯವರೆಗೆ ಪೂರ್ಣಗೊಂಡಿವೆ.

2025-26ನೇ ಹಣಕಾಸು ವರ್ಷದಲ್ಲಿ(20.11.2025 ರವರೆಗೆ) ಭಾರತ ಸರ್ಕಾರದ 177.52 ಕೋಟಿ ರೂ. ನೆರವಿನೊಂದಿಗೆ ಒಟ್ಟು 253.23 ಕೋಟಿ ರೂ. ಯೋಜನಾ ವೆಚ್ಚದ 11 ಯೋಜನೆಗಳನ್ನು ಅನುಮೋದಿಸಲಾಗಿದೆ, 2 ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ.

2.3.4 ಈಶಾನ್ಯ ಪ್ರದೇಶ ಮತ್ತು ಸಿಕ್ಕಿಂನಲ್ಲಿ ಎಂಎಸ್ಎಂಇಗಳ ಉತ್ತೇಜನ

ಎನ್‌ಇಆರ್ ಮತ್ತು ಸಿಕ್ಕಿಂನಲ್ಲಿ ಎಂಎಸ್ಎಂಇಗಳ ಉತ್ತೇಜನಕ್ಕಾಗಿ 2016ರಲ್ಲಿ ಯೋಜನೆ ಪ್ರಾರಂಭಿಸಲಾಯಿತು, 15ನೇ ಹಣಕಾಸು ಆಯೋಗಕ್ಕೆ ಅಂದರೆ 2021-2026ಕ್ಕೆ 295 ಕೋಟಿ ರೂ. ಬಜೆಟ್ ವೆಚ್ಚದೊಂದಿಗೆ ಯೋಜನೆ ಮುಂದುವರಿಸಲಾಗಿದೆ. ಇದು ಉತ್ಪಾದನೆ, ಪರೀಕ್ಷೆ, ಪ್ಯಾಕೇಜಿಂಗ್, ಸಂಶೋಧನೆ ಮತ್ತು ಅಭಿವೃದ್ಧಿ, ಉತ್ಪನ್ನ ಮತ್ತು ಪ್ರಕ್ರಿಯೆ ನಾವೀನ್ಯತೆಗಳು ಮತ್ತು ಕೌಶಲ್ಯ ಚಟುವಟಿಕೆಗಳನ್ನು ಪೂರೈಸಲು ಎನ್‌ಇಆರ್ ಪ್ರದೇಶದಲ್ಲಿ ಎಂಎಸ್ಎಂಇಗಳಿಗೆ ಮೂಲಸೌಕರ್ಯ ಮತ್ತು ಸಾಮಾನ್ಯ ಸೌಲಭ್ಯಗಳನ್ನು ರೂಪಿಸಲು ಅಥವಾ ನವೀಕರಿಸಲು ಹಣಕಾಸಿನ ನೆರವು ನೀಡುತ್ತದೆ.

ಈ ಯೋಜನೆಯು 3 ಘಟಕಗಳನ್ನು ಒಳಗೊಂಡಿದೆ, ಅವುಗಳೆಂದರೆ,

(i) ಅಸ್ತಿತ್ವದಲ್ಲಿರುವ ಮಿನಿ ತಂತ್ರಜ್ಞಾನ ಕೇಂದ್ರದ ಹೊಸ ಕೇಂದ್ರ ಸ್ಥಾಪನೆ ಮತ್ತು ಆಧುನೀಕರಣ,

(ii) ಹೊಸ ಮತ್ತು ಅಸ್ತಿತ್ವದಲ್ಲಿರುವ ಕೈಗಾರಿಕಾ ಎಸ್ಟೇಟ್‌ಗಳ ಅಭಿವೃದ್ಧಿ ಮತ್ತು

(iii) ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿ.

2025 ಡಿಸೆಂಬರ್ 15ರಂದು ಪ್ರಾರಂಭವಾದಾಗಿನಿಂದ ಈ ಯೋಜನೆಯಡಿ ಒಟ್ಟು 73 ಪ್ರಸ್ತಾವನೆಗಳನ್ನು ಅನುಮೋದಿಸಲಾಗಿದೆ. ಇದರಲ್ಲಿ 2025  ಜನವರಿಯಿಂದ ನವೆಂಬರ್ ಅವಧಿಯಲ್ಲಿ ಅನುಮೋದಿಸಲಾದ 8 ಮೂಲಸೌಕರ್ಯ ಯೋಜನೆಗಳು ಸೇರಿವೆ, ಇದರಲ್ಲಿ ಅಸ್ಸಾಂ ರಾಜ್ಯಕ್ಕೆ 4 ಯೋಜನೆಗಳು ಮತ್ತು ಮೇಘಾಲಯಕ್ಕೆ 4 ಯೋಜನೆಗಳು ಸೇರಿವೆ, ಭಾರತ ಸರ್ಕಾರದ ಅನುಮೋದಿತ ಅನುದಾನ 89.60 ಕೋಟಿ ರೂ. ಸೇರಿದಂತೆ ಒಟ್ಟು ಯೋಜನಾ ವೆಚ್ಚ 114.37 ಕೋಟಿ ರೂ. ಆಗಿದೆ.

2.4 ಖರೀದಿ ಮತ್ತು ಮಾರುಕಟ್ಟೆ ನೆರವು

2.4.1 ಸಣ್ಣ ಮತ್ತು ಅತಿಸಣ್ಣ ಉದ್ಯಮಗಳಿಗೆ ಸಾರ್ವಜನಿಕ ಖರೀದಿ ನೀತಿ

ದೇಶದ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳಿಗೆ ಖಚಿತವಾದ ಮಾರುಕಟ್ಟೆ ಬೆಂಬಲ ಒದಗಿಸಲು, ಭಾರತ ಸರ್ಕಾರದ ಎಂಎಸ್ಎಂಇ ಸಚಿವಾಲಯವು ಸಣ್ಣ ಮತ್ತು ಅತಿಸಣ್ಣ ಉದ್ಯಮಗಳಿಗೆ(ಎಂಎಸ್ಇಗಳು) ಸಾರ್ವಜನಿಕ ಖರೀದಿ ನೀತಿ, ಆದೇಶ-2012ಕ್ಕೆ  ಅಧಿಸೂಚನೆ ಹೊರಡಿಸಿದೆ, ಇದು ಕೇಂದ್ರ ಸಚಿವಾಲಯಗಳು, ಇಲಾಖೆಗಳು, ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು(ಸಿಪಿಎಸ್‌ಇಗಳು) ಎಂಎಸ್ಇಗಳಿಗೆ 25% ವಾರ್ಷಿಕ ಖರೀದಿಯನ್ನು ಕಡ್ಡಾಯಗೊಳಿಸುತ್ತದೆ, ಇದರಲ್ಲಿ ಎಸ್‌ಸಿ/ಎಸ್‌ಟಿ ಒಡೆತನದ ಎಂಎಸ್ಇಗಳಿಗೆ 4% ಮತ್ತು ಮಹಿಳಾ ಉದ್ಯಮಿಗಳ ಒಡೆತನದ ಎಂಎಸ್ಇಗಳಿಗೆ 3% ಸೇರಿವೆ. ಒಟ್ಟು 358 ವಸ್ತುಗಳನ್ನು ಎಂಎಸ್ಇಗಳ ವಿಶೇಷ ಖರೀದಿಗಾಗಿ ಕಾಯ್ದಿರಿಸಲಾಗಿದೆ.

ಕನಿಷ್ಠ 25% ವಾರ್ಷಿಕ ಖರೀದಿಗೆ ಹೋಲಿಸಿದರೆ, ಭಾಗವಹಿಸುವ ಸಿಪಿಎಸ್‌ಇಗಳು ಮತ್ತು ಇಲಾಖೆಗಳು 2024-25ನೇ ವರ್ಷದಲ್ಲಿ(19.12.25ರಂತೆ) ಎಂಎಸ್ಇಗಳಿಂದ ಒಟ್ಟು 93,017.08 ಕೋಟಿ (43.58%) ರೂ. ಸಂಗ್ರಹಿಸಿವೆ.

2.4.2 ಖರೀದಿ ಮತ್ತು ಮಾರುಕಟ್ಟೆ ಬೆಂಬಲ(ಪಿಎಂಎಸ್) ಯೋಜನೆ

ಈ ಯೋಜನೆಯು ಹೊಸ ಮಾರುಕಟ್ಟೆ ಪ್ರವೇಶ ಉಪಕ್ರಮಗಳನ್ನು ಉತ್ತೇಜಿಸುತ್ತದೆ. ಎಂಎಸ್ಎಂಇ ವಲಯದಲ್ಲಿ ಉತ್ಪನ್ನಗಳು ಮತ್ತು ಸೇವೆಗಳ ಮಾರುಕಟ್ಟೆ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. 2025–26ರ ಹಣಕಾಸು ವರ್ಷದಲ್ಲಿ(2025 ಜನವರಿ 1ರಿಂದ ನವೆಂಬರ್ 30ರ ವರೆಗೆ), ಖರೀದಿ ಮತ್ತು ಮಾರುಕಟ್ಟೆ ಬೆಂಬಲ(ಪಿಎಂಎಸ್) ಯೋಜನೆಯಡಿ ಒಟ್ಟು 225 ದೇಶೀಯ ವ್ಯಾಪಾರ ಮೇಳಗಳು, ವಸ್ತುಪ್ರದರ್ಶನಗಳು, ಎಕ್ಸ್ ಫೋಗಳನ್ನು ಆಯೋಜಿಸಲಾಗಿದೆ. ಯೋಜನೆಯ ವಿವಿಧ ಘಟಕಗಳ ಮೂಲಕ, ಈ ಅವಧಿಯಲ್ಲಿ 10,271 ಸಣ್ಣ ಮತ್ತು ಅತಿಸಣ್ಣ ಉದ್ಯಮಗಳು(ಎಂಎಸ್ಇಗಳು) ಪ್ರಯೋಜನ ಪಡೆದಿವೆ.

44ನೇ ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳ(ಐಐಟಿಎಫ್)-2025:

ಕೇಂದ್ರ ಎಂಎಸ್ಎಂಇ ಸಚಿವರು 17.11.2024ರಂದು ಐಐಟಿಎಫ್-2025ರಲ್ಲಿ “ಎಂಎಸ್ಎಂಇ, ಕೆವಿಐಸಿ, ಎನ್ಎಸ್ಎಸ್ಎಚ್ ಮತ್ತು ಸಿಒಐಆರ್ ಮಂಟಪಗಳನ್ನು” ಉದ್ಘಾಟಿಸಿದರು, ಗೌರವಾನ್ವಿತ ಎಂಎಸ್ಎಂಇ ರಾಜ್ಯ ಸಚಿವರೂ ಸಹ ಮೇಳಕ್ಕೆ ಭೇಟಿ ನೀಡಿದ್ದರು. ಈ ವರ್ಷ ಎಂಎಸ್ಎಂಇ ಮಂಟಪದ ವಸ್ತುವಿಷಯ "ಚೈತನ್ಯಶೀಲ ಎಂಎಸ್ಎಂಇಗಳು, ವಿಕಸಿತ ಭಾರತ" ಎಂಬುದಾಗಿತ್ತು. 'ಭಾರತದ ಸಬಲೀಕರಣ' ವಿಭಾಗದಲ್ಲಿ ಎಂಎಸ್ಎಂಇ ಸಚಿವಾಲಯಕ್ಕೆ ಬೆಳ್ಳಿ ಪದಕ ನೀಡಲಾಯಿತು.

ಏಕ್ ಭಾರತ ಶ್ರೇಷ್ಠ ಭಾರತದ ಮನೋಭಾವ ಪ್ರತಿಬಿಂಬಿಸುವ 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಣ್ಣ ಮತ್ತು ಅತಿಸಣ್ಣ ಉದ್ಯಮಗಳು(ಎಂಎಸ್ಇಗಳು) ಹಾಗೂ ವಿಶ್ವಕರ್ಮರಿಗೆ ಒಟ್ಟು 292 ಮಳಿಗೆಗಳನ್ನು ಹಂಚಿಕೆ ಮಾಡಲಾಗಿತ್ತು. ಇವುಗಳಲ್ಲಿ, 67% ಗಿಂತ ಹೆಚ್ಚು ಮಳಿಗೆಗಳನ್ನು ಮಹಿಳಾ ಉದ್ಯಮಿಗಳಿಗೆ ಹಂಚಿಕೆ ಮಾಡಲಾಗಿತ್ತು. ಆದರೆ 34%ಗಿಂತ ಹೆಚ್ಚು ಮಳಿಗೆಗಳನ್ನು ಎಸ್‌ಸಿ/ಎಸ್‌ಟಿ ಉದ್ಯಮಿಗಳಿಗೆ ಹಂಚಿಕೆ ಮಾಡಲಾಗಿತ್ತು.  ಹೆಚ್ಚುವರಿಯಾಗಿ, 15 ಮಳಿಗೆಗಳನ್ನು ಅಂಗವಿಕಲ ಉದ್ಯಮಿಗಳಿಗೆ ಒದಗಿಸಲಾಗಿತ್ತು. ಈ ಕಾರ್ಯಕ್ರಮವು ಪ್ರಾದೇಶಿಕ ವೈವಿಧ್ಯತೆಯನ್ನು ಎತ್ತಿ ತೋರಿಸುತ್ತದೆ, ಇದರಲ್ಲಿ ಭೌಗೋಳಿಕ ಸೂಚನೆ(ಜಿಐ)ಯ ಉತ್ಪನ್ನಗಳು(43 ಮಳಿಗೆಗಳು) ಮತ್ತು ಒಡಿಒಪಿ(ಒಂದು ಜಿಲ್ಲೆ ಒಂದು ಉತ್ಪನ್ನ) ವಸ್ತುಗಳಿಗೆ ಮೀಸಲಾಗಿರುವ 15 ಮಳಿಗೆಗಳಿದ್ದವು. ಗಮನಾರ್ಹವಾಗಿ, 288 ಮಳಿಗೆಗಳು(98%) ಮೊದಲ ಬಾರಿಗೆ ಅತಿಸಣ್ಣ ಉದ್ದಿಮೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು, 25%ಗಿಂತ ಹೆಚ್ಚು ಮಳಿಗೆಗಳನ್ನು ವಿಶ್ವಕರ್ಮರಿಗೆ ಹಂಚಿಕೆ ಮಾಡಲಾಗಿತ್ತು.

ಐಐಟಿಎಫ್-2025 ಕಾರ್ಯಕ್ರಮದಲ್ಲಿ ಎಂಎಸ್ಎಂಇ ಸಚಿವರು, ಸಹಾಯಕ ಸಚಿವರು ಎಂಎಸ್ಎಂಇ, ಕೆವಿಐಸಿ, ಎನ್ಎಸ್ಎಸ್ಎಚ್ ಮತ್ತು ಸಿಒಐಆರ್ ಮಂಟಪಗಳನ್ನು” ಉದ್ಘಾಟಿಸಿದರು.

 

3. ರಾಷ್ಟ್ರೀಯ ಎಸ್‌ಸಿ/ಎಸ್‌ಟಿ ಹಬ್(ಎನ್ಎಸ್ಎಸ್ಎಚ್) ಯೋಜನೆ

ಕೇಂದ್ರ ಸರ್ಕಾರದ ಸಾರ್ವಜನಿಕ ಖರೀದಿ ನೀತಿಯಲ್ಲಿ ನಿಗದಿಪಡಿಸಿದಂತೆ ಎಸ್‌ಸಿ/ಎಸ್‌ಟಿ ಒಡೆತನದ ಎಂಎಸ್ಇಗಳಿಂದ 4% ಸಾರ್ವಜನಿಕ ಖರೀದಿ ಆದೇಶವನ್ನು ಪೂರೈಸಲು ಎಸ್‌ಸಿ/ಎಸ್‌ಟಿ ಉದ್ಯಮಿಗಳ ಸಾಮರ್ಥ್ಯ ವರ್ಧನೆ ಮತ್ತು ಎಸ್‌ಸಿ/ಎಸ್‌ಟಿ ಜನಸಂಖ್ಯೆಯಲ್ಲಿ "ಉದ್ಯಮಶೀಲತಾ ಸಂಸ್ಕೃತಿ" ಉತ್ತೇಜಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. 2025 ಜನವರಿಯಿಂದ ಅಕ್ಟೋಬರ್  ವರೆಗೆ, 19,259 ಎಸ್‌ಸಿ/ಎಸ್‌ಟಿ ಉದ್ಯಮಿಗಳು ಎನ್ಎಸ್ಎಸ್ಎಚ್ ಯೋಜನೆಯ ವಿವಿಧ ಘಟಕಗಳ ಅಡಿ ಪ್ರಯೋಜನಗಳನ್ನು ಪಡೆದಿದ್ದಾರೆ.

ಪ್ರಸ್ತುತ ವರ್ಷದಲ್ಲಿ, 111 ವಿಶೇಷ ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮ (ಎಸ್‌ವಿಡಿಪಿಗಳು)ಗಳನ್ನು ವಿವಿಧ ಸ್ಥಳಗಳಲ್ಲಿ ಸಿಪಿಎಸ್‌ಇಗಳು, ಎಸ್‌ಸಿ/ಎಸ್‌ಟಿ ಉದ್ಯಮಿಗಳು ಮತ್ತು ಇತರೆ ಪಾಲುದಾರರೊಂದಿಗೆ ಆಯೋಜಿಸಲಾಗಿದೆ, ಇದು ಸಾರ್ವಜನಿಕ ಖರೀದಿ ಪ್ರಕ್ರಿಯೆಯಲ್ಲಿ ಸಂವೇದನೆ ಮತ್ತು ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ, ಬರಿಪಾದ ಮತ್ತು ಕೊರಾಪುಟ್, ಒಡಿಶಾ ಮತ್ತು ಬೋಧ್ ಗಯಾದಲ್ಲಿ 3 ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕ ಖರೀದಿ ನೀತಿಯಡಿ, ಕಡ್ಡಾಯ ಗುರಿ ಸಾಧಿಸುವಂತೆ ಸಿಪಿಎಸ್‌ಇಗಳನ್ನು ಸಕ್ರಿಯಗೊಳಿಸಲು ಮತ್ತು ಅವರ ಸವಾಲುಗಳನ್ನು ಅರ್ಥ ಮಾಡಿಕೊಳ್ಳಲು, 4 ಸುತ್ತಿನ ಚರ್ಚೆಗಳನ್ನು ನಡೆಸಲಾಯಿತು.

ಈ ಯೋಜನೆಯು ಗುರಿಯಾಧಾರಿತ ಫಲಾನುಭವಿಗಳ ಕೌಶಲ್ಯಗಳನ್ನು ಉನ್ನತೀಕರಿಸುವಲ್ಲಿ, ವೃತ್ತಿಪರ ಬೆಂಬಲವನ್ನು ಒದಗಿಸುವ ಮೂಲಕ, ಮಾರುಕಟ್ಟೆ ಸಂಪರ್ಕಗಳನ್ನು ಸುಗಮಗೊಳಿಸುವಲ್ಲಿ ಮತ್ತು ಹಸ್ತಚಾಲಿತ ಬೆಂಬಲ ಒದಗಿಸುವ ಮೂಲಕ ಸಕಾರಾತ್ಮಕ ಪರಿಣಾಮ ಬೀರಿದೆ, ಇದರ ಪರಿಣಾಮವಾಗಿ ಎಸ್‌ಸಿ/ಎಸ್‌ಟಿ ಒಡೆತನದ ಎಂಎಸ್ಇಗಳಿಂದ ಸಾರ್ವಜನಿಕ ಖರೀದಿ 37 ಪಟ್ಟು ಹೆಚ್ಚಳವಾಗಿದೆ(ಮೌಲ್ಯದ ದೃಷ್ಟಿಯಿಂದ). ಅಂದರೆ, 2015-16ರಲ್ಲಿ ಇದ್ದ 99.37 ಕೋಟಿ ರೂ.ನಿಂದ 2024-25ರಲ್ಲಿ   3731.47 ಕೋಟಿ ರೂ.ಗೆ ತಲುಪಿದೆ (ಎಂಎಸ್ಎಂಇ ಸಂಬಂಧ್ ಪೋರ್ಟಲ್). ಪ್ರಸ್ತುತ ಹಣಕಾಸು ವರ್ಷದಲ್ಲಿ ಇಲ್ಲಿಯವರೆಗೆ, ಸಾರ್ವಜನಿಕ ಖರೀದಿಯಲ್ಲಿ ಎಸ್‌ಸಿ/ಎಸ್‌ಟಿ ಒಡೆತನದ ಎಂಎಸ್ಇಗಳ ಪಾಲು 1.93% ಆಗಿದೆ. ಸಾರ್ವಜನಿಕ ಖರೀದಿಯಲ್ಲಿ ಎಸ್‌ಸಿ/ಎಸ್‌ಟಿ ಒಡೆತನದ ಎಂಎಸ್ಇಗಳ ಪಾಲು ಹಣಕಾಸು ವರ್ಷದ ಅಂತ್ಯದ ವೇಳೆಗೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.

2.5 ತಂತ್ರಜ್ಞಾನ ಪ್ರವೇಶ

2.5.1 ಎಂಎಸ್ಎಂಇ ಚಾಂಪಿಯನ್ ಯೋಜನೆ

ಎಂಎಸ್ಎಂಇ ಚಾಂಪಿಯನ್ಸ್ ಯೋಜನೆಯ ಉದ್ದೇಶವೆಂದರೆ, ಉದ್ಯಮಗಳನ್ನು ಆಯ್ಕೆ ಮಾಡುವುದು ಮತ್ತು ಅವುಗಳ ಪ್ರಕ್ರಿಯೆಗಳನ್ನು ಆಧುನೀಕರಿಸುವುದು, ವ್ಯರ್ಥ ಕಡಿಮೆ ಮಾಡುವುದು, ವ್ಯವಹಾರ ಸ್ಪರ್ಧಾತ್ಮಕತೆಯನ್ನು ತೀವ್ರಗೊಳಿಸುವುದು ಮತ್ತು ಅವುಗಳ ರಾಷ್ಟ್ರೀಯ ಮತ್ತು ಜಾಗತಿಕ ವ್ಯಾಪ್ತಿ ಮತ್ತು ಶ್ರೇಷ್ಠತೆಯನ್ನು ಸುಗಮಗೊಳಿಸುವುದಾಗಿದೆ. ಈ ಯೋಜನೆಯು 3 ಘಟಕಗಳನ್ನು ಹೊಂದಿದೆ, ಅವುಗಳೆಂದರೆ, 'ಎಂಎಸ್ಎಂಇ-ಸುಸ್ಥಿರ (ಝಡ್ಇಡಿ)', 'ಎಂಎಸ್ಎಂಇ ಸ್ಪರ್ಧಾತ್ಮಕ(ಲೀನ್)' ಮತ್ತು 'ಎಂಎಸ್ಎಂಇ-ನವೀನ(ಇನ್ ಕ್ಯುಬೇಷನ್, ವಿನ್ಯಾಸ ಮತ್ತು ಐಪಿಆರ್)'.

I. ಎಂಎಸ್ಎಂಇ ನವೀನ ಯೋಜನೆಯನ್ನು 2022 ಮಾರ್ಚ್ 10ರಂದು ಇನ್ ಕ್ಯುಬೇಷನ್, ವಿನ್ಯಾಸ ಮತ್ತು ಐಪಿಆರ್ ಎಂಬ 3 ಘಟಕಗಳೊಂದಿಗೆ ಪ್ರಾರಂಭಿಸಲಾಯಿತು. 'ಇನ್ ಕ್ಯುಬೇಷನ್' ಘಟಕದ ಅಡಿ, 773 ಆಯೋಜಕ(ಹೋಸ್ಟ್) ಸಂಸ್ಥೆಗಳು(ಎಚ್ಐಎಸ್) ಅನುಮೋದಿಸಲ್ಪಟ್ಟಿವೆ, ಇದು ಸರಿಯಾದ ಆಯ್ಕೆ ಪ್ರಕ್ರಿಯೆಯ ಮೂಲಕ ಅನುಮೋದಿಸಲಾದ ನವೀನ ವಿಚಾರಗಳ ಅಭಿವೃದ್ಧಿಯನ್ನು ಪೋಷಿಸುತ್ತದೆ. ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಎಂಎಸ್ಎಂಇ ದಿನ ಅಂದರೆ 2025 ಜೂನ್ 27ರಂದು ಎಂಎಸ್ಎಂಇ ಐಡಿಯಾ ಹ್ಯಾಕಥಾನ್ 5.0 (ಸ್ಮಾರ್ಟ್ ಮತ್ತು ಸುಸ್ಥಿರ ಎಂಎಸ್ಎಂಇಗಳು) ಪ್ರಾರಂಭಿಸಿದರು. ಹ್ಯಾಕಥಾನ್ 5.0 ಅಡಿ ಸಚಿವಾಲಯವು 52,369 ವಿಚಾರಗಳನ್ನು ಸ್ವೀಕರಿಸಿದೆ. 'ವಿನ್ಯಾಸ' ಘಟಕದ ಅಡಿ 21 ಒಪ್ಪಂದಗಳಿಗೆ ಸಹಿ ಹಾಕಲಾಗಿದೆ - 01 ಐಐಎಸ್ಸಿ  ಬೆಂಗಳೂರು, 08 ಐಐಟಿಗಳು, 12 ಎನ್ಐಟಿಗಳು ಅನುಷ್ಠಾನ ಏಜೆನ್ಸಿಗಳಾಗಿ ಮತ್ತು 69 ವೃತ್ತಿಪರ ವಿನ್ಯಾಸ/ವಿದ್ಯಾರ್ಥಿ ಯೋಜನೆಗಳನ್ನು ಅನುಮೋದಿಸಲಾಗಿದೆ. 'ಐಪಿಆರ್' ಘಟಕದ ಅಡಿ 191 ಪೇಟೆಂಟ್‌ಗಳು, 807 ಟ್ರೇಡ್‌ಮಾರ್ಕ್‌ಗಳು, 99 ವಿನ್ಯಾಸಗಳು ಮತ್ತು 06 ಜಿಐ ನೋಂದಣಿಯನ್ನು ಬೌದ್ಧಿಕ ಆಸ್ತಿ ಸೌಲಭ್ಯ ಕೇಂದ್ರ(ಐಪಿಎಫ್‌ಸಿಗಳು)ಗಳು ಅನುಮೋದಿಸಿವೆ.

II. 2022 ಏಪ್ರಿಲ್ 28ರಂದು ಪ್ರಾರಂಭಿಸಲಾದ ಎಂಎಸ್ಎಂಇ ಸುಸ್ಥಿರ(ಝಡ್ಇಡಿ) ಪ್ರಮಾಣೀಕರಣ ಯೋಜನೆಯು ವರ್ಷದಲ್ಲಿ ಗಮನಾರ್ಹ ಪ್ರಗತಿ ಕಂಡಿದೆ. ಈ ಯೋಜನೆಯಡಿ ಒಟ್ಟು 2,71,373 ಎಂಎಸ್ಎಂಇಗಳು ನೋಂದಾಯಿಸಲ್ಪಟ್ಟಿದ್ದು, 1,92,689 ಉದ್ಯಮಗಳನ್ನು ಯಶಸ್ವಿಯಾಗಿ ಪ್ರಮಾಣೀಕರಿಸಲಾಗಿದೆ - 1,89,268 ಕಂಚು, 1,913 ಬೆಳ್ಳಿ ಮತ್ತು 1,508 ಚಿನ್ನದ ಪ್ರಮಾಣೀಕರಣಗಳು ಇದರಲ್ಲಿ ಸೇರಿವೆ. ಈ ಪ್ರಮಾಣೀಕರಣಗಳು ಉದ್ಯಮಗಳು ತಮ್ಮ ಗುಣಮಟ್ಟ, ಉತ್ಪಾದಕತೆ ಮತ್ತು ಒಟ್ಟಾರೆ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವಲ್ಲಿ ಬೆಂಬಲ ನೀಡಿವೆ.

III. 2023 ಮಾರ್ಚ್ 10ರಂದು ಪ್ರಾರಂಭಿಸಲಾದ ಎಂಎಸ್ಎಂಇ ಸ್ಪರ್ಧಾತ್ಮಕ(ಲೀನ್) ಯೋಜನೆಯು ವರ್ಷದಲ್ಲಿ ಗಮನಾರ್ಹ ಆಕರ್ಷಣೆ ಪಡೆದಿದೆ. ಈ ಯೋಜನೆಯಡಿ, ಒಟ್ಟು 32,077 ಎಂಎಸ್ಎಂಇಗಳು ನೋಂದಾಯಿಸಲ್ಪಟ್ಟಿವೆ, 31,987 ಎಂಎಸ್ಎಂಇಗಳು ನೇರ ಸಂಕಲ್ಪ ಸ್ವೀಕರಿಸಿವೆ. ಇದಲ್ಲದೆ, 7,394 ಎಂಎಸ್ಎಂಇಗಳು ಮೂಲ ನೇರ ಪ್ರಮಾಣೀಕರಣ ಪಡೆದುಕೊಂಡಿವೆ, 1,871 ಎಂಎಸ್ಎಂಇಗಳು ಯೋಜನೆಯ ಮಧ್ಯಂತರ ಮಟ್ಟದಲ್ಲಿ ನೋಂದಾಯಿಸಲ್ಪಟ್ಟಿವೆ.

2.5.2 ತಂತ್ರಜ್ಞಾನ ಕೇಂದ್ರಗಳು

* ಪರಿಕರ ಕೊಠಡಿಗಳು ಮತ್ತು ತಾಂತ್ರಿಕ ಸಂಸ್ಥೆಗಳು: ಎಂಎಸ್ಎಂಇ ಸಚಿವಾಲಯವು 1,967ರಿಂದ 1999ರ ವರೆಗೆ 18 ಪರಿಕರ ಕೊಠಡಿಗಳು ಮತ್ತು ತಾಂತ್ರಿಕ ಸಂಸ್ಥೆಗಳನ್ನು(ಟಿಆರ್ ಗಳು & ಟಿಐಗಳು) ಸ್ಥಾಪಿಸಿದೆ, ಇದು ಸಾಮಾನ್ಯ ಎಂಜಿನಿಯರಿಂಗ್, ಫೋರ್ಜಿಂಗ್ ಮತ್ತು ಫೌಂಡ್ರಿ, ಎಲೆಕ್ಟ್ರಾನಿಕ್ಸ್, ವಿದ್ಯುತ್ ಅಳತೆ ಉಪಕರಣಗಳು, ಸುಗಂಧ ಮತ್ತು ಸುವಾಸನೆ, ಗಾಜು, ಪಾದರಕ್ಷೆಗಳು ಮತ್ತು ಕ್ರೀಡಾ ಸಾಮಗ್ರಿಗಳು ಇತ್ಯಾದಿ ಕ್ಷೇತ್ರಗಳಲ್ಲಿ ಉಪಕರಣಗಳು, ನಿಖರ ಘಟಕಗಳು, ಅಚ್ಚುಗಳು, ಡೈಗಳು ಇತ್ಯಾದಿಗಳ ವಿನ್ಯಾಸ ಮತ್ತು ತಯಾರಿಕೆಯ ಮೂಲಕ ಕೈಗಾರಿಕೆಗಳಿಗೆ ತಾಂತ್ರಿಕ ಬೆಂಬಲ ಒದಗಿಸುತ್ತದೆ. ಸಾಮಾನ್ಯವಾಗಿ, ಇವುಗಳನ್ನು ತಂತ್ರಜ್ಞಾನ ಕೇಂದ್ರಗಳು(ಟಿಸಿಗಳು) ಎಂದು ಕರೆಯಲಾಗುತ್ತದೆ. ಕೆಲವು ಟಿಸಿಗಳು ಸಂಕೀರ್ಣ ಉಪಕರಣಗಳು, ಬಿಡಿ ಭಾಗಗಳು ಮತ್ತು ಘಟಕಗಳಿಗೆ ವಿನ್ಯಾಸ, ಅಭಿವೃದ್ಧಿ ಮತ್ತು ಉತ್ಪಾದನಾ ಬೆಂಬಲವನ್ನು ಎಂಎಸ್ಎಂಇಗಳಿಗೆ ವಿಸ್ತರಿಸುವ ಜತೆಗೆ ರಕ್ಷಣೆ, ಏರೋಸ್ಪೇಸ್ ಇತ್ಯಾದಿ ಕಾರ್ಯತಂತ್ರ ವಲಯಗಳನ್ನು ಸಹ ಬೆಂಬಲಿಸಿವೆ. ಟಿಸಿಗಳು ಉದ್ಯಮಕ್ಕೆ ಸಿದ್ಧವಾಗಿರುವ ಮಾನವಶಕ್ತಿಗಾಗಿ ಯುವಕರಿಗೆ ಕೌಶಲ್ಯ ಒದಗಿಸುತ್ತವೆ,  ಉದ್ಯಮದ ಅಗತ್ಯಕ್ಕೆ ಅನುಗುಣವಾಗಿ ಉದ್ಯಮ ಕಾರ್ಯಪಡೆಗೆ ಮರು-ಕೌಶಲ್ಯ ಒದಗಿಸುತ್ತವೆ.

* ಹೊಸ ತಂತ್ರಜ್ಞಾನ ಕೇಂದ್ರಗಳು/ವಿಸ್ತರಣಾ ಕೇಂದ್ರಗಳ(ಟಿಸಿಇಸಿ) ಸ್ಥಾಪನೆ: ಎಂಎಸ್ಎಂಇ ಸಚಿವಾಲಯವು ದೇಶಾದ್ಯಂತ 20 ಹೊಸ ತಂತ್ರಜ್ಞಾನ ಕೇಂದ್ರಗಳು(ಟಿಸಿಗಳು) ಮತ್ತು 100 ವಿಸ್ತರಣಾ ಕೇಂದ್ರಗಳನ್ನು(ಇಸಿಗಳು) ಸ್ಥಾಪಿಸಲು ಟಿಸಿಇಸಿ ಯೋಜನೆಯನ್ನು ಜಾರಿಗೊಳಿಸುತ್ತಿದೆ. ಇದು ಎಂಎಸ್ಎಂಇಗಳ ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ತಂತ್ರಜ್ಞಾನ, ಕೌಶಲ್ಯಪೂರ್ಣ ಮಾನವ ಸಂಪನ್ಮೂಲಗಳು ಮತ್ತು ಸಲಹಾ ಸೇವೆಗಳನ್ನು ಒದಗಿಸಲು ಟಿಸಿಗಳ ಜಾಲದ ಭೌಗೋಳಿಕ ವ್ಯಾಪ್ತಿಯನ್ನು ಹೆಚ್ಚಿಸುತ್ತದೆ. ಇದು ತಳಮಟ್ಟದಲ್ಲಿ ಎಂಎಸ್ಎಂಇಗಳ ಸ್ಪರ್ಧಾತ್ಮಕತೆ ಮತ್ತು ಲಾಭದಾಯಕತೆಯನ್ನು ಹೆಚ್ಚಿಸುತ್ತದೆ.

20 ಟಿಸಿಗಳಿಗೆ ಅಗತ್ಯವಾದ ಸ್ಥಳಗಳನ್ನು ಒದಗಿಸಲು ಗೌರವಾನ್ವಿತ ಎಂಎಸ್ಎಂಇ ಸಚಿವರು ಅನುಮೋದನೆ ನೀಡಿದ್ದಾರೆ, ಈ ಯೋಜನೆಯು ಅನುಷ್ಠಾನ ಹಂತದಲ್ಲಿದೆ. ಈ ಯೋಜನೆಯಡಿ ಸ್ಥಾಪಿಸಲಾಗುವ 100 ವಿಸ್ತರಣಾ ಕೇಂದ್ರಗಳಲ್ಲಿ(ಇಸಿಗಳು) 64 ಸ್ಥಳಗಳನ್ನು ಗೌರವಾನ್ವಿತ ಎಂಎಸ್ಎಂಇ ಸಚಿವರು ಅನುಮೋದಿಸಿದ್ದಾರೆ. ಈ 64 ಸ್ಥಳಗಳಲ್ಲಿ 25 ಸ್ಥಳಗಳಲ್ಲಿ ಇಸಿಗಳು ಕಾರ್ಯ ನಿರ್ವಹಿಸಲು ಪ್ರಾರಂಭಿಸಿವೆ. ಈ 25 ವಿಸ್ತರಣಾ ಕೇಂದ್ರಗಳು (ಕಾರ್ಯಾಚರಣೆಯಲ್ಲಿವೆ) 53,963 ತರಬೇತಿದಾರರಿಗೆ ತರಬೇತಿ ನೀಡಿ, 1,357 ಘಟಕಗಳಿಗೆ ಸಹಾಯ ಮಾಡಿವೆ.

ಟೆಕ್ನಾಲಜಿ ಸೆಂಟರ್ ಸಿಸ್ಟಮ್ ಪ್ರೋಗ್ರಾಂ(ಟಿಸಿಎಸ್‌ಪಿ) ಅನ್ನು 2014ರಲ್ಲಿ ಕೇಂದ್ರ ಸಚಿವ ಸುಂಟ ಸಭೆ(ಸಿಸಿಇಎ) ಅನುಮೋದಿಸಿದೆ. ಟಿಸಿಎಸ್‌ಪಿ ವಿಶ್ವಬ್ಯಾಂಕ್ ನೆರವಿನೊಂದಿಗೆ ಅಂದಾಜು 2,200 ಕೋಟಿ ರೂ. ವೆಚ್ಚದಲ್ಲಿ 15 ಹೊಸ ತಂತ್ರಜ್ಞಾನ ಕೇಂದ್ರ(ಟಿಸಿಗಳು) ಗಳನ್ನು ಸ್ಥಾಪಿಸಲು ಮತ್ತು ಅಸ್ತಿತ್ವದಲ್ಲಿರುವ ಟಿಸಿಗಳನ್ನು ಆಧುನೀಕರಿಸಲು /ಮೇಲ್ದರ್ಜೆಗೇರಿಸುವ ಗುರಿ ಹೊಂದಿದೆ. ಈ ಯೋಜನೆಯನ್ನು 2026 ಸೆಪ್ಟೆಂಬರ್ ವರೆಗೆ ವಿಸ್ತರಿಸಲಾಗಿದ್ದು, ಇದರ ಪರಿಷ್ಕೃತ ಅಂದಾಜು ವೆಚ್ಚ 2402 ಕೋಟಿ ರೂ. ಆಗಿದೆ.

ಒಂಬತ್ತು (9) ತಂತ್ರಜ್ಞಾನ ಕೇಂದ್ರಗಳನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ. ಈ ಕೇಂದ್ರಗಳು ಭಿವಾಡಿ(ರಾಜಸ್ಥಾನ), ವಿಶಾಖಪಟ್ಟಣ(ಆಂಧ್ರಪ್ರದೇಶ), ಭೋಪಾಲ್(ಮಧ್ಯಪ್ರದೇಶ), ರೋಹ್ಟಕ್(ಹರಿಯಾಣ), ಕಾನ್ಪುರ(ಉತ್ತರ ಪ್ರದೇಶ), ಗ್ರೇಟರ್ ನೋಯ್ಡಾ(ಉತ್ತರ ಪ್ರದೇಶ), ಬಡ್ಡಿ(ಹಿಮಾಚಲ ಪ್ರದೇಶ), ಇಂಫಾಲ್(ಮಣಿಪುರ) ಮತ್ತು ಪುದುಚೇರಿಯಲ್ಲಿವೆ. ಬೆಂಗಳೂರು, ಸಿತಾರ್‌ಗಂಜ್ ಮತ್ತು ಪಾಟ್ನಾದಲ್ಲಿ ಟಿಸಿಗಳ ಸಿವಿಲ್ ಕಾಮಗಾರಿಗಳು ಪೂರ್ಣಗೊಂಡಿದ್ದು, ತರಬೇತಿ ಚಟುವಟಿಕೆಗಳು ಪ್ರಾರಂಭವಾಗಿವೆ. 8 ಟಿಸಿಗಳು ಅಂದರೆ ಭಿವಾಡಿ, ವೈಜಾಗ್, ರೋಹ್ಟಕ್, ಭೋಪಾಲ್, ಬಡ್ಡಿ, ಕಾನ್ಪುರ, ದುರ್ಗ್ ಮತ್ತು ಸಿತಾರ್‌ಗಂಜ್ ಈಗಾಗಲೇ ಎಐಸಿಟಿಇ ಅನುಮೋದಿತ ಡಿಪ್ಲೊಮಾ ಕೋರ್ಸ್‌ಗಳನ್ನು ಪ್ರಾರಂಭಿಸಿವೆ.

ಈ ಹೊಸ ಟಿಸಿಗಳು 2025ರ ಜನವರಿ-ನವೆಂಬರ್ ನಡುವೆ 1,520 ಎಂಎಸ್‌ಎಂಇಗಳಿಗೆ ಸಹಾಯ ಮಾಡಿವೆ ಮತ್ತು 59,357 ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಿವೆ.

6. ಕೌಶಲ್ಯ ಮತ್ತು ತರಬೇತಿ

2. ಉದ್ಯಮಶೀಲತಾ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ(ಇಎಸ್‌ಡಿಪಿ):

2025 ಜನವರಿಯಿಂದ ಡಿಸೆಂಬರ್ 11ರ ವರೆಗೆ ಈ ಯೋಜನೆಯಡಿ ಒಟ್ಟು 8,263 ಕಾರ್ಯಕ್ರಮಗಳನ್ನು ನಡೆಸಲಾಗಿದ್ದು, 3,96,706 ಜನರಿಗೆ ಪ್ರಯೋಜನ ಲಭಿಸಿದೆ.

2.6.1 ತರಬೇತಿ ಸಂಸ್ಥೆಗಳಿಗೆ (ಎಟಿಐ) ಸಹಾಯ:

ಎಟಿಐ ಅಡಿ  ಸಚಿವಾಲಯದ ಅಧೀನದಲ್ಲಿರುವ ತರಬೇತಿ ಸಂಸ್ಥೆಗಳಾದ ಎನ್ಐ-ಎಂಎಸ್ಎಂಇ, ಕೆವಿಐಸಿ, ಕಾಯಿರ್ ಬೋರ್ಡ್, ಟೂಲ್ ರೂಮ್‌ಗಳು, ಎನ್‌ಎಸ್‌ಐಸಿ ಮತ್ತು ಎಂಜಿಐಆರ್ ಐಗಳಿಗೆ ಮೂಲಸೌಕರ್ಯ ಸೃಷ್ಟಿಸುವ ಮತ್ತು ಬಲಪಡಿಸುವ ಉದ್ದೇಶಕ್ಕಾಗಿ ಮತ್ತು ಉದ್ಯಮಶೀಲತಾ ಅಭಿವೃದ್ಧಿ ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳಿಗೆ ಬೆಂಬಲ ನೀಡುವ ಉದ್ದೇಶಕ್ಕಾಗಿ ಬಂಡವಾಳ ಅನುದಾನದ ರೂಪದಲ್ಲಿ ಸಹಾಯ ನೀಡಲಾಗುತ್ತದೆ. ಅಸ್ತಿತ್ವದಲ್ಲಿರುವ ರಾಜ್ಯ ಮಟ್ಟದ ಇಡಿಐಗಳು, ಪೂರ್ವ ಪ್ರದೇಶದಲ್ಲಿ ನೆಲೆಗೊಂಡಿರುವ ಜಿಲ್ಲಾ ಕೈಗಾರಿಕಾ ಕೇಂದ್ರಗಳು(ಡಿಐಸಿಗಳು) ಸೇರಿದಂತೆ ರಾಜ್ಯ ಸರ್ಕಾರಿ ಸ್ವಾಮ್ಯದ ತರಬೇತಿ ಸಂಸ್ಥೆಗಳು ಮತ್ತು ಎನ್ಇಆರ್ ಗಳಿಗೆ ಅವುಗಳ ತರಬೇತಿ ಮೂಲಸೌಕರ್ಯ ರೂಪಿಸಲು ಅಥವಾ ಬಲಪಡಿಸಲು/ವಿಸ್ತರಿಸಲು ಮೂಲಸೌಕರ್ಯ ಬೆಂಬಲಕ್ಕಾಗಿ ಸಹಾಯ ನೀಡಲಾಗುತ್ತದೆ. 2021-22ನೇ ಹಣಕಾಸು ವರ್ಷದಿಂದ 2024-25ನೇ ಹಣಕಾಸು ವರ್ಷದವರೆಗೆ, 42,719 ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಾಗಿದೆ, 19 ಸಂಸ್ಥೆಗಳು/ಸಂಘ ಸಂಸ್ಥೆಗಳು/ರಾಜ್ಯ ಮಟ್ಟದ ಇಡಿಐಗಳಿಗೆ ಬೆಂಬಲ ನೀಡಲಾಗಿದೆ, ಈ ಯೋಜನೆಯಡಿ ಒಟ್ಟು 108.22 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದಲ್ಲದೆ, ಒಟ್ಟು 8,060 ಪ್ರಶಿಕ್ಷಣಾರ್ಥಿಗಳು ತರಬೇತಿ ಪಡೆದಿದ್ದಾರೆ ಮತ್ತು 9 ಸಂಸ್ಥೆಗಳು/ಸಂಘ ಸಂಸ್ಥೆಗಳಿಗೆ ಇದುವರೆಗೆ ಬೆಂಬಲ ನೀಡಲಾಗಿದೆ, 2025-26 ರ ಹಣಕಾಸು ವರ್ಷದ ನವೆಂಬರ್ ವೇಳೆಗೆ ಒಟ್ಟು 26.98 ಕೋಟಿ ರೂ. ವೆಚ್ಚವಾಗಿದೆ.

7. ಐಟಿ (ಮಾಹಿತಿ ತಂತ್ರಜ್ಞಾನ) ಉಪಕ್ರಮಗಳು ಮತ್ತು ಸೈಬರ್ ಭದ್ರತೆ:

2.7.1 ಸೈಬರ್ ಭದ್ರತಾ ಜಾಗೃತಿ ಮಾಸಗಳು: ಎಂಎಸ್ಎಂಇ ಸಚಿವಾಲಯವು "ಸೈಬರ್ ಜಾಗೃತಿ ಭಾರತ್" ಎಂಬ ವಿಷಯದ ಅಡಿ ರಾಷ್ಟ್ರೀಯ ಸೈಬರ್ ಭದ್ರತಾ ಜಾಗೃತಿ ಮಾಸ (ಅಕ್ಟೋಬರ್ 2025) ಆಚರಿಸಿತು, ಅದರ ಸೈಬರ್ ಭದ್ರತಾ ಚೌಕಟ್ಟು ಅಥವಾ ಮಾರ್ಗಸೂಚಿ ಬಲಪಡಿಸಲು ಅಧಿಕಾರಿಗಳು, ಪಾಲುದಾರರು ಮತ್ತು ಎಂಎಸ್ಎಂಇಗಳಲ್ಲಿ ಜಾಗೃತಿ ಉತ್ತೇಜಿಸಲು ಉಪಕ್ರಮಗಳನ್ನು ಪ್ರಾರಂಭಿಸಿತು. ಪ್ರಮುಖ ಚಟುವಟಿಕೆಗಳಲ್ಲಿ 2025 ಅಕ್ಟೋಬರ್ 8ರಂದು 500ಕ್ಕೂ ಹೆಚ್ಚಿನ ಅಧಿಕಾರಿಗಳಿಗಾಗಿ ಭಾರತೀಯ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ(CERT-In) ಸೈಬರ್ ಭದ್ರತಾ ಕಲಾಪ ನಡೆಸಲಾಯಿತು, ಪ್ರಾಯೋಗಿಕ ನಿಯಂತ್ರಣಗಳು, ಪಾಸ್‌ವರ್ಡ್ ನೀತಿಗಳು ಮತ್ತು ಸೈಬರ್ ನೈರ್ಮಲ್ಯದ ಮೇಲೆ ಗಮನ ಕೇಂದ್ರೀಕರಿಸಲಾಯಿತು, ನಂತರ 2025 ಅಕ್ಟೋಬರ್ 15ರಂದು ಸೈಬರ್ ಹೊಂದಾಣಿಕೆ ನಿರ್ಮಿಸುವ ಕುರಿತು ಜ್ಞಾನ ಕಲಾಪ ನಡೆಸಲಾಯಿತು, ಇದರಲ್ಲಿ ಗುಪ್ತಚರ ಸಮ್ಮಿಳನ ಮತ್ತು ಕಾರ್ಯತಂತ್ರ ಕಾರ್ಯಾಚರಣೆಗಳು(ವಿಶೇಷ ಕೋಶ), ದೆಹಲಿ ಪೊಲೀಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕಿನ ಹಿರಿಯ ಅಧಿಕಾರಿಗಳು ಸೇರಿದಂತೆ 1,300ಕ್ಕೂ ಹೆಚ್ಚಿನ ಪ್ರತಿನಿಧಿಗಳು ಭಾಗವಹಿಸಿದ್ದರು.

2.7.2 ಕಾರ್ಯಕ್ಷಮತೆ ಸ್ಮಾರ್ಟ್‌ಬೋರ್ಡ್(https://dashboard.msme.gov.in): ಎಂಎಸ್ಎಂಇ ಸಚಿವಾಲಯವು ಕಾರ್ಯಕ್ಷಮತೆ ಸ್ಮಾರ್ಟ್‌ಬೋರ್ಡ್ ಅಭಿವೃದ್ಧಿಪಡಿಸಿದೆ, ಇದು ಕೇಂದ್ರೀಕೃತ ಡ್ಯಾಶ್‌ಬೋರ್ಡ್ ಆಗಿದ್ದು, ಇದು ಮಾರುಕಟ್ಟೆ ಬೆಂಬಲ, ಕ್ರೆಡಿಟ್ ಮತ್ತು ಹಣಕಾಸು ಸೌಲಭ್ಯ, ತಂತ್ರಜ್ಞಾನ ಮೂಲಸೌಕರ್ಯ ಮತ್ತು ಸಕ್ರಿಯಗೊಳಿಸುವಿಕೆ, ತರಬೇತಿ ಮತ್ತು ಉದ್ಯಮಶೀಲತೆ ಅಭಿವೃದ್ಧಿ, ಕುಂದುಕೊರತೆ ಪರಿಹಾರ ಕಾರ್ಯವಿಧಾನಗಳು ಮತ್ತು ಪ್ರಮುಖ ಯೋಜನೆಗಳು ಮತ್ತು ಉದ್ಯಮ ಪೋರ್ಟಲ್ ಒಳನೋಟಗಳು ಮುಂತಾದ ವಿಶಾಲ ವಿಷಯಾಧಾರಿತ ಕ್ಷೇತ್ರಗಳ ಅಡಿ ಪ್ರಮುಖ ಕಾರ್ಯಕ್ಷಮತೆ ಸೂಚಕಗಳ ಮೇಲೆ ಬೆಳಕು ಚೆಲ್ಲುತ್ತದೆ. ಸ್ಮಾರ್ಟ್‌ಬೋರ್ಡ್ ಎಂಎಸ್ಎಂಇ ಯೋಜನೆಗೆ ಸಂಬಂಧಿಸಿದ ಕಾರ್ಯಕ್ಷಮತೆಯ ನಿಯತಾಂಕಗಳನ್ನು ಒಟ್ಟುಗೂಡಿಸುವ ಮೂಲಕ, ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರಸಾರ ಮಾಡುವ ಮೂಲಕ ಪಾರದರ್ಶಕತೆ ಉತ್ತೇಜಿಸುತ್ತದೆ. ಇದರ ಮೂಲಕ, ಎಂಎಸ್ಎಂಇ ಯೋಜನೆಯ ಕಾರ್ಯಕ್ಷಮತೆಯ ದತ್ತಾಂಶವನ್ನು ಸುಲಭವಾಗಿ ಪ್ರವೇಶಿಸುತ್ತದೆ. ನೋಂದಣಿಗಳು, ಹಣಕಾಸಿನ ಅರ್ಹತೆ ಮತ್ತು ಅನುಸರಣೆಯ ಕುರಿತು ತಿಳಿವಳಿಕೆಯುಳ್ಳ ನಿರ್ಧಾರಗಳಿಗೆ ಸಹಾಯ ಮಾಡುತ್ತದೆ, ಪಾಲುದಾರರು ಮತ್ತು ನಾಗರಿಕರು ನವೀಕರಿಸಿದ ಡ್ಯಾಶ್‌ಬೋರ್ಡ್ ಅನ್ನು ಇಲ್ಲಿ ಪ್ರವೇಶಿಸಬಹುದು: https://dashboard.msme.gov.in.

ಕಾರ್ಯಕ್ಷಮತೆ ಸ್ಮಾರ್ಟ್‌ಬೋರ್ಡ್ (https://dashboard.msme.gov.in)

7. ಪಿಎಂ ಗತಿಶಕ್ತಿ: ಎಂಎಸ್ಎಂಇ ಸಚಿವಾಲಯವು 8 ವಿಷಯಾಧಾರಿತ ಜಿಐಎಸ್ ಪದರಗಳು ಮತ್ತು ಕ್ಷೇತ್ರ ರಚನೆಗಳು ಸೇರಿದಂತೆ 44 ಉಪಪದರಗಳಲ್ಲಿ ಸುಮಾರು 1 ಲಕ್ಷ ಸ್ವತ್ತುಗಳನ್ನು ಜಿಯೋ ಮ್ಯಾಪಿಂಗ್ ಮಾಡುವ ಮೂಲಕ ಪಿಎಂ ಗತಿಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್‌ನೊಂದಿಗೆ ಡಿಜಿಟಲ್ ಯೋಜನೆಯನ್ನು ಜೋಡಿಸಿದೆ. ಈ ಅಂತ್ಯದಿಂದ ಕೊನೆಯವರೆಗಿನ ಜಿಯೋ ಸಕ್ರಿಯಗೊಳಿಸುವಿಕೆಯು ಝಡ್ಇಡಿ ಪ್ರಮಾಣೀಕೃತ ಎಂಎಸ್ಎಂಇಗಳು ಮತ್ತು 93,823 ಪಿಎಂಇಜಿಪಿ ಫಲಾನುಭವಿಗಳನ್ನು ವ್ಯಾಪಿಸಿದೆ. ಮೊಬೈಲ್ ಅಪ್ಲಿಕೇಶನ್, 3 ಹಂತದ ಮೌಲ್ಯೀಕರಣ ಕಾರ್ಯವಿಧಾನ ಮತ್ತು ಲೈವ್ ಆಡಳಿತಾತ್ಮಕ ಡ್ಯಾಶ್‌ಬೋರ್ಡ್ ಮೂಲಕ ನಿಯಮಿತ ಮಾಹಿತಿ ನವೀಕರಣಗಳ ಮೂಲಕ ನಿರಂತರವಾಗಿದೆ. ಒಟ್ಟಾಗಿ, ಈ ಸಾಮರ್ಥ್ಯಗಳು ಸೂಕ್ಷ್ಮ ಗೋಚರತೆ ಮತ್ತು ಪ್ರಾದೇಶಿಕ ಬುದ್ಧಿಮತ್ತೆಯನ್ನು ನೀಡುತ್ತವೆ, ಇದು ನಿಖರವಾದ ಸೈಟ್ ಆಯ್ಕೆ ಮತ್ತು ಸಂಪನ್ಮೂಲ ಹಂಚಿಕೆಯಿಂದ ಸುಧಾರಿತ ಫಲಾನುಭವಿ ಗುರಿ ಮತ್ತು ಕಾರ್ಯಕ್ರಮಗಳಾದ್ಯಂತ ಒಮ್ಮುಖದವರೆಗೆ ಅಸ್ತಿತ್ವದಲ್ಲಿರುವ ಯೋಜನೆಗಳನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡುತ್ತದೆ. ಹಾಗೆಯೇ ಪುರಾವೆ ಆಧಾರಿತ ನಿರ್ಧಾರ ತೆಗೆದುಕೊಳ್ಳುವಿಕೆಯೊಂದಿಗೆ ಹೊಸ ಉಪಕ್ರಮಗಳನ್ನು ಬೆಂಬಲಿಸುತ್ತದೆ(ಉದಾ. ಮೂಲಸೌಕರ್ಯ ಅಂತರ ಗುರುತಿಸುವುದು, ಪರ್ಯಾಯ ವಿತರಣಾ ಸನ್ನಿವೇಶಗಳನ್ನು ಮಾಡೆಲಿಂಗ್ ಮಾಡುವುದು ಮತ್ತು ಅಳೆಯಬಹುದಾದ ಫಲಿತಾಂಶಗಳಿಗಾಗಿ ಕೊನೆಯ ಮೈಲಿ ಸೇವಾ ವಿತರಣೆಯ ಮಾಪನಾಂಕ ನಿರ್ಣಯಿಸುವುದು).

ಕಾರ್ಯಕ್ಷಮತೆ ಸ್ಮಾರ್ಟ್‌ಬೋರ್ಡ್ (https://dashboard.msme.gov.in)

2.8 ಕುಂದುಕೊರತೆ ಪರಿಹಾರ

ಸನ್ಮಾನ್ಯ ಪ್ರಧಾನ ಮಂತ್ರಿಗಳು 2020 ಜೂನ್ 1ರಂದು ಆನ್‌ಲೈನ್ “ಚಾಂಪಿಯನ್ಸ್” ಪೋರ್ಟಲ್ ಪ್ರಾರಂಭಿಸಿದರು, ಇದು ಇ-ಆಡಳಿತದ ಹಲವು ಅಂಶಗಳನ್ನು ಒಳಗೊಂಡಿದೆ, ಇದರಲ್ಲಿ ಕುಂದುಕೊರತೆ ಪರಿಹಾರ ಮತ್ತು ಎಂಸ್ಎಂಇಗಳ ಹಸ್ತಾಂತರವೂ ಸೇರಿದೆ.

ಆರಂಭದಿಂದ 18.12.2025ರ ವರೆಗೆ, ಚಾಂಪಿಯನ್ಸ್ ಪೋರ್ಟಲ್ 1,62,546 ಕುಂದುಕೊರತೆ ಅರ್ಜಿಗಳನ್ನು ಸ್ವೀಕರಿಸಿದೆ, ಅವುಗಳಲ್ಲಿ 1,61,540 (99.38%) ಅರ್ಜಿಗಳಿಗೆ ಪೋರ್ಟಲ್‌ನಲ್ಲಿ ಉತ್ತರಿಸಲಾಗಿದೆ.

3. ಖಾದಿ ಗ್ರಾಮೋದ್ಯೋಗ ಮತ್ತು ತೆಂಗಿನನಾರು ವಲಯಕ್ಕೆ ಉತ್ತೇಜನ

3.1 ಖಾದಿ ಮತ್ತು ಗ್ರಾಮೋದ್ಯೋಗ

ಗ್ರಾಮೀಣ ಭಾರತದಲ್ಲಿ ಸಾಮಾಜಿಕ-ಆರ್ಥಿಕ ಅಭಿವೃದ್ಧಿ ಉತ್ತೇಜಿಸುವ ಸಲುವಾಗಿ ಖಾದಿ ಮತ್ತು ಗ್ರಾಮೋದ್ಯೋಗ ವಲಯವನ್ನು ಉತ್ತೇಜಿಸಲು ಸರ್ಕಾರ ಬದ್ಧವಾಗಿದೆ. ಶ್ರೀಮಂತ ಪರಂಪರೆ ಮತ್ತು ಇನ್ನೂ ಬಳಸದ ಅಪಾರ ಸಾಮರ್ಥ್ಯ ಹೊಂದಿರುವ ಈ ವಲಯವನ್ನು ಖಾದಿ ಮತ್ತು ಗ್ರಾಮೋದ್ಯೋಗ ವಿಕಾಸ ಯೋಜನೆ(ಕೆಜಿವಿವೈ) ಮೂಲಕ ಉದ್ದೇಶಿತ ಮಧ್ಯಸ್ಥಿಕೆಗಳ ಮೂಲಕ ಪುನರುಜ್ಜೀವನಗೊಳಿಸಲಾಗುತ್ತಿದೆ. ಕೆಜಿವಿವೈ ಕೇಂದ್ರ ವಲಯದ ಯೋಜನೆಯಾಗಿದೆ, ಈ ಯೋಜನೆಯಲ್ಲಿ ಯಾವುದೇ ರಾಜ್ಯ ಘಟಕವು ಭಾಗಿಯಾಗಿಲ್ಲ. ಖಾದಿ ವಿಕಾಸ ಯೋಜನೆ(ಕೆವಿವೈ) ಖಾದಿ ಕ್ಷೇತ್ರದ ಉತ್ತೇಜನ ಮತ್ತು ಅಭಿವೃದ್ಧಿಗಾಗಿ ಉದ್ದೇಶಿಸಲಾದ ಕೆಜಿವಿವೈ ಪ್ರಮುಖ ಅಂಶಗಳಲ್ಲಿ ಒಂದಾಗಿದೆ, ಆದರೆ ಗ್ರಾಮೋದ್ಯೋಗ ವಿಕಾಸ ಯೋಜನೆಜಿವಿವೈ) ಗ್ರಾಮೋದ್ಯೋಗ ಕೈಗಾರಿಕೆಗಳ ಉತ್ತೇಜನ ಮತ್ತು ಅಭಿವೃದ್ಧಿಯ ಗುರಿ ಹೊಂದಿರುವ ಮತ್ತೊಂದು ಪ್ರಮುಖ ಅಂಶವಾಗಿದೆ.

ಪ್ರಸ್ತುತ ಹಣಕಾಸು ವರ್ಷದಲ್ಲಿ 30.11.2025ರ ವರೆಗೆ, ಕೆವಿವೈ ಮಾರಾಟವು 1,27,606.30 ಕೋಟಿ ರೂ. ಆಗಿದೆ, 2024-25ನೇ ಹಣಕಾಸು ವರ್ಷದಲ್ಲಿ 30.11.2024ರ ವರೆಗೆ ಕೆವಿವೈ ಮಾರಾಟ 1,10,747.40 ಕೋಟಿ ರೂ. ಇತ್ತು. ಕೆವಿವೈ 85,072.32 ಕೋಟಿ ರೂ. ಉತ್ಪಾದನೆ ಸಾಧಿಸಿದೆ, ಅದೇ 2024-25ನೇ ಹಣಕಾಸು ವರ್ಷದಲ್ಲಿ 30.11.2024ರ ವರೆಗೆ ಅದರ ಉತ್ಪಾದನೆ 76,017.79 ಕೋಟಿ ರೂ. ಇತ್ತು.

ಸಾಧನೆಗಳು/ ಉಪಕ್ರಮಗಳು:

  • ಕುಶಲಕರ್ಮಿಗಳು ಅಥವಾ ಕಸುಬುದಾರರ ಗಳಿಕೆ ಹೆಚ್ಚಿಸುವ ಸಲುವಾಗಿ ಕೆವಿಐಸಿ,  ಪ್ರತಿ ಸುರುಳಿಯ  ನೂಲುವ ವೇತನವನ್ನು 12.50 ರೂ.ನಿಂದ 15 ರೂ.ಗೆ ಮತ್ತು ನೇಯ್ಗೆ ವೇತನವನ್ನು 20.01.2025ರಿಂದ ಜಾರಿಗೆ ಬರುವಂತೆ 20% ಹೆಚ್ಚಿಸಿದೆ.
  • ಸರ್ಕಾರದ ಮೂಲಕ ಸುಧಾರಿತ ಮಾರುಕಟ್ಟೆ ಪ್ರವೇಶ ಸುಗಮಗೊಳಿಸುವ ಪರಿಸರ ವ್ಯವಸ್ಥೆ ರೂಪಿಸಲು ಕೆವಿಐಸಿ, ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ ನಿಯಮಿತ(ಎನ್‌ಎಸ್‌ಐಸಿ)ದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
  • 'ಸ್ಥಳೀಯವಾಗಿ ತಯಾರಿಸುವ ಉತ್ಪನ್ನಗಳನ್ನೇ ಖರೀದಿಸಿ' ಮತ್ತು 'ಆತ್ಮನಿರ್ಭರ ಭಾರತ'ದ ಮನೋಭಾವ ಉತ್ತೇಜಿಸುವ ಉದ್ದೇಶದಿಂದ, ಖಾದಿ ಮತ್ತು ಗ್ರಾಮೋದ್ಯೋಗ ಕೈಗಾರಿಕೆಗಳ ಉತ್ಪನ್ನಗಳನ್ನು ಉತ್ತೇಜಿಸುವ ಉದ್ದೇಶದಿಂದ 17.09.2025ರಿಂದ 23.10.2025ರ ವರೆಗೆ "ಹರ್ ಘರ್ ಸ್ವದೇಶಿ ಘರ್ ಘರ್ ಸ್ವದೇಶಿ" ಎಂಬ ಟ್ಯಾಗ್ ಲೈನ್‌ನೊಂದಿಗೆ ಖಾದಿ ಮಹೋತ್ಸವವನ್ನು ದೇಶಾದ್ಯಂತ ಆಯೋಜಿಸಲಾಗಿತ್ತು. ಖಾದಿ ಮಹೋತ್ಸವದ ಜತೆಗೆ ಖಾದಿ ಯಾತ್ರೆಗಳು, ವಿವಿಧ ಮಾರಾಟ ಅಭಿಯಾನಗಳು, ಪ್ರದರ್ಶನಗಳು, ಬಹು ವಿಚಾರಸಂಕಿರಣಗಳು ಮುಂತಾದ ವಿವಿಧ ಉತ್ತೇಜನ, ಶೈಕ್ಷಣಿಕ ಮತ್ತು ಜಾಗೃತಿ ಚಟುವಟಿಕೆಗಳನ್ನು ಕೆವಿಐಸಿ ಕೈಗೆತ್ತಿಕೊಂಡಿತ್ತು.
  • ಜಾಗತಿಕ ಮಟ್ಟದಲ್ಲಿ "ಖಾದಿ ಇಂಡಿಯಾ" ಬ್ರ್ಯಾಂಡ್ ಪ್ರಚಾರ ಮಾಡುವ ಉದ್ದೇಶದಿಂದ ಗುವಾಹಟಿಯ ಎನ್.ಇ.ಐ.ಎಫ್.ಟಿ. ಆಯೋಜಿಸಿದ್ದ "ಸೆಲೆಬ್ರೇಟಿಂಗ್ ಈಶಾನ್ಯ ಭಾರತ ಉತ್ಸವ" ಕಾರ್ಯಕ್ರಮದಲ್ಲಿ ಕೆವಿಐಸಿ ಮತ್ತು ಈಶಾನ್ಯ ರಾಜ್ಯಗಳನ ಖಾದಿ ಸಂಸ್ಥೆಗಳು ಭಾಗವಹಿಸಿದ್ದವು.

3.2 ತೆಂಗಿನ ನಾರು ವಲಯ

2025ರಲ್ಲಿ ತೆಂಗಿನ ನಾರಿನ ರಫ್ತು ಗಣನೀಯ ಪ್ರಗತಿ ದಾಖಲಿಸಿದ್ದು, 2025 ಜನವರಿ - ಅಕ್ಟೋಬರ್ ಅವಧಿಯಲ್ಲಿ ತೆಂಗಿನ ನಾರಿನ ರಫ್ತು 5,260.77 ಕೋಟಿ ರೂ. ತಲುಪಿದ್ದು, ಇದು ಬಲವಾದ ಜಾಗತಿಕ ಬೇಡಿಕೆಯನ್ನು ಪ್ರತಿಬಿಂಬಿಸುತ್ತಿದೆ. ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ ಮತ್ತು ಮಹಿಳಾ ತೆಂಗಿನ ನಾರಿನ ಯೋಜನೆಯಡಿ ಒಟ್ಟು 985 ಕುಶಲಕರ್ಮಿಗಳಿಗೆ ತರಬೇತಿ ನೀಡಲಾಯಿತು, ಇದರಲ್ಲಿ 437 ಮಹಿಳಾ ಕುಶಲಕರ್ಮಿಗಳಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಮಹಿಳಾ ಸಬಲೀಕರಣ ಬಲಪಡಿಸುವುದು ಸೇರಿದೆ. ತೆಂಗಿನ ನಾರಿನ ಮಂಡಳಿಯು ದೇಶಾದ್ಯಂತ 74 ಪ್ರಚಾರ ಕಾರ್ಯಕ್ರಮಗಳನ್ನು ನಡೆಸಿ, 35 ದೇಶೀಯ ಪ್ರದರ್ಶನಗಳಲ್ಲಿ ಭಾಗವಹಿಸಿತು, ಜತೆಗೆ, ಜಾಗತಿಕ ಮಾರುಕಟ್ಟೆ ಪ್ರವೇಶ ಹೆಚ್ಚಿಸಲು 6 ಅಂತಾರಾಷ್ಟ್ರೀಯ ಪ್ರದರ್ಶನಗಳಲ್ಲಿ ಭಾಗವಹಿಸಲು 66 ಉದ್ಯಮಿಗಳಿಗೆ ಅನುಕೂಲ ಮಾಡಿಕೊಟ್ಟಿತು. ವರ್ಷದಲ್ಲಿ 166 ಹೊಸ ತೆಂಗಿನ ನಾರಿನ ರಫ್ತುದಾರರನ್ನು ನೋಂದಾಯಿಸಲಾಗಿದೆ, ಮಂಡಳಿಯು 7 ಹೊಸ ಯಂತ್ರಗಳು, ತಂತ್ರಜ್ಞಾನ, ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದೆ. ಇದರಲ್ಲಿ ತೆಳುವಾದ ಮಿಶ್ರ ತೆಂಗಿನ ನಾರಿನ ನೂಲುವ ಯಂತ್ರದ ಅಭಿವೃದ್ಧಿ, ಈ ವಲಯದಲ್ಲಿ ನಾವೀನ್ಯತೆ, ಮೌಲ್ಯವರ್ಧನೆ ಮತ್ತು ಆಧುನೀಕರಣವನ್ನು ಉತ್ತೇಜಿಸಲಾಗಿದೆ.

ಇದರ ಜತೆಗೆ, ತೆಂಗಿನ ನಾರಿನ ಮಂಡಳಿಯು ಕೇರಳದ ಅಮೃತ ವಿಶ್ವ ವಿದ್ಯಾಪೀಠದ ಸಹಯೋಗದೊಂದಿಗೆ ಕೈಗೊಂಡಿರುವ ಪ್ರಮುಖ ತೆಂಗಿನ ನಾರಿನ ಉತ್ಪನ್ನಗಳ ಜೀವನ ಚಕ್ರ ಮೌಲ್ಯಮಾಪನ ಅಧ್ಯಯನವು ಅವುಗಳ ಪರಿಸರ ಪ್ರಯೋಜನಗಳನ್ನು ಎತ್ತಿ ತೋರಿಸುತ್ತದೆ. ಇದಲ್ಲದೆ, ಅಂತಾರಾಷ್ಟ್ರೀಯ ಸಹಕಾರ ಯೋಜನೆಯಡಿ 151 ಫಲಾನುಭವಿಗಳಿಗೆ 633 ಲಕ್ಷ ರೂ. ಆರ್ಥಿಕ ಸಹಾಯ ನೀಡಲಾಗಿದೆ. ಇದು ತೆಂಗಿನ ನಾರಿನ ಉದ್ಯಮದ ಸಾಮರ್ಥ್ಯ ವೃದ್ಧಿ ಮತ್ತು ಬೆಳವಣಿಗೆಗೆ ಕೊಡುಗೆ ನೀಡಿದೆ.

4. ಸಚಿವಾಲಯದ ಇತರೆ ಸಂಸ್ಥೆಗಳ ಸಾಧನೆಗಳು

1. ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ(ಎನ್‌ಎಸ್‌ಐಸಿ)

ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ(ಎನ್‌ಎಸ್‌ಐಸಿ), ಬ್ಯಾಂಕ್ ಗ್ಯಾರಂಟಿಗೆ ಪ್ರತಿಯಾಗಿ ಕಚ್ಚಾ ವಸ್ತುಗಳ ಸಹಾಯ ಯೋಜನೆಯಲ್ಲಿ ಪೂರೈಕೆದಾರರಿಗೆ ಪಾವತಿ ಮಾಡುವ ಮೂಲಕ ಕಚ್ಚಾ ವಸ್ತುಗಳ ಖರೀದಿಗೆ ಸಾಲ ಬೆಂಬಲ ಒದಗಿಸುತ್ತದೆ. 2024-25ನೇ ಹಣಕಾಸು ವರ್ಷದಲ್ಲಿ, 2,482 ಎಂಎಸ್ಎಂಇ ಘಟಕಗಳಿಗೆ ಎನ್‌ಎಸ್‌ಐಸಿಯಿಂದ ಕಚ್ಚಾ ವಸ್ತುಗಳ ಸಹಾಯ(ಆರ್ ಎಂಎ) ಅಡಿ 8479.91 ಕೋಟಿ ರೂ. ಮೊತ್ತದ ಸಾಲ ಬೆಂಬಲ ನೀಡಲಾಗಿದೆ. 2025ರ ಜನವರಿಯಿಂದ ನವೆಂಬರ್ ವರೆಗೆ ಆರ್ ಎಂಎ ಅಡಿ, 2,440ಕ್ಕೂ ಹೆಚ್ಚಿನ ಎಂಎಸ್ಎಂಇ ಘಟಕಗಳಿಗೆ 7841.42 ಕೋಟಿ(ತಾತ್ಕಾಲಿಕ) ರೂ. ಸಾಲ ಬೆಂಬಲ ನೀಡಲಾಗಿದೆ. ಇದಲ್ಲದೆ, ಎನ್‌ಎಸ್‌ಐಸಿ ತಾಂತ್ರಿಕ ಸೇವಾ ಕೇಂದ್ರಗಳು(ಎನ್‌ಟಿಎಸ್‌ಸಿ ಗಳು) ಕೈಗಾರಿಕೆಗಳ ಅವಶ್ಯಕತೆಗೆ ಅನುಗುಣವಾಗಿ ವಿವಿಧ ವಿಭಾಗಗಳಲ್ಲಿ ಉದ್ಯೋಗ ಆಧಾರಿತ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುತ್ತವೆ. ಈ ಕೇಂದ್ರಗಳು ಸಾಂಪ್ರದಾಯಿಕದಿಂದ ಹೈಟೆಕ್ ಯಂತ್ರೋಪಕರಣಗಳು ಮತ್ತು ಆಧುನಿಕ ಉಪಕರಣಗಳೊಂದಿಗೆ ಸಜ್ಜುಗೊಂಡಿವೆ. 2024-25ನೇ ಹಣಕಾಸು ವರ್ಷದಲ್ಲಿ ಒಟ್ಟು 79,295 ತರಬೇತಿದಾರರು ಉತ್ತೀರ್ಣರಾಗಿ ಹೊರಬಂದಿದ್ದಾರೆ, ಇದು ಇದುವರೆಗಿನ ಅತ್ಯುನ್ನತ ಸಾಧನೆಯಾಗಿದೆ. 2025 ಜನವರಿಯಿಂದ ನವೆಂಬರ್ ಅವಧಿಯಲ್ಲಿ, ಈ ತಾಂತ್ರಿಕ ಕೇಂದ್ರಗಳಿಂದ 84,386 ಪ್ರಶಿಕ್ಷಣಾರ್ಥಿಗಳಿಗೆ ತರಬೇತಿ ನೀಡಲಾಗಿದೆ. ಎಂಎಸ್ಎಂಇ ಸಚಿವಾಲಯದ ಬೆಂಬಲದೊಂದಿಗೆ ಎನ್‌ಎಸ್‌ಐಸಿ, ಬೋಧ್ ಗಯಾದಲ್ಲಿ ಎನ್‌ಎಸ್‌ಐಸಿ ತಾಂತ್ರಿಕ ಸೇವಾ ಕೇಂದ್ರ ಸ್ಥಾಪಿಸುವ ಪ್ರಸ್ತಾವನೆಯ ಮೇಲೆ ಕೆಲಸ ಮಾಡುತ್ತಿದೆ. ಇದು ವಿಶೇಷವಾಗಿ ಬಿಹಾರದ ಮಗಧ ಪ್ರದೇಶದ ಎಂಎಸ್ಎಂಇಗಳಿಗೆ ಉದ್ಯಮದ ಅಗತ್ಯಗಳನ್ನು ಪೂರೈಸಲು ಕೌಶಲ್ಯ ಅಭಿವೃದ್ಧಿ ಮತ್ತು ವಸ್ತು ಪರೀಕ್ಷಾ ಸೌಲಭ್ಯಕ್ಕಾಗಿ ಹೈಟೆಕ್ ತರಬೇತಿ ಒದಗಿಸುತ್ತದೆ. ಕೇಂದ್ರವು ಈಗಾಗಲೇ ಎನ್ಎಸ್ಎಸ್ಎಚ್ ಕಾರ್ಯಾಚರಣೆ ಪ್ರಾರಂಭಿಸಿದೆ, ಉದ್ಯಮಶೀಲತಾ ತರಬೇತಿ ಮತ್ತು ಗುರುತಿಸಲಾದ ವಹಿವಾಟುಗಳಿಗೆ ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಖರೀದಿ ಕಾರ್ಯಗತಗೊಳ್ಳುತ್ತಿದೆ.

4.2 ಮಹಾತ್ಮ ಗಾಂಧಿ ಗ್ರಾಮೀಣ ಕೈಗಾರೀಕರಣ ಸಂಸ್ಥೆ (ಎಂಜಿಐಆರ್ ಐ)

ವಾರ್ಧಾದ ಮಹಾತ್ಮಾ ಗಾಂಧಿ ಗ್ರಾಮೀಣ ಕೈಗಾರೀಕರಣ ಸಂಸ್ಥೆ(ಎಂಜಿಐಆರ್ ಐ), ರಾಷ್ಟ್ರೀಯ ಸ್ವಾಯತ್ತ ಸಂಸ್ಥೆಯಾಗಿದ್ದು, ಗ್ರಾಮೀಣ ಸಮುದಾಯಗಳಿಗೆ ಸ್ವಾವಲಂಬನೆ ಮತ್ತು ಸಬಲೀಕರಣದ ಗಾಂಧಿ ತತ್ವಗಳ ಮೇಲೆ ಸ್ಥಾಪಿಸಲಾಗಿದೆ, ವಿಶೇಷವಾಗಿ ಭಾರತ ಸರ್ಕಾರದ ಎಂಎಸ್ಎಂಇ ಸಚಿವಾಲಯದ ಆಶ್ರಯದಲ್ಲಿ ಸುಸ್ಥಿರ ಗ್ರಾಮ ಕೈಗಾರಿಕೆಗಳನ್ನು ಬೆಳೆಸುವಲ್ಲಿ ಇದು ಗಮನ ಹರಿಸಿದೆ.

ಎಂಜಿಐಆರ್ ಐ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಉತ್ತೇಜಿಸುವ, ಸುಸ್ಥಿರ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮತ್ತು ಗ್ರಾಮೀಣ ಕೈಗಾರಿಕೆಗಳ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಐತಿಹಾಸಿಕವಾಗಿ ಗ್ರಾಮೀಣ ಕುಶಲಕರ್ಮಿಗಳನ್ನು ಬೆಂಬಲಿಸಿದೆ. ಎಂಜಿಐಆರ್ ಐ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವುದು, ಸಲಹಾ ಸೇವೆ, ಇನ್ ಕ್ಯುಬೇಶನ್ ಮತ್ತು ಯಂತ್ರೋಪಕರಣಗಳನ್ನು ಅಭಿವೃದ್ಧಿಪಡಿಸುವುದು ಮುಂತಾದ ವಿವಿಧ ಯೋಜನೆಗಳನ್ನು ನಡೆಸುತ್ತದೆ, ಇದರಲ್ಲಿ ಅತಿಸಣ್ಣ ಉದ್ಯಮಗಳು, ಕುಶಲಕರ್ಮಿಗಳು, ನೂಲುವವರು, ನೇಕಾರರು ಇತ್ಯಾದಿಗಳಿಗೆ ಪ್ರಯೋಜನ ನೀಡುತ್ತದೆ.

ರಚನಾತ್ಮಕ ಬೆಂಬಲದ ಮೂಲಕ ಗ್ರಾಮೀಣ ಕುಶಲಕರ್ಮಿಗಳು ಮತ್ತು ಉದ್ಯಮಿಗಳನ್ನು ಸಬಲೀಕರಣಗೊಳಿಸುವ ಹೆಚ್ಚಿನ ಪರಿಣಾಮ ಬೀರುವ ಮಾದರಿಯನ್ನು ಸ್ಥಾಪಿಸುವ ಗುರಿಯೊಂದಿಗೆ, ಎಂಜಿಐಆರ್ ಐ ಅನ್ನು ಗ್ರಾಮೀಣ ಕೈಗಾರೀಕರಣದ ಶ್ರೇಷ್ಠತಾ ಕೇಂದ್ರ (ಸಿಒಇ) ಆಗಿ ಮರುಸ್ಥಾಪಿಸುವ ಯೋಜನೆಗೆ ಸಚಿವಾಲಯ ಅನುಮೋದನೆ ನೀಡಿದೆ. ಎಂಜಿಐಆರ್ ಐನಲ್ಲಿ ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ಸುಗಮಗೊಳಿಸಲು, ಅಂದಾಜು 17.13 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್ ಮತ್ತು ಅತಿಥಿ ಗೃಹ ನಿರ್ಮಿಸುವ ಪ್ರಸ್ತಾವನೆಗೂ ಸಚಿವಾಲಯ ಅನುಮೋದನೆ ನೀಡಿದೆ.

2025 ಜನವರಿಯಿಂದ ಡಿಸೆಂಬರ್ ವರೆಗೆ ಎಂಜಿಐಆರ್ ಐ ವಿವಿಧ ವಲಯಗಳಿಗೆ 84 ಕೌಶಲ್ಯ ಅಭಿವೃದ್ಧಿ-ತರಬೇತಿ ಕಾರ್ಯಕ್ರಮಗಳನ್ನು ನಡೆಸಿದೆ. ಈ ಅವಧಿಯಲ್ಲಿ, ಎಂಜಿಐಆರ್ ಐನ ಕ್ಷೇತ್ರ ಪ್ರಯೋಗಗಳು, ಪ್ರಸರಣದ 24 ತಂತ್ರಜ್ಞಾನಗಳು, 30 ನವೀನ ಉತ್ಪನ್ನಗಳು/ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸಿದೆ. ಎಂಜಿಐಆರ್ ಐ ತ್ರಿಪುರ ಮತ್ತು ಲೇಹ್-ಲಡಾಖ್‌ನಲ್ಲಿ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನು ನಡೆಸಿದೆ. ತಂತ್ರಜ್ಞಾನ ಹಸ್ತಕ್ಷೇಪಕ್ಕಾಗಿ ನಾಗಾಲ್ಯಾಂಡ್ ಮತ್ತು ಮಿಜೋರಾಂನಲ್ಲಿ ಕ್ಷೇತ್ರ ಸಮೀಕ್ಷೆಗಳನ್ನು ನಡೆಸಿದೆ.

4.3 ರಾಷ್ಟ್ರೀಯ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಸ್ಥೆ(ಎನ್ಐ-ಎಂಎಸ್‌ಎಂಇ)

ಎನ್ಐ-ಎಂಎಸ್‌ಎಂಇ ಅನ್ನು ಮೂಲತಃ 1960ರಲ್ಲಿ ನವದೆಹಲಿಯಲ್ಲಿ ಆಗಿನ ಭಾರತ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವಾಲಯದ ಅಧೀನದಲ್ಲಿ ಕೇಂದ್ರ ಕೈಗಾರಿಕಾ ವಿಸ್ತರಣಾ ತರಬೇತಿ ಸಂಸ್ಥೆ(ಸಿಐಇಟಿಐ) ಎಂದು ಸ್ಥಾಪಿಸಲಾಯಿತು. ಈ ಸಂಸ್ಥೆಯು 1962 ರಲ್ಲಿ ಸಣ್ಣ ಕೈಗಾರಿಕಾ ವಿಸ್ತರಣಾ ತರಬೇತಿ ಸಂಸ್ಥೆ(ಎಸ್ಐಇಟಿ) ಹೆಸರಿನಲ್ಲಿ ನೋಂದಾಯಿತ ಸೊಸೈಟಿಯಾಗಿ ಹೈದರಾಬಾದ್‌ಗೆ ಸ್ಥಳಾಂತರಗೊಂಡಿತು. ಎಂಎಸ್‌ಎಂಇಡಿ ಕಾಯ್ದೆ-2006 ಜಾರಿಗೆ ಬಂದ ನಂತರ, ಸಂಸ್ಥೆಯು ತನ್ನ ಉದ್ದೇಶಗಳ ಗಮನವನ್ನು ವಿಸ್ತರಿಸಿ, ಸಂಸ್ಥೆಯ ಮರು-ನಾಮಕರಣ ಮಾಡಿತು. ಹೊಸ ಕಾಯ್ದೆಗೆ ಅನುಗುಣವಾಗಿ, ಸಂಸ್ಥೆಯನ್ನು ರಾಷ್ಟ್ರೀಯ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಂಸ್ಥೆ(ಎನ್ಐ-ಎಂಎಸ್‌ಎಂಇ) ಎಂದು ಮರುನಾಮಕರಣ ಮಾಡಲಾಯಿತು. ಇದು ಪ್ರಸ್ತುತ ಭಾರತ ಸರ್ಕಾರದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ (ಹಿಂದೆ ಎಸ್ಎಸ್ಐ ಮತ್ತು ಎಆರ್ ಐ ಸಚಿವಾಲಯ) ಅಧೀನದಲ್ಲಿರುವ ಸಂಸ್ಥೆಯಾಗಿದೆ.

ಕಾರ್ಯಗಳು

ಉದ್ಯಮ ಉತ್ತೇಜನ ಮತ್ತು ಉದ್ಯಮಶೀಲತಾ ಅಭಿವೃದ್ಧಿಯು ಎನ್ಐ-ಎಂಎಸ್‌ಎಂಇಯ ನ ಕೇಂದ್ರಬಿಂದುವಾಗಿದ್ದು, ಸಂಸ್ಥೆಯ ಸಾಮರ್ಥ್ಯಗಳು ಈ ಕೆಳಗಿನ ಅಂಶಗಳ ಮೇಲೆ ಒಮ್ಮುಖವಾಗುತ್ತವೆ:

i. ಮಾಹಿತಿ ತಂತ್ರಜ್ಞಾನದಲ್ಲಿ ಹೊಸ ಮುಖಗಳಿಗೆ  ತರಬೇತಿ ನೀಡುವುದು

ii. ಸಮ್ಮೇಳನಗಳು, ವಿಚಾರ ಸಂಕಿರಣಗಳು ಇತ್ಯಾದಿಗಳ ಮೂಲಕ ಪ್ರಚಲಿತ ವಿಷಯಗಳ ಬಗ್ಗೆ ಬೆಳಕು ಚೆಲ್ಲುವುದು.

iii. ಅಗತ್ಯ ಆಧಾರಿತ ಕಾರ್ಯಕ್ರಮಗಳಿಗೆ ಹೆಚ್ಚಿನ ಗಮನ

iv. ಕಾರ್ಯಕ್ರಮ ಮೌಲ್ಯಮಾಪನ

v. ನೀತಿ ನಿರೂಪಣೆಗಾಗಿ ನಿರ್ಣಯ(ಪತ್ತೆ) ಮತ್ತು ಅಭಿವೃದ್ಧಿ ಅಧ್ಯಯನಗಳು; ಮತ್ತು

vi. ಅತಿಸಣ್ಣ ಉದ್ಯಮ ಸ್ಥಾಪನೆ ಮೂಲಕ ಹಿಂದುಳಿದವರನ್ನು ಸಬಲೀಕರಣಗೊಳಿಸುವುದು.

2025ರಲ್ಲಿ, ರಾಷ್ಟ್ರೀಯ ಎಂಎಸ್ಎಂಇ ಸಂಸ್ಥೆಯು ವಿವಿಧ ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ, ಸಮ್ಮೇಳನಗಳು, ಕಾರ್ಯಾಗಾರಗಳನ್ನು ನಡೆಸಿದೆ. ಇದು 22,740 ತರಬೇತಿದಾರರಿಗೆ ಪ್ರಯೋಜನ ನೀಡುವ 647 ರಾಷ್ಟ್ರೀಯ ತರಬೇತಿ ಕಾರ್ಯಕ್ರಮಗಳನ್ನು ನಡೆಸಿದೆ, 5,228 ತರಬೇತುದಾರರಿಗೆ ಪ್ರಯೋಜನ ನೀಡುವ 82 ಕಾರ್ಯಾಗಾರಗಳು, ವಿಚಾರಸಂಕಿರಣಗಳು, ಸಮ್ಮೇಳನಗಳನ್ನು ನಡೆಸಿದೆ. ಇದಲ್ಲದೆ, ಈ ವರ್ಷದಲ್ಲಿ, ಎನ್ಐ-ಎಂಎಸ್‌ಎಂಇ ಬಾಂಗ್ಲಾದೇಶದ ಢಾಕಾದಲ್ಲಿರುವ ಏಷ್ಯಾ ಮತ್ತು ಪೆಸಿಫಿಕ್‌ ಸಮಗ್ರ ಗ್ರಾಮೀಣಾಭಿವೃದ್ಧಿ ಕೇಂದ್ರ(ಸಿಐಆರ್ ಡಿಎಪಿ) ಸಹಯೋಗದೊಂದಿಗೆ ತನ್ನ ಮೊದಲ ಪಾವತಿಸಿದ ಅಂತಾರಾಷ್ಟ್ರೀಯ ತರಬೇತಿ ಕಾರ್ಯಕ್ರಮಗಳನ್ನು ನಡೆಸಿದೆ, ಇದರಲ್ಲಿ 4 ದೇಶಗಳ 13 ಪ್ರತಿನಿಧಿಗಳು ಭಾಗವಹಿಸಿದ್ದರು.

5. ಸಹಿ ಮಾಡಲಾದ ದ್ವಿಪಕ್ಷೀಯ ಒಪ್ಪಂದಗಳು ಮತ್ತು ಮಹತ್ವದ ಸಭೆಗಳು

* ಎಂಎಸ್ಎಂಇ ಸಚಿವಾಲಯ ಮತ್ತು ಮಾರಿಷಸ್ ಕೈಗಾರಿಕಾ ಸಚಿವಾಲಯದ ಎಸ್ಎಂಇ ಮತ್ತು ಸಹಕಾರಿ ಸಂಸ್ಥೆಗಳ(ಎಸ್ಎಂಇ ವಿಭಾಗ) ನಡುವೆ ಎಂಎಸ್ಎಂಇ ಕ್ಷೇತ್ರದಲ್ಲಿ ಸಹಕಾರ ಹೊಂದುವ ಕುರಿತು 10.03.2025ರಂದು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದದ ಅಡಿ ಸಹಯೋಗದ ಪ್ರಮುಖ ಕ್ಷೇತ್ರಗಳಲ್ಲಿ ತಜ್ಞರ ವಿನಿಮಯ, ಕೈಗಾರಿಕಾ ಸಮೀಕ್ಷೆಗಳು, ವ್ಯಾಪಾರ ಪಾಲುದಾರಿಕೆಗಳನ್ನು ಉತ್ತೇಜಿಸುವುದು, ತರಬೇತಿ ಕಾರ್ಯಕ್ರಮಗಳು, ಪ್ರದರ್ಶನಗಳು ಮತ್ತು ವ್ಯಾಪಾರ ಮೇಳಗಳನ್ನು ಆಯೋಜಿಸುವುದು, ವ್ಯಾಪಾರ ಕಾರ್ಯಾಚರಣೆಗಳ ಮೂಲಕ ತಂತ್ರಜ್ಞಾನ ವರ್ಗಾವಣೆ ಸುಗಮಗೊಳಿಸುವುದು ಮತ್ತು ತಾಂತ್ರಿಕ ನೆರವು ನೀಡುವುದಾಗಿದೆ.

* ಭಾರತದ ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮ ನಿಯಮಿತ(ಎನ್‌ಎಸ್‌ಐಸಿ) ಮತ್ತು ಥೈಲ್ಯಾಂಡ್ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಉತ್ತೇಜನಾ ಕಚೇರಿ(ಒಎಸ್‌ಎಂಇಪಿ) ನಡುವೆ 2025 ಏಪ್ರಿಲ್ 3ರಂದು ಎಂಎಸ್ಎಂಇ ಕ್ಷೇತ್ರದಲ್ಲಿ ಸಹಕಾರ ಹೊಂದುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ಒಪ್ಪಂದವು ಉದ್ಯಮದಿಂದ ಉದ್ಯಮಕ್ಕೆ ಸಹಕಾರ ಹೆಚ್ಚಿಸಲು ವ್ಯಾಪಾರ ಕಾರ್ಯಾಚರಣೆಗಳ ವಿನಿಮಯವನ್ನು ಸುಗಮಗೊಳಿಸುತ್ತದೆ, ಎರಡೂ ದೇಶಗಳ ಎಂಎಸ್ಎಂಇಗಳ ನಡುವೆ ಬೇಡಿಕೆಯ ಮೇರೆಗೆ ಮತ್ತು ಪರಸ್ಪರ ಒಪ್ಪಿದ ನಿಯಮಗಳ ಮೇಲೆ ತಂತ್ರಜ್ಞಾನ ವರ್ಗಾವಣೆಯನ್ನು ಸುಗಮಗೊಳಿಸುವುದು ಸೇರಿದಂತೆ ಭಾರತ ಮತ್ತು ಥೈಲ್ಯಾಂಡ್‌ ಉದ್ಯಮಗಳ ನಡುವೆ ಸುಸ್ಥಿರ ವ್ಯಾಪಾರ ಮೈತ್ರಿಗಳನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆ.

* ಭಾರತದ ರಾಷ್ಟ್ರೀಯ ಸಣ್ಣ ಕೈಗಾರಿಕೆ ನಿಗಮ ನಿಯಮಿತ(ಎನ್‌ಎಸ್‌ಐಸಿ) ಮತ್ತು ಸ್ಲೋವಾಕ್ ಗಣರಾಜ್ಯದ ಸ್ಲೋವಾಕ್ ವ್ಯಾಪಾರ ಸಂಸ್ಥೆ(ಎಸ್‌ಬಿಎ) ನಡುವೆ ಎಂಎಸ್ಎಂಇ  ಕ್ಷೇತ್ರದಲ್ಲಿ ಸಹಕಾರ ಕುರಿತು 2025 ಏಪ್ರಿಲ್ 9ರಂದು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದವು ಸ್ಲೋವಾಕ್ ಗಣರಾಜ್ಯದಲ್ಲಿರುವ ರಾಷ್ಟ್ರೀಯ ಸಣ್ಣ ಕೈಗಾರಿಕೆ ನಿಗಮ ನಿಯಮಿತ ಮತ್ತು ಅಂಥದ್ದೇ ಸಂಸ್ಥೆಗಳಿಗೆ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್ಎಂಇ)ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಚರ್ಚಿಸಲು ಮತ್ತು ಎರಡೂ ದೇಶಗಳಲ್ಲಿನ ಎಂಎಸ್ಎಂಇಗಳ ಪರಸ್ಪರ ಪ್ರಯೋಜನಕ್ಕಾಗಿ ಸಹಕಾರ ಸಾಧ್ಯತೆಗಳನ್ನು ಅನ್ವೇಷಿಸಲು ಒಂದು ವೇದಿಕೆ ಒದಗಿಸುತ್ತದೆ. ಇದು ಎರಡೂ ದೇಶಗಳ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪರಸ್ಪರರ ಸಾಮರ್ಥ್ಯ, ಮಾರುಕಟ್ಟೆ, ತಂತ್ರಜ್ಞಾನಗಳು, ನೀತಿಗಳು ಇತ್ಯಾದಿಗಳನ್ನು ಅರ್ಥ ಮಾಡಿಕೊಳ್ಳಲು ಸ್ಪಷ್ಟ ಮಾರ್ಗಸೂಚಿ ಮತ್ತು ಅನುಕೂಲಕರ ವಾತಾವರಣ ಒದಗಿಸುತ್ತದೆ.

* ಭಾರತದ ರಾಷ್ಟ್ರೀಯ ಸಣ್ಣ ಕೈಗಾರಿಕೆ ನಿಗಮ ಲಿಮಿಟೆಡ್(ಎನ್‌ಎಸ್‌ಐಸಿ) ಮತ್ತು ಮಲೇಷ್ಯಾದ ಸಣ್ಣ ಮತ್ತು ಮಧ್ಯಮ ಉದ್ಯಮಗಳ ನಿಗಮ ನಡುವೆ ಎಂಎಸ್ಎಂಇ ಕ್ಷೇತ್ರದಲ್ಲಿ ಸಹಕಾರ ಕುರಿತ ತಿಳುವಳಿಕೆ ಒಪ್ಪಂದಕ್ಕೆ 16.10.2025ರಂದು ಸಹಿ ಹಾಕಲಾಯಿತು.

* 2025 ಫೆಬ್ರವರಿ 4ರಂದು, 5ಎಸ್ & ಕೈಜೆನ್ ಕಾರ್ಯಕ್ರಮದಡಿ ತರಬೇತುದಾರರಿಗೆ 4ನೇ ಪ್ರಮಾಣೀಕರಣ ಸಮಾರಂಭ ನವದೆಹಲಿಯ ಎಂಎಸ್‌ಎಂಇ-ಡಿಎಫ್‌ಒ ವಿಸ್ತರಣಾ ಕೇಂದ್ರದಲ್ಲಿ ನಡೆಯಿತು. ಸಮಾರಂಭದಲ್ಲಿ ಎಂಎಸ್ಎಂಇ ಸಚಿವಾಲಯದ ಜಂಟಿ ಕಾರ್ಯದರ್ಶಿ(ಎಸ್ಎಂಇ), ವಿದೇಶಾಂಗ ಸಚಿವಾಲಯದ ಪೂರ್ವ ಏಷ್ಯಾ ವಿಭಾಗದ ಸಲಹೆಗಾರ(ಜಪಾನ್) ಮತ್ತು ಭಾರತದ ಜಪಾನ್ ರಾಯಭಾರ ಕಚೇರಿಯ ಮೊದಲ ಕಾರ್ಯದರ್ಶಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ತೀವ್ರ ತರಬೇತಿ ಪೂರ್ಣಗೊಳಿಸಿದ ತರಬೇತುದಾರರನ್ನು ಗುರುತಿಸಿ ಪ್ರಮಾಣಪತ್ರ ವಿತರಣಾ ಸಮಾರಂಭವೂ ಸೇರಿತ್ತು. ಹೆಚ್ಚುವರಿಯಾಗಿ, ತಜ್ಞರು ಜಪಾನಿನ ಉತ್ಪಾದನೆಯ ಪ್ರಮುಖಾಂಶಗಳು ಮತ್ತು 5ಎಸ್ ವಿಧಾನದ ಕುರಿತು ಪ್ರಾತ್ಯಕ್ಷಿಕೆ, ಉಪನ್ಯಾಸಗಳನ್ನು ನೀಡಿದರು.

* ಭಾರತ-ಜಪಾನ್ ಕೈಗಾರಿಕಾ ಸ್ಪರ್ಧಾತ್ಮಕತೆ ಪಾಲುದಾರಿಕೆ(ಐಜೆಐಸಿಪಿ) ಅಡಿ ರೂಪಿಸಲಾದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್ಎಂಇ)ಘಲ ಜಂಟಿ ಕಾರ್ಯಕಾರಿ ಗುಂಪಿ(ಜೆಡಬ್ಲ್ಯುಜಿ)ನ 5ನೇ ಸಭೆಯನ್ನು 2025 ಜುಲೈ 23ರಂದು ಭಾರತದ ನವದೆಹಲಿಯಲ್ಲಿರುವ ಉದ್ಯೋಗ ಭವನದಲ್ಲಿ ನಡೆಸಲಾಯಿತು. ಸಭೆಯ ನೇತೃತ್ವವನ್ನು ಭಾರತದ ಕಡೆಯಿಂದ ಎಂಎಸ್ಎಂಇ ಸಚಿವಾಲಯದ ಜಂಟಿ ಕಾರ್ಯದರ್ಶಿ ಶ್ರೀಮತಿ ಮರ್ಸಿ ಎಪಾವೊ ಮತ್ತು ಜಪಾನ್ ಕಡೆಯಿಂದ ಆರ್ಥಿಕ ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯದ(ಎಂಇಟಿಐ) ನೈಋತ್ಯ ಏಷ್ಯಾ ಕಚೇರಿಯ ನಿರ್ದೇಶಕ ಶ್ರೀ ತೋಷಿಯುಕಿ ಶಿಮಾನೊ ವಹಿಸಿದ್ದರು. ಸಭೆಯಲ್ಲಿ ಎರಡೂ ಕಡೆಯವರು 2025-26ರ ಮಾರ್ಗಸೂಚಿ ಕುರಿತು ಚರ್ಚಿಸಿದರು.

* 4ನೇ ಭಾರತ-ತೈವಾನ್ ಎಸ್‌ಎಂಇ ಜೆಡಬ್ಲ್ಯುಜಿ(ಜಂಟಿ ಕಾರ್ಯಕಾರಿ ಗುಂಪು) ಸಭೆಯನ್ನು ಭಾರತದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯವು 2025 ಸೆಪ್ಟೆಂಬರ್ 10ರಂದು ನವದೆಹಲಿಯ ಕರ್ತವ್ಯ ಭವನ 3ರಲ್ಲಿ ಆಯೋಜಿಸಿತ್ತು. ಭಾರತೀಯ ನಿಯೋಗದ ನೇತೃತ್ವವನ್ನು ಎಂಎಸ್ಎಂಇ ಸಚಿವಾಲಯದ ಜಂಟಿ ಕಾರ್ಯದರ್ಶಿ(ಎಸ್ಎಂಇ) ಶ್ರೀಮತಿ ಮರ್ಸಿ ಎಪಾವೊ ವಹಿಸಿದ್ದರು, ತೈವಾನ್ ನಿಯೋಗದ ನೇತೃತ್ವವನ್ನು ಆರ್ಥಿಕ ವ್ಯವಹಾರಗಳ ಸಚಿವಾಲಯ(ಎಂಒಇಎ) ಸಣ್ಣ ಮತ್ತು ಮಧ್ಯಮ ಉದ್ಯಮ ಮತ್ತು ಸ್ಟಾರ್ಟಪ್ ಆಡಳಿತ(ಎಸ್‌ಎಂಇಎಸ್‌ಎ)ದ ಮಹಾನಿರ್ದೇಶಕಿ ಡಾ. ಗುವಾನ್-ಜೈಹ್ ಲೀ ವಹಿಸಿದ್ದರು. ಸಭೆಯ ಸಮಯದಲ್ಲಿ ಎರಡೂ ಕಡೆಯವರು ಹಿಂದಿನ ಜೆಡಬ್ಲ್ಯುಜಿ ಸಭೆಗಳ ಫಲಿತಾಂಶಗಳು ಮತ್ತು 2026-27ನೇ ಹಣಕಾಸು ವರ್ಷದ ಮಾರ್ಗಸೂಚಿಗಳ ಕುರಿತು ಚರ್ಚಿಸಿದರು.

6. ಇತರೆ ಹೊಸ ಉಪಕ್ರಮಗಳು,  ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ

6.1 ಎಂಎಸ್ಎಂಇ ಹ್ಯಾಕಥಾನ್ 5.0 ಅನ್ನು 27.06.2025ರಂದು ಪ್ರಾರಂಭಿಸಲಾಯಿತು

ಎಂಎಸ್ಎಂಇ ಹ್ಯಾಕಥಾನ್ 5.0 (ಸ್ಮಾರ್ಟ್ ಮತ್ತು ಸುಸ್ಥಿರ ಎಂಎಸ್ಎಂಇಗಳು) ಅನ್ನು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಎಂಎಸ್ಎಂಇ ದಿನ ಅಂದರೆ 27.06.2025 ರಂದು ಪ್ರಾರಂಭಿಸಿದರು, ಇದು ಎಂಎಸ್ಎಂಇಗಳ ಇತ್ತೀಚಿನ ತಂತ್ರಜ್ಞಾನಗಳ ಅಳವಡಿಕೆ ಉತ್ತೇಜಿಸುವ ಮತ್ತು ವಿನ್ಯಾಸ, ಕಾರ್ಯತಂತ್ರ ಮತ್ತು ಕಾರ್ಯಗತಗೊಳಿಸುವಿಕೆಯಲ್ಲಿ ಅವುಗಳನ್ನು ಬೆಂಬಲಿಸುವ ಮೂಲಕ ವ್ಯವಹಾರವನ್ನು ವಿಸ್ತರಿಸುವ ಗುರಿ ಹೊಂದಿದೆ. ಎಂಎಸ್ಎಂಇಗಳು, ವಿದ್ಯಾರ್ಥಿಗಳು ಮತ್ತು ಇತರೆ ವ್ಯಕ್ತಿಗಳಿಂದ 18ರಿಂದ 60 ವರ್ಷ ವಯಸ್ಸಿನ ನಾವೀನ್ಯಕಾರರಿಗಾಗಿ ಹ್ಯಾಕಥಾನ್ ನಡೆಸಲಾಯಿತು. ಎಂಎಸ್ಎಂಇ ಹ್ಯಾಕಥಾನ್ 5.0 ಆಯ್ದ, ಅನುಮೋದಿತ ವಿಚಾರಗಳ ಅಭಿವೃದ್ಧಿಗಾಗಿ 15 ಲಕ್ಷ ರೂ.ವರೆಗೆ ಹಣಕಾಸಿನ ನೆರವು ನೀಡುವ ಮೂಲಕ ನಾವೀನ್ಯಕಾರರನ್ನು ಬೆಂಬಲಿಸುತ್ತದೆ. ಒಟ್ಟಾರೆಯಾಗಿ, ಹ್ಯಾಕಥಾನ್ 5.0ರಲ್ಲಿ 52,369 ವಿಚಾರಗಳನ್ನು ಸ್ವೀಕರಿಸಲಾಗಿದೆ ಮತ್ತು ಪ್ರಸ್ತುತ ಅವು ಮೌಲ್ಯಮಾಪನದಲ್ಲಿವೆ.

6.2 ಆನ್‌ಲೈನ್ ವಿವಾದ ಪರಿಹಾರ(ಒಡಿಆರ್) ಪೋರ್ಟಲ್ 27.06.2025ರಂದು ಪ್ರಾರಂಭಿಸಲಾಯಿತು

ಒಡಿಆರ್ ಪೋರ್ಟಲ್ ಅನ್ನು ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು 2025 ಜೂನ್ 27ರಂದು ಎಂಎಸ್ಎಂಇ ದಿನದಂದು ಪ್ರಾರಂಭಿಸಿದರು. ಸಣ್ಣ, ಅತಿಸಣ್ಣ ಉದ್ಯಮಗಳಿಗೆ (ಎಂಎಸ್ಇಗಳು) ವಿಳಂಬಿತ ಪಾವತಿಗಳ ಸಂಭವ ಕಡಿಮೆ ಮಾಡುವುದು ಮತ್ತು ತಂತ್ರಜ್ಞಾನ-ಸಕ್ರಿಯಗೊಳಿಸಿದ ಒಡಿಆರ್ ಕಾರ್ಯವಿಧಾನಕ್ಕೆ ಪ್ರವೇಶ ವಿಸ್ತರಿಸುವುದು ಈ ಪೋರ್ಟಲ್ ನ ಗುರಿಯಾಗಿದೆ. ಇದು ಬಹು-ಪದರದ ಪರಿಹಾರ ಕಾರ್ಯವಿಧಾನವನ್ನು ಒದಗಿಸುತ್ತದೆ, ಪ್ರಕರಣ ಸಲ್ಲಿಕೆಯಿಂದ ಹಿಡಿದು ಅಂತಿಮ ಪರಿಹಾರದವರೆಗೆ ಪರಿಪೂರ್ಣವಾಗಿ ಡಿಜಿಟಲ್ ಪ್ರಕ್ರಿಯೆಯನ್ನು ನೀಡುವ ಮೂಲಕ ಅಸ್ತಿತ್ವದಲ್ಲಿರುವ ವಿವಾದ ಪರಿಹಾರ ಮಾರ್ಗಸೂಚಿಯನ್ನು ಬಲಪಡಿಸುತ್ತದೆ. ಕಡಿಮೆ-ವೆಚ್ಚದ ರಚನೆಯಿಂದಾಗಿ, ಪೋರ್ಟಲ್ ಬಹಳ ಸಣ್ಣ ಹಕ್ಕುಗಳಿಗೂ ಸಹ ವಿವಾದ ಪರಿಹಾರವನ್ನು ಆರ್ಥಿಕವಾಗಿ ಕಾರ್ಯಸಾಧುವಾಗಿಸುತ್ತದೆ.

27.06.2025ರಂದು ಒಡಿಆರ್ ಪೋರ್ಟಲ್ ಅನಾವರಣ

6.3 ಯಶಸ್ವಿನಿ ಅಭಿಯಾನ:

2029ರ ವೇಳೆಗೆ ಉದ್ಯಮ ನೋಂದಣಿ ಪೋರ್ಟಲ್ ಮತ್ತು ಉದ್ಯಮ ಸಹಾಯ ಪೋರ್ಟಲ್ (ಯುಎಪಿ)ನಲ್ಲಿ ಲಿಂಗ ಸಮಾನತೆ ಸಾಧಿಸುವತ್ತ ಪ್ರಮುಖ ಹೆಜ್ಜೆಯಾಗಿ ಎಂಎಸ್ಎಂಇ ಸಚಿವಾಲಯವು 27.06.2024ರಂದು 'ಉದಯಮಿ ಭಾರತ್-ಎಂಎಸ್ಎಂಇ ದಿನ' ಕಾರ್ಯಕ್ರಮದಲ್ಲಿ ಯಶಸ್ವಿನಿ ಅಭಿಯಾನ ಪ್ರಾರಂಭಿಸಿದೆ. ಎಂಎಸ್ಎಂಇ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಹಿಳಾ ಒಡೆತನದ ಎಂಎಸ್ಇಗಳಿಂದ ಕಡ್ಡಾಯವಾದ 3% ಸಾರ್ವಜನಿಕ ಖರೀದಿ ಗುರಿ ಸಾಧಿಸಲು ಬೆಂಬಲ ನೀಡಲು ಈ ಅಭಿಯಾನ ಆರಂಭವಾಗಿದೆ.

2025ರಲ್ಲಿ ಡಬ್ಲ್ಯುಇಪಿ ಸಹಯೋಗದೊಂದಿಗೆ 2025 ಫೆಬ್ರವರಿ 27ರಂದು ಮಿಜೋರಾಂನಲ್ಲಿ ಒಂದು ಅಭಿಯಾನ ನಡೆಸಲಾಯಿತು, ಇದು ರಾಜ್ಯದಲ್ಲಿ ಇಲ್ಲಿಯವರೆಗೆ ಉದ್ಯಮ ಮತ್ತು ಉದ್ಯಮ ಸಹಾಯ ಪೋರ್ಟಲ್‌ಗಳಲ್ಲಿ ಸುಮಾರು 8400 ಮಹಿಳಾ ಒಡೆತನದ ಎಂಎಸ್ಎಂಇಗಳ ನೋಂದಣಿಗೆ ಅನುಕೂಲ ಮಾಡಿಕೊಟ್ಟಿತು.

ಮೊದಲ ಅಭಿಯಾನ ಪ್ರಾರಂಭಿಸಿದಾಗಿನಿಂದ, ಈ ಅಭಿಯಾನಗಳು ಗಮನಾರ್ಹವಾಗಿ ಜಾಗೃತಿ ಮೂಡಿಸಿವೆ ಮತ್ತು ಉದ್ಯಮ ಮತ್ತು ಉದ್ಯಮ ಸಹಾಯ ಪೋರ್ಟಲ್‌ಗಳಲ್ಲಿ 12.5 ಲಕ್ಷಕ್ಕೂ ಹೆಚ್ಚು ಮಹಿಳಾ ಒಡೆತನದ ಎಂಎಸ್ಎಂಇಗಳ ನೋಂದಣಿಗೆ ಅನುಕೂಲ ಮಾಡಿಕೊಟ್ಟಿವೆ.

6.4 ಪಿಎಂ ವಿಶ್ವಕರ್ಮ ಮತ್ತು ರಾಷ್ಟ್ರೀಯ ಎಸ್‌ಸಿ-ಎಸ್‌ಟಿ ಹಬ್ ಬೃಹತ್ ಮೆಗಾ ಸಮಾವೇಶ’-2025

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯು 2 ವರ್ಷಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಸ್ಮರಣಾರ್ಥವಾಗಿ 17.09.2025ರಂದು ಬಿಹಾರದ ಬೋಧಗಯಾದಲ್ಲಿ ಸಮಾವೇಶ ಆಯೋಜಿಸಲಾಗಿತ್ತು. ಕೇಂದ್ರದ ಗೌರವಾನ್ವಿತ ಎಂಎಸ್ಎಂಇ ಸಚಿವರು ರಾಜ್ಯ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಫಲಾನುಭವಿಗಳಿಗೆ ಸಾಲ ಪ್ರಮಾಣಪತ್ರಗಳು ಮತ್ತು ಪರಿಕರಗಳನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಫಲಾನುಭವಿಗಳು ಅನುಭವ ಹಂಚಿಕೆ ಕಲಾಪಗಳನ್ನು ನಡೆಸಿದರು, ಅವರು ಈ ಯೋಜನೆಯು ಅವರ ಜೀವನೋಪಾಯ ಮತ್ತು ಉದ್ಯಮಶೀಲತಾ ಅವಕಾಶಗಳನ್ನು ಹೇಗೆ ಹೆಚ್ಚಿಸಿದೆ ಎಂಬುದನ್ನು ಎತ್ತಿ ತೋರಿಸಿದರು. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಡಿ ವಿನ್ಯಾಸ ಬೆಂಬಲ, ಸಾಮರ್ಥ್ಯ ನಿರ್ಮಾಣ ಮತ್ತು ಗ್ರಾಮೀಣ ಜೀವನೋಪಾಯ ಸುಧಾರಣೆ ಹೆಚ್ಚಿಸಲು ಎಂಎಸ್ಎಂಇ ಸಚಿವಾಲಯವು ರಾಷ್ಟ್ರೀಯ ವಿನ್ಯಾಸ ಸಂಸ್ಥೆ(ಎನ್ಐಡಿ) ಮತ್ತು ಗ್ರಾಮೀಣ ನಿರ್ವಹಣಾ ಸಂಸ್ಥೆ ಆನಂದ್(ಐಆರ್ ಎಂಎ)ನೊಂದಿಗೆ ಒಪ್ಪಂದಗಳಿಗೆ ಸಹಿ ಹಾಕಿತು.

6.5 ಎಂಎಸ್ಎಂಇ ಸೇವಾ ಪರ್ವ್-2025: ವಿರಾಸತ್ ಸೆ ವಿಕಾಸ್

ಎಂಎಸ್ಎಂಇ ಸಚಿವಾಲಯವು ಎಂಎಸ್ಎಂಇ ಸೇವಾ ಪರ್ವ್-2025 ಆಚರಿಸಿತು: ವಿರಾಸತ್ ಸೆ ವಿಕಾಸ್ 2025 ಸೆಪ್ಟೆಂಬರ್ 28ರಿಂದ 30ರ ವರೆಗೆ ನಡೆದ ಈ ಕಾರ್ಯಕ್ರಮಕ್ಕೆ ಭಾರತ ಸರ್ಕಾರದ ಎಂಎಸ್ಎಂಇ ಸಚಿವ ಶ್ರೀ ಜಿತನ್ ರಾಮ್ ಮಾಂಝಿ ಅಧ್ಯಕ್ಷತೆ ವಹಿಸಿದ್ದರು. ಎಂಎಸ್ಎಂಇ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು  ಉತ್ತರ ಪ್ರದೇಶದ ವಾರಣಾಸಿಯ ರುದ್ರಾಕ್ಷ ಅಂತಾರಾಷ್ಟ್ರೀಯ ಸಹಕಾರ ಮತ್ತು ಸಮಾವೇಶ ಕೇಂದ್ರದಲ್ಲಿ ಈ ಕಾರ್ಯಕ್ರಮ ಉದ್ಘಾಟಿಸಿದರು. ಸಮುದಾಯಗಳು, ಸಂಸ್ಥೆಗಳು ಮತ್ತು ವ್ಯಕ್ತಿಗಳ ಸೇವೆ, ಸಾಂಸ್ಕೃತಿಕ ಹೆಮ್ಮೆ ಮತ್ತು ನಮ್ಮ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸುವ ಸಾಮೂಹಿಕ ಆಂದೋಲನದಲ್ಲಿ ಒಟ್ಟುಗೂಡಿಸುವಂತೆ ಈ ಕಾರ್ಯಕ್ರಮ ನಡೆಸಲಾಯಿತು. ಪ್ರಧಾನ ಮಂತ್ರಿ ವಿಶ್ವಕರ್ಮ, ಖಾದಿ ಮತ್ತು ಗ್ರಾಮೋದ್ಯೋಗ ಯೋಜನೆ, ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಕಾರ್ಯಕ್ರಮ(ಪಿಎಂಇಜಿಪಿ), ರಾಷ್ಟ್ರೀಯ ಎಸ್‌ಸಿ-ಎಸ್‌ಟಿ ಹಬ್ ಯೋಜನೆ ಸೇರಿದಂತೆ ಎಂಎಸ್ಎಂಇ ಯೋಜನೆಗಳ 1500ಕ್ಕೂ ಹೆಚ್ಚು ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಪಿಎಂವಿ ಫಲಾನುಭವಿಗಳಿಗೆ ಸಾಲ ಪ್ರಮಾಣಪತ್ರಗಳ ವಿತರಣೆ, ಪಿಎಂಇಜಿಪಿ ಫಲಾನುಭವಿಗಳಿಗೆ ಮಾರ್ಜಿನ್ ಮನಿ ಸಬ್ಸಿಡಿ ವಿತರಣೆ ಮತ್ತು ಜಿವಿವೈ ಫಲಾನುಭವಿಗಳಿಗೆ ಟೂಲ್‌ಕಿಟ್‌ಗಳ ವಿತರಣೆಯೂ ನಡೆಯಿತು.

7. ವಿಶೇಷ ಅಭಿಯಾನ 5.0

ಭಾರತ ಸರ್ಕಾರದ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್ಎಂಇ)ಗಳ ಸಚಿವಾಲಯವು ಅದರ ಅಧೀನ/ಅಂಗ ಸಂಸ್ಥೆಗಳು ಮತ್ತು ಕ್ಷೇತ್ರ ರಚನೆಗಳೊಂದಿಗೆ ವಿಶೇಷ ಅಭಿಯಾನ 5.0ರಲ್ಲಿ(2025 ಅಕ್ಟೋಬರ್ 2-31ರ ಅವಧಿ) ಸಕ್ರಿಯವಾಗಿ ಭಾಗವಹಿಸಿದವು. ಸರ್ಕಾರಿ ಕಚೇರಿಗಳಲ್ಲಿ ಉತ್ಪತ್ತಿಯಾಗುವ ಇ-ತ್ಯಾಜ್ಯ ವಿಲೇವಾರಿ, ದೇಶಾದ್ಯಂತ ಹರಡಿರುವ ತನ್ನ ಕಚೇರಿಗಳ ಒಟ್ಟಾರೆ ಶುಚಿತ್ವ ಸುಧಾರಿಸುವುದು, ಅನಗತ್ಯ ಮತ್ತು ಬಳಕೆಯಲ್ಲಿಲ್ಲದ ಚಿಂದಿ ವಸ್ತುಗಳನ್ನು ತೆಗೆದುಹಾಕುವ ಮೂಲಕ ಮತ್ತು ಬಾಕಿ ಇರುವ ವಸ್ತುಗಳನ್ನು ತೆರವುಗೊಳಿಸಲು ವಿಶೇಷ ಗಮನ ಹರಿಸುವ ಮೂಲಕ ಎಲ್ಲಾ ಪಾಲುದಾರರು ಹಲವಾರು ಚಟುವಟಿಕೆಗಳನ್ನು ಸಕ್ರಿಯವಾಗಿ ತೊಡಗಿಸಿಕೊಂಡರು.

ಅಭಿಯಾನ ಸಮಯದಲ್ಲಿ ಎಂಎಸ್ಎಂಇ ಸಚಿವಾಲಯ ಮತ್ತು ಅದರ ಕ್ಷೇತ್ರ ರಚನೆಗಳು 7 ನಿರ್ದಿಷ್ಟ ನಿಯತಾಂಕಗಳಲ್ಲಿ ನಿಗದಿಪಡಿಸಿದ ಗುರಿಗಳಲ್ಲಿ 100% ಸಾಧನೆ ಮಾಡಿವೆ, ಇತರೆ 3 ನಿಯತಾಂಕಗಳಿಗೆ ನಿಗದಿಪಡಿಸಿದ ಗುರಿಗಳಲ್ಲಿ 95%ಗಿಂತ ಹೆಚ್ಚಿನ ಸಾಧನೆ ಮಾಡಿವೆ.

ಅಭಿಯಾನವು ಬಳಕೆಯಲ್ಲಿಲ್ಲದ ತ್ಯಾಜ್ಯಗಳ ವಿಲೇವಾರಿ ಮೂಲಕ 22.89 ಲಕ್ಷ ರೂ. ಆದಾಯ ಗಳಿಸಿತು, ಹೀಗಾಗಿ 21,046 ಚದರ ಅಡಿ ವಿಸ್ತೀರ್ಣದ ಬಳಸಬಹುದಾದ ಕಚೇರಿ ಸ್ಥಳವನ್ನು ಮುಕ್ತಗೊಳಿಸಿತು.

ಸಚಿವಾಲಯ ಮತ್ತು ಅದರ ಅಂಗ ಸಂಸ್ಥೆಗಳು ಅಭಿಯಾನ ಸಮಯದಲ್ಲಿ ತ್ಯಾಜ್ಯವನ್ನು ಅವಕಾಶಗಳಾಗಿ ಪರಿವರ್ತಿಸುವ ಕ್ಷೇತ್ರಗಳಲ್ಲಿ ಹಲವಾರು ಉತ್ತಮ ಅಭ್ಯಾಸಗಳನ್ನು ಕೈಗೊಂಡವು. ನಾಗರಿಕರಲ್ಲಿ ಸ್ವಚ್ಛತಾ ಮತ್ತು ಪರಿಸರಸ್ನೇಹಿ ಅಭ್ಯಾಸಗಳ ಮೌಲ್ಯಗಳನ್ನು ತುಂಬಲು, ಸುಸ್ಥಿರ ಮತ್ತು ಪರಿಸರಸ್ನೇಹಿ ಅಭ್ಯಾಸಗಳು ಮತ್ತು ಜನರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವ ಉಪಕ್ರಮಗಳ ಮೇಲೆ ಗಮನ ಕೇಂದ್ರೀಕರಿಸಲಾಗಿದೆ.

ವಿಶೇಷ ಅಭಿಯಾನ 5.0ರಲ್ಲಿ ಸ್ವಚ್ಛತಾ ಪ್ರತಿಜ್ಞಾವಿಧಿ ಬೋಧಿಸಲಾಯಿತು.

 

 

ವಿಶೇಷ ಅಭಿಯಾನ 5.0ರ ವೇಳೆ ವಾರ್ಧಾದ ಎಂಜಿಐಆರ್ ಐ ಸಂಸ್ಥೆಯು ತನ್ನ ಕ್ಯಾಂಪಸ್‌ನಲ್ಲಿ ತ್ಯಾಜ್ಯದಿಂದ ತಯಾರಿಸಿದ ಅರಿವು ಮೂಡಿಸುವ ಹಸುವಿನ ಕಲಾಕೃತಿ(ತ್ಯಾಜ್ಯದಿಂದ ಸಂಪತ್ತಿಗೆ ಉಪಕ್ರಮ) ಎಲ್ಲರ ಗಮನ ಸೆಳೆಯಿತು.

 

 

*****


(रिलीज़ आईडी: 2210126) आगंतुक पटल : 7
इस विज्ञप्ति को इन भाषाओं में पढ़ें: English , हिन्दी