iffi banner

ಸ್ಪೈಯಿಂಗ್ ಸ್ಟಾರ್ಸ್: ಪ್ರಜ್ಞೆ, ತಂತ್ರಜ್ಞಾನ ಮತ್ತು ಆಧ್ಯಾತ್ಮದ ಒಂದು ಸಿನಿಮೀಯ ಪಯಣ


ಚಿತ್ರದ ಪಯಣವನ್ನು ಮೆಲುಕು ಹಾಕಿದ ವಿಮುಕ್ತಿ ಜಯಸುಂದರ, ನೀಲ ಮಾಧಬ್ ಪಾಂಡಾ ಮತ್ತು ಇಂದಿರಾ ತಿವಾರಿ

56ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ), 'ಸ್ಪೈಯಿಂಗ್ ಸ್ಟಾರ್ಸ್' (Spying Stars) ಚಿತ್ರದ ಪತ್ರಿಕಾಗೋಷ್ಠಿಯು ಒಂದು ವಿಶಿಷ್ಟ ಸಿನಿಮೀಯ ಪಯಣವನ್ನು ಅನಾವರಣಗೊಳಿಸಿತು. ಮಾನವ ಪ್ರಜ್ಞೆ, ಆಧ್ಯಾತ್ಮಿಕತೆ ಮತ್ತು ಡಿಜಿಟಲ್ ಪ್ರೇರಿತ ವಾಸ್ತವದ ನಡುವಿನ ಸೂಕ್ಷ್ಮ ಸಮತೋಲನವನ್ನು ಈ ಚಿತ್ರವು ಶೋಧಿಸುತ್ತದೆ. ವಿಮುಕ್ತಿ ಜಯಸುಂದರ ಅವರ ನಿರ್ದೇಶನ, ನೀಲ ಮಾಧಬ್ ಪಾಂಡಾ ಅವರ ನಿರ್ಮಾಣ ಹಾಗೂ ಇಂದಿರಾ ತಿವಾರಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು, ಮಾನವನ ಇರುವಿಕೆ ಮತ್ತು ಪರಿಸರವು ಹೇಗೆ ಒಂದರಲ್ಲೊಂದು ಬೆಸೆದುಕೊಂಡಿವೆ ಎಂಬುದನ್ನು ಪರಿಶೋಧಿಸುತ್ತದೆ. ಆ ಮೂಲಕ, ಅತ್ಯಂತ ಆಪ್ತವಾದ ಮತ್ತು ವಿಶಾಲವಾದ ವ್ಯಾಪ್ತಿಯುಳ್ಳ ಕಥೆಯೊಂದನ್ನು ಇದು ಕಟ್ಟಿಕೊಡುತ್ತದೆ.

ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿಮುಕ್ತಿ ಜಯಸುಂದರ, "ಯಂತ್ರಗಳೇ ಪ್ರಾಬಲ್ಯ ಸಾಧಿಸುತ್ತಿರುವ ಇಂದಿನ ಜಗತ್ತಿನಲ್ಲಿ, ಮಾನವರು ತಮ್ಮ ಪ್ರಜ್ಞೆ, ಬಾಂಧವ್ಯ ಮತ್ತು ಆಧ್ಯಾತ್ಮಿಕತೆಯನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಹೇಗೆ ಸಾಗುತ್ತಿದ್ದಾರೆ," ಎಂಬ ಚಿತ್ರದ ಸಂದೇಶವನ್ನು ವಿವರಿಸಿದರು. "ಈ ಡಿಜಿಟಲ್ ಜಗತ್ತಿನೊಳಗೆ ಮಾನವೀಯ ಚೇತನದ ಕುರಿತು ಸಿನಿಮಾವೊಂದನ್ನು ಮಾಡುವುದು ಬಹಳ ಮುಖ್ಯವಾಗಿತ್ತು," ಎಂದು ಅವರು ಹೇಳಿದರು. ಇನ್ನೊಂದು ಸ್ವಾರಸ್ಯಕರ ಸಂಗತಿಯೆಂದರೆ, ತಾವು ಮತ್ತು ಚಿತ್ರದ ನಿರ್ಮಾಪಕರು ಮೊದಲ ಬಾರಿಗೆ ಐಎಫ್‌ಎಫ್‌ಐ ನಲ್ಲೇ ತೀರ್ಪುಗಾರರಾಗಿ ಭೇಟಿಯಾಗಿದ್ದೆವು ಎಂದು ನಿರ್ದೇಶಕರು ತಿಳಿಸಿದರು. ಅಂದು ಬೆಳೆದ ಆ ಪರಿಚಯವೇ, ಇಂದು ಈ ಸಿನಿಮೀಯ ಸಹಯೋಗವಾಗಿ ರೂಪುಗೊಂಡಿದೆ ಎಂದು ಅವರು ಹೇಳಿದರು.

ತಂತ್ರಜ್ಞಾನ ಮತ್ತು ಆಧ್ಯಾತ್ಮಿಕತೆಯನ್ನು ಒಗ್ಗೂಡಿಸುವಂತಹ ಹಿಂದಿ ಚಲನಚಿತ್ರವನ್ನು ನಿರ್ಮಿಸುವಲ್ಲಿನ ಸವಾಲುಗಳ ಬಗ್ಗೆ ನಿರ್ಮಾಪಕ ನೀಲ ಮಾಧಬ್ ಪಾಂಡಾ ಮಾತನಾಡಿದರು. "ವಿಮುಕ್ತಿ ಜಯಸುಂದರ ಅವರು ಈ ಕಥೆಯನ್ನು ಕೇವಲ ಒಂದೇ ಸಾಲಿನಲ್ಲಿ ವಿವರಿಸಿದ್ದರು. ಆಗ ನಾನು, 'ಇದನ್ನು ನಿಜವಾಗಿಯೂ ಸಿನಿಮಾ ಮಾಡಲು ಸಾಧ್ಯವೇ?' ಎಂದು ಯೋಚಿಸಿದೆ. ಆದರೆ ಇಂದು ದೈವಕೃಪೆಯಿಂದ ನಾವದನ್ನು ತೆರೆಯ ಮೇಲೆ ನೋಡುತ್ತಿದ್ದೇವೆ," ಎಂದ ಅವರು, ಕಥೆಯಲ್ಲಿ ವಿಜ್ಞಾನ ಮತ್ತು ಮಾನವೀಯ ಸಾರವನ್ನು ಅತ್ಯಂತ ಸೂಕ್ಷ್ಮವಾಗಿ ಸಮತೋಲನಗೊಳಿಸಿರುವುದನ್ನು ಶ್ಲಾಘಿಸಿದರು.

ಹನುಮಾನ್ ದ್ವೀಪದಲ್ಲಿ ಕ್ವಾರಂಟೈನ್, ನಿಗೂಢತೆ ಮತ್ತು ಮಾನವ ಸಂಬಂಧಗಳ ಹಾದಿಯಲ್ಲಿ ಸಾಗುವ ವಿಜ್ಞಾನಿ 'ಆನಂದಿ'ಯ ಪಾತ್ರದಲ್ಲಿನ ತಮ್ಮ ಆಳವಾದ ಅನುಭವವನ್ನು ನಟಿ ಇಂದಿರಾ ತಿವಾರಿ ಹಂಚಿಕೊಂಡರು. 'ಇದು ಕೇವಲ ಒಂದು ಸ್ಕ್ರಿಪ್ಟ್ ಅಲ್ಲ,' ಎಂದ ಅವರು, 'ಇದರ ಥೀಮ್‌ ಅತ್ಯಂತ ತೀವ್ರ ಮತ್ತು ನೈಜವಾಗಿದೆ. ಹಾಗಾಗಿ, ನಮ್ಮ ಕೆಲಸವು ಸಂಪೂರ್ಣ ಮಾನಸಿಕ ಉಪಸ್ಥಿತಿ ಮತ್ತು ಜಾಗೃತಿಯನ್ನು ಬಯಸುತ್ತಿತ್ತು,' ಎಂದು ಹೇಳಿದರು.

ನಿರ್ದೇಶಕ ವಿಮುಕ್ತಿ ಜಯಸುಂದರ ಅವರು ಈ ಚಿತ್ರವನ್ನು ಅಸ್ತಿತ್ವ, ಗ್ರಹಿಕೆ ಮತ್ತು ಅಸಾಧಾರಣ ಹಾಗೂ ಪರಿವರ್ತನೀಯ ಅನುಭವಗಳ ಮೂಲಕ ಸಾಗುವ ಮಾನವನ ಪಯಣದ ಮೇಲಿನ ಒಂದು 'ಧ್ಯಾನ' ಎಂದು ಬಣ್ಣಿಸಿದರು. ತನ್ನೆಲ್ಲಾ ಬೆರಗುಗೊಳಿಸುವ ಸೌಂದರ್ಯದೊಂದಿಗೆ ಚಿತ್ರಿತವಾಗಿರುವ ಪರಿಸರವು, ಇಲ್ಲಿ ತನ್ನದೇ ಆದ ಒಂದು ಪ್ರತ್ಯೇಕ ಪಾತ್ರವಾಗಿ ಹೊರಹೊಮ್ಮುತ್ತದೆ ಮತ್ತು ಕಥೆಯನ್ನು ಅತ್ಯಂತ ಸಹಜವಾಗಿ ರೂಪಿಸುತ್ತದೆ ಎಂದು ವಿವರಿಸಿದರು. ನಿರ್ಮಾಪಕ ನೀಲ ಮಾಧಬ್ ಪಾಂಡಾ ಅವರು ಮಾತು ಮುಂದುವರಿಸಿ, 'ಈ ಚಿತ್ರವು ಪರಿಸರ ಸರಪಳಿ, ಪ್ರಕೃತಿ, ತಂತ್ರಜ್ಞಾನ ಮತ್ತು ಆಧ್ಯಾತ್ಮಿಕತೆಯನ್ನು ಒಂದಕ್ಕೊಂದು ಬೆಸೆಯುತ್ತದೆ. ಆ ಮೂಲಕ, ಅನೇಕ ನೆಲೆಗಳಲ್ಲಿ ವೀಕ್ಷಕರ ಮನತಟ್ಟುವಂತಹ ಕಥಾಹಂದರವನ್ನು ಇದು ಸೃಷ್ಟಿಸಿದೆ,' ಎಂದು ತಿಳಿಸಿದರು.

ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಡೆದ ಚಿತ್ರದ ಪ್ರೀಮಿಯರ್ ಪ್ರದರ್ಶನ ಮತ್ತು ಅಲ್ಲಿ ವ್ಯಕ್ತವಾದ ಅಂತಾರಾಷ್ಟ್ರೀಯ ಪ್ರತಿಕ್ರಿಯೆಯ ಕುರಿತು ಚಿತ್ರತಂಡ ಚರ್ಚಿಸಿತು. ಹನುಮಾನ್ ದ್ವೀಪದ ದೃಶ್ಯಗಳನ್ನು ಚಿತ್ರೀಕರಿಸಲಾದ ಸ್ಥಳವನ್ನು, ಅದರ ಮಾಂತ್ರಿಕ ಮತ್ತು ಐತಿಹಾಸಿಕ ಮಹತ್ವಕ್ಕಾಗಿ ಆಯ್ಕೆ ಮಾಡಲಾಗಿತ್ತು ಎಂದು ವಿಮುಕ್ತಿ ಜಯಸುಂದರ ವಿವರಿಸಿದರು. ಇದೇ ವೇಳೆ, ಆ ಸ್ಥಳಕ್ಕೆ ಕಾಲಿಡುತ್ತಿದ್ದಂತೆಯೇ ಬೇರೊಂದು ಲೋಕಕ್ಕೆ ಹೋದ ಅನುಭವವಾಯಿತು ಎಂದು ನಿರ್ಮಾಪಕ ನೀಲ ಮಾಧಬ್ ಪಾಂಡಾ ಸ್ಮರಿಸಿಕೊಂಡರು. ಅಂತಹ ಸನ್ನಿವೇಶಗಳಲ್ಲಿ ಕೆಲಸ ಮಾಡುವುದು ಸವಾಲಿನದಾಗಿದ್ದರೂ, ಅದು ಅತ್ಯಂತ ತೃಪ್ತಿಕರ ಅನುಭವವಾಗಿತ್ತು ಎಂದು ಇಂದಿರಾ ತಿವಾರಿ ತಿಳಿಸಿದರು. ನೈಜ ಸ್ಥಳಗಳಲ್ಲಿ ಚಿತ್ರೀಕರಣ ಮಾಡುವಾಗ ಎದುರಾಗುವ ಅನಿರೀಕ್ಷಿತತೆ ಮತ್ತು ಸಹಜತೆ ಚಿತ್ರಕ್ಕೆ ವಿಶೇಷ ಮೆರುಗು ನೀಡುತ್ತದೆ ಎಂದು ಅವರು ಒತ್ತಿ ಹೇಳಿದರು. ಚರ್ಚೆಯು ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದಂತೆ, ಸ್ಥಳ, ಭಾವನೆ ಮತ್ತು ಅನುಭವಗಳ ನಡುವಿನ ನಾಜೂಕಾದ ಬೆಸುಗೆಯೇ 'ಸ್ಪೈಯಿಂಗ್ ಸ್ಟಾರ್ಸ್' ಚಿತ್ರದ ಜೀವಾಳ ಎಂಬುದನ್ನು ಚಿತ್ರತಂಡದ ಸದಸ್ಯರು ಪುನರುಚ್ಚರಿಸಿದರು.

ಚಿತ್ರದ ಬಗ್ಗೆ

ಫ್ರಾನ್ಸ್, ಭಾರತ, ಶ್ರೀಲಂಕಾ | 2025 | ಇಂಗ್ಲಿಷ್ ಮತ್ತು ಸಿಂಹಳ | 100 ನಿಮಿಷಗಳು

ವಿಜ್ಞಾನಿ ಆನಂದಿ ತನ್ನ ತಂದೆಯ ಅಂತ್ಯಸಂಸ್ಕಾರದ ವಿಧಿಗಳನ್ನು ನೆರವೇರಿಸಲು ಹನುಮಾನ್ ದ್ವೀಪಕ್ಕೆ ಬರುತ್ತಾಳೆ. ಯಂತ್ರಗಳೇ ಪ್ರಾಬಲ್ಯ ಸಾಧಿಸಿರುವ ಜಗತ್ತಿನಲ್ಲಿ ಉಂಟಾದ ಸಾಂಕ್ರಾಮಿಕ ರೋಗದ ಕಾರಣ, ಅವಳನ್ನು ತಕ್ಷಣವೇ ದೂರದ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಮಾಡಲಾಗುತ್ತದೆ. ನಿಗೂಢ ನಕ್ಷತ್ರವೊಂದು ಅವಳನ್ನು ಹಿಂಬಾಲಿಸಲು ಪ್ರಾರಂಭಿಸಿದಾಗ, ಅವಳು ಅಲ್ಲಿಂದ ತಪ್ಪಿಸಿಕೊಳ್ಳುತ್ತಾಳೆ ಮತ್ತು ಒಬ್ಬ ತಾಯಿ ಹಾಗೂ ಆಕೆಯ ತೃತೀಯ ಲಿಂಗಿ ಮಗಳ ಬಳಿ ಆಶ್ರಯ ಪಡೆಯುತ್ತಾಳೆ.

ತಂತ್ರಜ್ಞರು ಮತ್ತು ಕಲಾವಿದರು:

ವಿಮುಕ್ತಿ ಜಯಸುಂದರ - ನಿರ್ದೇಶಕರು

ನೀಲ ಮಾಧಬ್ ಪಾಂಡ - ನಿರ್ಮಾಪಕರು

ಇಂದಿರಾ ತಿವಾರಿ – ನಟಿ

 

ಐಎಫ್‌ಎಫ್‌ಐ ಬಗ್ಗೆ

1952ರಲ್ಲಿ ಆರಂಭಗೊಂಡ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ), ದಕ್ಷಿಣ ಏಷ್ಯಾದ ಅತ್ಯಂತ ಹಳೆಯ ಮತ್ತು ಅತಿದೊಡ್ಡ ಸಿನಿಮಾ ಹಬ್ಬವಾಗಿ ಹೊರಹೊಮ್ಮಿದೆ. ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿರುವ ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ (NFDC) ಮತ್ತು ಗೋವಾ ಸರ್ಕಾರದ ಎಂಟರ್‌ ಟೈನ್‌ ಮೆಂಟ್ ಸೊಸೈಟಿ ಆಫ್ ಗೋವಾ (ESG) ಜಂಟಿಯಾಗಿ ಇದನ್ನು ಆಯೋಜಿಸುತ್ತವೆ.  ಇಂದು ಐಎಫ್‌ಎಫ್‌ಐ ಜಾಗತಿಕ ಸಿನಿಮಾದ ಶಕ್ತಿ ಕೇಂದ್ರವಾಗಿ ಬೆಳೆದಿದೆ. ಇಲ್ಲಿ ಮರುಜೀವ ಪಡೆದ ಕ್ಲಾಸಿಕ್ ಚಿತ್ರಗಳು ದಿಟ್ಟ ಪ್ರಯೋಗಗಳೊಂದಿಗೆ ಮುಖಾಮುಖಿಯಾಗುತ್ತವೆ; ಅಂತಾರಾಷ್ಟ್ರೀಯ ಸ್ಪರ್ಧೆಗಳು, ಸಾಂಸ್ಕೃತಿಕ ಪ್ರದರ್ಶನಗಳು, ಮಾಸ್ಟರ್‌ ಕ್ಲಾಸ್‌ ಗಳು, ಗೌರವಾರ್ಪಣೆಗಳು ಮತ್ತು ಹೊಸ ಆಲೋಚನೆಗಳು, ಒಪ್ಪಂದಗಳು ಹಾಗೂ ಸಹಯೋಗಗಳು ಗರಿಗೆದರುವಂತಹ ಶಕ್ತಿಯುತವಾದ 'ವೇವ್ಸ್ ಫಿಲ್ಮ್ ಬಜಾರ್' - ಇವೆಲ್ಲದರ ರೋಚಕ ಮಿಶ್ರಣವೇ ಐಎಫ್‌ಎಫ್‌ಐಯ ನಿಜವಾದ ಮೆರುಗು. ಗೋವಾದ ಸುಂದರ ಕಡಲತೀರದ ಹಿನ್ನೆಲೆಯಲ್ಲಿ, ನವೆಂಬರ್ 20 ರಿಂದ 28 ರವರೆಗೆ ನಡೆಯುತ್ತಿರುವ ಈ 56ನೇ ಆವೃತ್ತಿಯು, ವಿವಿಧ ಭಾಷೆಗಳು, ಪ್ರಕಾರಗಳು ಮತ್ತು ಆವಿಷ್ಕಾರಗಳ ಅದ್ಭುತ ಲೋಕವನ್ನು ತೆರೆದಿಡಲಿದೆ. ಇದು ವಿಶ್ವ ವೇದಿಕೆಯಲ್ಲಿ ಭಾರತದ ಸೃಜನಶೀಲ ಪ್ರತಿಭೆಯ ಅದ್ದೂರಿ ಆಚರಣೆಯಾಗಿದೆ.

ಹೆಚ್ಚಿನ ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿ:

IFFI Website: https://www.iffigoa.org/

PIB’s IFFI Microsite: https://www.pib.gov.in/iffi/56new/

PIB IFFIWood Broadcast Channel: https://whatsapp.com/channel/0029VaEiBaML2AU6gnzWOm3F

X Handles: @IFFIGoa, @PIB_India, @PIB_Panaji


 
*****


Great films resonate through passionate voices. Share your love for cinema with #IFFI2025, #AnythingForFilms and #FilmsKeLiyeKuchBhi. Tag us @pib_goa on Instagram, and we'll help spread your passion! For journalists, bloggers, and vloggers wanting to connect with filmmakers for interviews/interactions, reach out to us at iffi.mediadesk@pib.gov.in with the subject line: Take One with PIB.


Release ID: 2193423   |   Visitor Counter: 4