ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
azadi ka amrit mahotsav

ವಿಶ್ವ ಶೌಚಾಲಯ ದಿನ 2025


ನೈರ್ಮಲ್ಯ: ಘನತೆ ಮತ್ತು ಭೂಗ್ರಹಕ್ಕಾಗಿರುವ ಸಾಮೂಹಿಕ ಜವಾಬ್ದಾರಿ

ಎಂ.ಒ.ಹೆಚ್.ಯು.ಎ. ಯಿಂದ 'ಶೌಚಾಲಯ ಪಾಸ್ ಹೈ' ಮತ್ತು 'ಮೈ ಸಾಫ್ ಹಿ ಅಚ್ಛಾ ಹೂ' - ಜವಾಬ್ದಾರಿಯುತ ಶೌಚಾಲಯ ಬಳಕೆಯನ್ನು ಪ್ರಚುರಪಡಿಸಲು ಸಾರ್ವಜನಿಕ ಸಹಭಾಗಿತ್ವದ ಅಭಿಯಾನ ಪ್ರಾರಂಭ

ಸುಲಭ್ ಅಂತರರಾಷ್ಟ್ರೀಯ ಮತ್ತು ವಿಶ್ವ ಶೌಚಾಲಯ ಸಂಸ್ಥೆಯಿಂದ ಸುಸ್ಥಿರ ನೈರ್ಮಲ್ಯ ಮತ್ತು ವೃತ್ತಾಕಾರದ ಆರ್ಥಿಕ ಅಭ್ಯಾಸಗಳನ್ನು ತ್ವರಿತಗೊಳಿಸಲು ಎಂ.ಒ.ಹೆಚ್.ಯು.ಎ.  ಮತ್ತು ಡಿ.ಡಿ.ಡಬ್ಲ್ಯು.ಎಸ್. ಸಹಯೋಗದೊಂದಿಗೆ 3 ದಿನಗಳ ವಿಶ್ವ ಶೌಚಾಲಯ ಶೃಂಗಸಭೆಯ ಆರಂಭ

Posted On: 19 NOV 2025 5:41PM by PIB Bengaluru

"ನೈರ್ಮಲ್ಯ: ಘನತೆ ಮತ್ತು ಭೂಗ್ರಹಕ್ಕಾಗಿ ಸಾಮೂಹಿಕ ಜವಾಬ್ದಾರಿ" - ವಿಶ್ವ ಶೌಚಾಲಯ ದಿನ 2025ರ ಈ ವಿಷಯ ಶೀರ್ಷಿಕೆಯು ಭಾರತದ ಸಮಗ್ರ ವಿಧಾನ, ಸ್ವಚ್ಛತೆ, ಘನತೆ ಮತ್ತು ಪರಿಸರ ಉಸ್ತುವಾರಿಯನ್ನು ಸಂಯೋಜಿಸುವುದನ್ನು ಪ್ರತಿಧ್ವನಿಸುತ್ತದೆ. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ, ಈ ಅಗತ್ಯ ಸೇವೆಗಳಿಗೆ ಸಾರ್ವತ್ರಿಕ ಮತ್ತು ಸುಸ್ಥಿರ ಪ್ರವೇಶವನ್ನು ವಿಸ್ತರಿಸುವಲ್ಲಿ ಭಾರತ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ವಿಶ್ವ ಶೌಚಾಲಯ ದಿನದ ಸಂದರ್ಭದಲ್ಲಿ, ಸುಲಭ್ ಅಂತರರಾಷ್ಟ್ರೀಯ ಮತ್ತು ವಿಶ್ವ ಶೌಚಾಲಯ ಸಂಸ್ಥೆಯು ಸುಸ್ಥಿರ ನೈರ್ಮಲ್ಯವನ್ನು ತ್ವರಿತಗೊಳಿಸಲು ಜಾಗತಿಕ ಪಾಲುದಾರರೊಂದಿಗೆ 3 ದಿನಗಳ ವಿಶ್ವ ಶೌಚಾಲಯ ಶೃಂಗಸಭೆಯನ್ನು ಪ್ರಾರಂಭಿಸಿತು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವರಾದ ಶ್ರೀ ಮನೋಹರ್ ಲಾಲ್ ಮತ್ತು ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್ ಅವರ ಸಮ್ಮುಖದಲ್ಲಿ. ಉಪ ಸಚಿವರಾದ ಡೇವಿಡ್ ಮಹ್ಲೋಬೊ (ನೀರು ಮತ್ತು ನೈರ್ಮಲ್ಯ, ದಕ್ಷಿಣ ಆಫ್ರಿಕಾ), ಶ್ರೀಲಂಕಾ ಮತ್ತು ಭೂತಾನ್‌ನ ರಾಯಭಾರಿಗಳು ಮತ್ತು 25 ದೇಶಗಳ ಪ್ರತಿನಿಧಿಗಳು ಮತ್ತು ಹೆಚ್.ಯು.ಎಲ್., ಬಿ.ಎಂ.ಜಿ.ಎಫ್., ವಿಶ್ವಬ್ಯಾಂಕ್‌ನಂತಹ ಪ್ರಮುಖ ಸಂಸ್ಥೆಗಳ ಪ್ರತಿನಿಧಿಗಳು ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

2014ರಲ್ಲಿ ಪ್ರಧಾನಮಂತ್ರಿ ಅವರು ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ನೀಡಿದ ಸ್ವಚ್ಛತಾ ಕರೆಗೆ ಸ್ಪಂದಿಸಿ, 2019ರಲ್ಲಿ 5 ವರ್ಷಗಳ ಅವಧಿಯಲ್ಲಿ ಭಾರತವನ್ನು ಬಯಲು ಮಲವಿಸರ್ಜನೆ ಮುಕ್ತ ಎಂದು ಘೋಷಿಸಲಾಯಿತು - ಇದು ಗಮನಾರ್ಹ ಮೈಲಿಗಲ್ಲು. ಪ್ರತಿ ಮನೆಯಲ್ಲಿ ಶೌಚಾಲಯಗಳ ನಿರ್ಮಾಣವು ಸ್ವಚ್ಛತೆ ಮತ್ತು ಸುರಕ್ಷತೆಯನ್ನು ಮಾತ್ರವಲ್ಲದೆ ಘನತೆ, ಶಿಕ್ಷಣ ಮತ್ತು ಸಮಾಜದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರು ಮತ್ತು ಹುಡುಗಿಯರ ಭಾಗವಹಿಸುವಿಕೆಯನ್ನು ಖಚಿತಪಡಿಸಿದೆ.

ತ್ವರಿತ ನಗರೀಕರಣ ಮತ್ತು ಹೆಚ್ಚುತ್ತಿರುವ ವಲಸೆ, ನಗರಗಳಲ್ಲಿ ನೈರ್ಮಲ್ಯ ಸವಾಲುಗಳನ್ನು ತೀವ್ರಗೊಳಿಸುತ್ತಿದೆ, ಉತ್ತಮ ಗುಣಮಟ್ಟದ ಶೌಚಾಲಯಗಳ ಬೇಡಿಕೆಯನ್ನು ಹೆಚ್ಚಿಸುತ್ತಿದೆ. ಹವಾಮಾನ ಬದಲಾವಣೆಯು ಜಾಗತಿಕ ವಾಶ್ (ಡಬ್ಲ್ಯು.ಎ.ಎಸ್.ಹೆಚ್.) ವ್ಯವಸ್ಥೆಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಬೀರುತ್ತಿರುವುದರಿಂದ, ಹವಾಮಾನ-ನಿರೋಧಕ ಮತ್ತು ಸುಸ್ಥಿರ ನೈರ್ಮಲ್ಯ ಪರಿಹಾರಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯವಾಗುತ್ತಿದೆ. ಯುಎನ್‌ನ ಎಸ್‌ಡಿಜಿ -6 ಶುದ್ಧ ನೀರು ಮತ್ತು ನೈರ್ಮಲ್ಯವನ್ನು ಮೂಲಭೂತ ಮಾನವ ಹಕ್ಕು ಎಂದು ಗುರುತಿಸುತ್ತದೆ.

ಸ್ವಚ್ಛ ಭಾರತ್ ಮಿಷನ್–ಅರ್ಬನ್ (ಎಸ್.ಬಿ.ಎಂ.-ಯು) 2.0 ಆರಂಭದೊಂದಿಗೆ, ಭಾರತವು ನಗರ ನೈರ್ಮಲ್ಯದ ಹೊಸ ಹಂತವನ್ನು ಪ್ರವೇಶಿಸಿತು – ಒ.ಡಿ.ಎಫ್. (ODF) ನಿಂದ ಒ.ಡಿ.ಎಫ್. ++ ಗೆ ಪ್ರಯಾಣ ಮಾಡಿತು. ಮತ್ತು ಮುಖ್ಯವಾಗಿ ಸುರಕ್ಷಿತ ನೈರ್ಮಲ್ಯದತ್ತ ಈ ಹಂತ ಸಾಗಿತು. ನಗರದ ಜನಸಂಖ್ಯೆ ಹೆಚ್ಚಾದಂತೆ, ಸಾರ್ವಜನಿಕ ಶೌಚಾಲಯಗಳಿಗೆ ಬೇಡಿಕೆ ತೀವ್ರವಾಗಿ ಏರಿತು. ಘನ ಮತ್ತು ದ್ರವ ತ್ಯಾಜ್ಯಗಳ ನಿರ್ವಹಣೆ ವಿನ್ಯಾಸ ಮತ್ತು ಸುಸ್ಥಿರ ನಿರ್ವಹಣೆಯನ್ನು ಬಲಪಡಿಸುವುದು ಅತ್ಯಗತ್ಯವಾಯಿತು. ಒ.ಡಿ.ಎಫ್.  ಮತ್ತು ಒ.ಡಿ.ಎಫ್. + ನ ಸಾಧನೆಗಳ ನಂತರ, ಎಲ್ಲಾ ನಗರಗಳು ಒ.ಡಿ.ಎಫ್. ++ ಸ್ಥಾನಮಾನವನ್ನು ಸಾಧಿಸುವುದನ್ನು ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸಲಾಯಿತು, ಇದು ಸುರಕ್ಷಿತ ನೈರ್ಮಲ್ಯ ಮತ್ತು ಸಮಗ್ರ ಮಲದ ಕೆಸರು ನಿರ್ವಹಣೆಯನ್ನು ಕಡ್ಡಾಯಗೊಳಿಸುತ್ತದೆ.

ಡಬ್ಲ್ಯು.ಹೆಚ್.ಒ.  ಮತ್ತು ಯುನಿಸೆಫ್ ನ 2024ರ ಜಂಟಿ ಮೇಲ್ವಿಚಾರಣಾ ಕಾರ್ಯಕ್ರಮ (ಜೆ.ಎಂ.ಪಿ.-JMP) ವರದಿಯ ಪ್ರಕಾರ, ಭಾರತದಲ್ಲಿ ಸುಮಾರು 55 ಮಿಲಿಯನ್ ನಗರ ನಿವಾಸಿಗಳು ಕಳೆದ ಎರಡು ವರ್ಷಗಳಲ್ಲಿ ಸುರಕ್ಷಿತವಾಗಿ ನಿರ್ವಹಿಸಲ್ಪಟ್ಟ, ಸುಧಾರಿತ ನೈರ್ಮಲ್ಯ ಸೌಲಭ್ಯಗಳಿಗೆ ಪ್ರವೇಶವನ್ನು ಪಡೆದುಕೊಂಡಿದ್ದಾರೆ - ಇದು ಫ್ರಾನ್ಸ್ ಅಥವಾ ಇಟಲಿಯ ಜನಸಂಖ್ಯೆಗೆ ಸರಿಸುಮಾರು ಸಮಾನವಾಗಿದೆ. ಈ ವರ್ಧಿತ ನೈರ್ಮಲ್ಯ ಸೇವೆಗಳು ಶಿಶು ಮತ್ತು ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಗಮನಾರ್ಹ ಪಾತ್ರ ವಹಿಸಿವೆ.

ಭಾರತದ ವೈವಿಧ್ಯಮಯ ಮತ್ತು ಸವಾಲಿನ ಭೌಗೋಳಿಕ ಪರಿಸ್ಥಿತಿಗಳನ್ನು ಗುರುತಿಸಿ, ಪ್ರಾದೇಶಿಕ ಅಗತ್ಯಗಳನ್ನು ಪೂರೈಸಲು ನೈರ್ಮಲ್ಯ ಮತ್ತು ಶೌಚಾಲಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಸಂದರ್ಭದಲ್ಲಿ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಅಮೃತ್ ಮತ್ತು ನಮಾಮಿ ಗಂಗೆಯಂತಹ ಆಂದೋಲನದೋಪಾದಿಯ ಕಾರ್ಯಾಚರಣೆಗಳೊಂದಿಗೆ ನಿಕಟ ಸಮನ್ವಯದೊಂದಿಗೆ ಸ್ವಚ್ಛ ಭಾರತ ಮಿಷನ್ ಅನ್ನು ಮುನ್ನಡೆಸಿದೆ. ಕರಾವಳಿ ಮತ್ತು ನದಿ ಪ್ರದೇಶಗಳಲ್ಲಿ ಒಳಚರಂಡಿ ಸಂಸ್ಕರಣಾ ಸೌಲಭ್ಯಗಳನ್ನು ಸ್ಥಾಪಿಸುವಂತಹ ಹಲವಾರು ಉಪಕ್ರಮಗಳ ಅನುಷ್ಠಾನ ಇದರಲ್ಲಿ ಸೇರಿದೆ.

ನಗರ ನೈರ್ಮಲ್ಯವನ್ನು ಹೆಚ್ಚಿಸಲು, ನಗರಗಳಲ್ಲಿ ನವೀನ ಪರಿಹಾರಗಳನ್ನು ಪರಿಚಯಿಸಲು ಹಲವಾರು ನವೋದ್ಯಮಗಳು ತೊಡಗಿಸಿಕೊಂಡಿವೆ. ಅಂತಹ ಪ್ರಯತ್ನಗಳನ್ನು ಪ್ರೋತ್ಸಾಹಿಸಲು, 'ಸ್ವಚ್ಛತಾ ಸ್ಟಾರ್ಟ್ಅಪ್ ಚಾಲೆಂಜ್' ಅನ್ನು ತಂತ್ರಜ್ಞಾನ ಮತ್ತು ವಾಸ್ತುಶಿಲ್ಪ ವಿನ್ಯಾಸದ ಮೇಲೆ ಗಮನ ಕೇಂದ್ರೀಕರಿಸಿ, ಅದಕ್ಕೆಂದೇ ಮೀಸಲಾದ 'ಶೌಚಾಲಯ ವಿನ್ಯಾಸ ಸವಾಲು' ಪ್ರಾರಂಭಿಸಲಾಯಿತು.

ಸಾಂಸ್ಥಿಕ ಸಾಮರ್ಥ್ಯವನ್ನು ಬಲಪಡಿಸುವುದು ಸಹ ಒಂದು ಪ್ರಮುಖ ಆದ್ಯತೆಯಾಗಿದೆ, ಮತ್ತು 2024 ರಲ್ಲಿ, ಎಸ್.ಬಿ.ಎಂ.-ಯು 2.0 ಅಡಿಯಲ್ಲಿ, ಮಹತ್ವದ ತಿಳುವಳಿಕಾ ಒಡಂಬಡಿಕೆಗಳಿಗೆ ಸಹಿ ಹಾಕಲಾಯಿತು. ಸಮುದಾಯ ಶೌಚಾಲಯಗಳಿಗೆ ಪಿ.ಪಿ.ಪಿ. ಮಾದರಿಗಳನ್ನು ಅಭಿವೃದ್ಧಿಪಡಿಸಲು ಎಂ.ಒ.ಹೆಚ್.ಯು.ಎ., ಹೆಚ್.ಯು.ಎಲ್. (MoHUA HUL) ಜೊತೆ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿತು. ಹೆಚ್ಚಿನ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಶೌಚಾಲಯಗಳ ನಿರ್ಮಾಣ ಮತ್ತು ಪರಿಣಾಮಕಾರಿ ನಿರ್ವಹಣೆಯನ್ನು ಬೆಂಬಲಿಸಲು ಸಚಿವಾಲಯವು ಸುಲಭ್ ಇಂಟರ್ನ್ಯಾಷನಲ್ ಜೊತೆ ಪಾಲುದಾರಿಕೆ ಹೊಂದಿದೆ.

ಎಸ್.ಬಿ.ಎಂ.-ಯು 2.0 ಈಗ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳು (ಯು.ಎಲ್.ಬಿ.ಗಳು-ULBs) ಪ್ರವಾಸಿ ತಾಣಗಳು, ಹೆಚ್ಚಿನ ಜನದಟ್ಟಣೆ ಇರುವ ಪ್ರದೇಶಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯ (ಪಿ.ಟಿ.) ಮೂಲಸೌಕರ್ಯವನ್ನು ವಿಸ್ತರಿಸಲು ಪ್ರೋತ್ಸಾಹಿಸುತ್ತಿದೆ, ಬೆಳೆಯುತ್ತಿರುವ ನೈರ್ಮಲ್ಯ ಅಗತ್ಯಗಳನ್ನು ಪೂರೈಸಲು. ಈ ಸೌಲಭ್ಯಗಳನ್ನು "ಆಕಾಂಕ್ಷೆಯ ಶೌಚಾಲಯಗಳು" ಎಂದು ವರ್ಗೀಕರಿಸಲು ಸಹ ಶಿಫಾರಸು ಮಾಡಲಾಗಿದೆ. ಸಾರ್ವಜನಿಕ ಶೌಚಾಲಯ ಸೇವೆಗಳ ಬಳಕೆದಾರರ ಅನುಭವವನ್ನು ಗಮನಾರ್ಹವಾಗಿ ಹೆಚ್ಚಿಸುವ ಗುರಿಯನ್ನು ಮಿಷನ್ ಹೊಂದಿದೆ, ಇವುಗಳ ದೀರ್ಘಕಾಲೀನ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾದ ನವೀನ ಮಾದರಿಗಳು ಮತ್ತು ಪರಿಹಾರಗಳಿಂದ ಬೆಂಬಲಿತವಾಗಿದೆ. ಇಲ್ಲಿಯವರೆಗೆ, 29,000 ಮಹತ್ವಾಕಾಂಕ್ಷೆಯ ಶೌಚಾಲಯ ಆಸನಗಳಿಗೆ ಎಸ್.ಬಿ.ಎಂ.-ಯು 2.0 ಅಡಿಯಲ್ಲಿ ಅನುಮೋದನೆ ನೀಡಲಾಗಿದೆ.

ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. 

ಆಕಾಂಕ್ಷೆಯ ಶೌಚಾಲಯಗಳು: ಆಧುನಿಕ, ಎಲ್ಲರನ್ನು ಒಳಗೊಳ್ಳುವ  ಮತ್ತು ಪರಿಸರ ಸುಸ್ಥಿರ.

ಆಕಾಂಕ್ಷೆಯ ಶೌಚಾಲಯಗಳು ಈ ಕೆಳಗಿನ ಅಂಶಗಳನ್ನು ಒಳಗೊಂಡಿರುತ್ತವೆ, ಅವೆಂದರೆ:

  • ಸ್ಮಾರ್ಟ್ ಅಂಶಗಳು ಮತ್ತು ಬಳಕೆದಾರ ಸ್ನೇಹಿ ವಿನ್ಯಾಸಗಳು,
  • ಎಲ್ಲರಿಗೂ ಲಭ್ಯವಾಗುವ ಮತ್ತು ಎಲ್ಲರನ್ನು ಒಳಗೊಳ್ಳುವ ಮೂಲ ಸೌಕರ್ಯ.
  • ಲಿಂಗತ್ವ - ನಿರ್ಲಿಪ್ತ ಮತ್ತು ಮಕ್ಕಳ ಸ್ನೇಹಿ ಸೌಲಭ್ಯಗಳು.
  • ಪರಿಸರ ಸುಸ್ಥಿರ ತಂತ್ರಜ್ಞಾನಗಳು.

ದೇಶಾದ್ಯಂತ, ಇಂದು ಮಹತ್ವಾಕಾಂಕ್ಷೆಯ ಶೌಚಾಲಯಗಳನ್ನು ಉದ್ಘಾಟಿಸಲಾಯಿತು. ಇಂದೋರ್ ಮುನ್ಸಿಪಲ್ ಕಾರ್ಪೊರೇಷನ್ ನೆಹರೂ ಪಾರ್ಕ್‌ನಲ್ಲಿ ಮೇಯರ್ ಪುಷ್ಯಮಿತ್ರ ಭಾರ್ಗವ್ ಮತ್ತು ಆಯುಕ್ತ ದಿಲೀಪ್ ಕುಮಾರ್ ಯಾದವ್ ನೇತೃತ್ವದಲ್ಲಿ ಹೊಸದಾಗಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯವನ್ನು ಉದ್ಘಾಟಿಸಿತು. ಲಕ್ನೋ ಮೇಯರ್ ಶ್ರೀಮತಿ ಸುಷ್ಮಾ ಖಾರ್ಕ್ವಾಲ್ ಚೌಕ್ ಕ್ರೀಡಾಂಗಣದ ಬಳಿ ಹೊಸದಾಗಿ ನಿರ್ಮಿಸಲಾದ ಸಾರ್ವಜನಿಕ ಶೌಚಾಲಯವನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಕೌನ್ಸಿಲರ್‌ಗಳು, ಅಧಿಕಾರಿಗಳು ಮತ್ತು ನಾಗರಿಕರು ಉಪಸ್ಥಿತರಿದ್ದರು.

2025ರ ವಿಶ್ವ ಶೌಚಾಲಯ ಶೃಂಗಸಭೆಯಲ್ಲಿ, ಕೇಂದ್ರ ಸಚಿವರಾದ ಶ್ರೀ ಮನೋಹರ್ ಲಾಲ್ ಸ್ವಚ್ಛತೆ ಮತ್ತು ಸುಸ್ಥಿರತೆಯ ಕುರಿತು ಜಾಗತಿಕ ಸಹಕಾರಕ್ಕಾಗಿ ಕರೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, “ಭಾರತದಾದ್ಯಂತ ಮತ್ತು ಪ್ರಪಂಚದಾದ್ಯಂತ, ಉತ್ತಮ ಮತ್ತು ಸ್ವಚ್ಛವಾದ ಶೌಚಾಲಯ ವ್ಯವಸ್ಥೆಗಳನ್ನು ಜಾರಿಗೆ ತರಲಾಗುತ್ತಿದೆ. ನಮ್ಮ ದೇಶದಲ್ಲಿಯೂ ಸಹ, ಮನಸ್ಥಿತಿಗಳು ಬದಲಾಗುತ್ತಿವೆ - ಮತ್ತು ಬದಲಾಗಬೇಕು. ಶುಚಿತ್ವವನ್ನು ಅಚ್ಚುಕಟ್ಟಾದ ಮನೆ ಅಥವಾ ಮಲಗುವ ಕೋಣೆಯಿಂದ ನಿರ್ಣಯಿಸಲಾಗುವುದಿಲ್ಲ, ಆದರೆ ಶೌಚಾಲಯದ ಸ್ಥಿತಿಯಿಂದ ನಿರ್ಣಯಿಸಲಾಗುತ್ತದೆ” ಎಂದರು. ತ್ಯಾಜ್ಯ ನೀರು ಸಂಸ್ಕರಣೆ, ಮರುಬಳಕೆ, ಸ್ವಚ್ಛವಾದ ಶೌಚಾಲಯಗಳು ಮತ್ತು ವೇಗವಾದ ನಡವಳಿಕೆಯ/ ಅಭ್ಯಾಸಗಳ ಬದಲಾವಣೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು. ಮಕ್ಕಳಲ್ಲಿ ಆರಂಭಿಕ ಹಂತದಲ್ಲಿಯೇ ನೈರ್ಮಲ್ಯ ಅಭ್ಯಾಸಗಳು ಮತ್ತು ಸ್ವಚ್ಛ ಭಾರತ ಮಿಷನ್ - ನಗರ ಅಡಿಯಲ್ಲಿ ತ್ಯಾಜ್ಯದಿಂದ ಸಂಪತ್ತು ಹಾಗು ವೃತ್ತಾಕಾರದ ಮಹತ್ವವನ್ನು ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು.

ಕೇಂದ್ರ ಜಲಶಕ್ತಿ ಸಚಿವರಾದ ಶ್ರೀ ಸಿ.ಆರ್. ಪಾಟೀಲ್, ಗ್ರಾಮೀಣ ಶೌಚಾಲಯ ನಿರ್ಮಾಣದಿಂದ ಮಹಿಳೆಯರ ಜೀವನದ ಮೇಲೆ ಆಗಿರುವ ಪರಿವರ್ತನಾತ್ಮಕ ಪರಿಣಾಮವನ್ನು ಎತ್ತಿ ತೋರಿಸಿದರು, ಗ್ರಾಮೀಣ ಶೌಚಾಲಯ ನಿರ್ಮಾಣವು ಅವರ ಘನತೆ, ಸುರಕ್ಷತೆ, ಹೆಮ್ಮೆ ಮತ್ತು ಗೌರವವನ್ನು ಬಲಪಡಿಸಿದೆ ಎಂದು ಒತ್ತಿ ಹೇಳಿದರು. "ಸುರಕ್ಷಿತ ನೈರ್ಮಲ್ಯ ಮತ್ತು ಸುರಕ್ಷಿತ ನೀರು ಅತ್ಯಗತ್ಯ - ಮತ್ತು ಇದೆಲ್ಲವೂ ಶೌಚಾಲಯದ ಪ್ರವೇಶದೊಂದಿಗೆ ಪ್ರಾರಂಭವಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ, 12 ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಸ್ವಚ್ಛ ಮತ್ತು ಸುರಕ್ಷಿತ ಶೌಚಾಲಯಗಳ ಪ್ರವೇಶದೊಂದಿಗೆ, ಅತಿಸಾರದಿಂದ ಉಂಟಾಗುವ ವಾರ್ಷಿಕ ಸಾವುಗಳನ್ನು ತಡೆಗಟ್ಟಲಾಗಿದೆ, ಪ್ರತಿ ವರ್ಷ ಸುಮಾರು 3 ಲಕ್ಷ ಮಕ್ಕಳ ಜೀವಗಳನ್ನು ಉಳಿಸಲಾಗಿದೆ" ಎಂದು ಅವರು ಹೇಳಿದರು.

ವಿಶ್ವ ಶೌಚಾಲಯ ದಿನವನ್ನು ಗುರುತಿಸುತ್ತಾ, ಎಂ.ಒ.ಹೆಚ್.ಯು.ಎ. 'ಟಾಯ್ಲೆಟ್ ಪಾಸ್ ಹೈ' ಮತ್ತು 'ಮೈನ್ ಸಾಫ್ ಹೈ ಅಚ್ಛಾ ಹೂನ್' ಆಂದೋಲನವನ್ನು ಪ್ರಾರಂಭಿಸಿತು - ಇದು ಜವಾಬ್ದಾರಿಯುತ ಶೌಚಾಲಯ ಬಳಕೆಯನ್ನು ಉತ್ತೇಜಿಸಲು ವರ್ಷಪೂರ್ತಿ ನಡೆಯುವ ಗುರಿ ಕೇಂದ್ರಿತ ಅಭಿಯಾನವಾಗಿದೆ. ಸಮುದಾಯಗಳಲ್ಲಿ ಜವಾಬ್ದಾರಿಯುತ ಶೌಚಾಲಯ ಬಳಕೆ ಮತ್ತು ನೈರ್ಮಲ್ಯ ಅಭ್ಯಾಸಗಳನ್ನು ಉತ್ತೇಜಿಸುವ ಗುರಿಯನ್ನು ಇದು ಹೊಂದಿದೆ. ನಗರ ನೈರ್ಮಲ್ಯ ಪ್ರಯತ್ನಗಳನ್ನು ಬಲಪಡಿಸಲು ಹಲವಾರು ಸಲಹೆಗಳು ಮತ್ತು ತರಬೇತಿ ಸಂಪನ್ಮೂಲಗಳನ್ನು ಸಹ ಬಿಡುಗಡೆ ಮಾಡಲಾಗಿದೆ, ಇದರಲ್ಲಿ ವಿಶೇಷ ತರಬೇತಿ ಮಾಡ್ಯೂಲ್ – ಸಿ.ಟಿ. ಮತ್ತು ಪಿ.ಟಿ. ಮಾರ್ಗದರ್ಶಿ: ಸಾರ್ವಜನಿಕ ಶೌಚಾಲಯಗಳ ವಿನ್ಯಾಸಕ್ಕೆ ಸಂಬಂಧಿಸಿ ಸಾಮಾನ್ಯವಾಗಿ ಕಂಡುಬರುವ ಅಂತರಗಳು ಮತ್ತು ಪರಿಹಾರಗಳು, ಹೆಚ್.ಯು.ಎಲ್.-ಸುವಿಧಾ ಕೇಂದ್ರಗಳಿಗಾಗಿ ನಗರಗಳಿಂದ ಆಶಯ, ಮಕ್ಕಳಲ್ಲಿ ಆರಂಭಿಕ ಹಂತದಲ್ಲಿ ಉತ್ತಮ ನೈರ್ಮಲ್ಯ ಅಭ್ಯಾಸಗಳನ್ನು ಅಭಿವೃದ್ಧಿಪಡಿಸಲು ನಡವಳಿಕೆ ಬದಲಾವಣೆ ಸಂವಹನದಲ್ಲಿ ತೊಡಗಿಸಿಕೊಳ್ಳುವುದು –ಅದಕ್ಕಾಗಿ ಸ್ವಚ್ಛ ಆದತೇನ್- 21 ದಿನೋಂ ಕಾ ಸ್ವಚ್ಛ ಆದತ್ ಪ್ರಶಿಕ್ಷಣ ಪಾಠಕ್ರಮ್ ಸೇರಿವೆ.

ವಿಶ್ವ ಶೌಚಾಲಯ ದಿನದ ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ ಸರ್ಕಾರ, ಕೈಗಾರಿಕೆ, ಅಂತರರಾಷ್ಟ್ರೀಯ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು, ನಾವೀನ್ಯಕಾರರು ಮತ್ತು ಉದ್ಯಮಿಗಳು ಭಾಗವಹಿಸಿದ್ದು, ಇದು ಸುಸ್ಥಿರ ನೈರ್ಮಲ್ಯ ಭವಿಷ್ಯಕ್ಕಾಗಿ ಮಾರ್ಗಸೂಚಿಯನ್ನು ರೂಪಿಸಲು ಸಹಾಯ ಮಾಡುತ್ತದೆ. ಮುಂದಿನ 2 ದಿನಗಳು ವೃತ್ತಾಕಾರದ ಆರ್ಥಿಕತೆ ಮತ್ತು ಹವಾಮಾನ-ಸಕಾರಾತ್ಮಕ ನೈರ್ಮಲ್ಯ, ಹಣಕಾಸು ಮಾದರಿಗಳು ಮತ್ತು ನವೀನ ಪಾಲುದಾರಿಕೆಗಳು, ಅಂತರ್ಗತ ವಿನ್ಯಾಸ, ನಿರ್ಮಾಣ, ಮತ್ತು ಕಾರ್ಯಾಚರಣೆ ಹಾಗು ನಿರ್ವಹಣೆ, ಯುಎಲ್‌ಬಿಗಳಿಗೆ ತಂತ್ರಜ್ಞಾನ ಪರಿಹಾರಗಳು ಮತ್ತು ಸಾಮರ್ಥ್ಯ ನಿರ್ಮಾಣ ಮತ್ತು ಸಫಾಯಿ ಮಿತ್ರರ ಸುರಕ್ಷತೆ ಮತ್ತು ಘನತೆಯನ್ನು ಹೆಚ್ಚಿಸುವ ಕುರಿತು ಚರ್ಚೆಗಳನ್ನು ಒಳಗೊಂಡಿರುತ್ತವೆ.

****


(Release ID: 2191819) Visitor Counter : 6