ಪ್ರಧಾನ ಮಂತ್ರಿಯವರ ಕಛೇರಿ
ಗೋವಾದಲ್ಲಿ ನಡೆದ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ 550ನೇ ವರ್ಷದ ಆಚರಣೆಯನ್ನುದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಭಾಷಣ
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಳಿ ಜೀವೋತ್ತಮ ಮಠವು ತನ್ನ ಸ್ಥಾಪನೆಯ 550ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದು ನಿಜಕ್ಕೂ ಒಂದು ಐತಿಹಾಸಿಕ ಸಂದರ್ಭವಾಗಿದೆ. ಕಳೆದ 550 ವರ್ಷಗಳಲ್ಲಿ ಈ ಸಂಸ್ಥೆಯು ಕಾಲದ ಅಸಂಖ್ಯಾತ ಬಿರುಗಾಳಿಗಳನ್ನು ಎದುರಿಸಿದೆ, ಯುಗಗಳು ಬದಲಾದವು, ಕಾಲಘಟ್ಟಗಳು ಸರಿದವು, ದೇಶ ಮತ್ತು ಸಮಾಜವು ಅನೇಕ ಬದಲಾವಣೆಗಳಿಗೆ ಸಾಕ್ಷಿಯಾಯಿತು, ಆದರೂ, ಬದಲಾದ ಕಾಲ ಮತ್ತು ಸವಾಲುಗಳ ನಡುವೆಯೂ ಮಠವು ಎಂದಿಗೂ ತನ್ನ ದಾರಿಯನ್ನು ಕಳೆದುಕೊಳ್ಳಲಿಲ್ಲ ಬದಲಿಗೆ, ಅದು ಜನರಿಗೆ ದಾರಿ ತೋರಿಸುವ ಮಾರ್ಗದರ್ಶಕ ಕೇಂದ್ರವಾಗಿ ಹೊರಹೊಮ್ಮಿತು - ಪ್ರಧಾನಮಂತ್ರಿ
ಗೋವಾದ ದೇವಾಲಯಗಳು ಮತ್ತು ಸ್ಥಳೀಯ ಸಂಪ್ರದಾಯಗಳು ಗಂಭೀರ ಸವಾಲುಗಳನ್ನು ಎದುರಿಸಿದ ಸಮಯವಿತ್ತು, ಭಾಷೆ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಮೇಲೆ ಒತ್ತಡ ಉಂಟಾಗಿತ್ತು, ಆದರೂ, ಈ ಸನ್ನಿವೇಶಗಳು ಸಮಾಜದ ಆತ್ಮಸ್ಥೈರ್ಯವನ್ನು ಕುಗ್ಗಿಸಲಿಲ್ಲ; ಬದಲಿಗೆ ಅವು ಸಮಾಜವನ್ನು ಇನ್ನಷ್ಟು ಬಲಪಡಿಸಿದವು - ಪ್ರಧಾನಮಂತ್ರಿ
ಗೋವಾದ ಸಂಸ್ಕೃತಿಯು ಪ್ರತಿಯೊಂದು ಬದಲಾವಣೆಯ ನಡುವೆಯೂ ತನ್ನ ಮೂಲ ಸಾರವನ್ನು ಉಳಿಸಿಕೊಂಡಿರುವುದು ಮತ್ತು ಕಾಲಕ್ಕೆ ತಕ್ಕಂತೆ ತನ್ನನ್ನು ತಾನು ಪುನಶ್ಚೇತನಗೊಳಿಸಿಕೊಂಡಿರುವುದು ಇಲ್ಲಿನ ವೈಶಿಷ್ಟ್ಯವಾಗಿದೆ, ಈ ಪಯಣದಲ್ಲಿ ಪರ್ತಗಳಿ ಮಠದಂತಹ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಿವೆ - ಪ್ರಧಾನಮಂತ್ರಿ
ಇಂದು ಭಾರತವು ಒಂದು ಗಮನಾರ್ಹವಾದ 'ಸಾಂಸ್ಕೃತಿಕ ಪುನರುಜ್ಜೀವನ'ಕ್ಕೆ ಸಾಕ್ಷಿಯಾಗುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ ಪುನರುತ್ಥಾನ, ಕಾಶಿ ವಿಶ್ವನಾಥ ಧಾಮದ ಭವ್ಯ ಪುನರಾಭಿವೃದ್ಧಿ ಮತ್ತು ಉಜ್ಜಯಿನಿಯ ಮಹಾಕಾಲ್ ಮಹಾಲೋಕದ ವಿಸ್ತರಣೆ - ಇವೆಲ್ಲವೂ ನಮ್ಮ ರಾಷ್ಟ್ರದ ಜಾಗೃತಿಯನ್ನು ಪ್ರತಿಬಿಂಬಿಸುತ್ತವೆ, ಇದು ನಮ್ಮ ಆಧ್ಯಾತ್ಮಿಕ ಪರಂಪರೆಯನ್ನು ನವ ಚೈತನ್ಯದೊಂದಿಗೆ ಮುನ್ನಡೆಸುತ್ತಿದೆ - ಪ್ರಧಾನಮಂತ್ರಿ
ಇಂದಿನ ಭಾರತವು ತನ್ನ ಸಾಂಸ್ಕೃತಿಕ ಅಸ್ಮಿತೆಯನ್ನು ಹೊಸ ಸಂಕಲ್ಪ ಮತ್ತು ನವ ಆತ್ಮವಿಶ್ವಾಸದೊಂದಿಗೆ ಮುನ್ನಡೆಸುತ್ತಿದೆ - ಪ್ರಧಾನಮಂತ್ರಿ
प्रविष्टि तिथि:
28 NOV 2025 6:05PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗೋವಾದಲ್ಲಿ ನಡೆದ 'ಶ್ರೀ ಸಂಸ್ಥಾನ ಗೋಕರ್ಣ ಪರ್ತಗಳಿ ಜೀವೋತ್ತಮ ಮಠ'ದ 550ನೇ ವರ್ಷದ ಆಚರಣೆಯನ್ನುದ್ದೇಶಿಸಿ ಮಾತನಾಡಿದರು. ಈ ಪವಿತ್ರ ಸಂದರ್ಭದಲ್ಲಿ ತಮ್ಮ ಮನಸ್ಸು ಅತೀವ ಶಾಂತಿಯಿಂದ ತುಂಬಿದೆ ಎಂದು ಪ್ರಧಾನಮಂತ್ರಿ ಅವರು ಬಣ್ಣಿಸಿದರು. ಸಂತರ ಸಾನ್ನಿಧ್ಯದಲ್ಲಿ ಇರುವುದೇ ಒಂದು ಆಧ್ಯಾತ್ಮಿಕ ಅನುಭವ ಎಂದು ಅವರು ಅಭಿಪ್ರಾಯಪಟ್ಟರು. ಇಲ್ಲಿ ನೆರೆದಿರುವ ಅಪಾರ ಸಂಖ್ಯೆಯ ಭಕ್ತರು, ಈ ಮಠದ ಶತಮಾನಗಳಷ್ಟು ಹಳೆಯದಾದ ಚೈತನ್ಯವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದಾರೆ ಎಂದು ಹೇಳಿದ ಶ್ರೀ ಮೋದಿ, ಇಂದು ಈ ಸಮಾರಂಭದಲ್ಲಿ ಜನರ ನಡುವೆ ಉಪಸ್ಥಿತರಿರುವುದಕ್ಕೆ ತಾವು ಅತ್ಯಂತ ಭಾಗ್ಯಶಾಲಿ ಎಂದು ಭಾವಿಸುವುದಾಗಿ ತಿಳಿಸಿದರು. ಇಲ್ಲಿಗೆ ಬರುವ ಮುನ್ನ ರಾಮ ಮಂದಿರ ಮತ್ತು ವೀರ ವಿಠಲ ಮಂದಿರಕ್ಕೆ ಭೇಟಿ ನೀಡುವ ಸೌಭಾಗ್ಯ ತಮಗೆ ದೊರೆಯಿತು ಎಂದು ಅವರು ಸ್ಮರಿಸಿದರು. ಅಲ್ಲಿನ ಶಾಂತಿಯುತ ವಾತಾವರಣವು ಈ ಸಮಾರಂಭದ ಆಧ್ಯಾತ್ಮಿಕತೆಯನ್ನು ಇನ್ನಷ್ಟು ಗಾಢವಾಗಿಸಿದೆ ಎಂದು ಅವರು ಹೇಳಿದರು.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಳಿ ಜೀವೋತ್ತಮ ಮಠವು ತನ್ನ 550ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವುದು ಅತ್ಯಂತ ಐತಿಹಾಸಿಕ ಸಂದರ್ಭವಾಗಿದೆ. ಕಳೆದ 550 ವರ್ಷಗಳಲ್ಲಿ ಈ ಸಂಸ್ಥೆಯು ಅನೇಕ ಏರಿಳಿತಗಳನ್ನು ಕಂಡಿದೆ. ಯುಗಗಳ ಬದಲಾವಣೆ, ಕಾಲದ ಬದಲಾವಣೆ ಮತ್ತು ದೇಶ ಹಾಗೂ ಸಮಾಜದಲ್ಲಿನ ಹಲವಾರು ಪರಿವರ್ತನೆಗಳ ನಡುವೆಯೂ, ಮಠವು ಎಂದಿಗೂ ತನ್ನ ಗುರಿಯನ್ನು ಕಳೆದುಕೊಳ್ಳಲಿಲ್ಲ. ಬದಲಿಗೆ, ಮಠವು ಜನರಿಗೆ ಮಾರ್ಗದರ್ಶನ ನೀಡುವ ಕೇಂದ್ರವಾಗಿ ಹೊರಹೊಮ್ಮಿದೆ. ಇತಿಹಾಸದಲ್ಲಿ ಬೇರೂರಿದ್ದರೂ, ಕಾಲದೊಂದಿಗೆ ಮುನ್ನಡೆಯುತ್ತಿರುವುದೇ ಇದರ ಅತಿದೊಡ್ಡ ಗುರುತಾಗಿದೆ" ಎಂದು ಶ್ರೀ ಮೋದಿ ಬಣ್ಣಿಸಿದರು.ವಮಠವು ಯಾವ ಚೈತನ್ಯದೊಂದಿಗೆ ಸ್ಥಾಪನೆಯಾಗಿತ್ತೋ, ಆ ಚೈತನ್ಯ ಇಂದಿಗೂ ಅಷ್ಟೇ ಜೀವಂತವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದು 'ಸಾಧನೆ'ಯನ್ನು 'ಸೇವೆ'ಯೊಂದಿಗೆ ಮತ್ತು 'ಪರಂಪರೆ'ಯನ್ನು 'ಲೋಕ ಕಲ್ಯಾಣ'ದೊಂದಿಗೆ ಜೋಡಿಸುವ ಚೈತನ್ಯವಾಗಿದೆ. "ಜೀವನಕ್ಕೆ ಸ್ಥಿರತೆ, ಸಮತೋಲನ ಮತ್ತು ಮೌಲ್ಯಗಳನ್ನು ಒದಗಿಸುವುದೇ ಆಧ್ಯಾತ್ಮಿಕತೆಯ ನಿಜವಾದ ಉದ್ದೇಶ ಎಂಬ ಅರಿವನ್ನು ಮಠವು ತಲೆಮಾರಿನಿಂದ ತಲೆಮಾರಿಗೆ ತಿಳಿಸುತ್ತಾ ಬಂದಿದೆ. ಮಠದ 550 ವರ್ಷಗಳ ಈ ಪಯಣವು, ಕಷ್ಟದ ಸಮಯದಲ್ಲೂ ಸಮಾಜವನ್ನು ಮುನ್ನಡೆಸುವ ಮತ್ತು ಕಾಪಾಡುವ ಶಕ್ತಿಗೆ ಸಾಕ್ಷಿಯಾಗಿದೆ," ಎಂದು ಪ್ರಧಾನ ಮಂತ್ರಿಯವರು ಒತ್ತಿ ಹೇಳಿದರು. ಈ ಐತಿಹಾಸಿಕ ಸಂದರ್ಭದಲ್ಲಿ ಅವರು ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಸಮಿತಿಯ ಎಲ್ಲಾ ಸದಸ್ಯರು ಮತ್ತು ಈ ಆಚರಣೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ತಮ್ಮ ಶುಭಾಶಯಗಳನ್ನು ಸಲ್ಲಿಸಿದರು.
ಯಾವುದೇ ಸಂಸ್ಥೆಯು ಸತ್ಯ ಮತ್ತು ಸೇವೆಯ ಅಡಿಪಾಯದ ಮೇಲೆ ನಿಂತಾಗ, ಅದು ಕಾಲ ಬದಲಾದಂತೆ ಅಲುಗಾಡುವುದಿಲ್ಲ; ಬದಲಿಗೆ ಅದು ಸಮಾಜಕ್ಕೆ ಎದುರಿಸಿ ನಿಲ್ಲುವ ಶಕ್ತಿಯನ್ನು ನೀಡುತ್ತದೆ," ಎಂದು ಪ್ರಧಾನಮಂತ್ರಿ ಮೋದಿ ಅವರು ಅಭಿಪ್ರಾಯಪಟ್ಟರು. ಇದೀಗ, ಅದೇ ಪರಂಪರೆಯನ್ನು ಮುಂದುವರಿಸುತ್ತಾ, ಮಠವು ಒಂದು ಹೊಸ ಅಧ್ಯಾಯವನ್ನು ಬರೆಯುತ್ತಿದೆ ಎಂದು ಅವರು ಉಲ್ಲೇಖಿಸಿದರು. ಇಲ್ಲಿ ಪ್ರಭು ಶ್ರೀರಾಮನ 77 ಅಡಿ ಎತ್ತರದ ಭವ್ಯವಾದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ ಎಂದು ಅವರು ಉಲ್ಲೇಖಿಸಿದರು. "ಕೇವಲ ಮೂರು ದಿನಗಳ ಹಿಂದಷ್ಟೇ ಅಯೋಧ್ಯೆಯ ಭವ್ಯ ಶ್ರೀರಾಮ ಜನ್ಮಭೂಮಿ ಮಂದಿರದ ಶಿಖರದ ಮೇಲೆ 'ಧರ್ಮ ಧ್ವಜ'ವನ್ನು ಆರೋಹಣ ಮಾಡುವ ಸೌಭಾಗ್ಯ ತಮಗೆ ದೊರೆತಿತ್ತು. ಇಂದು ಇಲ್ಲಿ ಪ್ರಭು ಶ್ರೀರಾಮನ ಭವ್ಯ ಪ್ರತಿಮೆಯನ್ನು ಅನಾವರಣಗೊಳಿಸುವ ಪುಣ್ಯ ತಮಗೆ ಒದಗಿಬಂದಿದೆ," ಎಂದು ಅವರು ಸ್ಮರಿಸಿದರು. ಅಲ್ಲದೆ, ಈ ಸಂದರ್ಭದಲ್ಲಿ ರಾಮಾಯಣ ಆಧಾರಿತ 'ಥೀಮ್ ಪಾರ್ಕ್' ಒಂದನ್ನು ಸಹ ಉದ್ಘಾಟಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಮಠದೊಂದಿಗೆ ಜೋಡಿಸಲಾಗಿರುವ ಹೊಸ ಆಯಾಮಗಳು, ಮುಂದಿನ ಪೀಳಿಗೆಗೆ ಜ್ಞಾನ, ಸ್ಫೂರ್ತಿ ಮತ್ತು ಆಧ್ಯಾತ್ಮಿಕ ಸಾಧನೆಯ ಶಾಶ್ವತ ಕೇಂದ್ರಗಳಾಗಲಿವೆ," ಎಂದು ಪ್ರಧಾನಮಂತ್ರಿ ಅವರು ಪ್ರತಿಪಾದಿಸಿದರು. ಇಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ವಸ್ತುಸಂಗ್ರಹಾಲಯ ಮತ್ತು ಆಧುನಿಕ ತಂತ್ರಜ್ಞಾನದ '3D ಥಿಯೇಟರ್', ಮಠದ ಸಂಪ್ರದಾಯವನ್ನು ಉಳಿಸುವ ಜೊತೆಗೆ ಹೊಸ ಪೀಳಿಗೆಯನ್ನು ಪರಂಪರೆಯೊಂದಿಗೆ ಜೋಡಿಸುತ್ತಿವೆ ಎಂದು ಅವರು ಹೇಳಿದರು. ಅದೇ ರೀತಿ, ದೇಶಾದ್ಯಂತ ಲಕ್ಷಾಂತರ ಭಕ್ತರ ಪಾಲ್ಗೊಳ್ಳುವಿಕೆಯೊಂದಿಗೆ 550 ದಿನಗಳ ಕಾಲ ನಡೆದ 'ಶ್ರೀರಾಮ ನಾಮ ಜಪ ಯಜ್ಞ' ಮತ್ತು 'ರಾಮ ರಥ ಯಾತ್ರೆ'ಗಳು ಸಮಾಜದಲ್ಲಿನ ಭಕ್ತಿ ಮತ್ತು ಶಿಸ್ತಿನ ಸಾಮೂಹಿಕ ಶಕ್ತಿಯ ಪ್ರತೀಕಗಳಾಗಿವೆ ಎಂದು ಅವರು ತಿಳಿಸಿದರು. ಈ ಸಾಮೂಹಿಕ ಶಕ್ತಿಯು ಇಂದು ದೇಶದ ಮೂಲೆ ಮೂಲೆಯಲ್ಲಿ ಹೊಸ ಪ್ರಜ್ಞೆಯನ್ನು ಪಸರಿಸುತ್ತಿದೆ ಎಂದು ಅವರು ತಿಳಿಸಿದರು.
ಆಧ್ಯಾತ್ಮಿಕತೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಜೋಡಿಸುವ ಈ ವ್ಯವಸ್ಥೆಗಳು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇರುತ್ತವೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು. ಈ ನಿರ್ಮಾಣ ಕಾರ್ಯಕ್ಕಾಗಿ ಅವರು ಎಲ್ಲರನ್ನೂ ಅಭಿನಂದಿಸಿದರು. "ಶತಮಾನಗಳಿಂದ ಸಮಾಜವನ್ನು ಒಗ್ಗೂಡಿಸಿರುವ ಆಧ್ಯಾತ್ಮಿಕ ಶಕ್ತಿಗೆ ಸಮರ್ಪಿತವಾದ ಈ ವಿಶೇಷ ಸಂದರ್ಭದ ಸಂಕೇತವಾಗಿ, ಈ ಭವ್ಯ ಆಚರಣೆಯಲ್ಲಿ ಸ್ಮರಣಾರ್ಥ ನಾಣ್ಯಗಳು ಮತ್ತು ಅಂಚೆ ಚೀಟಿಗಳನ್ನು ಸಹ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
ದ್ವೈತ ವೇದಾಂತದ ದಿವ್ಯ ತಳಹದಿಯನ್ನು ಹಾಕಿದ ಮಹಾನ್ ಗುರು ಪರಂಪರೆಯಿಂದಲೇ ಈ ಮಠಕ್ಕೆ ನಿರಂತರ ಶಕ್ತಿ ಹರಿದು ಬರುತ್ತಿದೆ," ಎಂದು ಶ್ರೀ ಮೋದಿ ತಿಳಿಸಿದರು. 1475ರಲ್ಲಿ ಶ್ರೀಮದ್ ನಾರಾಯಣ ತೀರ್ಥ ಸ್ವಾಮೀಜಿಯವರು ಸ್ಥಾಪಿಸಿದ ಈ ಮಠವು, ಅಪ್ರತಿಮ ಆಚಾರ್ಯರಾದ ಜಗದ್ಗುರು ಶ್ರೀ ಮಧ್ವಾಚಾರ್ಯರೇ ಮೂಲವಾಗಿರುವ ಆ ಜ್ಞಾನ ಪರಂಪರೆಯ ವಿಸ್ತರಣೆಯಾಗಿದೆ ಎಂದು ಅವರು ಸ್ಮರಿಸಿದರು. ಈ ವೇಳೆ ಅವರು ಆಚಾರ್ಯರಿಗೆ ಭಕ್ತಿಯಿಂದ ನಮಸ್ಕರಿಸಿದರು. "ಉಡುಪಿ ಮತ್ತು ಪರ್ತಗಾಳಿ ಒಂದೇ ಆಧ್ಯಾತ್ಮಿಕ ನದಿಯ ಎರಡು ಜೀವಂತ ಧಾರೆಗಳು ಹಾಗೂ ಭಾರತದ ಪಶ್ಚಿಮ ಕರಾವಳಿಯ ಸಾಂಸ್ಕೃತಿಕ ಪ್ರವಾಹವನ್ನು ಮುನ್ನಡೆಸುತ್ತಿರುವ ಗುರುಶಕ್ತಿ ಒಂದೇ ಆಗಿರುವುದು ಅತ್ಯಂತ ಮಹತ್ವದ ವಿಷಯ," ಎಂದು ಅವರು ಪ್ರತಿಪಾದಿಸಿದರು. ಒಂದೇ ದಿನದಲ್ಲಿ, ಇದೇ ಸಂಪ್ರದಾಯಕ್ಕೆ ಸಂಬಂಧಿಸಿದ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸೌಭಾಗ್ಯ ತಮಗೆ ದೊರೆತಿರುವುದು ಒಂದು ವಿಶೇಷ ಕಾಕತಾಳೀಯ ಎಂದು ಅವರು ಬಣ್ಣಿಸಿದರು.
ಈ ಸಂಪ್ರದಾಯದೊಂದಿಗೆ ನಂಟು ಹೊಂದಿರುವ ಕುಟುಂಬಗಳು ತಲೆಮಾರಿನಿಂದ ತಲೆಮಾರಿಗೆ ಶಿಸ್ತು, ಜ್ಞಾನ, ಕಠಿಣ ಪರಿಶ್ರಮ ಮತ್ತು ಶ್ರೇಷ್ಠತೆಯನ್ನು ತಮ್ಮ ಬದುಕಿನ ಅಡಿಪಾಯವನ್ನಾಗಿ ಮಾಡಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಶ್ರೀ ಮೋದಿ ತಿಳಿಸಿದರು. ವ್ಯಾಪಾರದಿಂದ ಹಿಡಿದು ಹಣಕಾಸು ವಲಯದವರೆಗೆ ಮತ್ತು ಶಿಕ್ಷಣದಿಂದ ತಂತ್ರಜ್ಞಾನದವರೆಗೆ, ಅವರಲ್ಲಿ ಕಂಡುಬರುವ ಪ್ರತಿಭೆ, ನಾಯಕತ್ವ ಮತ್ತು ಸಮರ್ಪಣಾ ಮನೋಭಾವದಲ್ಲಿ ಈ ಜೀವನ ದೃಷ್ಟಿಕೋನದ ಆಳವಾದ ಛಾಪು ಎದ್ದು ಕಾಣುತ್ತದೆ ಎಂದು ಅವರು ಹೇಳಿದರು. ಈ ಸಂಪ್ರದಾಯದೊಂದಿಗೆ ಸಂಪರ್ಕ ಹೊಂದಿರುವ ಕುಟುಂಬಗಳು ಮತ್ತು ವ್ಯಕ್ತಿಗಳ ಯಶಸ್ಸಿನ ಹಿಂದೆ ಅನೇಕ ಸ್ಫೂರ್ತಿದಾಯಕ ಕಥೆಗಳಿವೆ. ಈ ಎಲ್ಲ ಯಶಸ್ಸಿನ ಮೂಲ ಬೇರುಗಳು ವಿನಯ, ಮೌಲ್ಯಗಳು ಮತ್ತು ಸೇವೆಯಲ್ಲಿ ಅಡಗಿವೆ ಎಂದು ಅವರು ತಿಳಿಸಿದರು.ಈ ಮೌಲ್ಯಗಳನ್ನು ಕಾಪಾಡುವಲ್ಲಿ ಈ ಮಠವು ಆಧಾರಸ್ತಂಭವಾಗಿದೆ ಎಂದು ಪ್ರತಿಪಾದಿಸಿದ ಪ್ರಧಾನಮಂತ್ರಿ ಅವರು, ಇದು ಮುಂದಿನ ಪೀಳಿಗೆಗೆ ಚೈತನ್ಯ ತುಂಬುವುದನ್ನು ಮುಂದುವರಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಐತಿಹಾಸಿಕ ಮಠದ ಮತ್ತೊಂದು ಪ್ರಮುಖ ವೈಶಿಷ್ಟ್ಯವಾದ - ಶತಮಾನಗಳಿಂದ ಸಮಾಜದ ಪ್ರತಿಯೊಂದು ವರ್ಗವನ್ನೂ ಬೆಂಬಲಿಸಿರುವ 'ಸೇವಾ ಮನೋಭಾವ'ವನ್ನು ಉಲ್ಲೇಖಿಸಿದ ಶ್ರೀ ಮೋದಿ, ಶತಮಾನಗಳ ಹಿಂದೆ ಈ ಪ್ರದೇಶದ ಮೇಲೆ ಪ್ರತಿಕೂಲ ಪರಿಸ್ಥಿತಿಗಳು ಎದುರಾದಾಗ ಮತ್ತು ಜನರು ತಮ್ಮ ಮನೆಗಳನ್ನು ತೊರೆದು ಹೊಸ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕಾದಾಗ, ಸಮುದಾಯಕ್ಕೆ ಬೆಂಬಲ ನೀಡಿ, ಅವರನ್ನು ಸಂಘಟಿಸಿ, ಹೊಸ ಸ್ಥಳಗಳಲ್ಲಿ ದೇವಾಲಯಗಳು, ಮಠಗಳು ಮತ್ತು ತಂಗುದಾಣಗಳನ್ನು ಸ್ಥಾಪಿಸಿದ್ದು ಇದೇ ಮಠ ಎಂದು ಸ್ಮರಿಸಿದರು. ಮಠವು ಕೇವಲ ಧರ್ಮವನ್ನಷ್ಟೇ ಅಲ್ಲದೆ ಮಾನವೀಯತೆ ಮತ್ತು ಸಂಸ್ಕೃತಿಯನ್ನೂ ರಕ್ಷಿಸಿತು ಹಾಗೂ ಕಾಲಕ್ರಮೇಣ ಅದರ ಸೇವಾ ಪ್ರವಾಹವು ಇನ್ನಷ್ಟು ವಿಸ್ತಾರವಾಯಿತು ಎಂದು ಶ್ರೀ ಮೋದಿ ತಿಳಿಸಿದರು. ಇಂದು ಶಿಕ್ಷಣದಿಂದ ಹಿಡಿದು ವಿದ್ಯಾರ್ಥಿ ನಿಲಯಗಳವರೆಗೆ, ವೃದ್ಧರ ಆರೈಕೆಯಿಂದ ಹಿಡಿದು ನಿರ್ಗತಿಕ ಕುಟುಂಬಗಳಿಗೆ ಸಹಾಯ ಮಾಡುವವರೆಗೆ, ಮಠವು ತನ್ನ ಸಂಪನ್ಮೂಲಗಳನ್ನು ಸದಾ ಲೋಕ ಕಲ್ಯಾಣಕ್ಕಾಗಿ ಮುಡಿಪಾಗಿಟ್ಟಿದೆ ಎಂದು ಅವರು ಹೇಳಿದರು. ವಿವಿಧ ರಾಜ್ಯಗಳಲ್ಲಿ ನಿರ್ಮಿಸಲಾದ ವಿದ್ಯಾರ್ಥಿ ನಿಲಯಗಳಾಗಿರಲಿ, ಆಧುನಿಕ ಶಾಲೆಗಳಾಗಿರಲಿ ಅಥವಾ ಕಷ್ಟದ ಸಮಯದಲ್ಲಿ ಕೈಗೊಳ್ಳುವ ಪರಿಹಾರ ಕಾರ್ಯಗಳಾಗಿರಲಿ, ಪ್ರತಿಯೊಂದು ಉಪಕ್ರಮವೂ - ಯಾವಾಗ ಆಧ್ಯಾತ್ಮಿಕತೆ ಮತ್ತು ಸೇವೆ ಒಟ್ಟಿಗೆ ಸಾಗುತ್ತವೆಯೋ, ಆಗ ಸಮಾಜವು ಸ್ಥಿರತೆ ಮತ್ತು ಮುನ್ನಡೆಯಲು ಸ್ಫೂರ್ತಿ ಎರಡನ್ನೂ ಪಡೆಯುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಗೋವಾದಲ್ಲಿ ದೇವಾಲಯಗಳು ಮತ್ತು ಸ್ಥಳೀಯ ಸಂಪ್ರದಾಯಗಳು ಸಂಕಷ್ಟಗಳನ್ನು ಎದುರಿಸಿದ ಹಾಗೂ ಭಾಷೆ ಮತ್ತು ಸಾಂಸ್ಕೃತಿಕ ಅಸ್ಮಿತೆಯ ಮೇಲೆ ಒತ್ತಡ ಉಂಟಾದ ಸಮಯವಿತ್ತು. ಆದರೆ, ಈ ಸನ್ನಿವೇಶಗಳು ಸಮಾಜದ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಬದಲಿಗೆ ಅದನ್ನು ಇನ್ನಷ್ಟು ಬಲಪಡಿಸಿದವು ಎಂದು ಪ್ರಧಾನ ಮಂತ್ರಿಯವರು ಅಭಿಪ್ರಾಯಪಟ್ಟರು. ಗೋವಾದ ಸಂಸ್ಕೃತಿಯು ಪ್ರತಿಯೊಂದು ಬದಲಾವಣೆಯ ನಡುವೆಯೂ ತನ್ನ ಮೂಲ ಸಾರವನ್ನು ಉಳಿಸಿಕೊಂಡಿರುವುದು ಮತ್ತು ಕಾಲಕ್ಕೆ ತಕ್ಕಂತೆ ತನ್ನನ್ನು ತಾನು ಪುನಶ್ಚೇತನಗೊಳಿಸಿಕೊಂಡಿರುವುದು ಇಲ್ಲಿನ ವೈಶಿಷ್ಟ್ಯವಾಗಿದೆ. ಇದರಲ್ಲಿ ಪರ್ತಗಾಳಿ ಮಠದಂತಹ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ಉಲ್ಲೇಖಿಸಿದರು.
ಅಯೋಧ್ಯೆಯಲ್ಲಿ ರಾಮ ಮಂದಿರದ ಪುನರುತ್ಥಾನ, ಕಾಶಿ ವಿಶ್ವನಾಥ ಧಾಮದ ಭವ್ಯ ಪುನರಾಭಿವೃದ್ಧಿ ಮತ್ತು ಉಜ್ಜಯಿನಿಯ ಮಹಾಕಾಲ್ ಮಹಾಲೋಕದ ವಿಸ್ತರಣೆಯೊಂದಿಗೆ, ಇಂದು ಭಾರತವು ಒಂದು ಗಮನಾರ್ಹವಾದ 'ಸಾಂಸ್ಕೃತಿಕ ಪುನರುಜ್ಜೀವನ'ಕ್ಕೆ ಸಾಕ್ಷಿಯಾಗುತ್ತಿದೆ. ಇವೆಲ್ಲವೂ ರಾಷ್ಟ್ರವು ತನ್ನ ಆಧ್ಯಾತ್ಮಿಕ ಪರಂಪರೆಯನ್ನು ಹೊಸ ಶಕ್ತಿಯೊಂದಿಗೆ ಪುನರುಜ್ಜೀವನಗೊಳಿಸುತ್ತಿರುವ ಜಾಗೃತಿಗೆ ಕನ್ನಡಿ ಹಿಡಿದಿವೆ ಎಂದು ಶ್ರೀ ಮೋದಿ ಬಣ್ಣಿಸಿದರು. ರಾಮಾಯಣ ಸರ್ಕ್ಯೂಟ್, ಕೃಷ್ಣ ಸರ್ಕ್ಯೂಟ್, ಗಯಾ ಜಿಯಲ್ಲಿನ ಅಭಿವೃದ್ಧಿ ಕಾರ್ಯಗಳು ಮತ್ತು ಕುಂಭಮೇಳದ ಅಭೂತಪೂರ್ವ ನಿರ್ವಹಣೆಯಂತಹ ಉಪಕ್ರಮಗಳು - ಇಂದಿನ ಭಾರತವು ತನ್ನ ಸಾಂಸ್ಕೃತಿಕ ಅಸ್ಮಿತೆಯನ್ನು ಹೊಸ ಸಂಕಲ್ಪ ಮತ್ತು ಆತ್ಮವಿಶ್ವಾಸದೊಂದಿಗೆ ಹೇಗೆ ಮುನ್ನಡೆಸುತ್ತಿದೆ ಎಂಬುದಕ್ಕೆ ಉದಾಹರಣೆಗಳಾಗಿವೆ ಎಂದು ಅವರು ತಿಳಿಸಿದರು. ಈ ಜಾಗೃತಿಯು ಮುಂದಿನ ಪೀಳಿಗೆಗೆ ತಮ್ಮ ಬೇರುಗಳೊಂದಿಗೆ ಸಂಪರ್ಕದಲ್ಲಿರಲು ಸ್ಫೂರ್ತಿ ನೀಡುತ್ತದೆ ಎಂದು ಅವರು ತಿಳಿಸಿದರು.
ಗೋವಾ ಪವಿತ್ರ ಭೂಮಿಯು ಶತಮಾನಗಳಿಂದ ಭಕ್ತಿ, ಸಂತ ಪರಂಪರೆ ಮತ್ತು ಸಾಂಸ್ಕೃತಿಕ ಆಚರಣೆಯ ನಿರಂತರ ಪ್ರವಾಹದೊಂದಿಗೆ ತನ್ನದೇ ಆದ ವಿಶಿಷ್ಟ ಆಧ್ಯಾತ್ಮಿಕ ಗುರುತನ್ನು ಹೊಂದಿದೆ ಎಂದು ಶ್ರೀ ಮೋದಿ ಹೇಳಿದರು. ನೈಸ ತಾವು ವಾರಣಾಸಿಯರ್ಗಿಕ ಸೌಂದರ್ಯದ ಜೊತೆಗೆ, ಈ ಭೂಮಿಯು 'ದಕ್ಷಿಣ ಕಾಶಿ' ಎಂಬ ಗುರುತನ್ನೂ ಹೊಂದಿದೆ, ಇದನ್ನು ಪರ್ತಗಾಳಿ ಮಠವು ಇನ್ನಷ್ಟು ಗಾಢವಾಗಿಸಿದೆ ಎಂದು ಅವರು ತಿಳಿಸಿದರು. ಮಠದ ಸಂಪರ್ಕವು ಕೇವಲ ಕೊಂಕಣ ಮತ್ತು ಗೋವಾಕ್ಕೆ ಸೀಮಿತವಾಗಿಲ್ಲ, ಬದಲಿಗೆ ಇದರ ಸಂಪ್ರದಾಯವು ದೇಶದ ವಿವಿಧ ಭಾಗಗಳೊಂದಿಗೆ ಹಾಗೂ ವಾರಣಾಸಿಯ ಪುಣ್ಯ ಭೂಮಿಯೊಂದಿಗೂ ಬೆಸೆದುಕೊಂಡಿದೆ ಎಂದು ಅವರು ತಿಳಿಸಿದರು. ತಾವು ವಾರಣಾಸಿಯ ಸಂಸದರಾಗಿರುವುದರಿಂದ ಹೆಮ್ಮೆಯಿಂದ ಒಂದು ವಿಷಯವನ್ನು ಉಲ್ಲೇಖಿಸಿದ ಅವರು, ಮಠದ ಸ್ಥಾಪಕರಾದ ಆಚಾರ್ಯ ಶ್ರೀ ನಾರಾಯಣ ತೀರ್ಥರು ಉತ್ತರ ಭಾರತದ ಪ್ರವಾಸದ ಸಮಯದಲ್ಲಿ ವಾರಣಾಸಿಯಲ್ಲಿ ಒಂದು ಕೇಂದ್ರವನ್ನು ಸ್ಥಾಪಿಸಿದರು. ಆ ಮೂಲಕ ಮಠದ ಆಧ್ಯಾತ್ಮಿಕ ಧಾರೆ ದಕ್ಷಿಣದಿಂದ ಉತ್ತರಕ್ಕೆ ವಿಸ್ತರಿಸಿತು ಎಂದು ಹೇಳಿದರು. ವಾರಣಾಸಿಯಲ್ಲಿ ಸ್ಥಾಪಿಸಲಾದ ಆ ಕೇಂದ್ರವು ಇಂದಿಗೂ ಸಮಾಜಕ್ಕೆ ಸೇವೆಯನ್ನು ಸಲ್ಲಿಸುತ್ತಲೇ ಇದೆ ಎಂದು ಅವರು ಅಭಿಪ್ರಾಯಪಟ್ಟರು.
ಈ ಪವಿತ್ರ ಮಠವು 550 ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ, ನಾವು ಕೇವಲ ಇತಿಹಾಸವನ್ನು ಆಚರಿಸುತ್ತಿಲ್ಲ, ಬದಲಿಗೆ ಭವಿಷ್ಯದ ದಿಕ್ಕನ್ನು ನಿರ್ಧರಿಸುತ್ತಿದ್ದೇವೆ ಎಂದು ಶ್ರೀ ಮೋದಿ ತಿಳಿಸಿದರು. ವಿಕಸಿತ ಭಾರತದ ಹಾದಿಯು ಏಕತೆಯ ಮೂಲಕ ಸಾಗುತ್ತದೆ. ಯಾವಾಗ ಸಮಾಜ ಒಂದಾಗುತ್ತದೆಯೋ, ಯಾವಾಗ ಪ್ರತಿಯೊಂದು ಪ್ರದೇಶ ಮತ್ತು ಪ್ರತಿಯೊಂದು ವರ್ಗವು ಒಗ್ಗಟ್ಟಾಗಿ ನಿಲ್ಲುತ್ತದೆಯೋ, ಆಗ ರಾಷ್ಟ್ರವು ದೊಡ್ಡ ದಾಪುಗಾಲು ಹಾಕುತ್ತದೆ ಎಂದು ಅವರು ತಿಳಿಸಿದರು. ಜನರನ್ನು ಜೋಡಿಸುವುದು, ಮನಸ್ಸುಗಳನ್ನು ಬೆಸೆಯುವುದು ಹಾಗೂ ಸಂಪ್ರದಾಯ ಮತ್ತು ಆಧುನಿಕತೆಯ ನಡುವೆ ಸೇತುವೆಯನ್ನು ನಿರ್ಮಿಸುವುದೇ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಳಿ ಜೀವೋತ್ತಮ ಮಠದ ಪ್ರಾಥಮಿಕ ಧ್ಯೇಯವಾಗಿದೆ. ಆದ್ದರಿಂದ ವಿಕಸಿತ ಭಾರತದ ಪಯಣದಲ್ಲಿ ಈ ಮಠವು ಒಂದು ಪ್ರಮುಖ ಸ್ಫೂರ್ತಿ ಕೇಂದ್ರದ ಪಾತ್ರವನ್ನು ವಹಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ತಿಳಿಸಿದರು.
ತಮಗೆ ಎಲ್ಲಿ ಪ್ರೀತಿ ಮತ್ತು ವಿಶ್ವಾಸವಿದೆಯೋ, ಅಲ್ಲಿ ತಾವು ಗೌರವಪೂರ್ವಕವಾಗಿ ಕೆಲವು ವಿನಂತಿಗಳನ್ನು ಮಾಡುವುದಾಗಿ ಶ್ರೀ ಮೋದಿ ಹೇಳಿದರು. ಇಂದು ತಾವು ಜನರ ಮಧ್ಯೆ ಬಂದಿರುವುದರಿಂದ, ಸಹಜವಾಗಿಯೇ ತಮ್ಮ ಮನಸ್ಸಿನಲ್ಲಿ ಮೂಡಿರುವ ಕೆಲವು ಆಲೋಚನೆಗಳನ್ನು ಹಂಚಿಕೊಳ್ಳಲು ಬಯಸುವುದಾಗಿ ಅವರು ತಿಳಿಸಿದರು. ತಾವು ಒಂಬತ್ತು ಮನವಿಗಳನ್ನು (ಆಗ್ರಹಗಳನ್ನು) ಜನರ ಮುಂದಿಡಲು ಬಯಸುತ್ತಿದ್ದು, ಈ ಸಂಸ್ಥೆಯ ಮೂಲಕ ಅವುಗಳನ್ನು ಪ್ರತಿಯೊಬ್ಬ ಪ್ರಜೆಗೂ ತಲುಪಿಸಬಹುದಾಗಿದೆ ಎಂದು ಅವರು ಉಲ್ಲೇಖಿಸಿದರು. ಈ ಮನವಿಗಳು 'ಒಂಬತ್ತು ಸಂಕಲ್ಪ'ಗಳಿದ್ದಂತೆ ಎಂದು ಅವರು ತಿಳಿಸಿದರು. ಭೂಮಿಯು ನಮ್ಮ ತಾಯಿಯಾಗಿದ್ದು, ಪ್ರಕೃತಿಯನ್ನು ಗೌರವಿಸುವಂತೆ ಮಠದ ಬೋಧನೆಗಳು ನಮಗೆ ಮಾರ್ಗದರ್ಶನ ನೀಡುತ್ತವೆ. ಪರಿಸರ ರಕ್ಷಣೆಯನ್ನು ನಮ್ಮ ಕರ್ತವ್ಯವೆಂದು ಪರಿಗಣಿಸಿದಾಗ ಮಾತ್ರ 'ವಿಕಸಿತ ಭಾರತ'ದ ಕನಸು ನನಸಾಗಲು ಸಾಧ್ಯ ಎಂದು ಶ್ರೀ ಮೋದಿ ತಿಳಿಸಿದರು. ಆದ್ದರಿಂದ, ಮೊದಲನೆಯ ಸಂಕಲ್ಪವು - 'ಜಲ ಸಂರಕ್ಷಣೆ, ನೀರನ್ನು ಉಳಿಸುವುದು ಮತ್ತು ನದಿಗಳನ್ನು ರಕ್ಷಿಸುವುದಾಗಿರಬೇಕು' ಎಂದು ಅವರು ಅಭಿಪ್ರಾಯಪಟ್ಟರು. ಎರಡನೇ ಸಂಕಲ್ಪವು 'ಗಿಡ ಮರಗಳನ್ನು ನೆಡುವುದಾಗಿರಬೇಕು' ಎಂದು ಅವರು ಹೇಳಿದರು. ದೇಶವ್ಯಾಪಿ ನಡೆಯುತ್ತಿರುವ 'ಏಕ್ ಪೇಡ್ ಮಾ ಕೇ ನಾಮ್' (ತಾಯಿಯ ಹೆಸರಿನಲ್ಲಿ ಒಂದು ಮರ) ಅಭಿಯಾನವು ವೇಗ ಪಡೆದುಕೊಳ್ಳುತ್ತಿದೆ. ಈ ಅಭಿಯಾನದೊಂದಿಗೆ ಈ ಸಂಸ್ಥೆಯ ಶಕ್ತಿಯೂ ಸೇರಿದರೆ, ಅದರ ಪ್ರಭಾವ ಇನ್ನೂ ವ್ಯಾಪಕವಾಗಲಿದೆ ಎಂದು ಅವರು ಉಲ್ಲೇಖಿಸಿದರು. ಮೂರನೇ ಸಂಕಲ್ಪವು 'ಸ್ವಚ್ಛತೆಯ ಅಭಿಯಾನ'ವಾಗಿರಬೇಕು. ಪ್ರತಿಯೊಂದು ಬೀದಿ, ಬಡಾವಣೆ ಮತ್ತು ನಗರಗಳು ಸ್ವಚ್ಛವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು." ನಾಲ್ಕನೇ ಸಂಕಲ್ಪವು 'ಸ್ವದೇಶಿ ಅಳವಡಿಕೆ' ಆಗಿರಬೇಕು ಎಂದು ಪ್ರಧಾನ ಮಂತ್ರಿಯವರು ತಿಳಿಸಿದರು. ಇಂದು ಭಾರತವು 'ಆತ್ಮನಿರ್ಭರ ಭಾರತ' ಮತ್ತು 'ಸ್ವದೇಶಿ' ಮಂತ್ರದೊಂದಿಗೆ ಮುನ್ನಡೆಯುತ್ತಿದೆ. ದೇಶವು 'ವೋಕಲ್ ಫಾರ್ ಲೋಕಲ್' (ಸ್ಥಳೀಯ ಉತ್ಪನ್ನಗಳಿಗೆ ದನಿ) ಎನ್ನುತ್ತಿದೆ. ಈ ಸಂಕಲ್ಪವನ್ನು ನಾವೂ ಕೂಡ ಮುಂದುವರಿಸಿಕೊಂಡು ಹೋಗಬೇಕು ಎಂದು ಅವರು ತಿಳಿಸಿದರು.
ಐದನೇ ಸಂಕಲ್ಪದ ಬಗ್ಗೆ ಮಾತನಾಡಿದ ಶ್ರೀ ಮೋದಿ, ಅದು 'ದೇಶ ದರ್ಶನ' ಆಗಿರಬೇಕು ಎಂದರು. ದೇಶದ ವಿವಿಧ ಭಾಗಗಳನ್ನು ತಿಳಿಯಲು ಮತ್ತು ಅರ್ಥಮಾಡಿಕೊಳ್ಳಲು ಎಲ್ಲರೂ ಪ್ರಯತ್ನಿಸುವಂತೆ ಅವರು ಪ್ರೋತ್ಸಾಹಿಸಿದರು. ಆರನೇ ಸಂಕಲ್ಪವು 'ನೈಸರ್ಗಿಕ ಕೃಷಿ'ಯನ್ನು ಜೀವನದ ಭಾಗವನ್ನಾಗಿ ಮಾಡಿಕೊಳ್ಳುವುದಾಗಿರಬೇಕು ಎಂದು ಅವರು ಎತ್ತಿ ಹೇಳಿದರು." ಏಳನೇ ಸಂಕಲ್ಪವು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು, 'ಶ್ರೀ ಅನ್ನ' (ಸಿರಿಧಾನ್ಯ)ಗಳನ್ನು ಬಳಸುವುದು ಮತ್ತು ಆಹಾರದಲ್ಲಿ ಎಣ್ಣೆಯ ಬಳಕೆಯನ್ನು ಶೇಕಡಾ 10 ರಷ್ಟು ಕಡಿಮೆ ಮಾಡುವುದಾಗಿರಬೇಕು ಎಂದು ಅವರು ತಿಳಿಸಿದರು. ಎಂಟನೇ ಸಂಕಲ್ಪವು 'ಯೋಗ ಮತ್ತು ಕ್ರೀಡೆ'ಯನ್ನು ಅಳವಡಿಸಿಕೊಳ್ಳುವುದಾಗಿರಬೇಕು ಮತ್ತು ಒಂಬತ್ತನೇ ಸಂಕಲ್ಪವು 'ಬಡವರಿಗೆ ಯಾವುದಾದರೂ ರೂಪದಲ್ಲಿ ಸಹಾಯ ಮಾಡುವುದಾಗಿರಬೇಕು' ಎಂದು ಅವರು ತಿಳಿಸಿದರು. ಮಠವು ಈ ಸಂಕಲ್ಪಗಳನ್ನು ಸಾಮೂಹಿಕ ಜನ ಸಂಕಲ್ಪಗಳನ್ನಾಗಿ ಪರಿವರ್ತಿಸಬಹುದು ಎಂದು ಪ್ರಧಾನಮಂತ್ರಿ ಅಭಿಪ್ರಾಯಪಟ್ಟರು.
ಈ ಮಠದ 550 ವರ್ಷಗಳ ಅನುಭವವು ನಮಗೆ ಕಲಿಸುವುದೇನೆಂದರೆ, ಪರಂಪರೆಯು ಕಾಲಕ್ಕೆ ತಕ್ಕಂತೆ ತನ್ನ ಜವಾಬ್ದಾರಿಗಳನ್ನು ವಿಸ್ತರಿಸಿಕೊಂಡಾಗ ಮಾತ್ರ ಅದು ಸಮಾಜವನ್ನು ಮುನ್ನಡೆಸುತ್ತದೆ. ಹಾಗಾಗಿ, ಶತಮಾನಗಳಿಂದ ಮಠವು ಸಮಾಜಕ್ಕೆ ನೀಡಿರುವ ಶಕ್ತಿಯನ್ನು ಈಗ ಭವಿಷ್ಯದ ಭಾರತವನ್ನು ನಿರ್ಮಿಸುವತ್ತ ಕೇಂದ್ರೀಕರಿಸಬೇಕು ಎಂದು ಅವರು ಹೇಳಿದರು.
ಗೋವಾದ ಆಧ್ಯಾತ್ಮಿಕ ವೈಭವವು ಅದರ ಆಧುನಿಕ ಅಭಿವೃದ್ಧಿಯಷ್ಟೇ ವಿಶಿಷ್ಟವಾಗಿದೆ ಎಂದು ಬಣ್ಣಿಸಿದ ಪ್ರಧಾನ ಮಂತ್ರಿಯವರು, ಅತಿ ಹೆಚ್ಚು ತಲಾದಾಯ ಹೊಂದಿರುವ ರಾಜ್ಯಗಳಲ್ಲಿ ಗೋವಾ ಕೂಡ ಒಂದಾಗಿದೆ ಮತ್ತು ಪ್ರವಾಸೋದ್ಯಮ, ಫಾರ್ಮಾ ಹಾಗೂ ಸೇವಾ ವಲಯಕ್ಕೆ ಇದು ಗಮನಾರ್ಹ ಕೊಡುಗೆ ನೀಡುತ್ತಿದೆ ಎಂದು ತಿಳಿಸಿದರು. ಇತ್ತೀಚಿನ ವರ್ಷಗಳಲ್ಲಿ ಗೋವಾ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ಇಲ್ಲಿನ ಮೂಲಸೌಕರ್ಯಗಳನ್ನು ಆಧುನೀಕರಿಸುತ್ತಿವೆ ಎಂದು ಅವರು ಉಲ್ಲೇಖಿಸಿದರು. ಹೆದ್ದಾರಿಗಳು, ವಿಮಾನ ನಿಲ್ದಾಣಗಳು ಮತ್ತು ರೈಲು ಸಂಪರ್ಕದ ವಿಸ್ತರಣೆಯು ಭಕ್ತರು ಮತ್ತು ಪ್ರವಾಸಿಗರಿಗೆ ಪ್ರಯಾಣವನ್ನು ಸುಲಭಗೊಳಿಸಿದೆ ಎಂದು ಅವರು ಹೇಳಿದರು. 2047ರ ವೇಳೆಗೆ 'ವಿಕಸಿತ ಭಾರತ'ದ ರಾಷ್ಟ್ರೀಯ ದೃಷ್ಟಿಕೋನದಲ್ಲಿ ಪ್ರವಾಸೋದ್ಯಮವು ಒಂದು ಪ್ರಮುಖ ಅಂಶವಾಗಿದೆ ಮತ್ತು ಗೋವಾ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿ ನಿಂತಿದೆ ಎಂದು ಅವರು ತಿಳಿಸಿದರು.
ಭಾರತವು ಇಂದು ಒಂದು ನಿರ್ಣಾಯಕ ಹಂತದ ಮೂಲಕ ಹಾದುಹೋಗುತ್ತಿದೆ. ಇಲ್ಲಿ ಯುವಜನರ ಶಕ್ತಿ, ರಾಷ್ಟ್ರದ ಬೆಳೆಯುತ್ತಿರುವ ಆತ್ಮವಿಶ್ವಾಸ ಮತ್ತು ಸಾಂಸ್ಕೃತಿಕ ಬೇರುಗಳ ಕಡೆಗಿನ ಒಲವು ಒಟ್ಟಾಗಿ 'ಹೊಸ ಭಾರತ'ವನ್ನು ರೂಪಿಸುತ್ತಿವೆ," ಎಂದು ಪ್ರಧಾನ ಮಂತ್ರಿಯವರು ಪ್ರತಿಪಾದಿಸಿದರು. ಆಧ್ಯಾತ್ಮಿಕತೆ, ರಾಷ್ಟ್ರ ಸೇವೆ ಮತ್ತು ಅಭಿವೃದ್ಧಿ ಒಟ್ಟಿಗೆ ಮುನ್ನಡೆದಾಗ ಮಾತ್ರ 'ವಿಕಸಿತ ಭಾರತ'ದ ಸಂಕಲ್ಪ ಈಡೇರುತ್ತದೆ ಎಂದು ಅವರು ಉಲ್ಲೇಖಿಸಿದರು. ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ಗೋವಾದ ಪವಿತ್ರ ಭೂಮಿ ಮತ್ತು ಈ ಮಠವು ಈ ನಿಟ್ಟಿನಲ್ಲಿ ಮಹತ್ವದ ಕೊಡುಗೆ ನೀಡುತ್ತಿವೆ ಎಂದು ಶ್ರೀ ಮೋದಿ ತಿಳಿಸಿದರು. ಈ ಪವಿತ್ರ ಸಂದರ್ಭದಲ್ಲಿ ಅವರು ಮತ್ತೊಮ್ಮೆ ಎಲ್ಲರಿಗೂ ತಮ್ಮ ಹಾರ್ದಿಕ ಶುಭಾಶಯಗಳನ್ನು ಕೋರಿದರು.
ಸಮಾರಂಭದಲ್ಲಿ ಗೋವಾ ರಾಜ್ಯಪಾಲರಾದ ಶ್ರೀ ಪೂಸಪಾಟಿ ಅಶೋಕ್ ಗಜಪತಿ ರಾಜು, ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್, ಕೇಂದ್ರ ಸಚಿವ ಶ್ರೀ ಶ್ರೀಪಾದ್ ನಾಯಕ್ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.
ಹಿನ್ನೆಲೆ
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಳಿ ಜೀವೋತ್ತಮ ಮಠದ 550ನೇ ವರ್ಷದ ಆಚರಣೆಯಾದ ‘ಸಾರ್ಧ ಪಂಚಶತಮಾನೋತ್ಸವ’ದ ಸಂದರ್ಭದಲ್ಲಿ, ಪ್ರಧಾನಮಂತ್ರಿ ಅವರು ದಕ್ಷಿಣ ಗೋವಾದ ಕ್ಯಾನಕೋನಾದಲ್ಲಿರುವ ಮಠಕ್ಕೆ ಭೇಟಿ ನೀಡಿದರು.
ಪ್ರಧಾನಮಂತ್ರಿ ಅವರು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಳಿ ಜೀವೋತ್ತಮ ಮಠದಲ್ಲಿ ಕಂಚಿನಿಂದ ನಿರ್ಮಿಸಲಾದ ಪ್ರಭು ಶ್ರೀರಾಮನ 77 ಅಡಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಿದರು. ಹಾಗೆಯೇ ಮಠವು ಅಭಿವೃದ್ಧಿಪಡಿಸಿದ ‘ರಾಮಾಯಣ ಥೀಮ್ ಪಾರ್ಕ್ ಗಾರ್ಡನ್’ ಅನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಪ್ರಧಾನಿಯವರು ವಿಶೇಷ ಅಂಚೆ ಚೀಟಿ ಮತ್ತು ಸ್ಮರಣಾರ್ಥ ನಾಣ್ಯವನ್ನು ಸಹ ಬಿಡುಗಡೆ ಮಾಡಿದರು.
ಶ್ರೀ ಸಂಸ್ಥಾನ ಗೋಕರ್ಣ ಪರ್ತಗಳಿ ಜೀವೋತ್ತಮ ಮಠವು ಮೊದಲ ಗೌಡ ಸಾರಸ್ವತ ಬ್ರಾಹ್ಮಣ ವೈಷ್ಣವ ಮಠವಾಗಿದೆ. ಇದು ಕ್ರಿ.ಶ. 13ನೇ ಶತಮಾನದಲ್ಲಿ ಜಗದ್ಗುರು ಮಧ್ವಾಚಾರ್ಯರು ಸ್ಥಾಪಿಸಿದ ದ್ವೈತ ಸಿದ್ಧಾಂತವನ್ನು ಅನುಸರಿಸುತ್ತದೆ. ಈ ಮಠದ ಮೂಲ ಕೇಂದ್ರವು ದಕ್ಷಿಣ ಗೋವಾದ ಕುಶಾವತಿ ನದಿಯ ದಂಡೆಯಲ್ಲಿರುವ ಪರ್ತಗಳಿ ಎಂಬ ಸಣ್ಣ ಪಟ್ಟಣದಲ್ಲಿದೆ.
*****
(रिलीज़ आईडी: 2196179)
आगंतुक पटल : 3