ವಾರ್ತಾ ಮತ್ತು ಪ್ರಸಾರ ಸಚಿವಾಲಯ
ದೂರದರ್ಶನ ಮತ್ತು ಆಕಾಶವಾಣಿ ಜಾಲದ ಮೂಲಕ ಪ್ರಾದೇಶಿಕ ಭಾಷೆಗಳಲ್ಲಿ ಸಾರ್ವಜನಿಕ ಸೇವಾ ಪ್ರಸಾರಕ್ಕೆ ಬಲ
ಪ್ರಕಟಣಾ ದಿನಾಂಕ:
19 DEC 2025 8:26PM by PIB Bengaluru
ದೂರದರ್ಶನ ಜಾಲವು 28 ಪ್ರಾದೇಶಿಕ/ರಾಜ್ಯ ವಾಹಿನಿಗಳನ್ನು ಹೊಂದಿದ್ದು, ಅವುಗಳು ಆಯಾ ಪ್ರಾದೇಶಿಕ ಭಾಷೆ/ಉಪಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಬಿತ್ತರಿಸುತ್ತವೆ. ಆಕಾಶವಾಣಿಯು ದೇಶಾದ್ಯಂತದ 112 ಪ್ರಾದೇಶಿಕ ವಾಹಿನಿಗಳಲ್ಲಿ 23 ಪ್ರಮುಖ ಭಾಷೆಗಳು ಮತ್ತು 182 ಉಪಭಾಷೆಗಳಲ್ಲಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದೆ.
ಪ್ರೇಕ್ಷಕರ ಅಭಿರುಚಿ ಮತ್ತು ಸಾರ್ವಜನಿಕ ಸೇವಾ ಉದ್ದೇಶಗಳಿಗೆ ಅನುಗುಣವಾಗಿ ಪ್ರಾದೇಶಿಕ ಭಾಷೆಗಳಲ್ಲಿ ಹೊಸ ಕಾರ್ಯಕ್ರಮಗಳನ್ನು ನಿರಂತರವಾಗಿ ಸೇರ್ಪಡೆ ಮಾಡಲಾಗುತ್ತದೆ.
ಪ್ರಸಾರ ಭಾರತಿಯ ಆಧುನೀಕರಣ ಮತ್ತು ಮೇಲ್ದರ್ಜೀಕರಣ ಕಾರ್ಯವನ್ನು ಕೇಂದ್ರ ವಲಯ ಯೋಜನೆ ಪ್ರಸಾರ ಮೂಲಸೌಕರ್ಯ ಮತ್ತು ಜಾಲ ಅಭಿವೃದ್ಧಿ (ಬಿಂಡ್) (2021–26) ಅಡಿಯಲ್ಲಿ ಒಟ್ಟು ₹2,539.61 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ.
ಈ ಯೋಜನೆಯು ದೂರದರ್ಶನ ಮತ್ತು ಆಕಾಶವಾಣಿಯಾದ್ಯಂತ ಪ್ರಸರಣ ಉಪಕರಣಗಳು, ಸ್ಟುಡಿಯೋ ಸೌಲಭ್ಯಗಳು, ಟ್ರಾನ್ಸಿಸ್ಟರ್ ಗಳು ಮತ್ತು ಡಿಜಿಟಲ್ ಪ್ರಸಾರ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದರ ಮೇಲೆ ಕೇಂದ್ರೀಕರಿಸಿದೆ.
ಪ್ರಸಾರ ವಲಯದಲ್ಲಿ ತಾಂತ್ರಿಕ ಪ್ರಗತಿಯ ಹಿನ್ನೆಲೆಯಲ್ಲಿ, ಬದಲಾಗುತ್ತಿರುವ ಅಗತ್ಯಕ್ಕನುಗುಣವಾಗಿ ಪ್ರಸಾರ ಭಾರತಿಯು ಒಪ್ಪಂದದ ನೇಮಕಾತಿ (ಕಾಂಟ್ರ್ಯಾಕ್ಚುಯಲ್ ಎಂಗೇಜ್ಮೆಂಟ್ ಪಾಲಿಸಿ) ಮೂಲಕ ಮಾನವ ಸಂಪನ್ಮೂಲ ಸೇವೆ ಪಡೆಯುತ್ತಿದೆ. ದೂರದರ್ಶನ ಮತ್ತು ಆಕಾಶವಾಣಿ ಕೇಂದ್ರಗಳ ಯೋಜಿತ ಕಾರ್ಯನಿರ್ವಹಣಾ ಅವಶ್ಯಕತೆಗೆ ಅನುಗುಣವಾಗಿ ಈ ನೇಮಕಾತಿ ಮಾಡಲಾಗುತ್ತದೆ.
ದೂರದರ್ಶನವು 65 ಕಾರ್ಯಕ್ರಮ ನಿರ್ಮಾಣ ಕೇಂದ್ರಗಳನ್ನು ಹೊಂದಿದೆ ಮತ್ತು ಆಕಾಶವಾಣಿಯು ಕಾರ್ಯಕ್ರಮ ರೂಪಿಸಲು ಸ್ಟುಡಿಯೋ ಸೌಲಭ್ಯಗಳೊಂದಿಗೆ 230 ಕೇಂದ್ರಗಳನ್ನು ಹೊಂದಿದೆ. ಇದು ಆಯಾ ಪ್ರದೇಶ/ಸ್ಥಳೀಯ ಕೇಂದ್ರಗಳ ಕಲಾವಿದರು, ಸೃಜನಶೀಲ ಪ್ರತಿಭೆಯನ್ನು ಬಳಸಿಕೊಂಡು ಸ್ಥಳೀಯ/ಪ್ರಾದೇಶಿಕ ಭಾಷೆಯಲ್ಲಿ ವಿಚಾರಧಾರೆಗಳನ್ನು ಪ್ರಸಾರ ಮಾಡಲು ಅನುವು ಮಾಡಿದೆ.
ರಾಜ್ಯಸಭೆಯಲ್ಲಿ ಶ್ರೀಮತಿ ಗೀತಾ ಅಲಿಯಾಸ್ ಚಂದ್ರಪ್ರಭಾ ಅವರು ಕೇಳಿದ ಪ್ರಶ್ನೆಗಳಿಗೆ ಉತ್ತರವಾಗಿ ವಾರ್ತಾ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವರಾದ ಡಾ. ಎಲ್. ಮುರುಗನ್ ಅವರು ಇಂದು ಈ ವಿವರಗಳನ್ನು ಒದಗಿಸಿದರು.
*****
(ಪ್ರಕಟಣೆ ಐ.ಡಿ.: 2206946)
ವಿಸಿಟರ್ ಕೌಂಟರ್ : 37