ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ
azadi ka amrit mahotsav

ಪಹಲ್ (DBTL) ಯೋಜನೆಯಿಂದ ಸುಧಾರಿತ ದಕ್ಷತೆ, ಪಾರದರ್ಶಕತೆ ಮತ್ತು ಗ್ರಾಹಕ ಕೇಂದ್ರಿತ ಸುಧಾರಣೆಗಳು

प्रविष्टि तिथि: 01 DEC 2025 4:39PM by PIB Bengaluru

ದೇಶಾದ್ಯಂತ ಸಬ್ಸಿಡಿಯ ಪಾರದರ್ಶಕ ಮತ್ತು ಪರಿಣಾಮಕಾರಿ ವಿತರಣೆಗಾಗಿ, ಜನವರಿ 2015ರಿಂದ ಎಲ್ ಪಿ ಜಿ ನೇರ ಲಾಭ ವರ್ಗಾವಣೆ (Direct Benefit Transfer of LPG - DBTL) ಅಥವಾ 'ಪಹಲ್' (PAHAL) ಯೋಜನೆಯನ್ನು ಜಾರಿಗೊಳಿಸಲಾಗಿದೆ. ಪಹಲ್ ಯೋಜನೆಯಡಿ, ಎಲ್ಲಾ ಗೃಹಬಳಕೆಯ ಎಲ್ ಪಿ ಜಿ ಸಿಲಿಂಡರ್ ಗಳನ್ನು ಏಕರೂಪದ ಚಿಲ್ಲರೆ ಮಾರಾಟ ದರದಲ್ಲಿ (RSP) ಮಾರಾಟ ಮಾಡಲಾಗುತ್ತದೆ ಮತ್ತು ಎಲ್ ಪಿ ಜಿ ಗ್ರಾಹಕರಿಗೆ ಅನ್ವಯವಾಗುವ ಸಬ್ಸಿಡಿಯನ್ನು (ಸಹಾಯಧನ) ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.

ಗೃಹಬಳಕೆಯ ಎಲ್ ಪಿ ಜಿ ಗ್ರಾಹಕರಿಗೆ ಸಂಬಂಧಿಸಿದಂತೆ ಎಲ್ ಪಿ ಜಿ ವಿತರಣೆ ಮತ್ತು ಸಬ್ಸಿಡಿ ವರ್ಗಾವಣೆಯು ದಕ್ಷ, ಪಾರದರ್ಶಕ ಮತ್ತು ಎಲ್ಲರನ್ನೂ ಒಳಗೊಂಡಿರುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು ನಿರಂತರವಾಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪಹಲ್ (DBTL) ಯೋಜನೆ, ಆಧಾರ್ ಆಧಾರಿತ ಪರಿಶೀಲನೆ, ಬಯೋಮೆಟ್ರಿಕ್ ದೃಢೀಕರಣ ಮತ್ತು ಅನರ್ಹ ಅಥವಾ ನಕಲಿ ಸಂಪರ್ಕಗಳನ್ನು ತೆಗೆದುಹಾಕುವಂತಹ ಉಪಕ್ರಮಗಳ ಅನುಷ್ಠಾನವು, ಉದ್ದೇಶಿತ ಸಬ್ಸಿಡಿಗಳ ವರ್ಗಾವಣೆ ವ್ಯವಸ್ಥೆಯನ್ನು ಗಮನಾರ್ಹವಾಗಿ ಬಲಪಡಿಸಿದೆ.

ಘೋಸ್ಟ್ (ನಕಲಿ/ಅಸ್ತಿತ್ವದಲ್ಲಿಲ್ಲದ) ಖಾತೆಗಳು, ಬಹು ಖಾತೆಗಳು ಮತ್ತು ನಿಷ್ಕ್ರಿಯ ಎಲ್ ಪಿ ಜಿ ಸಂಪರ್ಕಗಳನ್ನು ಗುರುತಿಸುವಲ್ಲಿ ಮತ್ತು ನಿರ್ಬಂಧಿಸುವಲ್ಲಿ 'ಪಹಲ್' (PAHAL) ಪ್ರಮುಖ ಪಾತ್ರ ವಹಿಸಿದೆ. ಇದರಿಂದ ಸಬ್ಸಿಡಿ ಸಹಿತ ಎಲ್ ಪಿ ಜಿ ಯು ವಾಣಿಜ್ಯ ಬಳಕೆಗೆ ಅನ್ಯ ಮಾರ್ಗದಲ್ಲಿ ಹೋಗುವುದನ್ನು ತಡೆಯಲು ಸಹಾಯವಾಗಿದೆ.

ಅನರ್ಹ ಗ್ರಾಹಕರನ್ನು ತೆಗೆದುಹಾಕಲು ಮತ್ತು ಸಬ್ಸಿಡಿ ವರ್ಗಾವಣೆ ಪ್ರಕ್ರಿಯೆಯನ್ನು ಸುಧಾರಿಸಲು ಸರ್ಕಾರವು ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಅವುಗಳಲ್ಲಿ ಈ ಕೆಳಗಿನವು ಸೇರಿವೆ:

CLDP ಮೂಲಕ ನಕಲುಗಳ ನಿವಾರಣೆ 

ಸರ್ಕಾರವು 'ಸಾಮಾನ್ಯ ಎಲ್ ಪಿ ಜಿ ದತ್ತಾಂಶ ವೇದಿಕೆ'ಯನ್ನು (CLDP) ಜಾರಿಗೆ ತಂದಿದ್ದು, ಇದರ ಮೂಲಕ ಎಲ್ ಪಿ ಜಿ ದತ್ತಾಂಶ ಕೋಶದಿಂದ ನಕಲಿ ಸಂಪರ್ಕಗಳನ್ನು ಗುರುತಿಸಿ ತೆಗೆದುಹಾಕಲಾಗುತ್ತಿದೆ. ಆಧಾರ್ ಸಂಖ್ಯೆ, ಬ್ಯಾಂಕ್ ಖಾತೆ ವಿವರಗಳು, ಸಂಕ್ಷಿಪ್ತ ಕುಟುಂಬ ಪಟ್ಟಿಯ (AHL) ತಾತ್ಕಾಲಿಕ ಗುರುತಿನ ಸಂಖ್ಯೆ (TIN), ಪಡಿತರ ಚೀಟಿ ವಿವರಗಳು, ಹೆಸರು ಮತ್ತು ವಿಳಾಸವನ್ನು ಪ್ರಮುಖ ಮಾನದಂಡಗಳನ್ನಾಗಿ ಬಳಸಿಕೊಂಡು ಎಲ್ ಪಿ ಜಿ ಗ್ರಾಹಕರ ದತ್ತಾಂಶ ಕೋಶದಲ್ಲಿನ ನಕಲುಗಳ ನಿವಾರಣೆಯನ್ನು ಮಾಡಲಾಗುತ್ತದೆ.

ಬಯೋಮೆಟ್ರಿಕ್ ಆಧಾರ್ ದೃಢೀಕರಣ ಅಭಿಯಾನ 

ನೇರ ಲಾಭ ವರ್ಗಾವಣೆ (DBT) ಯೋಜನೆಗಳಿಗೆ ಆಧಾರ್ ಆಧಾರಿತ ದೃಢೀಕರಣವು ಫಲಾನುಭವಿಗಳನ್ನು ನಿಖರವಾಗಿ, ನೈಜ ಸಮಯದಲ್ಲಿ ಮತ್ತು ಮಿತವ್ಯಯದಲ್ಲಿ ಗುರುತಿಸಲು, ದೃಢೀಕರಿಸಲು ಹಾಗೂ ನಕಲುಗಳನ್ನು ನಿವಾರಿಸಲು ಅನುವು ಮಾಡಿಕೊಡುತ್ತದೆ. ಇದು ಉದ್ದೇಶಿತ ಫಲಾನುಭವಿಗಳಿಗೆ ಸವಲತ್ತುಗಳು ತಲುಪುವುದನ್ನು ಖಚಿತಪಡಿಸುತ್ತದೆ. ಗ್ರಾಹಕರ ದೃಢೀಕರಣವನ್ನು ಬಲಪಡಿಸಲು, ಸರ್ಕಾರವು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಗೆ (OMCs) ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಮತ್ತು ಪಹಲ್ (PAHAL) ಫಲಾನುಭವಿಗಳ ಬಯೋಮೆಟ್ರಿಕ್ ಆಧಾರ್ ದೃಢೀಕರಣವನ್ನು ಕೈಗೊಂಡು ಪೂರ್ಣಗೊಳಿಸಲು ನಿರ್ದೇಶನ ನೀಡಿತ್ತು. ದಿನಾಂಕ 01.11.2025 ರವರೆಗೆ, ಅಸ್ತಿತ್ವದಲ್ಲಿರುವ PMUY ಫಲಾನುಭವಿಗಳ ಪೈಕಿ 69% ರಷ್ಟು ಜನರ ಬಯೋಮೆಟ್ರಿಕ್ ಆಧಾರ್ ದೃಢೀಕರಣ ಪೂರ್ಣಗೊಂಡಿದೆ. ಇದಲ್ಲದೆ, ಎಲ್ಲಾ ಹೊಸ PMUY ಗ್ರಾಹಕರಿಗೆ ಸಂಪರ್ಕಗಳನ್ನು ಬಿಡುಗಡೆ ಮಾಡುವ ಮುನ್ನ ಬಯೋಮೆಟ್ರಿಕ್ ದೃಢೀಕರಣಕ್ಕೆ ಒಳಪಡಿಸಲಾಗುತ್ತದೆ.

ಅನರ್ಹ ಗ್ರಾಹಕರನ್ನು ತೆಗೆದುಹಾಕುವುದು 

ಪಹಲ್ (PAHAL) ಯೋಜನೆಯು ಅರ್ಹ PMUY ಗ್ರಾಹಕರಿಗೆ ಉದ್ದೇಶಿತ ಸಬ್ಸಿಡಿ ಲಾಭವನ್ನು ವಿತರಿಸಲು ಅನುವು ಮಾಡಿಕೊಟ್ಟಿದೆ. ಈ ಲಾಭಗಳು ಅರ್ಹ ಮತ್ತು ಉದ್ದೇಶಿತ ಫಲಾನುಭವಿಗಳಿಗೆ ದಕ್ಷ ಮತ್ತು ಸಕಾಲಿಕವಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಯೋಜನೆ ಪ್ರಾರಂಭವಾದಾಗಿನಿಂದ, ಕೈಗೊಂಡ ಸಮಗ್ರ ನಕಲು ನಿವಾರಣಾ ಕಾರ್ಯಗಳ ಪರಿಣಾಮವಾಗಿ, ಒಟ್ಟು 8.63 ಲಕ್ಷ PMUY ಸಂಪರ್ಕಗಳನ್ನು ರದ್ದುಗೊಳಿಸಲಾಗಿದೆ. ಇದಲ್ಲದೆ, ಸಂಪರ್ಕವನ್ನು ಅಳವಡಿಸಿಕೊಂಡ ನಂತರ ಯಾವುದೇ ಮರುಪೂರಣವನ್ನು  ಪಡೆಯದ PMUY ಗ್ರಾಹಕರನ್ನು ತೆಗೆದುಹಾಕಲು ಜನವರಿ 2025ರಲ್ಲಿ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು (SOP) ಹೊರಡಿಸಲಾಗಿದ್ದು, ಈ SOP ಅನುಸಾರ ನವೆಂಬರ್ 1, 2025 ರವರೆಗೆ ಸುಮಾರು 20,000 ನಿಷ್ಕ್ರಿಯ PMUY ಸಂಪರ್ಕಗಳನ್ನು ಈಗಾಗಲೇ ರದ್ದುಗೊಳಿಸಲಾಗಿದೆ.

ರಿಸರ್ಚ್ ಅಂಡ್ ಡೆವಲಪ್ ಮೆಂಟ್ ಇನಿಶಿಯೇಟಿವ್ (RDI) ಸಂಸ್ಥೆಯು ಸಮಗ್ರ ತೃತೀಯ ಸಂಸ್ಥೆಯ ಮೌಲ್ಯಮಾಪನವನ್ನು ನಡೆಸಿತು. ಸಬ್ಸಿಡಿ ಮರುಪಾವತಿ ವ್ಯವಸ್ಥೆಯ ಬಗ್ಗೆ ಸಮೀಕ್ಷೆಯಲ್ಲಿ ಭಾಗವಹಿಸಿದ ಶೇಕಡಾ 90 ಕ್ಕಿಂತ ಹೆಚ್ಚು ಜನರು ತೃಪ್ತರಾಗಿದ್ದಾರೆ ಎಂದು ಅಧ್ಯಯನದಲ್ಲಿ ಕಂಡುಬಂದಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸಬ್ಸಿಡಿಗಳನ್ನು ಸೀಮಿತಗೊಳಿಸುವ ಮೂಲಕ ಫಲಾನುಭವಿಗಳ ಗುರುತಿಸುವಿಕೆಯನ್ನು ಸುಧಾರಿಸುವುದು, ಜೊತೆಗೆ ಸಬ್ಸಿಡಿ ಪಾವತಿ ಮೂಲಸೌಕರ್ಯ ಮತ್ತು ಕುಂದುಕೊರತೆ ನಿವಾರಣಾ ವ್ಯವಸ್ಥೆಗಳನ್ನು ಬಲಪಡಿಸಲು ವರದಿಯು ಶಿಫಾರಸು ಮಾಡಿದೆ. ಎಲ್ ಪಿ ಜಿಯ ಉತ್ತಮ ಅಳವಡಿಕೆ ಮತ್ತು ಸುರಕ್ಷಿತ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಭಾಷೆ ಮತ್ತು ಸಮೂಹ ಮಾಧ್ಯಮ ಅಭಿಯಾನಗಳ ಮೂಲಕ ವ್ಯಾಪಕ ಸಂಪರ್ಕ ಹಾಗೂ ನಿರಂತರ ಸುರಕ್ಷತಾ ಜಾಗೃತಿಯ ಅಗತ್ಯವನ್ನು ಸಹ ಇದು ತೋರಿಸಿದೆ. ಈ ಅಂಶಗಳ ಆಧಾರದ ಮೇಲೆ, ಪಹಲ್ (PAHAL) ಯೋಜನೆಯ ದಕ್ಷತೆ, ಪಾರದರ್ಶಕತೆ ಮತ್ತು ವ್ಯಾಪ್ತಿಯನ್ನು ಮತ್ತಷ್ಟು ಸುಧಾರಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಗ್ರಾಹಕರ ಅನುಭವ ಮತ್ತು ಸೇವೆಯ ಗುಣಮಟ್ಟವನ್ನು ಹೆಚ್ಚಿಸಲು, ಎಲ್ಲಾ ಎಲ್ ಪಿ ಜಿ ಗ್ರಾಹಕರಿಗಾಗಿರುವ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಕಾಲಕ್ರಮೇಣ ಬಲಪಡಿಸಲಾಗಿದೆ ಮತ್ತು ಸುಧಾರಿಸಲಾಗಿದೆ. ಈಗ ಎಲ್ ಪಿ ಜಿ ಗ್ರಾಹಕರು ಈ ಕೆಳಗಿನ ಯಾವುದೇ ವಿಧಾನಗಳನ್ನು ಬಳಸಿಕೊಂಡು ತಮ್ಮ ಕುಂದುಕೊರತೆಗಳನ್ನು/ದೂರುಗಳನ್ನು ಸಲ್ಲಿಸಬಹುದು-

I. ಟೋಲ್ ಫ್ರೀ ಸಹಾಯವಾಣಿ- ಸಬ್ಸಿಡಿ ಸಂಬಂಧಿತ ಸಮಸ್ಯೆಗಳು ಸೇರಿದಂತೆ ಗ್ರಾಹಕರು ತಮ್ಮ ಪ್ರಶ್ನೆಗಳನ್ನು/ದೂರುಗಳನ್ನು ಸಲ್ಲಿಸಲು ಮೀಸಲಾದ ಶುಲ್ಕ ರಹಿತ ಸಹಾಯವಾಣಿ (1800 2333 555) ಲಭ್ಯವಿದೆ.

II.  ಒಎಂಸಿ (OMC)ಗಳ ಅಧಿಕೃತ ವೆಬ್ ಸೈಟ್ ಗಳು ಮತ್ತು ಮೊಬೈಲ್ ಅಪ್ಲಿಕೇಶನ್ ಗಳು.

III.  ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣೆ ಮತ್ತು ಮೇಲ್ವಿಚಾರಣಾ ವ್ಯವಸ್ಥೆ (CPGRAMS).

IV. MoPNGeSEVA ಸೇರಿದಂತೆ ಚಾಟ್ ಬಾಟ್ ಗಳು, ವಾಟ್ಸಾಪ್, ಸಾಮಾಜಿಕ ಜಾಲತಾಣ ಖಾತೆಗಳು (ಟ್ವಿಟರ್, ಫೇಸ್ ಬುಕ್, ಇನ್ಸ್ಟಾಗ್ರಾಮ್).

V. 1906: ಎಲ್ ಪಿ ಜಿ ಅಪಘಾತಗಳು/ಸೋರಿಕೆಗೆ ಸಂಬಂಧಿಸಿದಂತೆ ಮೀಸಲಾದ ಸಹಾಯವಾಣಿ.

VI. ನೇರವಾಗಿ ವಿತರಕರ ಕಚೇರಿಯಲ್ಲಿ ದೂರುಗಳನ್ನು ಸಲ್ಲಿಸುವುದು.

ಆನ್ ಲೈನ್ ದೂರುಗಳ ಸಂದರ್ಭದಲ್ಲಿ, ದೂರು ಪರಿಹಾರದ ಕುರಿತು ತಮ್ಮ ಪ್ರತಿಕ್ರಿಯೆಯನ್ನು ನೀಡುವ ಆಯ್ಕೆಯನ್ನು ಗ್ರಾಹಕರು ಹೊಂದಿರುತ್ತಾರೆ. ಒದಗಿಸಲಾದ ಪರಿಹಾರದಿಂದ ಗ್ರಾಹಕರಿಗೆ ತೃಪ್ತಿಯಾಗದಿದ್ದರೆ, ಹೆಚ್ಚಿನ ಪರಿಶೀಲನೆಗಾಗಿ ದೂರನ್ನು ಮತ್ತೆ ತೆರೆಯುವ ಆಯ್ಕೆಯನ್ನು ಅವರು ಹೊಂದಿರುತ್ತಾರೆ.

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವರಾದ ಶ್ರೀ ಸುರೇಶ್ ಗೋಪಿ ಅವರು ಇಂದು ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ಈ ಮಾಹಿತಿಯನ್ನು ನೀಡಿದ್ದಾರೆ.

 

*****


(रिलीज़ आईडी: 2197336) आगंतुक पटल : 6
इस विज्ञप्ति को इन भाषाओं में पढ़ें: Gujarati , English , Urdu , हिन्दी