ಭೂವಿಜ್ಞಾನ ಸಚಿವಾಲಯ
azadi ka amrit mahotsav

ಭಾರತದ ಭವಿಷ್ಯದ ಪೀಳಿಗೆಯ ನವೋದ್ಯಮಗಳನ್ನು ರೂಪಿಸುವಲ್ಲಿ ಹಣಕಾಸು ನೆರವಿನ ಜೊತೆಗೆ ಮಾರ್ಗದರ್ಶನ ಕೂಡ ಪ್ರಧಾನ: ಡಾ.ಜಿತೇಂದ್ರ ಸಿಂಗ್


ಸಂಭಾವ್ಯ ಅಪಾಯ ಎದುರಿಸುವ ಶಕ್ತಿಯನ್ನು  ಮಾರ್ಗದರ್ಶನ ನೀಡಬಲ್ಲದಾಗಿದ್ದು ಭಾರತದ ಮುಂದಿನ ಸ್ಟಾರ್ಟ್‌ ಅಪ್‌ಗಳಿಗೆ ಚುರುಕು ನೀಡಲಿದೆ: ಡಾ. ಜಿತೇಂದ್ರ ಸಿಂಗ್ ಪ್ರತಿಪಾದನೆ

ಪರಿಕಲ್ಪನೆಗಳಿಂದ ಮಾರುಕಟ್ಟೆಗಳವರೆಗೆ: ಸರ್ಕಾರಿ ವೇದಿಕೆಗಳಿಂದ ಹಣಕಾಸು ಮತ್ತು ಉದ್ಯಮದೊಂದಿಗೆ ನವೋದ್ಯಮಗಳ ಸಂಪರ್ಕ - ಸಚಿವರು

प्रविष्टि तिथि: 07 DEC 2025 6:26PM by PIB Bengaluru

ಸ್ಟಾರ್ಟ್‌ ಅಪ್‌ ಗಳು ಭಾರತದ ಭವಿಷ್ಯದ ಬೆಳವಣಿಗೆಯ ಪ್ರಮುಖ ಚಾಲಕ ಶಕ್ತಿ  ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವರಾದ (ಸ್ವತಂತ್ರ ಖಾತೆ) ಡಾ. ಜಿತೇಂದ್ರ ಸಿಂಗ್ ಅವರು ಬಣ್ಣಿಸಿದ್ದಾರೆ. ಮುಂದಿನ ಪೀಳಿಗೆಯ ಸ್ಟಾರ್ಟ್ ಅಪ್ ಗಳನ್ನು ರೂಪಿಸುವಲ್ಲಿ ಹಣಕಾಸು ನೆರವು ಮಾತ್ರವಲ್ಲ, ಮಾರ್ಗದರ್ಶನ ಕೂಡ ಪ್ರಧಾನ ಎಂದು ಅವರು  ಪ್ರತಿಪಾದಿಸಿದ್ದಾರೆ.

 ಇಂದು ನಡೆದ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ (ಐಐಎಸ್ಎಫ್) ಉದ್ಯಮಿಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಚಿವರು, ಬಲವಾದ ಮಾರ್ಗದರ್ಶನ, ಸಂಶೋಧನೆಗಾಗಿ ಅಪಾಯ ಎದುರಿಸುವಿಕೆ (ರಿಸ್ಕ್ ತೆಗೆದುಕೊಳ್ಳುವಿಕೆ) ಮತ್ತು ಯುವ ನಾವಿನ್ಯಕಾರರನ್ನು ಆರಂಭದಲ್ಲೇ ತೊಡಗಿಸಿಕೊಳ್ಳುವ ಅಗತ್ಯವನ್ನು ತಿಳಿಸಿದ್ದಾರೆ.

ಉತ್ಸವದ ಎರಡನೇ ದಿನದಂದು ನಾವಿನ್ಯತೆಯ ಪಯಣದ "ಸ್ಟಾರ್ಟ್‌ ಅಪ್ ಜರ್ನೀಸ್" ಕುರಿತಂತೆ ನಡೆದ ತಜ್ಞರ ಚರ್ಚೆಯಲ್ಲಿ ಮಾತನಾಡಿದ ಡಾ. ಜಿತೇಂದ್ರ ಸಿಂಗ್ ಅವರು, ಭಾರತವು ವಿಜ್ಞಾನ ಶಿಕ್ಷಣಕ್ಕೆ ಸೀಮಿತ ಪ್ರವೇಶದ ಸನ್ನಿವೇಶದಿಂದ ಅವಕಾಶಗಳು ಹೇರಳವಾಗಿ ಎಲ್ಲರಿಗೂ ಸಿಗುವ ಹಂತಕ್ಕೆ ಸಾಗಿದ್ದು, ಉದ್ಯಮಶೀಲತೆಗಾಗಿ ಹಾತೊರೆದಿರುವ ಸಣ್ಣ ಪಟ್ಟಣಗಳಲ್ಲಿನ ಮತ್ತು ಸಾಧಾರಣ ಹಿನ್ನೆಲೆಯ ಪ್ರತಿಭೆಗಳಿಗೆ ಅವಕಾಶ ನೀಡಿದೆ ಎಂದು ವಿವರಿಸಿದರು. ಇದಕ್ಕೆ ಬೆಂಬಲವಾಗಲು ನೀತಿ ನಿರೂಪಣೆಯ ಪ್ರಕ್ರಿಯೆಯ ಜೊತೆಗೆ ಮಾರುಕಟ್ಟೆಗಳಿಗೆ ಪರಿಕಲ್ಪನೆಗಳನ್ನು ಸಂಪರ್ಕಿಸುವ ಪರಿಸರ ವ್ಯವಸ್ಥೆ ನಿರ್ಮಿಸಲು ಸರ್ಕಾರವು ಗಮನಹರಿಸಿದೆ ಎಂದು ಅವರು ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯಗಳ ಅಡಿಯಲ್ಲಿನ ನಿರಂತರ ಪ್ರಯತ್ನಗಳು ನವೋದ್ಯಮಗಳನ್ನು ಹಣಕಾಸು, ಉದ್ಯಮ ಪಾಲುದಾರರು ಮತ್ತು ಮಾರ್ಗದರ್ಶನದೊಂದಿಗೆ ಸಂಪರ್ಕಿಸುತ್ತಾ ಬಿ ಐ ಆರ್‌ ಎ ಸಿ, ರಾಷ್ಟ್ರೀಯ ಮಿಷನ್ ಮತ್ತು ವಲಯ-ನಿರ್ದಿಷ್ಟ ಕಾರ್ಯಕ್ರಮಗಳಂತಹ ರಚನಾತ್ಮಕ ವೇದಿಕೆಗಳನ್ನು ರಚಿಸಲು ಪೂರಕವಾಗಿವೆ ಎಂದು ಇದೇ ವೇಳೆ ಡಾ. ಜಿತೇಂದ್ರ ಸಿಂಗ್ ಗಮನಸೆಳೆದರು. ನಾವಿನ್ಯತೆಯಲ್ಲಿ ವೈಫಲ್ಯ ಅನಿವಾರ್ಯವಾದರೂ, ನವೋದ್ಯಮಗಳು ಜಾಗತಿಕವಾಗಿ ಪ್ರಗತಿ ಹೊಂದಲು ಮತ್ತು ಸ್ಪರ್ಧಿಸಲು ಭಾರತವು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಸಂಭಾವ್ಯ ಅಪಾಯವನ್ನು ಗುರುತಿಸಿ ಎದುರಿಸುವುದನ್ನು ಕಲಿಯಬೇಕು ಎಂದು ಅವರು ತಿಳಿಸಿದರು.

ವಿಜ್ಞಾನದಲ್ಲಿನ ಪ್ರಗತಿಯು ಭಾರತದಲ್ಲಿ ದೈನಂದಿನ ಜೀವನವನ್ನು ಹೇಗೆ ಪರಿವರ್ತಿಸಿದೆ ಎಂಬ ಬಗ್ಗೆ ಸಚಿವರು ವಿವರಿಸುತ್ತಾ, ಒಂದು ಕಾಲದಲ್ಲಿ ವಿದೇಶಗಳಲ್ಲಿ ಮಾತ್ರ ಲಭ್ಯವಿದ್ದ ಆರೋಗ್ಯ ತಂತ್ರಜ್ಞಾನಗಳು ಮತ್ತು ಜೈವಿಕ ತಂತ್ರಜ್ಞಾನದ ಪ್ರಗತಿಯನ್ನು ಉಲ್ಲೇಖಿಸಿದರು. ಇನ್ನೂ ವಿಶಾಲ ವ್ಯಾಖ್ಯಾನವಾಗಿ ಅವರು, ದೇಶವು ಇಂದು ಕೇವಲ ಜಾಗತಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಿಲ್ಲ, ಬದಲಾಗಿ ಜೀವ ವಿಜ್ಞಾನದಿಂದ ಡಿಜಿಟಲ್ ವೇದಿಕೆಗಳವರೆಗೆ ವಿವಿಧ ವಲಯಗಳಲ್ಲಿ ಮೂಲ ಪರಿಹಾರಗಳನ್ನು ನೀಡಲು ಹೆಚ್ಚಿನ ಕೊಡುಗೆ ನೀಡುತ್ತಿದೆ ಎಂದು ಪ್ರತಿಪಾದಿಸಿದರು.

ಯುವ ಉದ್ಯಮಿಗಳ ಅದರಲ್ಲೂ ಶಾಲಾ - ಕಾಲೇಜುಗಳ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಡಾ. ಜಿತೇಂದ್ರ ಸಿಂಗ್ ಅವರು, ನವೋದ್ಯಮವನ್ನು ಪ್ರಾರಂಭಿಸುವ ಮೊದಲು ಉದ್ದೇಶ ಮತ್ತು ಅರ್ಹತೆಯ ಬಗ್ಗೆ ಸ್ಪಷ್ಟವಾಗಿ ತಿಳಿದಿರಬೇಕಾದ ಮಹತ್ವವನ್ನು ತಿಳಿಸಿದರು. ಯುವ ನಾವಿನ್ಯಕಾರರು ತಮ್ಮ ಸಾಮರ್ಥ್ಯಗಳನ್ನು ಅರಿಯಲು, ಉತ್ತಮ ಆಲೋಚನೆ ಹೊಂದಲು ಮತ್ತು ಸಾಮಾನ್ಯ ತಪ್ಪುಗಳನ್ನು ತಡೆಯಲು ಆರಂಭಿಕ ಹಂತದಲ್ಲಿಯೇ ಮಾರ್ಗದರ್ಶನ ಅತ್ಯಂತ ನಿರ್ಣಾಯಕವಾಗಿದೆ ಎಂದು ಅವರು ಹೇಳಿದರು. ಸರ್ಕಾರಿ ಉಪಕ್ರಮಗಳನ್ನು ಉಲ್ಲೇಖಿಸುತ್ತಾ ಅವರು, ವಿದ್ಯಾರ್ಥಿಗಳ, ವಿಶೇಷವಾಗಿ ಹೆಣ್ಣು ಮಕ್ಕಳ ಪ್ರತಿಭೆಯನ್ನು ಮೊದಲೇ ಗುರುತಿಸಿ, ರಚನಾತ್ಮಕ ಮಾರ್ಗದರ್ಶನವನ್ನು ನೀಡುವ ಗುರಿಯನ್ನು ಹೊಂದಿರುವ ಕಾರ್ಯಕ್ರಮಗಳನ್ನು ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.

ಉತ್ಸವದಲ್ಲಿ ಭಾಗಿಯಾದವರು ಕೇಳಿದ ನಿಯಂತ್ರಕಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರವು ಉದ್ಯಮಿಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು ನಿಯಂತ್ರಣಗಳ ಸರಳಗೊಳಿಸುವಿಕೆ, ಪರವಾನಗಿ ರದ್ದತಿ ಮತ್ತು ಅಪರಾಧ ಮುಕ್ತೀಕರಣದಂತಹ ಕ್ರಮಗಳನ್ನು ಕೈಗೊಳ್ಳುತ್ತಾ ಸ್ಥಿರವಾಗಿ ಸಾಗುತ್ತಿದೆ ಎಂದು ಹೇಳಿದರು. ಸ್ಟಾರ್ಟ್‌ ಅಪ್‌ ಗಳು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳುವ ಜೊತೆಗೆ ಅನುಸರಣೆ ಹೊರೆಯ ಬದಲಿಗೆ ನಾವಿನ್ಯತೆಯ ಮೇಲೆ ಕೇಂದ್ರೀಕರಿಸಲು ಈ ಸುಧಾರಣೆಗಳು ಅನುವು ಮಾಡಿಕೊಡುವ ಉದ್ದೇಶ ಹೊಂದಿವೆ ಎಂದು ಅವರು ಹೇಳಿದರು.

ಆರೋಗ್ಯ ಸೇವೆ ಮತ್ತು ಜೈವಿಕ ತಂತ್ರಜ್ಞಾನ ವಲಯದಲ್ಲಿ ತಂತ್ರಜ್ಞಾನ ಆಧಾರಿತ ಪರಿಹಾರಗಳು ಹಿಂದುಳಿದ ವರ್ಗದ ಜನರನ್ನು ತಲುಪುತ್ತಿರುವ ಬಗ್ಗೆ ಉದಾಹರಣೆ ಸೇರಿದಂತೆ ನವೋದ್ಯಮ ಸಂಸ್ಥಾಪಕರು ಮತ್ತು ಹಿರಿಯ ಆಡಳಿತಗಾರರ ಅನುಭವಗಳನ್ನು ಸಮಿತಿಯು ಆಲಿಸಿತು. ಡಾ. ಜಿತೇಂದ್ರ ಸಿಂಗ್ ಅವರು ಈ ವರದಿಗಳನ್ನು ಸ್ವಾಗತಿಸಿದರು ಮತ್ತು ಸಾರ್ವಜನಿಕ-ಖಾಸಗಿ ಸಹಭಾಗಿತ್ವವು ಭಾರತದ ನಾವಿನ್ಯತೆ ತಂತ್ರಗಾರಿಕೆಯ ಕೇಂದ್ರಬಿಂದುವಾಗಿರಲಿದೆ ಎಂದು ಪುನರುಚ್ಚರಿಸಿದರು.

ತಮ್ಮ ಸಂವಾದವನ್ನು ಮುಕ್ತಾಯಗೊಳಿಸುತ್ತಾ ಸಚಿವರು, ಐ ಐ ಎಸ್‌ ಎಫ್‌ ನಂತಹ ವೇದಿಕೆಗಳು ನೀತಿ ನಿರೂಪಕರು, ವಿಜ್ಞಾನಿಗಳು ಮತ್ತು ಮಹತ್ವಾಕಾಂಕ್ಷಿ ಉದ್ಯಮಿಗಳನ್ನು ಒಂದೇ ವೇದಿಕೆಗೆ ತರುವ ಉದ್ದೇಶವನ್ನು ಹೊಂದಿವೆ ಎಂದು ಹೇಳಿದರು. ಭಾರತವು 2047 ಕ್ಕೆ ನಿಗದಿಪಡಿಸಿರುವ ಗುರಿಗಳಿಗಾಗಿ ತನ್ನ ನಾವಿನ್ಯತಾ ಪರಿಸರ ವ್ಯವಸ್ಥೆಯನ್ನು ಸಿದ್ಧಪಡಿಸುತ್ತಿರುವ ಈ ಹೊತ್ತಿನಲ್ಲಿ ಮಕ್ಕಳಲ್ಲಿ ಕುತೂಹಲವನ್ನು ಪೋಷಿಸುವುದು ಮತ್ತು ಪ್ರಶ್ನೆ ಕೇಳಲು ಆತ್ಮವಿಶ್ವಾಸವನ್ನು ನೀಡುವುದು ಕೂಡು ಹಣಕಾಸು ಅಥವಾ ಮೂಲಸೌಕರ್ಯ ಒದಗಿಸಿದಷ್ಟೇ ಮುಖ್ಯ ಎಂದು ಸಚಿವರು ತಿಳಿಸಿದರು.

 

 

*****


(रिलीज़ आईडी: 2200156) आगंतुक पटल : 23
इस विज्ञप्ति को इन भाषाओं में पढ़ें: English , Urdu , हिन्दी , Marathi , Punjabi , Tamil , Malayalam