ಭೂವಿಜ್ಞಾನ ಸಚಿವಾಲಯ
ಭಾರತೀಯ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ-2025ʼರ (ಐ.ಐ.ಎಸ್.ಎಫ್-2025) ಪೂರ್ವಭಾವಿಯಾಗಿ, ಸಂಭವನೀಯ ನಾವೀನ್ಯಕಾರರಿಗಾಗಿ "ರಾಷ್ಟ್ರವ್ಯಾಪಿ ನಾವೀನ್ಯತೆ ಸವಾಲು" ಅಭಿಯಾನಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್
ಪ್ರಶಸ್ತಿ ಜಯಿಸಬಲ್ಲ ನವೀನ ಆಲೋಚನೆಗಳೊಂದಿಗೆ ಮುಂದೆ ಬರುವಂತೆ ಮತ್ತು ಭಾರತದ ವೈಜ್ಞಾನಿಕ ಭವಿಷ್ಯವನ್ನು ರೂಪಿಸುವಂತೆ ವಿದ್ಯಾರ್ಥಿಗಳು, ನವೋದ್ಯಮಗಳು ಹಾಗೂ "ಜೆನ್ ಝಡ್"ಗೆ ಸಚಿವರ ಕರೆ
ಕಳೆದ 11 ವರ್ಷಗಳಲ್ಲಿ ಭಾರತದ ಪ್ರಯಾಣವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಐತಿಹಾಸಿಕ ಜಿಗಿತಕ್ಕೆ ಸಾಕ್ಷಿಯಾಗಿದೆ, ರಾಷ್ಟ್ರವನ್ನು ಉದಯೋನ್ಮುಖ ʻಡೀಪ್ ಟೆಕ್ʼ ಶಕ್ತಿ ಕೇಂದ್ರವಾಗಿಸಿದೆ: ಡಾ. ಜಿತೇಂದ್ರ ಸಿಂಗ್
प्रविष्टि तिथि:
19 NOV 2025 5:51PM by PIB Bengaluru
ಮುಂಬರುವ ʻಭಾರತೀಯ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ-2025ʼರ (ಐ.ಐ.ಎಸ್.ಎಫ್ -2025) ಪೂರ್ವಭಾವಿಯಾಗಿ, ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಅವರು ಇಂದು "ರಾಷ್ಟ್ರವ್ಯಾಪಿ ನಾವೀನ್ಯತೆ ಸವಾಲು” ಅಭಿಯಾನಕ್ಕೆ ಚಾಲನೆ ನೀಡಿದರು. ಎಲ್ಲಾ ವರ್ಗಗಳ ಸಂಭವನೀಯ ನಾವೀನ್ಯಕಾರರು ಇದರಲ್ಲಿ ಮುಕ್ತವಾಗಿ ಭಾಗವಹಿಸಬಹುದಾಗಿದ್ದು, ಭಾರತದ "ಜೆನ್ ಝಡ್" ಮುಂದಾಳತ್ವಕ್ಕೆ ಇದು ವಿಶೇಷ ಕರೆಯಾಗಿದೆ.
ಕಳೆದ 11 ವರ್ಷಗಳಲ್ಲಿ ಭಾರತದ ಪ್ರಯಾಣವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಐತಿಹಾಸಿಕ ಜಿಗಿತಕ್ಕೆ ಸಾಕ್ಷಿಯಾಗಿದೆ. ರಾಷ್ಟ್ರವನ್ನು ಉದಯೋನ್ಮುಖ ʻಡೀಪ್ ಟೆಕ್ʼ ಶಕ್ತಿ ಕೇಂದ್ರವಾಗಿ ಮಾಡಿದೆ ಎಂದು ಸಚಿವರು ಹೇಳಿದರು. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಡಾ.ಜಿತೇಂದ್ರ ಸಿಂಗ್ ಅವರು ಇಂದು ಬಿಡುಗಡೆ ಮಾಡಿದ ವೀಡಿಯೊ ಸಂದೇಶದಲ್ಲಿ ಈ ಘೋಷಣೆ ಮಾಡಿದ್ದಾರೆ.
ಭಾರತದಲ್ಲಿ ಈಗ 6,000ಕ್ಕೂ ಹೆಚ್ಚು ʻಡೀಪ್ ಟೆಕ್ʼ ನವೋದ್ಯಮಗಳಿವೆ. ಜೈವಿಕ ಆರ್ಥಿಕತೆಯು 14 ಪಟ್ಟು ಬೆಳೆದಿದ್ದು, ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ದ್ವಿಗುಣಗೊಂಡಿದೆ. ಬಾಹ್ಯಾಕಾಶ ಕ್ಷೇತ್ರವು 8 ಶತಕೋಟಿ ಡಾಲರ್ ಬಾಹ್ಯಾಕಾಶ ಆರ್ಥಿಕತೆಯನ್ನು ಸೃಷ್ಟಿಸುವ ಖಾಸಗಿ ಸಂಸ್ಥೆಗಳಿಗೆ ಮುಕ್ತವಾಗಿದೆ ಮತ್ತು ಭಾರತವು ತನ್ನ ಮೊದಲ ರಾಷ್ಟ್ರೀಯ ʻಕ್ವಾಂಟಮ್ ಮಿಷನ್ʼ ಅನ್ನು ಪ್ರಾರಂಭಿಸಿದೆ. ಇದು ಕ್ವಾಂಟಮ್ ತಂತ್ರಜ್ಞಾನ ನವೋದ್ಯಮಗಳ ಹೊಸ ಅಲೆಯನ್ನು ಹುಟ್ಟುಹಾಕಿದೆ ಎಂದು ಡಾ. ಜಿತೇಂದ್ರ ಸಿಂಗ್ ತಮ್ಮ ಸಂದೇಶದಲ್ಲಿ ಒತ್ತಿ ಹೇಳಿದ್ದಾರೆ.
"ಇದು ಕೇವಲ ಪ್ರಗತಿಯಲ್ಲ. ಭಾರತವು ಭವಿಷ್ಯವನ್ನು ರೂಪಿಸುತ್ತಿದೆ. ಮುಂದಿನ ಹೊಸ ಕ್ರಾಂತಿಯು ನಿಮ್ಮಿಂದಲೇ ಸಂಭವಿಸಬಹುದು " ಎಂದು ಸಚಿವರು ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಡಿಸೆಂಬರ್ 6 ರಿಂದ ಪ್ರಾರಂಭವಾಗುವ ʻಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವ-2025ʼರ ಪೂರ್ವಭಾವಿಯಾಗಿ 'ವಿಜ್ಞಾನದಿಂದ ಸಮೃದ್ಧಿ: ಆತ್ಮನಿರ್ಭರ ಭಾರತಕ್ಕಾಗಿ' ಎಂಬ ಧ್ಯೇಯವಾಕ್ಯದೊಂದಿಗೆ ಈ ಸ್ಪರ್ಧಾ ಅಭಿಯಾನವನ್ನು ಪ್ರಾರಂಭಿಸಲಾಗಿದೆ.
ಕೃತಕ ಬುದ್ಧಿಮತ್ತೆ, ಕ್ವಾಂಟಮ್, ಬಾಹ್ಯಾಕಾಶ, ಜೈವಿಕ ತಂತ್ರಜ್ಞಾನ, ಹವಾಮಾನ ತಂತ್ರಜ್ಞಾನ, ಆರೋಗ್ಯ ರಕ್ಷಣೆ, ಕೃಷಿ, ಶಿಕ್ಷಣ ಅಥವಾ ಯಾವುದೇ ಉದಯೋನ್ಮುಖ ಕ್ಷೇತ್ರದಲ್ಲಿ ಒಂದು ಆವಿಷ್ಕಾರವನ್ನು ಸಲ್ಲಿಸಲು ವಿದ್ಯಾರ್ಥಿಗಳು, ನವೋದ್ಯಮಗಳು, ಸಂಶೋಧಕರು, ರೈತರು, ಸೃಷ್ಟಿಕರ್ತರು ಮತ್ತು ನಾಗರಿಕರು ಸೇರಿದಂತೆ ಭಾರತದಾದ್ಯಂತದ ಭಾಗವಹಿಸುವವರನ್ನು ಆಹ್ವಾನಿಸಲಾಗಿದೆ. ಆದರೆ, ಅಂತಹ ಆವಿಷ್ಕಾರವು ಕನಿಷ್ಠ 1,000 ಜನರ ಜೀವನವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿರಬೇಕು.
ಪರಿಕಲ್ಪನೆಗಳು, ಮೂಲಮಾದರಿಗಳು ಮತ್ತು ಪ್ರಾಯೋಗಿಕ ಯೋಜನೆಗಳಲ್ಲಿ ಸ್ಪಷ್ಟತೆ, ಉದ್ದೇಶ ಮತ್ತು ಅಗಾಧತೆಯ ಸಾಮರ್ಥ್ಯ ಕಂಡುಬಂದಲ್ಲಿ ಅವುಗಳನ್ನು ಸ್ವೀಕರಿಸಲಾಗುತ್ತದೆ.
ಈ ಕೆಳಗಿನ ಲಿಂಕ್ ಬಳಸಿ ʻಮೈಗವರ್ನ್ಮೆಂಟ್ʼ(MyGov) ವೇದಿಕೆಯಲ್ಲಿ ಸಲ್ಲಿಕೆಗಳನ್ನು ಮಾಡಬಹುದು: https://www.mygov.in/task/one-innovation-towards-self-reliant-india/ ಸಾಮಾಜಿಕ ಮಾಧ್ಯಮದಲ್ಲಿ ಸಚಿವರ ವೀಡಿಯೊ ಸಂದೇಶದಲ್ಲಿ ಈ ಲಿಂಕ್ ಅನ್ನು ಹಂಚಿಕೊಳ್ಳಲಾಗಿದೆ.
ʻಐ.ಐ.ಎಸ್.ಎಫ್ -2025ʼರ ಸಮಯದಲ್ಲಿ ಉತ್ತಮ ಆಲೋಚನೆಗಳನ್ನು ಗುರುತಿಸಲಾಗುವುದು. ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಜೈವಿಕ ತಂತ್ರಜ್ಞಾನ ಇಲಾಖೆ, ʻಭಾರತೀಯ ವಿಜ್ಞಾನ ಕೈಗಾರಿಕಾ ಸಂಶೋಧನಾ ಮಂಡಳಿʼ (ಸಿ.ಎಸ್.ಐ.ಆರ್) ಹಾಗೂ ʻಜೈವಿಕ ತಂತ್ರಜ್ಞಾನ ಉದ್ಯಮ ಸಂಶೋಧನಾ ನೆರವು ಮಂಡಳಿ (ಬಿ.ಐ.ಆರ್.ಎ.ಸಿ) ಬೆಂಬಲದ ಮೂಲಕ ಅವುಗಳನ್ನು ಬೆಳೆಸಲು ರಚನಾತ್ಮಕ ಮಾರ್ಗವನ್ನು ಒದಗಿಸಲಾಗುವುದು. ಅತ್ಯುತ್ತಮ ಆವಿಷ್ಕಾರಗಳನ್ನು ಒತ್ತಿ ಹೇಳಲು ಮತ್ತು ಅವುಗಳ ಮುಂದುವರಿಕೆಗೆ ಮಾರ್ಗದರ್ಶನ ನೀಡಲು ವೈಯಕ್ತಿಕವಾಗಿ ವಿಶೇಷ ಆಸ್ತೆ ವಹಿಸುವುದಾಗಿ ಸಚಿವರು ಬದ್ಧತೆ ನೀಡಿದ್ದಾರೆ.
ಈ ಉಪಕ್ರಮದ ಹಿಂದಿನ ಸ್ಫೂರ್ತಿಯ ಬಗ್ಗೆ ಮಾತನಾಡಿರುವ ಸಚಿವರು, “ಭಾರತವು ನಿರ್ಣಾಯಕ ಹಂತದಲ್ಲಿದೆ. ನಾವೀನ್ಯತೆ ಪರಿಸರ ವ್ಯವಸ್ಥೆಯು ಪ್ರಬುದ್ಧವಾಗುತ್ತಿದೆ, ಉನ್ನತ ಮಟ್ಟದ ತಂತ್ರಜ್ಞಾನ ಕಾರ್ಯಾಚರಣೆಗಳು ನಡೆಯುತ್ತಿವೆ. ಪ್ರಸ್ತುತ ವಿಜ್ಞಾನವು ರಾಷ್ಟ್ರ ನಿರ್ಮಾಣದ ಕೇಂದ್ರಬಿಂದುವಾಗುತ್ತಿದೆ,ʼʼ ಎಂದು ಹೇಳಿದ್ದಾರೆ. ಸರಿಯಾದ ವೇದಿಕೆಯನ್ನು ಒದಗಿಸಿದರೆ ತರಗತಿ ಕೊಠಡಿಗಳು, ಸಮುದಾಯ ಪ್ರಯೋಗಾಲಯಗಳು, ಕಾರ್ಯಾಗಾರಗಳು, ಹೊಲಗಳು ಮತ್ತು ದೂರದ ಜಿಲ್ಲೆಗಳಿಂದಲೂ ನೈಜ ಪ್ರಪಂಚದ ಪರಿಹಾರಗಳು ಹೊರಹೊಮ್ಮಬಹುದು ಎಂದು ಅವರು ಒತ್ತಿ ಹೇಳಿದ್ದಾರೆ.
ಯುವಕರಿಗೆ ಸಚಿವರ ಸಂದೇಶವು ಸ್ಪಷ್ಟವಾಗಿದೆ: "ಎಲ್ಲಾ ನವೋದ್ಯಮಿಗಳಿಗೆ, ವಿಶೇಷವಾಗಿ ʻಜೆನ್ ಝಡ್ʼ: ಭಾರತವು ಕೇಳಿಸಿಕೊಳ್ಳುತ್ತಿದೆ."
ರಾಷ್ಟ್ರವು ʻಐ.ಐ.ಎಸ್.ಎಫ್ -2025ʼಕ್ಕೆ ತಯಾರಿ ನಡೆಸುತ್ತಿರುವ ಸಮಯದಲ್ಲಿ, ಆರಂಭಿಸಲಾದ ʻಸವಾಲುʼ ಅಭಿಯಾನವು ದೇಶದ ವೈಜ್ಞಾನಿಕ ಮನೋಧರ್ಮವನ್ನು ಪ್ರಚೋದಿಸುವ ಮತ್ತು ಜಾಗತಿಕ ಸವಾಲುಗಳಿಗೆ ಅಗಾಧ ಮಟ್ಟದ ಭಾರತೀಯ ಪರಿಹಾರಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಯುವ ಮನಸ್ಸುಗಳು ಮತ್ತು ತಳಮಟ್ಟದ ನಾವೀನ್ಯತೆಯ ಶಕ್ತಿಯನ್ನು ಸಜ್ಜುಗೊಳಿಸುವ ಮೂಲಕ, ಸಚಿವಾಲಯವು ವಿಜ್ಞಾನವನ್ನು ಸಮೃದ್ಧಿ ಮತ್ತು ಸ್ವಾವಲಂಬನೆ ಎರಡಕ್ಕೂ ಒಂದು ಶಕ್ತಿಯಾಗಿ ಭಾವಿಸಿದೆ.
"ನಾವು ವಿಜ್ಞಾನದೊಂದಿಗೆ ಭವಿಷ್ಯವನ್ನು ನಿರ್ಮಿಸೋಣ. ಆತ್ಮನಿರ್ಭರ ಭಾರತಕ್ಕಾಗಿ ನಾವು ಆವಿಷ್ಕಾರ ಮಾಡೋಣ" ಎಂದು ಕೇಂದ್ರ ಸಚಿವರಾದ ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.



*****
(रिलीज़ आईडी: 2191995)
आगंतुक पटल : 47