ರೈಲ್ವೇ ಸಚಿವಾಲಯ
azadi ka amrit mahotsav

ಈಶಾನ್ಯ ಗಡಿ ರೈಲ್ವೆಯ 141 ಮಾರ್ಗ ಕಿ.ಮೀ ವ್ಯಾಪ್ತಿಯಲ್ಲಿ ಆನೆಗಳ ಡಿಕ್ಕಿಯನ್ನು ತಡೆಯಲು ಭಾರತೀಯ ರೈಲ್ವೆಯಿಂದ ಎ.ಐ. ಚಾಲಿತ 'ಒಳನುಸುಳುವಿಕೆ ಪತ್ತೆ ವ್ಯವಸ್ಥೆ' ಅಳವಡಿಕೆ


ಭಾರತೀಯ ರೈಲ್ವೆಯಾದ್ಯಂತ ಎ.ಐ. ಆಧಾರಿತ ಒಳನುಸುಳುವಿಕೆ ಪತ್ತೆ ವ್ಯವಸ್ಥೆಯನ್ನು ವಿಸ್ತರಿಸಲು, ಇನ್ನೂ 981 ಮಾರ್ಗ ಕಿ.ಮೀಗಳಿಗೆ ಟೆಂಡರ್ ಗಳನ್ನು ನೀಡಲಾಗಿದೆ

ರೈಲ್ವೆ ಹಳಿಗಳ ಸಮೀಪ ಆನೆಗಳ ಚಲನವಲನದ ಬಗ್ಗೆ ಲೋಕೋ ಪೈಲಟ್ ಗಳು, ಸ್ಟೇಷನ್ ಮಾಸ್ಟರ್ ಗಳು ಮತ್ತು ನಿಯಂತ್ರಣ ಕೊಠಡಿಗಳಿಗೆ ಈ ಎ.ಐ. ವ್ಯವಸ್ಥೆಯು ರಿಯಲ್‌-ಟೈಮ್‌ ನಲ್ಲಿ  ಎಚ್ಚರಿಕೆಗಳನ್ನು ನೀಡುತ್ತದೆ, ಇದರಿಂದ ಸಕಾಲದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ

प्रविष्टि तिथि: 05 DEC 2025 3:24PM by PIB Bengaluru

ಭಾರತೀಯ ರೈಲ್ವೆಯಲ್ಲಿ (IR) ತಾಂತ್ರಿಕ ಸುಧಾರಣೆಗಳು ನಿರಂತರವಾಗಿ ನಡೆಯುವ ಪ್ರಕ್ರಿಯೆಯಾಗಿದೆ. ಕೃತಕ ಬುದ್ಧಿಮತ್ತೆ (ಎ.ಐ.) ಆಧಾರಿತ ಕೆಲವು ಪ್ರಮುಖ ಮುನ್ಸೂಚಕ ನಿರ್ವಹಣಾ ಅಪ್ಲಿಕೇಶನ್ ಗಳು ಈ ಕೆಳಗಿನಂತಿವೆ:

1. ಸಿಗ್ನಲಿಂಗ್ ವ್ಯವಸ್ಥೆಯ ನಿರ್ವಹಣೆ: ಭಾರತೀಯ ರೈಲ್ವೆಯ ಕೆಲವು ನಿಲ್ದಾಣಗಳಲ್ಲಿ, ಸಿಗ್ನಲಿಂಗ್ ವ್ಯವಸ್ಥೆಯ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಲು ಎ.ಐ.-ಚಾಲಿತ ಪ್ರಾಯೋಗಿಕ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ಪರೀಕ್ಷಾರ್ಥ ಪ್ರಯೋಗಗಳ ಮೂಲಕ ದೋಷಗಳನ್ನು ಗುರುತಿಸುವುದು, ಭವಿಷ್ಯದ ಸಮಸ್ಯೆಗಳನ್ನು ಊಹಿಸುವುದು  ಮತ್ತು ಎಚ್ಚರಿಕೆಗಳನ್ನು ರವಾನಿಸುವ ವಿಧಾನಗಳನ್ನು ಅಭಿವೃದ್ಧಿಪಡಿಸುವುದು ಇದರ ಗುರಿಯಾಗಿದೆ.

2. ಆನೆಗಳ ಸುರಕ್ಷತೆಗಾಗಿ ಒಳನುಸುಳುವಿಕೆ ಪತ್ತೆ ವ್ಯವಸ್ಥೆ (IDS): ರೈಲ್ವೆ ಹಳಿಗಳ ಮೇಲೆ ಆನೆಗಳ ಪ್ರವೇಶವನ್ನು ಪತ್ತೆಹಚ್ಚಲು, 'ಡಿಸ್ಟ್ರಿಬ್ಯೂಟೆಡ್ ಅಕೌಸ್ಟಿಕ್ ಸಿಸ್ಟಮ್' (DAS) ತಂತ್ರಜ್ಞಾನವನ್ನು ಬಳಸುವ ಎ.ಐ.-ಚಾಲಿತ 'ಇಂಟ್ರಷನ್ ಡಿಟೆಕ್ಷನ್ ಸಿಸ್ಟಮ್' (IDS) ಅನ್ನು ಅಳವಡಿಸಲಾಗಿದೆ. ಈಶಾನ್ಯ ಗಡಿ ರೈಲ್ವೆ  ವ್ಯಾಪ್ತಿಯ 141 ಮಾರ್ಗ ಕಿ.ಮೀ  ವಿಭಾಗದಲ್ಲಿ ಇದನ್ನು ಈಗಾಗಲೇ ಜಾರಿಗೆ ತರಲಾಗಿದ್ದು, ಭಾರತೀಯ ರೈಲ್ವೆಯ ಇತರೆಡೆಗಳಲ್ಲಿ 981 ಮಾರ್ಗ ಕಿ.ಮೀ ವಿಭಾಗಕ್ಕೆ ಟೆಂಡರ್ ಗಳನ್ನು ನೀಡಲಾಗಿದೆ. ರೈಲ್ವೆ ಹಳಿಗಳ ಸಮೀಪ ಆನೆಗಳ ಚಲನವಲನ ಕಂಡುಬಂದಲ್ಲಿ, ಲೋಕೋ ಪೈಲಟ್ ಗಳು, ಸ್ಟೇಷನ್ ಮಾಸ್ಟರ್ ಗಳು ಮತ್ತು ನಿಯಂತ್ರಣ ಕೊಠಡಿಗೆ ತಕ್ಷಣವೇ ಎಚ್ಚರಿಕೆ ನೀಡುವಂತೆ ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದ ಸಕಾಲದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಸಂಭವನೀಯ ಅನಾಹುತಗಳನ್ನು ತಡೆಯಬಹುದಾಗಿದೆ.

3. a. ಭಾರತೀಯ ರೈಲ್ವೆಯು ರೋಲಿಂಗ್ ಸ್ಟಾಕ್ ನ (ರೈಲು ಬೋಗಿಗಳು ಮತ್ತು ಎಂಜಿನ್ ಗಳು) ಮುನ್ಸೂಚಕ ನಿರ್ವಹಣೆಗಾಗಿ, 'ಆನ್ ಲೈನ್ ಮಾನಿಟರಿಂಗ್ ಆಫ್ ರೋಲಿಂಗ್ ಸ್ಟಾಕ್ ಸಿಸ್ಟಮ್' (OMRS) ಮತ್ತು 'ವೀಲ್ ಇಂಪ್ಯಾಕ್ಟ್ ಲೋಡ್ ಡಿಟೆಕ್ಟರ್' (WILD) ನಂತಹ ಸುಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದೆ.

   b. 'ವೇಸೈಡ್ ಮೆಷಿನ್ ವಿಷನ್ ಆಧಾರಿತ ಇನ್ಸ್ಪೆಕ್ಷನ್ ಸಿಸ್ಟಮ್' (MVIS) ಅನ್ನು ಅಳವಡಿಸಿಕೊಳ್ಳಲು ಭಾರತೀಯ ರೈಲ್ವೆ ಮತ್ತು 'ಡೆಡಿಕೇಟೆಡ್ ಫ್ರೈಟ್ ಕಾರಿಡಾರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್' (DFCCIL) ನಡುವೆ ಜುಲೈ 2025ರಲ್ಲಿ ತಿಳುವಳಿಕೆ ಒಪ್ಪಂದಕ್ಕೆ (MoU) ಸಹಿ ಹಾಕಲಾಗಿದೆ. ಇದು ಚಲಿಸುವ ರೈಲುಗಳಲ್ಲಿ ಜೋತುಬಿದ್ದಿರುವ ಭಾಗಗಳು ಅಥವಾ ಕಾಣೆಯಾದ ಬಿಡಿಭಾಗಗಳನ್ನು ಪತ್ತೆಹಚ್ಚಲು ಬಳಸಲಾಗುವ ಎ.ಐ./ಎಂ.ಎಲ್. (ಕೃತಕ ಬುದ್ಧಿಮತ್ತೆ ಮತ್ತು ಮಷಿನ್ ಲರ್ನಿಂಗ್) ಚಾಲಿತ ವ್ಯವಸ್ಥೆಯಾಗಿದೆ.

   c. 'ಆಟೋಮ್ಯಾಟಿಕ್ ವೀಲ್ ಪ್ರೊಫೈಲ್ ಮೆಜರ್ಮೆಂಟ್ ಸಿಸ್ಟಮ್' (AWPMS) ಅನ್ನು ಅಳವಡಿಸಿಕೊಳ್ಳಲು ಭಾರತೀಯ ರೈಲ್ವೆ ಮತ್ತು 'ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್' (DMRC) ನಡುವೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. AWPMS ವ್ಯವಸ್ಥೆಯು ರೈಲು ಚಕ್ರದ ಪ್ರೊಫೈಲ್ ಅನ್ನು ಸ್ವಯಂಚಾಲಿತವಾಗಿ ಮತ್ತು ಸಂಪರ್ಕ ರಹಿತವಾಗಿ ಅಳೆಯಲು ಅನುವು ಮಾಡಿಕೊಡುತ್ತದೆ ಹಾಗೂ ಚಕ್ರದ ಆಕಾರ ಮತ್ತು ಸವೆತದ ರಿಯಲ್‌-ಟೈಮ್ ಮಾಪನವನ್ನು ಖಚಿತಪಡಿಸುತ್ತದೆ.

ಕೇಂದ್ರ ರೈಲ್ವೆ, ವಾರ್ತಾ ಮತ್ತು ಪ್ರಸಾರ ಹಾಗೂ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರು, ಇಂದು ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

 

*****


(रिलीज़ आईडी: 2199508) आगंतुक पटल : 4
इस विज्ञप्ति को इन भाषाओं में पढ़ें: English , Urdu , हिन्दी