ರೈಲ್ವೇ ಸಚಿವಾಲಯ
ತಿರುಪತಿ-ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿದ ಕೇಂದ್ರ ಸಚಿವರಾದ ಶ್ರೀ ವಿ. ಸೋಮಣ್ಣ
ಹೊಸ ರೈಲಿನಿಂದ ತೀರ್ಥಯಾತ್ರೆ ಪ್ರವಾಸೋದ್ಯಮ, ಆರ್ಥಿಕ ಚಟುವಟಿಕೆ ಮತ್ತು ಪ್ರಾದೇಶಿಕ ಅಭಿವೃದ್ಧಿಗೆ ಉತ್ತೇಜನ
ಭಾರತೀಯ ರೈಲ್ವೆ ಪ್ರದೇಶಗಳು ಮತ್ತು ಸಂಸ್ಕೃತಿಗಳನ್ನು ಬೆಸೆಯುತ್ತದೆ, ದೇಶದ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತದೆ: ವಿ. ಸೋಮಣ್ಣ
प्रविष्टि तिथि:
09 DEC 2025 1:57PM by PIB Bengaluru
ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಖಾತೆ ಸಚಿವರಾದ ಶ್ರೀ ವಿ. ಸೋಮಣ್ಣ ನವದೆಹಲಿಯ ರೈಲ್ ಭವನದಿಂದ ಇಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ತಿರುಪತಿ-ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.

ತಿರುಪತಿ-ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭದಿಂದಾಗಿ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ ಮತ್ತು ಮಹಾರಾಷ್ಟ್ರ ನಾಲ್ಕು ರಾಜ್ಯಗಳಲ್ಲಿ ರೈಲು ಸಂಪರ್ಕವನ್ನು ಗಣನೀಯವಾಗಿ ವೃದ್ಧಿಸುವ ಮೂಲಕ ಬಹು ದೂರಗಾಮಿ ಪ್ರಯೋಜನಗಳನ್ನು ನೀಡುತ್ತದೆ. ಇದು ಆಂಧ್ರಪ್ರದೇಶದ ದಕ್ಷಿಣ ಕರಾವಳಿ ವಲಯದಿಂದ ಭಕ್ತರಿಗಾಗಿ ಶಿರಡಿಗೆ ಮೊದಲ ನೇರ ರೈಲು ಸೇವೆಯನ್ನು ಪರಿಚಯಿಸುತ್ತದೆ. ಭಾರತದ ಎರಡು ಪ್ರಮುಖ ಯಾತ್ರಾ ಸ್ಥಳಗಳಾದ ತಿರುಪತಿ ಮತ್ತು ಶಿರಡಿಯನ್ನು ನೇರವಾಗಿ ಸಂಪರ್ಕಿಸುವ ಮೂಲಕ, ಈ ಸೇವೆಯು ಯಾತ್ರಾರ್ಥಿಗಳಿಗೆ ಹೆಚ್ಚಿನ ಅನುಕೂಲವನ್ನು ಕಲ್ಪಿಸುತ್ತದೆ.
ಹೊಸ ರೈಲು ಸೇವೆ ತೀರ್ಥಯಾತ್ರೆ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ, ಆ ಮಾರ್ಗದಲ್ಲಿ ಆರ್ಥಿಕ ಚಟುವಟಿಕೆ ಉತ್ತೇಜಿಸುತ್ತದೆ ಮತ್ತು ಪ್ರಾದೇಶಿಕ ಅಭಿವೃದ್ಧಿಯನ್ನು ಬೆಂಬಲಿಸುತ್ತದೆಂದು ನಿರೀಕ್ಷಿಸಲಾಗಿದೆ. ಅಲ್ಲದೆ, ಇದು ಹೆಚ್ಚುವರಿಯಾಗಿ ಪ್ರಯಾಣಿಕರಿಗೆ ಸುರಕ್ಷಿತ, ಆರಾಮದಾಯಕ ಮತ್ತು ತೊಂದರೆ-ಮುಕ್ತ ಅಂತರ-ರಾಜ್ಯ ಪ್ರಯಾಣದ ಆಯ್ಕೆಯನ್ನು ಒದಗಿಸುತ್ತದೆ, ಯಾತ್ರಾರ್ಥಿಗಳಿಗೆ ಒಟ್ಟಾರೆ ರೈಲು ಪ್ರಯಾಣದ ಅನುಭವವನ್ನು ಸುಧಾರಿಸುತ್ತದೆ. ಹೊಸ ಸಾಪ್ತಾಹಿಕ ರೈಲು ಯಾತ್ರಿಕರಿಗೆ ಪ್ರತಿ ಮಾರ್ಗಕ್ಕೆ ಸುಮಾರು 30 ಗಂಟೆಗಳ ಪ್ರಯಾಣದ ಸಮಯದೊಂದಿಗೆ ತಡೆರಹಿತ ಪ್ರಯಾಣ ಒದಗಿಸುತ್ತದೆ.
ತಿರುಪತಿ-ಸಾಯಿನಗರ ಶಿರಡಿ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭದಿಂದಾಗಿ ಇಂದು ನಾಲ್ಕು ರಾಜ್ಯಗಳ ಭಕ್ತರಿಗೆ ಐತಿಹಾಸಿಕ ದಿನ ಎಂದು ಶ್ರೀ ವಿ. ಸೋಮಣ್ಣ ಬಣ್ಣಿಸಿದರು. ಭಾರತೀಯ ರೈಲ್ವೆ ಸಾರಿಗೆ ಮಾಧ್ಯಮವಾಗಿ ಮಾತ್ರವಲ್ಲದೆ ಪ್ರದೇಶಗಳು ಮತ್ತು ಸಂಸ್ಕೃತಿಗಳನ್ನು ಬೆಸೆಯುತ್ತದೆ ಮತ್ತು ದೇಶದ ಜೀವನಾಡಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದರು.
ತಿರುಪತಿ ಮತ್ತು ಶಿರಡಿ ನಡುವೆ ಇದೀಗ ನೆಲ್ಲೂರು, ಗುಂಟೂರು, ಸಿಕಂದರಾಬಾದ್, ಬೀದರ್, ಮನ್ಮದ್ ಮತ್ತಿತರ ಪ್ರಮುಖ ಸ್ಥಳಗಳಲ್ಲಿ 31 ನಿಲ್ದಾಣಗಳೊಂದಿಗೆ ನೇರ ರೈಲಿನ ಮೂಲಕ ಸಂಪರ್ಕ ಹೊಂದಿದಂತಾಗುತ್ತದೆ ಎಂದು ಶ್ರೀ ವಿ. ಸೋಮಣ್ಣ ಹೇಳಿದರು. ಈ ಸೇವೆಯು ಯಾತ್ರಾ ಪ್ರವಾಸೋದ್ಯಮ, ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಮಾರ್ಗದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುತ್ತದೆ ಎಂದು ಅವರು ಹೇಳಿದರು. ಈ ಹೊಸ ರೈಲು ಮಹಾರಾಷ್ಟ್ರ, ಉತ್ತರ ಕರ್ನಾಟಕ ಮತ್ತು ಸಿಕಂದರಾಬಾದ್‌ನಿಂದ ನೇರ ಸಂಪರ್ಕ ಒದಗಿಸುತ್ತದೆ ಎಂದು ಅವರು ಹೇಳಿದರು. ಅದರ ಮಾರ್ಗದಲ್ಲಿ, ಇದು ಪ್ರಮುಖ ಶಿವ ದೇವಾಲಯವಾದ ಪಾರ್ಲಿ ವೈಜನಾಥ್ ಅನ್ನು ಸಹ ಸಂಪರ್ಕಿಸುತ್ತದೆ.
2014 ರಿಂದ ಆಂಧ್ರಪ್ರದೇಶವು ರೈಲು ಮೂಲಸೌಕರ್ಯದಲ್ಲಿ ಗಮನಾರ್ಹ ಪ್ರಗತಿಯನ್ನು ಕಂಡಿದೆ ಎಂದು ಕೇಂದ್ರ ರಾಜ್ಯ ಸಚಿವರು ಪ್ರಮುಖವಾಗಿ ಉಲ್ಲೇಖಿಸಿದರು. 2009–14ರ ಅವಧಿಯಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಸರಾಸರಿ ರೈಲು ಬಜೆಟ್ 886 ಕೋಟಿ ರೂ. ಆಗಿದ್ದರೆ, 2025–26ರಲ್ಲಿ ಅದು 9,417 ಕೋಟಿ ರೂ.ಗೆ ಏರಿಕೆಯಾಗಿದ್ದು, ಇದು ಹನ್ನೊಂದು ಪಟ್ಟು ಅಧಿಕವಾಗಿದೆ ಎಂದು ಅವರು ಉಲ್ಲೇಖಿಸಿದರು. ರಾಜ್ಯದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳ ಮೌಲ್ಯ 93,000 ಕೋಟಿಗಿಂತ ಅಧಿಕವಾದದ್ದಾಗಿದೆ. 2014 ರಿಂದ ಆಂಧ್ರಪ್ರದೇಶವು ಶೇ.100ರಷ್ಟು ವಿದ್ಯುದೀಕರಣದೊಂದಿಗೆ 1,580 ಕಿ.ಮೀ ಹೊಸ ಹಳಿಗಳನ್ನು ಸೇರ್ಪಡೆ ಮಾಡಿದೆ. ರಾಜ್ಯವು ಇದೀಗ 73 ಅಮೃತ್ ನಿಲ್ದಾಣಗಳನ್ನು ಹೊಂದಿದೆ (3,125 ಕೋಟಿ ರೂ.). 800 ಫ್ಲೈಓವರ್‌ಗಳು ಮತ್ತು ಸೇತುವೆಗಳ ನಿರ್ಮಾಣ, 110 ಲಿಫ್ಟ್‌ಗಳ ಸ್ಥಾಪನೆ, 40 ಎಸ್ಕಲೇಟರ್‌ಗಳ ಸ್ಥಾಪನೆ, ಜೊತೆಗೆ 16 ವಂದೇ ಭಾರತ್ (8 ಜೋಡಿ) ಮತ್ತು 6 ಅಮೃತ್ ಭಾರತ್ (3 ಜೋಡಿ) ರೈಲು ಸೇವೆಗಳನ್ನು ಪರಿಚಯಿಸಿರುವ ಬಗ್ಗೆಯೂ ಅವರು ಉಲ್ಲೇಖಿಸಿದರು.
ತಿರುಪತಿಯಲ್ಲಿ, ಭಾರತೀಯ ರೈಲ್ವೆ 312 ಕೋಟಿ ರೂಪಾಯಿ ಮೌಲ್ಯದ ತಿರುಪತಿ ಅಮೃತ್ ನಿಲ್ದಾಣ ಸೇರಿದಂತೆ ಹಲವು ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ ಎಂದು ಶ್ರೀ ವಿ. ಸೋಮಣ್ಣ ಹೇಳಿದ್ದಾರೆ. ತಿರುಪತಿ-ಪಕಲಾ-ಕಟ್ಪಾಡಿ ಡಬ್ಲಿಂಗ್, ₹1,215 ಕೋಟಿ ವೆಚ್ಚದ 105 ಕಿ.ಮೀ, ಗುಡೂರು-ರೇಣಿಗುಂಟ 3 ನೇ ಮಾರ್ಗ, 875 ಕೋಟಿ ರೂ, ವೆಚ್ಚದ 83 ಕಿ.ಮೀ ಮತ್ತು ನದಿಕುಡಿ-ಶ್ರೀಕಾಳಹಸ್ತಿ ಹೊಸ ಮಾರ್ಗ, 5,900 ಕೋಟಿ ರೂ.ವೆಚ್ಚದ 310 ಕಿ.ಮೀ. ಹೆಚ್ಚುವರಿಯಾಗಿ 6,235 ಕೋಟಿ ರೂ. ವೆಚ್ಚದ ವಿಜಯವಾಡ–ಗುಡೂರು 3ನೇ ಮಾರ್ಗದ 287 ಕಿ.ಮೀ ಹಾಗೂ 490 ಕೋಟಿ ರೂಪಾಯಿ ವೆಚ್ಚದ ಯರ್ಪೇಡು–ಪುಡಿ ಬೈಪಾಸ್ ಮಾರ್ಗದ 25 ಕಿ.ಮೀ ಕಾಮಗಾರಿ ನಡೆಯುತ್ತಿದೆ.
ಆಂಧ್ರಪ್ರದೇಶ ಸರ್ಕಾರದ ರಸ್ತೆ ಮತ್ತು ಕಟ್ಟಡಗಳು, ಮೂಲಸೌಕರ್ಯ ಮತ್ತು ಹೂಡಿಕೆಗಳ ಸಚಿವರಾದ ಶ್ರೀ ಬಿ.ಸಿ. ಜನಾರ್ದನ ರೆಡ್ಡಿ ಅವರು ಗೌರವ ಅತಿಥಿಯಾಗಿ ಭಾಗವಹಿಸಿದ್ದರು. ತಿರುಪತಿಯ ಸಂಸದರಾದ ಡಾ.ಮಡ್ಡಿಲ ಗುರುಮೂರ್ತಿ ಗಾರು; ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಬಿ. ಕಲ್ಯಾಣ ಚಕ್ರವರ್ತಿ ಗಾರು, ತಿರುಪತಿ ವಿಧಾನಸಭಾ ಸದಸ್ಯರಾದ ಶ್ರೀ ಎ. ಶ್ರೀನಿವಾಸಲು ಗಾರು ಮತ್ತು ಟಿಟಿಡಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಭಾನು ಪ್ರಕಾಶ್ ರೆಡ್ಡಿ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
*****
(रिलीज़ आईडी: 2200848)
आगंतुक पटल : 32