ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
azadi ka amrit mahotsav

ರಫ್ತು ಮಾಡುವ ಉದ್ದೇಶದ ಎಂ2ಎಂ/ ಐಒಟಿ ಸಾಧನಗಳಲ್ಲಿ ಬಳಸಲು ವಿದೇಶಿ ಟೆಲಿಕಾಂ ಸೇವಾ ಪೂರೈಕೆದಾರರ ಸಿಮ್ / ಇ ಸಿಮ್ ಕಾರ್ಡ್‌ಗಳ ಮಾರಾಟಕ್ಕೆ ಸಂಬಂಧಿಸಿದ ನಿಯಂತ್ರಕ ಚೌಕಟ್ಟಿನ' ಕುರಿತು ಟ್ರಾಯ್ ಶಿಫಾರಸುಗಳನ್ನು ಬಿಡುಗಡೆ ಮಾಡಿದೆ

प्रविष्टि तिथि: 30 DEC 2025 5:39PM by PIB Bengaluru

ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು ಇಂದು 'ರಫ್ತು ಮಾಡುವ ಉದ್ದೇಶದ ಎಂ2ಎಂ/ ಐಒಟಿ ಸಾಧನಗಳಲ್ಲಿ ಬಳಸಲು ವಿದೇಶಿ ಟೆಲಿಕಾಂ ಸೇವಾ ಪೂರೈಕೆದಾರರ ಸಿಮ್‌/ ಇ-ಸಿಮ್‌ ಕಾರ್ಡ್‌ಗಳ ಮಾರಾಟಕ್ಕೆ ಸಂಬಂಧಿಸಿದ ನಿಯಂತ್ರಕ ಚೌಕಟ್ಟಿನ' ಕುರಿತು ತನ್ನ ಶಿಫಾರಸುಗಳನ್ನು ಬಿಡುಗಡೆ ಮಾಡಿದೆ.

ಭಾರತ ಸರ್ಕಾರದ ಸಂವಹನ ಸಚಿವಾಲಯದ ದೂರಸಂಪರ್ಕ ಇಲಾಖೆಯು, 17.09.2024ರ ಪತ್ರದ ಮೂಲಕ, ರಫ್ತು ಉದ್ದೇಶಗಳಿಗಾಗಿ ಎಂ2ಎಂ/ ಐಒಟಿ ಸಾಧನಗಳಲ್ಲಿ ಬಳಸಲಾಗುವ ವಿದೇಶಿ ಟೆಲಿಕಾಂ ಸೇವಾ ಪೂರೈಕೆದಾರರ ಸಿಮ್‌/ ಇ-ಸಿಮ್‌ ಕಾರ್ಡ್‌ಗಳ ಆಮದು ಅಥವಾ ಮಾರಾಟಕ್ಕಾಗಿ ಆಕ್ಷೇಪಣಾ ರಹಿತ ಪ್ರಮಾಣಪತ್ರದ ವಿತರಣೆ ಮತ್ತು ನವೀಕರಣದ ನಿಯಮಗಳು ಹಾಗೂ ಷರತ್ತುಗಳ ಕುರಿತು ಟ್ರಾಯ್ ಕಾಯ್ದೆ, 1997 ರ ಸೆಕ್ಷನ್ 11(1)(a) ಅಡಿಯಲ್ಲಿ ಶಿಫಾರಸುಗಳನ್ನು ನೀಡುವಂತೆ ಟ್ರಾಯ್‌ ಗೆ ವಿನಂತಿಸಿತ್ತು.

ಈ ನಿಟ್ಟಿನಲ್ಲಿ, ಟ್ರಾಯ್ 04.07.2025 ರಂದು ಸಂಬಂಧಪಟ್ಟವರಿಂದ ಅಭಿಪ್ರಾಯ ಪಡೆಯಲು ಸಮಾಲೋಚನಾ ಪತ್ರವನ್ನು ಹೊರಡಿಸಿತ್ತು. ಇದಕ್ಕೆ ಪ್ರತಿಕ್ರಿಯೆಯಾಗಿ ಒಂಬತ್ತು ಜನ ತಮ್ಮ ಅಭಿಪ್ರಾಯಗಳನ್ನು ನೀಡಿದ್ದರು. ಈ ಕುರಿತ ಮುಕ್ತ ಚರ್ಚೆಯು 25.09.2025 ರಂದು ಆನ್‌ಲೈನ್ ಮೂಲಕ ನಡೆದಿತ್ತು. ಸಮಾಲೋಚನಾ ಪ್ರಕ್ರಿಯೆಯಲ್ಲಿ ಬಂದ ಅಭಿಪ್ರಾಯಗಳು ಮತ್ತು ಹೆಚ್ಚಿನ ವಿಶ್ಲೇಷಣೆಯ ಆಧಾರದ ಮೇಲೆ, ಟ್ರಾಯ್ ಈಗ ಈ ಶಿಫಾರಸುಗಳನ್ನು ಅಂತಿಮಗೊಳಿಸಿದೆ.

ಮೆಷಿನ್-ಟು-ಮೆಷಿನ್ ಸಂವಹನ ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ ತಂತ್ರಜ್ಞಾನಗಳು ಒಟ್ಟಾಗಿ ಇಂಧನ ಗ್ರಿಡ್‌ಗಳು, ಸಾರಿಗೆ ವ್ಯವಸ್ಥೆಗಳು, ನೀರು ಸರಬರಾಜು ಜಾಲಗಳು ಮತ್ತು ಕೃಷಿಯಂತಹ ವಿವಿಧ ಉದ್ಯಮಗಳ ಮೂಲಸೌಕರ್ಯದ ಸ್ವರೂಪವನ್ನು ರೂಪಿಸುತ್ತಿವೆ. ಸ್ಮಾರ್ಟ್ ಮೀಟರ್‌ಗಳು, ಕನೆಕ್ಟೆಡ್ ಕಾರ್‌ಗಳು ಮತ್ತು ಕೈಗಾರಿಕಾ ಸೆನ್ಸರ್‌ಗಳಂತಹ ಎಂ2ಎಂ/ ಐಒಟಿ ಸಾಧನಗಳ ಭಾರತೀಯ ತಯಾರಕರು ತಮ್ಮ ಸಾಧನಗಳು ರಫ್ತಾಗುವ ದೇಶಗಳಲ್ಲಿ ಯಾವುದೇ ಅಡೆತಡೆಯಿಲ್ಲದೆ ಕಾರ್ಯನಿರ್ವಹಿಸಲು ವಿದೇಶಿ ಟೆಲಿಕಾಂ ಸೇವಾ ಪೂರೈಕೆದಾರರ ಸಿಮ್‌/ ಇ-ಸಿಮ್‌ ಕಾರ್ಡ್‌ಗಳನ್ನು ಅಳವಡಿಸಬೇಕಾಗುತ್ತದೆ.

ಪ್ರಸ್ತುತ ದೇಶದಲ್ಲಿ ರಫ್ತು ಉದ್ದೇಶದ ಎಂ2ಎಂ/ ಐಒಟಿ ಸಾಧನಗಳಿಗಾಗಿ ವಿದೇಶಿ ಸಿಮ್‌ ಕಾರ್ಡ್‌ಗಳ ಮಾರಾಟಕ್ಕೆ ಯಾವುದೇ ನಿಯಂತ್ರಕ ಚೌಕಟ್ಟು ಇಲ್ಲ. ಆದ್ದರಿಂದ, ರಫ್ತು ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಮತ್ತು ಭಾರತೀಯ ತಯಾರಕರು ಈ ಸಾಧನಗಳಲ್ಲಿ ವಿದೇಶಿ ಸಿಮ್‌ ಕಾರ್ಡ್‌ಗಳನ್ನು ಅಳವಡಿಸುವಾಗ ಭದ್ರತಾ ಕಾಳಜಿಗಳನ್ನು ಗಮನದಲ್ಲಿಟ್ಟುಕೊಂಡು ಒಂದು ಪೂರಕ ನಿಯಂತ್ರಕ ಚೌಕಟ್ಟಿನ ಅಗತ್ಯವಿದೆ.

ಟ್ರಾಯ್ ಶಿಫಾರಸುಗಳ ಪ್ರಮುಖ ಮುಖ್ಯಾಂಶಗಳು:

a. ರಫ್ತು ಉದ್ದೇಶದ ಎಂ2ಎಂ/ ಐಒಟಿ ಸಾಧನಗಳಲ್ಲಿ ಬಳಸಲು ವಿದೇಶಿ ಟೆಲಿಕಾಂ ಸೇವಾ ಪೂರೈಕೆದಾರರ ಸಿಮ್/ಇ-ಸಿಮ್ ಕಾರ್ಡ್‌ಗಳ ಮಾರಾಟವನ್ನು ದೂರಸಂಪರ್ಕ ಕಾಯ್ದೆ 2023ರ ಅಡಿಯಲ್ಲಿ ಲಘು-ಸ್ಪರ್ಶ ಸೇವಾ ಅಧಿಕಾರ ಮೂಲಕ ನಿಯಂತ್ರಿಸಬೇಕು. ಈ ಹೊಸ ಸೇವಾ ಅಧಿಕಾರವನ್ನು "ಅಂತಾರಾಷ್ಟ್ರೀಯ ಎಂ2ಎಂ ಸಿಮ್ ಸೇವಾ ಅಧಿಕಾರ" ಎಂದು ಕರೆಯಬೇಕು.
b. ಈ ಅಂತಾರಾಷ್ಟ್ರೀಯ ಎಂ2ಎಂ ಸಿಮ್ ಸೇವಾ ಅಧಿಕಾರವನ್ನು ಆನ್‌ಲೈನ್ ಮೂಲಕ, ಡಿಜಿಟಲ್ ಸಹಿ ಮಾಡಿದ ಸ್ವಯಂ-ಚಾಲಿತ ಅಧಿಕಾರ ಪತ್ರದ ಮೂಲಕ ನೀಡಬೇಕು.
c. ಭಾರತೀಯ ಕಂಪನಿಗಳ ಕಾಯ್ದೆಯಡಿ ನೋಂದಾಯಿತವಾದ ಯಾವುದೇ ಕಂಪನಿಯು ಈ ಅಂತಾರಾಷ್ಟ್ರೀಯ ಎಂ2ಎಂ ಸಿಮ್ ಸೇವಾ ಅಧಿಕಾರವನ್ನು ಪಡೆಯಲು ಅರ್ಹವಾಗಿರುತ್ತದೆ. ಈ ಅಧಿಕಾರಕ್ಕಾಗಿ ಪ್ರವೇಶ ಶುಲ್ಕ, ಕನಿಷ್ಠ ಇಕ್ವಿಟಿ, ಕನಿಷ್ಠ ನಿವ್ವಳ ಮೌಲ್ಯ, ಬ್ಯಾಂಕ್ ಗ್ಯಾರಂಟಿ ಮತ್ತು ಅಧಿಕಾರ ಶುಲ್ಕಗಳು ಶೂನ್ಯ ಆಗಿರಬೇಕು. ಅರ್ಜಿ ಸಂಸ್ಕರಣಾ ಶುಲ್ಕವು  ₹5,000 ಇರಬೇಕು ಮತ್ತು ಈ ಅಧಿಕಾರದ ಸಿಂಧುತ್ವ ಅವಧಿಯು 10 ವರ್ಷಗಳಾಗಿರಬೇಕು.
d. ಪರೀಕ್ಷಾ ಉದ್ದೇಶಗಳಿಗಾಗಿ, ವಿದೇಶಿ ಟೆಲಿಕಾಂ ಸೇವಾ ಪೂರೈಕೆದಾರರ ಸಿಮ್/ ಇ ಸಿಮ್ ಕಾರ್ಡ್‌ಗಳನ್ನು ಭಾರತದಲ್ಲಿ ಗರಿಷ್ಠ ಆರು ತಿಂಗಳ ಅವಧಿಗೆ ಸಕ್ರಿಯಗೊಳಿಸಲು ಅನುಮತಿಸಬೇಕು.
e.  ಎಂ2ಎಂ/ ಐಒಟಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ರಫ್ತುದಾರರು ಮತ್ತು ಆಮದುದಾರರ ಮಾರುಕಟ್ಟೆ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ, ರಫ್ತು ಮಾಡುವ ಸಾಧನಗಳಿಗಾಗಿ ವಿದೇಶಿ ಸಿಮ್ ಕಾರ್ಡ್‌ಗಳ ಆಮದು ಮತ್ತು ಆಮದು ಮಾಡಿಕೊಳ್ಳುವ ಸಾಧನಗಳಿಗಾಗಿ ಭಾರತೀಯ ಸಿಮ್ ಕಾರ್ಡ್‌ಗಳ ರಫ್ತಿಗೆ ಸಂಬಂಧಿಸಿದಂತೆ ಸ್ಪಷ್ಟ ನಿಯಂತ್ರಕ ಚೌಕಟ್ಟನ್ನು ರೂಪಿಸಲು ದೂರಸಂಪರ್ಕ ಇಲಾಖೆಯು ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವಾಲಯಗಳೊಂದಿಗೆ (ಹಣಕಾಸು ಸಚಿವಾಲಯ, ವಾಣಿಜ್ಯ ಸಚಿವಾಲಯ ಇತ್ಯಾದಿ) ಸಮನ್ವಯ ಸಾಧಿಸಬೇಕು ಎಂದು ಟ್ರಾಯ್ ಶಿಫಾರಸು ಮಾಡಿದೆ.

ಟ್ರಾಯ್ ನೀಡಿದ ಈ ಶಿಫಾರಸುಗಳು ಸರ್ಕಾರದ "ಮೇಕ್ ಇನ್ ಇಂಡಿಯಾ" ಉಪಕ್ರಮಕ್ಕೆ ಬೆಂಬಲ ನೀಡಲಿವೆ ಮತ್ತು ಜಾಗತಿಕ ಮಾರುಕಟ್ಟೆಗಳಿಗಾಗಿ ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಲಿವೆ. ಟ್ರಾಯ್ ಶಿಫಾರಸು ಮಾಡಿರುವ 'ಅಂತಾರಾಷ್ಟ್ರೀಯ ಎಂ2ಎಂ ಸಿಮ್‌ ಸೇವಾ ಅಧಿಕಾರ'ದ ನಿಯಂತ್ರಕ ಚೌಕಟ್ಟು, ಎಂ2ಎಂ ಸಾಮರ್ಥ್ಯವಿರುವ ಭಾರತೀಯ ಉತ್ಪನ್ನಗಳನ್ನು ಜಾಗತಿಕವಾಗಿ ಹೆಚ್ಚು ಆಕರ್ಷಕವಾಗಿಸುತ್ತದೆ. ಇದು ಭಾರತೀಯ ಉದ್ಯಮಗಳು ಐಒಟಿ/ ಎಂ2ಎಂ ಮಾರುಕಟ್ಟೆಗಳಲ್ಲಿ ಈಗಾಗಲೇ ನೆಲೆಯೂರಿರುವ ಜಾಗತಿಕ ಕಂಪನಿಗಳೊಂದಿಗೆ ಪೈಪೋಟಿ ನಡೆಸಲು ಸಹಾಯ ಮಾಡುತ್ತದೆ. 

ಈ ಶಿಫಾರಸುಗಳನ್ನು ಟ್ರಾಯ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ (www.trai.gov.in) ಪ್ರಕಟಿಸಲಾಗಿದೆ. ಯಾವುದೇ ಸ್ಪಷ್ಟೀಕರಣ ಅಥವಾ ಮಾಹಿತಿಗಾಗಿ, ಟ್ರಾಯ್‌ನ ಸಲಹೆಗಾರರಾದ (ನೆಟ್‌ವರ್ಕ್, ಸ್ಪೆಕ್ಟ್ರಮ್ ಮತ್ತು ಲೈಸೆನ್ಸಿಂಗ್) ಶ್ರೀ ಅಖಿಲೇಶ್ ಕುಮಾರ್ ತ್ರಿವೇದಿ ಅವರನ್ನು ದೂರವಾಣಿ ಸಂಖ್ಯೆ +91-11-20907758 ಮೂಲಕ ಸಂಪರ್ಕಿಸಬಹುದು.


(रिलीज़ आईडी: 2209929) आगंतुक पटल : 8
इस विज्ञप्ति को इन भाषाओं में पढ़ें: English , Urdu , हिन्दी